Indian spices: ಮಸಾಲೆ ಪದಾರ್ಥಗಳ ರಫ್ತು ಮಾರುಕಟ್ಟೆಗೆ ಮಾರಕವಾಗುತ್ತಿದೆ MRL; ಆರೋಗ್ಯಕ್ಕೂ ಅಪಾಯ ತಪ್ಪಿದ್ದಲ್ಲ! (ತೆರೆದ ಕಿಟಕಿ)

ಭಾರತದ ಮಸಾಲೆ ಪದಾರ್ಥಗಳ ಬ್ರಾಂಡಿಂಗ್ ವೈಭೋಗಕ್ಕೆ ಈಗ ಜಾಗತಿಕ ಮಾರುಕಟ್ಟೆಯಲ್ಲಿ ಗ್ರಹಣ ಹಿಡಿಯುವ ಲಕ್ಷಣಗಳು ಗೋಚರಿಸುತ್ತಿವೆ! ಭಾರತದ ಮಸಾಲೆ ಪದಾರ್ಥಗಳು ವಿಶ್ವಾಸಾರ್ಹತೆ ಕಳೆದುಕೊಳ್ಳುವ ಮಾರ್ಗದಲ್ಲಿವೆ. (ತೆರೆದ ಕಿಟಕಿ-2)
ಮಸಾಲೆ ಪದಾರ್ಥಗಳ ರಫ್ತು
ಮಸಾಲೆ ಪದಾರ್ಥಗಳ ರಫ್ತುonline desk

ಮಸಾಲೆ ಪದಾರ್ಥಗಳು..

ಅವೇನೂ ಜೀವ ಪೊರೆಯುವ ಸಂಗತಿಗಳಲ್ಲ. ಅಕ್ಕಿಯೋ, ಗೋದಿಯೋ, ರಾಗಿಯೋ ಇದ್ದಂತೆ ಮೂಲ ಅವಶ್ಯಕತೆ ಏನಲ್ಲ. ಆದರೂ ಚರಿತ್ರೆಯ ಪುಟಗಳಲ್ಲಿ ಇವುಗಳ ಘಾಟು ದೊಡ್ಡದು.

ಭಾರತದ ಪಾಲಿಗಂತೂ ಮಸಾಲೆ ಪದಾರ್ಥಗಳು ಕಾಲಕಾಲಕ್ಕೆ ಅದರ ಬದುಕಿನ ಗತಿಯನ್ನೇ ನಿರ್ಧರಿಸಿದ ಸಂಗತಿ. ರೋಮನ್ನರು ಭಾರತದ ಜತೆ ವ್ಯವಹಾರವೆಂದಕೂಡಲೇ ಹುರುಪುಗೊಳ್ಳುತ್ತಿದ್ದದ್ದು, ಅರಬ್ಬರು ಭಾರತದ ಬಗ್ಗೆ ಅದ್ಭುತ ಬೆರಗುಗಳನ್ನಿಟ್ಟುಕೊಂಡು ಹಡಗೇರಿ ಬಂದಿದ್ದು, ನಂತರ ಪೋರ್ಚುಗೀಸರು ಮತ್ತು ಬ್ರಿಟಿಷರು ಜಲಮಾರ್ಗ ಶೋಧಿಸಿಕೊಂಡು ಬಂದು ಇಲ್ಲಿ ವಸಾಹತುಗಳನ್ನು ಮಾಡಿಕೊಂಡದ್ದು…. ಇವೆಲ್ಲವೂ ಮಸಾಲೆ ವಹಿವಾಟಿನ ಬೆನ್ನು ಹತ್ತಿಕೊಂಡೇ.

ಮಸಾಲೆ ಪದಾರ್ಥಗಳ ರಫ್ತು

ಇವತ್ತಿನ ಜಾಗತಿಕ ಮಾರುಕಟ್ಟೆಯಲ್ಲೂ ಭಾರತದ ಮಸಾಲೆ ಪದಾರ್ಥಗಳ ರಫ್ತಿನ ಗತಿ ಏರುಮುಖದ್ದೇ. 2011-12ರ ವರ್ಷದಲ್ಲಿ 2038 ಮಿಲಿಯನ್ ಡಾಲರುಗಳಷ್ಟು ಮೌಲ್ಯದ ಮಸಾಲೆ ಪದಾರ್ಥ ಬಿಕರಿಯಾಗಿದ್ದರೆ, ಆ ಮೌಲ್ಯವು 2021-22ರಲ್ಲಿ 4102 ಮಿಲಿಯನ್ ಡಾಲರುಗಳಿಗೆ ಏರಿದ್ದಾಗಿ ಅಂಕಿಅಂಶಗಳು ಸಾರುತ್ತಿವೆ. ಮೆಣಸು, ಜೀರಿಗೆ, ಪುದೀನಾ ಉತ್ಪನ್ನಗಳು, ಅರಿಶಿನ ಇವೆಲ್ಲ ಭಾರತದಿಂದ ರಫ್ತಾಗುವ ಮಸಾಲೆ ಪದಾರ್ಥಗಳಲ್ಲಿ ಅಗ್ರಶ್ರೇಣಿಯಲ್ಲಿವೆ.

ಹೀಗೆಲ್ಲ ಇರುವ ಭಾರತದ ಮಸಾಲೆ ಪದಾರ್ಥಗಳ ಬ್ರಾಂಡಿಂಗ್ ವೈಭೋಗಕ್ಕೆ ಈಗ ಜಾಗತಿಕ ಮಾರುಕಟ್ಟೆಯಲ್ಲಿ ಗ್ರಹಣ ಹಿಡಿಯುವ ಲಕ್ಷಣಗಳು ಗೋಚರಿಸುತ್ತಿವೆ! ಭಾರತದ ಮಸಾಲೆ ಪದಾರ್ಥಗಳು ವಿಶ್ವಾಸಾರ್ಹತೆ ಕಳೆದುಕೊಳ್ಳುವ ಮಾರ್ಗದಲ್ಲಿವೆ. ಇದನ್ನು ತಿದ್ದಿಕೊಳ್ಳದೇ ಹೋದರೆ ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಮಸಾಲೆ ಪದಾರ್ಥದ ಕಥಾನಕ ಮತ್ತು ವಹಿವಾಟುಗಳೆರಡೂ ಮುಗ್ಗರಿಸಲಿವೆ. 

ಹಾಗಾದರೆ ಆಗಿರುವುದೇನು?

ಕೆಲ ತಿಂಗಳ ಹಿಂದೆ ಹಾಂಕಾಂಗಿನ ವಿಚಕ್ಷಣಾ ದಳದವರು ಹಲವು ರೆಸ್ಟಾರೆಂಟುಗಳನ್ನು ದಿಢೀರ್ ಪರಿಶೀಲನೆಗೆ ಒಳಪಡಿಸಿದಾಗ ಅವುಗಳ ಆಹಾರದಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿರುವ ಸಂಗತಿ ಬೆಳಕಿಗೆ ಬಂತು. ಆಹಾರಕ್ಕೆ ಅದು ಸೇರಿದ್ದೆಲ್ಲಿಂದ ಅಂತ ಪರಿಶೀಲಿಸಿದಾಗ ಕಟಕಟೆಯಲ್ಲಿ ನಿಂತವು ಭಾರತದ ಬ್ರಾಂಡುಗಳಾದ ಎಂಡಿಎಚ್ ಮತ್ತು ಎವರೆಸ್ಟ್. ಎಂಡಿಎಚ್ ನ ಮದ್ರಾಸ್ ಕರಿ ಪೌಡರ್, ಸಾಂಬಾರ್ ಮಸಾಲಾ ಮತ್ತು ಕರಿ ಪೌಡರ್ ಹಾಗೂ ಎವರೆಸ್ಟ್ ಬ್ರಾಂಡಿನ ಫಿಶ್ ಕರಿ ಮಸಾಲಾಗಳಲ್ಲಿ ಈ ಮಾರಕ ಅಂಶಗಳಿದ್ದವು. ತಕ್ಷಣಕ್ಕೆ ಈ ಕಂಪನಿಗಳ ಉತ್ಪನ್ನಗಳನ್ನೆಲ್ಲ ಹಿಂದಕ್ಕೆ ಪಡೆಯುವಂತೆ ಹಾಂಕಾಂಗ್ ಆದೇಶ ಮಾಡಿಬಿಟ್ಟಿತು. ಅದರ ಬೆನ್ನಲ್ಲೇ ಶುರುವಾದವು ಯುರೋಪಿನ ದೇಶಗಳಲ್ಲಿ ಭಾರತೀಯ ಮಸಾಲಾ ಉತ್ಪನ್ನಗಳ ತಪಾಸಣೆ. ಭಾರತದ ಕೆಂಪು ಮೆಣಸು, ಮೆಣಸಿನ ಕಾಳು ಸೇರಿದಂತೆ ಸುಮಾರು 60 ಬಗೆಯ ಉತ್ಪನ್ನಗಳಲ್ಲಿ ಹೀಗೊಂದು ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿದೆ. ಇದರ ಬೆನ್ನಲ್ಲೇ ಅಮೆರಿಕ ಮತ್ತು ಆಸ್ಟ್ರೇಲಿಯಗಳು ಸಹ ಭಾರತದ ಮಸಾಲಾ ಉತ್ಪನ್ನಗಳನ್ನು ತಪಾಸಣೆಗೆ ಒಳಪಡಿಸುತ್ತಿವೆ. ಹೀಗಾಗಿ ಇಡೀ ಜಾಗತಿಕ ಮಾರುಕಟ್ಟೆಯೇ ಭಾರತದ ಮಸಾಲಾ ಉತ್ಪನ್ನಗಳ ಬಗ್ಗೆ ಭಯ ಬಿದ್ದಿದೆ, ಕ್ರಮಕ್ಕೆ ಮುಂದಾಗಿದೆ.

ಮಸಾಲೆ ಪದಾರ್ಥಗಳ ರಫ್ತು
ಇಂಡೋನೇಷ್ಯ, ಥಾಯ್ಲ್ಯಾಂಡ್, ಮಲೇಷ್ಯ ಭವಿಷ್ಯದ AI ಹಬ್?: ಭಾರತ ಖುಷಿಪಡಬೇಕು ಏಕೆ ಗೊತ್ತೇ? (ತೆರೆದ ಕಿಟಕಿ)

ಇಂಥವೆಲ್ಲ ಆದಾಗ ನಾವು ಸುಲಭಕ್ಕೆ ಸಂಚಿನ ಸಿದ್ಧಾಂತಗಳು ಅರ್ಥಾತ್ ಕಾನ್ಸ್ಪಿರಸಿ ಥಿಯರಿಗಳನ್ನು ನೆಚ್ಚಿಕೊಂಡು ಸಮಾಧಾನಪಟ್ಟುಕೊಂಡು ಬಿಡುತ್ತೇವೆ. ‘ಪಾಶ್ಚಾತ್ಯರಿಗೆ ಭಾರತದ ಸಾಂಬಾರ ಪದಾರ್ಥಗಳು ಮತ್ತು ಆಯುರ್ವೇದದ ಮಾರುಕಟ್ಟೆ ಬೆಳೆಯುವುದು ಬೇಕಿಲ್ಲ. ಹೀಗಾಗಿ ಇಂಥವೆಲ್ಲ ಕಾರಣಗಳನ್ನು ಕೊಡುತ್ತಾರೆ’ ಎಂಬ ಧಾಟಿಯಲ್ಲಿ ಹಲವರು ಅಭಿಪ್ರಾಯ ಹೇಳಿಬಿಡುತ್ತಾರೆ. ಸರಿ, ಜಾಗತಿಕ ಪೈಪೋಟಿಯಲ್ಲಿ ಪಾಶ್ಚಾತ್ಯ ಜಗತ್ತು ಅಂಥದೊಂದು ಉದ್ದೇಶ ಇಟ್ಟುಕೊಂಡಿದೇ ಅಂತಲೇ ನಂಬಿದರೂ, ಇಲ್ಲಿರುವ ಪ್ರಶ್ನೆ - ನಮ್ಮ ಕಡೆಯಿಂದ ತಪ್ಪಾಗಿರುವುದು ಹೌದೋ, ಅಲ್ಲವೋ ಅನ್ನೋದು. ಏಕೆಂದರೆ ಮಸಾಲಾ ಪದಾರ್ಥಗಳನ್ನು ಕೇವಲ ರಫ್ತು ಮಾಡುವುದಿಲ್ಲ, ನಾವೂ ಬಳಸುತ್ತೇವೆ ಹಾಗೂ ಆಹಾರಗಳಲ್ಲಿ ಇಂಥ ಉತ್ಪನ್ನಗಳು ಹಾಸುಹೊಕ್ಕಾಗಿವೆ. ಹೀಗಾಗಿ ನೈಜ ಸಮಸ್ಯೆ ಏನೆಂಬುದನ್ನು ಗಮನಿಸಲೇಬೇಕು. 

ಆಕ್ಷೇಪಕ್ಕೆ ಒಳಗಾಗಿರುವ ಭಾರತದ ಮಸಾಲಾ ಉತ್ಪನ್ನಗಳಲ್ಲಿ ಹೆಚ್ಚಾಗಿ ಕಂಡುಬಂದಿರುವುದು ಎಥುಲೀನ್ ಆಕ್ಸೈಡ್ (ethylene oxide). ಇದನ್ನು ತುಂಬ ಚಿಕ್ಕ ಪ್ರಮಾಣದಲ್ಲಿ ವೈದ್ಯಕೀಯ ಸಲಕರಣೆ ಶುದ್ಧಮಾಡಲು ಬಳಸುತ್ತಾರೆ. ಹಾಗೆಯೇ ಕ್ರಿಮಿನಾಶಕ ಉತ್ಪನ್ನಗಳಲ್ಲಿ ಇದರ ಅಂಶವಿರುತ್ತದೆ. ಇದು ಮೈಕ್ರೊಬ್ ಬೆಳವಣಿಗೆಯನ್ನು ನಿಯಂತ್ರಿಸುತ್ತಾದ್ದರಿಂದ ಆಹಾರೋತ್ಪನ್ನ ಉತ್ಪಾದಕರು ತಮ್ಮ ಉತ್ಪನ್ನಗಳ ಬಾಳಿಕೆಗಾಗಿ ಇದನ್ನು ಉಪಯೋಗಿಸುತ್ತಾರೆ. ಆದರೆ ಈ ಪದಾರ್ಥ ಮಿತಿ ಮೀರಿದೊಡನೆ ಮಾನವನ ದೇಹಕ್ಕೆ ಹಲವು ಘಾತಕ ಪರಿಣಾಮಗಳನ್ನು ಉಂಟುಮಾಡುತ್ತದೆ. ಕ್ಯಾನ್ಸರ್ ರೋಗಕ್ಕೆ ಕಾರಣವಾಗುವುದು ಒಂದಾದರೆ, ಗರ್ಭಪಾತ, ನರಕ್ಕೆ ಆಘಾತ, ಪಾರ್ಶ್ವವಾಯು, ವಂಶವಾಹಿಯಲ್ಲಿ ವಿಕಾರತೆ ಹೀಗೆ ಸಾಲುಸಾಲು ಸಮಸ್ಯೆಗಳನ್ನು ತಂದೊಡ್ಡಬಲ್ಲದು. 

MRL- Minimum Residual Limit

ಎಂಡಿಎಚ್ (MDH) ಹಾಗೂ ಎವರೆಸ್ಟ್ (Everest) ಕಂಪನಿಗಳು ತಮ್ಮ ಕಡೆಯಿಂದ ಏನೂ ತಪ್ಪಾಗಿಲ್ಲ ಎಂದೇ ವಾದಿಸುತ್ತಿವೆ. ಅದೇನೇ ಇದ್ದರೂ ಭಾರತದ ಮಸಾಲೆ ಪದಾರ್ಥಗಳಲ್ಲಿ (Indian spices) ಎರಡು ಹಂತಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ನುಗ್ಗಿರುವುದರ ಸಾಧ್ಯತೆ ಸ್ಪಷ್ಟವಾಗುತ್ತದೆ. ಆಹಾರೋತ್ಪನ್ನ ಸಂಸ್ಕರಣೆ ಹಂತದಲ್ಲಿ ಎಂಬುದು ಒಂದು ಸಾಧ್ಯತೆ. ಇನ್ನೊಂದು, ಅತಿಯಾದ ಕ್ರಿಮಿನಾಶಕಗಳ ಬಳಕೆಯಿಂದ ಸಹಜವಾಗಿಯೇ ಈ ಎಲ್ಲ ಕೃಷಿ ಬೆಳೆಗಳಲ್ಲೇ ಅದು ನುಗ್ಗಿರುತ್ತದೆ. ಭಾರತದ ವಾಸ್ತವ ಏನೆಂದರೆ, ಯಾವ ರಾಜಕೀಯ ಪಕ್ಷಗಳೂ ರೈತರನ್ನು ಸಿಟ್ಟುಗೊಳಿಸುವಂತಿಲ್ಲ. ರೈತ ಮಾಡಿದ್ದು ಯಾವುದನ್ನೂ ತಪ್ಪು ಅಂತ ಹೇಳುವಂತೆಯೇ ಇಲ್ಲ. ಏಕೆಂದರೆ, ಅಲ್ಲಿ ಅನ್ನದಾತ ಎಂಬ ಭಾವನಾತ್ಮಕ ಅಂಶವಿದೆ, ಮತಬ್ಯಾಂಕಿನ ಆಯಾಮವಿದೆ. 

ಭಾರತದಲ್ಲಿ ಹೀಗೆ ಆಹಾರೋತ್ಪನ್ನಗಳಿಗೆ ಸಂಬಂಧಿಸಿ ನಿಗಾ ಇಡುವ ನಿಯಂತ್ರಕ ಸಂಸ್ಥೆ ಎಂದರೆ ‘ಫುಡ್ ಸೇಫ್ಟಿ ಸ್ಟಾಂಡರ್ಡ್ ಅಥಾರಿಟಿ ಆಫ್ ಇಂಡಿಯಾ’ (FSSAI). ಮಸಾಲೆ ಪೊಟ್ಟಣ, ಚಿಪ್ಸ್ ಪ್ಯಾಕೆಟ್ಟು ಸೇರಿದಂತೆ ಎಲ್ಲ ಆಹಾರೋತ್ಪನ್ನ ಪ್ಯಾಕೆಟ್ಟುಗಳ ಹಿಂದೆ ಇವರ ಮುದ್ರೆಯನ್ನು ನೀವು ಕಾಣಬಹುದು. ಆಹಾರೋತ್ಪನ್ನಗಳಿಗೆ ಬಳಸುವ ಬೆಳೆಗಳಲ್ಲಿ ಕ್ರಿಮಿನಾಶಕದ ಉಳಿಕೆಯ ಅಂಶ (MRL- minimum residual limit) ಎಷ್ಟಿರಬಹುದು ಎಂಬುದನ್ನು ಸಹ ಇದೇ ಸಂಸ್ಥೆ ನಿರ್ಧರಿಸುತ್ತದೆ. ಏಪ್ರಿಲ್ 8ಕ್ಕೆ FSSAI ಈ ಮಿತಿಯನ್ನು ನವೀಕರಿಸಿತು. ಮೊದಲಿಗಿದ್ದ ಮಿತಿ ಪ್ರತಿ ಕಿಲೊಗ್ರಾಮಿಗೆ 0.01 ಮಿಲಿಗ್ರಾಂ ‘ವಿಷ ಉಳಿಕೆ’ ಸಮ್ಮತ. ಈಗ ಅದನ್ನು ಕಿಲೊಗ್ರಾಮಿಗೆ 0.1 ಮಿಲಿಗ್ರಾಂ ಮಿತಿಗೆ ಏರಿಸಲಾಗಿದೆ. ಓದಿಕೊಳ್ಳುವಾಗ ಇದೇನೋ ಸಣ್ಣ ಬದಲಾವಣೆ ಎನಿಸಬಹುದು. ಆದರೆ, ಪಾರ್ಶ್ವವಾಯುವಿನಿಂದ ಹಿಡಿದು ಕ್ಯಾನ್ಸರ್ ವರೆಗೆ ಹಲವು ಆಘಾತಗಳನ್ನು ತರಬಲ್ಲ ಪದಾರ್ಥವೊಂದಕ್ಕೆ ಇಂಥ ‘ರಿಯಾಯತಿ’ ಬೇಕೇ? ಇದನ್ನು ‘ರೈತಸ್ನೇಹಿ’ ನಡೆ ಎಂದು ಬೆನ್ನುಚಪ್ಪರಿಸಿಕೊಳ್ಳಲಾದೀತೇ?

ನಿಜ. ಪಾಶ್ಚಾತ್ಯರಿಗೆ ಜಾಗತಿಕ ಮಾರುಕಟ್ಟೆ ವಿಷಯದಲ್ಲಿ ಇಬ್ಬಗೆ ನೀತಿಗಳಿವೆ, ಅದು ಆಹಾರೋದ್ಯಮಕ್ಕೂ ಅನ್ವಯಿಸುತ್ತದೆ. ಉದಾಹರಣೆಗೆ, ನೆಸ್ಲೆ ಕಂಪನಿ ತಾನು ಅಮೆರಿಕ, ಇಂಗ್ಲೆಂಡ್, ಯುರೋಪುಗಳಲ್ಲಿ ಮಾರುವ ಶಿಶು ಆಹಾರವೊಂದನ್ನು ಸಕ್ಕರೆಮುಕ್ತವಾಗಿಸಿ, ಅದೇ ಉತ್ಪನ್ನವನ್ನು ಏಷ್ಯ, ಆಫ್ರಿಕ ಮತ್ತು ಲ್ಯಾಟಿನ್ ಅಮೆರಿಕಗಳಲ್ಲಿ ಮಾರುವಾಗ ಅದರಲ್ಲಿ ಅತಿಯಾಗಿ ಸಕ್ಕರೆ ಬಳಸುತ್ತಿದೆ ಎಂದು ಇತ್ತೀಚಿನ ಅಧ್ಯಯನ ವರದಿ ಸಾರಿದೆ. ಇಂಥವಕ್ಕೆ ಇಲ್ಲಿನ ನಿಯಂತ್ರಕರು ತಕ್ಕ ಕ್ರಮ ಕೈಗೊಳ್ಳಬೇಕೇ ಹೊರತು, ಪಾಶ್ಚಾತ್ಯರು ನಮ್ಮ ಆರೋಗ್ಯ ಕೆಡಿಸುತ್ತಿದ್ದಾರಾದ್ದರಿಂದ ನಾವೂ ನಮ್ಮ ಆಹಾರೋತ್ಪನ್ನಗಳಲ್ಲಿ ವಿಷ ಸೇರಿಸುವುದಕ್ಕೆ ಅಡ್ಡಿ ಇಲ್ಲ ಎಂಬ ವಾದಕ್ಕೆ ಇಳಿಯಬಾರದು. ಏಕೆಂದರೆ, ನೆರೆಮನೆಯನ್ನು ಸುಟ್ಟ ಬೆಂಕಿ ನಮ್ಮನ್ನೂ ಬಿಡುವುದಿಲ್ಲ. 

ವಿಷಕಾರಕ ವಸ್ತುಗಳು ಮಸಾಲಾ ಪದಾರ್ಥಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಜಾಗತಿಕ ಮಾರುಕಟ್ಟೆಯಲ್ಲಿ ಕೇವಲ ಆ ವಿಭಾಗಕ್ಕೆ ಮಾತ್ರವೇ ಹೊಡೆತ ಕೊಡುವುದಿಲ್ಲ. ಇವತ್ತು ಭಾರತವು ಸಂಸ್ಕರಿತ ಆಹಾರ ಮತ್ತು ಆಹಾರೋದ್ಯಮದಲ್ಲಿ ಜಾಗತಿಕ ವ್ಯಾಪಾರದ ದೊಡ್ಡ ಪಾಲು ಪಡೆಯುವುದಕ್ಕೆ ಹಲವು ಯೋಜನೆಗಳನ್ನು ಮಾಡುತ್ತಿದೆ. ಉದಾಹರಣೆಗೆ, ಕಡಿಮೆ ನೀರು ಬಳಸಿ ಬೆಳೆಯುವ ಸಿರಿಧಾನ್ಯಗಳನ್ನು ವಿದೇಶಕ್ಕೆ, ವಿಶೇಷವಾಗಿ ಗಲ್ಫ್ ದೇಶಗಳಿಗೆ, ರಫ್ತು ಮಾಡುವ ವಿಚಾರದಲ್ಲಿ ವರ್ಷದಿಂದ ವರ್ಷಕ್ಕೆ ಪ್ರಗತಿ ಆಗುತ್ತಿದೆ. 2021-22ರಲ್ಲಿ 26.97 ಮಿಲಿಯನ್ ಡಾಲರುಗಳ ಮೌಲ್ಯದ ಸಿರಿಧಾನ್ಯ ರಫ್ತು ಮಾಡಿದ್ದ ಭಾರತವು 2022-23ರ ಸಾಲಿನಲ್ಲಿ ಏಪ್ರಿಲ್ ನಿಂದ ನವೆಂಬರ್ ಅವಧಿಯಲ್ಲೇ 46 ಮಿಲಿಯನ್ ಡಾಲರುಗಳ ಮೌಲ್ಯದ ಸಿರಿಧಾನ್ಯ ರಫ್ತು ಮಾಡಿತ್ತು. ಗಲ್ಫ್ ದೇಶಗಳಲ್ಲಿ ಸಕ್ರಿಯವಾಗಿರುವ ಲುಲು ವಾಣಿಜ್ಯ ಸಂಕೀರ್ಣದೊಂದಿಗೆ ಫೆಬ್ರವರಿ 2023ರಲ್ಲಿ ಒಪ್ಪಂದ ಮಾಡಿಕೊಂಡಿರುವ ಭಾರತವು ಅವರ ಮೂಲಕ ಸಿರಿಧಾನ್ಯಗಳ ಉತ್ಪನ್ನಗಳ ಮಾರುಕಟ್ಟೆ ವಿಸ್ತಾರಕ್ಕೆ ಕೈಹಾಕಿದೆ. ಈಗ ಮಸಾಲಾ ಪದಾರ್ಥಗಳ ವಿಚಾರದಲ್ಲಿ ತೆರೆದುಕೊಂಡಿರುವ ನಕಾರಾತ್ಮಕ ವಿದ್ಯಮಾನವು ಕ್ರಮೇಣ ಇಂಥ ಪ್ರಯತ್ನಗಳ ಮೇಲೂ ಸಂಶಯದ ಪ್ರಹಾರ ಮಾಡುತ್ತದೆ. ಭಾರತವು ಬೆಳೆಯುವ ಕೃಷಿ ಉತ್ಪನ್ನದಲ್ಲಿ ಕ್ರಿಮಿನಾಶಕದ ಉಳಿಕೆ ಹೆಚ್ಚೆಂಬುದು ಒಂದು ಕಡೆ ಸಿದ್ಧವಾದರೆ ಅದು ಎಲ್ಲ ಆಹಾರೋತ್ಪನ್ನಗಳ ವಿಶ್ವಾಸಾರ್ಹತೆಯನ್ನು ಕಸಿದುಬಿಡಬಲ್ಲದು. 

ಹೀಗಾಗಿ, ಉಳಿದ ಸಮಯದಲ್ಲಿ ನಾವು ರೈತರಿಗೆ ಅನ್ನದಾತ, ನೇಗಿಲ ಯೋಗಿ ಎಂದೆಲ್ಲ ಖಂಡಿತ ಹೊಗಳೋಣ ಮತ್ತು ಗೌರವಿಸೋಣ. ಆದರೆ, ಉತ್ಪಾದನೆಯ ನೆಪ ಹೇಳಿಕೊಂಡು ತಿನ್ನುವ ತುತ್ತಿನಲ್ಲಿ ವಿಷ ಹೆಚ್ಚಿಸುವುದು ನೀವು ಮಾನವತೆಗೆ ಮಾಡುತ್ತಿರುವ ದ್ರೋಹ ಅಂತ ನಾವೊಂದು ಸಮಾಜವಾಗಿ ಮುಲಾಜಿಲ್ಲದೇ ಹೇಳುವ ಅಭ್ಯಾಸ ಬೆಳೆಸಿಕೊಳ್ಳೋಣ. ಆಗ ಇದನ್ನು ತಡೆಯಲು ಬೇಕಾದ ಸರ್ಕಾರಿ ನಿಯಂತ್ರಣಗಳೆಲ್ಲ ತಾನಾಗಿ ಶುರುವಾಗುತ್ತವೆ.

-ಚೈತನ್ಯ ಹೆಗಡೆ

cchegde@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com