ಲೇಸರ್ ಚಿಕಿತ್ಸೆ ಬಗ್ಗೆ ನೀವು ತಿಳಿಯಬೇಕಾದ ಅಂಶಗಳಿವು... (ಕುಶಲವೇ ಕ್ಷೇಮವೇ)

ಲೇಸರ್ ಎನ್ನುವುದು ಇಂಗ್ಲೀಷಿನ ಲೈಟ್ ಆಂಪ್ಲಿಫಿಕೇಶನ್ ಬೈ ಸ್ಟಿಮ್ಯುಲೇಟೆಡ್ ಎಮಿಶನ್ ಆಫ್ ರೇಡಿಯೇಶನ್ ಎಂಬುದರ ಹ್ರಸ್ವ ರೂಪ. ಅಂದರೆ ಉದ್ದೀಪಿಸಿದ ಬೆಳಕಿನ ಹೊರಸೂಸಿನಿಂದ ಬೆಳಕಿನ ವರ್ಧನೆ.
Laser treatment
ಲೇಸರ್ ಚಿಕಿತ್ಸೆonline desk
Updated on

ಲೇಸರ್ ಚಿಕಿತ್ಸೆಯ ಬಗ್ಗೆ ನಾವು ಇತ್ತೀಚೆಗೆ ಬಹಳಷ್ಟು ವಿಷಯಗಳನ್ನು ಕೇಳುತ್ತಿದ್ದೇವೆ. ಹಲವಾರು ಆರೋಗ್ಯ ಸಮಸ್ಯೆಗಳಿಗೆ ಲೇಸರ್ ಚಿಕಿತ್ಸೆಯ ಮೂಲಕ ಪರಿಹಾರ ಸಾಧ್ಯವಿದೆ. ಈ ಕಾರಣದಿಂದ ಹಲವಾರು ನಗರಗಳಲ್ಲಿ ಲೇಸರ್ ಚಿಕಿತ್ಸೆಯನ್ನು ನೀಡುವ ಆಸ್ಪತ್ರೆಗಳು ತಲೆ ಎತ್ತಿವೆ. ಹಾಗೆಯೇ ಜನರೂ ಲೇಸರ್ ಚಿಕಿತ್ಸೆಯ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ.

ಲೇಸರ್ ಚಿಕಿತ್ಸೆ ಎಂದರೇನು?

ಲೇಸರ್ ಎನ್ನುವುದು ಇಂಗ್ಲೀಷಿನ ಲೈಟ್ ಆಂಪ್ಲಿಫಿಕೇಶನ್ ಬೈ ಸ್ಟಿಮ್ಯುಲೇಟೆಡ್ ಎಮಿಶನ್ ಆಫ್ ರೇಡಿಯೇಶನ್ ಎಂಬುದರ ಹ್ರಸ್ವ ರೂಪ. ಅಂದರೆ ಉದ್ದೀಪಿಸಿದ ಬೆಳಕಿನ ಹೊರಸೂಸಿನಿಂದ ಬೆಳಕಿನ ವರ್ಧನೆ. ಇನ್ನೂ ಸರಳವಾಗಿ ಹೇಳುವುದಾದರೆ ಬೆಳಕಿನ ಅಲೆಗಳನ್ನೆಲ್ಲಾ ಪರಸ್ಪರ ಜೋಡಿಸಿ, ಒಟ್ಟು ಮಾಡಿ ಹೆಚ್ಚು ಶಕ್ತಿಯುತವಾದ ಸಾಂದ್ರ ಮಾಡಿ ಪಡೆದ ಬೆಳಕು. ಈ ಶಕ್ತಿಯುತ ಕಿರಣಗಳನ್ನು ರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಅಲ್ಟ್ರಾವಯಲೆಟ್ ಲೇಸರ್, ರೇಡಿಯೋ ಅಲೆಗಳ ಲೇಸರ್, ಅಲ್ಲದೆ ಮೈಕ್ರೋ ಅಲೆಗಳ ಲೇಸರ್ ಕೂಡ ಪಡೆಯಲು ಸಾಧ್ಯವಿದೆ. ಇನ್ನು ಲೇಸರ್ ಚಿಕಿತ್ಸೆ ಎಂದರೆ ವಿವಿಧ ವೈದ್ಯಕೀಯ ಅಥವಾ ಕಾಸ್ಮೆಟಿಕ್ ಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಲೇಸರ್ಗಳಿಂದ ಹೊರಸೂಸಲ್ಪಟ್ಟ ಕೇಂದ್ರೀಕೃತ ಬೆಳಕಿನ ಶಕ್ತಿಯ ಬಳಕೆ.

ಲೇಸರ್ ಚಿಕಿತ್ಸೆ ಹೇಗೆ ನಡೆಯುತ್ತದೆ?

ಲೇಸರ್ ನಿರ್ದಿಷ್ಟ ತರಂಗಾಂತರಗಳಲ್ಲಿ ಬೆಳಕನ್ನು ಹೊರಸೂಸುತ್ತದೆ. ಇದರ ಮೂಲಕ ದೇಹದಲ್ಲಿನ ನಿರ್ದಿಷ್ಟ ಅಂಗಾಂಶಗಳು ಅಥವಾ ಜೀವಕೋಶಗಳನ್ನು ಗುರಿಯಾಗಿಸಿ ಅಂಗಾಂಶವನ್ನು ಕತ್ತರಿಸಬಹುದು, ಸುಡಬಹುದು ಅಥವಾ ನಾಶಪಡಿಸಬಹುದು. ಜೊತೆಗೆ ಕೆಲವು ಲೇಸರ್ ಮೂಲಕ ಜೈವಿಕ ಪ್ರತಿಕ್ರಿಯೆಗಳನ್ನು ಉತ್ತೇಜಿಸಬಹುದು. ಸುತ್ತಮುತ್ತಲಿನ ಪ್ರದೇಶಗಳಿಗೆ ಹಾನಿಯಾಗದಂತೆ ಲೇಸರ್ಗಳು ದೇಹದಲ್ಲಿನ ಅಂಗಾಂಶಗಳನ್ನು ನಿಖರವಾಗಿ ಗುರಿಯಾಗಿಸಿ ಬೇಕಾದ ಹಿತಕಾರಿ ಪರಿಣಾಮಗಳನ್ನು ಪಡೆಯಬಹುದು. ಇಂದು ಬೃಹತ್ತಾಗಿ ಬೆಳೆದಿರುವ ತಂತ್ರಜ್ಞಾನದ ಅನ್ವಯವು ಚರ್ಮರೋಗ, ನೇತ್ರವಿಜ್ಞಾನ, ಆಂಕೊಲಾಜಿ ಮತ್ತು ಶಸ್ತ್ರಚಿಕಿತ್ಸೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ವಿಪುಲವಾಗಿದೆ.

ಲೇಸರ್ ವಿಕಿರಣದ ಇತಿಹಾಸ

ಲೇಸರ್ ಪರಿಕಲ್ಪನೆಯ ಸಿದ್ಧಾಂತವನ್ನು 1917ರಲ್ಲಿ ಭೌತವಿಜ್ಞಾನಿ ಆಲ್ಬರ್ಟ್ ಐನ್ ಸ್ಟೈನ್ ವಿಕಿರಣದ ಪ್ರಚೋದಿತ ಹೊರಸೂಸುವಿಕೆಯ ತತ್ವಗಳನ್ನು ವಿವರಿಸಿದಾಗ ಮಂಡಿಸಿದರು. ಮೂಲತ: ಕೆಲಸ ಮಾಡುವ ಅಂದರೆ ಫಂಕ್ಷನಲ್ ಲೇಸರನ್ನು 1960ರಲ್ಲಿ ಥಿಯೋಡರ್ ಮೈಮನ್ ಅವರು ಸಿಂಥೆಟಿಕ್ ರೂಬಿ ಸ್ಫಟಿಕವನ್ನು ಬಳಸಿ ಮೊದಲ ಬಾರಿಗೆ ಅಭಿವೃದ್ಧಿಪಡಿಸಿದರು. ಕಾರ್ಬನ್ ಡೈ ಆಕ್ಸೈಡ್ ಲೇಸರ್ಗಳು ಮತ್ತು ಆರ್ಗಾನ್ ಲೇಸರ್ಗಳ ಅಭಿವೃದ್ಧಿಯೊಂದಿಗೆ 1960 ಮತ್ತು 1970ರಲ್ಲಿ ಔಷಧದಲ್ಲಿ ಲೇಸರ್ಗಳ ರೂಪಾಂತರವು ಪ್ರಾರಂಭವಾಯಿತು. 1960ರ ದಶಕದಲ್ಲಿ ಲೇಸರ್ ಕಿರಣಗಳನ್ನು ಕಣ್ಣಿನ ರೆಟಿನಾದ ದುರಸ್ತಿಗಾಗಿ ಮತ್ತು ಹಚ್ಚೆಗಳನ್ನು ತೆಗೆದುಹಾಕಲು ಬಳಸಲಾಗುತ್ತಿತ್ತು. ನಂತರ ಅಂಗಾಂಶಗಳನ್ನು ಕತ್ತರಿಸಲು ಮತ್ತು ಶಸ್ತ್ರಚಿಕಿತ್ಸೆಯಲ್ಲಿ ಬಳಸಲು ಆರಂಭಿಸಲಾಯಿತು. 1990ರ ದಶಕದಲ್ಲಿ ಲೇಸರ್ ಕಣ್ಣಿನ ಶಸ್ತ್ರಚಿಕಿತ್ಸೆ (ಲಸಿಕ್) ಸೇರಿದಂತೆ ನೋವಿಲ್ಲದ ಚಿಕಿತ್ಸೆಗಳಿಗೆ ಲೇಸರ್ಗಳನ್ನು ಸಂಸ್ಕರಿಸಲಾಯಿತು. ಇಂದು, ಕನಿಷ್ಠ ನೋವುಂಟುಮಾಡುವ ಕಾರ್ಯವಿಧಾನಗಳು, ಸೌಂದರ್ಯವರ್ಧಕ ವರ್ಧನೆಗಳು ಮತ್ತು ಮುಂದುವರಿದ ಕ್ಯಾನ್ಸರ್ ಚಿಕಿತ್ಸೆಗಳಲ್ಲಿ ಅವಿಭಾಜ್ಯ ಅಂಗವಾಗಿದೆ.

Laser treatment
ನಡಿಗೆಯಿಂದ ಆರೋಗ್ಯಕ್ಕೆ ಉಂಟಾಗುವ ಪ್ರಯೋಜನಗಳು.. (ಕುಶಲವೇ ಕ್ಷೇಮವೇ)

ಲೇಸರ್ ಚಿಕಿತ್ಸೆಯನ್ನು ಎಲ್ಲೆಲ್ಲಿ ಬಳಸಲಾಗುತ್ತದೆ?

ಲೇಸರನ್ನು ಹಚ್ಚೆ ತೆಗೆಯುವುದು, ಕೂದಲು ತೆಗೆಯುವುದು, ಮೊಡವೆ, ಅಥವಾ ಚರ್ಮದ ವರ್ಣದ್ರವ್ಯದ ಚಿಕಿತ್ಸೆ ಮತ್ತು ಚರ್ಮದ ಪುನರುಜ್ಜೀವನ ಮತ್ತು ಬಿಗಿಗೊಳಿಸುವಿಕೆಗಾಗಿ ಬಳಸಲಾಗುತ್ತದೆ. ಕಣ್ಣಿನ ದೃಷ್ಟಿ ಉತ್ತಮಪಡಿಸಲು ಲಸಿಕ್, ರೆಟಿನಾ ಶಸ್ತ್ರಚಿಕಿತ್ಸೆಗಾಗಿ, ಅಸಹಜವಾಗಿ ದೇಹದಲ್ಲಿ ಬೆಳೆದ ಗಡ್ಡೆಗಳನ್ನು ತೆಗೆಯಲು, ಹಲ್ಲುಗಳನ್ನು ಬಿಳುಪುಗೊಳಿಸಲು, ಸುಕ್ಕುಗಳನ್ನು ಸರಿಪಡಿಸಲು, ಲಿಪೋಸಕ್ಷನ್, ಲಿಥೊಟ್ರಿಪ್ಸಿ (ಮೂತ್ರಪಿಂಡದ ಕಲ್ಲುಗಳನ್ನು ಒಡೆಯವುದು), ಹಲ್ಲಿನ ವಸಡು ಸಮಸ್ಯೆ ಪರಿಹಾರ, ಮತ್ತಿತರ ವಿಧಾನಗಳಲ್ಲಿ ಬಳಸಲಾಗುತ್ತಿದೆ.

ಲೇಸರ್ ಚಿಕಿತ್ಸೆ ನೋವುಂಟು ಮಾಡುತ್ತದೆಯೇ?

ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗಳಿಗಿಂತ ಲೇಸರ್ ಚಿಕಿತ್ಸೆ ಸಾಮಾನ್ಯವಾಗಿ ಕಡಿಮೆ ನೋವಿನ ಚಿಕಿತ್ಸೆಯಾಗಿದೆ. ಚಿಕಿತ್ಸೆಯ ಸಮಯದಲ್ಲಿ ರೋಗಿಗಳು ಸೌಮ್ಯ ಅಸ್ವಸ್ಥತೆ ಅಥವಾ ಉಷ್ಣದ ಸಂವೇದನೆಯನ್ನು ಅನುಭವಿಸಬಹುದು. ಸ್ಥಳೀಯ ಅರಿವಳಿಕೆ ಅಥವಾ ತಂಪಾಗಿಸುವ ತಂತ್ರಗಳನ್ನು ಸಾಮಾನ್ಯವಾಗಿ ನೋವನ್ನು ಕಡಿಮೆ ಮಾಡಲು ಬಳಸಲಾಗುತ್ತದೆ. ಲೇಸರ್ ಚಿಕಿತ್ಸೆಯ ನಂತರ ಬಾಧಿತ ಭಾಗ ತಾತ್ಕಾಲಿಕವಾಗಿ ಕೆಂಪಾಗುವುದು. ಊತ ಅಥವಾ ನೋವು ಇರಬಹುದು, ಆದರೆ ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗಳಿಗೆ ಹೋಲಿಸಿದರೆ ಚೇತರಿಸಿಕೊಳ್ಳುವುದು ತ್ವರಿತವಾಗಿರುತ್ತದೆ.

ಲೇಸರ್ ಚಿಕಿತ್ಸೆ ದುಬಾರಿಯೇ?

ಲೇಸರ್ ಚಿಕಿತ್ಸೆಗಳ ವೆಚ್ಚ ಉಪಯೋಗಕ್ಕೆ ತಕ್ಕಂತೆ ಹೆಚ್ಚು ಕಡಿಮೆ ಆಗಬಹುದು. ಅಪರೂಪದ ಸಂದರ್ಭಗಳಲ್ಲಿ ತಾತ್ಕಾಲಿಕ ಕೆಂಪು, ಊತ ಅಥವಾ ಗುರುತಾಗಿ ಬಾಧಿಸಬಹುದು. ಇದು ಎಲ್ಲಾ ಚರ್ಮದ ಬಗೆಗಳಿಗೆ ಸೂಕ್ತವಲ್ಲ. ಅನುಚಿತ ಅಥವಾ ಅತಿಯಾದ ಲೇಸರ್ ಬಳಕೆಯು ಅಂಗಾಂಶಗಳನ್ನು ಹಾನಿಗೊಳಿಸುತ್ತದೆ.

ಇಷ್ಟಾಗಿಯೂ ಲೇಸರ್ ಚಿಕಿತ್ಸೆಗಳು ವೈದ್ಯಕೀಯ ಮತ್ತು ಸೌಂದರ್ಯವರ್ಧಕ ವಿಧಾನಗಳಲ್ಲಿ ಕ್ರಾಂತಿಯನ್ನುಂಟುಮಾಡಿವೆ, ಕಡಿಮೆ ಅಪಾಯ ಮತ್ತು ವೇಗವಾಗಿ ಚೇತರಿಸಿಕೊಳ್ಳುವ ಸಮಯಗಳೊಂದಿಗೆ ಪರಿಣಾಮಕಾರಿ ಪರಿಹಾರಗಳನ್ನು ನೀಡುತ್ತವೆ. ಲೇಸರ್ ಚಿಕಿತ್ಸೆಯನ್ನು ಪಡೆಯುವ ಮೊದಲು ರೋಗಿಗೆ ಲೇಸರ್ ಚಿಕಿತ್ಸೆ ಎಂದರೇನು, ಅದರ ಸಾಧಕಬಾಧಕಗಳು ಮತ್ತು ಖರ್ಚುವೆಚ್ಚಗಳ ಸಂಪೂರ್ಣ ವಿವರಗಳು ಗೊತ್ತಿರಬೇಕು. ಈ ಚಿಕಿತ್ಸೆಯನ್ನು ಪಡೆಯುವ ನಿರ್ಧಾರ ಇಂತಹ ಎಲ್ಲಾ ವಿಷಯಗಳನ್ನು ತಿಳಿದುಕೊಂಡು ಮಾಡಬೇಕು, ಇದು ಸುಲಭವಾದ ವಿಧಾನ ಎಂದು ಮಾಡಿಸಿಕೊಳ್ಳಬಾರದು. ಈ ದಿಸೆಯಲ್ಲಿ ಜನರಿಗೆ ವೈದ್ಯರ ಸಲಹೆ ಮತ್ತು ಮಾರ್ಗದರ್ಶನ ಅತ್ಯಗತ್ಯವಾಗಿ ಬೇಕೇಬೇಕು.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com