ಮೊಣಕೈ ನೋವು ಎಂಬ ಸಾಮಾನ್ಯ ಸಮಸ್ಯೆ ಟೆನ್ನಿಸ್ ಎಲ್ಬೋ ಎಂದು ಹೆಸರಾಗಿದೆ. ಇದನ್ನು ಲ್ಯಾಟರಲ್ ಎಪಿಕಾಂಡಿಲೈಟಿಸ್ ಎಂದೂ ಕರೆಯುತ್ತಾರೆ. ಈ ಸಮಸ್ಯೆ ಬಂದರೆ ಮೊಣಕೈಯ ಹೊರಭಾಗದಲ್ಲಿ ನೋವು ಬಿಡದೇ ಕಾಡುತ್ತದೆ.
ಟೆನ್ನಿಸ್ ಎಂಬ ಹೆಸರು ಇರುವುದರಿಂದ ಇದು ಟೆನ್ನಿಸ್ ಆಟ ಆಡುವವರಿಗೆ ಬರಬೇಕು ಎಂದೇನಿಲ್ಲ. ಮುಂದೋಳು, ಮಣಿಕಟ್ಟು ಮತ್ತು ಕೈಗಳ ಚಲನೆಯನ್ನು ಹೆಚ್ಚಾಗಿ ಮಾಡಿ ಕೆಲಸ ಮಾಡುವ ಯಾರಿಗಾದರೂ ಈ ಸಮಸ್ಯೆ ಕಾಡಬಹುದು. ನೋವು ಸೂಕ್ಷ್ಮ ಅಥವಾ ತೀವ್ರವಾಗಿರಬಹುದು ಮತ್ತು ಕ್ರಮೇಣ ಅಥವಾ ಒಮ್ಮೆಲೇ ಪ್ರಾರಂಭವಾಗಬಹುದು.
ಈ ಸಮಸ್ಯೆ ಸಾಮಾನ್ಯವಾಗಿ ಮುಂದೋಳಿನ ಸ್ನಾಯುಗಳು ಮತ್ತು ಸ್ನಾಯುರಜ್ಜುಗಳ ಅತಿಯಾದ ಬಳಕೆಯಿಂದ ಉಂಟಾಗುತ್ತದೆ. ಟೆನ್ನಿಸ್, ಬ್ಯಾಡ್ಮಿಂಟನ್ ಅಥವಾ ಸ್ಕ್ವಾಶ್ ನಂತಹ ರಾಕೆಟ್ ಬಳಸಿ ಕ್ರೀಡೆಗಳನ್ನು ಆಡುವವರು, ಸ್ಕ್ರೂಡ್ರೈವರ್ ಗಳು, ಸುತ್ತಿಗೆಗಳಂತಹ ಸಾಧನಗಳನ್ನು ಸದಾ ಉಪಯೋಗಿಸುವ ಕೆಲಸಗಾರರು, ಸದಾ ಕಾಲ ಕಂಪ್ಯೂಟರ್ ಕೀಬೋರ್ಡಿನಲ್ಲಿ ಟೈಪ್ ಮಾಡುವುದು ಅಥವಾ ಕಂಪ್ಯೂಟರ್ ಮೌಸನ್ನು ದೀರ್ಘಕಾಲದವರೆಗೆ ಬಳಸುವುದರಿಂದ ಸ್ನಾಯುರಜ್ಜುಗಳು ಹರಿದು ಉರಿಯೂತ ಮತ್ತು ನೋವನ್ನು ಉಂಟುಮಾಡಬಹುದು.
ಟೆನ್ನಿಸ್ ಆಟಗಾರರು ಈ ಸಮಸ್ಯೆಯನ್ನು ಹೆಚ್ಚಾಗಿ ಅನುಭವಿಸಿದರೂ ವರ್ಣಚಿತ್ರಕಾರರು, ಕೊಳಾಯಿ ಕೆಲಸಗಾರರು, ಬಡಗಿಗಳು, ತೋಟಗಾರರು, ಸಾಮಾನ್ಯ ಗೃಹಿಣಿಯರು, ಬಾಣಸಿಗರು ಮತ್ತು ಕಚೇರಿ ಕೆಲಸಗಾರರು ಈ ಸಮಸ್ಯೆಯಿಂದ ಬಾಧಿತರಾಗಿದ್ದಾರೆ.
ಟೆನ್ನಿಸ್ ಎಲ್ಬೋ ಲಕ್ಷಣಗಳು
ಈ ಸಮಸ್ಯೆಯ ಪ್ರಾಥಮಿಕ ಲಕ್ಷಣವೆಂದರೆ ಮೊಣಕೈಯ ಹೊರಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು. ಇಂತಹ ಪರಿಸ್ಥಿತಿಯಲ್ಲಿ ಏನನ್ನಾದರೂ ಹಿಡಿಕೊಳ್ಳುವುದು, ಹಿಡಿತ, ತಿರುಚುವುದು ಅಥವಾ ವಸ್ತುಗಳನ್ನು ಎತ್ತುವುದು ಮುಂತಾದ ನಿರ್ದಿಷ್ಟ ಚಲನೆಗಳ ಚಟುವಟಿಕೆಗಳನ್ನು ಮಾಡುವುದು ಕಷ್ವವಾಗುತ್ತದೆ,
ಮೊಣಕೈಯ ಹೊರಭಾಗದಲ್ಲಿ ಮೃದುತ್ವ, ಮುಂದೋಳು ಮತ್ತು ಮಣಿಕಟ್ಟಿನಲ್ಲಿ ದೌರ್ಬಲ್ಯ, ಜಾಡಿಗಳನ್ನು ತೆರೆಯುವುದು ಅಥವಾ ಬಾಗಿಲಿನ ಚಿಲಕಗಳು/ಹಿಡಿಕೆಗಳನ್ನು ತಿರುಗಿಸುವಂತಹ ಚಟುವಟಿಕೆಗಳಲ್ಲಿ ತೊಡಗಲು ತೊಂದರೆಯಾಗುವುದು ಸಾಮಾನ್ಯ ಲಕ್ಷಣಗಳು.
ಮೊಣಕೈ ನೋವಿಗೆ ಚಿಕಿತ್ಸೆ
ಮೊಣಕೈ ನೋವಿಗೆ ಚಿಕಿತ್ಸೆ ನೀಡುವುದು ಅದರ ಪರಿಸ್ಥಿತಿಯ ತೀವ್ರತೆಯನ್ನು ಅವಲಂಬಿಸಿರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಕೆಲವು ಸಾಂಪ್ರದಾಯಿಕ ಕ್ರಮಗಳಿಂದ ಈ ಸಮಸ್ಯೆಗೆ ಪರಿಹಾರ ಸಾಧ್ಯವಿದೆ. ಉದಾಹರಣೆಗೆ ಸ್ನಾಯುರಜ್ಜುಗಳು ಗುಣವಾಗಲು ಪೀಡಿತ ತೋಳಿಗೆ ವಿಶ್ರಾಂತಿ ನೀಡುವುದು ಬಹಳ ಮುಖ್ಯ. ಆಗ ನೋವನ್ನು ಉಲ್ಬಣಗೊಳಿಸುವ ಚಟುವಟಿಕೆಗಳನ್ನು ತಪ್ಪಿಸಬೇಕು.
ಮೊಣಕೈಗೆ 15-20 ನಿಮಿಷಗಳ ಕಾಲ ಐಸ್ ಪ್ಯಾಕುಗಳನ್ನು ಕಟ್ಟಿದರೆ ಉರಿಯೂತ ಮತ್ತು ನೋವನ್ನು ಕಡಿಮೆಯಾಗುತ್ತದೆ.
ನೇರ ನೋವುನಿವಾರಕಗಳ ಮಾತ್ರೆಗಳನ್ನು ತೆಗೆದುಕೊಂಡರೆ ಉಪಶಮನ ಸಾಧ್ಯವಿದೆ.
ನುಗ್ಗೆಸೊಪ್ಪನ್ನು ಮತ್ತು ಬೆಳ್ಳುಳ್ಳಿಯನ್ನು ಹುರಿದು ಬಿಸಿಯಾದಾಗ ಬಟ್ಟೆಯಲ್ಲಿ ಪೋಟಲಿ ಕಟ್ಟಿಶಾಖವನ್ನು ತೆಗೆದುಕೊಳ್ಳಬೇಕು.
ಎಳ್ಳೆಣ್ಣೆಯನ್ನು ಸ್ವಲ್ಪ ಬಿಸಿ ಮಾಡಿಕೊಂಡು ಮೃದುವಾಗಿ ಬಾಧಿತ ಭಾಗಕ್ಕೆ ಮಸಾಜ್ ಮಾಡಬೇಕು.
ಆಯುರ್ವೇದದ ಔಷಧಿ ಅಂಗಡಿಗಳಲ್ಲಿ ದೊರಕುವ ನೋವುನಿವಾರಕ ತೈಲಗಳನ್ನು ಹಚ್ಚಿಕೊಂಡರೂ ನೋವು ಹೋಗುತ್ತದೆ.
ಸಮಸ್ಯೆಯು ತೀವ್ರವಾಗಿದ್ದಲ್ಲಿ ವೈದ್ಯರ ಸಲಹೆಯ ಮೇರೆ ಫಿಸಿಯೋಥೆರಪಿಸ್ಟರ ಸಹಾಯ ಪಡೆಯಬಹುದು. ಅವರು ಮುಂದೋಳಿನ ಸ್ನಾಯುಗಳನ್ನು ಬಲಪಡಿಸಲು, ಚಲನೆಯನ್ನು ಸುಧಾರಿಸಲು ಮತ್ತು ನೋವನ್ನು ಕಡಿಮೆ ಮಾಡಲು ವೈಯಕ್ತಿಕ ವ್ಯಾಯಾಮ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಬಹುದು. ಹಾಗೆಯೇ ನೋವಿರುವ ಮೊಣಕೈಯಲ್ಲಿ ಪಟ್ಟಿಯನ್ನು ಧರಿಸುವುದು ಸ್ನಾಯುರಜ್ಜುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಟೆನ್ನಿಸ್ ಎಲ್ಬೋ ಸಮಸ್ಯೆ ತಡೆಗಟ್ಟುವ ವಿಧಾನಗಳು
ಈ ಸಮಸ್ಯೆ ಬರದಂತೆ ತಡೆಯಲು ಟೆನ್ನಿಸಿನಂತಹ ಕ್ರೀಡೆಗಳನ್ನು ಆಡುವಾಗ ಸರಿಯಾದ ವಿಧಾನಗಳನ್ನು ಬಳಸಬೇಕು. ಮೊಣಕೈಗೆ ನೋವಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ.
ಅತಿಯಾಗಿ ಮೊಣಕೈಯನ್ನು ಬಳಸಿ ಕೆಲಸವನ್ನು ಗಂಟೆಗಟ್ಟಲೇ ಮಾಡಬಾರದು. ಆಗಾಗ ವಿರಾಮ ತೆಗೆದುಕೊಳ್ಳುವುದು ಉತ್ತಮ.
ಬಹಳ ಹೊತ್ತು ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರು ಆಗಾಗ ವಿರಾಮ ತೆಗೆದುಕೊಳ್ಳುವುದು ಒಳ್ಳೆಯದು. ಇದು ಸ್ನಾಯುರಜ್ಜುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕೆಲವು ನಿರ್ದಿಷ್ಟ ವ್ಯಾಯಾಮಗಳನ್ನು ಮಾಡಿದರೆ ಮುಂದೋಳಿನ ಸ್ನಾಯುಗಳ ಬಲಯುತವಾಗುತ್ತವೆ ಮತ್ತು ಗಾಯಗಳನ್ನು ತಡೆಯಬಹುದು. ಅವುಗಳನ್ನು ಕಲಿತು ಮಾಡಿದರೆ ಒಳ್ಳೆಯದು. ಕೈಗೆ ಸಂಬಂಧಿಸಿದ ಯೋಗಾಸನಗಳನ್ನು ಮಾಡಿದರೂ ಹಿತವಾಗಿರುತ್ತದೆ.
ಕಚೇರಿಯ ಪರಿಸರದಲ್ಲಿ ಕೆಲಸ ಮಾಡಲು ಸರಿಯಾದ ಕುರ್ಚಿ, ಮೇಜು ಮತ್ತಿತರ ಸಾಧನ ಸಲಕರಣೆಗಳು ಇರಬೇಕು. ಈಜು ಅಥವಾ ಸೈಕ್ಲಿಂಗ್‌ನಂತಹ ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಮೊಣಕೈ ಕೀಲಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಟೆನ್ನಿಸ್ ಎಲ್ಬೋಗೆ ಕಾರಣಗಳು, ಲಕ್ಷಣಗಳು ಮತ್ತು ಚಿಕಿತ್ಸೆಯ ಆಯ್ಕೆಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಈ ಸಾಮಾನ್ಯ ಸ್ಥಿತಿಯನ್ನು ತಡೆಗಟ್ಟಲು ಮತ್ತು ನಿರ್ವಹಿಸಲು ನೀವು ಕ್ರಮಗಳನ್ನು ತೆಗೆದುಕೊಳ್ಳಬಹುದು. ಸಾಮಾನ್ಯ ಉಪಶಮನ ಕ್ರಮಗಳನ್ನು ತೆಗೆದುಕೊಂಡ ನಂತರವೂ ನಿರಂತರ ಮೊಣಕೈ ನೋವು ಇದ್ದರೆ ಸರಿಯಾದ ರೋಗನಿರ್ಣಯ ಮತ್ತು ಚಿಕಿತ್ಸೆಗಾಗಿ ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸುವುದು ಮುಖ್ಯ.
Advertisement