ಗ್ಯಾಂಗ್ರೀನ್: ಲಕ್ಷಣಗಳು & ಕಾರಣಗಳು (ಕುಶಲವೇ ಕ್ಷೇಮವೇ)

ಗ್ಯಾಂಗ್ರೀನ್ ಪೀಡಿತ ಭಾಗ ಸಾಮಾನ್ಯವಾಗಿ ಕಪ್ಪು, ಕಂದು ಅಥವಾ ಹಸಿರು ಬಣ್ಣಕ್ಕೆ ತಿರುಗುತ್ತದೆ. ತೀವ್ರವಾದ ನೋವು, ಊತ, ದುರ್ವಾಸನೆಯುತ ಸ್ರಾವ ಮತ್ತು ಚರ್ಮದ ಅಡಿಯಲ್ಲಿ ಅನಿಲ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.
ಗ್ಯಾಂಗ್ರೀನ್
ಗ್ಯಾಂಗ್ರೀನ್

ಗ್ಯಾಂಗ್ರೀನ್ ಒಂದು ಗಂಭೀರ ಮತ್ತು ಸಮಸ್ಯಾತ್ಮಕ ಮಾರಕ ಸ್ಥಿತಿ. ದೇಹದಲ್ಲಿ ಒಂದು ನಿರ್ದಿಷ್ಟ ಭಾಗಕ್ಕೆ ರಕ್ತ ಪೂರೈಕೆಯಾಗದಿದ್ದಾಗ ಗ್ಯಾಂಗ್ರೀನ್ ಉಂಟಾಗುತ್ತದೆ. ಇದು ಅಂಗಾಂಶಗಳ ಸಾವಿಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಬ್ಯಾಕ್ಟೀರಿಯಾದ ಸೋಂಕಿನಿಂದ ಅಥವಾ ಕಡಿಮೆ ರಕ್ತದ ಹರಿವಿನಿಂದ ಈ ಸಮಸ್ಯೆ ಉಂಟಾಗುತ್ತದೆ. ಗ್ಯಾಂಗ್ರಿನ್ ಡಯಾಬಿಟಿಸ್ (ಶುಗರ್, ಮಧುಮೇಹ), ಅಪಧಮನಿ (ಶುದ್ಧ ರಕ್ತನಾಳ) ಪೆಡಸಾಗುವುದು ಅಥವಾ ತೀವ್ರವಾದ ಗಾಯಗಳಂತಹ ಪರಿಸ್ಥಿತಿಗಳಿಗೆ ಸಂಬಂಧಿಸಿದೆ. ಸಾಮಾನ್ಯವಾಗಿ ಗ್ಯಾಂಗ್ರೀನ್ ಬೆರಳುಗಳು, ಕೈಗಳು, ಕಾಲ್ಬೆರಳುಗಳು ಮತ್ತು ಪಾದಗಳಲ್ಲಿ ಪ್ರಾರಂಭವಾಗುತ್ತದೆ. ಇದು ತುದಿಗಳಲ್ಲಿ ಕಾಣಿಸಿಕೊಂಡರೆ ಆಂತರಿಕ ಅಂಗಗಳು ಮತ್ತು ಸ್ನಾಯುಗಳ ಮೇಲೆ ಪರಿಣಾಮ ಬೀರಬಹುದು.

ಗ್ಯಾಂಗ್ರೀನ್ ಲಕ್ಷಣಗಳು

ಅಪಧಮನಿಗಳು ಅಥವಾ ರಕ್ತನಾಳಗಳ ಹಾನಿಯಿಂದಾಗಿ ಅಸಮರ್ಪಕ ರಕ್ತದ ಹರಿವು ರಕ್ತಕೊರತೆಯ (ಶುಷ್ಕ) ಗ್ಯಾಂಗ್ರೀನ್‌ಗೆ ಕಾರಣವಾಗಬಹುದು. ಕೆಲವು ಸಂದರ್ಭಗಳಲ್ಲಿ ಸೂಕ್ಷ್ಮ ಬ್ಯಾಕ್ಟೀರಿಯಾಗಳು ಅಂಗಾಂಶಗಳ ಮೇಲೆ ಆಕ್ರಮಣ ಮಾಡಬಹುದು ಮತ್ತು ಅವುಗಳ ಸಂಖ್ಯೆ ಹೆಚ್ಚಾಗಬಹುದು. ಇದು ಸೋಂಕಿಗೆ ದಾರಿಮಾಡಿಕೊಟ್ಟು ಅಂಗಾಂಶಗಳ ಸಾವಿಗೆ ಕಾರಣವಾಗುತ್ತದೆ.

ಗ್ಯಾಂಗ್ರೀನ್ ಪೀಡಿತ ಭಾಗ ಸಾಮಾನ್ಯವಾಗಿ ಕಪ್ಪು, ಕಂದು ಅಥವಾ ಹಸಿರು ಬಣ್ಣಕ್ಕೆ ತಿರುಗುತ್ತದೆ. ತೀವ್ರವಾದ ನೋವು, ಊತ, ದುರ್ವಾಸನೆಯುತ ಸ್ರಾವ ಮತ್ತು ಚರ್ಮದ ಅಡಿಯಲ್ಲಿ ಅನಿಲ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.

ಡ್ರೈ ಗ್ಯಾಂಗ್ರೀನ್, ವೆಟ್ ಗ್ಯಾಂಗ್ರೀನ್

ಗ್ಯಾಂಗ್ರೀನ್ ನಲ್ಲಿ ಒಣ (ಡ್ರೈ) ಗ್ಯಾಂಗ್ರೀನ್ ಮತ್ತು ಆರ್ದ್ರ (ವೆಟ್) ಗ್ಯಾಂಗ್ರೀನ್ ಎರಡು ಮುಖ್ಯ ವಿಧಗಳು ಇವೆ. ಅಸಮರ್ಪಕ ರಕ್ತ ಪರಿಚಲನೆ ಅಥವಾ ದೇಹದಲ್ಲಿನ ನಿರ್ದಿಷ್ಟ ಪ್ರದೇಶಕ್ಕೆ ರಕ್ತದ ಹರಿವಿನ ಕೊರತೆಯಿಂದ ಒಣ ಗ್ಯಾಂಗ್ರೀನ್ ಉಂಟಾಗುತ್ತದೆ. ಇದು ಸಾಮಾನ್ಯವಾಗಿ ಕೈ ಮತ್ತು ಕಾಲುಗಳ ಮೇಲೆ ಪರಿಣಾಮ ಬೀರುತ್ತದೆ. ಸತ್ತ ಅಂಗಾಂಶವು ಒಣಗಿದಂತೆ, ಕೊಳಕು ವಾಸನೆ ಮತ್ತು ಸೋಂಕಿತ ಭಾಗದ ಬಣ್ಣದಲ್ಲಿ ಬದಲಾವಣೆಯನ್ನು ಗಮನಿಸಬಹುದು. ತೀವ್ರತೆಯನ್ನು ಅವಲಂಬಿಸಿ, ಬಣ್ಣವು ಕಂದು ಬಣ್ಣದಿಂದ ಕಪ್ಪು ಬಣ್ಣಕ್ಕೆ ಬದಲಾಗುತ್ತದೆ. ಸತ್ತ ಅಂಗಾಂಶವು ಯಾವುದೇ ನೋವನ್ನು ಉಂಟುಮಾಡದೆ ಸುಲಭವಾಗಿ ಬೀಳುತ್ತದೆ. ಸೋಂಕಿನ ಸಂದರ್ಭದಲ್ಲಿ, ಒಣ ಗ್ಯಾಂಗ್ರೀನ್ ಆರ್ದ್ರ ಗ್ಯಾಂಗ್ರೀನಿಗೆ ಕಾರಣವಾಗಬಹುದು.

ಆರ್ದ್ರ ಗ್ಯಾಂಗ್ರೀನ್ ಗಾಯ ಮತ್ತು ಬ್ಯಾಕ್ಟೀರಿಯಾದ ಸೋಂಕಿನಿಂದ ಉಂಟಾಗುತ್ತದೆ. ಇದರ ಲಕ್ಷಣಗಳು ಸೋಂಕಿನ ಪ್ರದೇಶದ ಸುತ್ತ ಊತ, ಗುಳ್ಳೆಗಳು ಮತ್ತು ತೇವವನ್ನು ಒಳಗೊಂಡಿವೆ. ಗಾಯ, ಸುಟ್ಟಗಾಯಗಳು ಅಥವಾ ಆಘಾತವು ಮಂದ ರಕ್ತ ಪರಿಚಲನೆಗೆ ಕಾರಣವಾಗಬಹುದು ಅಥವಾ ಪ್ರದೇಶಕ್ಕೆ ರಕ್ತ ಪೂರೈಕೆಯನ್ನು ಕಡಿತಗೊಳಿಸಬಹುದು, ಇದರ ಪರಿಣಾಮವಾಗಿ ಅಂಗಾಂಶಗಳ ಸಾವು ಮತ್ತು ಸೋಂಕಿನ ಹೆಚ್ಚಿನ ಸಾಧ್ಯತೆಗಳು. ಈ ಸೋಂಕಿತ ಪ್ರದೇಶವು ಊದಿಕೊಳ್ಳುತ್ತದೆ, ಕೀವು ಉಂಟಾಗುತ್ತದೆ. ಆರ್ದ್ರ ಗ್ಯಾಂಗ್ರೀನ್‌ನಿಂದ ಉಂಟಾಗುವ ಸೋಂಕು ದೇಹದಾದ್ಯಂತ ತ್ವರಿತವಾಗಿ ಹರಡುತ್ತದೆ.

ಗ್ಯಾಂಗ್ರೀನ್ ನಿಂದ ದೇಹದೊಳಗೆ ಸೋಂಕು

ಇದಲ್ಲದೇ ಆಂತರಿಕ ಗ್ಯಾಂಗ್ರೀನ್ ತೀವ್ರವಾದ ನೋವು ಮತ್ತು ಸೋಂಕನ್ನು ಉಂಟುಮಾಡುವ ಅಪೆಂಡಿಕ್ಸ್ ಅಥವಾ ಕೊಲೊನ್‌ನಂತಹ ಸೋಂಕಿತ ಆಂತರಿಕ ಅಂಗಕ್ಕೆ ಸಂಬಂಧಿಸಿದೆ. ಗ್ಯಾಸ್ ಗ್ಯಾಂಗ್ರೀನ್ ದೇಹದೊಳಗಿನ ಸೋಂಕಿನಿಂದ ಉಂಟಾಗುತ್ತದೆ, ಆಘಾತದಿಂದಾಗಿ ಸ್ನಾಯುಗಳು ಮತ್ತು ಆಂತರಿಕ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಫೌರ್ನಿಯರ್ಸ್ ಗ್ಯಾಂಗ್ರೀನ್ ಜನನಾಂಗದ ಪ್ರದೇಶದಲ್ಲಿ ಸೋಂಕಿನಿಂದ ಉಂಟಾಗುವ ಅಪರೂಪದ ಸ್ಥಿತಿಯಾಗಿದೆ. ಮಹಿಳೆಯರಿಗಿಂತ ಪುರುಷರಲ್ಲಿ ಇದು ಹೆಚ್ಚು ಪರಿಣಾಮ ಬೀರುತ್ತದೆ. ಈ ಸೋಂಕು ರಕ್ತಪ್ರವಾಹಕ್ಕೆ ಹರಡಿದರೆ, ಅದು ಸೆಪ್ಸಿಸ್ ಎಂಬ ಮಾರಕ ಸ್ಥಿತಿಗೆ ಕಾರಣವಾಗುತ್ತದೆ.

ಗ್ಯಾಂಗ್ರೀನ್ ರೋಗನಿರ್ಣಯವು ದೈಹಿಕ ಪರೀಕ್ಷೆಗಳು ಮತ್ತು ಪರೀಕ್ಷೆಗಳು ಮತ್ತು ವೈದ್ಯಕೀಯ ಇತಿಹಾಸವನ್ನು ಆಧರಿಸಿದೆ. ರಕ್ತ ಪರೀಕ್ಷೆಯು ಬ್ಯಾಕ್ಟೀರಿಯಾವನ್ನು ಗುರುತಿಸಬಹುದು ಮತ್ತು ಸೋಂಕಿನ ಯಾವುದೇ ಪ್ರಮುಖ ಚಿಹ್ನೆಗಳನ್ನು ಪರಿಶೀಲಿಸಬಹುದು. ಗ್ಯಾಂಗ್ರೀನನ್ನು ಗುರುತಿಸಲು ಎಕ್ಸ್ ರೇ, ಎಂ ಆರ್ ಐ ಮತ್ತು ಸಿಟಿ ಸ್ಕಾನ್ ಪರೀಕ್ಷೆಗಳನ್ನು ಮಾಡುತ್ತಾರೆ.

ಗ್ಯಾಂಗ್ರೀನ್ ಗೆ ಚಿಕಿತ್ಸೆ

ಗ್ಯಾಂಗ್ರೀನ್ ಚಿಕಿತ್ಸೆಯಲ್ಲಿ ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಸತ್ತ ಅಥವಾ ಪೀಡಿತ ಅಂಗಾಂಶವನ್ನು ಶಸ್ತçಚಿಕಿತ್ಸೆ ಮಾಡಿ ತೆಗೆದುಹಾಕುತ್ತಾರೆ. ಸತ್ತ ಅಂಗಾಂಶವನ್ನು ತೆಗೆದುಹಾಕಲು ಮತ್ತು ಸೋಂಕು ಹರಡುವುದನ್ನು ಕಡಿಮೆ ಮಾಡಲು ಶಸ್ತçಚಿಕಿತ್ಸೆಯು ಅತ್ಯಂತ ತ್ವರಿತ ವಿಧಾನ. ತೀವ್ರವಾದ ಹಾನಿಯ ಸಂದರ್ಭದಲ್ಲಿ, ವೈದ್ಯರು ಬೆರಳು ಅಥವಾ ಕಾಲು, ಕಾಲ್ಬೆರಳಿನಂತಹ ಸೋಂಕಿತ ಭಾಗವನ್ನು ತೆಗೆದುಹಾಕಬಹುದು. ಕೆಲವೊಮ್ಮೆ ಮಾತ್ರೆ/ನೇರವಾಗಿ ರಕ್ತನಾಳಕ್ಕೆ ಚುಚ್ಚುಮದ್ದಿನ ರೂಪದಲ್ಲಿ ಆಂಟಿಬಯಾಟಿಕ್ಸುಗಳನ್ನು ನೀಡಬಹುದು. ಹೈಪರ್ಬೇರಿಕ್ ಆಕ್ಸಿಜನ್ ಥೆರಪಿ ಚಿಕಿತ್ಸೆಯಲ್ಲಿ ಆಮ್ಲಜನಕವನ್ನು ಸೋಂಕಿತ ಭಾಗಕ್ಕೆ ಹಾಯಿಸಿದಾಗ ಗುಣ ಹೊಂದುವ ಪ್ರಕ್ರಿಯೆ ವೇಗವಾಗುತ್ತದೆ.

ಗ್ಯಾಂಗ್ರೀನ್ ಬರದಂತೆ ತಡೆಯಲು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ನಿಯಮಿತ ವ್ಯಾಯಾಮ, ಸಮತೋಲಿತ ಆಹಾರ ಮತ್ತು ಧೂಮಪಾನವನ್ನು ಬಿಡುವುದು ಅಪಧಮನಿ ಪೆಡಸಾಗುವುದಂತಹ ಪರಿಸ್ಥಿತಿಗಳನ್ನು ತಡೆಯಲು ಸಹಾಯ ಮಾಡುತ್ತದೆ. ಸೋಂಕನ್ನು ತಡೆಗಟ್ಟಲು ಗಾಯಗಳನ್ನು ತ್ವರಿತವಾಗಿ ಮತ್ತು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ಮಧುಮೇಹದಂತಹ ದೈಹಿಕ ಸಮಸ್ಯೆಯ ಪರಿಸ್ಥಿತಿಗಳ ಸರಿಯಾದ ನಿರ್ವಹಣೆ ಅತ್ಯಗತ್ಯ. ಎಲ್ಲಕ್ಕಿಂತ ಮುಖ್ಯವಾಗಿ ಗಾಯವಾಗದಂತೆ ನೋಡಿಕೊಳ್ಳಬೇಕು. ನಿಯಮಿತವಾಗಿ ಅಗತ್ಯ ವೈದ್ಯಕೀಯ ತಪಾಸಣೆಗಳನ್ನು ಮಾಡಿಸಿಕೊಂಡರೆ ಸಮಸ್ಯೆಗಳನ್ನು ಮೊದಲೇ ಪತ್ತೆಹಚ್ಚಲು ಮತ್ತು ಪರಿಹರಿಸಲು ಸಹಾಯವಾಗುತ್ತದೆ. ಸೂಕ್ತ ಚಲನೆ ಮತ್ತು ಸ್ಥಾನಗಳನ್ನು ಬದಲಾಯಿಸುವುದರಿಂದ ಒತ್ತಡದ ಹುಣ್ಣುಗಳನ್ನು ತಡೆಯಬಹುದು ಮತ್ತು ರಕ್ತಪರಿಚಲನೆಯನ್ನು ಹೆಚ್ಚಿಸಬಹುದು.

ಒಟ್ಟಾರೆಯಾಗಿ ಹೇಳುವುದಾದರೆ ಗ್ಯಾಂಗ್ರೀನ್ ಗಂಭೀರವಾದ ವೈದ್ಯಕೀಯ ಸ್ಥಿತಿಯಾಗಿದ್ದು ಇದಕ್ಕೆ ತಕ್ಷಣದ ಗಮನ ಅಗತ್ಯವಿರುತ್ತದೆ. ಆರೋಗ್ಯಕರ ಜೀವನಶೈಲಿಯಿಂದ ಇದನ್ನು ತಡೆಗಟ್ಟಬಹುದು.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com