ಮನೆಕಟ್ಟುವ ಮುನ್ನ ಪರಿಗಣಿಸಬೇಕಾದ 8 ಅಂಶಗಳು! (ಹಣಕ್ಲಾಸು)

ಅಭಿವೃದ್ಧಿಯ ಸಂಕೇತ. ಭದ್ರತೆಯ ಭಾವ. ಎಲ್ಲವೂ ಒಪ್ಪತಕ್ಕ ಮಾತುಗಳು. ಆದರೆ ನಾವೇ ಇಷ್ಟಪಟ್ಟು , ಕಷ್ಟಪಟ್ಟು ಹಣ ವ್ಯಯಿಸಿ ಕಟ್ಟಿದ ಮನೆ ಲಿಯಬಲಿಟಿ ಆಗಬಾರದು ಎಂದರೆ ಕೆಳಗಿನ ಅಂಶಗಳನ್ನು ಗಮನಿಸಲೇ ಬೇಕು. (ಹಣಕ್ಲಾಸು-429)
File pic
ಗೃಹ ನಿರ್ಮಾಣ ಯೋಜನೆ (ಸಂಗ್ರಹ ಚಿತ್ರ)online desk
Updated on

ತಲೆಮೇಲೊಂದು ನಮ್ಮದು ಎನ್ನುವ ಸೂರು ಇರಬೇಕು ಎನ್ನುವ ಬಯಕೆ ಸಹಜವಾದದ್ದು. ಇದಕ್ಕೆ ದೇಶ , ಲಿಂಗ, ವಯಸ್ಸಿನ ಭೇದವಿಲ್ಲ. ಎಲ್ಲರಿಗೂ ಜೀವಿತಾವಧಿಯಲ್ಲಿ ಸ್ವಂತ ಮನೆ ಮಾಡಿಕೊಳ್ಳಬೇಕು ಎನ್ನುವ ಬಯಕೆ ಇದ್ದೆ ಇರುತ್ತದೆ. ಉಳ್ಳವರು ಆ ಆಸೆಯನ್ನು ಬೇಗ ಪೂರ್ಣಗೊಳಿಸಿಕೊಳ್ಳುತ್ತಾರೆ.

ಇಲ್ಲದವರು ಆದೆರೆಡೆಗೆ ಪ್ರಯತ್ನ ಮಾಡುತ್ತಿರುತ್ತಾರೆ. ಒಟ್ಟಿನಲ್ಲಿ ಜಗತ್ತಿನ ಅತಿ ಕಡಿಮೆ ಪ್ರತಿಶತ ಜನ ಮಾತ್ರ ಪರವಾಗಿಲ್ಲ ಬಾಡಿಗೆ ಮನೆಯಲ್ಲಿ ವಾಸಿಸುವೆ. ಸ್ವಂತ ಮನೆಯ ಆಸೆಯಿಲ್ಲ ಎನ್ನುವರು ಸಿಕ್ಕಬಹುದು. ಮೆಜಾರಿಟಿ ಜನರಿಗೆ ಮನೆ ಎನ್ನುವುದು ಎಮೋಷನ್. ಅಭಿವೃದ್ಧಿಯ ಸಂಕೇತ. ಭದ್ರತೆಯ ಭಾವ. ಎಲ್ಲವೂ ಒಪ್ಪತಕ್ಕ ಮಾತುಗಳು. ಆದರೆ ನಾವೇ ಇಷ್ಟಪಟ್ಟು, ಕಷ್ಟಪಟ್ಟು ಹಣ ವ್ಯಯಿಸಿ ಕಟ್ಟಿದ ಮನೆ ಲಿಯಬಲಿಟಿ ಆಗಬಾರದು ಎಂದರೆ ಕೆಳಗಿನ ಅಂಶಗಳನ್ನು ಗಮನಿಸಲೇಬೇಕು.

  1. ಹೊಸದಾಗಿ ಕಟ್ಟಲು ಬಯಸಿರುವ ಮನೆಗೂ ಮತ್ತು ಕೆಲಸದ ಜಾಗಕ್ಕೂ ಇರುವ ದೂರವೆಷ್ಟು?: ಮನೆ ಕಟ್ಟಬೇಕು ಎನ್ನುವ ಬಯಕೆ ಆತುರವನ್ನು ಸೃಷ್ಟಿ ಮಾಡುತ್ತದೆ. ಆಗ ಬೇರಾವ ವಿಚಾರಗಳೂ ಕಣ್ಣಿಗೆ ಕಾಣುವುದಿಲ್ಲ. ಎಲ್ಲಕ್ಕೂ ಮೊದಲಿಗೆ ನಾವು ಕೆಲಸ ಮಾಡುವ ಜಾಗ ಎಲ್ಲಿದೆ ಮತ್ತು ಮನೆ ಕಟ್ಟುವ ಜಾಗವೆಲ್ಲಿದೆ, ಅದೆಷ್ಟು ಅಂತರ, ಅಂದರೆ ದೂರದಲ್ಲಿದೆ ಎನ್ನುವುದನ್ನು ಗಮನಿಸಬೇಕು. ಮನೆ ಕಟ್ಟುವ ಮುನ್ನ ಕನಿಷ್ಠ ಒಂದೆರೆಡು ವಾರ ಮನೆ ಕಟ್ಟುವ ಜಾಗದಿಂದ, ಕೆಲಸದ ಜಾಗಕ್ಕೆ ಓಡಾಡಬೇಕು. ಎರಡು ವಾರದಲ್ಲಿ ಬಹಳಷ್ಟು ಸತ್ಯದ ಅನಾವರಣವಾಗುತ್ತದೆ. ಪ್ರಯಾಣ ಕಷ್ಟವಲ್ಲ ಎನ್ನಿಸಿದರೆ ಓಕೆ. ಸುಲಭವಾಗಿರಿಸಿಕೊಂಡರೆ ಬದುಕು ಚಂದವಾಗಿರುತ್ತದೆ.

  2. ಹೊಸ ಮನೆಯ ಅಕ್ಕಪಕ್ಕದಲ್ಲಿ ಮಕ್ಕಳಿಗೆ ಹತ್ತಿರಲ್ಲಿ ಶಾಲೆ ಕಾಲೇಜು ಇದೆಯೇ?: ಭಾರತೀಯರು ಬದುಕುವುದು ಕೇವಲ ತಮಗಾಗಿ ಅಲ್ಲವೇ ಅಲ್ಲ. ಪಾಶ್ಚಾತ್ಯರಲ್ಲಿ ಸ್ವಸುಖಕ್ಕೆ ಅತೀವ ಮಹತ್ವ ನೀಡುತ್ತಾರೆ. ನಾವು ಅದೆಷ್ಟೇ ಅಭಿವೃದ್ಧಿ ಹಿಂದೆ ಓಡಿದರೂ ಈ ವಿಷಯದಲ್ಲಿ ಮಾತ್ರ ಇನ್ನೂ ಹೆಚ್ಚು ಬದಲಾಗಿಲ್ಲ. ನಮಗೇನೂ ಅನುಕೂಲವಾಗಿದೆ ಎಂದು ಮನೆ ಕಟ್ಟುವುದಕೆ ಮುಂಚೆ ಮಕ್ಕಳಿಗೆ ಬೇಕಾದ ಶಾಲೆ, ಕಾಲೇಜು ಪಕ್ಕದಲ್ಲಿದೆಯೇ? ಅವುಗಳ ಗುಣಮಟ್ಟ ಎಂತಹುದು? ಎನ್ನುವುದನ್ನು ಪರೀಕ್ಷಿಸ ಬೇಕು. ನಾವೇನೂ ಕೆಲಸಕ್ಕೆ ದೂರ ಹೋಗಬಹುದು. ಆದರೆ ಮಕ್ಕಳ ಶಾಲೆ ಮನೆಯಿಂದ 3/5 ಕಿಲೋಮೀಟರ್ಗಿಂತ ಹೆಚ್ಚಿನ ದೂರದಲ್ಲಿ ಇರಬಾರದು.

  3. ಅಕ್ಕಪಕ್ಕದಲ್ಲಿ ಬ್ಯಾಂಕು, ಎಟಿಎಂ, ಆಸ್ಪತ್ರೆ, ಸಣ್ಣಪುಟ್ಟ ಹೋಟೆಲ್ ಸ್ಥಾಪಿತವಾಗಿವೆಯೆ?: ಮನೆಕಟ್ಟುವಾಗ ಅಯ್ಯೋ ನಾವೇನು ದಿನ ಎಟಿಎಂ ಗೆ ಹೋಗಬೇಕಾ? ಈಗೇನು ಎಲ್ಲವೂ ಡಿಜಿಟಲ್ ಪೇಮೆಂಟ್ ಆಗಿದೆ ಸೊ ಎಂಟಿಎಂ ಅವಶ್ಯಕತೆ ಎಷ್ಟು ಬಾರಿ ಬಿದ್ದೀತು? ಅನಾರೋಗ್ಯ ಕೂಡ ಅಷ್ಟೇ ಅಲ್ವಾ? ನಾವೇನು ದಿನ ಆಸ್ಪತ್ರೆಗೆ ಹೋಗಬೇಕಾ? ವಾರಕ್ಕೋ, 15 ದಿನಕ್ಕೋ ಒಮ್ಮೆ ಹೋಗುವ ಹೋಟೆಲ್ ಬಗ್ಗೆ ನಾವೇಕೆ ತಲೆ ಕೆಡೆಸಿಕೊಳ್ಳಬೇಕು ಎನ್ನುವ ಅಂಶಗಳು ಮನಸ್ಸಿನಲ್ಲಿ ಬಂದು ಹೋಗುತ್ತವೆ. ಸ್ವಂತ ಮನೆ ಕಟ್ಟುವುದರ ಮುಂದೆ ಇವೆಲ್ಲವೂ ಗೌಣವಾಗಿ ಬಿಡುತ್ತವೆ. ಆದರೆ ಬದುಕು ಎನ್ನುವುದು ಯಾವಾಗ ಸರ್ಪ್ರೈಸ್ ಕೊಡುತ್ತೆ ಹೇಳಲು ಸಾಧ್ಯವಿಲ್ಲ ಕಣ್ರೀ. ಮನೆಯನ್ನು ವರ್ಷಕೊಮ್ಮೆ ಕಟ್ಟಲು ಸಾಧ್ಯವಿಲ್ಲ. ಸಣ್ಣ ಸಣ್ಣ ವಿಚಾರಗಳು ಕಿರಿಕಿರಿ ಮಾಡಲು ಶುರು ಮಾಡುತ್ತವೆ. ಉಡಾಫೆ ಬೇಡ.

  4. ಮನೆ ಕಟ್ಟಲು ಬೇಕಾಗುವ ಹಣವೆಷ್ಟು? ಅಷ್ಟು ಹಣದಲ್ಲಿ ಉಳಿತಾಯದ ಹಣವೆಷ್ಟು, ಸಾಲವೆಷ್ಟು?: ಮೊದಲ ಮೂರು ಅತ್ಯಂತ ಮೂಲಭೂತ ಅವಶ್ಯಕತೆಗಳು. ಅವುಗಳು ಓಕೆ ಎನ್ನಿಸಿದರೆ ಮಾತ್ರ ಬಜೆಟ್ ಬಗ್ಗೆ ಚಿಂತೆ ಮಾಡಬೇಕು. ಎಂತಹ ಮನೆ ಕಟ್ಟಬೇಕು ಎನ್ನುವ ನಿಖರತೆ ನಮಗಿರಬೇಕು. ಅದಕ್ಕೆಂದು ಬಜೆಟ್ ತಯಾರಿಸಬೇಕು. ಅಂದರೆ ಇಷ್ಟು ಹಣದಲ್ಲಿ ಮನೆ ಮುಕ್ತಾಯವಾಗಬೇಕು ಎನ್ನುವ ಔಟರ್ ಲಿಮಿಟ್ ನಾವು ಸಿದ್ಧಪಡಿಸಿಕೊಂಡಿರಬೇಕು. ಇಷ್ಟು ಮಾಡಿಕೂಡ 5/10 ಪ್ರತಿಶತ ನಮ್ಮ ಲಿಮಿಟ್ ಮೀರಿ ಖರ್ಚಾಗುತ್ತದೆ. ಏಕೆಂದರೆ ಇಷ್ಟೇ ಹಣವಾಗುತ್ತದೆ ಎಂದು ನಿಖರವಾಗಿ ಹೇಳಲು ಆಗುವುದಿಲ್ಲ.

  5. ಬದುಕಿನಲ್ಲಿ ಮುಂದಿನ 3/5 ವರ್ಷದಲ್ಲಿ ಆಗಬಹುದಾದ ಸಂಭಾವ್ಯ ಬದಲಾವಣೆಗಳನ್ನು ಪಟ್ಟಿ ಮಾಡಿ: ಇಂದಿನ ಬದುಕು ಬಹಳ ಅಸ್ಥಿರವಾಗಿದೆ. ಮನೆ ಕಟ್ಟಿರುತ್ತಾರೆ, ಗೃಹಪ್ರವೇಶ ಮಾಡುವ ಮುನ್ನ ಅದನ್ನು ಮಾರಾಟಕ್ಕೆ ಇಟ್ಟ ನೂರಾರು ಸನ್ನಿವೇಶಗಳನ್ನು ಕಂಡಿದ್ದೇನೆ. ಪರವೂರಿಗೆ ಟ್ರಾನ್ಸ್ಫರ್ ಆಗುವುದು , ಬೇರೆ ಊರಿನಲ್ಲಿ ಇನ್ನಷ್ಟು ಉತ್ತಮ ಕೆಲಸ ಸಿಕ್ಕುವುದು. ವಿದೇಶದಲ್ಲಿ ಕೆಲಸ ಸಿಕ್ಕುವುದು ಇಲ್ಲವೇ ಟಾನ್ಸ್ಫರ್ ಆಗುವುದು. ಬದುಕು ಸಾಧ್ಯತೆಗಳ ಮಹಾಪೂರ. ಮನೆ ಕಟ್ಟುವುದು ಅತಿ ದೊಡ್ಡ ನಿರ್ಧಾರ. ಇಂತಹ ನಿರ್ಧಾರ ತೆಗೆದುಕೊಳ್ಳುವ ಮುಂಚೆ ಮುಂದಿನ ಕನಿಷ್ಠ ಎರಡ ರಿಂದ ಮೂರು ವರ್ಷ ಆಗಬಹುದಾದ ಬದಲಾವಣೆ ಬಗ್ಗೆ ಯೋಚಿಸಬೇಕು.

  6. ಬದುಕಿನಲ್ಲಿ ಆಕಸ್ಮಿಕಗಳು ನಡೆದರೆ, ಆಗ ಮುಂದಿನ ನಡೆ ಏನಿರಬೇಕು?: ಇದು ಇನ್ನೊಂದು ದೊಡ್ಡ ಪ್ರಶ್ನೆ. ಇಂದಿನ ಬದುಕು ಹೇಗಿದೆ ಎಂದರೆ ಯಾರಿಗೆ ಯಾವಾಗ ಬೇಕಾದರೂ ಏನು ಬೇಕಾದರೂ ಆಗಬಹುದು. ನಾವು 70/80 ಬದುಕುತ್ತೇವೆ ಎನ್ನುವುದು, ನಮ್ಮ ಪಾರ್ಟ್ನರ್ ಕೂಡ ಬದುಕಿರುತ್ತಾನೆ/ಳೆ ಎನ್ನುವುದು ಕೇವಲ ಊಹೆ. ಬದುಕಿದ ಮೇಲಷ್ಟೇ ಇಷ್ಟು ವರ್ಷ ಬದುಕಿದ್ದರು ಎನ್ನಬಹುದು. ಹಾಗೊಮ್ಮೆ ಇಬ್ಬರಲ್ಲಿ ಒಬ್ಬರು ಇಲ್ಲವಾದರೆ? ಮುಂದಿನ ನಡೆಯೇನು? ಇಬ್ಬರೂ ಇಲ್ಲವಾದರೆ ಉಳಿದವರ ಬದುಕೇನು? ನಾವು ಇಲ್ಲವಾಗದೇ ಉಳಿದಿರಬಹುದು ಆದರೆ ಇಬ್ಬರಲ್ಲಿ ಒಬ್ಬರ ಕೆಲಸ ಹೋದರೇನು ಗತಿ? ಇಬ್ಬರಿಗೂ ಕೆಲಸವಿಲ್ಲದ್ದೆ ಹೋದರೆ ಮುಂದಿನ ದಾರಿಯೇನು? ಪರಿಕೂಲ ಪರಿಸ್ಥಿತಿಯಲ್ಲಿ ಸಂಕಷ್ಟದಿಂದ ಪಾರಾಗಲು ವಿಮೆ ಮಾಡಿಸಿದ್ದೇವೆಯೇ? ಇಂತಹ ಸಂಭವನೀಯ ಪ್ರಶ್ನೆಗಳನ್ನು ನಾವು ಮನೆ ಕಟ್ಟುವ ಮುನ್ನ ಹಾಕಿಕೊಳ್ಳಬೇಕು. ಆದರೆ ನಮಗೆ ಮನೆ ಕಟ್ಟಬೇಕು ಎನ್ನುವ ಖುಷಿಯಲ್ಲಿ ಇದ್ಯಾವುದೂ ನೆನಪಿಗೆ ಬರುವುದಿಲ್ಲ. ಇವುಗಳಲ್ಲಿ ಯಾವುದಾದರೂ ಒಂದು ಘಟನೆ ಸಂಭವಿಸಿದರೂ ಆಗ ಬದುಕಿನ ಬಂಡಿ ಅಲುಗಾಡುತ್ತದೆ. ಹೀಗಾಗಿ ಪ್ರಶ್ನೆ ಕೇಳಿಕೊಳ್ಳಿ, ಉತ್ತರ ದೊರೆಯುವ ಸಾಧ್ಯತೆಯಾದರೂ ಇರುತ್ತದೆ.

  7. ಇಂದಿನ ದಿನಕ್ಕೆ ತಕ್ಕಂತ ಮನೆ ಕಟ್ಟಬೇಕಾ ಅಥವಾ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟು ಕೊಳ್ಳಬೇಕಾ?: ಮಹಾನಗರಗಳಲ್ಲಿ ಕಾರಿನ ಸಂಖ್ಯೆ ಮನೆಯ ಸಂಖ್ಯೆಯನ್ನು ಮೀರಿಸುವತ್ತ ದಾಪುಗಾಲು ಹಾಕುತ್ತಿದೆ. ಪ್ರತಿ ಮನೆಯ ಮುಂದೆ ಎರಡು ಕಾರು ನಿಂತಿರುವುದು ಇಂದು ಸಾಮಾನ್ಯ ದೃಶ್ಯ. ಕೇವಲ ಎರಡು ದಶಕಗಳ ಹಿಂದೆ ಬದುಕು, ಸಮಾಜ ಹೀಗೆ ಬದಲಾಗಬಹುದು ಎನ್ನುವ ಐಡಿಯಾ ಯಾರಿಗೂ ಇರಲಿಲ್ಲ. ಮುಕ್ಕಾಲು ಪಾಲು ಮನೆಗಳಲ್ಲಿ ಕಾರಿಗೆ ಎಂದು ಪಾರ್ಕಿಂಗ್ ಜಾಗವನ್ನು ಬಿಟ್ಟಿಲ್ಲ. ಎರಡು ಅಥಾವ ಮೂರು ದ್ವಿಚಕ್ರವಾಹನ ನಿಲ್ಲಿಸಲು ಜಾಗ ಬಿಟ್ಟಿದ್ದರೆ ಅದು ಹೆಚ್ಚು. ಹೀಗಾಗಿ ಇಂದು ರಸ್ತೆಯ ಇಕ್ಕೆಲೆಗಳೂ ಪಾರ್ಕಿಂಗ್ ಲಾಟ್ ಆಗಿವೆ. ಎರಡು ದಶಕದ ಹಿಂದೆ ಮನೆಗೊಂದು ಟಾಯ್ಲೆಟ್ ಇರುತ್ತಿತ್ತು. ಅಂತಹ ಮನೆಗಳಿಗೆ ಇಂದು ಯಾರೂ ಬಾಡಿಗೆಗೆ ಬರುತ್ತಿಲ್ಲ. ಇಂದು ಮೂರು ಬೆಡ್ ಹೌಸ್ ಎಂದರೆ ಕನಿಷ್ಠ ಎರಡು ಟಾಯ್ಲೆಟ್ ಇರಲೇಬೇಕು. ಮೂರಕ್ಕೆ ಮೂರು ಅಟ್ಯಾಚೆಡ್ ಟಾಯ್ಲೆಟ್ ಇರಬೇಕು ಎಂದು ಬಯಸುತ್ತಾರೆ. ವಿನ್ಯಾಸಗಳು ಬದಲಾಗುತ್ತಿವೆ. ಪ್ರತಿ ಎರಡು ಅಥವಾ ಮೂರು ವರ್ಷಕ್ಕೆ ಮನೆ ಪೂರ್ಣ ಬದಲಿಸುವವರ ಸಂಖ್ಯೆ ಹೆಚ್ಚುತ್ತಿದೆ. ಇವತ್ತಿಗೆ ಎರಡು ಅಥವಾ ಮೂರು ಬೆಡ್ ರೂಮ್ ಸಾಕು ಎನ್ನಿಸುತ್ತದೆ. ಭವಿಷ್ಯದಲ್ಲಿ ಮತ್ತೊಂದು ರೂಮು ಕಛೇರಿಯಂತೆ ಕೆಲಸ ಮಾಡಲು ಬಳಸಬೇಕಾದ ಪರಿಸ್ಥಿತಿ ಬಂದರೆ ಆಗೇನು ಮಾಡುವುದು? ಹೀಗೆ ಸ್ವಲ್ಪ ಚಿಂತನೆ ಮಾಡಿ ಆದಷ್ಟೂ ಮುಂದಿನ ಕನಿಷ್ಠ ಒಂದು ದಶಕದ ಬೇಕು ಬೇಡಗಳನ್ನು ಗಮನದಲ್ಲಿ ಇಟ್ಟುಕೊಂಡು ಮನೆ ಕಟ್ಟಬೇಕು.

  8. ಪರಿಸ್ಥಿತಿ ಬದಲಾದರೆ ಕಟ್ಟಿದ ಮನೆಯನ್ನು ಬೇಗ ಮಾರಬಹುದೇ?: ಮೇಲಿನ ಹಲವು ಸನ್ನಿವೇಶಗಳಲ್ಲಿ ನಮ್ಮ ಪರಿಸ್ಥಿತಿ ಬದಲಾಗುವ ಬಗ್ಗೆ ಹೇಳಿದ್ದೇವೆ. ಆಕಸ್ಮಾತ್ ಇದರಲ್ಲಿ ಯಾವುದೋ ಒಂದು ಸನ್ನಿವೇಶ ನಮ್ಮ ಪಾಲಿಗೆ ಉಂಟಾದರೆ ಮತ್ತು ಅಂತಹ ಸಂಧರ್ಭದಲ್ಲಿ ಮನೆಯನ್ನು ಮಾರಾಟ ಮಾಡಬೇಕು ಎಂದಾಗ ಮನೆಯನ್ನು ಸುಲಭವಾಗಿ ಮಾರಬಹುದೇ? ಎನ್ನುವ ಪ್ರಶ್ನೆಯನ್ನು ಸಹ ನಾವು ಮನೆ ಕಟ್ಟುವ ಮುಂಚೆ ಕೇಳಿಕೊಳ್ಳಬೇಕು.

File pic
Business ಮತ್ತು ಬದುಕಿನ ನಡುವೆ ಒತ್ತಡ ನಿರ್ವಹಣೆಗೆ 5 ಸೂತ್ರಗಳು... (ಹಣಕ್ಲಾಸು)

ಏಕೆಂದರೆ:

  1. ಮೊದಲಿಗೆ ಎಲ್ಲಾ ಏರಿಯಾಗಳಲ್ಲಿ ರಿಯಲ್ ಎಸ್ಟೇಟ್ ಒಂದೇ ಸಮನಾದ ಏರಿಕೆ ಮತ್ತು ಡಿಮ್ಯಾಂಡ್ ಸೃಷ್ಟಿಸುವುದಿಲ್ಲ, ಹೀಗಾಗಿ ಯಾವ ಏರಿಯಾ ದಲ್ಲಿ ಹೂಡಿಕೆ ಮಾಡಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ.

  2. ಕಟ್ಟಿದ ಮನೆಗೆ ಗ್ರಾಹಕರು ಕಡಿಮೆ. ಮನೆ ಎನ್ನುವುದು ವೈಯಕ್ತಿಕ ಅಭಿರುಚಿಗೆ ತಕ್ಕಂತೆ ಕಟ್ಟುವ ಕಟ್ಟಡ. ಹೀಗಾಗಿ ನಮ್ಮ ಟೇಸ್ಟ್ ಕೊಳ್ಳಲು ಬಂದವರ ಟೇಸ್ಟ್ ಒಂದೇ ಆಗಿದ್ದರೆ ಆಗ ಮಾರಾಟ ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಮನೆ ಮಾರಾಟವಾಗುವುದು ನಿಧಾನ. ಬೇಕೆಂದ ತಕ್ಷಣ ಹಣ ಸಿಕುವುದಿಲ್ಲ

  3. ಕಟ್ಟಿದ ಮನೆಯ ಮೌಲ್ಯ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತ ಹೋಗುತ್ತದೆ. 15/20 ವರ್ಷದ ಹಳೆಯ ಕಟ್ಟಡಕ್ಕೆ ಬೆಲೆ ಇರುವುದಿಲ್ಲ ಕೇವಲ ನಿವೇಶನದ ಬೆಲೆ ಸಿಗುತ್ತದೆ ಇದು ನೆನಪಿರಲಿ

  4. ಮನೆಯು ಪ್ರಖ್ಯಾತ ಬಡಾವಣೆಯಲ್ಲಿದ್ದು, ಅಲ್ಲಿ ಖಾಲಿ ನಿವೇಶನ ದೊರೆಯದ ಪರಿಸ್ಥಿತಿ ಏರ್ಪಟ್ಟಿದ್ದರೆ ಆಗ ಮನೆ ಹಳೆಯದಾದರೂ ಬೇಗ ಮಾರಾಟವಾಗುತ್ತದೆ. ಇಲ್ಲವಾದಲ್ಲಿ ಮನೆ ಹಳೆಯದಾದಷ್ಟು ಮೌಲ್ಯ ಕಡಿಮೆ, ಮಾರಾಟ ನಿಧಾನ. ಕಟ್ಟದಲ್ಲಿ ಲಿಕ್ವಿಡಿಟಿ ಕಡಿಮೆ. ಮನೆ ಕಟ್ಟುವ ಮುನ್ನ ಇದು ಕೂಡ ನೆನಪಿನಲ್ಲಿ ಇಟ್ಟುಕೊಳ್ಳಬೇಕು.

File pic
Emergency Fund: ಅಸ್ಥಿರ ಸಮಯಕ್ಕಾಗಿ ಹಣ ಕೂಡಿಡುವುದು ಹೇಗೆ? ನೀವು ತಿಳಿಯಬೇಕಾದ 5 ಸೂತ್ರಗಳು (ಹಣಕ್ಲಾಸು)

ಕೊನೆಮಾತು: ಮನೆ ಕಟ್ಟುವುದು ಖಂಡಿತ ತಪ್ಪಲ್ಲ. ನಾನು ಮನೆ ಕಟ್ಟುವುದರ ವಿರೋಧಿ ಕೂಡ ಅಲ್ಲ. ನಿಮ್ಮ ಬಳಿ ಹಣವಿದ್ದರೆ ಮನೆ ಕಟ್ಟುವುದು ತಪ್ಪಲ್ಲ. ಸಾಲ ಮಾಡಿ ಕಟ್ಟುವುದು ತಪ್ಪು.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com