ಗರ್ಭಕಂಠದ ಕ್ಯಾನ್ಸರ್ ಅಥವಾ ಸರ್ವೈಕಲ್ ಕ್ಯಾನ್ಸರ್ (ಕುಶಲವೇ ಕ್ಷೇಮವೇ)

ಇಂದು ಮಹಿಳೆಯರನ್ನು ಕಾಡುವ ಹಲವಾರು ಕಾಯಿಲೆಗಳಲ್ಲಿ ಸರ್ವೈಕಲ್ ಕ್ಯಾನ್ಸರ್ ಅಂದರೆ ಗರ್ಭಕಂಠದ ಕ್ಯಾನ್ಸರ್ ಕೂಡ ಒಂದು. ಜಾಗತಿಕವಾಗಿ ಗರ್ಭಕಂಠದ ಕ್ಯಾನ್ಸರ್ ಮಹಿಳೆಯರಲ್ಲಿ ನಾಲ್ಕನೇ ಅತ್ಯಂತ ಸಾಮಾನ್ಯ ಕ್ಯಾನ್ಸರ್ ಆಗಿದೆ.
ಗರ್ಭಕಂಠದ ಕ್ಯಾನ್ಸರ್
ಗರ್ಭಕಂಠದ ಕ್ಯಾನ್ಸರ್
Updated on

ಇಂದು ಮಹಿಳೆಯರನ್ನು ಕಾಡುವ ಹಲವಾರು ಕಾಯಿಲೆಗಳಲ್ಲಿ ಸರ್ವೈಕಲ್ ಕ್ಯಾನ್ಸರ್ ಅಂದರೆ ಗರ್ಭಕಂಠದ ಕ್ಯಾನ್ಸರ್ ಕೂಡ ಒಂದು. ಜಾಗತಿಕವಾಗಿ ಗರ್ಭಕಂಠದ ಕ್ಯಾನ್ಸರ್ ಮಹಿಳೆಯರಲ್ಲಿ ನಾಲ್ಕನೇ ಅತ್ಯಂತ ಸಾಮಾನ್ಯ ಕ್ಯಾನ್ಸರ್ ಆಗಿದೆ, ಪ್ರತಿ ವರ್ಷ ವಿಶ್ವದಲ್ಲಿ ಕನಿಷ್ಠ ಆರು ಲಕ್ಷ ಮಹಿಳೆಯರಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳುತ್ತಿದೆ ಮತ್ತು ಇದು ಬಹುತೇಕ ಮಧ್ಯಮ ಆದಾಯವಿರುವ ದೇಶಗಳಿಂದ ವರದಿಯಾಗುತ್ತಿದೆ. ಜಾಗತಿಕವಾಗಿ ಪ್ರತಿ ವರ್ಷ ಪತ್ತೆಯಾಗುವ ಒಟ್ಟು ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳ ಪೈಕಿ ಕಾಲುಭಾಗದಷ್ಟು ಪ್ರಕರಣಗಳ ಭಾರತದಲ್ಲೇ ಪತ್ತೆಯಾಗುತ್ತಿವೆ. ಲೈಂಗಿಕವಾಗಿ ಮತ್ತು ಹೆಚ್ಚಾಗಿ ಯಾವುದೇ ಲಕ್ಷಣಗಳಿಲ್ಲದ ಸೋಂಕಿನ ರೂಪದಲ್ಲಿ ಇದು ಹರಡುತ್ತದೆ.

ಗರ್ಭಕಂಠದ ಕಾರ್ಯಗಳು

ಗರ್ಭಕಂಠ ಎಂದರೆ ಗರ್ಭಾಶಯ ಮತ್ತು ಯೋನಿಯನ್ನು ಸಂಪರ್ಕಿಸುವ ಸ್ನಾಯುಭರಿತ ಸುರಂಗದಂತಹ ಅಂಗ. ಇದು ಗರ್ಭಾಶಯದ ಕೆಳಗಿನ ಭಾಗ ಮತ್ತು ಗರ್ಭಾಶಯ ಮತ್ತು ಯೋನಿಯ ನಡುವೆ ಋತುಸ್ರಾವದಂತಹ ದ್ರವಗಳನ್ನು ಹಾದುಹೋಗಲು ಅನುವು ಮಾಡಿಕೊಡುತ್ತದೆ. ವೀರ್ಯಾಣು ಗರ್ಭಕೋಶಕ್ಕೆ ಹೋಗಿ ಸಂತಾನೋತ್ಪತ್ತಿಯಾಗಲು ಗರ್ಭಕಂಠದ ಲೋಳೆ ರಸ ಸಹಾಯ ಮಾಡುತ್ತದೆ. ಹಾಗೆಯೇ ಗರ್ಭ ನಿಂತಾಗ ಮಗು ಹೊರಹೋಗದಂತೆ ಕಾಪಾಡುತ್ತದೆ. ಹೆರಿಗೆಯ ಸಮಯದಲ್ಲಿ ಅಗಲವಾಗಿ ಮಗು ಹೊರಗೆ ಬರಲು ಸಹಾಯ ಮಾಡುತ್ತದೆ. ಈ ಮಹತ್ತರ ಕಾರ್ಯಗಳನ್ನು ನಿರ್ವಹಿಸುವುದರಿಂದ ಈ ಅಂಗ ಮಹತ್ವ ಬಹಳ ಹೆಚ್ಚಾಗಿದೆ. ಕೆಲವೊಮ್ಮೆ ಈ ಭಾಗಕ್ಕೆ ವೈರಸ್ ಸೋಂಕು ಉಂಟಾಗಿ ಅದು ಕ್ಯಾನ್ಸರಿಗೆ ತಿರುಗಬಹುದು. ಗರ್ಭಕಂಠದ ಕ್ಯಾನ್ಸರ್ 35 ವರ್ಷ ಅದಕ್ಕೂ ಮೇಲ್ಪಟ್ಟ ಮಹಿಳೆಯರಲ್ಲಿ ಸಾಮಾನ್ಯ.

ಗರ್ಭಕಂಠದ ಕ್ಯಾನ್ಸರ್ ಗೆ ಕಾರಣಗಳು

ಗರ್ಭಕಂಠದ ಕ್ಯಾನ್ಸರಿಗೆ ಮುಖ್ಯ ಕಾರಣ ಹ್ಯೂಮನ್ ಪ್ಯಾಪಿಲೋಮವೈರಸ್. ಇದು ಸಾಮಾನ್ಯವಾಗಿ ಲೈಂಗಿಕವಾಗಿ ಹರಡುವ ವೈರಾಣು ಸೋಂಕು, ಇದು ಚರ್ಮ, ಜನನಾಂಗದ ಪ್ರದೇಶ ಮತ್ತು ಗಂಟಲಿನ ಮೇಲೆ ಪರಿಣಾಮ ಬೀರುತ್ತದೆ. ಬಹುತೇಕ ಎಲ್ಲಾ ಲೈಂಗಿಕವಾಗಿ ಸಕ್ರಿಯವಾಗಿರುವ ಜನರು ತಮ್ಮ ಜೀವನದಲ್ಲಿ ಒಂದಲ್ಲಾ ಒಂದು ಹಂತದಲ್ಲಿ ಸೋಂಕಿಗೆ ಒಳಗಾಗುತ್ತಾರೆ, ಹೆಚ್ಚಿನ ಸಂದರ್ಭಗಳಲ್ಲಿ ರೋಗನಿರೋಧಕ ವ್ಯವಸ್ಥೆಯು ದೇಹದಿಂದ ಈ ವೈರಸ್ಸನ್ನು ಹೊರಹೋಗಿಸುತ್ತದೆ. ಆದರೆ ಇದರ ನಿರಂತರ ಸೋಂಕು ಗರ್ಭಕಂಠದಲ್ಲಿ ಅಸಹಜ ಕೋಶಗಳನ್ನು ಬೆಳೆಸಿ ಅದು ಕ್ಯಾನ್ಸರಾಗಿ ಬದಲಾಗಬಹುದು. ಹಾಗೆಯೇ ಶುಚಿತ್ವದ ಕೊರತೆಯಿಂದ ಮತ್ತು ಹಲವಾರು ಲೈಂಗಿಕ ಸಂಗಾತಿಗಳ ಜೊತೆ ಸಂಪರ್ಕ ಮಾಡಿದಾಗಲೂ ಈ ಸೋಂಕು ತಗುಲಬಹುದು. ತಂಬಾಕಿನ ಬಳಕೆ, ಚಿಕ್ಕವಯಸ್ಸಿನಲ್ಲೇ ಮೊದಲ ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲಿ, ಹೆಚ್ಚು ಮಕ್ಕಳ ಹೆರಿಗೆ, ದೀರ್ಘಕಾಲಿಕವಾಗಿ ಗರ್ಭನಿರೋಧಕಗಳ ಬಳಕೆ ಮತ್ತು ರೋಗನಿರೋಧಕ ಶಕ್ತಿ ಕಡಿಮೆಯಾಗಿರುವ ಸಂದರ್ಭಗಳಲ್ಲಿ ಈ ವೈರಾಣುವಿಗೆ ಮಹಿಳೆಯರು ತುತ್ತಾಗುವ ಸಂಭವ ಹೆಚ್ಚಾಗಿರುತ್ತದೆ.

ಸರ್ವೈಕಲ್ ಕ್ಯಾನ್ಸರ್ ಲಕ್ಷಣಗಳು

ಈ ಕಾಯಿಲೆಯ ಮುಖ್ಯ ಲಕ್ಷಣಗಳು ಅನಿಯಮಿತ ರಕ್ತಸ್ರಾವ, ಋತುಸ್ರಾವದ ನಡುವೆ ಮೇಲಿಂದ ಮೇಲೆ ರಕ್ತಸ್ರಾವ, ಸಣ್ಣ ಪ್ರಮಾಣದಲ್ಲಿ ರಕ್ತಸ್ರಾವ (ಸಂಭೋಗದ ನಂತರ), ಮುಟ್ಟು ನಿಂತ ಬಳಿಕ ರಕ್ತಸ್ರಾವ, ಕೆಟ್ಟವಾಸನೆಯ ಸ್ರಾವ, ಆಗಿಂದಾಗ್ಗೆ ಮೂತ್ರ ವಿಸರ್ಜನೆ ಮತ್ತು ಸೊಂಟನೋವು ಅಥವಾ ಕೆಳ ಬೆನ್ನುನೋವು. ಸಾಮಾನ್ಯವಾಗಿ ಈ ಬಗೆಯ ಕ್ಯಾನ್ಸರ್ನ ಪತ್ತೆಗಾಗಿ ಪ್ಯಾಪ್ ಸ್ಮೀಯರ್ ಟೆಸ್ಟ್ ಮತ್ತು ನಿರ್ದಿಷ್ಟ ಭಾಗಕ್ಕೆ ಬಯಾಪ್ಸಿಗಳನ್ನು ಮಾಡುತ್ತಾರೆ. ಕನಿಷ್ಠ ವರ್ಷಕ್ಕೊಮ್ಮೆಯಾದರೂ ಮೂವತ್ತು ವರ್ಷ ಮೇಲ್ಪಟ್ಟ ಎಲ್ಲಾ ಮಹಿಳೆಯರು ಗರ್ಭಕಂಠದ ಕ್ಯಾನ್ಸರ್ ಪರೀಕ್ಷೆಗೆ ಒಳಗಾಗುವುದು ಉತ್ತಮ.ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗಿರುವ ವೈರಾಣುಗಳ ಪೈಕಿ ವಿವಿಧ ರೀತಿಯ ಶೇ. 70ರಷ್ಟು ಸೋಂಕನ್ನು ಪರಿಣಾಮಕಾರಿ ಲಸಿಕೆಗಳ ಮೂಲಕ ನಿಯಂತ್ರಿಸಬಹುದು. ಈ ಲಸಿಕೆಗಳನ್ನು ಪಡೆದುಕೊಳ್ಳುವುದರಿಂದ ಯೋನಿ ಕ್ಯಾನ್ಸರ್ ಮತ್ತು ಜನನಾಂಗ ನಾಳದ ಕ್ಯಾನ್ಸರ್‌ನಿಂದಲೂ ರಕ್ಷಣೆ ಸಾಧ್ಯ. ಲಸಿಕೆಗಳನ್ನು ಪಡೆದುಕೊಂಡ ಬಳಿಕವೂ ನಿಯಮಿತವಾಗಿ ಗರ್ಭಕಂಠದ ಕ್ಯಾನ್ಸರ್ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಒಳ್ಳೆಯದು.

ಗರ್ಭಕಂಠದ ಕ್ಯಾನ್ಸರ್ ಗೆ ಚಿಕಿತ್ಸೆ

ಆರಂಭಿಕ ಹಂತಗಳಲ್ಲಿ, ಕ್ಯಾನ್ಸರ್ ಅಂಗಾಂಶವನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆ ಸಾಕಾಗಬಹುದು. ಹೆಚ್ಚು ಮುಂದುವರಿದ ಪ್ರಕರಣಗಳಿಗೆ ಶಸ್ತ್ರಚಿಕಿತ್ಸೆ, ವಿಕಿರಣ ಚಿಕಿತ್ಸೆ ಮತ್ತು ಕೀಮೋಥೆರಪಿಯ ಅಗತ್ಯವಿರುತ್ತದೆ. ಚಿಕಿತ್ಸೆಯ ಆಯ್ಕೆಯು ಕಾಯಿಲೆಯ ಗಂಭೀರತೆ, ರೋಗಿಯ ಒಟ್ಟಾರೆ ಆರೋಗ್ಯ ಮತ್ತು ಅವರ ಆದ್ಯತೆಗಳನ್ನು ಪರಿಗಣಿಸಿ ಮಾಡುವ ಸಂಕೀರ್ಣ ನಿರ್ಧಾರವಾಗಿದೆ.

ಸುರಕ್ಷಿತ ಲೈಂಗಿಕ ಸಂಪರ್ಕ, ವೈಯಕ್ತಿಕವಾಗಿ ಶುಚಿತ್ವವನ್ನು ಸೂಕ್ತ ರೀತಿಯಲ್ಲಿ ಕಾಪಾಡಿಕೊಳ್ಳುವುದು, ಧೂಮಪಾನ ತ್ಯಜಿಸುವುದು, ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚಾಗಿ ಸೇವಿಸುವುದು ಮತ್ತು ಹೆಚ್ಚು ಹಸಿರಿನಿಂದ ಕೂಡಿರುವ ತರಕಾರಿ ಮತ್ತು ಹಣ್ಣುಗಳು ಹಾಗೂ ಆರೋಗ್ಯಕರವಾದ ಮತ್ತು ಕೊಬ್ಬಿನಿಂದ ಕೂಡಿರುವ ಸಮತೋಲಿತ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಈ ಕ್ಯಾನ್ಸರನ್ನು ಯಶಸ್ವಿಯಾಗಿ ತಡೆಗಟ್ಟಬಹುದು.

ಆರಂಭದಲ್ಲೇ ಗರ್ಭಕಂಠದ ಕ್ಯಾನ್ಸರ್ ಪತ್ತೆಗಾಗಿ ತಪಾಸಣೆ ಮಾಡಿಕೊಳ್ಳುವುದು, ಇದರ ಬಗ್ಗೆ ಅರಿತುಕೊಳ್ಳುವುದು ಹಾಗೂ ಜಾಗೃತಿ ಮೂಡಿಸುವುದು ಈ ಕಾಯಿಲೆಯನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಾಗೆಯೇ, ಈ ಕ್ಯಾನ್ಸರ್‌ನಿಂದ ಹೊರಬಂದು ಉತ್ತಮ ಜೀವನ ನಡೆಸಲು ವೈದ್ಯಕೀಯ ರಂಗದಲ್ಲಾಗಿರುವ ಕಾಂತ್ರಿಕಾರಿ ತಂತ್ರಜ್ಞಾನಗಳು ಸಹಕಾರಿಯಾಗಿರುವುದು ಮನುಕುಲಕ್ಕೆ ಆಶಾಕಿರಣವಾಗಿದೆ.

Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com