ಬ್ಯಾರಿಯಾಟ್ರಿಕ್ ಸರ್ಜರಿ ಸ್ಥೂಲಕಾಯ ಸಮಸ್ಯೆಗೆ ಪರಿಹಾರವೇ? (ಕುಶಲವೇ ಕ್ಷೇಮವೇ)

ಇಂದಿನ ಜಡ ಜೀವನಶೈಲಿಯಿಂದ ಸ್ಥೂಲಕಾಯ (ಬೊಜ್ಜು) ಪುರುಷರು, ಮಹಿಳೆಯರು ಮತ್ತು ಮಕ್ಕಳೆನ್ನದೇ ಎಲ್ಲರನ್ನೂ ಕಾಡುತ್ತಿದ್ದು ಜಾಗತಿಕವಾಗಿ ಒಂದು ಸಮಸ್ಯೆಯಾಗಿಬಿಟ್ಟಿದೆ.
ಬ್ಯಾರಿಯಾಟ್ರಿಕ್ ಸರ್ಜರಿ
ಬ್ಯಾರಿಯಾಟ್ರಿಕ್ ಸರ್ಜರಿ online desk

ಇಂದಿನ ಜಡ ಜೀವನಶೈಲಿಯಿಂದ ಸ್ಥೂಲಕಾಯ (ಬೊಜ್ಜು) ಪುರುಷರು, ಮಹಿಳೆಯರು ಮತ್ತು ಮಕ್ಕಳೆನ್ನದೇ ಎಲ್ಲರನ್ನೂ ಕಾಡುತ್ತಿದ್ದು ಜಾಗತಿಕವಾಗಿ ಒಂದು ಸಮಸ್ಯೆಯಾಗಿಬಿಟ್ಟಿದೆ. ವಿಪರೀತ ಜಂಕ್ ಫುಡ್ ಮತ್ತು ವ್ಯಾಯಾಮರಹಿತ ಜೀವನಶೈಲಿ ದೇಹದಲ್ಲಿ ಕೊಬ್ಬಿನ ಪ್ರಮಾಣವನ್ನು ಹೆಚ್ಚಿಸಿ ವಿಕಾರ ರೂಪ ನೀಡುತ್ತದೆ. ನಮ್ಮ ದೇಶದಲ್ಲಿ ಶೇಕಡಾ 30ಕ್ಕಿಂತ ಹೆಚ್ಚು ಪುರುಷರು, ಶೇಕಡಾ 40ಕ್ಕಿಂತ ಹೆಚ್ಚು ಮಹಿಳೆಯರು ಮತ್ತು ಶೇಕಡಾ 15ಕ್ಕಿಂತ ಹೆಚ್ಚು ಮಕ್ಕಳು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಬ್ಯಾರಿಯಾಟ್ರಿಕ್ ಸರ್ಜರಿ ಯಾವಾಗ ಮಾಡಿಸಿಕೊಳ್ಳಬೇಕು?

ಅನಾರೋಗ್ಯಕರ ಆಹಾರ ಪದ್ಧತಿ, ಸರಿಯಾಗಿ ವಿಶ್ರಾಂತಿ ತೆಗೆದುಕೊಳ್ಳದಿರುವುದು, ನಿಯಮಿತವಾಗಿ ನಿದ್ರೆ ಮಾಡದಿರುವುದು ಮತ್ತು ಯಾವುದೇ ಬಗೆಯ ದೈಹಿಕ ಚಟುವಟಿಕೆಗಳು ಇಲ್ಲದಿರುವುದು ಬೊಜ್ಜು ಒಂದು ದೊಡ್ಡ ಸಮಸ್ಯೆಯಾಗುವಂತೆ ಮಾಡಿದೆ. ಕೆಲವೊಮ್ಮೆ ಜಿಮ್ಮಿಗೆ ಹೋಗಿ ಮೈಮುರಿಯುವಂತೆ ವ್ಯಾಯಾಮ ಮಾಡಿದರೂ ಮತ್ತು ಕಟ್ಟುನಿಟ್ಟಿನ ಆಹಾರಕ್ರಮ ಅನುಸರಿಸಿದರೂ ದೇಹದಲ್ಲಿರುವ ಬೊಜ್ಜು ಕರಗುವುದಿಲ್ಲ. ಆದರೆ ಬ್ಯಾರಿಯಾಟ್ರಿಕ್ ಸರ್ಜರಿ (ಶಸ್ತ್ರಚಿಕಿತ್ಸೆ) ಮೂಲಕ ದೇಹದ ಹೆಚ್ಚುವರಿ ತೂಕವನ್ನು ಸಾಕಷ್ಟು ಕಡಿಮೆ ಮಾಡಿಕೊಳ್ಳಬಹುದು ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಈ ಶಸ್ತ್ರಚಿಕಿತ್ಸೆಯನ್ನು ಎಲ್ಲರೂ ಮಾಡಿಸಿಕೊಳ್ಳಲು ಆಗುವುದಿಲ್ಲ. ದೇಹದಲ್ಲಿ ಶೇಖರವಾಗಿರುವ ಕೊಬ್ಬು ತೀರಾ ತೊಂದರೆಯನ್ನು ಉಂಟುಮಾಡುತ್ತದೆ ಎಂದು ಖಚಿತವಾದಾಗ ಈ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳಬಹುದು.

ಸಾಮಾನ್ಯವಾಗಿ ತೀವ್ರವಾದ ಸ್ಥೂಲಕಾಯತೆ, 40ಕ್ಕಿಂತ ಹೆಚ್ಚು ಬಿಎಮ್‌ಐ (ಮೂಳೆ-ಸ್ನಾಯು ಸಾಂದ್ರತೆ), ಮಧುಮೇಹ, ಅಧಿಕ ರಕ್ತದೊತ್ತಡ, ಕೀಲು ನೋವುಗಳು, ರಕ್ತದಲ್ಲಿನ ಅಸಹಜ ಕೊಲೆಸ್ಟ್ರಾಲ್ ಮಟ್ಟಗಳು, ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಮತ್ತು ಹೃದ್ರೋಗವನ್ನು ಉಂಟುಮಾಡುವ ಪರಿಸ್ಥಿತಿಗಳಿದ್ದರೆ ಬ್ಯಾರಿಯಾಟ್ರಿಕ್ ಸರ್ಜರಿ ಮಾಡಲಾಗುತ್ತದೆ. ಬೊಜ್ಜು ಇದ್ದು ಅನಿಯಂತ್ರಿತ ಮಧುಮೇಹ, ರಕ್ತದೊತ್ತಡ ಮತ್ತು ಹೃದಯ ಸಂಬಂಧಿತ ರೋಗಗಳ ತೀವ್ರತೆಯು ಈ ಶಸ್ತ್ರಚಿಕಿತ್ಸೆಯಿಂದ ಗಣನೀಯವಾಗಿ ಕಡಿಮೆಯಾಗುತ್ತದೆ. ಔಷಧಿಗಳ ಮೂಲಕ ತೂಕವನ್ನು ಕಳೆದುಕೊಳ್ಳಲು ಅಥವಾ ಔಷಧಿ, ಚಿಕಿತ್ಸೆಯ ನಂತರ, ಜೀವನಶೈಲಿಯಲ್ಲಿ ಮಾರ್ಪಾಡುಗಳನ್ನು ಮಾಡಿಕೊಂಡ ನಂತರವೂ ತೂಕವನ್ನು ಇಳಿಸಿಕೊಳ್ಳಲು ಸಾಧ್ಯವಾಗದ ವ್ಯಕ್ತಿಗಳು ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಯನ್ನು ಒಂದು ಆಯ್ಕೆಯಾಗಿ ಪರಿಗಣಿಸಬಹುದು. ಇದಕ್ಕೆ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಬೇಕಾಗುತ್ತದೆ ಎಂಬುದನ್ನು ಗಮನದಲ್ಲಿಡಬೇಕು. ಇತ್ತೀಚೆಗೆ ಹಲವಾರು ಸೆಲೆಬ್ರಿಟಿಗಳು ಕೂಡ ಈ ಚಿಕಿತ್ಸೆಗೆ ಮಾಡಿಸಿಕೊಂಡಿದ್ದಾರೆ. ಆದ್ದರಿಂದ ಈ ಬಗ್ಗೆ ಜನಸಾಮಾನ್ಯರಲ್ಲಿ ಆಸಕ್ತಿ ಹುಟ್ಟಿದೆ. ಈ ಶಸ್ತ್ರಚಿಕಿತ್ಸೆಯನ್ನು ಪ್ರಮಾಣೀಕೃತ ಪರಿಣತ ವೈದ್ಯರಿಂದ ಮಾತ್ರ ಮಾಡಿಸಿಕೊಳ್ಳಬೇಕು. ಇದು ಬಹಳ ಮುಖ್ಯ.

ಬ್ಯಾರಿಯಾಟ್ರಿಕ್ ಸರ್ಜರಿ
ಗರ್ಭಕಂಠದ ಕ್ಯಾನ್ಸರ್ ಅಥವಾ ಸರ್ವೈಕಲ್ ಕ್ಯಾನ್ಸರ್ (ಕುಶಲವೇ ಕ್ಷೇಮವೇ)

ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ ವಿಧಾನಗಳು

ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಯಲ್ಲಿ ಮುಖ್ಯವಾಗಿ ಹೊಟ್ಟೆಯ ಅನಗತ್ಯ ಭಾಗವನ್ನು ತೆಗೆದುಹಾಕಿ ಉದ್ದವಾದ ತೆಳುವಾದ ಕೊಳವೆಯಾಗಿ ಪರಿವರ್ತಿಸಲಾಗುತ್ತದೆ. ಇದರಲ್ಲಿ ನಾಲ್ಕು ವಿಧಾನಗಳಿವೆ:

ಗ್ಯಾಸ್ಟ್ರಿಕ್ ಬೈಪಾಸ್ (ರೂಕ್ಸ್-ಎನ್-ವೈ): ಇದರಲ್ಲಿ ಹೊಟ್ಟೆಯ ಮೇಲ್ಭಾಗದಲ್ಲಿ ಸಣ್ಣ ಚೀಲವನ್ನು ಮಾಡುತ್ತಾರೆ ಮತ್ತು ಅದನ್ನು ನೇರವಾಗಿ ಸಣ್ಣ ಕರುಳಿಗೆ ಸಂಪರ್ಕಿಸುತ್ತಾರೆ. ಇದು ಹೊಟ್ಟೆಯು ಹಿಡಿದಿಟ್ಟುಕೊಳ್ಳಬಹುದಾದ ಆಹಾರದ ಪ್ರಮಾಣವನ್ನು ನಿರ್ಬಂಧಿಸುತ್ತದೆ ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಬದಲಾಯಿಸುತ್ತದೆ.

ಸ್ಲೀವ್ ಗ್ಯಾಸ್ಟ್ರೆಕ್ಟಮಿ: ಈ ಶಸ್ತ್ರಚಿಕಿತ್ಸೆಯಲ್ಲಿ ಹೊಟ್ಟೆಯ ಒಂದು ಭಾಗವನ್ನು ತೆಗೆದುಹಾಕಿ ಚಿಕ್ಕದಾದ, ಬಾಳೆಹಣ್ಣಿನ ಆಕಾರದ ಹೊಟ್ಟೆಯನ್ನು ಬಿಡಲಾಗುತ್ತದೆ. ಇದು ಹೊಟ್ಟೆಯು ಹಿಡಿದಿಟ್ಟುಕೊಳ್ಳಬಹುದಾದ ಆಹಾರದ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ಹಸಿವಿಗೆ ಸಂಬAಧಿಸಿದ ಹಾರ್ಮೋನುಗಳ ಮೇಲೂ ಪರಿಣಾಮ ಬೀರುತ್ತದೆ.

ಗ್ಯಾಸ್ಟ್ರಿಕ್ ಬ್ಯಾಂಡಿಂಗ್ (ಲ್ಯಾಪ್-ಬ್ಯಾಂಡ್): ಇದರಲ್ಲಿ ಹೊಟ್ಟೆಯ ಮೇಲ್ಭಾಗದ ಸುತ್ತಲೂ ಹೊಂದಾಣಿಕೆಯ ಬ್ಯಾಂಡ್ ಅನ್ನು ಇರಿಸಿ ಸಣ್ಣ ಚೀಲವನ್ನು ಮಾಡುತ್ತಾರೆ. ಆಹಾರದ ಹರಿವನ್ನು ನಿಯಂತ್ರಿಸಲು ಬ್ಯಾಂಡ್ ಅನ್ನು ಬಿಗಿ ಮಾಡಬಹುದು ಅಥವಾ ಸಡಿಲಗೊಳಿಸಬಹುದು.

ಡ್ಯುಯೊಡೆನಲ್ ಸ್ವಿಚ್ ಜೊತೆಗಿನ ಬಿಲಿಯೊಪ್ಯಾಂಕ್ರಿಯಾಟಿಕ್ ಡೈವರ್ಶನ್: ಇದರಲ್ಲಿ ಹೆಚ್ಚು ಸಂಕೀರ್ಣವಾದ ವಿಧಾನವಾಗಿದ್ದು, ಕ್ಯಾಲೊರಿಗಳು ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಮಿತಿಗೊಳಿಸಲು ಹೊಟ್ಟೆಯ ದೊಡ್ಡ ಭಾಗವನ್ನು ತೆಗೆದುಹಾಕುತ್ತಾರೆ ಮತ್ತು ಸಣ್ಣ ಕರುಳನ್ನು ಮರುಹೊಂದಿಸುತ್ತಾರೆ.

ಬ್ಯಾರಿಯಾಟ್ರಿಕ್ ಸರ್ಜರಿ
ಗ್ಯಾಂಗ್ರೀನ್: ಲಕ್ಷಣಗಳು & ಕಾರಣಗಳು (ಕುಶಲವೇ ಕ್ಷೇಮವೇ)

ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ ನಂತರವೂ ತೊಂದರೆಗಳು ಇರುತ್ತವೆಯೇ?

ರೋಗಿಗಳು ಈ ಶಸ್ತ್ರಚಿಕಿತ್ಸೆಯ ನಂತರ ಆಸ್ಪತ್ರೆಯಲ್ಲಿ ಕನಿಷ್ಠ 2-3 ದಿನಗಳವರೆಗೆ ಇರಬೇಕು. ನಂತರ ಎಂಟು-ಹತ್ತು ದಿನಗಳಲ್ಲಿ ಕೆಲಸ ಮಾಡಲು ತೊಡಗಬಹುದು. ಈ ಶಸ್ತ್ರಚಿಕಿತ್ಸೆ ಮಾಡಿದ ತಕ್ಷಣವೇ ತೂಕ ಕಡಿಮೆಯಾಗುವುದಿಲ್ಲ ಎಂಬುದನ್ನು ಗಮನಿಸಬೇಕು. ಬಹುತೇಕ ರೋಗಿಗಳು ಹೆಚ್ಚುವರಿ ತೂಕದ ಶೇಕಡಾ 30 ರಿಂದ 50ರಷ್ಟು ತೂಕವನ್ನು ಮೊದಲ ಆರು ತಿಂಗಳಲ್ಲಿ ಕಳೆದುಕೊಳ್ಳುತ್ತಾರೆ. ಮೊದಲ ವರ್ಷದಲ್ಲಿ ಸುಮಾರು ಶೇಕಡಾ 75ರಷ್ಟು ತೂಕವನ್ನು ಕಳೆದುಕೊಳ್ಳುತ್ತಾರೆ. ತೂಕ ಕಡಿಮೆಯ ಪ್ರಮಾಣ ರೋಗಿಯ ಬದ್ಧತೆ ಮತ್ತು ಶಸ್ತ್ರಚಿಕಿತ್ಸೆಯ ನಂತರದ ಆಹಾರ, ವ್ಯಾಯಾಮ ಮತ್ತು ವೈದ್ಯಕೀಯ ಚಿಕಿತ್ಸೆಯ ಅನುಸರಣೆಯ ಮೇಲೆ ಅವಲಂಬಿತವಾಗಿರುತ್ತದೆ. ತೂಕ ಇಳಿಕೆಯ ಸರಿಯಾಗಿ ಆಗಲು ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ.

ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಯ ಗುರಿಯು ದೇಹದ ಅತಿಯಾದ ತೂಕ ಇಳಿಸಿಕೊಳ್ಳಲು ಸಹಾಯ ಮಾಡುವುದು ಮತ್ತು ಬೊಜ್ಜು-ಸಂಬಂಧಿತ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುವುದೇ ಆಗಿದೆ. ಅನೇಕ ಸಂದರ್ಭಗಳಲ್ಲಿ ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಯು ಗಮನಾರ್ಹ ಮತ್ತು ನಿರಂತರ ತೂಕ ನಷ್ಟವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದರೂ ಇದರಲ್ಲಿ ಅಪಾಯಗಳು ಮತ್ತು ತೊಂದರೆಗಳು ಇರುತ್ತದೆ. ಈ ಶಸ್ತ್ರಚಿಕಿತ್ಸೆಗೆ ಒಳಗಾಗುವವರು ಇದರ ಪ್ರಯೋಜನಗಳು ಮತ್ತು ಅಪಾಯಗಳನ್ನು ಕೂಲಂಕಷವಾಗಿ ಚರ್ಚಿಸಿ ನಿರ್ಧಾರ ಮಾಡಬೇಕಾಗುತ್ತದೆ.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com