ಮುಟ್ಟಿನ ಆ ಮೂರು ದಿನಗಳ ಸ್ವಚ್ಛತೆ (ಕುಶಲವೇ ಕ್ಷೇಮವೇ)

ಮಹಿಳೆಯರಲ್ಲಿ ಮುಟ್ಟು ಪ್ರತಿ ತಿಂಗಳೂ ಬರುತ್ತದೆ. ಕೆಲವರಲ್ಲಿ 28 ರಿಂದ 30 ದಿನಗಳಿಗೆ ಬರಬಹುದು. ಇನ್ನೂ ಕೆಲವರಲ್ಲಿ 21 ದಿನಗಳಿಗೊಮ್ಮೆ ಬರಬಹುದು.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಮಹಿಳೆಯರಲ್ಲಿ ಮುಟ್ಟು ಪ್ರತಿ ತಿಂಗಳೂ ಬರುತ್ತದೆ. ಕೆಲವರಲ್ಲಿ 28 ರಿಂದ 30 ದಿನಗಳಿಗೆ ಬರಬಹುದು. ಇನ್ನೂ ಕೆಲವರಲ್ಲಿ 21 ದಿನಗಳಿಗೊಮ್ಮೆ ಬರಬಹುದು. ಮತ್ತೆ ಕೆಲವರಲ್ಲಿ 35 ರಿಂದ 40 ದಿನಗಳಿಗೂ ಬರಬಹುದು. ಅದು ಅವರವರ ದೇಹದ ಆರೋಗ್ಯದ ಮೇಲೆ ಮತ್ತು ರಸಾಯನಿಕಗಳ ಸ್ರವಿಸುವಿಕೆಯ ಮೆಲೆ ಅವಲಂಬಿತವಾಗಿರುತ್ತದೆ. 

ಮುಟ್ಟಿನ ಸ್ರಾವ ಸಾಮಾನ್ಯವಾಗಿ 3 ರಿಂದ 5 ದಿನಗಳವರೆಗೆ ಇರುತ್ತದೆ. ಕೆಲವರಲ್ಲಿ 8 ರಿಂದ 10 ದಿನಗಳಿರಬಹುದು. ಮೊದಲ ದಿನ ಸ್ವಲ್ಪ ಸ್ರಾವ ಕಂಡುಬಂದು ಎರಡು, ಮೂರನೆಯ ದಿನಗಳಲ್ಲಿ ಹೆಚ್ಚಾಗಿದ್ದು ನಾಲ್ಕನೆಯ ದಿನಕ್ಕೆ ಕಡಿಮೆಯಾಗುವುದು ಸ್ವಾಭಾವಿಕ.

ಮುಟ್ಟು ಆರಂಭವಾದಾಗಿನಿಂದ ನಿಲ್ಲುವವರೆಗೂ ಬಸಿರು ಮತ್ತು ಬಾಣಂತನವನ್ನು ಹೊರತುಪಡಿಸಿ ಉಳಿದ ಅವಧಿಯಲ್ಲಿ ಮುಟ್ಟಿನ ಸ್ರಾವ ಪ್ರತಿ ತಿಂಗಳೂ ಅನಿವಾರ್ಯ. ಆದರೆ ಅದು ನೋವಾಗಬಾರದು, ಹಿಂಸೆಯೆನಿಸಬಾರದು, ಶಿಕ್ಷೆಯಾಗಬಾರದು. ಹಾಗೆಯೇ ಜನನಾಂಗದ ಸ್ವಚ್ಛತೆಯ ಬಗ್ಗೆ ಹುಡುಗಿಯರು ಬಾಲ್ಯದಿಂದಲೇ ಕಲಿಯಬೇಕು. ಅವರು ಸ್ವಚ್ಛತೆಯನ್ನು ಪರಿಪಾಲಿಸುವಂತೆ ನೋಡಿಕೊಳ್ಳಬೇಕು. 
ಆದ್ದರಿಂದ ಮುಟ್ಟಿನ ಆ ದಿನಗಳಲ್ಲಿ ಈ ಕೆಳಕಂಡ ವಿಷಯಗಳನ್ನು ಗಮನದಲ್ಲಿಡಬೇಕು: 

  • ಋತುಸ್ರಾವ ಅಂದರೆ ಮುಟ್ಟು ಒಂದು ಸಹಜ, ಸ್ವಾಭಾವಿಕ ಕ್ರಿಯೆ. 
  • ಮುಟ್ಟಿನ ದಿನಗಳಲ್ಲಿ ದೇಹ ಮಲಿನವಾಗುತ್ತದೆ, ಅಶುದ್ಧವಾಗುತ್ತದೆ ಎಂಬುದು ತಪ್ಪು ಕಲ್ಪನೆ. 
  • ಈ ಸಮಯದಲ್ಲಿ ದೇಹದಲ್ಲಿ ವಿಷ ಉತ್ಪತ್ತಿಯಾಗುತ್ತದೆ ಎಂಬುದೂ ತಪ್ಪು ತಿಳುವಳಿಕೆ. ಮುಟ್ಟಾದಾಗ ಮರಗಳನ್ನು ಮುಟ್ಟಿದರೆ ಒಣಗಿಹೋಗುತ್ತವೆ ಎಂಬುದೂ ಮೂಢನಂಬಿಕೆ. 
  • ಮುಟ್ಟಿನ ದಿನಗಳಲ್ಲಿ ಪ್ರತಿ ಮಹಿಳೆಯೂ ಸ್ವಚ್ಛತೆಯೆಡೆಗೆ ಗಮನ ನೀಡುವುದು ಬಹಳ ಮುಖ್ಯ. 
  • ಬೇರೆಯವರು ಬಳಸಿದ ಒಳಉಡುಪುಗಳನ್ನು ಬಳಸಬಾರದು. ಒದ್ದೆಯಾಗಿರುವ, ಸರಿಯಾಗಿ ಒಣಗದೇ ಇರುವ ಒಳಉಡುಪುಗಳನ್ನು ಧರಿಸಬಾರದು. ಹಾಗೆ ಬಳಸಿದಲ್ಲಿ, ಚರ್ಮದ ತೊಂದರೆ (ಫಂಗಸ್) ಕಾಣಿಸಿಕೊಳ್ಳಬಹುದು. 
  • ಮುಟ್ಟಿನ ದಿನಗಳಲ್ಲಿ ಬಳಸುವ ಒಳಉಡುಪುಗಳನ್ನು ಒಗೆದು, ಬಿಸಿಲಲ್ಲಿ ಒಣಗಿಸಿ ಇಲ್ಲವೇ ಇಸ್ತ್ರಿ ಮಾಡಿ ಧರಿಸಬೇಕು. 
  • ಬಹಳಷ್ಟು ಮಹಿಳೆಯರು ಒಳಉಡುಪುಗಳನ್ನು ಸ್ನಾನದ ಕೋಣೆಯಲ್ಲಿ ಒಣಗಲು ಹಾಕುತ್ತಾರೆ. ಸ್ನಾನದ ಮನೆ ಸದಾ ತೇವಾಂಶದಿಂದ ಕೂಡಿರುವುದರಿಂದ ಬಟ್ಟೆಗಳು ಸಂಪೂರ್ಣವಾಗಿ ಒಣಗಿರುವುದಿಲ್ಲ. 
  • ಮುಟ್ಟಿನ ರಕ್ತವನ್ನು ಹೀರಲು ಒಳಉಡುಪಿನಲ್ಲಿ ಹಾಕಿಕೊಳ್ಳುವ ಬಟ್ಟೆಯಾಗಿ ಹಳೆಯ ಸೀರೆ ಇಲ್ಲವೇ ಮೃದುವಾದ ಹತ್ತಿಯ ಬಟ್ಟೆಯನ್ನು ಉಪಯೋಗಿಸಬೇಕು.
  • ಮುಟ್ಟಿನ ಸಮಯದಲ್ಲಿ ಬಳಸುವ ಬಟ್ಟೆಯನ್ನು ತಣ್ಣೀರಿನಲ್ಲಿ ಒಗೆದು ಬಿಸಿಲಿನಲ್ಲಿ ಒಣಗಿಸಬೇಕು. ಬಿಸಿಲಿನಲ್ಲಿ ಒಣಗಿಸುವುದರಿದ ಸೂಕ್ಷ್ಮಜೀವಾಣುಗಳು ಸಾಯುತ್ತವೆ. ನಂತರ ಒಣಗಿದ ಬಟ್ಟೆಯನ್ನು ಸ್ವಚ್ಛವಾದ ಜಾಗದಲ್ಲಿಡಬೇಕು. ಏಕೆಂದರೆ ಇಂದಿಗೂ ಹಳ್ಳಿಗಳಲ್ಲಿ ಮುಟ್ಟಿನ ಸಮಯದಲ್ಲಿ ಬಳಸುವ ಬಟ್ಟೆಗಳನ್ನು ಹೆಂಚಿನ ಅಡಿಯಲ್ಲಿ, ಹಳೆಯ ಬಟ್ಟೆಗಳ ಕೆಳಗೆ ಮತ್ತು ಬಚ್ಚಲು ಮನೆಯಲ್ಲಿ ಮುಚ್ಚಿಡುತ್ತಾರೆ. ಇದರಿಂದ ಬಟ್ಟೆಗಳು ಒಣಗದೇ ದುರ್ವಾಸನೆಯಿಂದ ಕೂಡಿರುತ್ತವೆ. ಅಲ್ಲದೇ ಅಂತಹ ಜಾಗಗಳಲ್ಲಿ ಇಡುವುದರಿಂದ ಸೂಕ್ಷ್ಮಾಣುಜೀವಿಗಳು ಸೇರಿಕೊಂಡು ಸೋಂಕು ಹರಡಲು ಕಾರಣವಾಗುತ್ತವೆ. ಕೆಲವು ಬಾರಿ ಜಿರಲೆ, ಹಲ್ಲಿ, ಸೊಳ್ಳೆ, ನೊಣಗಳು ಕುಳಿತು ಮೊಟ್ಟೆಯಿಟ್ಟರೆ ಬಟ್ಟೆಗಳು ಮತ್ತಷ್ಟು ಗಲೀಜಾಗಬಹುದು. ಅಂತಹ ಗಲೀಜು ವಸ್ತ್ರಗಳಲ್ಲಿ ಸೇರಿಕೊಂಡ ಸೂಕ್ಷ್ಮಾಣುಜೀವಿಗಳು ಜನನಾಂಗದಲ್ಲಿ ಸೇರಿಕೊಂಡು ಗರ್ಭಕಂಠ ತಲುಪಬಹುದು. ಇದರಿಂದ ಸೋಂಕು ಗರ್ಭಕೋಶಕ್ಕೂ ಹರಡಿ ಆರೋಗ್ಯಕ್ಕೆ ಮಾರಕವಾಗಬಹುದು. 
  • ಬಟ್ಟೆಯೊಳಗೆ ಹತ್ತಿಯನ್ನು ಹಾಕಿ ಮುಟ್ಟಿನ ದಿನಗಳಲ್ಲಿ ಬಳಸಬಹುದು.
  • ಮಾರುಕಟ್ಟೆಯಲ್ಲಿ ದೊರೆಯುವ ನ್ಯಾಪ್ಕಿನ್ನುಗಳನ್ನು ಬಳಸುವುದರಿಂದ ಹೊರಗಿನ ಉಡುಪುಗಳಿಗೆ ಕಲೆಯಾಗುವುದಿಲ್ಲ.
  • ಶಾಲೆ, ಕಾಲೇಜಿಗೆ ಹೋಗುವ ಹುಡುಗಿಯರಿಗೆ ಈ ನ್ಯಾಪ್ಕಿನ್ನುಗಳು ಬಹಳ ಉಪಯುಕ್ತವೆನಿಸಿವೆ. ಈ ನ್ಯಾಪ್ಕಿನ್ನುಗಳನ್ನು ಬಳಸಿ ಎಸೆಯಬಾರದು. ಎಸೆಯುವಾಗ ಒಂದು ಪೇಪರಿನಲ್ಲಿ ಸುತ್ತಿ ಕಸದ ಬುಟ್ಟಿಗೆ ಹಾಕಿದರೆ ಉತ್ತಮ ಇಲ್ಲದಿದ್ದರೆ ಅದನ್ನು ಸುಡಬಹುದು. 

ಹತ್ತಿಬಟ್ಟೆಯ ಮಡಿಕೆಗಳು 
ಶುದ್ಧವಾದ ಹತ್ತಿಬಟ್ಟೆಯನ್ನೇ ಆರಿಸಿಕೊಳ್ಳಬೇಕು. ಸರಿಯಾದ ಆಕಾರಕ್ಕೆ ಮಡಿಸಬೇಕು. ಹಲವು ಪದರಗಳಿರಬೇಕಾದದ್ದು ಮುಖ್ಯ. ನಿಯಮಿತವಾಗಿ ಇದನ್ನು ಬದಲಾಯಿಸುತ್ತಿರಬೇಕು. ಇಂತಹ ಹಲವು ಮಡಿಕೆಗಳನ್ನು ಇರಿಸಿಕೊಂಡಿರಬೇಕು. ಒಮ್ಮೆ ಉಪಯೋಗಿಸಿದ ನಂತರ ಮತ್ತೆ ತೊಳೆದು ಒಣಗಿಸಿ ಮರುಬಳಕೆ ಮಾಡಬಹುದು. ಬಟ್ಟೆಗಳನ್ನು ತೊಳೆಯುವಾಗ ತಣ್ಣೀರಿನಲ್ಲಿ ತೊಳೆಯಬೇಕು. ಬಿಸಿಲಿನಲ್ಲಿ ತೊಳೆದರೆ ರಕ್ತದ ಕಲೆ ಗಟ್ಟಿಯಾಗಿ ಉಳಿಯುತ್ತವೆ. ಕೆಲವು ಬಣ್ಣದ ಕಲೆಗಳು ಉಳಿದುಬಿಡುತ್ತವೆ. ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಬೇಕು. 

ಮೆತ್ತೆಗಳು (ಪ್ಯಾಡುಗಳು)
ಮಾರುಕಟ್ಟೆಯಲ್ಲಿ ದೊರೆಯುವ ಪ್ಯಾಡುಗಳಲ್ಲಿ (Pads) ಮರದ ತೊಗಟೆಯಿಂದ ತೆಗೆದು ಶುದ್ಧೀಕರಿಸಿದ ಸೆಲ್ಯುಲೋಸ್ ಇರುತ್ತದೆ. ಹತ್ತಿ ಮತ್ತು ರೇಯಾನ್ ಎಳೆಗಳನ್ನು ಬಳಸುತ್ತಾರೆ. ಪ್ಯಾಡಿನ ಹೊರ ಅಂಚು ಮತ್ತು ಕೆಳಗಿನ ಭಾಗ ವಿಶೇಷ ಪ್ಲಾಸ್ಟಿಕ್ ಹಾಳೆಯಿಂದ ಆವೃತವಾಗಿರುತ್ತದೆ. ಇದು ಪಾಲಿ ಪ್ರೊಪೆಲಿನ್ ಅಥವಾ ಪಾಲಿ ಇಥೆಲಿನ್ ಎಂಬ ರಸಾಯನಿಕಗಳಿಂದ ರೂಪುಗೊಂಡಿರುತ್ತದೆ. ಈ ಹೊದಿಕೆಯು ಸ್ರಾವ ಹೊರ ಹರಿಯದಂತೆ ರಕ್ಷಿಸುತ್ತದೆ. ಸಾಮಾನ್ಯವಾಗಿ ಒಂದು ಪ್ಯಾಡನ್ನು ಐದಾರು ಗಂಟೆಗಳ ಕಾಲ ಧರಿಸಬಹುದು. ಹೆಚ್ಚು ರಕ್ತಸ್ರಾವವಿದ್ದರೆ ಮೂರ್ನಾಲ್ಕು ಗಂಟೆಗಳಿಗೊಮ್ಮೆ ಪ್ಯಾಡ್ ಬದಲಾಯಿಸಬೇಕು. ಮುಟ್ಟಿನ ದಿನಗಳಲ್ಲಿ ಬರುವ ರಕ್ತ ಸ್ವಚ್ಛವಾಗಿಯೇ ಇರುತ್ತದೆ. ಆದರೆ ದೇಹದಿಂದ ಹೊರಬಂದು ಗಾಳಿಯ ಸಂಪರ್ಕಕ್ಕೆ ಬಂದಿತೆಂದರೆ ಆಗ ರಕ್ತದ ಬಣ್ಣ ಗಾಢವಾಗುತ್ತದೆ. ಗಾಳಿಯಲ್ಲಿರುವ ಕ್ರಿಮಿಗಳು ರಕ್ತದಲ್ಲಿ ಸೇರಿಕೊಂಡು ಬೀಡು ಬಿಡುತ್ತವೆ. ಆಗ ಕೆಟ್ಟ ವಾಸನೆ ಬರುತ್ತದೆ. ಹೀಗೆ ವಾಸನೆ ಬರಲು ಕೆಲ ಗಂಟೆಗಳು ಬೇಕು. ಆದ್ದರಿಂದ ನಾಲ್ಕೈದು ಗಂಟೆಗಳಲ್ಲಿ ಪ್ಯಾಡ್ ಬದಲಾಯಿಸಬೇಕು. 
ಉಪಯೋಗಿಸಿದ ಪ್ಯಾಡುಗಳನ್ನು ಪಾಲಿಥಿನ್ (ಪ್ಪಾಸ್ಟಿಕ್) ಚೀಲದಲ್ಲಿಟ್ಟು ಕಸದ ತೊಟ್ಟಿಗೆ ಎಸೆಯಬಹುದು. ವಿದೇಶಗಳಲ್ಲಿ ಸಾಮಾನ್ಯವಾಗಿ ಇದನ್ನು ಸುಟ್ಟು ಬಿಡುತ್ತಾರೆ. ಆದರೆ ಇವುಗಳನ್ನು ಎಂದಿಗೂ ಶೌಚಾಲಯದಲ್ಲಿ ಕಮೋಡಿನಲ್ಲಿ ಹಾಕಿ ನೀರು ಬಿಡಬಾರದು. ಅದು ಪೈಪಿನಲ್ಲಿ ಸಿಕ್ಕಿಹಾಕಿಕೊಂಡು ನೀರು ಹರಿಯದೇ ಕಟ್ಟಿಕೊಂಡು ಬಿಡಬಹುದು. ಒಂದು ಬಾರಿ ಬಳಸಿದ ಪ್ಯಾಡುಗಳನ್ನು ಮತ್ತೆ ಬಳಸಬಾರದು. 

ಮುಟ್ಟಿನ ಬಟ್ಟಲು (Menstrual Cup) 
ಇದು ರಟ್ಟಿನ ಅಥವಾ ಸಿಲಿಕಾನಿನಿಂದ ಮಾಡಿದ ಸಣ್ಣ ಕಪ್. ಜನನಾಂಗದ ಜಾಗಕ್ಕೆ ಹೊಂದಿಕೆಯಾಗುವ ಬಟ್ಟಲು. ಇದು ಮುಟ್ಟಿನ ಸಮಯದಲ್ಲಿ ಉಂಟಾಗುವ ರಕ್ತಸ್ರಾವವನ್ನು ಸಂಗ್ರಹಿಸುತ್ತದೆ. ಇದು ಮರುಬಳಕೆ ಮಾಡಬಹುದಾದ ನೈರ್ಮಲ್ಯದ ಉತ್ಪನ್ನವಾಗಿದೆ. ಈ ಬಟ್ಟಲುಗಳು ಇತರ ವಿಧಾನಗಳಿಗಿಂತ ಅಂದರೆ ಪ್ಯಾಡುಗಳಿಗಿಂತ ಹೆಚ್ಚಿನ ರಕ್ತವ್ನು ಹಿಡಿದಿಟ್ಟುಕೊಳ್ಳಬಲ್ಲವು. ನಿಮ್ಮ ಮುಟ್ಟಿನ ಸಮಯದಲ್ಲಿ ಆಗುವ ಮುಟ್ಟಿನ ಹರಿವನ್ನು ಅವಲಂಬಿಸಿ 12 ಗಂಟೆಗಳಿಗೊಮ್ಮೆ ಬಟ್ಟಲು (ಕಪ್) ಧರಿಸಬಹುದು. ಇದನ್ನು ಸ್ವಚ್ಛಗೊಳಿಸಿ ಮರುಬಳಕೆ ಮಾಡಬಹುದು. ಹುಡುಗಿಯರು ಚಿಕ್ಕ ಮುಟ್ಟಿನ ಬಟ್ಟಲನ್ನು ಬಳಸಬೆಕು. ಮೊದಲ ಬಾರಿಗೆ ಮುಟ್ಟಿನ ಬಟ್ಟಲು ಬಳಸಿದಾಗ ಕಿರಿಕಿರಿ ಆನ್ನಿಸಬಹುದು. ಆದರೆ ಅಭ್ಯಾಸವಾದ ಹಾಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಮುಟ್ಟಿನ ಬಟ್ಟಲು ದುಬಾರಿಯೇನಲ್ಲ. ಪ್ಯಾಡಿಗಿಂತ ಹೆಚ್ಚು ರಕ್ತಸ್ರಾವವನ್ನು ಹಿಡಿದಿಟ್ಟುಕೊಳ್ಳುತ್ತದೆ. ಪರಿಸರ ಮಾಲಿನ್ಯವನ್ನು ಉಂಟುಮಾಡುವುದಿಲ್ಲ. ಅತ್ಯಂತ ಸುರಕ್ಷಿತವಾದ ವಿಧಾನವಾಗಿದೆ. ಮರುಬಳಕೆಗೆ ಸುಲಭವಾಗಿವೆ. ಒಂದು ಮುಟ್ಟಿನ ಬಟ್ಟಲನ್ನು ಹತ್ತು ವರ್ಷಗಳವರೆಗೆ ಬಳಸಬಹುದಾಗಿದೆ. ಇದು ಯಾವುದೇ ಸೋಂಕು ಉಂಟುಮಾಡುವುದಿಲ್ಲ. ಇದನ್ನು ಧರಿಸಿ ಆಟೋಟ, ಈಜುವುದು ಮತ್ತು ಸೈಕ್ಲಿಂಗ್ ಮಾಡಬಹುದಾಗಿದೆ.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com