
ಇಂಟ್ರಾಸೈಟೋಪ್ಲಾಸ್ಮಿಕ್ ಸ್ಪರ್ಮ್ ಇಂಜೆಕ್ಷನ್ (ಐಸಿಎಸ್‌ಐ) ಫಲವಂತಿಕೆ ಚಿಕಿತ್ಸೆಯು ಪುರುಷ ಬಂಜೆತನದ ವಿಧಾನದಲ್ಲಿ ಕ್ರಾಂತಿ ಮಾಡಿರುವ ಇನ್ವಿಟ್ರೊ (ಕೃತಕ) ಫಲೀಕರಣದ ವಿಶೇಷ ರೂಪವಾಗಿದೆ. 1990ರ ದಶಕದ ಆರಂಭದಲ್ಲಿ ಈ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸಲಾಯಿತು.
ಈ ಚಿಕಿತ್ಸೆ ಪುರುಷನ ವೀರ್ಯವನ್ನು ಮಹಿಳೆಯ ಅಂಡದೊಳಗೆ ನೇರವಾಗಿ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಈ ವಿಧಾನವು ತೀವ್ರವಾದ ಪುರುಷ ಫಲವಂತಿಕೆಯ ಸಮಸ್ಯೆಗಳನ್ನು ನಿವಾರಿಸಲು ಅದರ ಪರಿಣಾಮಕಾರತೆಗೆ ಹೆಸರಾಗಿದೆ. ತಂತ್ರಜ್ಞಾನ ಬೆಂಬಲಿತ ಸಂತಾನೋತ್ಪತ್ತಿ ಚಿಕಿತ್ಸೆಗಳಲ್ಲಿ ಇದು ಪ್ರಮುಖ ಆಯ್ಕೆಯಾಗಿದೆ. ಹೀಗಾಗಿ ಬಂಜೆತನವನ್ನು ಎದುರಿಸುತ್ತಿರುವ ದಂಪತಿಗಳಿಗೆ ಈ ಚಿಕಿತ್ಸೆಯು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.
ಐಸಿಎಸ್‌ಐ ಚಿಕಿತ್ಸೆಯು ಮಹಿಳೆಯ ಅಂಡಾಶಯದ ಪ್ರಚೋದನೆಯೊಂದಿಗೆ ಪ್ರಾರಂಭವಾಗುವ ಒಂದು ಸಂಕೀರ್ಣವಾದ ಪ್ರಕ್ರಿಯೆಯಾಗಿದೆ. ಅಂಡಾಶಯದಲ್ಲಿ ಹಲವಾರು ಅಂಡಗಳ ಬೆಳವಣಿಗೆಯನ್ನು ಉತ್ತೇಜಿಸಲು ಮಹಿಳೆಯರಿಗೆ ಫಲವಂತಿಕೆಯ ಔಷಧಿಗಳನ್ನು ನೀಡಲಾಗುತ್ತದೆ. ಅಂಡಗಳು ಪಕ್ವವಾದಾಗ ಟ್ರಾನ್ಸ್ವಾಜಿನಲ್ ಅಲ್ಟ್ರಾಸೌಂಡ್ ಆಸ್ಪಿರೇಷನ್ ಎಂಬ ಸಣ್ಣ ಶಸ್ತ್ರಚಿಕಿತ್ಸಾ ವಿಧಾನದ ಮೂಲಕ ಅವುಗಳನ್ನು ಹೊರತೆಗೆಯಲಾಗುತ್ತದೆ. ಇದೇ ಸಮಯದಲ್ಲಿ ಪುರುಷ ಸಂಗಾತಿಯಿಂದ ವೀರ್ಯವನ್ನು ಸಂಗ್ರಹಿಸಲಾಗುತ್ತದೆ.
ಹೀಗೆ ತೆಗೆದುಕೊಂಡ ವೀರ್ಯದ ಗುಣಮಟ್ಟವು ಕಡಿಮೆ ಇದ್ದರೆ ನೇರವಾಗಿ ವೃಷಣಗಳಿಂದ ವೀರ್ಯವನ್ನು ಹೊರತೆಗೆಯಲಾಗುತ್ತದೆ. ನಂತರ ಅಂಡಗಳು ಮತ್ತು ವೀರ್ಯವನ್ನು ಸಂಗ್ರಹಿಸಿದ ನಂತರ ಈ ಚಿಕಿತ್ಸೆಯ ಪ್ರಯೋಗಾಲಯ ಹಂತವು ಪ್ರಾರಂಭವಾಗುತ್ತದೆ. ಚಲನಶೀಲತೆ ಮತ್ತು ಸ್ವರೂಪಶಾಸ್ತ್ರದ ಆಧಾರದ ಮೇಲೆ ಚುಚ್ಚುಮದ್ದಿನ ಸಹಾಯದಿಂದ ಒಂದು ವೀರ್ಯಾಣುವನ್ನು ಆಯ್ಕೆ ಮಾಡಲಾಗುತ್ತದೆ. ಸೂಕ್ಷ್ಮವಾಗಿರುವ ಗಾಜಿನ ಸೂಜಿಯನ್ನು ಬಳಸಿ ಈ ವೀರ್ಯಾಣುವನ್ನು ನೇರವಾಗಿ ಅಂಡದ ಕೋಶದ್ರವಕ್ಕೆ (ಸೈಟೋಪ್ಲಾಸಂ) ಚುಚ್ಚಲಾಗುತ್ತದೆ. ಈ ನೇರ ವಿಧಾನವು ಸಾಂಪ್ರದಾಯಿಕ ಕೃತಕ ಗರ್ಭಧಾರಣೆಯಲ್ಲಿ ಫಲೀಕರಣಕ್ಕೆ ಸಮಸ್ಯಾತ್ಮಕವಾಗಿರುವ ಅನೇಕ ನೈಸರ್ಗಿಕ ಅಡೆತಡೆಗಳನ್ನು ನಿವಾರಿಸುತ್ತದೆ.
ಫಲೀಕರಣದ ನಂತರ ಫಲವತ್ತಾದ ಅಂಡದ (ಭ್ರೂಣ) ಬೆಳವಣಿಗೆಯ ಮೇಲೆ ಕೆಲವು ದಿನಗಳ ಕಾಲ ಸತತ ನಿಗಾ ಇಡಲಾಗುತ್ತದೆ. ಭ್ರೂಣಗಳನ್ನು ಮಹಿಳೆಯ ಗರ್ಭಾಶಯಕ್ಕೆ ವರ್ಗಾಯಿಸುವ ಮೊದಲು ಸುಮಾರು ಮೂರರಿಂದ ಐದು ದಿನಗಳವರೆಗೆ ಬೆಳೆಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಕೆಲವೊಮ್ಮೆ ಹೆಚ್ಚು ವೀರ್ಯಾಣುಗಳನ್ನು ಬಳಸಬಹುದು. ದಂಪತಿಗಳ ದೈಹಿಕ ಪರಿಸ್ಥಿತಿಗೆ ಅನುಗುಣವಾಗಿ, ಒಂದು ಅಥವಾ ಹೆಚ್ಚಿನ ಭ್ರೂಣಗಳನ್ನು ವರ್ಗಾಯಿಸಬಹುದು. ಸಾಧ್ಯವಾದರೆ ಹೆಚ್ಚುವರಿ ಭ್ರೂಣಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಬಹುದು. ಗರ್ಭ ಧರಿಸುವ ಸಾಧ್ಯತೆಗಳನ್ನು ಹೆಚ್ಚಿಸಲು ಈ ಪ್ರಕ್ರಿಯೆಯನ್ನು ಐವಿಎಫ್ ಜೊತೆಯಲ್ಲಿ ನಡೆಸಲಾಗುತ್ತದೆ.
ಈ ಚಿಕಿತ್ಸೆಯನ್ನು ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುವ ಪುರುಷರಿಗೆ, ವೀರ್ಯಾಣುಗಳ ಚಲನಶೀಲತೆ ಸಮರ್ಪಕವಾಗಿರದ ಸಂದರ್ಭಗಳಲ್ಲಿ, ಅವುಗಳ ಆಕಾರ/ಸ್ವಭಾವ ಅಸಹಜವಾಗಿರುವಾಗ ಮತ್ತು ಪುರುಷರು ಸಂತಾನಹರಣ ಚಿಕಿತ್ಸೆ ಮಾಡಿಸಿಕೊಂಡ ನಂತರ ಮಕ್ಕಳನ್ನು ಪಡೆಯಲು ಬಯಸಿದಾಗ, ಆನುವಂಶಿಕ ಸಮಸ್ಯೆಗಳಿರುವಾಗ ಮತ್ತು ಗರ್ಭಾಶಯದ ಒಳಹರಿವಿನಂತಹ (ಐಯುಈ) ಇತರ ಫಲವಂತಿಕೆ ಚಿಕಿತ್ಸೆಗಳು ಗರ್ಭ ನಿಲ್ಲವಂತೆ ಮಾಡುವಲ್ಲಿ ವಿಫಲವಾದರೆ ಮಾಡಬಹುದು. ಎಲ್ಲಕ್ಕಿಂತ ಮೊದಲು ತಜ್ಞವೈದ್ಯರು ಈ ಚಿಕಿತ್ಸೆಯನ್ನು ದಂಪತಿಗಳ ಪರಿಸ್ಥಿತಿಗೆ ಅನುಗುಣ ವಾಗಿ ಶಿಫಾರಸು ಮಾಡಬಹುದು.
ಐಸಿಎಸ್‌ಐ ಚಿಕಿತ್ಸೆಯ ಯಶಸ್ಸಿನ ಪ್ರಮಾಣ ಮಹಿಳಾ ಸಂಗಾತಿಯ ವಯಸ್ಸು, ಬಂಜೆತನದ ಮೂಲ ಕಾರಣ ಮತ್ತು ಬಳಸಿದ ವೀರ್ಯ ಮತ್ತು ಅಂಡಗಳ ಗುಣಮಟ್ಟ ಸೇರಿದಂತೆ ಹಲವಾರು ಅಂಶಗಳನ್ನು ಅವಲಂಬಿಸಿ ವ್ಯಾಪಕವಾಗಿ ಬದಲಾಗಬಹುದು. ಸಾಮಾನ್ಯವಾಗಿ, ಈ ಚಿಕಿತ್ಸೆಯ ಫಲೀಕರಣ ಪ್ರಮಾಣ ಸಾಂಪ್ರದಾಯಿಕ ಐವಿಎಫ್ ವಿಧಾನಗಳಿಗಿಂತ ಹೆಚ್ಚಾಗಿರುತ್ತದೆ, ಸಾಮಾನ್ಯವಾಗಿ ಶೇಕಡಾ 50ರಿಂದ 80ರಷ್ಟು ಯಶಸ್ಸು ದೊರಕಬಹುದು. ಈ ವಿಧಾನ ಫಲೀಕರಣದ ಸಾಧ್ಯತೆಯನ್ನು ಹೆಚ್ಚಿಸಬಹುದಾದರೂ ಇದು ಗರ್ಭಧಾರಣೆಯನ್ನು ಖಾತರಿಪಡಿಸುವುದಿಲ್ಲ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ.
ಫಲವಂತಿಕೆ ಚಿಕಿತ್ಸೆಯು ದಂಪತಿಗಳಿಗೆ ಭಾವನಾತ್ಮಕವಾಗಿ ಪರಿಣಾಮ ಬೀರಬಹುದು. ಕೆಲವು ಸಂಕೀರ್ಣತೆಗಳು, ಉತ್ತಮ ಫಲಿತಾಂಶದ ಭರವಸೆ ಮತ್ತು ಅನಿಶ್ಚಿತತೆಯೊಂದಿಗೆ ಸೇರಿಕೊಂಡು ಒತ್ತಡ ಮತ್ತು ಆತಂಕಕ್ಕೆ ಕಾರಣವಾಗಬಹುದು. ಈ ಭಾವನಾತ್ಮಕ ಸವಾಲುಗಳನ್ನು ಎದುರಿಸಲು ಆಪ್ತ ಸಮಾಲೋಚನೆಯು ಪ್ರಯೋಜನಕಾರಿಯಾಗಿದೆ. ಇನ್ನು ಈ ಚಿಕಿತ್ಸೆಯ ಖರ್ಚು ಹೆಚ್ಚಾಗಬಹುದು. ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಅನೇಕಾನೇಕ ದಂಪತಿಗಳಿಗೆ ಮಕ್ಕಳನ್ನು ಪಡೆಯುವ ಮಾರ್ಗವನ್ನು ಈ ವಿಧಾನ ತೋರಿಸಿದೆ. ಆದರೆ ಕೆಲವರಿಗೆ ಇದು ದಂಧೆಯೇ ಅಗಿರುವುದು ಸುಳ್ಳಲ್ಲ. ವೈದ್ಯಕೀಯ ಸೇವೆಯು ಅತಿಯಾಗಿ ವಾಣಿಜ್ಯೀಕರಣಗೊಂಡಿರುವುದರಿಂದ ಈ ಬಗ್ಗೆ ಎಚ್ಚರದಿಂದಿರಬೇಕಾದದ್ದು ಇಂದಿನ ತುರ್ತು ಅವಶ್ಯಕತೆಯಾಗಿದೆ.
ಒಟ್ಟಾರೆ ಹೇಳುವುದಾದರೆ ಐಸಿಎಸ್‌ಐ ಚಿಕಿತ್ಸೆಯನ್ನು ಎಲ್ಲಾ ಐವಿಎಫ್ ಕಾರ್ಯವಿಧಾನಗಳಲ್ಲಿ ಸುಮಾರು ಶೇಕಡಾ 60 ರಷ್ಟು ಬಳಸಲಾಗುತ್ತದೆ. ಅತ್ಯಾಧುನಿಕ ಸಾಧನಸಲಕರಣೆಗಳೊಂದಿಗೆ ಮತ್ತು ತಜ್ಞವೈದ್ಯರು ಈ ಚಿಕಿತ್ಸೆಯ ಮೂಲಕ ಫಲೀಕರಣವನ್ನು ಶೇಕಡಾ 50ರಿಂದ 80ರಷ್ಟು ಸಾಧಿಸುತ್ತಾರೆ. ಬಂಜೆತನ ಎದುರಿಸುತ್ತಿರುವ ದಂಪತಿಗಳಿಗೆ, ಅದರಲ್ಲಿಯೂ ವಿಶೇಷವಾಗಿ ಪುರುಷರಿಗೆ ಮಕ್ಕಳಾಗಲು ತೊಂದರೆಯಾಗುತ್ತಿದ್ದರೆ ಐಸಿಎಸ್‌ಐ ವಿಧಾನ ಮಕ್ಕಳನ್ನು ಪಡೆಯಲು ಒಂದು ಆಶಾಕಿರಣವಾಗಿದೆ. ತಂತ್ರಜ್ಞಾನ ಮುಂದುವರೆದಂತೆ, ಫಲವಂತಿಕೆಯ ಚಿಕಿತ್ಸೆಯು ಇನ್ನೂ ಹೆಚ್ಚು ಉತ್ತಮವಾಗಿ ವಿಕಸನಗೊಳ್ಳುವ ಸಾಧ್ಯತೆಯಿದೆ. ಆದ್ದರಿಂದ ಇದು ಅಗತ್ಯವಿರುವವರಿಗೆ ಇನ್ನಷ್ಟು ಸುಲಭವಾಗಿ ಮತ್ತು ಪರಿಣಾಮಕಾರಿಯಾಗಿ ಲಭ್ಯವಿರುವ ಚಿಕಿತ್ಸಾ ಆಯ್ಕೆಯಾಗಿದೆ. ಅದರೆ ಎಲ್ಲಕ್ಕಿಂತ ಮಿಗಿಲಾಗಿ ಒಬ್ಬರಲ್ಲ ಇಬ್ಬರು ವೈದ್ಯರನ್ನು ಸಂಪರ್ಕಿಸಿ ಎಲ್ಲಾ ಮಾಹಿತಿಯನ್ನು ಚೆನ್ನಾಗಿ ತಿಳಿದುಕೊಂಡು ಮುಂದುವರೆಯಬೇಕು.
Advertisement