ಮಂಗನ ಕಾಯಿಲೆ ಅಥವಾ Monkey Fever (ಕುಶಲವೇ ಕ್ಷೇಮವೇ)

ಇತ್ತೀಚೆಗೆ ರಾಜ್ಯದ ಮಲೆನಾಡಿನ ಭಾಗಗಳಲ್ಲಿ ಮಂಗನ ಕಾಯಿಲೆ (ಮಂಕಿ ಫೀವರ್) ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಂಡಿವೆ. ಇದೊಂದು ವೈರಾಣು ಸೋಂಕು. ಕೆಲವು ಜನರು ಇದಕ್ಕೆ ಈಗಾಗಲೇ ಬಲಿಯಾಗಿದ್ದಾರೆ. ಇದನ್ನು ಕ್ಯಾಸನೂರು ಅರಣ್ಯ ಕಾಯಿಲೆ (ಕ್ಯಾಸನೂರ್ ಫಾರೆಸ್ಟ್ ಡಿಸೀಸ್-KFD) ಎಂದೂ ಕರೆಯುತ್ತಾರೆ.
ಮಂಗನ ಕಾಯಿಲೆ
ಮಂಗನ ಕಾಯಿಲೆonline desk

ಇತ್ತೀಚೆಗೆ ರಾಜ್ಯದ ಮಲೆನಾಡಿನ ಭಾಗಗಳಲ್ಲಿ ಮಂಗನ ಕಾಯಿಲೆ (ಮಂಕಿ ಫೀವರ್) ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಂಡಿವೆ. ಇದೊಂದು ವೈರಾಣು ಸೋಂಕು. ಕೆಲವು ಜನರು ಇದಕ್ಕೆ ಈಗಾಗಲೇ ಬಲಿಯಾಗಿದ್ದಾರೆ. ಇದನ್ನು ಕ್ಯಾಸನೂರು ಅರಣ್ಯ ಕಾಯಿಲೆ (ಕ್ಯಾಸನೂರ್ ಫಾರೆಸ್ಟ್ ಡಿಸೀಸ್-KFD) ಎಂದೂ ಕರೆಯುತ್ತಾರೆ. ಏಕೆಂದರೆ ಮೊದಲ ಬಾರಿಗೆ ಇದು 1957ರಲ್ಲಿ ಶಿವಮೊಗ್ಗ ಜಿಲ್ಲೆಯ ಕ್ಯಾಸನೂರಿನ ಕಾಡಿನಲ್ಲಿ ಒಂದು ಕೋತಿಯಲ್ಲಿ ಈ ವೈರಸ್ ಕಂಡುಬಂದಿತು. ಆದ್ದರಿಂದಲೇ ಇದನ್ನು ಕ್ಯಾಸನೂರು ಅರಣ್ಯ ಕಾಯಿಲೆ ಅಥವಾ ಮಂಗನ ಕಾಯಿಲೆ ಎಂದು ಕರೆಯಲಾಗುತ್ತದೆ.

ಮಂಗನ ಕಾಯಿಲೆ ಹೇಗೆ ಹರಡುತ್ತದೆ?

ಫ್ಲಾವಿವಿರಿಡೆ ಎಂಬ ಹೆಸರಿನ ವೈರಸ್ನಿಂದ ಈ ಕಾಯಿಲೆ ಹರಡುತ್ತದೆ. ಈ ವೈರಸ್ ಇತರ ಪ್ರಾಣಿಗಳಿಗೆ/ಸಣ್ಣ ಪುಟ್ಟ ಜೀವಿಗಳಿಗೆ ತಗುಲಿ ಅವು ಮನುಷ್ಯರಿಗೆ ಕಚ್ಚಿದಾಗ ಮಂಗನ ಕಾಯಿಲೆ ಹರಡುತ್ತದೆ. ನಮ್ಮ ರಾಜ್ಯದ ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಾಗಿ, ಮಹಾರಾಷ್ಟ್ರ, ಕೇರಳ ಮತ್ತು ಗೋವಾ ರಾಜ್ಯಗಳಲ್ಲಿ ಮಂಗನ ಕಾಯಿಲೆಯ ಪ್ರಕರಣಗಳು ವರದಿಯಾಗಿವೆ. ಹಿರಿಯರು ಮತ್ತು ಕಿರಿಯರೆನ್ನದೇ ಎಲ್ಲರನ್ನೂ ಇದು ಬಾಧಿಸಬಹುದು.

ಮಂಗನ ಕಾಯಿಲೆ ಲಕ್ಷಣಗಳು

ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಸಂಸ್ಥೆಯ ಪ್ರಕಾರ ಮನುಷ್ಯರಿಗೆ ಸಾಮಾನ್ಯವಾಗಿ ಕಾಡಿಗೆ ಹೋದಾಗ ಚಿಗಟ ಅಥವಾ ಉಣ್ಣಿಗಳಿಂದ ಈ ಕಾಯಿಲೆ ಹರಡುತ್ತದೆ. ಕೆಂಪು ಚಿಗಟ ಕಡಿದಾಗ ಬರುವ ಈ ಕಾಯಿಲೆಯ ಮೊದಲ ಲಕ್ಷಣವೇ ಸೋಂಕು ತಗುಲಿದ ಒಂದು ವಾರದ ನಂತರ ಕಾಣಿಸಿಕೊಳ್ಳುವ ಜ್ವರ. ಒಂದು ಬಾರಿ ಈ ವೈರಸ್ ದೇಹವನ್ನು ಸೇರಿದರೆ ಸತತ 10 ರಿಂದ 12 ದಿನಗಳವರೆಗೆ ಜ್ವರ ಕಾಡುತ್ತದೆ. ಚಳಿ, ಜ್ವರ, ತಲೆನೋವು, ತೀವ್ರ ಸ್ನಾಯು ನೋವು, ವಾಂತಿ, ಜೀರ್ಣಾಂಗವ್ಯೂಹದ ಸಮಸ್ಯೆಗಳು ಕಾಣಸಿಕೊಳ್ಳುತ್ತವೆ. ನಂತರ ಕಡಿಮೆ ರಕ್ತದೊತ್ತಡ, ರಕ್ತ ಕಣಗಳ (ಪ್ಲೇಟ್‌ಲೆಟ್‌ಗಳು, ಕೆಂಪು ರಕ್ತ ಕಣಗಳು, ಬಿಳಿ ರಕ್ತ ಕಣಗಳು) ಸಂಖ್ಯೆ ಕಡಿಮೆಯಾಗುವುದು, ತೀವ್ರ ತಲೆನೋವು, ಮಾನಸಿಕ ತೊಂದರೆಗಳು, ನಡುಕ ಮತ್ತು ದೃಷ್ಟಿ ಕೊರತೆಗಳು ಕಾಣಿಸಿಕೊಳ್ಳುತ್ತವೆ. ಮಂಗನ ಕಾಯಿಲೆ ಹೆಚ್ಚು ಕಾಡಿಗೆ ಹೋಗುವವರಲ್ಲಿ, ಕಾಡಿನ ಹತ್ತಿರ ಮನೆ ಇರುವವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ತಕ್ಷಣವೇ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯದಿದ್ದರೆ ಕಾಯಿಲೆ ಉಲ್ಬಣವಾಗಿ ಮಾರಣಾಂತಿಕವಾಗಬಹುದು.

ಮಂಗನ ಕಾಯಿಲೆ
ಬೇಸಿಗೆ ಕಾಲದಲ್ಲಿ ಕಾಡುವ ಉಷ್ಣದ ಗುಳ್ಳೆಗಳು (ಕುಶಲವೇ ಕ್ಷೇಮವೇ)

ಮಂಗನ ಕಾಯಿಲೆಗೆ ಚಿಕಿತ್ಸೆ

ಈ ಕಾಯಿಲೆಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ ಮತ್ತು ರೋಗ ನಿರ್ವಹಣೆಯು ಪ್ರಾಥಮಿಕವಾಗಿ ರೋಗಲಕ್ಷಣಗಳನ್ನು ನಿವಾರಿಸಲು ಮತ್ತು ತೊಡಕುಗಳನ್ನು ತಡೆಗಟ್ಟಲು ಪೋಷಕ ಆರೈಕೆಯನ್ನು ಒಳಗೊಂಡಿದೆ. ಇಂಟ್ರಾವೀನಸ್ ದ್ರವಗಳು, ನೋವು ನಿವಾರಕಗಳು ಮತ್ತು ಜ್ವರ ಮತ್ತು ವಾಂತಿ ನಿಯಂತ್ರಿಸಲು ಔಷಧಿಗಳನ್ನು ವೈದ್ಯರು ನೀಡುತ್ತಾರೆ. ತೀವ್ರತರವಾದ ಪ್ರಕರಣಗಳಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಸೇರಿಸುವುದು ಮತ್ತು ತೀವ್ರ ನಿಗಾ ಇಡುವುದು ಅಗತ್ಯವಾಗಬಹುದು. ದೇಹದಲ್ಲಿ ನಿರ್ಜಲೀಕರಣವನ್ನು ತಡೆಗಟ್ಟಲು ದ್ರವಗಳು ಮತ್ತು ವಿದ್ಯುದ್ವಿಚ್ಛೇದ್ಯಗಳು (ಎಲೆಕ್ಟ್ರೋಲೈಟುಗಳು), ನೋವು ನಿವಾರಕಗಳು ಮತ್ತು ಕೆಲವು ಸಂದರ್ಭಗಳಲ್ಲಿ ಆಂಟಿವೈರಲ್ ಔಷಧಿಗಳು ಸಹಾಯಕವಾಗಬಹುದು. ರಕ್ತಸ್ರಾವದ ಸಮಸ್ಯೆಗಳು ಅಥವಾ ನರವೈಜ್ಞಾನಿಕ ತೊಡಕುಗಳು ಉಂಟಾದರೆ ಅವುಗಳಿಗೆ ಸೂಕ್ತ ಚಿಕಿತ್ಸಾ ಕ್ರಮಗಳನ್ನು ಕೈಗೊಳ್ಳಬಹುದು. ಹಲವು ರಾಜ್ಯ ಸರ್ಕಾರಗಳು ಈ ಕಾಯಿಲೆಯನ್ನು ತಟೆಗಟ್ಟಲು ಪ್ರತಿಬಂಧಕ ಚುಚ್ಚುಮದ್ದನ್ನು ನೀಡುತ್ತಿವೆ. ಇದನ್ನು ತಪ್ಪದೇ ತೆಗೆದುಕೊಳ್ಳಬೇಕು.ಇದಕ್ಕೆ ಬೂಸ್ಟರ್ ಡೋಸ್ ಪಡೆಯಬಹುದು.

ಮಂಗನ ಕಾಯಿಲೆ ಸಾಂಕ್ರಾಮಿಕವಲ್ಲ

ಮಂಗನ ಕಾಯಿಲೆ ಸಾಂಕ್ರಾಮಿಕವಲ್ಲ ಅಂದರೆ ಇದು ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ. ಇದರ ಯಾವುದೇ ರೋಗಲಕ್ಷಣಗಳನ್ನು ಕಂಡುಬಂದರೆ ಅದರಲ್ಲಿಯೂ ವಿಶೇಷವಾಗಿ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದ ನಂತರ/ಟ್ರೆಕ್ಕಿಂಗ್ ಗೆ ಹೋದ ನಂತರ ಜ್ವರ ಬಂದರೆ ತಕ್ಷಣ ವೈದ್ಯಕೀಯ ಆರೈಕೆ ಪಡೆಯುವುದು ಬಹಳ ಮುಖ್ಯ. ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಪಡೆದರೆ ಸೋಂಕಿಗೆ ತುತ್ತಾದ ಒಂದೆರಡು ವಾರದಲ್ಲಿ ಚೇತರಿಕೆ ಕಾಣಬಹುದು. ಈ ಕಾಯಿಲೆ ಬಂದಾಗ ಹೆಚ್ಚು ಪ್ರೋಟೀನ್ಯುಕ್ತ ಆಹಾರ ಸೇವನೆ ಮಾಡಬೇಕು. ತಾಜಾ ಹಣ್ಣುಗಳು ಮತ್ತು ತರಕಾರಿಗಳ ಸೇವನೆಯ ಜೊತೆಗೆ ಬಿಸಿಬಿಸಿಯಾಗಿರುವಾಗ ಊಟ ಮತ್ತು ತಿಂಡಿ ಮಾಡಬೇಕು.

ಮಂಗನ ಕಾಯಿಲೆ
ಬ್ಯಾರಿಯಾಟ್ರಿಕ್ ಸರ್ಜರಿ ಸ್ಥೂಲಕಾಯ ಸಮಸ್ಯೆಗೆ ಪರಿಹಾರವೇ? (ಕುಶಲವೇ ಕ್ಷೇಮವೇ)

ಈ ಕಾಯಿಲೆಯಿಂದ ತಪ್ಪಿಸಿಕೊಳ್ಳಲು ಅರಣ್ಯ ಪ್ರದೇಶಗಳಿಗೆ ಪ್ರವೇಶಿಸುವಾಗ ಉದ್ದನೆಯ ತೋಳಿರುವ ಷರ್ಟ್ ಮತ್ತು ಪ್ಯಾಂಟ್ ಧರಿಸಬೇಕು. ಬೆಚ್ಚನೆಯ ಮತ್ತು ಇಡೀ ದೇಹವನ್ನು ಮುಚ್ಚುವಂತಹ ಬಟ್ಟೆಗಳನ್ನು ಧರಿಸುವುದು ಒಳ್ಳೆಯದು. ಸೋಂಕಿತ/ಸತ್ತ ಕೋತಿಗಳ/ಇತರ ಪ್ರಾಣಿಗಳ ಸಂಪರ್ಕವನ್ನು ತಪ್ಪಿಸಬೇಕು. ಪ್ರಾಣಿಗಳನ್ನು ಮುಟ್ಟಿದ ನಂತರ ಸರಿಯಾಗಿ ಕೈಕಾಲುಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ರಾತ್ರಿ ಹೊತ್ತು ಮಲಗುವಾಗ ಸೊಳ್ಳೆ ಪರದೆಯನ್ನು ಕಟ್ಟಿಕೊಳ್ಳಬೇಕು. ವಾಸಿಸುವ ಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ನೈರ್ಮಲ್ಯವನ್ನು ಸದಾ ಕಾಪಾಡಿಕೊಳ್ಳಬೇಕು. ಕೀಟನಾಶಕಗಳನ್ನು ನಿಯಮಿತವಾಗಿ ಸಿಂಪಡಿಸಬೇಕು. ಕಾಡಿನಲ್ಲಿ ಆಥವಾ ಸುತ್ತಮುತ್ತಲ ಪ್ರದೇಶದಲ್ಲಿ ವಾಸಿಸುವರು ಈ ಬಗ್ಗೆ ಹೆಚ್ಚು ಎಚ್ಚರದಿಂದಿರಬೇಕು. ಇದರ ರೋಗಲಕ್ಷಣಗಳು ಮಲೇರಿಯಾ ರೋಗದ ಲಕ್ಷಣಗಳನ್ನೇ ಹೋಲುತ್ತವೆ. ಜೊತೆಗೆ ಯಾವುದೇ ಪ್ರಾಣಿಗಳಿಂದ ವೈರಸ್ ಹರಡುವ ಸಾಧ್ಯತೆ ಹೆಚ್ಚಾಗಿರುವುದರಿಂದ ಆದಷ್ಟು ಜಾಗೃತರಾಗಿದ್ದರೆ ಒಳ್ಳೆಯದು.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com