ಪ್ರೀಮೆನ್ಸ್ಟ್ರುವಲ್ ಸಿಂಡ್ರೋಮ್ (ಸಾಂಕೇತಿಕ ಚಿತ್ರ)
ಪ್ರೀಮೆನ್ಸ್ಟ್ರುವಲ್ ಸಿಂಡ್ರೋಮ್ (ಸಾಂಕೇತಿಕ ಚಿತ್ರ)online desk

ಪ್ರೀಮೆನ್ಸ್ಟ್ರುವಲ್ ಸಿಂಡ್ರೋಮ್–PMS: ಲಕ್ಷಣಗಳು, ಕಾರಣ & ಚಿಕಿತ್ಸೆ (ಕುಶಲವೇ ಕ್ಷೇಮವೇ)

ಸಾಮಾನ್ಯವಾಗಿ ಮಹಿಳೆಯರಿಗೆ ಋತುಚಕ್ರಕ್ಕೆ ಸಂಬಂಧಪಟ್ಟಂತೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ.

ಸಾಮಾನ್ಯವಾಗಿ ಮಹಿಳೆಯರಿಗೆ ಋತುಚಕ್ರಕ್ಕೆ ಸಂಬಂಧಪಟ್ಟಂತೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಮುಟ್ಟಾಗುವ ಕೆಲವು ದಿನಗಳು ಅಥವಾ ಒಂದು ವಾರ ಮೊದಲು ಹೊಟ್ಟೆನೋವು, ಬೆನ್ನು ನೋವು, ಅದರಲ್ಲಿಯೂ ಮಾನಸಿಕ ತೊಳಲಾಟ, ದೈಹಿಕ ಆಯಾಸ, ಕಿರಿಕಿರಿ, ಅಜೀರ್ಣತೆ, ಖಿನ್ನತೆ, ಕೋಪತಾಪ ಮುಂತಾದ ಸಮಸ್ಯೆಗಳು ಐದು-ಆರು ದಿನಗಳವರೆಗೆ ಕಾಣಿಸಿಕೊಳ್ಳುತ್ತವೆ. ಇದನ್ನೇ ವೈದ್ಯಕೀಯ ಪರಿಭಾಷೆಯಲ್ಲಿ ಪ್ರೀಮೆನ್ಸ್ಟ್ರುವಲ್ ಸಿಂಡ್ರೋಮ್ (Premenstrual syndrome ಪಿಎಂಎಸ್) ಎನ್ನುತ್ತಾರೆ. ಇಂತಹ ಸಮಸ್ಯೆಗಳು ಪ್ರತಿ ಹತ್ತು ಮಹಿಳೆಯರಲ್ಲಿ ಇಬ್ವರಿಗೆ ಕಾಣಿಸಿಕೊಳ್ಳುತ್ತವೆ. ಇದಕ್ಕೆ ಕಾರಣ ದೇಹದಲ್ಲಿ ಉಂಟಾಗುವ ಹಾರ್ಮೋನಿನ ವ್ಯತ್ಯಾಸ. ಪ್ರಪಂಚದಾದ್ಯಂತ ಸುಮಾರು ಶೇಕಡಾ 47.8ರಷ್ಟು ಮಹಿಳೆಯರು ಪಿಎಂಎಸ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಲಕ್ಷಣಗಳು ಬಂದು ಹೋಗುತ್ತವೆ. ಆದರೆ ಇರುವಷ್ಟು ಸಮಯ ತೊಂದರೆ-ಕಿರಿಕಿರಿ ಇದ್ದದ್ದೇ.

ಪ್ರೀಮೆನ್ಸ್ಟ್ರುವಲ್ ಸಿಂಡ್ರೋಮ್ (ಸಾಂಕೇತಿಕ ಚಿತ್ರ)
ಮಂಗನ ಕಾಯಿಲೆ ಅಥವಾ Monkey Fever (ಕುಶಲವೇ ಕ್ಷೇಮವೇ)

PMS ಲಕ್ಷಣಗಳು

ಪಿಎಂಎಸ್ ಲಕ್ಷಣಗಳು ಕಾಣಿಸಿಕೊಳ್ಳುವ ಅವಧಿ ಮತ್ತು ತೀವ್ರತೆ ಒಬ್ಬರಿಂದ ಒಬ್ಬರಿಗೆ ಬದಲಾಗುತ್ತದೆ. ಪ್ರತಿ ಮಹಿಳೆಗೆ ಈ ಲಕ್ಷಣಗಳು ವಿಭಿನ್ನವಾಗಿ ಪರಿಣಾಮ ಬೀರುತ್ತವೆ. ಇತ್ತೀಚೆಗೆ ಇದೊಂದು ಸಾಮಾನ್ಯ ಸಂಗತಿಯಾಗಿದ್ದು ಹಲವರನ್ನು ಬಾಧಿಸುತ್ತಿದೆ. ಈ ಲಕ್ಷಣಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸುವುದರಿಂದ ಇದನ್ನು ಸಹನೀಯವನ್ನಾಗಿ ಮಾಡಿಕೊಳ್ಳಬಹುದು.

ಪಿಎಂಸ್ ದೈಹಿಕ ಮತ್ತು ಭಾವನಾತ್ಮಕ ಲಕ್ಷಣಗಳಾಗಿ ಕಾಣಿಸಿಕೊಳ್ಳುತ್ತದೆ. ಹೊಟ್ಟೆಯುಬ್ಬರ, ಸ್ತನ ಬಿಗಿತ, ತಲೆನೋವು, ಆಯಾಸ ಮತ್ತು ಆಹಾರಸೇವನೆ ಮಾಡಲು ಏರುಪೇರು ಉಂಟಾಗಬಹುದು. ಜೊತೆಗೆ ಮನೋಸ್ಥಿತಿಯಲ್ಲಿ ಬದಲಾವಣೆ (ಮೂಡ್ ಸ್ವಿಂಗ್), ಕಿರಿಕಿರಿ, ಆತಂಕ, ಖಿನ್ನತೆ ಮತ್ತು ಏಕಾಗ್ರತೆಯ ತೊಂದರೆಗಳನ್ನು ಒಳಗೊಂಡಿರಬಹುದು. ಒತ್ತಡದಿಂದಾಗಿ ಅತಿಸಂವೇದನಾಶೀಲತೆ, ನಿದ್ರಾಹೀನತೆ ಮತ್ತು ಕಾಮಾಸಕ್ತಿಯ ಬದಲಾವಣೆಗಳಂತಹ ವರ್ತನೆಯ ಬದಲಾವಣೆಗಳು ಸಹ ಪಿಎಂಎಸ್ಸಿಗೆ ಸಂಬಂಧಿಸಿವೆ. ಇದಕ್ಕೆ ನಿಖರವಾದ ಕಾರಣವನ್ನು ಸಂಪೂರ್ಣವಾಗಿ ಇನ್ನೂ ಅರ್ಥಮಾಡಿಕೊಳ್ಳಲಾಗಿಲ್ಲ, ಆದರೆ ಹಾರ್ಮೋನುಗಳ ಏರಿಳಿತಗಳು, ವಿಶೇಷವಾಗಿ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಹಾರ್ಮೋನಿನ ಮಟ್ಟದ ಬದಲಾವಣೆಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂದು ನಂಬಲಾಗಿದೆ.

ಪ್ರೀಮೆನ್ಸ್ಟ್ರುವಲ್ ಸಿಂಡ್ರೋಮ್ (ಸಾಂಕೇತಿಕ ಚಿತ್ರ)
ಮುಟ್ಟಿನ ಆ ಮೂರು ದಿನಗಳ ಸ್ವಚ್ಛತೆ (ಕುಶಲವೇ ಕ್ಷೇಮವೇ)

PMS ನಿರ್ವಹಣೆ ಹೇಗೆ?

ಪಿಎಂಎಸ್ ಅನ್ನು ಪೂರ್ಣವಾಗಿ ತೊಡೆದುಹಾಕಲು ಸಾಧ್ಯವಾಗದಿದ್ದರೂ ಅದರ ಲಕ್ಷಣಗಳನ್ನು ನಿರ್ವಹಿಸಲು ಹಲವಾರು ಪರಿಣಾಮಕಾರಿ ತಂತ್ರಗಳಿವೆ. ನಿಯಮಿತ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಈ ಲಕ್ಷಣಗಳನ್ನು ಆದಷ್ಟು ಮಟ್ಟಿಗೆ ನಿವಾರಿಸಬಹುದು. ಬಿರುಸು ನಡಿಗೆ, ಜಾಗಿಂಗ್ ಮತ್ತು ವ್ಯಾಯಾಮವು ಮನಸ್ಥಿತಿಯನ್ನು ನಿಯಂತ್ರಿಸಲು, ಒತ್ತಡವನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

PMS ನಿರ್ವಹಣೆಗೆ ಮನೆಮದ್ದು

  • ಮುಟ್ಟಿಗೆ ಮುಂಚೆ ಬರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಧನಿಯಾ ಮತ್ತು ಜೀರಿಗೆ ಕಷಾಯ ಮಾಡಿ ಸೇವನೆ ಮಾಡಬೇಕು. ಒಂದು ಚಮಚ ಧನಿಯಾ ಮತ್ತು ಅರ್ಧ ಚಮಚ ಜೀರಿಗೆ ಎರಡನ್ನೂ ಜಜ್ಜಿ ಒಂದು ಲೋಟ ನೀರಿನೊಂದಿಗೆ ಒಲೆ ಮೇಲೆ ಸಣ್ಣ ಉರಿಯಲ್ಲಿ ಚೆನ್ನಾಗಿ ಕುದಿಸಬೇಕು. ಈ ಕಷಾಯ ಅರ್ಧ ಲೋಟದಷ್ಟಾದಾಗ ಇಳಿಸಿ ಹಾಲು ಮತ್ತು ಬೆಲ್ಲ ಬೆರೆಸಿ ದಿನಕ್ಕೊಮ್ಮೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು.

  • ಹೊಟ್ಟೆನೋವು ಅಥವಾ ಸೊಂಟನೋವು ಬಂದರೆ ಬಿಸಿ ನೀರಿನ ಚೀಲವನ್ನು (ಹಾಟ್ ವಾಟರ್ ಬ್ಯಾಗ್) ಹೊಟ್ಟೆ ಅಥವಾ ಸೊಂಟದ ಮೇಲೆ ಇಟ್ಟುಕೊಂಡು ಉಪಶಮನ ಮಾಡಿಕೊಳ್ಳಬಹುದು.

  • ಈ ದಿನಗಳಲ್ಲಿ ಹುರುಳಿ ಕಟ್ಟಿನ ಸಾರು ಸೇವಿಸಬೇಕು. ಹುರುಳಿಕಾಳನ್ನು ಬೇಯಿಸಿ ಕಟ್ಟು ತೆಗೆದು ಅದಕ್ಕೆ ಜೀರಿಗೆ ಮತ್ತು ಉಪ್ಪು ಸೇರಿಸಿ ಆಗಾಗ ಕುಡಿಯಬೇಕು. ಇದರಿಂದ ನೋವು ಕಡಿಮೆಯಾಗುತ್ತದೆ.

  • ಬ್ರಾಹ್ಮಿ ಎಲೆಯಿಂದ ತಯಾರಿಸಿದ ತಂಬುಳಿ, ಚಟ್ನಿ ಅಥವಾ ಪಲ್ಯ ಸೇವಿಸುವುದು ಉತ್ತಮ. ಇದರಿಂದ ಮಾನಸಿಕ ಕಿರಿಕಿರಿಯನ್ನು ಕಡಿಮೆ ಮಾಡಿಕೊಳ್ಳಬಹುದು. ಈ ಸಮಯದಲ್ಲಿ ಬಿಸಿ ನೀರನ್ನು ಸೇವಿಸಬೇಕು.

PMS ಲಕ್ಷಣಗಳ ನಿಯಂತ್ರಣಕ್ಕೆ ಆಹಾರ ಮತ್ತು ಜೀವನಶೈಲಿ ಮುಖ್ಯ

ಸಮತೋಲಿತ ಮತ್ತು ಪೌಷ್ಟಿಕ ಆಹಾರ ಸೇವನೆಯು ಬಹಳ ಮುಖ್ಯ. ಧಾನ್ಯಗಳು, ಬೇಳೆಕಾಳುಗಳು, ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ನಿಯಮಿತವಾಗಿ ಸೇವಿಸಬೇಕು. ಕಾಫಿ, ಟೀ, ಮತ್ತು ಅತಿ ಉಪ್ಪುಖಾರವಿರುವ ಆಹಾರಗಳ ಸೇವನೆಯನ್ನು ಕಡಿಮೆ ಮಾಡಬೇಕು, ಮೊಟ್ಟೆ ಮತ್ತು ಮೀನು ಸೇವಿಸುವವರು ಅದನ್ನು ಸೇವಿಸಬಹುದು.

ಆರೋಗ್ಯಕರ ಹವ್ಯಾಸಗಳಲ್ಲಿ ತೊಡಗಿಕೊಳ್ಳುವುದು ಬಹಳ ಮುಖ್ಯ. ತೋಟಗಾರಿಕೆ, ಚಿತ್ರಕಲೆ ಮತ್ತು ಉತ್ತಮ ಪುಸ್ತಕಗಳನ್ನು ಓದಿ ಕಾಲ ಕಳೆಯಬೇಕು. ಸಾಕು ಪ್ರಾಣಿಗಳ ಜೊತೆಗೆ ಸಮಯ ಕಳೆಯುವುದು ಉತ್ತಮ. ಸಮಸ್ಯೆಗಳು ಇದ್ದಾಗ ಆತ್ಮೀಯರೊಂದಿಗೆ ಮಾತಾಡಿ ಕಾಲ ಕಳೆಯಬೇಕು ಮತ್ತು ಸಾಕಷ್ಟು ವಿಶ್ರಾಂತಿ ಪಡೆಯಬೇಕು. ಈ ಸಮಯದಲ್ಲಿ ಹೆಚ್ಚು ಮೊಬೈಲ್ ಫೋನ್ ಬಳಕೆ, ಟಿವಿ ನೋಡುವುದು ಮತ್ತು ಕಂಪ್ಯೂಟರ್ ಬಳಸುವುದು ಮಾಡಬಾರದು.

ಪ್ರೀಮೆನ್ಸ್ಟ್ರುವಲ್ ಸಿಂಡ್ರೋಮ್ (ಸಾಂಕೇತಿಕ ಚಿತ್ರ)
ತಾಯಿಯ ಮುಟ್ಟಿನ ವಯಸ್ಸಿಗೂ ಪುತ್ರನ ಪ್ರೌಢಾವಸ್ಥೆ ವಯಸ್ಸಿಗೂ ಇದೆ ನಂಟು!

ಪ್ರತಿ ದಿನ ಎಂಟು ಗಂಟೆಗಳ ಕಾಲ ಚೆನ್ನಾಗಿ ನಿದ್ರೆ ಮಾಡಬೇಕು. ದೇಹಕ್ಕೆ ಸಾಕಷ್ಟು ವಿಶ್ರಾಂತಿ ದೊರೆತರೆ ಯಾವ ರೋಗಲಕ್ಷಣಗಳು ಬರುವುದಿಲ್ಲ. ಜೊತೆಗೆ ಯಾವುದೇ ರೀತಿಯ ದೈಹಿಕ ಅಥವಾ ಮಾನಸಿಕ ಒತ್ತಡ ಪಿಎಂಎಸ್ಸಿನ ಲಕ್ಷಣಗಳನ್ನು ಉಲ್ಬಣಗೊಳಿಸಬಹುದು, ಆದ್ದರಿಂದ ಒತ್ತಡ ನಿರ್ವಹಣೆ ತಂತ್ರಗಳನ್ನು ಅಭ್ಯಾಸ ಮಾಡುವುದು ಅತ್ಯಗತ್ಯ. ಜೊತೆಗೆ ಯೋಗ, ಧ್ಯಾನ ಮತ್ತು ಪ್ರಾಣಾಯಾಮಗಳನ್ನು ಮಾಡಿದರೆ ಒಳ್ಳೆಯದು. ಗಮನಾರ್ಹವಾದ ಭಾವನಾತ್ಮಕ ಸಮಸ್ಯೆಗಳನ್ನು ಅನುಭವಿಸುತ್ತಿರುವ ಮಹಿಳೆಯರಿಗೆ, ಸಮಾಲೋಚನೆ ಅಥವಾ ಚಿಕಿತ್ಸೆಯನ್ನು ಪಡೆಯುವುದು ಮುಖ್ಯ

ಪಿಎಂಎಸ್ ಲಕ್ಷಣಗಳನ್ನು ಗುರುತಿಸಲು ಋತುಚಕ್ರದ ಡೈರಿಯನ್ನು ಇಟ್ಟುಕೊಳ್ಳುವುದು ಒಳ್ಳೆಯದು. ಇದರಿಂದ ಪಿಎಂಎಸ್ ಲಕ್ಷಣಗಳು ಯಾವಾಗ ಕಾಣಿಸಿಕೊಳ್ಳಬಹುದು ಎಂದು ಅರಿಯಲು ಮತ್ತು ಅವುಗಳನ್ನು ಎದುರಿಸಲು ತಯಾರಾಗಬಹುದು. ಈ ಬಗ್ಗೆ ವೈದ್ಯರೊಂದಿಗೆ ಸಮಾಲೋಚಿಸಿ ನಿರ್ವಹಣಾ ತಂತ್ರಗಳನ್ನು ಅಳವಡಿಸಿಕೊಳ್ಳಬಹುದು.

Related Stories

No stories found.

Advertisement

X
Kannada Prabha
www.kannadaprabha.com