ಕೆಲಸ ಬದಲಾವಣೆಗೆ ಮುನ್ನ ಕೇಳಿಕೊಳ್ಳಬೇಕಾದ ಪ್ರಶ್ನೆಗಳು! (ಹಣಕ್ಲಾಸು)

ಸಮಯಕ್ಕೆ ತಕ್ಕಂತೆ ನಡೆಯುವುದರಲ್ಲಿ ಜಾಣತನವಿದೆ. ಇಂದಿನ ಮಾನವ ಸಂಪನ್ಮೂಲ ಅಧಿಕಾರಿಗಳು ಕೂಡ ಬಹಳಷ್ಟು ವರ್ಷ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡಿದ ವ್ಯಕ್ತಿಯನ್ನು ಸಂಶಯದ ದೃಷ್ಟಿಯಿಂದ ನೋಡುತ್ತಾರೆ. (ಹಣಕ್ಲಾಸು-436)
switching job (file pic)
ಉದ್ಯೋಗ ಬದಲಾವಣೆ (ಸಂಗ್ರಹ ಚಿತ್ರ)online desk
Updated on

ಹಿಂದೊಂದು ಕಾಲವಿತ್ತು ಕೆಲಸಕ್ಕೆ ಸೇರಿದ ಮೇಲೆ ನಿವೃತ್ತಿ ಆಗುವ ತನಕ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುವುದು ಸಹಜ ಮತ್ತು ಸಾಮಾನ್ಯವಾಗಿತ್ತು. ಕೆಲಸ ಬಿಡುವುದು, ಸಂಸ್ಥೆಯನ್ನು ಬಿಡುವುದು ಭಾವನಾತ್ಮಕ ನಿರ್ಧಾರವಾಗಿತ್ತು. ಕೆಲಸ ಬಿಡುವುದು ಎನ್ನುವುದು ವ್ಯಕ್ತಿಯ ನಿರ್ಧಾರವಾಗಿರದೆ ಅದು ಕುಟುಂಬದ ನಿರ್ಧಾರಾಗಿರುತ್ತಿತ್ತು. ಅಂದಿನ ದಿನದಲ್ಲಿ ಇದ್ದ ಅವಕಾಶಗಳು, ಸಂಸ್ಥೆಗಳು ಕೂಡ ಕಡಿಮೆ ಇದ್ದವು. ಕಾಲ ಎರಡರಿಂದ ಮೂರು ದಶಕದಲ್ಲಿ ಪೂರ್ಣ ಬದಲಾಗಿ ಹೋಗಿದೆ. ಇಂದಿನ ಕಾಲಘಟ್ಟದಲ್ಲಿ ಒಂದೇ ಸಂಸ್ಥೆಯಲ್ಲಿ 3 ಅಥವಾ ನಾಲ್ಕು ವರ್ಷಕ್ಕಿಂತ ಹೆಚ್ಚು ವರ್ಷ ಕೆಲಸ ಮಾಡುತ್ತಿದ್ದರೆ ಆ ವ್ಯಕ್ತಿಯಲ್ಲಿ ಏನೊ ಕೊರತೆಯಿದೆ ಆ ಕಾರಣಕ್ಕಾಗಿ ಆತ ಕೆಲಸ ಚೇಂಜ್ ಮಾಡುತ್ತಿಲ್ಲ ಎನ್ನುವಷ್ಟು ಬದಲಾಗಿದೆ. ಕೆಲಸ ಬದಲಿಸುವುದು ಇಂದಿನ ಅನಿವಾರ್ಯ ಕೂಡ ಹೌದು ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸಮಯಕ್ಕೆ ತಕ್ಕಂತೆ ನಡೆಯುವುದರಲ್ಲಿ ಜಾಣತನವಿದೆ. ಇಂದಿನ ಮಾನವ ಸಂಪನ್ಮೂಲ ಅಧಿಕಾರಿಗಳು ಕೂಡ ಬಹಳಷ್ಟು ವರ್ಷ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡಿದ ವ್ಯಕ್ತಿಯನ್ನು ಸಂಶಯದ ದೃಷ್ಟಿಯಿಂದ ನೋಡುತ್ತಾರೆ. ವ್ಯಕ್ತಿಯಿಂದ ವ್ಯಕ್ತಿಗೆ ಇದರಲ್ಲಿ ಬದಲಾವಣೆ ಇರುತ್ತದೆ. ಆದರೆ ಒಟ್ಟಾರೆ ಹೆಚ್ಚು ಸಮಯ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುವವರನ್ನು ಡೈನಾಮಿಕ್ ಅಲ್ಲ ಎಂತಲೋ, ಕಂಫರ್ಟ್ ಜೋನ್ ಇಷ್ಟಪಡುವವರು ಎಂತಲೋ ಹಣೆಪಟ್ಟಿ ಕಟ್ಟು ಬಿಡುತ್ತಾರೆ. ಇದರರ್ಥ ಕಡ್ಡಾಯಕ್ಕೆ ಬಿದ್ದು ಕೆಲಸ ಬದಲಾಯಿಸಬೇಕು ಎಂದಲ್ಲ. ಸಮಾಜದಲ್ಲಿನ ಬದಲಾವಣೆಗಳ ಬಗ್ಗೆ ಗಮನವಿರಬೇಕು. ಅದಕ್ಕೆ ತಕ್ಕಂತೆ ಅಪ್ಡೇಟ್ ಆಗುತ್ತಾ ಇರಬೇಕು.

ಕೈಲಿರುವ ಕೆಲಸವನ್ನು ಬಿಟ್ಟು ಕೆಲಸ ಹುಡುಕುವ ಕೆಲಸವನ್ನು ಮಾಡಬಾರದು. ಕೆಲಸದಲ್ಲಿ ಇದ್ದು ಕೊಂಡು ಹೊಸ ಕೆಲಸವನ್ನು ಹುಡುಕಬೇಕು. ಯಾವಾಗ ಕೆಲಸವನ್ನು ಬಿಡಬೇಕು, ಇನ್ನೊಂದು ಕೆಲಸವನ್ನು ಹುಡುಕಬೇಕು ಎನ್ನುವುದು ಆಯಾ ವ್ಯಕ್ತಿಗೆ ಬಿಟ್ಟದ್ದು. ಏಕೆಂದರೆ ಕೆಲವು ಲಕ್ಷಣಗಳು ಅವರನ್ನು ಬಿಟ್ಟು ಬೇರೆಯವರಿಗೆ ತಿಳಿಯುವುದಿಲ್ಲ. ಕೆಳಗಿನ ಲಕ್ಷಣಗಳು ಕಾಣಿಸಿಕೊಂಡರೆ ಆಗ ಬೇರೆ ಕೆಲಸ ಹುಡುಕುವುದು ಅನಿವಾರ್ಯ.

switching job (file pic)
Employees Provident Fund: EPF ಕುರಿತು ನೀವು ತಿಳಿಯಬೇಕಿರುವ ಪೂರ್ಣ ವಿವರ ಇಲ್ಲಿದೆ... (ಹಣಕ್ಲಾಸು)
  • ಸಮಯ ಸರಿದು ಹೋಗುತ್ತಿದೆ ಹೊಸತೇನು ಕಲಿಯುತ್ತಿಲ್ಲ: ಈ ಭಾವನೆ ನಿರ್ಧಾರ ತೆಗೆದುಕೊಳ್ಳಬೇಕಾದ ವ್ಯಕ್ತಿಗೆ ಬಿಟ್ಟು ಬೇರೆಯವರಿಗೆ ಅರ್ಥವಾಗುವುದಿಲ್ಲ. ಕೆಲವೊಂದು ಕೆಲಸಗಳಲ್ಲಿ ಹೇಳಿಕೊಳ್ಳುವ ಸವಾಲುಗಳು ಇರುವುದಿಲ್ಲ. ಕೆಲಸ ಭದ್ರತೆ ಬಗ್ಗೆ ಕೂಡ ಹೆಚ್ಚು ಸಂಶಯವಿರುವುದಿಲ್ಲ. ಹೊರಗೆ ನಿಂತು ನೋಡಿದವರಿಗೆ ಡ್ರೀಮ್ ಜಾಬ್ ನಂತೆ ಕಾಣುತ್ತದೆ. ಆದರೆ ನಿತ್ಯವೂ ಅದೇ ಕೆಲಸ , ಸವಾಲು ಇಲ್ಲದೆ ಇರುವುದು ಬೇಸರ ತರಿಸುತ್ತದೆ. ವ್ಯಕ್ತಿ ವೇತನ ಸಿಗುತ್ತಿದ್ದೆ ಎಂದು ಕುಳಿತು ಬಿಟ್ಟರೆ ಆಗ ಕಲಿಕೆಯಲ್ಲಿ ಕುಂಠಿತವಾಗಿ ಬಿಡುತ್ತದೆ. ಮುಂದೊಂದು ದಿನ ಬೇರೆದಾರಿಯಿಲ್ಲದೆ ಸಂಸ್ಥೆ ಬಿಡಬೇಕಾದ ಸಂದರ್ಭ ಬಂದರೆ ಆಗ ವ್ಯಕ್ತಿಯ ಬಳಿ ಯಾವುದೇ ಹೊಸ ಸ್ಕಿಲ್ ಇರುವುದಿಲ್ಲ. ಹೀಗಾಗಿ ಇಲ್ಲಿ ಏನು ಕಲಿಕೆ ಆಗುತ್ತಿಲ್ಲ. ಸುಮ್ಮನೆ ವೇಳೆ ಕಳೆಯುತ್ತಿದ್ದೇನೆ ಎನ್ನಿಸಿದರೆ ಅದು ಮೊದಲ ಚಿನ್ಹೆ. ಬೇರೆ ಕೆಲಸ ಹುಡುಕುವುದು ಉತ್ತಮ.

  • ಬೆಳಿಗ್ಗೆ ಎದ್ದು ಕೆಲಸದ ಜಾಗಕ್ಕೆ ಹೋಗಬೇಕಲ್ಲಾ ಎನ್ನುವುದು ಭಯವಾಗಿ, ಹಿಂಜರಿಕೆಯಾಗಿ ಮಾರ್ಪಾಟಾದರೆ ಆಗ ಕೂಡ ಮುಂದಿನ ದಾರಿ ಹುಡುಕಿಕೊಳ್ಳಬೇಕಾಗುತ್ತದೆ. ಕೆಲಸದ ಜಾಗದಲ್ಲಿ ಕೆಲಸ ಮಾಡಲು ಉತ್ತಮ ವಾತಾವರಣ ಇರಬೇಕು. ಯಾವಾಗ ವಾತಾವರಣದಲ್ಲಿ ಏರುಪೇರು ಉಂಟಾಗುತ್ತದೆ ಆಗ ಕೆಲಸಕ್ಕೆ ಹೋಗುವುದು ಹಿಂಸೆ ಎನ್ನಿಸಲು ಶುರುವಾಗುತ್ತದೆ. ಇಚ್ಛೆಯಿಲ್ಲದ ಜಾಗದಲ್ಲಿ ಕೆಲಸ ಮಾಡುವುದು ಬಹುಕಷ್ಟ.

  • ವರ್ಕ್ -ಲೈಫ್ ಬ್ಯಾಲೆನ್ಸ್ ಮಾಡಲು ಸಾಧ್ಯವಾಗದೆ ಹೋಗುವುದು: ವೇತನ, ಭದ್ರತೆ ಎಲ್ಲವೂ ಇದೆ. ಆದರೆ ಕೆಲಸದ ಮಧ್ಯೆ ಕುಟುಂಬಕ್ಕೆ, ಸ್ನೇಹಿತರಿಗೆ, ಕೊನೆಗೆ ಸ್ವಂತಕ್ಕೆ ಕೂಡ ವೇಳೆ ಕೊಡಲಾಗದಷ್ಟು ಟೈಟ್ ಷೆಡ್ಯೂಲ್ ಆಗಿಬಿಟ್ಟರೆ ಕೂಡ ಬದುಕು ದುರ್ಭರವಾಗುತ್ತದೆ. ಆಗ ಎರಡಕ್ಕೂ ಸಮವಾಗಿ ವೇಳೆ ಕೊಡುವ ಹೊಸ ಕೆಲಸ ಹುಡುಕುವುದು ಅನಿವಾರ್ಯ.

  • ಶ್ರಮವಹಿಸಿ ಮಾಡಿದ ಕೆಲಸಕ್ಕೆ, ಹೊಸ ಚಿಂತನೆಗೆ ಪ್ರಶಂಸೆ ಇಲ್ಲದೆ ಹೋಗುವುದು, ಮುಂದಾಳತ್ವ ತೆಗೆದುಕೊಳ್ಳುವುದಕ್ಕೆ ಬಿಡದಿರುವುದು. ಹೇಳಿದ ಕೆಲಸ ಮಾಡು ಸಾಕು ಎನ್ನುವ ಬಾಸ್ ಸಿಕ್ಕರೆ , ಮಾಡಿದ ಒಳ್ಳೆಯದೆಲ್ಲಾ ನನ್ನಿಂದ ತಪ್ಪಾದರೆ ಅದು ನಿನ್ನಿಂದ ಎನ್ನುವಂತಹ ಬಾಸ್ ಅಡಿಯಲ್ಲಿ ಕೆಲಸ ಮಾಡುವುದು ಕಷ್ಟ.

  • ಸಮಕಾಲೀನರು ಇದೇ ವಲಯದಲ್ಲಿ ಇದಕ್ಕಿಂತ ಹೆಚ್ಚು ಹಣವನ್ನು ಸಂಪಾದಿಸುತ್ತ ಇರುವುದು ಕಂಡು ಬಂದಾಗ, ಇರುವ ಸಂಸ್ಥೆ ಮಾರುಕಟ್ಟೆಯಲ್ಲಿ ಇರುವುದಕ್ಕಿಂತ ಕಡಿಮೆ ವೇತನ ಕೊಡುತ್ತಿದೆ ಎಂದಾಗ ಕೂಡ ಕೆಲಸ ಬದಲಿಸಬೇಕಾಗುತ್ತದೆ.

  • ಒಂದಷ್ಟು ವರ್ಷದ ನಂತರ ಎಲ್ಲವೂ ಸರಿಯಾಗಿದ್ದರೂ ಮನಸ್ಸಿನಲ್ಲಿ ಬದಲಾವಣೆ ಬೇಕು ಎನ್ನಿಸಲು ಶುರುವಾಗುತ್ತದೆ. ಅದೇ ಕೆಲಸ, ಅದೇ ಜಾಗ ಒಂದಷ್ಟು ವರ್ಷದ ನಂತರ ಬೇಸರ ತರಿಸುತ್ತದೆ. ಹೀಗೆ ಕಂಫರ್ಟ್ ಜೋನ್ ನಿಂದ ಹೊರಬರುವುದು ಕೂಡ ಒಳ್ಳೆಯದು.

  • ಹೊಸ ಕೆಲಸದಲ್ಲಿ ವೇತನ ಹೆಚ್ಚಳದ ಜೊತೆಗೆ ಭವಿಷಯದಲ್ಲಿ ಇನ್ನಷ್ಟು ಮೇಲು ಹಂತಕ್ಕೆ ಬೆಳೆಯಲು ಸಾಧ್ಯವಿದ್ದಾಗ ಕೂಡ ಕೆಲಸ ಬದಲಾವಣೆ ಮಾಡಬೇಕು.

switching job (file pic)
ಶೈಕ್ಷಣಿಕ ಸಾಲದ ಬಗ್ಗೆ ನೀವು ತಿಳಿಯಬೇಕಿರುವ ಮಾಹಿತಿ! (ಹಣಕ್ಲಾಸು)

ಇನ್ನು ಕೆಲವು ಬಾರಿ ಸಂಗಾತಿಗಳಲ್ಲಿ ಒಬ್ಬರು ಕೆಲಸ ಬದಲಿಸಿದ ಕಾರಣ ಇನ್ನೊಬ್ಬರು ಜೊತೆಯಲ್ಲಿರಬೇಕಾದ ಬದಲಿಸಬೇಕಾಗುತ್ತದೆ. ಒಬ್ಬರ ಕೆಲಸ ಬಹಳ ಭದ್ರತೆಯಿದ್ದಾಗ ಇನ್ನೊಬ್ಬರು ಸುಮ್ಮನೆ ಚಾನ್ಸ್ ತೆಗೆದುಕೊಳ್ಳುವುದು ಕೂಡ ಮಾಡುತ್ತಾರೆ. ಲೆಕ್ಕಾಚಾರ ಮಾಡಿ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳು ಓಕೆ . ಎಲ್ಲಕ್ಕೂ ಮೊದಲಿಗೆ...

  • ಹೊಸ ಕೆಲಸದಿಂದ ಮಾಸಿಕ ಆದಾಯದಲ್ಲಿ ಹೆಚ್ಚಳವಾಗಿದ್ದರೆ ಎಷ್ಟು ಹೆಚ್ಚಳವಾಗಿದೆ ಎನ್ನುವುದನ್ನು ಗಮನಿಸಬೇಕು.

  • ಹಿಂದಿನ ಸಂಸ್ಥೆಗೆ ಹೋಗಿಬರಲು ಬೇಕಾಗುತ್ತಿದ್ದ ಸಮಯಕ್ಕೂ ಹೊಸ ಸಂಸ್ಥೆಗೂ ಹೋಗಿ ಬರಲು ಬೇಕಾಗುವ ಸಮಯಕ್ಕೂ ಬದಲಾವಣೆ ಅಂದರೆ ಹೆಚ್ಚಳವಾಗಿದೆಯೇ ಅಥವಾ ಕಡಿಮೆಯಾಗಿದೆಯೇ ಎನ್ನುವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು.

  • ವೃತ್ತಿಯಲ್ಲಿ ತೃಪ್ತಿ ಎನ್ನುವುದಕ್ಕೆ ಎಲ್ಲಕ್ಕೂ ಪ್ರಥಮ ಸ್ಥಾನ. ಹೊಸ ಕೆಲಸ ಆ ತೃಪ್ತಿಯನ್ನು , ಸ್ಯಾಟಿಸ್ಫ್ಯಾಕ್ಷನ್ ನೀಡುತ್ತದೆಯೇ ಎನ್ನುವುದನ್ನು ಗಮನಿಸಬೇಕು.

  • ಹೊಸ ಜಾಗದಲ್ಲಿ ಕಲಿಕೆಗೆ, ಅಡ್ವಾನ್ಸ್ಡ್ ಸರ್ಟಿಫಿಕೇಷನ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆಯೇ ಎನ್ನುವುದು ಕೂಡ ಮುಖ್ಯವಾಗುತ್ತದೆ.

ಕೆಲಸ ಬದಲಾವಣೆ ಎನ್ನುವುದು ಇಂದಿಗೆ ದೊಡ್ಡ ವಿಷಯವಾಗಿ ಉಳಿದಿಲ್ಲ. ಎಲ್ಲವೂ ಸರಿಯಿದ್ದು ಕೂಡ ಇಂದಿನ ಪೀಳಿಗೆಯ ಜನ ಕೆಲಸ ಬದಲಾಯಿಸುತ್ತಾರೆ. ಆರು ತಿಂಗಳು, ವರ್ಷ ಬ್ರೇಕ್ ತೆಗೆದುಕೊಳ್ಳುತ್ತಾರೆ. ಅವರು ಬದುಕನ್ನು ನೋಡುವ ರೀತಿ ಪೂರ್ಣ ಬದಲಾಗಿದೆ. ಯಾವುದು ಮಹಾಪರಾಧ ಎಂದುಕೊಂಡಿದ್ದೆವೂ ಅದು ಈಗ ಸಾಮಾನ್ಯವಾಗಿದೆ. ಕೆಲಸ ಬಿಡುವುದು, ಬದಲಿಸುವುದು ಇಂದು ಅಪರಾಧವಲ್ಲ, ಅದು ವೈಯಕ್ತಿಕ ನಿರ್ಧಾರ ಎನ್ನುವ ಮಟ್ಟಕ್ಕೆ ಬದಲಾಗಿದೆ.

ಹೋಗುವ ಮುನ್ನ: ಮಾಡುವ ಕೆಲಸವನ್ನು ಪ್ರೀತಿಸು, ಸಂಸ್ಥೆಯನ್ನಲ್ಲ ಎನ್ನುವ ಮಾತು ಇಂದಿನ ದಿನಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ. ಅದರ ಜೊತೆಗೆ ಇನ್ನೊಂದು ಪ್ರಮುಖ ಅಂಶವನ್ನು ಕೂಡ ಸೇರಿಸಲು ಬಯಸುತ್ತೇನೆ. ಯಾವುದೇ ಕಾರಣಕ್ಕೂ ಕೆಲಸ ಮಾಡಿ ಹೊರಬಂದ ಸಂಸ್ಥೆಯ ಬಗ್ಗೆ ಹಗುರವಾದ ಮಾತುಗಳನ್ನು ಆಡುವುದು ಬೇಡ. ಇದ್ದಷ್ಟು ದಿನ ಕೆಲಸದ ಜೊತೆಗೆ ಸಂಸ್ಥೆಯನ್ನು ಕೂಡ ಪ್ರೀತಿಸಬೇಕು ಅದರಲ್ಲಿ ತಪ್ಪಿಲ್ಲ. ಸಂಸ್ಥೆ ಹೇಗೆ ಲಾಭ ನಷ್ಟ ನೋಡಿಕೊಳ್ಳುತ್ತದೆ ಹಾಗೆ ವೈಯಕ್ತಿಯ ಲಾಭ ನಷ್ಟ ನೋಡಿಕೊಳ್ಳುವುದು ಕೂಡ ಕೆಲಸಗಾರರ ತಪ್ಪಲ್ಲ. ಆತುರದಲ್ಲಿ ಬದಲಾವಣೆ ಬೇಕು ಎಂದು ನಿರ್ಧಾರ ತೆಗೆದುಕೊಳ್ಳುವುದು ಬೆಂಕಿಯಿಂದ ಬಾಣಲೆಗೆ ಬಿದ್ದ ಹಾಗೆ ಎನ್ನುವ ಸರಳ ತತ್ವ ನೆನಪಿರಲಿ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com