ಶಿಶು ಮತ್ತು ಪುಟ್ಟ ಮಕ್ಕಳ ಆಹಾರ (ಕುಶಲವೇ ಕ್ಷೇಮವೇ)

ಆಹಾರ ಭೂಮಿಯ ಮೇಲಿರುವ ಎಲ್ಲಾ ಜೀವಿಗಳಿಗೂ ಬೇಕೇ ಬೇಕು. ಆಹಾರವಿಲ್ಲದೇ ಬದುಕಿಲ್ಲ. ಆಹಾರ ನಮ್ಮ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅತ್ಯಗತ್ಯ. ಆಗ ತಾನೇ ಹುಟ್ಟಿದ ಮಗುವಿಗೆ ತಾಯಿಯ ಹಾಲೇ ಮೊದಲ ಆಹಾರ. ನವಜಾತ ಶಿಶುಗಳಿಗೆ ತಾಯಿಯ ಹಾಲೇ ಶ್ರೇಷ್ಠ.
ಮಕ್ಕಳ ಆಹಾರ (ಸಂಗ್ರಹ ಚಿತ್ರ)
ಮಕ್ಕಳ ಆಹಾರ (ಸಂಗ್ರಹ ಚಿತ್ರ)online desk

ಆಹಾರ ಭೂಮಿಯ ಮೇಲಿರುವ ಎಲ್ಲಾ ಜೀವಿಗಳಿಗೂ ಬೇಕೇ ಬೇಕು. ಆಹಾರವಿಲ್ಲದೇ ಬದುಕಿಲ್ಲ. ಆಹಾರ ನಮ್ಮ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅತ್ಯಗತ್ಯ. ಆಗ ತಾನೇ ಹುಟ್ಟಿದ ಮಗುವಿಗೆ ತಾಯಿಯ ಹಾಲೇ ಮೊದಲ ಆಹಾರ. ನವಜಾತ ಶಿಶುಗಳಿಗೆ ತಾಯಿಯ ಹಾಲೇ ಶ್ರೇಷ್ಠ. ತಾಯಿಯ ಹಾಲಿಗಿಂತ ಉತ್ಕೃಷ್ಟವಾದುದು ಮತ್ತೊಂದಿಲ್ಲ. ನವಜಾತ ಶಿಶುಗಳು ಹೆಚ್ಚಾಗಿ ನಿದ್ರೆ ಮಾಡುವುದರಿಂದ ಮೂರು ತಿಂಗಳುಗಳವರೆಗೆ ಕನಿಷ್ಠ ಎರಡು ಅಥವಾ ಮೂರು ಗಂಟೆಗಳಿಗೊಮ್ಮೆ ಎದೆಹಾಲುಣಿಸಬಹುದು. ನಂತರ ನಿಧಾನವಾಗಿ ಈ ಅಂತರವನ್ನು ಹೆಚ್ಚು ಮಾಡಬಹುದು.

ಮಕ್ಕಳ ಆಹಾರವನ್ನು ಕೇವಲ ಹಾಲು ಸೇವನೆಯ ಅವಧಿ, ಹಾಲಿನೊಡನೆ ಮೃದುವಾದ ಅಲ್ಪ ಆಹಾರವನ್ನು ಆರಂಭಿಸುವ ಅವಧಿ ಮತ್ತು ಘನಾಹಾರ, ದ್ರವ ಆಹಾರಗಳೆಲ್ಲವನ್ನು ನೀಡುವ ಅವಧಿ ಎಂದು ಮೂರು ವಿಭಾಗಗಳನ್ನಾಗಿ ಮಾಡಬಹುದು.

ಎರಡು ಅಥವಾ ಮೂರು ತಿಂಗಳ ಮಗು

ಮಕ್ಕಳಿಗೆ ಎರಡು ಅಥವಾ ಮೂರು ತಿಂಗಳುಗಳಾದ ಮೇಲೆ ಜೀರ್ಣವಾಗಲು ಅತ್ಯಂತ ಸುಲಭವಾದ, ಸೌಮ್ಯ ಮತ್ತು ರುಚಿಕರ ಆಹಾರಗಳನ್ನು ತಿನ್ನಿಸಬೇಕು. ಸಿಹಿಯಾಗಿರುವ ಮೂಸಂಬಿ ಹಣ್ಣಿನ ರಸ ಅಥವಾ ಒಣ ದ್ರಾಕ್ಷಿಯನ್ನು ಚೆನ್ನಾಗಿ ತೊಳೆದು ಬಿಸಿನೀರಿನಲ್ಲಿ ಕಿವುಚಿ ಅದರ ರಸವನ್ನು ಸಕ್ಕರೆ ಹಾಕದೇ ಒಂದು ಚಮಚದಲ್ಲಿ ಕುಡಿಸಬಹುದು. ಈ ರೀತಿ ಮನೆಯಲ್ಲಿ ಇರುವ ಹಣ್ಣು ಮತ್ತು ಪದಾರ್ಥಗಳನ್ನು ಮಕ್ಕಳಿಗೆ ಕೊಡಬೇಕು.

ನಾಲ್ಕು ತಿಂಗಳ ಮಗು

ನಾಲ್ಕು ತಿಂಗಳ ಮಕ್ಕಳಿಗೆ ತರಕಾರಿಗಳನ್ನು ಬೇಯಿಸಿದ ನೀರನ್ನು ಕುಡಿಸಬಹುದು. ಇದರಲ್ಲಿ ಹೆಚ್ಚು ಪೌಷ್ಟಿಕಾಂಶಗಳಿರುತ್ತವೆ ಮತ್ತು ಇದು ಸುಲಭವಾಗಿ ಜೀರ್ಣವಾಗುತ್ತದೆ. ನೈಸರ್ಗಿಕ ಜೀವಸತ್ವಗಳ ರೀತಿಯಲ್ಲಿ ಇದು ಕೆಲಸ ಮಾಡುತ್ತದೆ. ಐದು ತಿಂಗಳು ತುಂಬಿದ ಮಕ್ಕಳಿಗೆ ರಾಗಿ, ಗೋಧಿ, ಅಕ್ಕಿ, ಹೆಸರುಕಾಳುಗಳನ್ನು ಸಮವಾಗಿ ತೆಗೆದುಕೊಂಡು ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಿ ಹುರಿದು ಪುಡಿ ಮಾಡಿಕೊಂಡು ಅದಕ್ಕೆ ತುಪ್ಪ, ಉಪ್ಪು ಬೆರೆಸಿ ಗಂಜಿ ಮಾಡಿ ತಿನ್ನಿಸಬೇಕು. ಇದೊಂದು ಪೌಷ್ಟಿಕ ಆಹಾರ.

ಮಕ್ಕಳ ಆಹಾರ (ಸಂಗ್ರಹ ಚಿತ್ರ)
ಪ್ರೀಮೆನ್ಸ್ಟ್ರುವಲ್ ಸಿಂಡ್ರೋಮ್–PMS: ಲಕ್ಷಣಗಳು, ಕಾರಣ & ಚಿಕಿತ್ಸೆ (ಕುಶಲವೇ ಕ್ಷೇಮವೇ)

ಆರು ತಿಂಗಳ ಮಗು

ಮಕ್ಕಳಿಗೆ ಆರು ತಿಂಗಳಾದಾಗ ನಿಧಾನವಾಗಿ ಸ್ವಲ್ಪ ಗಟ್ಟಿಯಾಗಿರುವ ಆಹಾರವನ್ನು ನೀಡಲು ಆರಂಭಿಸುವುದು ಒಳ್ಳೆಯದು. ತರಕಾರಿಗಳನ್ನು ಹದವಾಗಿ ಬೇಯಿಸಿ ಕಿವುಚಿ ತಿನ್ನಿಸಬಹುದು. ಎಂಟು ತಿಂಗಳಾದಾಗ ಮೆದುವಾಗಿ ಹಿಸುಕಿದ ಬೆಚ್ಚನೆಯ ಅನ್ನ ಕೊಡಬೇಕು. ನಂತರ ನಿಧಾನವಾಗಿ ಚಪಾತಿ, ಮತ್ತೆನೆಯ ದೋಸೆ, ತಿಳಿಸಾರು, ಚಪಾತಿ, ಇಡ್ಲಿ, ಮುದ್ದೆ, ರೊಟ್ಟಿ, ಸೊಪ್ಪುಗಳು, ತರಕಾರಿಗಳು ಮೊದಲಾದ ದಿನನಿತ್ಯ ಮನೆಯಲ್ಲಿ ಮಾಡುವ ಆಹಾರಗಳನ್ನು ಕೊಡಬಹುದು. ಖಾರ ಮತ್ತು ಉಪ್ಪು ಕಡಿಮೆ ಇರುವ ಪದಾರ್ಥಗಳನ್ನೇ ಕೊಡಬೇಕು. ಜೊತೆಗೆ ಸಿಹಿಯಾಗಿರುವ ಮೊಸರು, ಬೆಣ್ಣೆಯನ್ನು ತೆಗೆದಿರುವ ಸಿಹಿ ಮಜ್ಜಿಗೆ, ಬೆಣ್ಣೆ, ತುಪ್ಪಗಳನ್ನು ಮಿತವಾಗಿ ಕೊಡಲು ಪ್ರಾರಂಭಿಸಬೇಕು. ಹಣ್ಣುಗಳನ್ನು ನೀಡುವುದು ಕೂಡ ಒಳ್ಳೆಯದು. ಸೀಬೆಹಣ್ಣು, ಪಪ್ಪಾಯ, ದ್ರಾಕ್ಷಿಹಣ್ಣು, ಬಾಳೆಹಣ್ಣು, ಮಾವಿನಹಣ್ಣು, ಮೂಸಂಬಿ, ಸೇಬು ಮತ್ತು ಖರ್ಜೂರಗಳನ್ನು ನೀಡಬಹುದು. ಆಯಾ ಕಾಲದಲ್ಲಿ ಸಿಗುವ ಹಣ್ಣುಗಳನ್ನು ನೀಡುವುದೂ ಉತ್ತಮ. ಹಾಲು ಮತ್ತು ಸಿಹಿ ಹಣ್ಣಿನ ರಸಗಳು ಉತ್ತಮ ಪೇಯಗಳು. ಮಕ್ಕಳಿಗೆ ಜೂಸ್ ಮಾಡುವಾಗ ಹಣ್ಣುಗಳಿಗೆ ಸಕ್ಕರೆ ಹಾಕುವುದಕ್ಕಿಂತ ಜೇನುತುಪ್ಪ ಮತ್ತು ಕಲ್ಲುಸಕ್ಕರೆಯನ್ನು ಸೇರಿಸುವುದು ಒಳ್ಳೆಯದು.

ಎರಡು ಮೂರು ವರ್ಷದ ಮಗು

ಮಕ್ಕಳಿಗೆ ಎರಡು ಮೂರು ವರ್ಷಗಳಾದಾಗ ಕಡಲೆಬೇಳೆ, ಅವರೆಬೇಳೆಗಳಿಂದ ತಯಾರಿಸಿದ ಪದಾರ್ಥಗಳನ್ನು ನೀಡಲು ಆರಂಭಿಸಬಹುದು. ಒಣ್ಣು ಹಣ್ಣುಗಳ ಅಂದರೆ ಗೋಡಂಬಿ, ಉತ್ತುತ್ತಿ, ಬಾದಾಮಿಗಳನ್ನು ಏಲಕ್ಕಿ ಮತ್ತು ಕೇಸರಿಗಳ ಜೊತೆಗೆ ಪುಡಿ ಮಾಡಿ ಹಾಲಿನೊಂದಿಗೆ ಬೆರೆಸಿ ಕುಡಿಸಬಹುದು. ಅರಳುಹಿಟ್ಟು, ಕಡ್ಲೆಬೀಜ, ಅವಲಕ್ಕಿ, ಹುರಿಗಡಲೆ, ಎಳ್ಳು, ಗೋಧಿಹಿಟ್ಟು, ಹೆಸರುಹಿಟ್ಟುಗಳನ್ನು ಹುರಿದು ಅದರ ಜೊತೆಗೆ ಬೆಲ್ಲ, ತುಪ್ಪ ಸೇರಿಸಿ ಪೌಷ್ಟಿಕ ಸಿಹಿ ಉಂಡೆಗಳನ್ನು ಮಾಡಿ ತಿನ್ನಿಸಬಹುದು. ಅಲ್ಲದೇ ಸ್ವಲ್ಪವೇ ಉಪ್ಪು, ಖಾರ ಹಾಕಿದ ಕಡಲೆಪುರಿ, ಹುರಿದ ಖಾರದ ಅವಲಕ್ಕಿಗಳಂತಹ ಕುರುಕುರು ತಿಂಡಿಗಳನ್ನು ಕೊಡಬಹುದು. ಇಂತಹ ತಿಂಡಿಗಳು ನಾಲಗೆಗೂ ರುಚಿಯೆನಿಸುತ್ತವೆ. ಈ ಎಲ್ಲಾ ಆಹಾರಗಳು ಕೇವಲ ರುಚಿಕರವಷ್ಟೇ ಅಲ್ಲ ಪೌಷ್ಟಿಕ ಆಹಾರಗಳು ಹೌದು. ಪ್ರೋಟಿನ್, ಖನಿಜಗಳು, ಲವಣಗಳು, ವಿಟಮಿನ್ಗಳು ಈ ಆಹಾರಗಳಲ್ಲಿ ಇರುವುದರಿಂದ ಸ್ನಾಯುಗಳು, ನರಮಂಡಲ ಮತ್ತು ಮೂಳೆಗಳ ಬಲವರ್ಧನೆಗೆ ಸಹಾಯಕವಾಗಿವೆ. ಅಲ್ಲದೇ ರೋಗನಿರೋಧಕ ಶಕ್ತಿಯನ್ನು ಕೂಡ ಬೆಳೆಸುತ್ತವೆ. ಬಾಳೆಹಣ್ಣು ತುಂಬಾ ಒಳ್ಳೆಯ ಆಹಾರ. ಇದರಿಂದ ಮಕ್ಕಳಿಗೆ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಬಾಳೆಹಣ್ಣನ್ನು ಬೇಯಿಸುವ ಅವಶ್ಯಕತೆ ಇರುವುದಿಲ್ಲ ಇದನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ಹಾಲನ್ನು ಹಾಕಿ ತಿನ್ನಿಸಬಹುದು.

ಮಕ್ಕಳ ಆಹಾರ (ಸಂಗ್ರಹ ಚಿತ್ರ)
ಬೇಸಿಗೆ ಕಾಲದಲ್ಲಿ ಕಾಡುವ ಉಷ್ಣದ ಗುಳ್ಳೆಗಳು (ಕುಶಲವೇ ಕ್ಷೇಮವೇ)

ಅಕ್ಕಿತರಿಯಿಂದ ಮಾಡುವ ಆಹಾರವನ್ನು ಮಕ್ಕಳಿಗೆ ಕೊಡಬಹುದು. ಇದರಿಂದ ಮಕ್ಕಳ ಅರೋಗ್ಯ ಚೆನ್ನಾಗಿ ಇರುತ್ತದೆ. ಜೀರ್ಣಕ್ರಿಯೆಯ ಸಮಸ್ಯೆ ಆಗದು. ಕಾಲು ಭಾಗ ಕಂದು ಬಣ್ಣದ ಅಕ್ಕಿ ಹುಡಿ ಇದರ ಜೊತೆಗೆ ಸ್ವಲ್ಪ ಹೆಸರಬೇಳೆ, ರಾಗಿ, ಗೋಧಿ, ತೊಗರಿಬೇಳೆ ಇವೆಲ್ಲವನ್ನು ಬೆಚ್ಚಗೆ ಆಗುವಷ್ಟು ಹುರಿದು ತರಿ ತರಿಯಾಗಿ ಪುಡಿ ಮಾಡಿಟ್ಟುಕೊಳ್ಳಿ. ಎಲ್ಲವನ್ನು ಸರಿ ಪ್ರಮಾಣದ್ಲಲಿ ಹಾಲಿನಲ್ಲಿ ಅಥವಾ ನೀರಿನಲ್ಲಿ ಬೆಯೇಸಿ ತಿನ್ನಿಸಬಹುದು.

ಸೇಬು ಮಕ್ಕಳ ಆರೋಗ್ಯಕ್ಕೆ ಬೇಕಾಗಿರುವ ವಿಟಮಿನ್ಗಳನ್ನು ನೀಡುತ್ತದೆ. ಜ್ಯೂಸ್ ಅಥವಾ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಂಡು ಸೇಬನ್ನು ಪೇಸ್ಟ್ ಮಾಡಿ ತಿನ್ನಿಸಬೇಕು.ರಾತ್ರಿ ಮಲಗುವ ಮೊನ್ನ ಒಂದು ಅರ್ಧ ಬಟ್ಟಲು ಹಾಲಿಗೆ ಒಂದು ಗೋಡಂಬಿ, ಉತ್ತತ್ತಿ, ಪಿಸ್ತಾ, ದ್ರಾಕ್ಷಿ ಇವೆಲ್ಲವನ್ನು ನೆನೆಸಿ ಬೆಳಿಗ್ಗೆ ನೆನಿಸಿರುವ ಹಾಲಿನೊಂದಿಗೆ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಂಡು ಒಂದು ಪಾತ್ರೆಯಲ್ಲಿ ಸೋಸಿಕೊಂಡು ಕುಡಿಸುವುದರಿಂದ ದೇಹಕ್ಕೆ ಶಕ್ತಿ ಬರುವುದರ ಜೊತೆಗೆ ನೆನಪಿನ ಶಕ್ತಿಗೆ ಅನುಕೂಲವಾಗುತ್ತದೆ.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com