ಸ್ನೇಹಿತರೊಬ್ಬರ ಮಗ ವಿದೇಶಕ್ಕೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹೋಗುವ ಇರಾದೆ ಇಟ್ಟು ಕೊಂಡಿದ್ದಾನೆ. ಎಜುಕೇಷನ್ ಲೋನ್ ಮಾಡಬೇಕು ಎನ್ನುವುದು ಆತನ ಆಲೋಚನೆ. ಹೀಗಾಗಿ ಹೆಚ್ಚಿನ ಮಾಹಿತಿ ಕೇಳಿಕೊಂಡು ಕರೆ ಮಾಡಿದ್ದ. ಆತನಿಗಾಗಿ ಕಲೆ ಹಾಕಿದ ಮಾಹಿತಿ ಇಲ್ಲಿ ಅಕ್ಷರ ರೂಪದಲ್ಲಿ ನೀಡಿದ್ದೇನೆ. ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಇದರಿಂದ ಒಂದಷ್ಟು ಅನುಕೂಲವಾಗಬಹುದು. ಮಾಹಿತಿಯನ್ನು ಗೆಳೆಯರಾದ ಶ್ರೀ ಕನಕರಾಜು ಅವರೊಂದಿಗೆ ಮಾತನಾಡಿ ತೆಗೆದುಕೊಂಡೆ.
ಕನಕರಾಜು ಅವರು ಲೀಡಿಂಗ್ ಬ್ಯಾಂಕ್ನ ಉದ್ಯೋಗಿಯಾಗಿದ್ದಾರೆ. ಕೆಳಗೆ ನೀಡಿರುವ ಎಲ್ಲಾ ಮಾಹಿತಿ ಬಡ್ಡಿ ದರ ಎಲ್ಲವೂ ಏಪ್ರಿಲ್ 2024 ರಿಂದ ಜಾರಿಗೆ ಬಂದಿವೆ. ಇವುಗಳ ಬಗೆಗಿನ ಮಾಹಿತಿ ಕಾಲಕಾಲಕ್ಕೆ ಬದಲಾಗುತ್ತಿರುತ್ತದೆ. ಹೀಗಾಗಿ ಈ ಮಾಹಿತಿಯನ್ನು ಯಾವಾಗ ಓದುತ್ತಿದ್ದೀರಿ ಎನ್ನುವುದರ ಆಧಾರದ ಮೇಲೆ ಇವುಗಳಲ್ಲಿ ಬದಲಾವಣೆ ಆಗಿರುವ ಸಾಧ್ಯತೆ ಇರುತ್ತದೆ. ಓದುಗರು ಅದನ್ನು ಗಮನಿಸಬೇಕು.
ಹೆಚ್ಚಿನ ವ್ಯಾಸಂಗಕ್ಕೆ ಎಂದು ವಿದೇಶಕ್ಕೆ ಹೋಗಲು ಬಯಸುವ ವಿದ್ಯಾರ್ಥಿಗಳಿಗೆ ಸಾಲದ ರೂಪದಲ್ಲಿ ನೀಡುವ ಹಣ ಸಹಾಯವನ್ನು Education loan ಎನ್ನಲಾಗುತ್ತದೆ. ಸಾಮಾನ್ಯವಾಗಿ ಇದು ಭಾರತದ ಎಲ್ಲಾ ಪ್ರಮುಖ ಬ್ಯಾಂಕುಗಳಲ್ಲಿ ಈ ರೀತಿಯ ಸೇವೆ ಲಭ್ಯವಿದೆ. ಈ ರೀತಿಯ ಸಾಲದ ಮೇಲಿನ ಬಡ್ಡಿ 8.1 ಪ್ರತಿಶತದಿಂದ ಶುರುವಾಗಿ 16 ಪ್ರತಿಶತದ ವೆರೆಗೂ ಹೋಗುತ್ತದೆ.
ವಿದ್ಯಾಭ್ಯಾಸ ಮುಗಿದ ನಂತರ ಆರು ತಿಂಗಳಿನಿಂದ, ಹನ್ನೆರೆಡು ತಿಂಗಳ ವರೆಗೆ ಕೆಲಸ ಹುಡುಕಿಕೊಳ್ಳಲು ಕೂಡ ಸಮಯ ನೀಡಲಾಗುತ್ತದೆ. ಸಾಲ ಮರು ವಾಪಸಾತಿ ಶುರುವಾಗುವುದು ಕೆಲಸ ಸಿಕ್ಕ ನಂತರ ಅಥವಾ ಕೋರ್ಸ್ ಮುಗಿದ 6/12 ತಿಂಗಳ ನಂತರ, ಇದರಲ್ಲಿ ಯಾವುದು ಮೊದಲಾಗುತ್ತದೆ ಅದು ಲಾಗೂ ಆಗುತ್ತದೆ. ಅಂದರೆ ಓದು ಮುಗಿದ ನಂತರ ಕೇವಲ ಎರಡು ತಿಂಗಳಲ್ಲಿ ಕೆಲಸ ಸಿಕ್ಕರೆ ಸಾಲ ಮರುಪಾವತಿ ಕೆಲಸ ಸಿಕ್ಕ ತಿಂಗಳಿಂದ ಶುರುವಾಗುತ್ತದೆ. ಕೆಲಸ ಸಿಗದೇ ಹೋದರೂ ಕೂಡ ಗರಿಷ್ಟ 12 ತಿಂಗಳ ಕಾಲಾವಕಾಶವಿರುತ್ತದೆ. ಇದು ಮುಗಿದ ನಂತರ ಸಾಲ ವಾಪಸಾತಿ ಪ್ರಕ್ರಿಯೆ ಶುರುವಾಗುತ್ತದೆ.
ಪಿಯುಸಿ ನಂತರ ಪದವಿ ಶಿಕ್ಷಣ ಪಡೆಯಲು
ಪದವಿ ನಂತರ ಮಾಸ್ಟರ್ಸ್ ಪದವಿ ಪಡೆಯಲು
ವೃತ್ತಿ ನಿಪುಣತೆ ಹೆಚ್ಚಿಸಿಕೊಳ್ಳಲು ಪಡೆದುಕೊಳ್ಳುವ ಸರ್ಟಿಫಿಕೇಷನ್ ಕೋರ್ಸ್ , ಟ್ರೇನಿಂಗ್ ಸರ್ಟಿಫಿಕೇಷನ್ ಇತ್ಯಾದಿ .
ಪೋಸ್ಟ್ ಗ್ರ್ಯಾಜುಯೆಟ್ ಡಿಪ್ಲೋಮ
ವೊಕೇಷನಲ್ ಟ್ರೈನಿಂಗ್ ಕೋರ್ಸ್ಗಳು
ಡಾಕ್ಟೋರಲ್ ಪ್ರೋಗ್ರಾಮ್ಸ್
ನರ್ಸರಿ ಇಂದ ಉನ್ನತ ವ್ಯಾಸಂಗದ ವರೆಗೆ ಎಲ್ಲಾ ರೀತಿಯ ಶೈಕ್ಷಣಿಕ ಸಾಲವನ್ನು ಪೋಷಕರು ಮಕ್ಕಳ ಪರವಾಗಿ ಕೂಡ ಪಡೆಯಬಹುದು.
ಸಾಲದ ಮೊತ್ತ ಒಂದು ಕೋಟಿ ರೂಪಾಯಿ ವರೆಗೆ ಕೂಡ ವಿಸ್ತರಿಸಲಾಗುತ್ತದೆ. ಜೊತೆಗೆ ಸಾಲವನ್ನು ಮರು ಪಾವತಿ ಮಾಡಲು ನೀಡುವ ಅವಧಿ ಕೂಡ 15ರಿಂದ 20 ವರ್ಷದ ವರೆಗೂ ನೀಡಲಾಗುತ್ತದೆ. ಹೀಗೆ ಪಡೆದ ಸಾಲದ ಮೊತ್ತವನ್ನು ಕೆಳಗಿನ ಖರ್ಚುಗಳಿಗೆ ಬಳಸಿಕೊಳ್ಳಬಹುದು. ಬೇರೆ ರೀತಿಯ ಖರ್ಚಿಗೆ ಅನುಮತಿ ಇರುವುದಿಲ್ಲ.
ಟ್ಯೂಷನ್ ಫೀಸ್
ಹಾಸ್ಟೆಲ್ ಫೀಸ್ , ಊಟ , ತಿಂಡಿ , ಉಳಿದುಕೊಳ್ಳಲು ನೀಡುವ ಸೌಲಭ್ಯ ಎಲ್ಲವೂ ಸೇರಿಕೊಳ್ಳುತ್ತದೆ.
ವಿದ್ಯಾರ್ಥಿ ವಿದೇಶದಲ್ಲಿ ಇದ್ದಾಗ ಅಲ್ಲಿಗೆ ಹೋಗಿ ಬರಲು ಬೇಕಾಗುವ ವಿಮಾನದ ಖರ್ಚು. ಭಾರತದ ಇತರ ಭಾಗದಲ್ಲಿದ್ದರೆ ಪ್ರಯಾಣದ ಖರ್ಚು.
ಆರೋಗ್ಯ ಮತ್ತು ಜೀವ ವಿಮೆ ಖರ್ಚು
ವಿದ್ಯಾಭ್ಯಾಸಕ್ಕೆ ಬೇಕಾಗುವ ಪೆನ್ನು , ಪುಸ್ತಕ ಮತ್ತಿತರೇ ಪರಿಕರಗಳನ್ನು ಕೊಳ್ಳಲು ಬೇಕಾಗುವ ಹಣ.
ಲ್ಯಾಬೊರೇಟರಿ, ಲೈಬ್ರರಿ ಖರ್ಚುಗಳು
ಕೋರ್ಸ್ ಮುಗಿಸಲು ಅವಶ್ಯಕವಾಗುವ ಲ್ಯಾಪ್ ಟ್ಯಾಪ್ , ಕಂಪ್ಯೂಟರ್ , ಮೊಬೈಲ್ ಇನ್ನಿತರೇ ಪರಿಕರಗಳು.
ಶಾಲೆ ಅಥವಾ ಕಾಲೇಜಿನಲ್ಲಿ ಕೇಳುವ ಯಾವುದೇ ರೀತಿಯ ವಾಪಸ್ಸು ನೀಡುವ ಸೆಕ್ಯುರಿಟಿ ಡೆಪಾಸಿಟ್ ಮೊತ್ತ.
ಪ್ರವೇಶ ಪಡೆದ ಕೋರ್ಸ್ ಮುಗಿಸಲು ಬೇಕಾಗುವ ಇನ್ನ್ಯಾವುದೇ ರೀತಿಯ ಪರಿಕರ ಅಥವಾ ಖರ್ಚು ಕೂಡ ಈ ಹಣದಲ್ಲಿ ಮಾಡಬಹುದು.
ಸಾಲದ ಮೇಲೆ ಕಟ್ಟುವ ಬಡ್ಡಿಯನ್ನು ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವಾಗ ಸೆಕ್ಷನ್ 80E ಅಡಿಯಲ್ಲಿ 8 ವರ್ಷಗಳ ಕಾಲ ವಿನಾಯತಿ ಕೂಡ ಪಡೆಯಬಹುದು. ಆದರೆ ಈ ಸೌಲಭ್ಯ ಉನ್ನತ ವ್ಯಾಸಂಗಕ್ಕೆ ಎಂದು ಸಾಲ ಮಾಡಿದವರಿಗೆ ಮಾತ್ರ ಸಿಗುತ್ತದೆ. ಕೆಲವೊಂದು ಬ್ಯಾಂಕುಗಳಲ್ಲಿ ವಿದ್ಯಾರ್ಥಿನಿಯರಿಗೆ ವಿಶೇಷ ರಿಯಾಯತಿ ಕೂಡ ಲಭ್ಯವಿದೆ. ಆದರೆ ಬಡ್ಡಿ ದರದಲ್ಲಿ ಒಂದಂಶ ಕಡಿಮೆ ಮಾಡುವುದು ಇತ್ಯಾದಿ.
ಶಾಲೆ /ಕಾಲೇಜಿನಲ್ಲಿ ಪ್ರವೇಶಾತಿ ನೀಡಿರುವ ಪತ್ರ .
ಕಳೆದ ಶೈಕ್ಷಣಿಕ ವರ್ಷದ ಮಾರ್ಕ್ಸ್ ಕಾರ್ಡ್
ವಯಸ್ಸು , ಅಡ್ರೆಸ್ , ಮತ್ತು ಗುರುತನ್ನು ಸಾಬೀತು ಪಡಿಸುವ ಪತ್ರಗಳು
ಸಿಗ್ನೇಚರ್ ಪ್ರೂಫ್
ಕೆಲಸ ಮಾಡಿ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹೊರಟಿದ್ದರೆ -ಸ್ಯಾಲರಿ ಸ್ಲಿಪ್
ಕಳೆದ ಮೂರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
ಇನ್ಕಮ್ ಟ್ಯಾಕ್ಸ್ ರಿಟರ್ನ್
ಲೋನ್ ಅಪ್ಲಿಕೇಶನ್ ಫಾರಂ
ಫೋಟೋ
ವೀಸಾ ಮಂಜೂರಾತಿ ಶೀಟ್.
ಭಾರತದ ವಿವಿಧ ಬ್ಯಾಂಕುಗಳಲ್ಲಿ ಎಜುಕೇಶನ್ ಲೋನ್ ಮೇಲಿನ ಬಡ್ಡಿದರ ಮತ್ತು ಅವುಗಳು ಹಾಕುವ ಖರ್ಚಿನ ಲೆಕ್ಕಾಚಾರ ಕೆಳಗಿನ ಬಾಕ್ಸ್ನಲ್ಲಿ ಕಾಣಬಹುದು. ಇದು ಏಪ್ರಿಲ್ 1, 2024ರ ಮಾಹಿತಿ ಆಗಿರುತ್ತದೆ.
ಹೋಗುವ ಮುನ್ನ: ಈ ವೇಳೆಗೆ ಸಹಜವಾಗೇ ಒಂದಷ್ಟು ಪ್ರಶ್ನೆ ಮನಸ್ಸಿನಲ್ಲಿ ಎದ್ದಿರುತ್ತದೆ. ಈ ಸಾಲ ಸುಲಭವಾಗಿ ಸಿಗುತ್ತದೆಯೇ ? ಈ ಸಾಲವನ್ನು ಮಾಡಬಹುದೆ ? ಎಜುಕೇಶನ್ ಲೋನ್ ಒಂದು ವರದಾನ. ನಿಜಕ್ಕೂ ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕು ಎನ್ನುವ ಹಂಬಲವಿರುವ ಬಡ ವಿದ್ಯಾರ್ಥಿಗಳಿಗೆ ಇದು ಆಶಾಕಿರಣ. ಈ ರೀತಿಯ ಸಾಲವನ್ನು ಭಾರತದಲ್ಲಿ ಓದಲು ಅಥವಾ ವಿದೇಶದಲ್ಲಿ ಓದಲು ಕೂಡ ಪಡೆದುಕೊಳ್ಳಬಹುದು.
ಸಾಮಾನ್ಯವಾಗಿ ಈ ಸಾಲವನ್ನು ಹೆಚ್ಚಿನ ಕಿರಿಕಿರಿ ಇಲ್ಲದೆ ನೀಡಲಾಗುತ್ತದೆ. ಸಾಲವನ್ನು ವಿದ್ಯಾರ್ಥಿ ಪಡೆಯಬಹುದು , ಕೆಲವೊಮ್ಮೆ ವಿದ್ಯಾರ್ಥಿಯ ಪರವಾಗಿ ಪೋಷಕರು ಪಡೆಯಬಹುದು. ಅಥವಾ ವಿದ್ಯಾರ್ಥಿಗೆ ಬೇರೆ ಯಾರಾದರೂ ಗ್ಯಾರಂಟಿ ಕೂಡ ಹಾಕಬಹುದು.ಕೆಲವು ಬಾರಿ ಹಣದ ಮೊತ್ತ ಬಹಳವಿದ್ದಾಗ ಪೋಷಕರ ಬಳಿ ಕೋಲಾಟರಲ್ ಆಗಿ ಯಾವುದಾದರೂ ಆಸ್ತಿ ಕೇಳುವ ಸಾಧ್ಯತೆಯಿದೆ.
ಆದರೆ ಬಹುಪಾಲು ವಿದ್ಯಾರ್ಥಿಯ ಅಕ್ಯಾಡೆಮಿಕ್ಸ್ ಮತ್ತು ಮುಂದಿನ ವಿದ್ಯಾಭ್ಯಾಸಕ್ಕೆ ದಾಖಲಾದ ಪ್ರವೇಶ ಪತ್ರದ ಜೊತೆಗೆ ಪೋಷಕರ ಗ್ಯಾರಂಟಿ ಸಾಕಾಗುತ್ತದೆ. ಮುಕ್ಕಾಲು ಪಾಲು ಬ್ಯಾಂಕುಗಳು ವಿದ್ಯಾರ್ಥಿಗಳಿಗೆ , ಶಿಕ್ಷಣಕ್ಕೆ ನೀಡುವ ಸಾಲವಾಗಿರುವ ಕಾರಣ ಹೆಚ್ಚು ಕಿರಿಕಿರಿ ಇರುವುದಿಲ್ಲ. ಅವಶ್ಯಕತೆ ಇದ್ದು , ಉನ್ನತ ವಿದ್ಯಾಭ್ಯಾಸ ಮಾಡುವ ಹಂಬಲ ಇರುವವರು ಖಂಡಿತ ಈ ಸೌಲಭ್ಯವನ್ನು ಬಳಸಿಕೊಳ್ಳಬೇಕು. ಭವಿಷ್ಯದ ವಿದ್ಯಾರ್ಥಿಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಸಾಲದ ಮರುಪಾವತಿ ಕೂಡ ಶಿಸ್ತಾಗಿ ಮಾಡಬೇಕು.
Advertisement