ನಡಿಗೆ ಅಂದರೆ ವಾಕಿಂಗ್ ವ್ಯಾಯಾಮದ ಸರಳ ಮತ್ತು ಅತ್ಯಂತ ಸುಲಭ ರೂಪಗಳಲ್ಲಿ ಒಂದಾಗಿದೆ. ನಡಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹೆಚ್ಚಿಸಲು ಸಾಕಷ್ಟು ಪರಿಣಾಮಕಾರಿಯಾಗಿದೆ. ಇದಕ್ಕೆ ಯಾವುದೇ ವಿಶೇಷ ಉಪಕರಣಗಳ ಅಗತ್ಯವಿಲ್ಲ.
ಬಹುತೇಕ ಜನರು ಎಲ್ಲಿಯಾದರೂ ನಡೆಯಬಹುದು. ಆದರೂ ಉದ್ಯಾನಗಳು ಮತ್ತು ಹಚ್ಚಹಸುರಿನ ನಡುವೆ ನಡೆಯುವುದು ಉತ್ತಮ. ಎಲ್ಲಾ ವಯಸ್ಸಿನ ಜನರಿಗೆ ನಡಿಗೆಯು ಸೂಕ್ತವಾಗಿದೆ. ನಿಯಮಿತವಾದ ನಡಿಗೆಯು ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸುವುದರಿಂದ ಹಿಡಿದು ಮನಸ್ಥಿತಿಯನ್ನು ಉತ್ತಮಪಡಿಸುವ ತನಕ ಹಲವಾರು ಆರೋಗ್ಯ ಪ್ರಯೋಜನಗಳನ್ನು ಉಂಟುಮಾಡುತ್ತದೆ. ನಡಿಗೆಯು ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸಿಕೊಳ್ಳಲು ಬಯಸುವವರಿಗೆ ಅತ್ಯಂತ ಸೂಕ್ತವಾದ ಆಯ್ಕೆಯಾಗಿದೆ.
ಹೃದಯದ ಆರೋಗ್ಯಕ್ಕೆ ನಡಿಗೆ ಅತ್ಯುತ್ತಮವಾಗಿದೆ. ನಿಯಮಿತ ನಡಿಗೆ ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆಗಳು ಈಗಾಗಲೇ ತಿಳಿಸಿವೆ. ಚುರುಕಾದ/ಬಿರುಸು ನಡಿಗೆ ಹೃದಯವನ್ನು ಬಲಪಡಿಸಲು, ರಕ್ತ ಪರಿಚಲನೆ ಸುಧಾರಿಸಲು ಮತ್ತು ಕಡಿಮೆ ರಕ್ತದೊತ್ತಡಕ್ಕೆ ಸಹಾಯ ಮಾಡುತ್ತದೆ. ಇದು ಹೃದಯರಕ್ತನಾಳದ ಆರೋಗ್ಯಕ್ಕೆ ಅವಶ್ಯಕವಾಗಿದೆ. ಅಧ್ಯಯನಗಳ ಪ್ರಕಾರ ಪ್ರತಿದಿನ 30 ರಿಂದ 60 ನಿಮಿಷಗಳ ನಡಿಗೆಯಲ್ಲಿ ತೊಡಗುವುದರಿಂದ ಹೃದಯದ ಕಾಯಿಲೆಯ ಅಪಾಯವನ್ನು 19%ರಷ್ಟು ಕಡಿಮೆ ಮಾಡಬಹುದು. ನಡಿಗೆಯ ಸರಳ ಕ್ರಿಯೆಯು ಹೃದಯವನ್ನು ಮತ್ತು ಅದರ ಕಾರ್ಯವನ್ನು ಬಲಪಡಿಸುತ್ತದೆ.
ನಡಿಗೆ ಕೂಡ ತೂಕ ನಿರ್ವಹಣೆಗೆ ಸಹಾಯಕವಾಗಿದೆ ಮತ್ತು ದೇಹದಲ್ಲಿ ಹೆಚ್ಚಾಗಿರುವ ಕೊಬ್ಬನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಓಟ ಅಥವಾ ಜಿಮ್ ವರ್ಕೌಟುಗಳಿಗಿಂತ ಬಿರುಸು ಕಡಿಮೆ ತೀವ್ರವಾಗಿದ್ದರೂ ಬಿರುಸು ನಡಿಗೆಯ ಮೂಲಕ ಕ್ಯಾಲೊರಿಗಳನ್ನು ಪರಿಣಾಮಕಾರಿಯಾಗಿ ಕರಗಿಸಬಹುದು. ನಡಿಗೆ ದೇಹದ ಚಯಾಪಚಯ ಕ್ರಿಯೆಯನ್ನು (ಮೆಟಾಬಾಲಿಕ್ ಪ್ರೋಸೆಸ್) ಸುಧಾರಿಸುತ್ತದೆ. ಅಂದರೆ ದೇಹವು ಕ್ಯಾಲೊರಿಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ದಹಿಸುತ್ತದೆ. ಇದಲ್ಲದೇ ಮಧುಮೇಹ ಸೇರಿದಂತೆ ಬೊಜ್ಜು ಸಂಬಂಧಿತ ಪರಿಸ್ಥಿತಿಗಳನ್ನು ತಡೆಯುತ್ತದೆ.
ನಡಿಗೆಯು ಕೀಲುಗಳ ಮೇಲೆ ಮೃದು ಪರಿಣಾಮವನ್ನು ಉಂಟುಮಾಡುತ್ತದೆ. ಆದ್ದರಿಂದ ನಡಿಗೆ ಸಂಧಿವಾತ ಅಥವಾ ಕೀಲು ನೋವಿನ ಸಮಸ್ಯೆ ಇರುವ ಜನರಿಗೆ ಸೂಕ್ತವಾಗಿದೆ. ನಡಿಗೆಯು ಬಾಧಿತ ಪ್ರದೇಶಗಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ಬಿಗಿತವನ್ನು ನಿವಾರಿಸಲು ಸುಧಾರಿಸಲು ಸಹಾಯ ಮಾಡುತ್ತದೆ. ಮೂಳೆ ಸಾಂದ್ರತೆಯನ್ನು ಕಾಪಾಡಿಕೊಳ್ಳಲು ನಡಿಗೆ ದೇಹವನ್ನು ಉತ್ತೇಜಿಸುತ್ತದೆ.
ನಡಿಗೆಯಂತಹ ನಿಯಮಿತ ದೈಹಿಕ ಚಟುವಟಿಕೆಯು ದೇಹದ ರೋಗನಿರೋಧಕ ವ್ಯವಸ್ಥೆಯನ್ನು ವರ್ಧಿಸುತ್ತದೆ. ಇಂದಿನ ಜಡ ಜೀವನಶೈಲಿಗೆ ನಡಿಗೆ ಹೇಳಿಮಾಡಿಸಿದ ಚಟುವಟಿಕೆ. ದೇಹವನ್ನು ಹಗುರವಾಗಿಸುವುದರ ಜೊತೆಗೆ ನಡಿಗೆಯು ಸೋಂಕುಗಳ ವಿರುದ್ಧ ಹೋರಾಡಲು ಬಲ ನೀಡುತ್ತದೆ.
ನಡಿಗೆಯು ಜೀರ್ಣಕ್ರಿಯೆಗೆ ಪರಿಣಾಮಕಾರಿಯಾಗಿದೆ. ಊಟದ ನಂತರದ ನಡಿಗೆ, ನಿರ್ದಿಷ್ಟವಾಗಿ, ಹೊಟ್ಟೆ ಮತ್ತು ಕರುಳಿನ ಮೂಲಕ ಆಹಾರವನ್ನು ಹೆಚ್ಚು ವೇಗವಾಗಿ ಚಲಿಸುವ ಮೂಲಕ ತ್ವರಿತ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಹೊಟ್ಟೆ ಉಬ್ಬುವುದು, ಅಸ್ವಸ್ಥತೆ ಮತ್ತು ಮಲಬದ್ಧತೆಯಂತಹ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ನಿಯಮಿತ ವಾಕಿಂಗ್ ಸಹ ಕರುಳಿನ ಕ್ಯಾನ್ಸರಿನ ಅಪಾಯವನ್ನು ಕಡಿಮೆ ಮಾಡುತ್ತದೆ.
ತಕ್ಷಣದ ಆರೋಗ್ಯ ಪ್ರಯೋಜನಗಳನ್ನು ಮೀರಿ ವಾಕಿಂಗ್ ಹಲವಾರು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ, ಉದಾಹರಣೆಗೆ ವಾಕಿಂಗ್ ಟೈಪ್ 2 ಮಧುಮೇಹ, ಅಧಿಕ ರಕ್ತದೊತ್ತಡ, ಮತ್ತು ಕೆಲವು ಕ್ಯಾನ್ಸರ್ಗಳನ್ನು ತಡೆಗಟ್ಟುವ ಚಟುವಟಿಕೆಯಾಗಿದೆ. ಹಾಗೆಯೇ ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು, ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಜೀವನಶೈಲಿ ಸಂಬಂಧಿತ ಸಮಸ್ಯೆಗಳಿಗೆ ವಾಕಿಂಗ್ ಪರಿಹಾರವಾಗಿದೆ.
ನಡಿಗೆಯು ಮನಸ್ಥಿತಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ದೈಹಿಕ ಚಟುವಟಿಕೆಯು ತೃಪ್ತಿಕರ ಹಾರ್ಮೋನು ಎಂಡೋರ್ಫಿನ್ನಿನ ಬಿಡುಗಡೆಯನ್ನು ಉತ್ತೇಜಿಸುತ್ತದೆ. ಇದು ನೈಸರ್ಗಿಕವಾಗಿ ಮನಸ್ಥಿತಿಯ ಸುಧಾರಕ ರಸಾಯನಿಕವಾಗಿದೆ (ಮೂಡ್ ಲಿಫ್ಟರ್). ನಿಯಮಿತವಾಗಿ ನಡಿಗೆ ಮಾಡುವ ಜನರು ಸಾಮಾನ್ಯವಾಗಿ ಸಂತೋಷಕರವಾಗಿ, ಹೆಚ್ಚು ಆಶಾವಾದಿಗಳಾಗಿ ಮತ್ತು ಕಡಿಮೆ ಒತ್ತಡ ಹೊಂದಿರುತ್ತಾರೆ.
ಖಿನ್ನತೆ ಮತ್ತು ಆತಂಕದ ಲಕ್ಷಣಗಳನ್ನು ನಿರ್ವಹಿಸುವಲ್ಲಿ ವಾಕಿಂಗ್ ಪ್ರಬಲ ಸಾಧನವಾಗಿದೆ. ಪ್ರತಿದಿನ ಕನಿಷ್ಠ 30 ನಿಮಿಷಗಳ ವೇಗದ ನಡಿಗೆಯು ಸೌಮ್ಯದಿಂದ ಮಧ್ಯಮ ಖಿನ್ನತೆಗೆ ನೈಸರ್ಗಿಕ ಔಷಧಿಯಂತೆ ಪರಿಣಾಮಕಾರಿಯಾಗಿದೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಹೊರಾಂಗಣದಲ್ಲಿ ನಡೆಯುವುದು, ಅದರಲ್ಲಿಯೂ ವಿಶೇಷವಾಗಿ ಹಸಿರ ನಡುವೆ ಪ್ರಕೃತಿಯಲ್ಲಿ ನಡೆಯುವುದು ಬಹಳ ಹಿತಕಾರಿ. ಏಕೆಂದರೆ ನೈಸರ್ಗಿಕ ಪರಿಸರವು ವಿಶ್ರಾಂತಿಯನ್ನು ಉತ್ತೇಜಿಸುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಯೋಗಕ್ಷೇಮವನ್ನು ಹೆಚ್ಚಿಸುತ್ತದೆ.
ಎಲ್ಲಕ್ಕಿಂತ ಮುಖ್ಯವಾಗಿ ಹಿತಕರ ಭಾವನೆಗಳನ್ನು ವಾಕಿಂಗ್ ಸೃಜಿಸುತ್ತದೆ. ಮನಸ್ಸಿನ ಸೃಜನಶೀಲ ಚಿಂತನೆಯನ್ನು ಉತ್ತೇಜಿಸುತ್ತದೆ. ಈ ಅಭ್ಯಾಸವನ್ನು ಇತಿಹಾಸದುದ್ದಕ್ಕೂ ಪ್ರಸಿದ್ಧ ವಿಜ್ಞಾನಿಗಳು ಮತ್ತು ಚಿಂತಕರು ರೂಢಿಸಿಕೊಂಡಿದ್ದಾರೆ. ಉದಾಹರಣೆಗೆ ಆಲ್ಬರ್ಟ್ ಐನ್ಸ್ಟೈನ್ ಮತ್ತು ಚಾರ್ಲ್ಸ್ ಡಾರ್ವಿನ್, ದೈನಂದಿನ ನಡಿಗೆಯ ಮೂಲಕ ಬದುಕಿಗೆ ಸ್ಫೂರ್ತಿಯನ್ನು ಕಂಡುಕೊಂಡರು. ಸೃಜನಾತ್ಮಕ ಸವಾಲುಗಳನ್ನು ಎದುರಿಸುತ್ತಿರುವ ಅಥವಾ ತಾಜಾ ದೃಷ್ಟಿಕೋನದ ಅಗತ್ಯವಿರುವ ಯಾರಿಗಾದರೂ ನಡಿಗೆಯು ಹೊಸ ಆಲೋಚನೆಗಳನ್ನು ಮೂಡಲು ಸಹಾಯ ಮಾಡುತ್ತದೆ.
ವಾಕಿಂಗ್ ನಿದ್ರೆಯನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ದೇಹದ ಗಡಿಯಾರವನ್ನು (ಸಿರ್ಕಾಡಿಯನ್ ಕ್ಲಾಕ್) ನಿಯಂತ್ರಿಸಲು, ನಿದ್ರಾಹೀನತೆಯನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಗಲಿನ ನಡಿಗೆಯ ಸಮಯದಲ್ಲಿ ನೈಸರ್ಗಿಕ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ನಿದ್ರೆ ಮತ್ತು ಎಚ್ಚರ ಚಕ್ರಗಳನ್ನು ಬಲಪಡಿಸುತ್ತದೆ. ಇಷ್ಟೆಲ್ಲಾ ಪ್ರಯೋಜನಗಳಿರುವ ವಾಕಿಂಗ್ ಅಭ್ಯಾಸವನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು.
Advertisement