
ಭಾರತ ದೇಶದ ಪೌರತ್ವವನ್ನು ತ್ಯಜಿಸಿ ಬೇರೆ ದೇಶದಲ್ಲಿ ಕೆಲಸ ಬದುಕು ಕಂಡುಕೊಂಡ ಬಹಳಷ್ಟು ಜನ ಆಯಾ ದೇಶದ ಪೌರತ್ವವನ್ನು ಪಡೆದುಕೊಂಡಿದ್ದಾರೆ. ಹೀಗೆ ಬೇರೆ ದೇಶದ ಪೌರತ್ವವನ್ನು ಪಡೆದುಕೊಂಡವರು ಭಾರತೀಯ ಮೂಲದವರು ಎನ್ನುವುದನ್ನು ಯಾರೂ ಅಲ್ಲಗೆಳೆಯಲು ಬರುವುದಿಲ್ಲ. ಕಾನೂನಿನ ಪ್ರಕಾರ ನಂಟನ್ನು ತೊರೆದು ಕೊಂಡು ಬೇರೆ ದೇಶದ ಪ್ರಜೆ ಎನ್ನಿಸಿಕೊಂಡರೂ ಭಾವನಾತ್ಮಕವಾಗಿ ಭಾರತದೊಂದಿಗೆ ಇರುವ ಭಾವನೆಯನ್ನು ತೊರೆದು ಕೊಳ್ಳುವುದು ಪೌರತ್ವವನ್ನು ತ್ಯಜಿಸಿದಷ್ಟು ಸುಲಭವಲ್ಲ.
ಹೀಗಾಗಿ ಭಾರತೀಯ ಮೂಲದವರಿಗೆ ಅಂದರೆ ವಿದೇಶಿ ಪೌರತ್ವವನ್ನು ಪಡೆದುಕೊಂಡವರಿಗೆ ಮೊದಲಿಗೆ ಪರ್ಸನ್ ಆಫ್ ಇಂಡಿಯನ್ ಅರಿಜಿನ್ ಎನ್ನುವ ಒಂದು ಗುರುತಿನ ಚೀಟಿಯನ್ನು ನೀಡಲಾಗುತ್ತಿತ್ತು. ಇದನ್ನು ಪಡೆದು ಕೊಂಡವರು ಭಾರತದಲ್ಲಿ 180 ದಿನಗಳ ಕಾಲ ಜೀವಿಸಲು ಅವಕಾಶವಿತ್ತು. ಭಾರತಕ್ಕೆ ಬರಲು ಯಾವುದೇ ವೀಸಾ ಅವಶ್ಯಕತೆ ಇರಲಿಲ್ಲ. ಆದರೆ ಭಾರತಕ್ಕೆ ಬಂದ ಮೇಲೆ ಇಲ್ಲಿರುವ ಫಾರಿನ್ ರೀಜನಲ್ ರಿಜಿಸ್ಟ್ರೇಷನ್ ಆಫೀಸ್ (FRRO) ನಲ್ಲಿ ನೋಂದಣಿ ಮಾಡಕೊಳ್ಳಬೇಕಾಗಿತ್ತು. 180ದಿನದ ನಂತರವೂ ಇಲ್ಲಿ ವಾಸಿಸಬೇಕು ಎಂದರೆ ಮತ್ತೆ ನೋಂದಣಿ ಮಾಡಿಸ ಬೇಕಾಗಿತ್ತು.
ಅನಿವಾಸಿ ಭಾರತೀಯರಿಗೆ ಇದು ಬಹಳ ಕಿರಿಕಿರಿ ನೀಡುವ ಪ್ರಕ್ರಿಯೆಯಾಗಿತ್ತು. ಅವರು ದ್ವಿಪೌರತ್ವವನ್ನು ನೀಡಿ ಎನ್ನುವ ಬೇಡಿಕೆಯನ್ನು ಭಾರತ ಸರಕಾರದ ಮುಂದಿಟ್ಟಿದ್ದರು. ಇದನ್ನು ಪರಿಗಣಿಸಿ ದ್ವಿಪೌರತ್ವವನ್ನು ನೀಡುವ ಬದಲಿಗೆ OCI ಅಂದರೆ ಓವರ್ಸಿಸ್ ಸಿಟಿಜನ್ ಆಫ್ ಇಂಡಿಯಾ ಎನ್ನುವ ಹೊಸ ಗುರುತಿನ ಚೀಟಿಯನ್ನು ವಿತರಿಸಲು 2005ರಿಂದ ಶುರು ಮಾಡಿದರು. ಇಂದಿಗೆ ಅಂದರೆ 2023 ರ ವೇಳೆಗೆ ಒಟ್ಟಾರೆ ಓಸಿಐ ಕಾರ್ಡ್ ಹೊಂದಿರುವವರ ಸಂಖ್ಯೆ 45 ಲಕ್ಷಕ್ಕೂ ಹೆಚ್ಚು!
ಈ ರೀತಿಯ ಓಸಿಐ ಕಾರ್ಡ್ ಹೊಂದಿರುವವರು ಭಾರತಕ್ಕೆ ಬರಲು ಯಾವುದೇ ವೀಸಾ ಅವಶ್ಯಕತೆ ಇಲ್ಲ. ಹಿಂದೆ ಪರ್ಸನ್ ಆಫ್ ಇಂಡಿಯನ್ ಅರಿಜಿನ್ ಐದು ಅಥವಾ ಹತ್ತು ವರ್ಷಕ್ಕೆ ವಿತರಿಸಲಾಗುತ್ತಿತ್ತು. ಓಸಿಐ ಕಾರ್ಡ್ಗೆ ಯಾವುದೇ ಸಮಯದ ಮಿತಿಯಿಲ್ಲ ಅಂದರೆ ಇದು ಜೀವಿತಾವಧಿಗೆ ಇಶ್ಯೂ ಮಾಡಿದ ಗುರುತಿನ ಚೀಟಿಯಾಗಿದೆ. ಇಂತಹ ಕಾರ್ಡ್ ಹೊಂದಿರುವವರು:
ಭಾರತದಲ್ಲಿ ಎಷ್ಟು ದಿನ ಬೇಕಾದರೂ ಇರಬಹುದು. FRRO ದಲ್ಲಿ ನೋಂದಣಿ ಮಾಡಿಸುವ ಅವಶ್ಯಕತೆಯಿಲ್ಲ. ಅಂದರೆ ಹಿಂದೆ ಇದ್ದ ಹಾಗೆ ಪ್ರತಿ 180 ದಿನಕ್ಕೆ ಒಮ್ಮೆ ನೋಂದಣಿ ಮಾಡಿಸುವ ತಲೆನೋವು ಇಲ್ಲ. ಬೇರೆ ಭಾರತೀಯ ಪ್ರಜೆಗಳು ಹೇಗೆ ವಾಸಿಸುತ್ತಾರೆ ಹಾಗೆ ವಾಸಿಸಬಹುದು.
ಭಾರತದಲ್ಲಿ ಯಾವುದೇ ರೀತಿಯ ಸರಕಾರಿ ಕೆಲಸ ಮಾಡಲು ಇವರು ಅನರ್ಹರು ಎಂದು ಪರಿಗಣಿಸಲಾಗುತ್ತದೆ.
ಯಾವುದೇ ರೀತಿಯ ರಾಜಕೀಯ ಚುನಾವಣೆಗಳಿಗೆ ಸ್ಪರ್ಧಿಸಲು ಸಾಧ್ಯವಿಲ್ಲ
ಚುನಾವಣೆಯಲ್ಲಿ ವೋಟ್ ಮಾಡುವ ಹಕ್ಕನ್ನು ಕೂಡ ಕಳೆದುಕೊಳ್ಳುತ್ತಾರೆ.
ಕೃಷಿ ಭೂಮಿಯನ್ನು ಕೊಳ್ಳುವಂತಿಲ್ಲ. ಉಳಿದಂತೆ ಬೇರೆ ರೀತಿಯ ರೆಸಿಡೆನ್ಸಿಯಲ್ ಅಥವಾ ವಾಣಿಜ್ಯ ನೆಲ ಅಥವಾ ಕಟ್ಟಡದವನ್ನು ಕೊಳ್ಳಲು ಯಾವುದೇ ಅಡ್ಡಿಯಿಲ್ಲ.
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು, ಬೇರೆ ಕೆಲಸಗಳಲ್ಲಿ ತೊಡಗಿಕೊಳ್ಳುವುದು , ಸಂಸ್ಥೆಗಳಲ್ಲಿ ಹೂಡಿಕೆ ಮಾಡುವುದು, ಡೈರೆಕ್ಟರ್ ಆಗುವುದು ಎಲ್ಲವೂ ಒಪ್ಪಿತ.
ತೀರಾ ಇತ್ತೀಚಿಗೆ ಹೊಸ ಒಂದಷ್ಟು ನಿಯಮಾವಳಿಗಳು ಜಾರಿಗೆ ಬಂದಿವೆ ಅಂದರೆ ಇದು ಜಾರಿಗೆ ಬಂದದ್ದು 2021ರಲ್ಲಿ , ಆದರೆ ಅದು ಈಗ ಅಂದರೆ 2024ರಲ್ಲಿ ಸುದ್ದಿಯಾಗುತ್ತಿದೆ. ಹೀಗಾಗಿ ಮಿನಿಸ್ಟ್ರಿ ಆಫ್ ಎಕ್ಸ್ಟರ್ನಲ್ ಅಫ್ಫೇರ್ಸ್ ಇದಕ್ಕೆ ಒಂದು ಕ್ಲಾರಿಫಿಕೇಷನ್ ಕೂಡ ನೀಡಿದೆ.ಅದು ನೀಡಿರುವ ಹೇಳಿಕೆ ಪ್ರಕಾರ ಇಂದಿಗೆ ಯಾವ ಹೊಸ ನಿಯಮಾವಳಿಗಳನ್ನು ಸಹ ಜಾರಿಗೆ ತಂದಿಲ್ಲ. 2021ರಲ್ಲಿ ಒಂದಷ್ಟು ಹೊಸ ನಿಯಮಗಳನ್ನು ಜಾರಿಗೆ ತರಲಾಗಿತ್ತು ಅದರ ಪ್ರಕಾರ:
ಓಸಿಐ ಕಾರ್ಡ್ ಹೊಂದಿರವವರು ಜಮ್ಮು ಕಾಶ್ಮೀರ ಮರ್ರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುವುದಕ್ಕೆ ಮುಂಚೆ ಅನುಮತಿಯನ್ನು ಪಡೆದುಕೊಳ್ಳಬೇಕಾಗುತ್ತದೆ.
ಭಾರತದಲ್ಲಿ ಯಾವುದೇ ರೀತಿಯ ರಿಸೆರ್ಚ್ ಮಾಡಲು ಕೂಡ ಅನುಮತಿಯನ್ನು ತೆಗೆದುಕೊಳ್ಳಬೇಕಾಗುತ್ತದೆ.
ಯಾವುದೇ ರೀತಿಯ ಧಾರ್ಮಿಕ ಕಾರ್ಯಗಳನ್ನು ನಡೆಸಲು ಅನುಮತಿಯನ್ನು ಪಡೆಯ ಬೇಕಾಗುತ್ತದೆ ಅಂದರೆ ಮಿಶನರಿ, ತಬ್ಬಲಿಗ್ ಕಾರ್ಯಗಳಿಗೆ, ಮೌಂಟನೇರಿಂಗ್, ಮತ್ತು ಜರ್ನಲಿಸ್ಟ್ ಕೆಲಸ ಕಾರ್ಯಗಳಿಗೆ ಕೂಡ ಅನುಮತಿಯನ್ನು ಪಡೆಯಬೇಕಾಗುತ್ತದೆ.
ಭಾರತೀಯ ಮೂಲದ ಅಥವಾ ವಿದೇಶಿ ಮೂಲದ ಯಾವುದೇ ಸಂಸ್ಥೆ ಅಥವಾ ವಿದೇಶಿ ಸರಕಾರದ ಡಿಪ್ಲೊಮ್ಯಾಟ್ ಯೂನಿಟ್ಗಳು ಅಥವಾ ಇನ್ನಿತರೇ ಸಂಸ್ಥೆಗಳಲ್ಲಿ ಭಾರತಲ್ಲಿದ್ದು ಅಲ್ಲಿ ಇಂಟರ್ನ್ಶಿಪ್ ಅಥವಾ ಕೆಲಸವನ್ನು ಮಾಡಲು ಕೂಡ ವಿಶೇಷ ಅನುಮತಿಯನ್ನು ಪಡೆದುಕೊಳ್ಳಬೇಕಾಗುತ್ತದೆ.
ಉಳಿದಂತೆ ವಿದ್ಯಾರ್ಥಿಗಳು ಇಲ್ಲಿ ನೆಲೆ ನಿಂತು ವಿದ್ಯಾಭ್ಯಾಸ ಮಾಡಲು ಯಾವುದೇ ರಿಸ್ಟ್ರಿಕ್ಷನ್ ಇಲ್ಲ. ಆದರೆ ಭಾರತೀಯರಿಗೆ ಎಂದು ಮೀಸಲಾಗಿರುಸುವ ಸೀಟುಗಳಿಗೆ ಅದು ಇಂಜಿನಿಯರಿಂಗ್ ಅಥವಾ ಮೆಡಿಕಲ್ ಇರಬಹುದು ಅಲ್ಲಿ ಸ್ಪರ್ಧಿಸಲು ಅವಕಾಶವಿಲ್ಲ. ಈ ವಿಷಯದಲ್ಲಿ ಇಂತಹ ವಿದ್ಯಾರ್ಥಿಗಳನ್ನು ಅನಿವಾಸಿ ಭಾರತೀಯ ಎಂದು ಪರಿಗಣಿಸಲಾಗುತ್ತದೆ.
ಹೀಗಾಗಿ ಎನ್ ಆರ್ ಐ ಕೋಟಾದಲ್ಲಿ ಸ್ಪರ್ಧಿಸಲು ಅವಕಾಶವಿದೆ. ಉಳಿದಂತೆ ವೈದ್ಯರಾಗಿ, ವಕೀಲರಾಗಿ , ಚಾರ್ಟರ್ಡ್ ಅಕೌಂಟ್ ಆಗಿ ಭಾರತದಲ್ಲಿ ಕೆಲಸ ಮಾಡಲು ಕೂಡ ಅಡ್ಡಿಯಿಲ್ಲ. ಆದರೆ ಇಂತಹ ಕೆಲಸವನ್ನು ಸ್ವತಃ ಅಥವಾ ಖಾಸಗಿ ಕಂಪನಿಯ ಕೆಲಸದಲ್ಲಿ ತೊಡಗಿ ಕೊಳ್ಳಬಹುದು. ಸರಕಾರಿ ಅಥವಾ ಅದಕ್ಕೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಕೆಲಸ ಮಾಡುವುದು ಒಪ್ಪಿತವಲ್ಲ.
ಓಸಿಐ ಹೊಂದಿರವವರು ಕೃಷಿ ಭೂಮಿಯನ್ನು ಹೊಂದುವಂತಿಲ್ಲ ಅಂದರೆ ಅವರು ಖರೀದಿ ಮಾಡುವಂತಿಲ್ಲ. ಅಪ್ಪ, ಅಮ್ಮನ ಬಳಿ ಈರೀತಿಯ ಕೃಷಿ ಜಮೀನು ಇದ್ದು ಅವರು ಅದನ್ನು ಮಗ ಅಥವಾ ಮಗಳಿಗೆ ಗಿಫ್ಟ್ ಡೀಡ್ ಮೂಲಕ ಕೊಟ್ಟರೆ ಅದನ್ನು ಸ್ವೀಕರಿಸಲು ಅಡ್ಡಿಯಿಲ್ಲ.
ನಿಜ ಹೇಳಬೇಕಂದರೆ ಓಸಿಐ ಹೊಂದಿರುವುದು ಹೆಚ್ಚು ಕಡಿಮೆ ದ್ವಿಪೌರತ್ವ ಹೊಂದಿರುವಂತೆಯೇ ಇದೆ. ಮೇಲೆ ಹೇಳಿದ ಒಂದಷ್ಟು ನಿಯಮಗಳು ಲಾಗೂ ಆಗುತ್ತದೆ ಎನ್ನುವುದನ್ನು ಬಿಟ್ಟರೆ ಮುಕ್ಕಾಲು ಪಾಲು ಸಾಮಾನ್ಯ ಭಾರತೀಯ ಪ್ರಜೆಯಂತೆ ಬದುಕಲು ಯಾವುದೇ ತೊಂದರೆಯಿಲ್ಲ. ಇಲ್ಲಿನ ಪ್ರೇಕ್ಷಣೀಯ ಸ್ಥಳಗಳಿಗೆ ಹೋದರೆ ಮತ್ತು ಅಲ್ಲಿ ಪ್ರವೇಶಕ್ಕೆ ಶುಲ್ಕವಿದ್ದರೆ ಅಲ್ಲೂ ಕೂಡ ಭಾರತೀಯ ಪ್ರಜೆಗೆ ಯಾವ ಶುಲ್ಕವಿದೆ ಅದೇ ಶುಲ್ಕವನ್ನು ಇವರು ಕೂಡ ನೀಡಬೇಕಾಗುತ್ತದೆ.
ನಿಮಗೆಲ್ಲಾ ಗೊತ್ತಿರಲಿ ವಿದೇಶಿ ಪ್ರಜೆಗಳಿಗೆ ಬೇರೆಯ ಶುಲ್ಕವಿರುತ್ತದೆ. ಒಟ್ಟಾರೆ ಹೇಳಬೇಕೆಂದರೆ ಒಂದಷ್ಟು ನಿಯಮಗಳನ್ನು ಬಿಟ್ಟರೆ ಇವರು ಕೂಡ ಸಾಮಾನ್ಯ ಭಾರತೀಯ ಪ್ರಜೆಯಂತೆ ಬದುಕುಬಹುದು. ಕೆಲವು ನಿಯಮಗಳು ದೇಶದ ಹಿತ ದೃಷ್ಟಿಯಿಂದ ಮಾಡಿರುವ ಕಾರಣ ಅದನ್ನು ಪ್ರಶ್ನಿಸಲು ಬರುವುದಿಲ್ಲ. ಆದರೆ ಅದೇ ಸಮಯದಲ್ಲಿ 45 ಲಕ್ಷದ ಜನರಲ್ಲಿ ದೇಶದ ಹಿತಕ್ಕೆ ಧಕ್ಕೆ ತರುವ ಜನರ ಸಂಖ್ಯೆ ಎಷ್ಟಿರಬಹುದು? 50, 100? ಅದಕ್ಕೆ ಉಳಿದ ಅಷ್ಟು ಜನಕ್ಕೂ ಈ ನಿಯಮಗಳನ್ನು ಜಾರಿಗೆ ತರುವುದು ಏಕೆ? ಎನ್ನುವುದು ಈ 45 ಲಕ್ಷ ಓವರ್ಸಿಸ್ ಇಂಡಿಯನ್ ಸಿಟಿಜನ್ಗಳ ಪ್ರಶ್ನೆ.
ನೀವು ಗಮನಿಸಿ ನೋಡಿ ಅವರು ಅಲ್ಲಿ ಜೀವಿಸುತ್ತಿದ್ದಾರೆ. ಅಲ್ಲಿ ಬದುಕಲು ಬೇಕಾದಷ್ಟು ಮಾತ್ರ ಮಾಡಿಕೊಳ್ಳುತ್ತಾರೆ. ಉಳಿದಂತೆ ಹೆಚ್ಚಿನ ಹಣವನ್ನು ಅವರು ಹೂಡಿಕೆ ಮಾಡುವುದು ಭಾರತದಲ್ಲಿ ! ಪಾಸ್ಪೋರ್ಟ್ ಬಣ್ಣ ಬದಲಾಗಬಹುದು ಆದರೆ ಭಾರತದ ಬಗ್ಗೆ ಮನಸ್ಸಿನಲ್ಲಿ ಇರುವ ಭಾವನೆ ಹೇಗೆ ಬದಲಾಗಲು ಸಾಧ್ಯ? ಇನ್ನೊಂದು ಮುಖ್ಯ ಅಂಶ ಇಲ್ಲಿಯವರೆಗೆ ಅಂದರೆ 2005 ರಿಂದ 2024ರ ವರೆಗೆ 156 ಓಸಿಐ ಕಾರ್ಡುಗಳನ್ನು ರದ್ದು ಪಡಿಸಲಾಗಿದೆ. ಹೀಗೆ ರದ್ದು ಪಡಿಸಲು ಕೂಡ ಬೇರೆ ಬೇರೆ ಕಾರಣಗಳಿವೆ. ದೇಶದ ಹಿತ ರಕ್ಷಣೆ ದೃಷ್ಟಿಯಿಂದ ರದ್ದಾಗಿರುವ ಸಂಖ್ಯೆ 156 ರಲ್ಲಿ ಎಷ್ಟು ಎನ್ನುವ ಮಾಹಿತಿ ಇಲ್ಲ. ಹೆಚ್ಚೆಂದರೆ ಒಂದೆರೆಡು ಇರಬಹುದು ಅಥವಾ ಇಲ್ಲದೆಯೂ ಇರಬಹುದು .
ಕೊನೆಮಾತು:
ಓವರ್ಸಿಸ್ ಸಿಟಿಜನ್ಸ್ ಆಫ್ ಇಂಡಿಯಾ ಅಡಿಯಲ್ಲಿ ಬರುವ 45 ಲಕ್ಷ ಜನರಿಗೆ ಭಾರತೀಯ ದ್ವಿಪೌರತ್ವವನ್ನು ನೀಡಬೇಕು. ಈ ರೀತಿಯ ಬೇಡಿಕೆಯನ್ನು ಬಹಳ ವರ್ಷಗಳಿಂದ ಭಾರತೀಯ ಸರಕಾರದ ಮುಂದೆ ಇಡಲಾಗುತ್ತಿದೆ. ಆದರೆ ಅದೇಕೋ ಸರಕಾರ ಇನ್ನು ಮನಸ್ಸು ಮಾಡಿಲ್ಲ. 45 ಲಕ್ಷದಲ್ಲಿ 17 ಲಕ್ಷ ಭಾರತೀಯ ಅಮೆರಿಕನ್ನರು, 10 ಲಕ್ಷ ಭಾರತೀಯ ಬ್ರಿಟಿಷರು , ಐದು ಲಕ್ಷ ಜನ ಭಾರತೀಯ ಆಸ್ಟ್ರೇಲಿಯನ್ನರು, 4 ಲಕ್ಷ ಜನ ಕೆನಡಿಯನ್ ಭಾರತೀಯರು ಉಳಿದ 9 ಲಕ್ಷ ಜನರು ಜಗತ್ತಿನ 129 ದೇಶದಲ್ಲಿ ಹರಿದು ಹಂಚಿ ಹೋಗಿದ್ದಾರೆ. ಇವರಿಂದ ಭಾರತಕ್ಕೆ ಹೆಚ್ಚು ಲಾಭ, ನಷ್ಟದ ಬಾಬತ್ತು ಇಲ್ಲವೇ ಇಲ್ಲ ಎನ್ನಬಹುದು. ಹೀಗಿರುವಾಗ ಸರಕಾರ ಇವರಿಗೆ ದ್ವಿಪೌರತ್ವ ನೀಡುವ ನಿಟ್ಟಿನಲ್ಲಿ ಚಿಂತಿಸುವಂತಾಗಲಿ.
Advertisement