ಇತ್ತೀಚೆಗಷ್ಟೇ ದಸರಾ ಮತ್ತು ದೀಪಾವಳಿ ಹಬ್ಬಗಳು ಮುಗಿದಿವೆ. ಹಬ್ಬಗಳು ಬಂದರೆ ಸಾಕು ಎಲ್ಲರ ಮನೆಯಲ್ಲಿಯೂ ಸಿಹಿ ಅಡುಗೆ, ತಿಂಡಿತಿನಿಸುಗಳ ತಯಾರಿ ಮತ್ತು ಸೇವನೆ ಜೋರಾಗಿಯೇ ಇರುತ್ತದೆ. ಅದರಲ್ಲಿಯೂ ದೀಪಾವಳಿ ಎಂದರೆ ಕೇಳಬೇಕೇ? ಪಾಯಸ, ಕರಿಗಡುಬು, ಜಾಮೂನು ಹೀಗೆ ಹಲವಾರು ಸಿಹಿ ಪದಾರ್ಥಗಳನ್ನು ನಾವೆಲ್ಲರೂ ಸೇವಿಸಿದ್ದೇವೆ. ಜೊತೆಗೆ ಆಫೀಸಿನವರು ಲಕ್ಷ್ಮೀ ಪೂಜೆ ಮಾಡಿ ಕೊಡುವ ಕಸ್ಟಮರಿ ಸ್ವೀಟ್ ಬಾಕ್ಸಿನ ಬಗೆಬಗೆಯ ಸ್ವೀಟುಗಳು ನಮ್ಮ ಬಾಯಿರುಚಿ ತಣಿಸಿ ಹೊಟ್ಟೆ ಸೇರಿವೆ.
ಇತ್ತೀಚೆಗಷ್ಟೇ ದಸರಾ ಮತ್ತು ದೀಪಾವಳಿ ಹಬ್ಬಗಳು ಮುಗಿದಿವೆ. ಹಬ್ಬಗಳು ಬಂದರೆ ಸಾಕು ಎಲ್ಲರ ಮನೆಯಲ್ಲಿಯೂ ಸಿಹಿ ಅಡುಗೆ, ತಿಂಡಿತಿನಿಸುಗಳ ತಯಾರಿ ಮತ್ತು ಸೇವನೆ ಜೋರಾಗಿಯೇ ಇರುತ್ತದೆ. ಅದರಲ್ಲಿಯೂ ದೀಪಾವಳಿ ಎಂದರೆ ಕೇಳಬೇಕೇ? ಪಾಯಸ, ಕರಿಗಡುಬು, ಜಾಮೂನು ಹೀಗೆ ಹಲವಾರು ಸಿಹಿ ಪದಾರ್ಥಗಳನ್ನು ನಾವೆಲ್ಲರೂ ಸೇವಿಸಿದ್ದೇವೆ. ಜೊತೆಗೆ ಆಫೀಸಿನವರು ಲಕ್ಷ್ಮೀ ಪೂಜೆ ಮಾಡಿ ಕೊಡುವ ಕಸ್ಟಮರಿ ಸ್ವೀಟ್ ಬಾಕ್ಸಿನ ಬಗೆಬಗೆಯ ಸ್ವೀಟುಗಳು ನಮ್ಮ ಬಾಯಿರುಚಿ ತಣಿಸಿ ಹೊಟ್ಟೆ ಸೇರಿವೆ.
ದೇಹದಲ್ಲಿ ಫ್ರಕ್ಟೋಸ್ ಸಂಗ್ರಹ
ಸಕ್ಕರೆ ಇಂದು ನಮ್ಮ ದೈನಂದಿನ ಆಹಾರದಲ್ಲಿ ಸೇರಿಹೋಗಿದೆ. ಬೆಳಗ್ಗೆ ಎದ್ದ ಬಳಿಕ ನಾವು ಸೇವಿಸುವ ಕಾಫಿ ಮತ್ತು ಟೀಗಳಿಂದ ಆರಂಭಿಸಿ ನಾವು ದಿನವಿಡೀ ಸೇವಿಸುವ ಊಟತಿಂಡಿಗಳಲ್ಲಿ ಸಕ್ಕರೆಯ ಅಂಶ ಇದ್ದೇ ಇರುತ್ತದೆ. ಒಂದು ಅಂದಾಜಿನಂತೆ ನಾವು ಭಾರತೀಯರು ದಿನಕ್ಕೆ ಕನಿಷ್ಠ ಎಂಟು ಇಲ್ಲವೇ ಹತ್ತು ಚಮಚಗಳಷ್ಟು ಸಕ್ಕರೆ ಸೇವಿಸುತ್ತಿದ್ದೇವೆ. ಆದರೆ ನಮಗೆ ಇಷ್ಟೊಂದು ಸಕ್ಕರೆ ಅವಶ್ಯಕತೆ ಇಲ್ಲ. ಅಗತ್ಯಕ್ಕಿಂತೆ ಹೆಚ್ಚಾಗಿ ಸೇವಿಸಿದ ಸಕ್ಕರೆಯು ನಮ್ಮ ದೇಹದಲ್ಲಿ ಫ್ರಕ್ಟೋಸ್ ರೂಪದಲ್ಲಿ ಸಂಗ್ರಹವಾಗುತ್ತದೆ. ಇದರಿಂದ ಯಕೃತ್ತಿಗೆ (ಲಿವರ್) ತೊಂದರೆ. ಅದರ ಕಾರ್ಯಕ್ಷಮತೆ ಕುಗ್ಗುತ್ತದೆ. ಹೆಚ್ಚಿನ ಫ್ರಕ್ಟೋಸ್ ಕೊಬ್ಬಾಗಿ (ಫ್ಯಾಟ್) ಪರಿವರ್ತನೆಯಾಗುತ್ತದೆ. ಆಗ ಯಕೃತ್ತಿನ ಮೇಲೆ ಹೆಚ್ಚಿನ ಒತ್ತಡವುಂಟಾದಾಗ ಒಂದಲ್ಲಾ ಒಂದು ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಗತ್ಯಕ್ಕಿಂತ ಹೆಚ್ಚಾಗಿರುವ ಫ್ರಕ್ಟೋಸ್ ಕ್ಯಾನ್ಸರಿಗೆ ಪ್ರಚೋದನೆ ನೀಡುತ್ತದೆ ಎಂಬುದು ಹಲವು ಸಂಶೋಧನೆಗಳಿಂದ ತಿಳಿದುಬಂದಿದೆ. ಆದ್ದರಿಂದ ನಾವು ಹೆಚ್ಚಿನ ಸಕ್ಕರೆ ಸೇವಿಸಬಾರದು.
ಎಷ್ಟು ಸಕ್ಕರೆ ಸೇವನೆ ಆರೋಗ್ಯಕ್ಕೆ ಒಳ್ಳೆಯದು?
ಆಹಾರತಜ್ಞರು ಹೇಳುವ ಪ್ರಕಾರ ನಾವು ಪ್ರತಿದಿನ ಆರು ಚಮಚಗಳಿಗಿಂತ ಹೆಚ್ಚು ಸಕ್ಕರೆ ಸೇವಿಸಬಾರದು. ಒಂದು ಗ್ಲಾಸ್ ಕಾಫಿ-ಟೀಗೆ ಕೆಲವರಂತೂ ಎರಡು-ಮೂರು ಚಮಚ ಸಕ್ಕರೆ ಸುರಿದುಕೊಂಡು ಕುಡಿಯುವವರೂ ಉಂಟು! ಹೀಗೆ ದಿನಕ್ಕೆ ಕನಿಷ್ಠ ಮೂರು ಸಲ ಕಾಫಿ-ಟೀ ಸೇವನೆ ಮಾಡಿದರೆ ಈ ಪ್ರಮಾಣವಾಗುತ್ತದೆ. ಇನ್ನು ಹೊರಗಿನಿಂದ ತಂದ ಸ್ವೀಟುಗಳನ್ನು ಸಕ್ಕರೆಯಲ್ಲಿ ಮುಳುಗಿಸಿ ಮಾಡಿದಂತೆ ಇರುತ್ತದೆ. ಪರಿಣಾಮ ಸಕ್ಕರೆ ದೇಹದಲ್ಲಿ ಕೊಬ್ಬಾಗಿ ಬೊಜ್ಜು ಬರುತ್ತದೆ. ದೇಹದ ತೂಕ ಹೆಚ್ಚಾದಂತೆ ಇನ್ಸುಲಿನ್ ಹಾರ್ಮೋನಿನ ಉತ್ಪಾದನೆ ಏರುಪೇರಾಗಿ ಹಸಿವು ಹೆಚ್ಚಾಗಿ ಮತ್ತಷ್ಟು ಆಹಾರ ತಿನ್ನುವಂತಾಗುತ್ತದೆ. ಆಗ ಜೀರ್ಣಾಂಗ ವ್ಯವಸ್ಥೆ ಮತ್ತು ಮೂಲಭೂತ ಜೈವಿಕ ಕ್ರಿಯೆಗಳ ವೇಗ ದೇಹದಲ್ಲಿ ಕಡಿಮೆಯಾಗುತ್ತದೆ. ಕ್ರಮೇಣ ಸ್ಥೂಲಕಾಯ, ಹೊಟ್ಟೆಯ ಸುತ್ತ ಕೊಬ್ಬು ಶೇಖರವಾಗುತ್ತದೆ. ಒಂದೊಂದೇ ಸಮಸ್ಯೆ ಆರಂಭವಾಗುತ್ತದೆ. ಕೊಲೆಸ್ಟರಾಲ್ ಪ್ರಮಾಣ ಹೆಚ್ಚಾಗಿ ರಕ್ತದ ಪರಿಚಲನೆಗೆ ತೊಂದರೆಯಾಗುತ್ತದೆ. ಅಧಿಕ ಸಕ್ಕರೆ ಸೇವನೆಯಿಂದ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಫ್ರಕ್ಟೋಸ್ ಪ್ರಮಾಣ ಹೆಚ್ಚಾದಂತೆ ರಕ್ತದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಹೆಚ್ಚುತ್ತದೆ. ಯೂರಿಕ್ ಅಮ್ಲದ ಪ್ರಮಾಣ ಹೆಚ್ಚಾದಂತೆ ಹೃದಯದ ತೊಂದರೆ, ಕೀಲುಗಳ ತೊಂದರೆ ಮತ್ತು ಮೂತ್ರಪಿಂಡಗಳ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನಿಧಾನವಾಗಿ ಸಕ್ಕರೆ ಅಂಶ ದೇಹದಲ್ಲಿ ಸೇರಿದಾಗ ಮರೆಗುಳಿತನ ನಂತರ ಆಲ್ಜೀಮರ್ಸ್ ರೋಗಕ್ಕೆ ಕಾರಣವಾಗುತ್ತದೆ ಎಂದು ಕೆಲವು ಅಧ್ಯಯನಗಳು ಹೇಳಿವೆ.
ಹಣ್ಣುಗಳಲ್ಲಿ ಸಕ್ಕರೆ ಅಂಶ
ತಾಜಾ ಹಣ್ಣುಗಳಲ್ಲಿ ಸಕ್ಕರೆಯು ನೈಸರ್ಗಿಕವಾಗಿ ಕಂಡುಬರುತ್ತದೆ. ಬಾಳೆಹಣ್ಣು, ಸೇಬು, ಸೀಬೆ, ದಾಳಿಂಬೆ, ಸೀತಾಫಲ, ಮಾವು, ಸಪೋಟ, ಕಿತ್ತಲೆ, ದ್ರಾಕ್ಷಿ ಇತ್ಯಾದಿ ಹಣ್ಣುಗಳಲ್ಲಿ ಇರುವ ಸಕ್ಕರೆಯಿಂದ ತೊಂದರೆಯಿಲ್ಲ. ಆದರೆ ಅಂಗಡಿಗಳಲ್ಲಿ ದೊರೆಯುವ ಸಿಹಿ ಪಾನೀಯ, ಪೇಯ, ತಿಂಡಿತಿನಿಸುಗಳಲ್ಲಿ ಸಕ್ಕರೆಯ ಅಂಶ ಹೆಚ್ಚಾಗಿಯೇ ಇರುತ್ತದೆ. ಇವುಗಳ ತಯಾರಿಕೆಯಲ್ಲಿ ಫ್ರಕ್ಟೋಸನ್ನು ಹೆಚ್ಚಾಗಿಯೇ ಬಳಸಲಾಗಿರುತ್ತದೆ. ರುಚಿಯ ಹಿಂದೆ ಬಿದ್ದು ಅತಿಯಾಗಿ ಇವುಗಳನ್ನು ಸೇವಿಸಿದರೆ ತೊಂದರೆ ಖಚಿತ.
ದೈನಂದಿನ ಜೀವನದಲ್ಲಿ ಸಕ್ಕರೆ ಸೇವನೆ ಕಡಿಮೆ ಮಾಡುವುದು ಒಂದ ಸವಾಲೇ ಸರಿ. ಆದರೆ ಸಾಧ್ಯ. ಇಂದು ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಹೆಚ್ಚಿದಂತೆ ಅವರು ತಾವಾಗಿಯೇ ಸಕ್ಕರೆ ಸೇವನೆ ಕಡಿಮೆ ಮಾಡಿದ್ದಾರೆ/ಬಿಟ್ಟುಬಿಟ್ಟಿದ್ದಾರೆ.
ಸಕ್ಕರೆ ಸೇವನೆ ಕಡಿಮೆ ಮಾಡಲು ಈ ಕ್ರಮಗಳನ್ನು ಅನುಸರಿಸಿ:
ಮೊದಲಿಗೆ ಕಾಫೀ-ಟೀಗೆ ಸಕ್ಕರೆ ಹಾಕಿಕೊಳ್ಳುವುದನ್ನು ಕಡಿಮೆ ಮಾಡಬೇಕು.
ಅಂಗಡಿಗಳಿಂದ ಸಿಹಿ ತಿಂಡಿಗಳನ್ನು ತರುವಾಗ ಅವುಗಳ ಮೇಲಿರುವ ಲೇಬಲ್ಲುಗಳನ್ನು ಎಚ್ಚರಿಕೆ ನೋಡಿ ಖರೀದಿಸಬೇಕು. ಸಂಸ್ಕರಿಸಿದ ಆಹಾರಗಳು, ಸಾಸ್‌ಗಳು ಮತ್ತು ಪಾನೀಯಗಳಲ್ಲಿ ಸಕ್ಕರೆಯನ್ನು ಹೆಚ್ಚಾಗಿ ವಿವಿಧ ರೂಪಗಳಲ್ಲಿ ಅಂದರೆ "ಸುಕ್ರೋಸ್", "ಹೈ ಫ್ರಕ್ಟೋಸ್ ಕಾರ್ನ್ ಸಿರಪ್", "ಗ್ಲೂಕೋಸ್", "ಫ್ರಕ್ಟೋಸ್" ಮತ್ತು "ಮಾಲ್ಟೋಸ್" ಬಳಸಿರುತ್ತಾರೆ. ಆಗ ಕಡಿಮೆ ಸಕ್ಕರೆ ಅಥವಾ ಸಕ್ಕರೆ ಹಾಕಿರದ ತಿಂಡಿಗಳನ್ನು ಕೊಳ್ಳಬೇಕು.
ಮೊಸರಿಗೆ ಸಕ್ಕರೆ ಹಾಕಿ ಸೇವಿಸುವ ಅಭ್ಯಾಸ ಇದ್ದರೆ ಕಡಿಮೆ ಮಾಡಿ.
ಸಭೆಸಮಾರಂಭಗಳಲ್ಲಿ ಸಿಹಿತಿನಿಸುಗಳ ಬದಲಿಗೆ ತಾಜಾ ಹಣ್ಣುಗಳನ್ನು ಆರಿಸಿಕೊಳ್ಳಿ.
ತಂಪು ಪಾನೀಯಗಳು ಮತ್ತು ಹಣ್ಣಿನ ರಸದ (ಜ್ಯೂಸ್) ಸೇವನೆ ಬೇಡ. ಬೇಕರಿ ಪದಾರ್ಥಗಳಾದ ಕೇಕ್, ಪೇಸ್ಟ್ರಿಗಳ ಸೇವನೆ ಅತಿಯಾಗಿ ಬೇಡ.
ಜೇನುತುಪ್ಪವನ್ನು ಹಿತಿಮಿತವಾಗಿ ಸೇವಿಸಿ. ಸಕ್ಕರೆ ಬದಲಿಗೆ ಬೆಲ್ಲವನ್ನು ಅತಿಯಾಗಿ ಸೇವಿಸಬಾರದು
ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಪ್ರೋಟೀನ್‌ಗಳಂತಹ ಸಂಪೂರ್ಣ ಆಹಾರಗಳು ನೈಸರ್ಗಿಕವಾಗಿ ಕಡಿಮೆ ಸಕ್ಕರೆ ಅಂಶವನ್ನು ಹೊಂದಿರುತ್ತವೆ. ಇವುಗಳನ್ನು ಧಾರಾಳವಾಗಿ ಸೇವಿಸಿ.
ಒಟ್ಟಾರೆ ಹೇಳುವುದಾದರೆ ಸಕ್ಕರೆ ಸೇವನೆ ಕಡಿಮೆ ಮಾಡುವುದು ಸಾಕಷ್ಟು ಸಮಯ ತೆಗೆದುಕೊಳ್ಳುವ ಪ್ರಕ್ರಿಯೆ. ಉತ್ತಮ ಆರೋಗ್ಯದ ಹಾದಿ ಕಠಿಣ ಎನಿಸಬಹುದು. ಆದರೆ ಅದೇ ಒಳ್ಳೆಯ ದಾರಿ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಮೊದಲು ಸಣ್ಣ ಸಣ್ಣ ಪ್ರಯತ್ನದಿಂದ ಆರಂಭಿಸಿ. ತಾಳ್ಮೆಯಿಂದ ಶಾಶ್ವತ ಬದಲಾವಣೆ ತರಬಹುದು. ಹಿತಮಿತ ಆಹಾರ ಮತ್ತು ವಿಹಾರದೊಂದಿಗೆ ಉತ್ತಮ ಜೀವನಶೈಲಿಯನ್ನು ನಮ್ಮದನ್ನಾಗಿ ಮಾಡಿಕೊಳ್ಳಬಹುದು.
Advertisement