
ಇಂಗ್ಲೆಂಡ್ ಎಂದರೆ ಭಾರತೀಯರು ಹುಬ್ಬೇರಿಸಿ ನೋಡುತ್ತಿದ್ದ ದಿನಗಳು ಮಾಯವಾಗುವ ಹಂತಕ್ಕೆ ಇಂಗ್ಲೆಂಡ್ ಅಥವಾ ಪೂರ್ಣ ಯುನೈಟೆಡ್ ಕಿಂಗ್ಡಮ್ ಬಂದು ನಿಂತಿದೆ. ರಾಜಕೀಯ ಅಸ್ಥಿರತೆ ಇಂಗ್ಲೆಂಡ್ ನಲ್ಲಿ ಶುರುವಾಗಿ ದಶಕವಾಗುತ್ತ ಬಂದಿದೆ.
ಕೇವಲ ರಾಜಕೀಯ ಅಸ್ಥಿರತೆ ಮಾತ್ರವಲ್ಲದೆ ಹತ್ತಾರು ಜ್ವಲಂತ ಸಮಸ್ಯೆಗಳು ಇಂಗ್ಲೆಂಡ್ ದೇಶವನ್ನು ಭಾದಿಸುತ್ತಿವೆ. ಯಾವುದೇ ದೇಶದಲ್ಲಿ ವಾಸಿಸುವ ಸಿರಿವಂತರು ಆ ದೇಶವನ್ನು ಬಿಡುವ ಮಾತನಾಡುತ್ತಾರೆ ಎಂದರೆ ಅದು ನಿಜಕ್ಕೂ ಉತ್ತಮ ಬೆಳವಣಿಗೆಯಲ್ಲ. ಭಾರತದಿಂದ ಹೀಗೆ ಹೊರಹೋಗಲು ಇಚ್ಛೆ ಪಡುವ ಮಿಲಿಯನೇರ್ಗಳ ಸಂಖ್ಯೆ ಹತ್ತಿರತ್ತಿರ ನಾಲ್ಕು ಸಾವಿರ ಎನ್ನುತ್ತದೆ ಅಂಕಿ-ಅಂಶ.
ಕನಿಷ್ಠ ಪಕ್ಷ 10 ಲಕ್ಷ ಡಾಲರ್ ಹೂಡಿಕೆ ಮಾಡುವ ಶಕ್ತಿಯಿದ್ದವರನ್ನು ಭಾರತದಲ್ಲಿ ಮಿಲಿಯನೇರ್ ಎಂದು ಗುರುತಿಸಲಾಗುತ್ತದೆ. ಈ ಹಿಂದೆ ಈ ರೀತಿಯ ಮಿಲಿಯನೇರ್ಗಳು ಹೋಗುತ್ತಿದ್ದ ದೇಶ ಇಂಗ್ಲೆಂಡ್. ಇಂದಿಗೆ ಇಂಗ್ಲೆಂಡ್ ಅಲ್ಲಿನ ಜನಕ್ಕೆ ಬೇಡವಾದ ದೇಶವಾಗುತ್ತಿದೆ. ಭಾರತದಿಂದ ಹೊರ ಹೋಗುತ್ತಿರುವ ಸಾಹುಕಾರರ ಮೆಚ್ಚಿನ ತಾಣ ಯುನೈಟೆಡ್ ಅರಬ್ ಕಿಂಗ್ಡಮ್, ಅದರಲ್ಲೂ ದುಬೈ ಇಂತಹವರಿಗೆ ಸ್ವರ್ಗ ಎನ್ನಿಸುತ್ತಿದೆ. ನಿಮಗೆಲ್ಲಾ ಆಶ್ಚರ್ಯ ಎನ್ನಿಸಬಹುದು 2024 ರಲ್ಲಿ ಇಂಗ್ಲೆಂಡ್ ದೇಶದಿಂದ 9500 ಜನಕ್ಕೂ ಹೆಚ್ಚಿನ ಶ್ರೀಮಂತರು ದೇಶ ಬಿಡಲು ತಯಾರಿ ನಡೆಸಿದ್ದಾರೆ.
ಕೆಲವು ದಶಕಗಳ ಹಿಂದೆ ಏಷ್ಯಾ, ಯೂರೋಪು ಮತ್ತು ಮಿಡ್ಲ್ ಈಸ್ಟ್ ದೇಶಗಳಿಂದ ಶ್ರೀಮಂತ ಜನರು ಇಂಗ್ಲೆಂಡ್ ದೇಶದಲ್ಲಿ ನೆಲೆ ಕಂಡುಕೊಳ್ಳಲು ಬಯಸುತ್ತಿದ್ದರು. ದಶಕದಲ್ಲಿ ಅದು ಬದಲಾಗಿ ಹೋಗಿದೆ. ಇಂಗ್ಲೆಂಡ್ ತನ್ನ ಹಿಂದಿನ ಆಕರ್ಷಣೆ ಉಳಿಸಿಕೊಂಡಿಲ್ಲ. ಸೂರ್ಯ ಮುಳುಗದ ನಾಡು ಎನ್ನುವ ಹೆಮ್ಮೆಯಿಂದ ಬೀಗುತ್ತಿದ್ದ ಬ್ರಿಟಿಷರು (ಜಗತ್ತಿನಾದ್ಯಂತ ತಮ್ಮ ವಸಾಹತು ಇದೆ, ಈ ಕಾರಣದಿಂದ ಬ್ರಿಟಿಷ್ ಸಾಮ್ರಾಜ್ಯದಲ್ಲಿ ಸೂರ್ಯ ಎಂದಿಗೂ ಮುಳುಗುವುದಿಲ್ಲ ಎನ್ನುವ ಹೆಮ್ಮೆಯಿಂದ ಈ ರೀತಿ ಹೇಳುತ್ತಿದ್ದರು) ತಮ್ಮ ದೇಶವನ್ನು ತೊರೆಯಲು ಕಾರಣಗಳೇನಿರಬಹುದು?
ಹೆಚ್ಚಾಗುತ್ತಿರುವ ಕ್ರೈಂ ಪ್ರಕರಣಗಳು: ಇಂಗ್ಲೆಂಡ್ ಕಳೆದ ಒಂದು ದಶಕದಲ್ಲಿ 6.74 ಮಿಲಿಯನ್ ಅಪರಾಧಗಳನ್ನು ತನ್ನ ಪೊಲೀಸ್ ಠಾಣೆಯಲ್ಲಿ ನೊಂದಾಯಿಸಿಕೊಂಡಿವೆ. ಈ ಸಂಖ್ಯೆ ಅಲ್ಲಿನ ಜನಸಂಖ್ಯೆಗೆ ಹೋಲಿಸಿದರೆ ಅತಿ ಹೆಚ್ಚು. ಹಿಂದೆ ದಾಖಲಾದ ಅಪರಾಧ ಪ್ರಕರಣಗಳಲ್ಲಿ 15 ಪ್ರತಿಶತ ಪ್ರಕರಣಗಳು ಸಾಲ್ವ್ ಆಗುತ್ತಿದ್ದವು. ಈಗ ಪ್ರಕರಣ ಹೆಚ್ಚಿರುವ ಕಾರಣ ಸಾಲ್ವ್ ಆಗುವ ಕೇಸುಗಳ ಪ್ರತಿಶತ ಕೇವಲ 5ಕ್ಕೆ ಇಳಿದಿದೆ. ಒಟ್ಟಾರೆ ಅಪರಾಧಗಳು ಹೆಚ್ಚಾಗುತ್ತಿವೆ. ಇದಕ್ಕೆ ಎಗ್ಗಿಲ್ಲದೆ ಹರಿಯಲು ಬಿಟ್ಟ ವಲಸೆ ಕೂಡ ಕಾರಣ. ಯೂರೋಪಿನ ಅತಿ ಬಡದೇಶಗಳಿಂದ ಬಂದು ಇಂಗ್ಲೆಂಡ್ನಲ್ಲಿ ಸೇರಿಕೊಂಡಿರುವ ಜನ, ಕೆಲಸವಿಲ್ಲದ, ಆದಾಯವಿಲ್ಲದ ಕಾರಣ ಅಪರಾಧಗಳಲ್ಲಿ ತೊಡಗಿಕೊಂಡಿದ್ದಾರೆ.
ವಾತಾವರಣ ಕೂಡ ಕಾರಣವಾಗಿದೆ: ವರ್ಷದಲ್ಲಿ ಕೇವಲ 1400 ಗಂಟೆಗಳು ಮಾತ್ರ ಸೂರ್ಯನ ದರ್ಶನ ಭಾಗ್ಯ ಇಲ್ಲಿನ ಜನರಿಗೆ ಲಭಿಸುತ್ತದೆ. ಅಂದರೆ ಹೆಚ್ಚು ಕಡಿಮೆ ವರ್ಷದ ಎರಡು ತಿಂಗಳು ಮಾತ್ರ ಬೇಸಿಗೆ. ಉಳಿದ ತಿಂಗಳುಗಳಲ್ಲಿ ಚಳಿ ಮತ್ತು ಮಳೆ ಎರಡೂ ಬದುಕನ್ನು ಹೈರಾಣಾಗಿಸುತ್ತವೆ. ಹೀಗಾಗಿ ಹೆಚ್ಚಿನ ಹಣ ಉಳ್ಳವರು ಸಹಜವಾಗೇ ಉತ್ತಮ ವಾತಾವರಣ ಇರುವ ಸ್ಪೇನ್, ಇಟಲಿ, ದುಬೈ ಕಡೆಗೆ ಮುಖ ಮಾಡಿದ್ದಾರೆ.
ತೆರಿಗೆ ನೀತಿ: ಇಂಗ್ಲೆಂಡ್ ನಲ್ಲಿ ಆದಾಯ ತೆರಿಗೆ 45 ಪ್ರತಿಶತದ ವರೆಗೆ ಹೋಗುತ್ತದೆ. ಅಂದರೆ ನೀವು ಹೆಚ್ಚು ಗಳಿಸಿದರೆ ಅತಿ ಹೆಚ್ಚು ಹಣವನ್ನು ತೆರಿಗೆಯ ರೂಪದಲ್ಲಿ ನೀಡಬೇಕಾಗುತ್ತದೆ. 100 ರೂಪಾಯಿ ಸಂಪಾದನೆಯಲ್ಲಿ 45 ರೂಪಾಯಿ ಸರಕಾರಕ್ಕೆ ನೀಡಬೇಕು ಎನ್ನುವುದು ಶ್ರೀಮಂತರಿಗೆ ಅರಗಿಸಿಕೊಳ್ಳಲು ಆಗುವುದಿಲ್ಲ. ಇದರಿಂದ ಅವರಿಗೆ ಹೆಚ್ಚಿನ ಸವಲತ್ತು ಕೂಡ ಇಲ್ಲ. ಹೀಗೆ ಶ್ರೀಮಂತರಿಂದ ಪಡೆದ ಹಣವನ್ನು ಇತರ ದೇಶಗಳಿಂದ ಬಂದ ವಲಸಿಗರನ್ನು ಕಾಪಾಡಲು ಬಳಸುತ್ತಿದ್ದಾರೆ ಎನ್ನುವುದು ಇವರ ಕೂಗು. ಒಟ್ಟಾರೆ ಆದಾಯ ತೆರಿಗೆ ಇಲ್ಲದ ದುಬೈ ಇಲ್ಲಿನ ಶ್ರೀಮಂತರ ಕಣ್ಣಿಗೆ ಅತ್ಯುತ್ತಮ ಜಾಗವಾಗಿ ಕಾಣುತ್ತಿದೆ. ಅಲ್ಲದೆ ಉತ್ತರಾಧಿಕಾರ ತೆರಿಗೆ ಅಂದರೆ ಇನ್ಹೇರಿಟೆನ್ಸ್ ಟ್ಯಾಕ್ಸ್ 40 ಪ್ರತಿಶತವಿದೆ. ಗಮನಿಸಿ ನಿಮ್ಮ ನಂತರ ನಿಮ್ಮ ಮನೆಯನ್ನು ಮಕ್ಕಳು ಅವರ ಹೆಸರಿಗೆ ವರ್ಗಾಯಿಕೊಳ್ಳಲು 40 ಪ್ರತಿಶತ ತೆರಿಗೆ ನೀಡಬೇಕು. ಮನೆಯ ಮೌಲ್ಯ 3, 25,000 ಪೌಂಡ್ ಗಿಂತ ಕಡಿಮೆಯಿದ್ದರೆ ಇದು ಅನ್ವಯವಾಗುವುದಿಲ್ಲ.
ಹಣದುಬ್ಬರ ಮತ್ತು ಸತತವಾಗಿ ಏರುತ್ತಿರುವ ಬೆಲೆಗಳು: ಬ್ರೆಕ್ಸಿಟ್ ನಂತರ ಒಂದೇ ಸಮನೆ ಏರುತ್ತಿರುವ ಬೆಲೆಗಳು ಇಲ್ಲಿನ ಜನರನ್ನು ಕಂಗಾಲಾಗಿಸಿವೆ. ಹಣದುಬ್ಬರ ಬಹಳ ಹೆಚ್ಚಾಗಿದೆ. ಕೈಯಲ್ಲಿರುವ ಹಣ ವೇಗವಾಗಿ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ. ಹೂಡಿಕೆ ಮಾಡಲು ಕೂಡ ಸ್ಥಿರ ಸರಕಾರದ ಕೊರತೆಯಿದೆ. ಹೀಗಾಗಿ ಜನ, ಅದರಲ್ಲೂ ಉಳ್ಳವರಲ್ಲಿ ತಲ್ಲಣ ಶುರುವಾಗಿದೆ. ಹೀಗಾಗಿ ದೇಶ ಬಿಡುವುದು ಎಲ್ಲಾ ರೀತಿಯಲ್ಲೂ ಸರಿಯಾದ ನಿರ್ಧಾರ ಎನ್ನುವ ಅಭಿಪ್ರಾಯಕ್ಕೆ ಅವರು ಬರುತ್ತಿದ್ದಾರೆ.
ಎನೆರ್ಜಿ ಬಡತನ: ರಷ್ಯಾ ಮತ್ತು ಉಕ್ರೈನ್ ಯುದ್ಧದ ಸಮಯದಿಂದ ಶುರುವಾದ ಎನೆರ್ಜಿ ಬೆಲೆ ಹೆಚ್ಚಳ ಮತ್ತು ಅದರ ಕೊರತೆ ಚಳಿ ದೇಶವಾದ ಇಂಗ್ಲೆಂಡ್ ಜನರನ್ನು ಬಹಳ ಸತಾಯಿಸಿದೆ. ಚಳಿಯನ್ನು ತಾಳಲಾರದೆ ಸತ್ತವರ ಸಂಖ್ಯೆ ಕೂಡ ಬಹಳವಿದೆ. ರಾಜಕೀಯ ಅನಿಶ್ಚಿತತೆ ಎನ್ನುವ ತೂಗುಯ್ಯಾಲೆ ನೆತ್ತಿಯ ಮೇಲಿರುವ ಕಾರಣ ಎನೆರ್ಜಿ ಕೊರತೆಯಲ್ಲಿ ಬದಲಾವಣೆ ಕಾಣುವುದು ಸಾಧ್ಯವಿಲ್ಲ. ಹೀಗಾಗಿ ಉಳ್ಳವರು ಜಾಗ ಬದಲಾವಣೆ ಅನಿವಾರ್ಯ ಎನ್ನುವ ನಿರ್ಧಾರಕ್ಕೆ ಬರುತ್ತಿದ್ದಾರೆ.
ಒತ್ತಡದ ಜೀವನ: ಒಟ್ಟಾರೆ ಇಂಗ್ಲೆಂಡ್ನಲ್ಲಿನ ಬದುಕು ಬಹಳ ಒತ್ತಡದ ಬದುಕು ಎನ್ನುವಂತಾಗಿದೆ. ಉಳ್ಳವರು ದೇಶ ಬಿಡುವ ಹವಣಿಕೆಯಲ್ಲಿದ್ದಾರೆ. ಈ ರೀತಿ ದೇಶ ಬಿಡಲಾಗದವರು ಅಲ್ಲಿ ಬದುಕಲಾಗದ ಸ್ಥಿತಿಯಲ್ಲಿದ್ದಾರೆ. ಗಳಿಸಿದ ಹಣವೆಲ್ಲಾ ಕ್ಷಣ ಮಾತ್ರದಲ್ಲಿ ಖರ್ಚಾಗುತ್ತದೆ. ವರ್ಷಗಳು ಕೆಲಸ ಮಾಡಿ ಕೂಡ ಕೈಯಲ್ಲಿ ನಯಾಪೈಸೆ ಉಳಿತಾಯವಿಲ್ಲ , ಹೂಡಿಕೆಯಿಲ್ಲ ಎನ್ನವಂತಾಗಿದೆ. ನಾವೇಕೆ ದುಡಿಯಿತ್ತಿದ್ದೇವೆ ಎನ್ನುವ ಪ್ರಶ್ನೆ ಕೇಳಿಕೊಳ್ಳುವ ಮಟ್ಟಕ್ಕೆ ಬದುಕು ಬದಲಾಗಿದೆ. ಹೀಗಾಗಿ ಸಾಧ್ಯವಾದವರು ದೇಶ ಬಿಡುವ ನಿರ್ಧಾರಕ್ಕೆ ಹೆಚ್ಚು ಒಲವು ತೋರುತ್ತಿದ್ದಾರೆ.
ಸರಿ ಹೀಗೆ ದೇಶ ಬಿಟ್ಟು ಹೋಗುವ ಸಿರಿವಂತರಿಗೆ ಯಾವ ದೇಶಗಳು ಇಷ್ಟವಾಗುತ್ತಿವೆ ಗೊತ್ತೇ? ಯುನೈಟೆಡ್ ಅರಬ್ ಎಮಿರೇಟ್ಸ್, ಅಮೇರಿಕಾ, ಆಸ್ಟ್ರೇಲಿಯಾ ದೇಶಗಳು ಇಷ್ಟವಾಗುತ್ತಿವೆ ಎನ್ನುತ್ತದೆ ಅಂಕಿಅಂಶ. ಎಲ್ಲದಕ್ಕೂ ಟಾಪ್ನಲ್ಲಿರುವುದು ಯುನೈಟೆಡ್ ಅರಬ್ ಎಮಿರೇಟ್ಸ್, ಅದರಲ್ಲೂ ದುಬೈ. ಹೀಗೆ ಜಗತ್ತಿನಾದ್ಯಂತ ಶ್ರೀಮಂತರು ದುಬೈ ಬಗ್ಗೆ ಆಸಕ್ತಿ ತೋರಲು ಕಾರಣವೇನು ?
ಆದಾಯ ತೆರಿಗೆ ಇಲ್ಲಿಲ್ಲ: ಹೌದು ಸರಿಯಾಗಿ ಓದಿದಿರಿ. ದುಬೈ ಮತ್ತಿತರ ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳಲ್ಲಿ ಆದಾಯ ತೆರಿಗೆ ಎನ್ನುವುದು ಇಲ್ಲವೇ ಇಲ್ಲ. ಅಂದರೆ ನೀವು ನೂರು ರೂಪಾಯಿ ಹಣವನ್ನು ಗಳಿಸಿದರೆ ನೂರು ರೂಪಾಯಿ ನಿಮ್ಮದು. ಇಂಗ್ಲೆಂಡ್ ನಲ್ಲಿ 45 ರೂಪಾಯಿ ತನಕ ಸರಕಾರಕ್ಕೆ ಕೊಡಬೇಕಾಗುತ್ತದೆ. ಹೀಗಾಗಿ ನೂರರಲ್ಲಿ ಉಳಿದದ್ದು ಕೇವಲ 55 ರೂಪಾಯಿ ಮಾತ್ರ. ಭಾರತದ ಕಥೆ ಕೂಡ ವಿಭಿನ್ನವಾಗಿಲ್ಲ. ಭಾರತದಲ್ಲಿ ಕೂಡ ತೆರಿಗೆ ಜೊತೆಗಿನ ಸೆಸ್ಸ್ ಇತ್ಯಾದಿಗಳನ್ನು ಕೂಡಿ ನೋಡಿದಾಗ 35 ರಿಂದ 37 ರೂಪಾಯಿ ಸರಕಾರಕ್ಕೆ ಆದಾಯ ತೆರಿಗೆಯ ರೂಪದಲ್ಲಿ ನೀಡಬೇಕಾಗುತ್ತದೆ. ಹೀಗಾಗಿ ತೆರಿಗೆ ಇಲ್ಲದ ದುಬೈ ಸಿರಿವಂತರಿಕೆ ಬಹದೊಡ್ಡ ಆಕರ್ಷಣೆಯಾಗಿದೆ.
ಸುರಕ್ಷತೆ: ಜಗತ್ತಿನ ಪ್ರಸಿದ್ಧ ಮತ್ತು ದೊಡ್ಡ ನಗರಗಳಲ್ಲಿ, ನಗರ ಬೆಳೆದಂತೆ ಅಪರಾಧಗಳು ಕೂಡ ಬೆಳೆದಿದೆ. ಹೀಗಾಗಿ ಹೆಚ್ಚು ಹಣವಂತರು ಇಂತಹ ಕ್ರೈಂ ಗಳಿಗೆ ತುತ್ತಾಗುತ್ತಿದ್ದಾರೆ. ಸಹಜವಾಗೇ ಅಪರಾಧಗಳು ಕಡಿಮೆ ಇರುವ ಅಥವಾ ಇಲ್ಲದಿರುವ ಪ್ರದೇಶಗಳು ಅವರನ್ನು ಆಕರ್ಷಿಸುತ್ತವೆ. ದುಬೈ ಈ ವಿಷಯದಲ್ಲಿ ಸ್ವರ್ಗಕ್ಕೆ ಸಮ ಎನ್ನಬಹುದು. ಇಲ್ಲಿ ಅಪರಾಧ ಎನ್ನುವುದು ಇಲ್ಲವೇ ಇಲ್ಲ ಎನ್ನುವಷ್ಟು ಗೌಣ. ಹೀಗಾಗಿ ಜಗತ್ತಿನ ಶ್ರೀಮಂತರು ಇಲ್ಲಿ ವಾಸಿಸಲು ಇಷ್ಟಪಡುತ್ತಾರೆ.
ಹೆಚ್ಚಿದ ಅವಕಾಶಗಳು: ಜಾಗತಿಕ ವ್ಯಾಪಾರ ಸಂಸ್ಥೆಗಳು ತಮ್ಮ ಹೆಡ್ ಆಫೀಸ್ ದುಬೈನಲ್ಲಿ ತೆರೆದಿವೆ. ತೆರಿಗೆ ಉಳಿಸುವ ಕಾರಣಕ್ಕೆ ಇಲ್ಲಿಗೆ ಬಂದಿದ್ದರೂ, ಇಲ್ಲಿ ಎಲ್ಲರೂ ಸಿಗುವ ಕಾರಣ ಅವಕಾಶಗಳು ಕೂಡ ಹೇರಳವಾಗಿವೆ. ಒಂದು ವ್ಯಾಪಾರ ಸಂಸ್ಥೆ ತೆಗೆಯಲು ಬೇಕಾಗುವ ಏಕೋ ಸಿಸ್ಟಮ್ ಇಲ್ಲಿದೆ. ವ್ಯಾಪಾರ ವಹಿವಾಟು ಕಟ್ಟುವುದು ಮತ್ತು ಅದನ್ನು ನಡೆಸುವುದು ಇಲ್ಲಿ ಇತರ ದೇಶಗಳಿಗಿಂತ ಸುಲಭ.
ಜಾಗತಿಕವಾಗಿ ದುಬೈ ಉತ್ತಮ ಜಾಗದಲ್ಲಿದೆ: ಗಮನಿಸಿ ಜಗತ್ತಿನ ಇತರ ಭಾಗಗಳಿಗೆ ಇಲ್ಲಿಂದ ಸಾರಿಗೆ ವ್ಯವಸ್ಥೆ ಉತ್ತಮವಾಗಿದೆ. ಯೂರೋಪು ಅಥವಾ ಅಮೇರಿಕಾ ತಲುಪಲು ಇದನ್ನು ಏಣಿಯಂತೆ ಇತರ ದೇಶಗಳು ಬಳಸುತ್ತವೆ. ದುಬೈನಲ್ಲಿ ವಾಸಿಸುತ್ತಿದ್ದರೆ ಟ್ರಾವೆಲ್ ಟೈಮ್ ಉಳಿಯುತ್ತದೆ.
ಜಾಗತಿಕ ಮಟ್ಟದ ಜೀವನ ಶೈಲಿ ಇಲ್ಲಿದೆ: ದುಬೈ ಬೇರೆ ಮುಸ್ಲಿಂ ದೇಶಗಳಂತೆ ಯಾವುದಕ್ಕೂ ನಿಯಮಾವಳಿಗಳನ್ನು ಹೇರುವುದಿಲ್ಲ. ಹೀಗಾಗಿ ಎಲ್ಲಾ ದೇಶದ, ಧರ್ಮದ ಜನರು ಕೂಡ ತಮ್ಮಿಚ್ಚೆಗೆ ತಕ್ಕಂತೆ ಬದುಕುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಪಾಶ್ಚಾತ್ಯರು ಕೂಡ ತಮ್ಮ ದೇಶದಲ್ಲಿ ಬದುಕಿದ ಸ್ವೇಚ್ಛಾಚಾರದ ಬದುಕನ್ನು ಇಲ್ಲಿ ಬದುಕಬಹುದು.
ಕೊನೆಮಾತು: ಇವತ್ತಿಗೆ ಜಗತ್ತಿನಲ್ಲಿ ನಂಬಲು ಅಸಾಧ್ಯ ಎನ್ನಿಸುವ ಮಟ್ಟಿಗೆ ದುಬೈ ಬೆಳೆದಿದೆ. ಇದು ಬಬ್ಬಲ್, ದುಬೈ ಆರ್ಥಿಕತೆ ಅಷ್ಟಕಷ್ಟೇ, ಇದು ಕುಸಿತ ಕಾಣುತ್ತದೆ ಎನ್ನುವ ಮಾತುಗಳನ್ನು ನಾನು ದಶಕದಿಂದ ಕೇಳಿಕೊಂಡು ಬರುತ್ತಿದ್ದೇನೆ. ಅಂದಿಗೆ ಜಾಗತಿಕ ಮಟ್ಟದಲ್ಲಿ ಜನರು ಇಲ್ಲಿ ಕೆಲಸ ಮಾಡಿ ಹೊರಹೋಗಲು ಬಯಸುತ್ತಿದ್ದರು ಅಷ್ಟೇ, ಆದರೆ ಈಗ ಸಮಯ ಬದಲಾಗಿದೆ. ಜನ ಇಲ್ಲಿ ವಾಸಿಸಲು ಬಯಸುತ್ತಿದ್ದಾರೆ. ದಶಕದಿಂದ ಇಲ್ಲಿ ಜಾಗ, ಮನೆ ಕೊಳ್ಳಲು ಇಲ್ಲಿನ ಸರಕಾರ ನೀಡಿರುವ ಅನುಮತಿ, ವ್ಯಾಪಾರ ತೆಗೆಯುವಾಗ ಇದ್ದ ತಡೆಗೋಡೆಗಳನ್ನು ಸಡಿಲಿಸಿದ್ದು ಇದಕ್ಕೆ ಬಹುದೊಡ್ಡ ದೇಣಿಗೆ ನೀಡಿದೆ.
Advertisement