ಷೇರು ಮಾರುಕಟ್ಟೆ ಇನ್ನೊಂದು ಬಾರಿ ಭಾರಿ ಕುಸಿತವನ್ನು ಕಂಡಿದೆ. ಕುಸಿತ ಕಂಡ ಎರಡು ದಿನದಲ್ಲಿ ಆಗಲೇ ಒಂದಷ್ಟು ಚೇತರಿಕೆಯ ಹಾದಿಯನ್ನು ಕೂಡ ಅದು ತುಳಿದಿದೆ. ಷೇರು ಮಾರುಕಟ್ಟೆ ಎಂದರೆ ಈ ರೀತಿಯ ಏರುಪೇರು ಅತ್ಯಂತ ಸಹಜ. ಈ ರೀತಿಯ ಏರುಪೇರು ಇರುವುದರಿಂದಲೆ ಇಲ್ಲಿ ಸಂಪತ್ತು ಸೃಷ್ಟಿಸಲು ಸಾಧ್ಯವಾಗುತ್ತಿದೆ.
ಇದ್ಯಾವುದೂ ಏರಿಳಿತಗಳು ಬೇಡ ಎಂದರೆ ಹೂಡಿಕೆಯ ಬದಲು ಉಳಿಕೆ ಮಾಡುವುದು ಉತ್ತಮ. ಅಂದರೆ ಹಣವನ್ನು ಪೋಸ್ಟ್ ಆಫೀಸ್ ಅಥವಾ ಬ್ಯಾಂಕಿನ ಫಿಕ್ಸೆಡ್ ಡೆಪಾಸಿಟ್ ನಲ್ಲಿ ತೊಡಗಿಸುವುದು. ಇಲ್ಲಿ ಯಾವುದೇ ಏರಿಳಿತ ಇರುವುದಿಲ್ಲ. ಆದರೆ ಇಲ್ಲಿ ಸಿಗುವ ರಿಟರ್ನ್ಸ್ ನಗಣ್ಯ. ಅದು ಇಂದು ಮಾರುಕಟ್ಟೆಯಲ್ಲಿರುವ ಹಣದುಬ್ಬರವನ್ನು ಮೀರಿಸಲು ಸಾಧ್ಯವಿಲ್ಲ. ಇದರರ್ಥ ಬ್ಯಾಂಕಿನಲ್ಲಿ ತೊಡಗಿಸಿದ ಹಣ ಪ್ರತಿ ದಿನವೂ ಒಂದಷ್ಟು ಮೌಲ್ಯವನ್ನು ಕಳೆದುಕೊಳ್ಳುತ್ತದೆ.
ಹೀಗೆ ಕಳೆದುಕೊಂಡ ಮೌಲ್ಯವನ್ನು ನೀವು ಮತ್ತೆ ಮರಳಿ ಪಡೆಯಲು ಸಾಧ್ಯವಿಲ್ಲ. ಆದರೆ ಮಾರುಕಟ್ಟೆಯಲ್ಲಿ ಕಂಡಿರುವ ಕುಸಿತ ರಿಕವರಿ ಆಗುತ್ತದೆ. ಒಂದಷ್ಟು ಸಮಯ ತೆಗೆದುಕೊಳ್ಳುತ್ತದೆ. ಆದರೆ ಮಾರುಕಟ್ಟೆ ರಿಬೌಂಡ್ ಆದಾಗ ನಮ್ಮ ಹೂಡಿಕೆ ಮರಳಿ ಮೌಲ್ಯವನ್ನು ಕೂಡ ವೃದ್ಧಿಸಿಕೊಳ್ಳುತ್ತದೆ. ನಿಮಗೆಲ್ಲಾ ನೆನಪಿರಲಿ ಎಲ್ಲಿಯ ತನಕ ನಾವು ಅಯ್ಯೋ ಮಾರುಕಟ್ಟೆ ಕುಸಿಯಿತು ಎನ್ನುವ ಪ್ಯಾನಿಕ್ ಮನಸ್ಥಿತಿಯಲ್ಲಿ ನಮ್ಮ ಷೇರುಗಳನ್ನು ಮಾರುವುದಿಲ್ಲ ಅಲ್ಲಿಯವರೆಗೆ ಅದನ್ನು ನಾವು ನಷ್ಟ ಎಂದು ಹೇಳಲು ಬರುವುದಿಲ್ಲ. ಅದನ್ನು ನೋಷನಲ್ ಲಾಸ್ ಎಂದಷ್ಟೇ ಹೇಳಬಹುದು. ಸಮಯದ ಜೊತೆಗೆ ಆ ನಷ್ಟವನ್ನು ಲಾಭವನ್ನಾಗಿ ಪರಿವರ್ತಿಸುವ ಅವಕಾಶ ಖಂಡಿತ ಇಲ್ಲಿದೆ.
ಹೀಗೆ ಕಳೆದುಕೊಂಡ ಮೌಲ್ಯವನ್ನು ನೀವು ಮತ್ತೆ ಮರಳಿ ಪಡೆಯಲು ಸಾಧ್ಯವಿಲ್ಲ. ಆದರೆ ಮಾರುಕಟ್ಟೆಯಲ್ಲಿ ಕಂಡಿರುವ ಕುಸಿತ ರಿಕವರಿ ಆಗುತ್ತದೆ. ಒಂದಷ್ಟು ಸಮಯ ತೆಗೆದುಕೊಳ್ಳುತ್ತದೆ. ಆದರೆ ಮಾರುಕಟ್ಟೆ ರಿಬೌಂಡ್ ಆದಾಗ ನಮ್ಮ ಹೂಡಿಕೆ ಮರಳಿ ಮೌಲ್ಯವನ್ನು ಕೂಡ ವೃದ್ಧಿಸಿಕೊಳ್ಳುತ್ತದೆ. ನಿಮಗೆಲ್ಲಾ ನೆನಪಿರಲಿ ಎಲ್ಲಿಯ ತನಕ ನಾವು ಅಯ್ಯೋ ಮಾರುಕಟ್ಟೆ ಕುಸಿಯಿತು ಎನ್ನುವ ಪ್ಯಾನಿಕ್ ಮನಸ್ಥಿತಿಯಲ್ಲಿ ನಮ್ಮ ಷೇರುಗಳನ್ನು ಮಾರುವುದಿಲ್ಲ ಅಲ್ಲಿಯವರೆಗೆ ಅದನ್ನು ನಾವು ನಷ್ಟ ಎಂದು ಹೇಳಲು ಬರುವುದಿಲ್ಲ. ಅದನ್ನು ನೋಷನಲ್ ಲಾಸ್ ಎಂದಷ್ಟೇ ಹೇಳಬಹುದು. ಸಮಯದ ಜೊತೆಗೆ ಆ ನಷ್ಟವನ್ನು ಲಾಭವನ್ನಾಗಿ ಪರಿವರ್ತಿಸುವ ಅವಕಾಶ ಖಂಡಿತ ಇಲ್ಲಿದೆ.
ಜನ 3 ಅಥವಾ 4 ವರ್ಷ ಡಿಗ್ರಿ ಪಡೆಯಲು ಸಮಯ ವ್ಯಯಿಸುತ್ತಾರೆ. ಇದಕ್ಕೆ ಲಕ್ಷಾಂತರ ರೂಪಾಯಿ ಹಣ ಕೂಡ ವ್ಯಯಿಸುತ್ತಾರೆ. ಕೆಲಸದ ಮಾರ್ಕೆಟ್ನಲ್ಲಿ 12/15/18/20 ಸಾವಿರ ಮಾಸಿಕ ಸಂಬಳಕ್ಕೆ ಮೊದಲ ಒಂದೆರೆಡು ವರ್ಷ ಅನುಭವ ಪಡೆದುಕೊಳ್ಳಲು ದಿನಾ 10/12 ಗಂಟೆ ಕೆಲಸ ಮಾಡುತ್ತಾರೆ. ಆದರೆ ಷೇರು ಮಾರುಕಟ್ಟೆಯಲ್ಲಿ ಹಾಕಿದ ಹಣ ಮಾತ್ರ ಕೆಲವೇ ಗಂಟೆ ಅಥವಾ ದಿನದಲ್ಲಿ ಡಬಲ್ ಆಗಿಬಿಡಬೇಕು .ಇಲ್ಲದಿದ್ದರೆ ಷೇರು ಮಾರುಕಟ್ಟೆ ಮೇಲಿನ ಹೂಡಿಕೆ ಸರಿಯಿಲ್ಲ ಅಂತ ಷರಾ ಬರೆದು ಬಿಡುತ್ತಾರೆ. ಇದು ತಪ್ಪು . ಇಸ್ರೇಲ್ ಲೆಬಾನಾನ್ ಮೇಲೆ ಗುಂಡಿನ ಮಳೆ ಹರಿಸಿದೆ.ಆದರೂ ಭಾರತೀಯ ಷೇರು ಮಾರುಕಟ್ಟೆ ಭದ್ರವಾಗಿದೆ . ಕೇವಲ ಹತ್ತು ವರ್ಷದ ಹಿಂದೆ ಯುದ್ಧ ಆಗುತ್ತಂತೆ ಎನ್ನುವ ಸುದ್ದಿಗೆ ನೆಲ ಕಚ್ಚಿರುತಿತ್ತು.
ಪ್ರತಿ ಬಾರಿಯೂ ಈ ವಿಷಯವನ್ನು ನಾನು ಪುನರಾವರ್ತಿಸುತ್ತೇನೆ. ಏಕೆಂದರೆ ಈ ವಿಷಯವನ್ನು ಎಷ್ಟು ಬಾರಿ ಹೇಳಿದರೂ ಕಡಿಮೆ ಎಂದು ನನ್ನ ಭಾವನೆ. ಒಂದು ದಶಕದ ಹಿಂದೆ ನಮ್ಮ ಮಾರುಕಟ್ಟೆ ಅಮೇರಿಕಾ ಸೀನಿದರೆ ಸಾಕು ಕುಸಿಯುತಿತ್ತು. ಉತ್ತರ ಕೊರಿಯಾ ದಕ್ಷಿಣ ಕೊರಿಯಾದ ಮೇಲೆ ಕ್ಷಿಪಣಿ ದಾಳಿ ಮಾಡುತ್ತದೆಯಂತೆ ಎನ್ನುವ ಗಾಳಿ ಮಾತು ಮಾರುಕಟ್ಟೆ ಕುಸಿತಕ್ಕೆ ಕಾರಣವಾಗುತ್ತಿತ್ತು. ಇಂದು ಆ ಪರಿಸ್ಥಿಯಿಲ್ಲ. ರಷ್ಯಾ ಉಕ್ರೈನ್ ಯುದ್ಧ ವರ್ಷದ ಮೇಲಾಗಿದೆ, ಅದು ಮಾರುಕಟ್ಟೆಯ ಮೇಲೆ ಒಂದಷ್ಟು ಪರಿಣಾಮ ಬೀರಿತು ಆದರೆ ಅಷ್ಟೇ ವೇಗದಲ್ಲಿ ರಿಕವರಿ ಕೂಡ ಆಯ್ತು. ಇದರರ್ಥ ಭಾರತೀಯ ಮಾರುಕಟ್ಟೆ ಆಂತರಿಕವಾಗಿ ಭದ್ರವಾಗಿದೆ. ಇಲ್ಲಿನ ಹೂಡಿಕೆದಾರ ಜಾಗತಿಕವಾಗಿ ಆಗುವ ಬದಲಾವಣೆಗಳಿಗೆ ಮೊದಲಿನಷ್ಟು ಸೆನ್ಸಿಟಿವ್ ಆಗಿ ಸ್ಪಂದಿಸುತ್ತಿಲ್ಲ.
FII , ಅಂದರೆ ಫಾರಿನ್ ಇನ್ಸ್ಟಿಟ್ಯೂಷನಲ್ ಇನ್ವೆಸ್ಟರ್ಸ್ ಭಾರತೀಯ ಷೇರು ಮಾರುಕಟ್ಟೆಯಿಂದ ಭಾರಿ ಪ್ರಮಾಣದಲ್ಲಿ ಹಣವನ್ನು ಹಿಂತೆಗಿಯುತ್ತಿದ್ದಾರೆ.ಇದು ಕೂಡ ಹೊಸ ವಿಷಯವಲ್ಲ , ಏಕೆಂದರೆ ಈ ರೀತಿ ಹಣವನ್ನು ಕಳೆದ ಐದಾರು ತಿಂಗಳಿಂದ ಮಾಡುತ್ತಿದ್ದಾರೆ. ಪ್ರತಿ ದಿನವೂ ಹತ್ತಾರು ಸಾವಿರ ಕೋಟಿ ರೂಪಾಯಿ ಬಂಡಾವಾಳವನ್ನು ಇವರು ಹೊರತೆಗೆಯುತ್ತಿದ್ದಾರೆ. ಹೊಸ ವಿಷಯವೇನೆಂದರೆ ಹೀಗೆ ತೆಗೆದ ಹಣವನ್ನು ಅವರು ಚೈನಾ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಎನ್ನುವುದು. ಚೀನಾ ಷೇರು ಮಾರುಕಟ್ಟೆ ಕಳೆದ ಒಂದುವಾರದಲ್ಲಿ 20 ಪ್ರತಿಶತ ಏರಿಕೆ ಕಂಡಿದೆ ಎನ್ನುವುದು ಇಲ್ಲಿ ಒಂದಷ್ಟು ತಲ್ಲಣವನ್ನು ಉಂಟುಮಾಡಿರುವುದು ಸುಳ್ಳಲ್ಲ. ಕೇವಲ ಫಾರಿನ್ಇನ್ವೆಸ್ಟರ್ಸ್ ಅಲ್ಲದೆ ಭಾರತೀಯ ಹೂಡಿಕೆದಾರರೂ ಕೂಡ ಚೀನಾ ಮಾರುಕಟ್ಟೆಯಲ್ಲಿ ಹೂಡಿಕೆಗೆ ಮುಂದಾಗಿರುವುದು ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿದೆ.
ಸೆಬಿ ತನ್ನ ನಿಯಮಾವಳಿಗಳಲ್ಲಿ ಒಂದಷ್ಟು ಕಠಿಣತೆಯನ್ನು ತಂದಿದೆ. ಅಂದರೆ ಫ್ಯೂಚರ್ ಮತ್ತು ಅಪ್ಷನ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ಇರುತ್ತಿದ್ದ ಮಾರ್ಜಿನಲ್ ಮನಿ ಲಿಮಿಟ್ ಏರಿಸಲಾಗಿದೆ. ಹೀಗಾಗಿ ಮೊದಲು ಟ್ರೇಡ್ ಮಾಡಲು ಬೇಕಾಗುತ್ತಿದ್ದ ಹಣಕ್ಕಿಂತ ದುಪ್ಪಟ್ಟು ಅಥವಾ ಅದಕ್ಕಿಂತ ಹೆಚ್ಚಿನ ಹಣದ ಅವಶ್ಯಕತೆ ಇದೆ. ಇದು ಭಾರತೀಯ ಟ್ರೇಡರ್ಸ್ ಗಳ ಸೆಂಟಿಮೆಂಟ್ಗೆ ನೋವುಂಟು ಮಾಡಿದ ಕಾರಣ ಅವರ ತಕ್ಷಣದ ಪ್ರತಿಕ್ರಿಯೆ ಮಾರುಕಟ್ಟೆ ಕುಸಿತಕ್ಕೆ ಕಾರಣವಾಯ್ತು. ಆದರೆ ನಿಮಗೆ ಗೊತ್ತಿರಲಿ ಸೆಬಿಯ ಈ ನಿರ್ಧಾರ ಲಕ್ಷಾಂತರ ಇನ್ವೆಸ್ಟರ್ಸ್ ಹಣವನ್ನು ಸಂರಕ್ಷಿಸುವಲ್ಲಿ ಸಹಕಾರಿಯಾಗಿದೆ. ಇಂತಹ ನಿಯಮಗಳು ನಿಜವಾದ ಹೂಡಿಕೆದಾರನಿಗೆ ವರದಾನ.
ಇಸ್ರೇಲ್ ಲೆಬನಾನ್ ಮೇಲೆ ಮಾಡುತ್ತಿರುವ ಯುದ್ಧ ಕೂಡ ಇದಕ್ಕೆ ಒಂದು ಪ್ರಮುಖ ಕಾರಣವಾಗಿದೆ. ಆದರೆ ನೀವು ಗಮನಿಸಿ ನೋಡಿ ಇಸ್ರೇಲ್ ಯುದ್ಧ ಶುರು ಮಾಡಿ ವಾರಗಳು ಮೇಲಾಯ್ತು. ಅಂದು ಕುಸಿಯದ ಮಾರುಕಟ್ಟೆ ಈಗ ಕುಸಿಯಲು ಕಾರಣವೇನು ? ಇರಾನ್ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ಮಾಡಿದ ಮೇಲೆ ಇಸ್ರೇಲ್ ಅದಕ್ಕೆ ಬದಾಲಾಗಿ ಸುಮ್ಮನೆ ಕೂರುವ ಜಾಯಮಾನದ ದೇಶವಲ್ಲ , ಅದನ್ನು ಆ ದೇಶದ ಅಧ್ಯಕ್ಷರು ಬಹಿರಂಗವಾಗಿ ಹೇಳಿದ್ದಾರೆ ಕೂಡ ' ಇದಕ್ಕೆ ಸರಿಯಾದ ಬೆಲೆ ನೀವು ಕಟ್ಟಲಿದ್ದೀರಿ ' ಎನ್ನುವ ಅವರ ಹೇಳಿಕೆಯನ್ನು ಎಲ್ಲರೂ ತಮಗೆ ಬೇಕಾದ ಹಾಗೆ ಅರ್ಥೈಸಿ ಕೊಳ್ಳುತ್ತಿದ್ದಾರೆ. ಇರಾನ್ ದೇಶದ ಥರ್ಮಲ್ ಪ್ಲಾಂಟ್ ಅಥವಾ ನ್ಯೂಕ್ಲಿಯರ್ ಪ್ಲಾಂಟ್ ಮೇಲೆ ಇಸ್ರೇಲ್ ದಾಳಿ ನೆಡಸಬಹುದು ಈ ಕಾರಣ ಮೂರನೇ ಮಹಾಯುದ್ಧಕ್ಕೆ ಅದು ಕಾರಣವಾಗಬಹುದು ಎನ್ನುವ ಭಯದ ಜೊತೆಗೆ ತೈಲ ಬೆಲೆಯಲ್ಲಿ ಹೆಚ್ಚಳವಾಗಬಹುದು ಎನ್ನುವ ತಲ್ಲಣಗಳು ಮಾರುಕಟ್ಟೆಯನ್ನು ಆವರಿಸಿಕೊಂಡಿರುವ ಕಾರಣ ಮಾರುಕಟ್ಟೆ ಕುಸಿತ ಕಂಡಿದೆ.
ನಾವು ಯಾವ ಲೆಕ್ಕಾಚಾರದಲ್ಲಿ ನೋಡಿದರೂ ಭಾರತೀಯ ಷೇರು ಮಾರುಕಟ್ಟೆ ಒಂದಷ್ಟು ಇನ್ಫ್ಲೇಟೆಡ್ ಎನ್ನುವುದನ್ನು ಅಲ್ಲಗೆಳೆಯಲು ಸಾಧ್ಯಾವಿಲ್ಲ. ಅಂದರೆ ಇಲ್ಲಿನ ಹೂಡಿಕೆದಾರರಲ್ಲಿ ಆತ್ಮವಿಶ್ವಾಸ ಅದೆಷ್ಟು ಹೆಚ್ಚಾಗಿದೆ ಎಂದರೆ ಒಂದು ಸಂಸ್ಥೆಯ ಷೇರಿನ ಬೆಲೆ ನಿಜವಾಗಿ 120 ರೂಪಾಯಿ ಎಂದು ಕೊಂಡರೆ ಅದನ್ನು 130/140 ಕೊಟ್ಟು ಖರೀದಿಸಲು ಸಿದ್ಧನಿದ್ದಾನೆ. ಹೂಡಿಕೆದಾರನ ಮನಸ್ಥಿತಿಯ ಲಾಭವನ್ನು ಪಡೆದು ಆ ಬೆಲೆ ಮಾರಾಟಗಳು ಕೂಡ ಆಗಿದೆ. ಇವತ್ತಿಗೆ ಮಾರುಕಟ್ಟೆಯಲ್ಲಿ ಹೊಸ ಬೆಲೆ ಸ್ಟ್ಯಾಂಡರ್ಡ್ ಎನ್ನಿಸಿಕೊಂಡಿದೆ. ಆದರೆ ಅದು ನಿಜವಾದ ಸ್ಟ್ಯಾಂಡರ್ಡ್ ಅಲ್ಲ. ಆ ಕ್ಷಣದ ಡಿಮ್ಯಾಂಡ್ ನಿಂದ ಸೃಷ್ಟಿಯಾದ ಭ್ರಾಮಕ ಮೌಲ್ಯ. ಮುಂದಿನ ಎರಡು ವರ್ಷದಲ್ಲಿ ನಿಧಾನವಾಗಿ , ನೈಜವಾಗಿ ಸೃಷ್ಟಿಯಾಗಬೇಕಿದ್ದ ಬೆಲೆಯನ್ನು ಇಂದು ಕೃತಕವಾಗಿ ಸೃಷ್ಟಿಸಲಾಗಿದೆ. ಹೀಗಾಗಿ ಮಾರುಕಟ್ಟೆ ಇಂದಲ್ಲ ನಾಳೆ ಒಂದಷ್ಟು ಕುಸಿತ ಕಾಣ ಬೇಕಿತ್ತು. ಅದು ಮೇಲಿನ ಕಾರಣಗಳ ಜೊತೆ ಸೇರಿ ಮಾರುಕಟ್ಟೆ ಕುಸಿತಕ್ಕೆ ತನ್ನ ಕೈಲಾದ ದೇಣಿಗೆಯನ್ನು ನೀಡಿದೆ.
ಜಪಾನ್ , ಕೊರಿಯಾ , ಅಮೇರಿಕಾ ಮತ್ತು ಯೂರೋಪಿನ ಮಾರುಕಟ್ಟೆಯಲ್ಲಿ ಹೇಳಿಕೊಳ್ಳುವ ಯಾವ ಉತ್ಸಾಹವೂ ಇಲ್ಲ. ಅಲ್ಲೆಲ್ಲ ಋಣಾತ್ಮಕ ವಾತಾವರಣ ಮನೆ ಮಾಡಿದೆ. ಚೀನಾ ಮಾರುಕಟ್ಟೆ ಕೂಡ ಚೇತರಿಕೆ ಕಂಡಿರುವುದು ಕಳೆದ ಎರಡು ವಾರದಿಂದ ಮಾತ್ರ , ಅದು ಕೂಡ ಇಲ್ಲಿನ ಹೂಡಿಕೆದಾರರು ಹಣವನ್ನು ಅಲ್ಲಿ ಹೂಡಿಕೆ ಮಾಡಲು ಶುರು ಮಾಡಿದ ಮೇಲೆ , ಬೇರೆ ದೇಶಗಳ ಮಾರುಕಟ್ಟೆಯ ವಾತಾವರಣ ಕೂಡ ಬೇಡವೆಂದರೂ ಇಲ್ಲಿನ ಹೂಡಿಕೆದಾರರ ಗಮನಕ್ಕೆ ಬರುತ್ತದೆ. ಕೊನೆಗೂ ಗೆಲ್ಲುವುದು ಸೆಂಟಿಮೆಂಟ್ ಮಾತ್ರ. ಹೂಡಿಕೆದಾರನ ಆ ಕ್ಷಣದ ಸೆಂಟಿಮೆಂಟ್ ಕೂಡ ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿದೆ.
ಇದರ ಜೊತೆಗೆ ನಮ್ಮ ದೇಶದಲ್ಲಿ ಬದಲಾಗದ ರೆಪೋ ರೇಟ್ ಬದಲಾಗುವುದಿಲ್ಲ ಎನ್ನುವ ಸುದ್ದಿ ಮತ್ತು ಅದು ನಿಜವೂ ಆಯ್ತು. ರೆಪೋ ರೇಟ್ ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ರೆಪೋ ರೇಟ್ ಕಡಿಮೆ ಮಾಡಿದ್ದರೆ ಆಗ ಬ್ಯಾಂಕುಗಳು ಹೂಡಿಕೆ ಮೇಲೆ ನೀಡುವ ಬಡ್ಡಿದರ ಇನ್ನಷ್ಟು ಕುಸಿತ ಕಾಣುತ್ತಿತ್ತು ಮತ್ತು ಅದು ಮಾರುಕಟ್ಟೆಗೆ ಹೊಸ ಚೇತನವನ್ನು ನೀಡುತ್ತಿತ್ತು. ಆದರೆ 2020 ರಿಂದ ಸತತವಾಗಿ 4 ವರ್ಷಗಳ ಕಾಲ ರೆಪೋ ರೇಟ್ ಯಥಾಸ್ಥಿತಿ ಕಾಯ್ದು ಕೊಂಡಿರುವುದು ಕೂಡ ಮಾರುಕಟ್ಟೆ ಕುಸಿತಕ್ಕೆ ಒಂದು ಕಾರಣವಾಗಿದೆ.
ಕೊನೆ ಮಾತು: ಮಾರುಕಟ್ಟೆಯಲ್ಲಿ ಏರಿಳಿತ ಅತ್ಯಂತ ಸಹಜ. ನಾವು ಉಸಿರಾಡಿದಷ್ಟು ಸಹಜ. ನಿಜವಾದ ಹೂಡಿಕೆದಾರ ಇಲ್ಲಿನ ಏರಿಳಿತಕ್ಕೆ ಭಯ ಪಡುವ ಅಗತ್ಯವಿಲ್ಲ. ತಾತ್ಕಾಲಿಕ ಕಾರಣಗಳಿಗೆ ಹೆದರಿ ಹೂಡಿಕೆಯನ್ನು ಹಿಂತೆಗೆಯುವ ತಪ್ಪನ್ನು ಮಾಡುವುದು ಬೇಡ. ಭಾರತೀಯ ಮಾರುಕಟ್ಟೆ ಸುಭದ್ರವಾಗಿದೆ. ನಮಗೆ ಹೊರಗಿನ ಹೂಡಿಕೆದಾರರಿಗಿಂತ ನಮ್ಮ ಡೊಮೆಸ್ಟಿಕ್ ಹೂಡಿಕೆದಾರರ ನಂಬಿಕೆ ಬಹಳ ಮುಖ್ಯ. ಡೊಮೆಸ್ಟಿಕ್ ಹೂಡಿಕೆದಾರ ಭಾರತದ ಬಗ್ಗೆ ವಿಶ್ವಾಸ ಹೊಂದಿರುವ ಕಾರಣ ಮಾರುಕಟ್ಟೆ ಚೇತರಿಕೆ ಶೀಘ್ರವಾಗಿ ಕಾಣುತ್ತದೆ. ಆದರೆ ನವೆಂಬರ್ ತಿಂಗಳಲ್ಲಿ ಅಮೇರಿಕಾ ಪ್ರೆಸಿಡೆನ್ಸಿಯಲ್ ಎಲೆಕ್ಷನ್ ಇರುವ ಕಾರಣ ಅದು ಮುಗಿಯುವವರೆಗೆ ಏರಿಳಿತಗಳಿಗೆ ಪೂರ್ಣ ವಿರಾಮ ಹಾಕಲು ಸಾಧ್ಯವಿಲ್ಲ. ಕುಸಿತ ಕಂಡಾಗ ಹಣವಿದ್ದವರು ಮತ್ತಷ್ಟು ಹೂಡಿಕೆ ಮಾಡುವುದು ಜಾಣತನ.
Advertisement