ಜಾರ್ಖಂಡ್ ವಿಧಾನಸಭೆ ಚುನಾವಣೆ: ಇದೇನಿದು ಬಿಜೆಪಿ ಎಬ್ಬಿಸಿರುವ ರೋಟಿ-ಬೇಟಿ-ಮಾಟಿ ಕೂಗು?

ಹೇಮಂತ ಸೊರೇನ್ ಆಡಳಿತದಲ್ಲಿ ಜಾರ್ಖಂಡವನ್ನು ಬಾಂಗ್ಲಾದೇಶದ ಅಕ್ರಮ ನಿವಾಸಿಗಳಿಗೆ ತೆರೆದಿರಿಸಲಾಗಿದೆ ಹಾಗೂ ಇವರು ಜೆಎಂಎಂ ಮತ್ತು ಕಾಂಗ್ರೆಸ್ಸಿಗೆ ಮತಬ್ಯಾಂಕ್ ಆಗುತ್ತಿದ್ದಾರೆ ಎಂಬುದು ಬಿಜೆಪಿ ಆರೋಪ.
JMM chief and Home minister amit shah
ಜೆಎಂಎಂ ನಾಯಕ ಸೊರೇನ್- ಕೇಂದ್ರ ಗೃಹ ಸಚಿವ ಅಮಿತ್ ಶಾonline desk
Updated on

ನವೆಂಬರ್ 13 ಮತ್ತು 23ರಂದು ಎರಡು ಹಂತಗಳಲ್ಲಿ ನಡೆಯಲಿದೆ ಜಾರ್ಖಂಡ್ ವಿಧಾನಸಭೆ ಚುನಾವಣೆಯ ಮತದಾನ. ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚ (ಜೆಎಂಎಂ) ಇಂಡಿ ಮೈತ್ರಿಕೂಟದ ಮುಖವಾಗಿ ಸೆಣೆಸುತ್ತಿದ್ದರೆ, ಎನ್ಡಿಎ ಪಾಳೆಯದ ಪ್ರಮುಖ ಉಮೇದುವಾರ ಬಿಜೆಪಿ. 

2000ನೆ ಇಸ್ವಿಯಲ್ಲಿ ಕೇಂದ್ರದಲ್ಲಿ ಎನ್ಡಿಎ ಸರ್ಕಾರವಿದ್ದಾಗ ಅಂದಿನ ಬಿಜೆಪಿ ಧುರೀಣರು ಒತ್ತಾಸೆಯಿಂದ ನಿರ್ಮಿಸಿದ ರಾಜ್ಯ ಜಾರ್ಖಂಡ್. ಬಿಹಾರವನ್ನು ಮರುವಿಂಗಡಿಸಿ ರೂಪಿಸಿದ ಈ ರಾಜ್ಯದಲ್ಲಿ ಶೇ. 28ರಷ್ಟು ಬುಡಕಟ್ಟು ಮಂದಿ ಹಾಗೂ ಸುಮಾರು ಶೇ. 12ರಷ್ಟು ಎಸ್ ಸಿ ಜನಸಂಖ್ಯೆ. ಇದೀಗ ಈ ರಾಜ್ಯದಲ್ಲಿ ಅಧಿಕಾರವನ್ನು ಮರಳಿ ಪಡೆದುಕೊಳ್ಳುವುದಕ್ಕೆ ಬಿಜೆಪಿ ಮೊಳಗಿಸಿರುವ ಘೋಷವಾಕ್ಯವೆಂದರೆ- ರೋಟಿ, ಬೇಟಿ, ಮಾಟಿ. ಅರ್ಥಾತ್ ಜೀವನೋಪಾಯ, ಹೆಣ್ಣುಮಕ್ಕಳು ಹಾಗೂ ಜಮೀನಿನ ಸುತ್ತ ಪ್ರಚಾರಾಂದೋಲನ ಹೆಣೆಯಲಾಗಿದೆ. 

ಏನಿದು ರೋಟಿ, ಬೇಟಿ, ಮಾಟಿ?

ಹೇಮಂತ ಸೊರೇನ್ ಆಡಳಿತದಲ್ಲಿ ಜಾರ್ಖಂಡವನ್ನು ಬಾಂಗ್ಲಾದೇಶದ ಅಕ್ರಮ ನಿವಾಸಿಗಳಿಗೆ ತೆರೆದಿರಿಸಲಾಗಿದೆ ಹಾಗೂ ಇವರು ಜೆಎಂಎಂ ಮತ್ತು ಕಾಂಗ್ರೆಸ್ಸಿಗೆ ಮತಬ್ಯಾಂಕ್ ಆಗುತ್ತಿದ್ದಾರೆ ಎಂಬುದು ಬಿಜೆಪಿ ಆರೋಪ. ಇದರ ಸುತ್ತಲೇ ಮೋದಿ-ಅಮಿತ್ ಶಾ ಸೇರಿದಂತೆ ಬಿಜೆಪಿ ಪ್ರಮುಖರೆಲ್ಲ ಪ್ರಚಾರ ಮಾಡುತ್ತಿದ್ದಾರೆ. ಅಂದರೆ, ಅಲ್ಲಿನ ಬುಡಕಟ್ಟು ಮಂದಿಯ ಜೀವನೋಪಾಯ (ರೋಟಿ), ಹೆಣ್ಣುಮಕ್ಕಳ ಮದುವೆ (ಬೇಟಿ), ಆ ಮೂಲಕ ಬುಡಕಟ್ಟು ಮಂದಿಯ ಜಮೀನು (ಮಾಟಿ) ಇವಿಷ್ಟಕ್ಕೂ ಅಕ್ರಮ ಬಾಂಗ್ಲಾ ನಿವಾಸಿಗರು ಕುತ್ತು ತರುತ್ತಿದ್ದಾರೆ ಎಂಬ ಪ್ರಚಾರ ಬಿಜೆಪಿಯದ್ದು. ಬುಡಕಟ್ಟು ರಾಜ್ಯದಲ್ಲಿ ಬೇರೆ ಸಮುದಾಯಗಳು ಜಮೀನು ಖರೀದಿಸುವಂತಿಲ್ಲ. ಆದರೆ ಬುಡಕಟ್ಟು ಮಹಿಳೆಯನ್ನು ಮದುವೆಯಾಗುವ ಮೂಲಕ ಜಮೀನಿನ ಮೇಲೆ ತಮ್ಮ ಹಿಡಿತವನ್ನು ಸಾಧಿಸುವ ಮಾರ್ಗವನ್ನು ಅಕ್ರಮ ವಲಸಿಗ ಮುಸ್ಲಿಮರು ಹುಡುಕಿಕೊಂಡಿದ್ದಾರೆ ಎಂಬುದು ಬಿಜೆಪಿ ಪ್ರತಿಪಾದನೆ. ಇಂಥದ್ದೇನೂ ಇಲ್ಲ, ಬಿಜೆಪಿ ಸುಳ್ಳುಕತೆಗಳ ಮೂಲಕ ಭಯ ಹುಟ್ಟಿಸುತ್ತಿದೆ ಎನ್ನುವುದು ಜೆಎಂಎಂ ಕಾಂಗ್ರೆಸ್ ವಾದ. 

ರಾಜ್ಯದಲ್ಲಿ ಬಾಂಗ್ಲಾದ ಅಕ್ರಮ ವಲಸಿಗರ ಸ್ಥಿತಿಗತಿ ಪತ್ತೆಗೆ ಪರಿಣತರ ಸಮಿತಿ ನಿರ್ಮಿಸಬೇಕು ಎಂದು ಹೈಕೋರ್ಟ್ ಆದೇಶಿಸಿತ್ತು. ಆದರೆ, ಇತ್ತೀಚೆಗೆ ಅದಕ್ಕೆ ತಡೆ ನೀಡಿರುವ ಸುಪ್ರೀಂಕೋರ್ಟ್, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳ ವಾದವನ್ನು ಕೇಳಿದ ನಂತರವೇ ತೀರ್ಮಾನ ಮಾಡುವುದಾಗಿ ಹೇಳಿದೆ. ಹೀಗೆ ಸುಪ್ರೀಂಕೋರ್ಟಿಗೆ ಹೋಗಿ ತಡೆ ತರುವುದರಲ್ಲಿ ಪ್ರಮುಖ ಪಾತ್ರ ವಹಿಸಿದವರು ಮಾಜಿ ಕಾಂಗ್ರೆಸ್ಸಿಗ, ನ್ಯಾಯವಾದಿ ಕಪಿಲ್ ಸಿಬಲ್. 

JMM chief and Home minister amit shah
Freebies- ಇದು ಅವರವರ ಭಾವಕ್ಕೆ, ಅವರವರ ಲಾಭಕ್ಕೆ? ಮಹಾರಾಷ್ಟ್ರ ರಾಜಕೀಯ ಕೊಡುತ್ತಿರುವ ಸಂದೇಶ!

ಬಿಜೆಪಿಯ ಯಶಸ್ವಿ ಪ್ರಯೋಗಗಳ ಹಿನ್ನೆಲೆ

ಬುಡಕಟ್ಟು ಜನರ ಅಸ್ತಿತ್ವದ ಪ್ರಶ್ನೆಯನ್ನು ಮುಂದುಮಾಡಿ ನಡೆಸಿದ ಪ್ರಚಾರಾಂದೋಲನಗಳು ಬಿಜೆಪಿಗೆ ತ್ರಿಪುರಾ, ಅಸ್ಸಾಂ, ಮತ್ತು ಪಶ್ಚಿಮ ಬಂಗಾಳಗಳಲ್ಲಿ ಯಶಸ್ಸು ತಂದುಕೊಟ್ಟಿವೆ. ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿಯುವುದಕ್ಕೆ ಬಿಜೆಪಿ ಯಶಸ್ವಿ ಆಗದಿದ್ದರೂ ತನ್ನ ರಾಜಕೀಯ ಅಸ್ತಿತ್ವವೇ ಇಲ್ಲದಿದ್ದ ಆ ರಾಜ್ಯದಲ್ಲಿ ಪ್ರಮುಖ ಪ್ರತಿಪಕ್ಷವಾಗುವುದಕ್ಕೆ ಈ ವಿಷಯವೂ ಬಿಜೆಪಿಗೆ ಸಹಕರಿಸಿದೆ. 

ಈ ಬಾರಿ ಜಾರ್ಖಂಡ್ ಚುನಾವಣಾ ಉಸ್ತುವಾರಿಯನ್ನು ಹೊತ್ತಿರುವವರು ಖುದ್ದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರ್ಮ. ತಮ್ಮ ರಾಜ್ಯದಲ್ಲಿ ಅವರು ಬಾಂಗ್ಲಾದೇಶಿ ಅಕ್ರಮ ವಲಸಿಗರಿಗೆ ವಿರುದ್ಧವಾದ ನೀತಿ ಅನುಸರಿಸುತ್ತ ಹಿಂದು ಏಕಮತ ಸಾಧಿಸಿರುವುದಕ್ಕೇ ಪ್ರಸಿದ್ಧರು. 

ಬಿರ್ಸಾ ಮುಂಡಾರಂಥ ಕ್ರಾಂತಿಕಾರಿಗಳ ಚರಿತ್ರೆಯ ಸ್ಮೃತಿ ಹೊಂದಿರುವ ನೆಲ ಜಾರ್ಖಂಡ್. ಬ್ರಿಟಿಷ್ ಭಾರತದಲ್ಲಿ ಪ್ರಾರಂಭದಲ್ಲಿ ಕ್ರೈಸ್ತಮತಕ್ಕೆ ಮತಾಂತರವಾಗಿದ್ದ ಬಿರ್ಸಾ ಮುಂಡಾ, ನಂತರ ಇಂಗ್ಲಿಷರು ಈ ಮತಾಂತರದ ಮೂಲಕ ಸ್ಥಳೀಯರ ಜಮೀನು-ಸಂಪತ್ತುಗಳನ್ನು ಲೂಟಿ ಮಾಡುವುದಕ್ಕೆ ಮುಂದಾಗಿದ್ದರೆಂದರಿತು ತನ್ನದೇ ಮತ ಸ್ಥಾಪನೆ ಮಾಡುತ್ತಾರೆ. ಇಂಥ ಕಥನಗಳು ಹಾಗೂ ಬುಡಕಟ್ಟು ಸಮುದಾಯದ ದ್ರೌಪದಿ ಮುರ್ಮು ಅವರನ್ನು ತಾನು ಸರ್ವೋಚ್ಚ ಸ್ಥಾನಕ್ಕೆ ಆಯ್ಕೆ ಮಾಡಿರುವುದು ಇವನ್ನೆಲ್ಲ ಬಿಜೆಪಿ ಬಳಸಿಕೊಳ್ಳುತ್ತಿದೆ. 

ಜಾರ್ಖಂಡ್ ರಾಜ್ಯದ ಸಂತಾಲ್ ಪರಗಣ ಜಿಲ್ಲೆಯಲ್ಲಿ ಬುಡಕಟ್ಟು ಜನಸಂಖ್ಯೆಯು ಶೇ. 44ರಿಂದ ಶೇ. 28ಕ್ಕೆ ಇಳಿದಿದೆ. ಇದಕ್ಕೆ ಅಕ್ರಮ ಬಾಂಗ್ಲಾ ವಲಸಿಗರ ವಾಸ್ತವ್ಯವೇ ಕಾರಣ ಎಂಬುದು ಜಾರ್ಖಂಡ್ ನಲ್ಲಿ ಪ್ರಚಾರಗೈದಿರುವ ಕೇಂದ್ರ ಕೃಷಿಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಸೇರಿದಂತೆ ಹಲವರು ಹೇಳಿರುವ ಮಾತು. ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ರಚಾರ ಭಾಷಣವೊಂದರಲ್ಲಿ ಆಡಿದ ಮಾತುಗಳು ಹೀಗಿದ್ದವು - “ವೋಟಿಗಾಗಿ ಅವರು ಬಾಂಗ್ಲಾದೇಶಿ ಅಕ್ರಮ ವಲಸಿಗರನ್ನು ಜಾರ್ಖಂಡ್ ರಾಜ್ಯದುದ್ದಕ್ಕೂ ತಂದು ಕೂರಿಸುತ್ತಿದ್ದಾರೆ. ಶಾಲೆಗಳಲ್ಲಿ ಸರಸ್ವತಿ ವಂದನೆಗೆ ಅಡ್ಡಿಪಡಿಸಲಾಗ್ತಿದೆ, ಉತ್ಸವಗಳ ಮೇಲೆ ಕಲ್ಲುತೂರಾಟ ಆರಂಭವಾಗಿದೆ ಅಂದಮೇಲೆ ಈ ಪರಿಸ್ಥಿತಿ ಎಷ್ಟು ಚಿಂತಾಜನಕವಾಗಿದೆ ಎಂಬುದು ಸ್ಪಷ್ಟವಾಗ್ತಿದೆ. ಅವರು ನಿಮ್ಮ ರೋಟಿಯನ್ನೂ ಕಸಿಯುತ್ತಿದ್ದಾರೆ, ಹೆಣ್ಣುಮಕ್ಕಳನ್ನೂ ಕಸಿಯುತ್ತಿದ್ದಾರೆ ಹಾಗೂ ನಿಮ್ಮ ಭೂಮಿಯನ್ನೂ ಆಕ್ರಮಿಸುತ್ತಿದ್ದಾರೆ. ಜೆಎಂಎಂ-ಕಾಂಗ್ರೆಸ್-ಆರ್ಜೆಡಿಗಳ ಈ ನೀತಿ ಮುಂದುವರಿದುಕೊಂಡೇ ಹೋದರೆ ಜಾರ್ಖಂಡಿನ ಬುಡಕಟ್ಟು ಜನಸಂಖ್ಯೆ ಕುಸಿದುಹೋಗುತ್ತದೆ… ”. 

- ಚೈತನ್ಯ ಹೆಗಡೆ

cchegde@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com