Elon musk
ಎಲಾನ್ ಮಸ್ಕ್online desk

ಭಾರತಕ್ಕೆ ಬಾರದೆ ಎಲಾನ್ ಮಸ್ಕ್ ನೀಡುತ್ತಿರುವ ಸಂದೇಶವೇನು?

ಎಪ್ಪತ್ತರ ದಶಕದಲ್ಲಿ ಚೀಪ್ ಟಿಶರ್ಟ್ ಮಾಡುವ ದೇಶ ಎಂದು ಅಮೇರಿಕಾ ದೇಶದಿಂದ ಹಣೆಪಟ್ಟಿ ಹೊತ್ತ ಚೀನಾ ಸದ್ದಿಲ್ಲದೇ ಬೆಳೆಯುತ್ತ ಹೋಯ್ತು. ಅಮೇರಿಕಾ ಊಹಿಸಲಾಗದ ಮಟ್ಟಕ್ಕೆ ಚೀನಾ ಬೆಳೆದು ನಿಂತು ಬಿಟ್ಟಿತು. (ಹಣಕ್ಲಾಸು-410)
Published on

ಎಪ್ಪತ್ತರ ದಶಕದಲ್ಲಿ ಚೀಪ್ ಟಿಶರ್ಟ್ ಮಾಡುವ ದೇಶ ಎಂದು ಅಮೇರಿಕಾ ದೇಶದಿಂದ ಹಣೆಪಟ್ಟಿ ಹೊತ್ತ ಚೀನಾ ಸದ್ದಿಲ್ಲದೇ ಬೆಳೆಯುತ್ತ ಹೋಯ್ತು. ಅಮೇರಿಕಾ ಊಹಿಸಲಾಗದ ಮಟ್ಟಕ್ಕೆ ಚೀನಾ ಬೆಳೆದು ನಿಂತು ಬಿಟ್ಟಿತು.

ಇದೇನು ಮಾಡಿತು ಎನ್ನುವ ಅಮೆರಿಕಾದ ಲೆಕ್ಕಾಚಾರ ಉಲ್ಟಾ ಹೊಡೆಯಿತು. ಹೌದು ಚೀನಾ ಅಮೇರಿಕಾ ದೇಶವನ್ನು ದಿನಒಪ್ಪತ್ತಿನಲ್ಲಿ ಮಕಾಡೆ ಮಲಗಿಸುವ ಹಂತಕ್ಕೆ ಬೆಳೆದದ್ದು ಮಾತ್ರ ರೋಚಕ. ಕೇವಲ ಅಮೇರಿಕಾ ಮಾತ್ರವಲ್ಲ ಇಡೀ ವಿಶ್ವವನ್ನೇ ನಿಲ್ಲಿಸುವ ಮಟ್ಟಕ್ಕೆ ಚೀನಾ ಬೆಳೆದು ನಿಂತಿತು. ಜಗತ್ತಿಗೆ ಬೇಕಾದ ಬಹುತೇಕ ವಸ್ತುಗಳ ಉತ್ಪಾದನೆಯನ್ನು ಮಾಡುವುದು ಚೀನಾ. ನಮ್ಮ ದೇಶದಲ್ಲೇ ಉತ್ಪಾದಿಸುತ್ತೇವೆ ಎಂದು ನಾವು ಹೆಮ್ಮೆಯಿಂದ ಹೇಳಿಕೊಂಡರೂ ಆ ಉತ್ಪಾದನೆಗೆ ಬೇಕಾದ ಕಚ್ಚಾ ಪದಾರ್ಥ ಚೀನಾದಿಂದ ಬರಬೇಕು ಎನ್ನುವುದು ಇಂದು ಎಲ್ಲರಿಗೂ ತಿಳಿದಿರುವ ಕಹಿಸತ್ಯ. ನಾವೇನೇ ಮೇಕ್ ಇನ್ ಇಂಡಿಯಾ ಎಂದರೂ ಚೀನಾದ ಹತ್ತಿರಕ್ಕೂ ನಾವು ಹೋಗಲಾರೆವು.

ನಮಗೆ ಬೇಕಾದ ವಸ್ತುಗಳ ಉತ್ಪಾದನೆಯ ಕಥೆ ಇದು. ಇನ್ನು ನಾವು ಜಾಗತಿಕ ಮಟ್ಟದಲ್ಲಿ ಉತ್ಪಾದಕ ದೇಶವಾಗಿ ನಮ್ಮನ್ನು ಗುರುತಿಸಿಕೊಳ್ಳುವ ಮಟ್ಟದಿಂದ ಬಹಳ ದೂರ ಇದ್ದೇವೆ ಎನ್ನುವುದಕ್ಕೆ ಇತ್ತೀಚಿನ ಒಂದು ಘಟನೆ ಸಾಕ್ಷಿಯಾಗಿದೆ.

ಚೀನಾ ದೇಶದ ದೈತ್ಯ ಬೆಳವಣಿಗೆಯನ್ನು ಅಮೇರಿಕಾ ಗಮನಿಸುವ ವೇಳೆಗೆ ಅದು ಚೀನಾದ ವಸ್ತುಗಳಿಲ್ಲದೆ ಬದುಕಲಾಗದ ಸ್ಥಿತಿ ತಲುಪಿ ಬಿಟ್ಟಿತ್ತು. ಆದರೆ ಚೀನಾವನ್ನು ನಿಧಾನವಾಗಿ ಹೊರಹಾಕಬೇಕು ಎನ್ನುವುದು ಕೂಡ ಅಮೇರಿಕಾ ಅರಿತು ಕೊಂಡಿತ್ತು. ಆಗ ಹುಟ್ಟಿದ ಐಡಿಯಾ ಚೀನಾ ಪ್ಲಸ್ ಒನ್. ಹೌದು ಚೀನಾ ದೇಶದ ಮೇಲಿನ ಅತಿಯಾದ ಅವಲಂಬನೆಯಿಂದ ಆಗುವ ಪರಿಣಾಮವನ್ನು ಮನಗಂಡು ಅಮೇರಿಕಾ ಮತ್ತು ಯೂರೋಪ್ ದೇಶಗಳು ಚೀನಾ ಇರಲಿ ಆದರೆ ಅದರ ಜೊತೆಗೆ ಇನ್ನೊಂದು ದೇಶವನ್ನು ಸಹ ಉತ್ಪಾದಕ ದೇಶವನ್ನಾಗಿ ಬೆಳಸಬೇಕು ಎನ್ನುವ ಮೆಗಾ ಪ್ಲಾನ್ ಹಾಕಿಕೊಂಡವು. ಸಹಜವಾಗೇ ಪ್ಲಸ್ ಒನ್ ಎಂದರೆ ಅದು ಭಾರತ ಎನ್ನುವಂತಹ ಪರಿಸ್ಥಿತಿ ಜಾಗತಿಕ ಮಟ್ಟದಲ್ಲಿ ನಿರ್ಮಾಣವಾಗಿತ್ತು. ಅಮೇರಿಕಾ ಅಥವಾ ಯೂರೋಪ್ ಅವುಗಳಿಗೆ ಇಂದಿನಿಂದ ಶುರು ಮಾಡಿದರೂ ಇನ್ನು ಒಂದು ದಶಕ ಚೀನಾವನ್ನು ಮಣಿಸಲು ಸಾಧ್ಯವಿಲ್ಲ ಎನ್ನುವುದು ಗೊತ್ತಿದ್ದ ಕಾರಣ ಚೀನಾದ ಜೊತೆ ಜೊತೆಗೆ ಇನ್ನೊಂದು ದೇಶವನ್ನು ಬೆಳಸಬೇಕು , ಚೀನಾದ ಅವಲಂಬನೆ ಆದಷ್ಟು ಕಡಿಮೆ ಮಾಡಿಕೊಳ್ಳಬೇಕು ಎಂದು ಭಾರತಕ್ಕೆ ಮಣೆ ಹಾಕಲು ಶುರು ಮಾಡಿದರು.

Elon musk
ಮತ್ತೆ ಭಾರತ ಭೇಟಿ ಮುಂದೂಡಿದ Elon Musk; ಕಾರಣ TESLA!

ಇಲ್ಲಿ ಇನ್ನೊಂದು ಅಂಶವನ್ನು ಕೂಡ ಗಮನಿಸಬೇಕು. ಭಾರತ ಜಾಗತಿಕವಾಗಿ ಅತಿ ದೊಡ್ಡ ಮಾರುಕಟ್ಟೆ ಕೂಡ, ಕೇವಲ ಅವರಿಗೆ ಬೇಕಾದ ವಸ್ತುಗಳನ್ನು ಮಾಡಿಕೊಡುವುದು ಮಾತ್ರವಲ್ಲದೆ, ಅವರ ಪದಾರ್ಥಗಳಿಗೆ ಭಾರತ ದೊಡ್ಡ ಮಾರುಕಟ್ಟೆ ಹೀಗಾಗಿ ಭಾರತ ಎಲ್ಲರಿಗೂ ಆಕರ್ಷಕವಾಗಿ ಕಂಡಿತು.

ಚೀನಾ ಪ್ಲಸ್ ಒನ್ ಎನ್ನುವ ಆಯಾಮ ಬಲ ಪಡೆದುಕೊಳ್ಳುತ್ತಾ ಹೋದಂತೆ ಚೀನಾಗೆ ಕಸಿವಿಸಿ ಶುರುವಾಯ್ತು. ಚೀನಾದ ದೈತ್ಯ ರಿಯಲ್ ಎಸ್ಟೇಟ್ ಸಂಸ್ಥೆ ಎವರ್ ಗ್ರಾಂದೆ ಕುಸಿತ, ಬ್ಯಾಂಕ್ ಕುಸಿತಗಳು, ಚೀನಾ ಎಕಾನಮಿ ಕುಸಿತಕ್ಕೂ ಕಾರಣವಾದವು. ಅಮೇರಿಕಾ ವಿರುದ್ಧ ಪ್ರೈಸ್ ವಾರ್, ಟ್ರೇಡ್ ವಾರ್ ಗಳಲ್ಲಿ ಮುಳುಗಿದ್ದ ಚೀನಾ ಕುಸಿತದ ಹಂತಕ್ಕೆ ತಲುಪಿತ್ತು. ಆಗ ಸಂಭವಿಸಿದ್ದು ಕರೋನ. ಜಗತ್ತಿಗೆ ಜಗತ್ತನ್ನು ಒಂದೂವರೆ ವರ್ಷಗಳ ಕಾಲ ಸ್ಥಗಿತಗೊಳಿಸಲಾಯಿತು. ಚಿಕ್ಕ ಮಕ್ಕಳು ರಚ್ಚೆ ಹಿಡಿದಾಗ ಅವುಗಳ ಗಮನವನ್ನು ಬೇರೆಡೆಗೆ ಸೆಳೆಯಲು ಪೊರಕೆ ಕಡ್ಡಿಗೆ ಬೆಂಕಿ ಹಚ್ಚಿ ಇಡಲಾಗುತ್ತಿತ್ತು. ಅದರಿಂದ ಹೊರಡುವ ಶಬ್ದ, ಬೆಂಕಿಯ ಜ್ವಾಲೆ ಕಂಡು ಮಕ್ಕಳು ಅಳುವುದನ್ನು ನಿಲ್ಲಿಸುತ್ತಿದ್ದರು. ಜಾಗತಿಕ ರಾಜಕೀಯದಲ್ಲಿ ಕೂಡ ಕರೋನ ಎನ್ನುವ ಪೊರಕೆ ಕಡ್ಡಿಯನ್ನು ಹಚ್ಚಿ ಇಡಲಾಯ್ತು. ಮಿಕ್ಕದ್ದು ಇತಿಹಾಸ. ಎಲ್ಲರಿಗೂ ತಿಳಿದುರುವ ಕಥೆ.

ಕೊರೋನೋತ್ತರ ನಿಧಾನಕ್ಕೆ ಚೀನಾದಿಂದ ಉತ್ಪಾದಕ ಘಟಕಗಳನ್ನು ಭಾರತಕ್ಕೆ ವರ್ಗಾಯಿಸಬೇಕು ಎನ್ನುವ ಅಮೇರಿಕಾ ಮತ್ತು ಯೂರೋಪ್ ದೇಶಗಳ ಕಾರ್ಯಕ್ಕೆ ಜಯ ಸಿಗುತ್ತಿಲ್ಲ. ಎಲಾನ್ ಮಸ್ಕ್ ಭಾರತದ ದೊಡ್ಡ ವ್ಯಾಪಾರಸ್ಥರ ಜೊತೆಗೆ ಮಾತುಕತೆ ನಡೆಸಲು ವೇದಿಕೆ ಸಿದ್ದವಾಗಿತ್ತು. ಯಾವಾಗ ಯಾರನ್ನು ಭೇಟಿ ಮಾಡಬೇಕು ಎನ್ನುವ ಎಲ್ಲಾ ಅಂಶಗಳೂ ಸಿದ್ಧವಾಗಿದ್ದವು. ಕೊನೆಗಳಿಗೆಯಲ್ಲಿ ಆತ ನನಗೆ ಕೆಲಸವಿದೆ ಹೀಗಾಗಿ ಬರಲಾಗುತ್ತಿಲ್ಲ ಎಂದು ಹೇಳಿಕೆ ನೀಡುತ್ತಾರೆ.

ಭಾರತಕ್ಕೆ ಬಂದು ಇಲ್ಲಿನ ಮಾತುಕತೆಗಳನ್ನು ಮುಗಿಸಿ ನಂತರ ಚೀನಾಕ್ಕೆ ಹೋಗುವ ಕಾರ್ಯಪಟ್ಟಿ ಆತನದಾಗಿತ್ತು. ವೇಳಾಪಟ್ಟಿ ಬದಲಿಸಕೊಂಡು ಭಾರತಕ್ಕೆ ಕೈಕೊಟ್ಟು ಆತ ಚೀನಾಕ್ಕೆ ಭೇಟಿ ಕೊಟ್ಟಿದ್ದಾರೆ. ಇದು ಚೀನಾ ಪ್ಲಸ್ ಒನ್ ನೀತಿಯ ಫಲವಾಗಿ ಆ ಪ್ಲಸ್ ಒನ್ ಎಂದರೆ ಬೇರಾರೂ ಆಗಿರಲು ಸಾಧ್ಯವಿಲ್ಲ ಅದು ನಾನೇ ಎನ್ನುವ ಭಾರತದ ಭಾವನೆಗೆ ಬಿದ್ದ ಭಾರಿ ಪೆಟ್ಟು. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಒಪ್ಪಿಕೊಳ್ಳಬೇಕು. ನಂತರ ಮುಂದಿನ ನಡೆಯನ್ನು ನಿರ್ಧರಿಸಬೇಕು.

Elon musk
ಈ ಆರು ಗುಣಗಳು ಇದ್ದರೆ ಶ್ರೀಮಂತರಾಗುವುದು ಕಷ್ಟವೇನಲ್ಲ! (ಹಣಕ್ಲಾಸು)

ಎಲಾನ್ ಮಸ್ಕ್ ಭಾರತವನ್ನು ಯಾವಾಗ ಬೇಕಾದರೂ ಭೇಟಿ ಮಾಡಿ ಕಾರ್ಯಸಾಧನೆ ಮಾಡಿಕೊಳ್ಳಬಹುದು ಎನ್ನುವ ಭಾವನೆಯಿಂದ ಚೀನಾಕ್ಕೆ ಭೇಟಿ ನೀಡಿದ್ದಾರೆ. ಏಕೆಂದರೆ ಆತನ ಅಷ್ಟು ಹಣ ಚೀನಾದಲ್ಲಿ ಹೂಡಿಕೆಯಾಗಿದೆ. ಅಲ್ಲಿಂದ ಬಂಡವಾಳವನ್ನು ತೆಗೆದುಕೊಂಡು ಹೊರ ಬರುವುದು ಅಷ್ಟು ಸುಲಭದ ಕೆಲಸವಲ್ಲ. ಚೀನಾ ಸರಕಾರ ಎಲ್ಲವೂ ತನಗೆ ಬೇಕಾದಂತೆ ಕೆಲಸವಾಗುತ್ತಿದ್ದರೆ ವರ್ತಿಸುವ ರೀತಿ ಬೇರೆ , ಇಲ್ಲವಾದಾಗ ವರ್ತಿಸುವ ರೀತಿಯೇ ಬೇರೆ. ಆ ನಿಟ್ಟಿನಲ್ಲಿ ನೋಡಿದಾಗ ಎಲಾನ್ ಮಸ್ಕ್ ಭಾರತಕ್ಕೆ ಬರದೇ ಚೀನಾ ಕಡೆಗೆ ಮುಖ ಮಾಡುವುದರ ಹಿಂದಿನ ಶಕ್ತಿಯನ್ನು ನಾವು ಕಾಣಬಹುದು. ಅಷ್ಟರ ಮಟ್ಟಿಗೆ ಚೀನಾ ಗೆದ್ದಿಗೆ. ಭಾರತ ಸೋತಿದೆ. ನಾವು ಇದನ್ನು ಒಪ್ಪಿಕೊಳ್ಳದೆ, ಭಾರತದಲ್ಲಿ ಈಗ ಚುನಾವಣೆ ಪರ್ವ, ಹೀಗಾಗಿ ಎಲಾನ್ ಮಸ್ಕ್ ಜೂನ್ ತಿಂಗಳಲ್ಲಿ ಖಂಡಿತ ಭಾರತಕ್ಕೆ ಬರುತ್ತಾನೆ ಎನ್ನುವ ಆಶಾಭಾವ ತೋರಬಹುದು. ಆತ ಬರಲೂಬಹುದು. ಆತ ಬಂದಾಗ ಆತನನ್ನು ನಮಸ್ಕರಿಸಿ ಸ್ವಾಗತಿಸುವ ಮುನ್ನ ಭಾರತ ತನ್ನ ನಿಯಮಗಳನ್ನು ಗಟ್ಟಿ ಮಾಡಿಕೊಳ್ಳಬೇಕು. ವ್ಯವಸ್ಥೆ ಭಾರತಕ್ಕೆ ಲಾಭದಾಯಕವಾಗುವಂತೆ ಚರ್ಚಿಸಬೇಕು. ಎಲಾನ್ ಮಸ್ಕ್ ಭಾರತಕ್ಕೆ ಬರುತ್ತಿರುವದೇ ನಮ್ಮ ಪುಣ್ಯ ಎನ್ನುವಂತೆ ಪತ್ರಿಕೆಗಳು ಬರೆಯುವುದು ಬಿಡಬೇಕು. ಸರಕಾರ ಗಟ್ಟಿ ನಿಲುವು ತಳೆಯಬೇಕು.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

X
Open in App

Advertisement

X
Kannada Prabha
www.kannadaprabha.com