ಭಾರತದಲ್ಲಿ ಪ್ರತಿ ವರ್ಷ 10 ಮಿಲಿಯನ್ ಅಂದರೆ ಒಂದು ಕೋಟಿ ವಿದ್ಯಾರ್ಥಿಗಳು ಪದವಿ ಪಡೆದು ಕೊಳ್ಳುತ್ತಾರೆ. ಅದರಲ್ಲಿ ಹದಿನೈದು ಲಕ್ಷ ಜನ ವಿಜ್ಞಾನ, ತಂತ್ರಜ್ಞಾನಕ್ಕೆ ಇನ್ನಿತರ ತಾಂತ್ರಿಕ ವಿಷಯಗಳಲ್ಲಿ ಪದವಿ ಪಡೆದುಕೊಂಡರೆ ಉಳಿದ 85 ಲಕ್ಷ ಜನ ಬಿಎ, ಬಿಕಾಂ, ಇನ್ನಿತರೇ ಮ್ಯಾನೇಜ್ಮೆಂಟ್ ಕೋರ್ಸ್ಗಳಲ್ಲಿ ಪದವಿಯನ್ನು ಪಡೆದುಕೊಳ್ಳುತ್ತಾರೆ. ಇನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅಂದರೆ ಮಾಸ್ಟರ್ಸ್ ಬಗ್ಗೆ ಆಸಕ್ತಿ ತೋರುವರ ಸಂಖ್ಯೆ 13 ರಿಂದ 14 ಪ್ರತಿಶತ ಮಾತ್ರ. ಇತ್ತೀಚಿನ ದಿನಗಳಲ್ಲಿ ಇದರಲ್ಲಿ ಒಂದಷ್ಟು ಹೆಚ್ಚಳವಾಗಿದೆ. ಹೀಗಾಗಿ ನಾವು ಭಾರತದಲ್ಲಿ ಬಹುತೇಕ ವಿದ್ಯಾರ್ಥಿಗಳು 22 ರ ವಯಸ್ಸಿಗೆ ಕೆಲಸದ ಮಾರುಕಟ್ಟೆಗೆ ಲಗ್ಗೆ ಇಡುತ್ತಾರೆ. ಇಷ್ಟು ದೊಡ್ಡ ಸಂಖ್ಯೆಯ ಎಲ್ಲರಿಗೂ ಕೆಲಸ ಒದಗಿಸುವುದು ಅಷ್ಟು ಸುಲಭದ ಮಾತಲ್ಲ. ವರ್ಷದಿಂದ ವರ್ಷಕ್ಕೆ ಹೀಗೆ ಕೆಲಸದ ಮಾರುಕಟ್ಟೆಗೆ ಬರುವ ಸಂಖ್ಯೆ ನಿಲ್ಲುವುದೇ ಇಲ್ಲ. ಹೀಗಾಗಿ ವರ್ಷದ ಯಾವುದೇ ದಿನದಲ್ಲಿ ಕೂಡ ಸರಾಸರಿ ತೆಗೆದು ನೋಡಿದರೆ ಕಡಿಮೆಯೆಂದರೂ 5 ಮಿಲಿಯನ್ ಅಂದರೆ ಐವತ್ತು ಲಕ್ಷ ಜನ ಪದವೀಧರರು ನಿರುದ್ಯೋಗಿಗಳಾಗಿರುತ್ತಾರೆ.
ಮೇಲಿನ ಲೆಕ್ಕಾಚಾರ ಹೇಳಲು ಕಾರಣ, ನೀವು ಯಾವುದಾದರೂ ಸಂಸ್ಥೆಯಲ್ಲಿ ಈಗಾಗಲೇ ಕೆಲಸ ಮಾಡುತ್ತಿದ್ದರೆ ನೀವು ಅದೃಷ್ಟಶಾಲಿಗಳು ಎಂದರ್ಥ. ಪ್ರತಿ ವರ್ಷವೂ ಹೆಚ್ಚಾಗುತ್ತಿರುವ ವಿದ್ಯಾರ್ಥಿ ಸಂಖ್ಯೆ ಸ್ಫರ್ಧೆಯನ್ನು ಇನ್ನಷ್ಟು ಹೆಚ್ಚಿಸುತ್ತಿದೆ. ಹೀಗಾಗಿ ನೀವು ಕೆಲಸದಲ್ಲಿದ್ದರೆ ನಿಮಗೆ ನೀವೇ ಅಭಿನಂದನೆಗಳನ್ನು ಹೇಳಿಕೊಳ್ಳಿ. ಹೊಸ ಹುರುಪು ನಿಮ್ಮದಾಗಲಿ. ಕೆಲಸಕ್ಕೆ ಸೇರಿದ ತಿಂಗಳಿಂದ ಎಲ್ಲಿ ಹೇಗೆ ಉಳಿತಾಯ ಮಾಡಬೇಕು ಎನ್ನುವುದನ್ನು ಮುಂದಿನ ಅಧ್ಯಾಯದಲ್ಲಿ ತಿಳಿದುಕೊಳ್ಳೋಣ. ಅದಕ್ಕೂ ಮೊದಲಿಗೆ ಒಂದಷ್ಟು ಅಂಶಗಳನ್ನು ಮನನ ಮಾಡಿಕೊಳ್ಳೋಣ.
ಕಾಲೇಜಿನಿಂದ ಈಗಷ್ಟೆ ಹೊರ ಬಂದಿದ್ದೀರಿ, ಪರೀಕ್ಷೆ ಚನ್ನಾಗಿ ಬರೆದು ಒಳ್ಳೆಯ ಅಂಕವನ್ನೂ ಗಳಿಸಿದ್ದೀರಿ. ಆದರೆ ನಿಮಗೆ ನೆನಪಿರಲಿ ಪುಸ್ತಕದಲ್ಲಿ ಓದಿರುವುದಕ್ಕೂ ಪ್ರಾಯೋಗಿಕವಾಗಿ ಸಂಸ್ಥೆಯಲ್ಲಿ ಕೆಲಸ ಮಾಡುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಹೀಗಾಗಿ ವೇತನ ಎಷ್ಟು ಎನ್ನುವುದರ ಬಗ್ಗೆ ತಲೆ ಕೆಡೆಸಿಕೊಳ್ಳುವುದು ಬೇಡ. ವೇತನ ಎಷ್ಟಾದರೂ ಕೊಡಲಿ ಅಡ್ಡಿಯಿಲ್ಲ, ಕೆಲಸ ಕಲಿಯುತ್ತೇನೆ ಎನ್ನುವ ಮನೋಭಾವ ಅತಿಮುಖ್ಯ. ನಾವು ಒಂದು ವಿಷಯವನ್ನು ನೋಡುವ ಮನಸ್ಥಿತಿ ಬದಲಿಸಕೊಂಡು ಬಿಟ್ಟರೆ ಸಾಕು, ಉದಾಹರಣೆ ನೋಡಿ. ನೀವು ಮಾಸ್ಟರ್ಸಗೆ ಸೇರಿಕೊಂಡಿದ್ದರೆ ಅಲ್ಲಿನ ಹೊಸ ಕಲಿಕೆಗೆ ಕಾಲೇಜಿಗೆ ಫೀಸು ಕಟ್ಟಿರುತ್ತಿದಿರಿ, ಪುಸ್ತಕ ಕೊಳ್ಳುತ್ತಿದ್ದೀರಿ ಅಲ್ಲವೇ? ಈಗ ನೋಡಿ ನೀವು ಕಲಿಯಲು ಅವರು ಹಣ ಕೊಡುತ್ತಿದ್ದಾರೆ! ಹೀಗಾಗಿ ಹೇಳಿದ್ದು ವೇತನ ಎಷ್ಟಾದರೂ ಇರಲಿ, ಅದು ಲಾಭ ಎಂದು ಕೊಳ್ಳಬೇಕು. ಕಲಿಯುಲು ಹಣ ಕೊಡುತ್ತಿದ್ದಾರೆ ಎನ್ನುವ ಮನೋಭಾವ ಬೆಳಸಿಕೊಂಡರೆ ಅದು ಮುಂದಿನ ಭವ್ಯ ಬದುಕಿನ ಅಡಿಪಾಯವಾಗುತ್ತದೆ.
ದುಡಿಯಲು ಶುರು ಮಾಡಿದೆ, ಇನ್ನು ಹೆಚ್ಚಿನ ಓದಿನ ಅವಶ್ಯಕತೆಯಿಲ್ಲ ಎನ್ನುವ ತಪ್ಪು ಮಾಡುವುದು ಬೇಡ. ಮಾಸ್ಟರ್ಸ್ಗೆ ಸೇರಿಕೊಂಡಿದ್ದರೆ ಬರಿ ಥಿಯರಿ ಆಗುತ್ತಿತ್ತು , ಇದೀಗ ಪ್ರಾಯೋಗಿಕವಾಗಿ ಕಲಿಯುತ್ತಿದ್ದೇನೆ, ಇದರ ಜೊತೆಗೆ ಕೆಲಸಕ್ಕೆ ಸಂಬಂಧಿಸಿದ ಯಾವುದಾದರೂ ಒಂದು ಸರ್ಟಿಫಿಕೇಟ್ ಕೋರ್ಸ್ ಮಾಡಿಕೊಳ್ಳೋಣ ಎನ್ನುವ ಮನೋಭಾವ ಬೆಳಸಿಕೊಳ್ಳಬೇಕು. ಮಾಸಿಕ ವೇತನದ 20 ರಿಂದ 30 ಪ್ರತಿಶತ ಹಣವನ್ನು ಹೊಸ ಕೌಶಲ ವೃದ್ಧಿಸಿಕೊಳ್ಳಲು ಬಳಸಿಕೊಳ್ಳಬೇಕು.
ಪದವಿ ಮುಗಿಸಿ ಕೆಲಸಕ್ಕೆ ಸೇರಿದ ಪ್ರಥಮ ಎರಡು ವರ್ಷ ವೇತನವನ್ನು ವೇತನ ಎಂದು ಪರಿಗಣಿಸುವುದು ಬೇಡ. ಅದೆಷ್ಟೇ ಹಣ ಬರಲಿ ಅದರಲ್ಲಿ 30 ಪ್ರತಿಶತ ಮೊದಲಿಗೆ ಶಿಕ್ಷಣಕ್ಕೆ ಎಂದು ಸಾಲ ಮಾಡಿದ್ದರೆ ಅದನ್ನು ತೀರಿಸಲು ಉಪಯೋಗಿಸಿಕೊಳ್ಳಿ. ಸಾಲದ ಅವಧಿ ಅದೆಷ್ಟು ಕಡಿಮೆ ಮಾಡಲು ಸಾಧ್ಯವೋ ಅಷ್ಟೂ ಕಡಿಮೆ ಅವಧಿಯಲ್ಲಿ ಸಾಲ ತೀರಿಸಿ. ನೆನಪಿರಲಿ ಕ್ರೆಡಿಟ್ ಇಸ್ ನ್ಯೂ ಮನಿ ಎನ್ನುವ ಕಾಲಘಟ್ಟದಲ್ಲಿ ನಾವಿದ್ದೇವೆ. ಹೀಗಾಗಿ ಈ ದೆಸೆಯಲ್ಲೇ ಉತ್ತಮ ಕ್ರೆಡಿಟ್ ಹಿಸ್ಟ್ರಿ ಬೆಳಸಿಕೊಳ್ಳಲು ಆರಂಭಿಸಿ. ಮುಂದಿನ ದಿನಗಳಲ್ಲಿ ಬದುಕಿನ ಬೇರೆ ಹಂತಗಳಲ್ಲಿ ಯಾವಾಗ , ಎಷ್ಟು ಹಣ ಮತ್ತೆ ಸಾಲದ ರೂಪದಲ್ಲಿ ಪಡೆಯಬೇಕಾಗುತ್ತದೆ ಬಲ್ಲವರಾರು? ಹೀಗಾಗಿ ಕ್ರೆಡಿಟ್ ಹಿಸ್ಟ್ರಿ ಬಹಳ ಮುಖ್ಯವಾಗುತ್ತದೆ. ಉತ್ತಮ ಕ್ರೆಡಿಟ್ ಹಿಸ್ಟ್ರಿ, ಉತ್ತಮ ಕ್ರೆಡಿಟ್ ರೇಟಿಂಗ್ ನೀಡುತ್ತದೆ.
ದುಡಿಯಲು ಶುರು ಮಾಡಿದೆ ಎಂದು ಒಮ್ಮೆಲೇ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಬೇಡ. ಪೋಷಕರ ಜೊತೆಯಲ್ಲಿ ವಿದ್ಯಾರ್ಥಿ ದೆಸೆಯಲ್ಲಿ ನಡೆಸುತ್ತಿದ್ದ ಜೀವನ ಶೈಲಿಯನ್ನು ಮುಂದುವರಿಸುವುದು ಉತ್ತಮ. ವೃಥಾ ಖರ್ಚು ಮಾಡುವುದು ತಪ್ಪು.
ಪೋಷಕರು ಕೂಡ ಎಜುಕೇಶನ್ ಲೋನ್ ಇಲ್ಲದಿದ್ದರೆ, ಇಂತಿಷ್ಟು ಹಣವನ್ನು ಮನೆ ಮ್ಯಾನೇಜ್ ಮಾಡಲು ನೀಡಬೇಕು ಎಂದು ಕಡ್ಡಾಯ ಮಾಡಬೇಕು. ಕೆಲವು ಪೋಷಕರು ನಮ್ಮ ಬಳಿ ಹಣವಿದೆ , ಅವನಿಂದ/ಅವಳಿಂದ ಪಡೆಯುವ ಅವಶ್ಯಕತೆಯಿಲ್ಲ ಎನ್ನುವ ಮಾತನ್ನು ಆಡುತ್ತಾರೆ. ಹಣಕಾಸು ಭದ್ರತೆ ಇರುವುದು ಒಳ್ಳೆಯದು. ಹಾಗೆಂದು ಮಕ್ಕಳಿಗೆ ಜವಾಬ್ದಾರಿ ಕಲಿಸದೆ, ಲೆಕ್ಕ ಕಲಿಸದೆ ಅವನು /ಅವಳು ದುಡಿದ ದುಡ್ಡು ಏನಾದರೂ ಮಾಡಿಕೊಳ್ಳಲಿ ಎಂದು ಬಿಡಬಾರದು. ಮನೆ ಖರ್ಚಿಗೆ ತೆಗೆದುಕೊಳ್ಳಲು ಇಷ್ಟವಿಲ್ಲದಿದ್ದರೆ ಅಷ್ಟೇ ಹಣವನ್ನು ಹೂಡಿಕೆ ಮಾಡುವಂತೆ ತಾಕೀತು ಮಾಡಬೇಕು.
ಒಂದೆರೆಡು ವರ್ಷ ಕೆಲಸ ಮಾಡಿ ಅನುಭವ ಪಡೆದುಕೊಂಡು ಜೊತೆಗೆ ಮಾಸ್ಟರ್ಸ್ ಮಾಡಲು ಬೇಕಾಗುವ ಹಣವನ್ನು ಸಹ ಜೋಡಿಸಿಕೊಳ್ಳಬಹುದು. ಇದು ಎಲ್ಲದಕ್ಕಿಂತ ಅತ್ಯುತ್ತಮ ಮಾರ್ಗ.ನಾವು ಆರಿಸಿಕೊಂಡ ದಾರಿಯಲ್ಲಿ ಹೆಚ್ಚಿನ ನೈಪುಣ್ಯತೆ ಪಡೆದುಕೊಳ್ಳುತ್ತಾ ಹೋದಂತೆ ಹೆಚ್ಚಿನ ಯಶಸ್ಸು , ಸಮೃದ್ಧಿ ಪಡೆದುಕೊಳ್ಳಬಹುದು.
ಈ ವಯಸ್ಸು ಒಂಥರಾ ಮ್ಯಾಜಿಕಲ್. ವಿದ್ಯಾರ್ಥಿ ದೆಸೆಯಲ್ಲಿದ್ದ ಹಲವಾರು ನಿಬಂಧನೆಗಳು ಈಗಿಲ್ಲ. ಕೈಯಲ್ಲಿ ಒಂದಷ್ಟು ಹಣವೂ ಸಂಪಾದನೆಯಾಗುತ್ತಿದೆ. ಹೇಳಿಕೊಳ್ಳುವ ಗುರುತರ ಜವಾಬ್ದಾರಿ ಇನ್ನೂ ಮೈಮೇಲಿಲ್ಲ. ಹೌದು 22 ರಿಂದ 25 ರ ವರೆಗಿನ ಮೂರು ವರ್ಷದ ಕೆಲಸದ ಬದುಕನ್ನು ನಿಖರತೆ ಇಟ್ಟು ಕೊಂಡರೆ ಬಹಳವಾಗಿ ಆಸ್ವಾದಿಸಬಹುದು. ಹೇಗೆಂದರೆ:
ಎಲ್ಲಕ್ಕೂ ಮೊದಲಿಗೆ ಈ ಎರಡು ಅಥವಾ ಮೂರು ವರ್ಷದ ನಂತರ ಉನ್ನತ ವ್ಯಾಸಂಗ ಮಾಡಬೇಕು ಎನ್ನುವುದು. ಒಟ್ಟಾರೆ ನೈಪುಣ್ಯತೆ ವೃದ್ಧಿ ಮಾಡಿಕೊಳ್ಳುವುದು ಗುರಿಯಾಗಿರಬೇಕು. ಸ್ವದೇಶ ಅಥವಾ ವಿದೇಶ ಎನ್ನುವುದು ನಂತರದ ಪ್ರಶ್ನೆ. ಈ ಸಮಯದಲ್ಲಿ ಮನೆಯರು ನೀವು ದುಡಿದ ಹಣವನ್ನು ಕೇಳಲಿಲ್ಲ ಎಂದರೆ ಅದನ್ನು ಎಷ್ಟು ಸಾಧ್ಯವೋ ಅಷ್ಟೂ ಅಂದರೆ 60, 70, 80 ಸಾಧ್ಯವಾದರೆ 90 ಪ್ರತಿಶತ ಉಳಿಸಬೇಕು. ಹೂಡಿಕೆ ಮಾಡಬೇಕು.
ಎರಡನೆಯದಾಗಿ ಹೆಚ್ಚಿನ ವ್ಯಾಸಂಗದ ಚಿಂತೆ ಇಲ್ಲದಿದ್ದರೆ ಅದನ್ನು ಕುರಿತಾಗಿ ಕೂಡ ಖಚಿತತೆ ಇಟ್ಟು ಕೊಳ್ಳುವುದು ಉತ್ತಮ. ಕೆಲಸದ ಹಾದಿಯಲ್ಲಿ ಮುಂದಿನ ಹಾದಿ ಯಾವುದು ಎನ್ನುವ ಸ್ಪಷ್ಟ ಕಲ್ಪನೆ ನಮ್ಮದಾಗಿರಬೇಕು.
ಮೂರನೆಯದಾಗಿ ಒಂದಷ್ಟು ವರ್ಷದ ನಂತರವಾದರೂ ನಾವು ಅಪ್ಡೇಟ್ ಆಗುತ್ತಿರಬೇಕು. ಹೀಗಾಗಿ ಕಲಿಕೆಗೆ ಗುಡ್ ಬೈ ಹೇಳಲು ಸಾಧ್ಯವಿಲ್ಲ ಎನ್ನುವ ಮಾನಸಿಕತೆ ಬೆಳಸಿಕೊಳ್ಳುವುದು.
ಹೋಗುವಮುನ್ನ: ಪ್ರತಿ ಎರಡು ಅಥವಾ ಮೂರು ವರ್ಷಕ್ಕೆ ಆದ್ಯತೆ ಬೇರೆಯಾಗುತ್ತದೆ. ಬದುಕಿನ ಬೇಕು ಬೇಡಗಳು ಬದಲಾಗುತ್ತವೆ. ಮೇಲೆ ಹೇಳಿದ ಎಲ್ಲವೂ 22 ರಿಂದ 25 ವರ್ಷದ ಮಕ್ಕಳಿಗೆ ಅನ್ವಯ. ಈ ಮೂರು ವರ್ಷದಲ್ಲಿ ಮುಂದಿನ ಬದುಕಿಗೆ ಬೇಕಾದ ನಿಖರತೆ ಪಡೆದುಕೊಳ್ಳಬೇಕು. ಪದವಿ ನಂತರ ಹೆಚ್ಚಿನ ವ್ಯಾಸಂಗಕ್ಕೆ ಹೋಗದವರಲ್ಲಿ ಕೆಲವರು ಈಗ ಹೋಗುವ ಮನಸ್ಸು ಮಾಡಬಹುದು. ಇಲ್ಲವೇ ಕೆಲಸದಲ್ಲಿ ಮುಂದುವರಿಯಬಹುದು. 25 ರಿಂದ 32 ರ ಒಳಗೆ ಕೆಲಸದಲ್ಲಿ ಭದ್ರತೆ, ಮದುವೆ, ಕೆಲವರಿಗೆ ಮಕ್ಕಳು ಹೀಗೆ ಹಲವು ಬದಲಾವಣೆಗಳಿಗೆ ಸಾಕ್ಷಿಯಾಗುತ್ತಾರೆ. ಒಬ್ಬೊಬ್ಬರ ಕಥೆ ಒಂದೊಂದು. ಪ್ರತಿಯೊಬ್ಬರಿಗೂ ಸನ್ನಿವೇಶ, ಪ್ರಶ್ನೆ ಬೇರೆ ಬೇರ. ಹೀಗಾಗಿ ಸಂದರ್ಭ, ಸನ್ನಿವೇಶಕ್ಕೆ ತಕ್ಕಂತೆ ನಮ್ಮ ನಡೆಯಿರಬೇಕು.
Advertisement