ಬದಲಾಗುತ್ತಿದೆ ಹೂಡಿಕೆಯ ವ್ಯಾಖ್ಯೆ: ಹೊಸ ಟ್ರೆಂಡ್ ಬಗ್ಗೆ ತಿಳಿಯಬೇಕಿರುವ ಸಂಗತಿಗಳಿವು... (ಹಣಕ್ಲಾಸು)

ಹಿಂದೆ ದಶಕದಲ್ಲಿ ಆಗುತ್ತಿದ್ದ ಬದಲಾವಣೆ ಈಗ ವರ್ಷದಲ್ಲಿ ಆಗುತ್ತಿದೆ. ನೀವು ಬದುಕಿದ ಕಾಲವನ್ನು ಸ್ವರ್ಣ ಯುಗ ಎನ್ನಬಹುದು. ಇಂದು ಅಸ್ಥಿರತೆ ಎನ್ನುವುದು ಜೀವನದ ಭಾಗವಾಗಿದೆ (ಹಣಕ್ಲಾಸು-438)
Investment
ಹೂಡಿಕೆ (ಸಂಗ್ರಹ ಚಿತ್ರ)online desk
Updated on

ರಾಘವೇಂದ್ರ ರಾವ್ ಮೂಲತಃ ಬ್ಯಾಂಕರ್. ಭಾರತದ ಪ್ರಸಿದ್ಧ ಷೆಡ್ಯೂಲ್ಡ್ ಬ್ಯಾಂಕಿನಲ್ಲಿ ಮ್ಯಾನೇಜರ್ ಹುದ್ದೆಯಿಂದ ನಿವೃತ್ತರಾಗಿದ್ದಾರೆ. ಬ್ಯಾಂಕಿನಲ್ಲಿ ಕೆಲಸದಲ್ಲಿದ್ದ ಕಾರಣ ಸರಕಾರದ ಅಭಯ ಇರುವ ರಿಸ್ಕ್ ಇಲ್ಲದ ಹೂಡಿಕೆಗಳಲ್ಲಿ ಹಣವನ್ನು ತೊಡಗಿಸಿಕೊಂಡು ಬಂದಿದ್ದಾರೆ. ಹೊರಜಗತ್ತಿನ ಜನರ ಬವಣೆಗಳಿಗೆ ಹೋಲಿಸಿದರೆ ಪರವಾಗಿಲ್ಲ ಎನ್ನುವ ಮಟ್ಟದ ಆರ್ಥಿಕ ಭದ್ರತೆ ಕೂಡ ಅವರಲ್ಲಿದೆ. ತಮ್ಮ ಸೇ ನೋ ಟು ರಿಸ್ಕ್ ಪಾಲಿಸಿಯನ್ನು ತಮ್ಮ ಮಗ ಸೂರ್ಯ ಪ್ರಕಾಶ್ ರಾವ್ ಮೇಲೂ ಹೇರಲು ಹೊರಟ್ಟಿದ್ದಾರೆ. ಸೂರ್ಯ ಈಗಷ್ಟೇ ಕೆಲಸಕ್ಕೆ ಸೇರಿರುವ ಇಂಜಿನಿಯರ್.

ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಬಲ್ಲ ಹುಡುಗ. ಮನೆಯಲ್ಲಿ ಸ್ವಲ್ಪ ವಾಗ್ವಾದ ಆಗಿದೆ. ಹಿಂದೆ ದಶಕದಲ್ಲಿ ಆಗುತ್ತಿದ್ದ ಬದಲಾವಣೆ ಈಗ ವರ್ಷದಲ್ಲಿ ಆಗುತ್ತಿದೆ. ನೀವು ಬದುಕಿದ ಕಾಲವನ್ನು ಸ್ವರ್ಣ ಯುಗ ಎನ್ನಬಹುದು. ಇಂದು ಅಸ್ಥಿರತೆ ಎನ್ನುವುದು ಜೀವನದ ಭಾಗವಾಗಿದೆ. ಜೊತೆಗೆ ನೀವು ಹೇಳುವ ಸಾಂಪ್ರದಾಯಿಕ ಹೂಡಿಕೆಗಳಿಂದ ಹಣ ತನ್ನ ಮೌಲ್ಯ ಕಳೆದುಕೊಳ್ಳುತ್ತದೆಯೆ ಹೊರತು ಹಣದುಬ್ಬರದ ಸನಿಹಕ್ಕೂ ಬರುವುದಿಲ್ಲ. ಹಣದುಬ್ಬರವನ್ನು ಮೀರಿಸಿ ಹಣವನ್ನು ಬೆಳೆಸಬೇಕಾದರೆ ಅದನ್ನು ಅಸಾಂಪ್ರದಾಯಿಕ ಹೂಡಿಕೆಯಲ್ಲಿ ತೊಡಗಿಸಬೇಕು ಎನ್ನುವ ಮಾತುಗಳನ್ನು ಸೂರ್ಯ , ರಾಘವೇಂದ್ರ ರಾಯರಿಗೆ ಹೇಳಿದ್ದಾರೆ. ಅದು ಅವರಿಗೆ ರುಚಿಸಿಲ್ಲ. ಯಾವುದು ಸರಿ? ಯಾವುದು ಉತ್ತಮ ಎನ್ನುವ ಪ್ರಶ್ನೆಯ ಜೊತೆಗೆ ಮಗನನ್ನು ಕರೆತಂದಿದ್ದರು.

ಅವರಿಗೆ ಸಾಂಪ್ರದಾಯಿಕ ಹೂಡಿಕೆ ಎಂದರೇನು? ಅಸಾಂಪ್ರದಾಯಿಕ ಹೂಡಿಕೆ ಎಂದರೇನು? ಎಲ್ಲಿ ಹೂಡಿಕೆ ಮಾಡಿದರೆ ಅಪಾಯದ ಪ್ರಮಾಣ ಎಷ್ಟು? ಇಂತಹ ಹೂಡಿಕೆಯಿಂದ ಎಷ್ಟು ಹಣವನ್ನು ನಿರೀಕ್ಷಿಸಬಹುದು? ಎನ್ನುವ ಅಂಶಗಳನ್ನು ಆವರಿಗೆ ಅರ್ಥವಾಗುವ ರೀತಿಯಲ್ಲಿ ವಿಭಜಿಸಿ ಹೇಳಲು ಬೇಕಾದ ತಯಾರಿಯನ್ನು ಮಾಡಿಕೊಂಡೆ. ಆದರೆ ಎಲ್ಲದಕ್ಕಿಂತ ಮೊದಲಿಗೆ ರಾಯರಲ್ಲಿದ್ದ ನನ್ನ ದಾರಿಯೇ ಸರಿ ಎನ್ನುವ ಮನಸ್ಥಿತಿಯಿಂದ ಅವರನ್ನು ಹೊರತರಬೇಕಿತ್ತು. ಹೀಗೆ ಮಾಡುವ ಪ್ರಕ್ರಿಯೆಯಲ್ಲಿ ಅವರ ಮನಸ್ಸಿಗೂ ನೋವಾಗಬಾರದಾಗಿತ್ತು. ಹೀಗಾಗಿ ರಾಯರ ಕುರಿತು 'ರಾಯರೇ, ನೀವು ಹೇಳಿದ ಹೂಡಿಕೆ, ನಿಮ್ಮ ಮಗ ಹೇಳಿದ ಹೂಡಿಕೆಗಳ ತುಲನೆ ಮಾಡೋಣ, ಲೆಕ್ಕಾಚಾರ ಹಾಕೋಣ, ಯಾವುದು ಬೆಸ್ಟ್ ಎನ್ನಿಸಿದರೆ ಅದರಲ್ಲಿ ಹೂಡಿಕೆ ಮಾಡೋಣ. ಇದರಲ್ಲಿ ನೀವು vs ಅವನು ಅನ್ನುವಂತಹದು ಏನಿಲ್ಲ. ಯಾವುದು ಹೆಚ್ಚು ಆದಾಯವನ್ನು ನೀಡುತ್ತದೆ. ಅದಕ್ಕೆ ಅಪಾಯವೆಷ್ಟು ನೋಡೋಣ. ಅಪಾಯಕ್ಕೆ ತಕ್ಕ ಆದಾಯ ಎನ್ನಿಸಿದರೆ ಮುಂದುವೆರೆಯೋಣ ಇಲ್ಲದಿದ್ದರೆ ಬೇಡ' ಎನ್ನುವ ಮಾತುಗಳನ್ನು ಆಡಿದೆ. ರಾಯರ ಮನಸ್ಸು ತಿಳಿಯಾಯ್ತು.

ಎಲ್ಲಕ್ಕೂ ಮೊದಲಿಗೆ ಈ ರೀತಿಯ ವಿಂಗಡಣೆ ಅರ್ಥ ಕಳೆದುಕೊಳ್ಳುತ್ತಿದೆ. ಏಕೆಂದರೆ ಹಿಂದೆ ಇದ್ದ ಹೂಡಿಕೆಯ ಅವಕಾಶಗಳು ಕಡಿಮೆ, ಜೊತೆಗೆ ಇಂದಿನ ಮಟ್ಟದ ಹಣದುಬ್ಬರ ಇರಲಿಲ್ಲ ಈ ಕಾರಣದಿಂದ ಹತ್ತಾರು ವರ್ಷ ಆ ಹೂಡಿಕೆಗಳು ಒಂದು ತಲೆಮಾರಿಗೆ ಬೆಸ್ಟ್ ಎನ್ನಿಸಿ ಬಿಟ್ಟಿದೆ. ಇಂದಿನ ಸಮಾಜದ ಪರಿಸ್ಥಿತಿಗೆ ತಕ್ಕಂತೆ ಹಲವಾರು ಹೊಸ ಹೂಡಿಕೆ ಆಯಾಮಗಳು ತೆರೆದುಕೊಂಡಿವೆ. ಹಿಂದಿನ ಹೂಡಿಕೆಗಳಿಗಿಂತ ಭಿನ್ನವಾಗಿರುವ ಕಾರಣ ಅದಕ್ಕೆ ಅಸಾಂಪ್ರದಾಯಿಕ ಎನ್ನುವ ಹೆಸರನ್ನು ನೀಡಲಾಗಿದೆ. ಅಂದರೆ ಹತ್ತಾರು ವರ್ಷ ಪಾಲಿಸಿಕೊಂಡು ಬಂದವು ಟ್ರಡಿಷನಲ್, ಸಂಪ್ರದಾಯಿಕ ಎನ್ನುವ ಹಣೆಪಟ್ಟಿ ಪಡೆದುಕೊಂಡು ಬಿಡುತ್ತವೆ. ಬಹಳಷ್ಟು ವರ್ಷದ ನಂತರ ನಮ್ಮ ಮುಂದೆ ಹೊಸ ದಾರಿ ಎದುರಾದಾಗ ಅದು ಅಸಾಂಪ್ರದಾಯಿಕ ಎನ್ನಿಸಿಕೊಳ್ಳುತ್ತದೆ. ಆದರೆ ನಾವು ಒಂದು ವಿಷಯ ಮರೆತು ಬಿಡುತ್ತೇವೆ. ಹೊಸತರಲ್ಲಿ ಇಂದಿನ ಸಾಂಪ್ರದಾಯಿಕ ಎನ್ನಿಸಿಕೊಂಡ ಹೂಡಿಕೆ ಕೂಡ ಅಸಾಂಪ್ರದಾಯಿಕವೇ ಆಗಿರಬೇಕಲ್ಲವೇ? ಇರಲಿ

ಸಾಂಪ್ರದಾಯಿಕ ಹೂಡಿಕೆಗಳು: ಕೆಳಗಿನ ಹೂಡಿಕೆಗಳನ್ನು ಸಾಂಪ್ರದಾಯಿಕ ಹೂಡಿಕೆಗಳು ಎನ್ನಬಹುದು.

  • ಬ್ಯಾಂಕ್ ಫಿಕ್ಸೆಡ್ ಡೆಪೋಸಿಟ್ಸ್

  • ಪೋಸ್ಟ್ ಆಫೀಸ್ ಡೆಪೋಸಿಟ್ಸ್

  • ಚಿನ್ನದ ಮೇಲಿನ ಹೂಡಿಕೆ

  • ನೆಲದ ಮೇಲಿನ ಹೂಡಿಕೆ

  • ಮನೆಯ ಮೇಲಿನ ಹೂಡಿಕೆ

  • ಬ್ಯಾಂಕು ಮತ್ತು ಪೋಸ್ಟ್ ಆಫೀಸ್ ಗಳಲ್ಲಿ ಮಾಡುವ ರಿಕರಿಂಗ್ ಡೆಪಾಸಿಟ್ಗಳು

  • ಸರಕಾರದ ಅಭಯ ಇರುವ ಡೆಟ್ ಬಾಂಡ್ಗಳು

  • ಸರಕಾರದ ಶ್ರೀರಕ್ಷೆ ಇರುವ ಪಿಪಿಎಫ್, ಸುಕನ್ಯಾ ಸಮೃದ್ಧಿ, ಹಿರಿಯ ನಾಗರಿಕರ ಪಿಂಚಣಿ ಯೋಜನೆ

  • ಇನ್ನಿತರ ಯಾವುದೇ ಹೂಡಿಕೆಯಲ್ಲಿ ಅಪಾಯ ಇಲ್ಲ ಎನ್ನುವಷ್ಟು ಗೌಣವಾಗಿದ್ದರೆ ಅದರ ಮೇಲಿನ ಹೂಡಿಕೆಗಳು

ಕೇವಲ ಒಂದೆರೆಡು ದಶಕದ ಹಿಂದೆ ಮೇಲೆ ಹೇಳಿದವು ಮಾತ್ರ ಸಾಂಪ್ರದಾಯಿಕ ಹೂಡಿಕೆ ಎನ್ನಿಸಿಕೊಡಿದ್ದವು. ಇಂದಿಗೆ ಕೆಳಗಿನವುಗಳು ಕೂಡ ಸಾಂಪ್ರದಾಯಿಕ ಹೂಡಿಕೆ ಎನ್ನುವಷ್ಟರ ಮಟ್ಟಿಗೆ ಬದಲಾಗಿದೆ.

  1. ಷೇರು ಮಾರುಕಟ್ಟೆಯಲ್ಲಿ ಷೇರುಗಳ ಮೇಲೆ ಮತ್ತು ಬಾಂಡ್ಗಳ ಮೇಲಿನ ಹೂಡಿಕೆ

  2. ಮ್ಯೂಚುಯಲ್ ಫಂಡ್ಗಳ ಮೇಲಿನ ಹೂಡಿಕೆ

  3. ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ಸ್ -ಇಖಿಈ

  4. ಇಂಡೆಕ್ಸ್ ಫಂಡ್ಸ್

  5. ಅಪ್ಷನ್ ಟ್ರೇಡಿಂಗ್

ಷೇರು ಮಾರುಕಟ್ಟೆಯಲ್ಲಿ ಮಾಡುವ ಹೂಡಿಕೆ ಕೂಡ ಸಾಂಪ್ರದಾಯಿಕ ಎನ್ನುವುದಾದರೆ ಅಸಾಂಪ್ರದಾಯಿಕ ಹೂಡಿಕೆಗಳು ಯಾವುದು ಎನ್ನುವ ಪ್ರಶ್ನೆ ಬರುತ್ತದೆ. ಯಾವುದು ಅತಿ ಹೆಚ್ಚಿನ ಅಪಾಯವನ್ನು ಜೊತೆಯಲ್ಲಿ ತರುತ್ತದೆ ಅದನ್ನು ಸದ್ಯದ ಮಟ್ಟಿಗೆ ಅಸಾಂಪ್ರದಾಯಿಕ ಹೂಡಿಕೆ ಎನ್ನಬಹುದು. ಮತ್ತು ಯಾವುದು ಜನಸಾಮಾನ್ಯರು, ಸಮಾಜದ ಬಹುಜನರು ಒಪ್ಪುವುದಿಲ್ಲ ಅಂತಹುಗಳ ಮೇಲಿನ ಹೂಡಿಕೆಯನ್ನು ಅಸಾಂಪ್ರದಾಯಿಕ ಹೂಡಿಕೆ ಎನ್ನಬಹುದು. ಕೆಲವೊಮ್ಮೆ ಇದು ಹಾಕಿದ ಹಣವನ್ನು ಹತ್ತಾರು, ನೂರಾರು ಪಟ್ಟು ವೃದ್ಧಿಸಿ ಕೊಡುತ್ತದೆ. ಕೆಲವೊಮ್ಮೆ ಹಾಕಿದ ಮೂಲ ಹಣ ಕೂಡ ಮಾಯವಾಗಿ ಬಿಡುತ್ತದೆ. ಸದ್ಯದ ಕಾಲಘಟ್ಟದಲ್ಲಿ ಕೆಳಗಿನ ಕೆಲವು ಇನ್ಸ್ಟ್ರುಮೆಂಟ್ಗಳ ಮೇಲಿನ ಹೂಡಿಕೆಯನ್ನು ಅಸಾಂಪ್ರದಾಯಿಕ ಎನ್ನಲು ಅಡ್ಡಿಯಿಲ್ಲ. ಮೊದಲೇ ಹೇಳಿದಂತೆ ಮುಂದಿನ ಹತ್ತಿಪ್ಪತ್ತು ವರ್ಷದಲ್ಲಿ ಇವುಗಳು ಕೂಡ ಸಾಂಪ್ರದಾಯಿಕ ಎನ್ನಿಸಿಕೊಳ್ಳಬಹುದು.

  • ಕ್ರಿಪ್ಟೋ ಕರೆನ್ಸಿ ಮೇಲಿನ ಹೂಡಿಕೆ

  • ವೆಂಚರ್ ಕ್ಯಾಪಿಟಲ್

  • ರಿಯಲ್ ಎಸ್ಟೇಟ್ -ಲ್ಯಾಂಡ್ ಬ್ಯಾಂಕಿಂಗ್

  • ಫಾರಿನ್ ಕರೆನ್ಸಿ ಟ್ರೇಡಿಂಗ್

  • ಆಯ್ದ ಮೆಟಲ್ ಟ್ರೇಡಿಂಗ್

  • ಪೆನ್ನಿ ಸ್ಟಾಕ್ಸ್

  • ಕಾಂಟ್ರಾಕ್ಟ್ ಫಾರ್ ಡಿಫ್ಫೆರೆನ್ಸಸ್ (CFD's )

  • ಮಿನಿ ಬಾಂಡ್ಸ್

ಮುಖ್ಯವಾಗಿ ಅಸಾಂಪ್ರದಾಯಿಕ ಹೂಡಿಕೆಗಳಲ್ಲಿ ರಿಸ್ಕ್ ಹೆಚ್ಚಿರುತ್ತದೆ. ಜೊತೆಗೆ ನಾವು ಬಯಸಿದಾಗ ಹಣವನ್ನು ಮರಳಿ ಪಡೆಯಲು ಆಗುವುದಿಲ್ಲ, ಮತ್ತು ಇದರ ಆಗುಹೋಗುಗಳನ್ನು ನಿಯಂತ್ರಿಸಲು ಯಾವುದೇ ಗವರ್ನಿಂಗ್ ಬಾಡಿ ಇರುವುದಿಲ್ಲ. ಅಂದರೆ ನಿಖರವಾದ ನಿಯಮಾವಳಿಗಳ ಕೊರತೆಯಿರುತ್ತದೆ. ಹೀಗಾಗಿ ಸಮಯ, ಸನ್ನಿವೇಶಕ್ಕೆ ತಕ್ಕಹಾಗೆ ಎಲ್ಲವೂ ಹೊಸ ಅರ್ಥವನ್ನು ಪಡೆದುಕೊಳ್ಳುತ್ತವೆ. ಇದು ತೀವ್ರವಾದ ಅಸ್ಥಿರತೆಯನ್ನು ಸೃಷ್ಟಿಸುತ್ತದೆ.

Investment
ಗಳಿಸಲು ಶುರು ಮಾಡಿದ ತಕ್ಷಣ savings ಗಾಗಿ 6 ಸರಳ ಸೂತ್ರಗಳು! (ಹಣಕ್ಲಾಸು)

ಯಾವುದು ಬೆಸ್ಟ್? ಎನ್ನುವುದಕ್ಕೆ ಸರಳವಾಗಿ ಹೇಳಬೇಕೆಂದರೆ ಅದು ಆಯಾ ವ್ಯಕ್ತಿಯ ಅಪಾಯವನ್ನು ಎದುರಿಸುವ, ತಡೆದುಕೊಳ್ಳುವ ಕ್ಷಮತೆಯನ್ನು ಅವಲಂಬಿಸಿದೆ. ಆದರೆ ಇಂದಿಗೆ ಸಾಂಪ್ರದಾಯಿಕ ಹೂಡಿಕೆ ಎನ್ನುವ ಇನ್ಸ್ಟ್ರುಮೆಂಟ್ಗಳ ಮೇಲೆ ಹೂಡಿಕೆ ಮಾಡುವುದು ಉತ್ತಮ. ಏಕೆಂದರೆ ಅಸಾಂಪ್ರದಾಯಿಕ ಹೂಡಿಕೆ ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚು ಅಪಾಯಕಾರಿ. ಅದರಿಂದ ಉಂಟಾಗುವ ಫಲಿತಾಂಶವನ್ನು ಊಹಿಸುವುದು ಕಷ್ಟ.

ರಾಘವೇಂದ್ರರಾಯರಿಗೆವಿವರವಾಗಿ ಪ್ರವರ ಒಪ್ಪಿಸಿ.ನೀವೆಂದು ಕೊಂಡಂತೆ ಕೇವಲ ಬ್ಯಾಂಕು , ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಿಕೊಂಡು ಕೂರುವ ಸಮಯ ಇದಲ್ಲ. ಅಲ್ಲದೆ ಷೇರು ಮಾರುಕಟ್ಟೆಯಲ್ಲಿನ ಹೂಡಿಕೆ ಕೂಡ ಇಂದಿಗೆ ಸಂಪ್ರದಾಯಿಕವೇ ಆಗಿದೆ. ಒಂದಷ್ಟು ಕಲಿಕೆ -ಗ್ರಹಿಕೆ ಜೊತೆಗೆ ಸದಾ ಎಚ್ಚರ ಸ್ಥಿತಿಯಲ್ಲಿದ್ದರೆ ಸಾಕು. ಇಲ್ಲಿನ ಹೂಡಿಕೆ ಹಣದುಬ್ಬರವನ್ನು ತಡೆದುಕೊಳ್ಳುವ ಶಕ್ತಿ ನೀಡುತ್ತದೆ. ಹೀಗಾಗಿ ನಿಮ್ಮ ಮಗ ಸೂರ್ಯ ಹೇಳಿದಂತೆ ಮಾಡೋಣ. ನಿಮಗಾಗಿ ಇನ್ನೊಂದು ಸಣ್ಣ ಉದಾಹರಣೆ ನೀಡುತ್ತೇನೆ. ಮುಂದಿನ ನಿರ್ಧಾರ ನಿಮಗೆ ಬಿಡುತ್ತೇನೆ.

ಏಪ್ರಿಲ್ 2024 ರಲ್ಲಿ ಅಕ್ಕಿಯ ಬೆಲೆ 50 ರೂಪಾಯಿ ಎಂದುಕೊಳ್ಳಿ. ಸಮಾಜದಲ್ಲಿನ ಹಣದುಬ್ಬರ 9 ಪ್ರತಿಶತವಿದೆ ಎಂದುಕೊಂಡರೂ ವರ್ಷದಲ್ಲಿ ಅಕ್ಕಿಯ ಬೆಲೆ 54.50 ಪೈಸೆ. ನಾವು ಅದೇ ಐವತ್ತು ರೂಪಾಯಿ ಹಣವನ್ನು ಬ್ಯಾಂಕಿನಲ್ಲಿ ಇಟ್ಟಿದ್ದರೆ ಇಂದಿನ ದಿನದ ಬಡ್ಡಿದರ 7.5 ಲೆಕ್ಕಾಚಾರದಲ್ಲಿ 53.75 ಪೈಸೆಯಾಗುತ್ತಿತ್ತು. ಅಂದರೆ ಅಕ್ಕಿ ಕೊಳ್ಳಲು ನಮ್ಮ ಬಳಿ 75 ಪೈಸೆ ಕಡಿಮೆ ಇರುತ್ತಿತ್ತು. ಅರ್ಥ ನಿಮ್ಮ ಐವತ್ತು ರೂಪಾಯಿ ಮೌಲ್ಯ ವರ್ಷದ ನಂತರ 49.25 ಪೈಸೆ! 75 ಪೈಸೆ ಮೌಲ್ಯ ಕಳೆದುಕೊಂಡದ್ದಕ್ಕೆ ಹಣದುಬ್ಬರ ಕಾರಣ.

ಇದೆ 50 ರೂಪಾಯಿ ಹಣವನ್ನು ನಾವು ಷೇರು ಮಾರುಕಟ್ಟೆಯಲ್ಲಿ ಇಂಡೆಕ್ಸ್ ಫಂಡ್ನಲ್ಲಿ ಹೂಡಿಕೆ ಮಾಡಿದ್ದರೆ ಅದು ಕನಿಷ್ಠ 15 ಪ್ರತಿಶತ ಲಾಭವನ್ನು ತಂದು ಕೊಡುತ್ತಿತ್ತು. ಅಂದರೆ ನಮ್ಮ 50 ರೂಪಾಯಿ 57.50 ಪೈಸೆ ಆಗಿರುತ್ತಿತ್ತು. ಅಂದರೆ ಹೆಚ್ಚಿದ ಬೆಲೆಯಲ್ಲಿ ಅಕ್ಕಿ ಕೊಂಡು ಕೂಡ 3 ರೂಪಾಯಿ ಹೆಚ್ಚು ನಮ್ಮ ಬಳಿ ಉಳಿಯುತ್ತಿತ್ತು. ಇದರರ್ಥ ನಮ್ಮ 50 ರೂಪಾಯಿ ಮೌಲ್ಯ 53 ರೂಪಾಯಿ ಆಗುತ್ತಿತ್ತು.

ಈಗ ನೀವೇ ಲೆಕ್ಕ ಹಾಕಿ ಬ್ಯಾಂಕಿನಲ್ಲಿ ಇಟ್ಟಿದ್ದರೆ 49.25 ಪೈಸೆ. ಇಂಡೆಕ್ಸ್ ಫಂಡ್ ಹೂಡಿಕೆ ವಾಪಸ್ಸು ನೀಡುವ ಹಣ 53 . ಒಟ್ಟಾರೆ ವ್ಯತ್ಯಾಸ 3 ರೂಪಾಯಿ 75 ಪೈಸೆ. ಈ ಲೆಕ್ಕಾಚಾರವನ್ನು ನೀವು ನಿಮ್ಮ ಬಳಿ ಇರುವ ಲಕ್ಷ ಅಥವಾ ಕೋಟಿಗೆ ಮಾಡಿಕೊಂಡು ನೋಡಿ , ಅದೆಷ್ಟು ದೊಡ್ಡ ಮೊತ್ತ ಎನ್ನುವುದರ ಅರಿವಾಗುತ್ತದೆ. ಇಷ್ಟು ಹೇಳಿ ರಾಯರೇ ನೀವೆಷ್ಟೇ ಹಣವನ್ನು ಬ್ಯಾಂಕಿನಲ್ಲಿ ಸುರಕ್ಷತೆ ಎನ್ನುವ ಹೆಸರಿನಲ್ಲಿ ಇಟ್ಟರೂ ಕೇವಲ 5 ಲಕ್ಷ ರೂಪಾಯಿ ಮಾತ್ರ ಅದಕ್ಕೆ ಸುರಕ್ಷೆ ಇರುತ್ತದೆ. ಹಾಗೊಮ್ಮೆ ಬ್ಯಾಂಕಿಂಗ್, ಬ್ಯಾಂಕು ಕುಸಿದರೆ ಅಲ್ಲೂ ರಿಸ್ಕ್ ಇದ್ದೆ ಇರುತ್ತದೆ. ಬದುಕೆಂದರೆ ಇಷ್ಟೇ ಲೆಕ್ಕಾಚಾರದ ಅಪಾಯ ತೆಗೆದುಕೊಳ್ಳಬೇಕು ಎಂದೆ. ರಾಯರು ತಮ್ಮ ಮಗನ ಮುಖವನ್ನು ಹೆಮ್ಮೆಯಿಂದ ನೋಡಿ, ಇದೆಲ್ಲಾ ನಿನಗೆ ಗೊತ್ತಿತ್ತಾ ಎಂದರು. ಜೆನ್ ಜಿ (ಜೆನೆರೇಷನ್ z )ಹುಡುಗ ಅವರಪ್ಪನ ಮುಖ ನೋಡಿ ನಕ್ಕ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com