ಸುಸ್ತು, ಅಸ್ವಸ್ಥತೆ: ಗಗನಯಾತ್ರಿಗಳು ಎದುರಿಸುವ ಆರೋಗ್ಯ ತೊಂದರೆಗಳು

ಹಿಂದಿನ ಬಾಹ್ಯಾಕಾಶ ನಿಲ್ದಾಣಗಳಿಗೆ ಹೋಲಿಸಿದರೆ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್) ಹೆಚ್ಚಿನ ಸ್ಥಳಾವಕಾಶ ಹೊಂದಿದೆ. ಆದರೂ, ಭೂಮಿಯಲ್ಲಿ ಜೀವನಕ್ಕೆ ಹೋಲಿಸಿದರೆ ಅಲ್ಲಿ ಓಡಾಟಕ್ಕೆ ಕಡಿಮೆ ಸ್ಥಳಾವಕಾಶ ಇರುತ್ತದೆ.
ಸುಸ್ತು, ಅಸ್ವಸ್ಥತೆ: ಗಗನಯಾತ್ರಿಗಳು ಎದುರಿಸುವ ಆರೋಗ್ಯ ತೊಂದರೆಗಳು
Updated on
Summary

ಬಾಹ್ಯಾಕಾಶದಲ್ಲಿ ದೈಹಿಕ ದ್ರವಗಳು ಮೇಲ್ಭಾಗದಲ್ಲಿ ಶೇಖರಗೊಳ್ಳುವುದರಿಂದ ಗಗನಯಾತ್ರಿಗಳಿಗೆ ಮೂಗು ಕಟ್ಟುವ ಅನುಭವ ಉಂಟಾಗುತ್ತದೆ. ಬಾಹ್ಯಾಕಾಶದಲ್ಲಿ ದೀರ್ಘಕಾಲ ಕಳೆದರೆ, ಸ್ನಾಯುಗಳು ಮತ್ತು ಮೂಳೆಗಳು ದುರ್ಬಲಗೊಳ್ಳುತ್ತವೆ. ಬಾಹ್ಯಾಕಾಶದಲ್ಲಿ ತೀಕ್ಷ್ಣ ವಿಕಿರಣಗಳಿಗೆ ಗಗನಯಾತ್ರಿಗಳು ತುತ್ತಾಗುವ ಸಾಧ್ಯತೆಗಳಿವೆ. ಈ ಅಸ್ವಸ್ಥತೆಗಳನ್ನು ತಡೆಗಟ್ಟಲು ಗಗನಯಾತ್ರಿಗಳು ಪ್ರತಿದಿನ ವ್ಯಾಯಾಮ ಮಾಡುತ್ತಾರೆ ಮತ್ತು ಕುಟುಂಬಸ್ಥರೊಡನೆ ಸಂಪರ್ಕದಲ್ಲಿರುತ್ತಾರೆ.

ಬಾಹ್ಯಾಕಾಶ ಮತ್ತು ಗುರುತ್ವಾಕರ್ಷಣಾ ಅಸ್ವಸ್ಥತೆ

ಭೂಮಿಗೆ ಹೋಲಿಸಿದರೆ, ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಬಹಳಷ್ಟು ಕಡಿಮೆ ಇರುತ್ತದೆ. ಇದರ ಪರಿಣಾಮವಾಗಿ, ಬಾಹ್ಯಾಕಾಶ ಅಸ್ವಸ್ಥತೆಯ ಲಕ್ಷಣಗಳಾದ ತಲೆನೋವು, ವಾಕರಿಕೆ, ವಾಂತಿ ಇತ್ಯಾದಿಗಳು ಕಾಣಿಸಿಕೊಳ್ಳುತ್ತವೆ. ಭೂಮಿಯಲ್ಲಿ, ಗುರುತ್ವಾಕರ್ಷಣೆ ನಮ್ಮ ದೇಹದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ನಮ್ಮ ಒಳಗಿವಿಯ ಆಳದಲ್ಲಿ, ವೆಸ್ಟಿಬ್ಯುಲಾರ್ ಆರ್ಗನ್ ಎಂದು ಕರೆಯುವ ಒಂದು ಸಣ್ಣ ಅಂಗವಿದೆ. ಇದು ನಮ್ಮ ದೇಹದ ಸಮತೋಲನ ಕಾಪಾಡಲು ಅತ್ಯಂತ ಅವಶ್ಯಕವಾಗಿದೆ.

ಈ ಅಂಗ, ಗುರುತ್ವಾಕರ್ಷಣೆ ಮತ್ತು ದೇಹದ ಚಲನೆಯ ಕುರಿತ ಮಾಹಿತಿಗಳನ್ನು ಇಲೆಕ್ಟ್ರಿಕಲ್ ಸಂಕೇತಗಳನ್ನಾಗಿ ಪರಿವರ್ತಿಸಿ, ಅವುಗಳನ್ನು ಮೆದುಳಿಗೆ ಕಳುಹಿಸುತ್ತದೆ. ಭೂಮಿಯಲ್ಲಿ, ಮೆದುಳು ನಿರಂತರವಾಗಿ ವೆಸ್ಟಿಬುಲಾರ್ ಅಂಗದಿಂದ ಗುರುತ್ವಾಕರ್ಷಣೆಯ ಮಾಹಿತಿಗಳನ್ನು ಪಡೆದುಕೊಳ್ಳುತ್ತಿರುತ್ತದೆ. ಬಳಿಕ ಆ ಮಾಹಿತಿಯನ್ನು ದೇಹದ ಸಮತೋಲನ ಕಾಪಾಡಿಕೊಳ್ಳಲು ಬಳಸುತ್ತದೆ.

ಆದರೆ, ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಬಹಳಷ್ಟು ಕಡಿಮೆ ಇದ್ದು, ವೆಸ್ಟಿಬುಲಾರ್ ಅಂಗದಿಂದ ಬರುವ ಮಾಹಿತಿಗಳು ಬದಲಾಗುತ್ತಿರುತ್ತವೆ. ಇದು ಮೆದುಳಿಗೆ ಗೊಂದಲ ಉಂಟುಮಾಡಿ, ಬಾಹ್ಯಾಕಾಶ ಅಸ್ವಸ್ಥತೆ ಉಂಟಾಗುವಂತೆ ಮಾಡುತ್ತದೆ. ಆದರೆ, ಈ ಪರಿಸ್ಥಿತಿ ದೀರ್ಘಕಾಲ ಇರುವುದಿಲ್ಲ. ಬಾಹ್ಯಾಕಾಶದಲ್ಲಿ ಕೆಲವು ದಿನಗಳನ್ನು ಕಳೆದ ಬಳಿಕ, ಮೆದುಳು ವೆಸ್ಟಿಬುಲಾರ್ ಅಂಗದ ಹೊಸ ಸಂಕೇತಗಳಿಗೆ ಹೊಂದಿಕೊಳ್ಳುತ್ತದೆ. ಇದರ ಪರಿಣಾಮವಾಗಿ, ಬಾಹ್ಯಾಕಾಶ ಅಸ್ವಸ್ಥತೆ ನಿವಾರಣೆಯಾಗುತ್ತದೆ.

ಇನ್ನು ಬಾಹ್ಯಾಕಾಶ ಅಸ್ವಸ್ಥತೆಯ ತೀವ್ರತೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಕೆಲವರಿಗೆ ಬಾಹ್ಯಾಕಾಶ ಅಸ್ವಸ್ಥತೆ ಉಂಟಾಗದಿರುವ ಸಾಧ್ಯತೆಗಳೂ ಇವೆ. ಬಾಹ್ಯಾಕಾಶಕ್ಕೆ ತೆರಳಿದ ಗಗನಯಾತ್ರಿಗಳು ಭೂಮಿಗೆ ಮರಳಿ ಬಂದಾಗ ಗುರುತ್ವಾಕರ್ಷಣೆಯ ಪರಿಣಾಮಗಳು ಕಾಣಿಸಿಕೊಳ್ಳುತ್ತವೆ. ಇದರ ಲಕ್ಷಣಗಳೂ ಬಾಹ್ಯಾಕಾಶ ಅಸ್ವಸ್ಥತೆಯ ರೀತಿಯಲ್ಲೇ ಇರುತ್ತವೆ.

ಬಾಹ್ಯಾಕಾಶ ಯಾತ್ರೆಯ ದ್ರವ ಸವಾಲುಗಳು

ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಬಹಳಷ್ಟು ದುರ್ಬಲವಾಗಿರುತ್ತದೆ. ಸಾಮಾನ್ಯವಾಗಿ ಭೂಮಿಯ ಗುರುತ್ವಾಕರ್ಷಣೆಯಲ್ಲಿ ದೇಹದ ದ್ರವಗಳು ಕೆಳಗೆ ಎಳೆಯಲ್ಪಡುತ್ತವೆ. ಆದರೆ, ಬಾಹ್ಯಾಕಾಶದಲ್ಲಿ ಇಂತಹ ವಿದ್ಯಮಾನ ನಡೆಯುವುದಿಲ್ಲ. ಇದರಿಂದಾಗಿ, ದೈಹಿಕ ದ್ರವಗಳು ದೇಹದ ಮೇಲ್ಭಾಗದಲ್ಲಿ ಶೇಖರಗೊಳ್ಳುತ್ತವೆ.

ಬಾಹ್ಯಾಕಾಶದಲ್ಲಿ ಮೂಗಿನಲ್ಲಿರುವ ಲೋಳೆಯ ಪೊರೆಗಳು (ಮ್ಯೂಕಸ್ ಮೆಂಬ್ರೇನ್) ಊದಿಕೊಳ್ಳುವ ಸಾಧ್ಯತೆಗಳಿವೆ. ಇದರಿಂದಾಗಿ ಗಗನಯಾತ್ರಿಗಳಿಗೆ ಮೂಗು ಕಟ್ಟುವ ಅನುಭವ ಉಂಟಾಗುತ್ತದೆ. ಆದರೆ, ಬಾಹ್ಯಾಕಾಶದಲ್ಲಿ ಕೆಲ ಸಮಯ ಕಳೆದ ಬಳಿಕ, ದೇಹದಲ್ಲಿರುವ ದ್ರವಗಳು ಕ್ರಮೇಣ ಹೊಂದಿಕೊಳ್ಳುತ್ತವೆ. ಆ ಬಳಿಕ ಕೆಲವು ವಾರಗಳಲ್ಲಿ ಮೂಗಿನ ಊದುವಿಕೆ ಕಡಿಮೆಯಾಗುತ್ತದೆ.

ಆದರೆ, ಇನ್ನೊಂದೆಡೆ ಬಾಹ್ಯಾಕಾಶದಿಂದ ಭೂಮಿಗೆ ಮರಳಿದ ಗಗನಯಾತ್ರಿಗಳು ಕುಳಿತಲ್ಲಿಂದ ಮೇಲೇಳುವಾಗ ತಲೆ ಸುತ್ತುವ ಅನುಭವ ಹೊಂದುತ್ತಾರೆ. ಈ ಪರಿಸ್ಥಿತಿಯನ್ನು ಆರ್ಥೋಸ್ಟ್ಯಾಟಿಕ್ ಪೈಪೋಟೆನ್ಷನ್ ಎನ್ನಲಾಗುತ್ತದೆ. ಭೂಮಿಯ ಗುರುತ್ವಾಕರ್ಷಣೆ ಬಾಹ್ಯಾಕಾಶದಿಂದ ಹೆಚ್ಚಿರುವುದರಿಂದ, ಹೃದಯಕ್ಕೆ ರಕ್ತವನ್ನು ತಲೆಗೆ ಪಂಪ್ ಮಾಡುವುದು ಕಷ್ಟಕರವಾಗುತ್ತದೆ. ಇದರ ಪರಿಣಾಮವಾಗಿ ಈ ಅಸ್ವಸ್ಥತೆ ಉಂಟಾಗುತ್ತದೆ.

ಬಾಹ್ಯಾಕಾಶದಲ್ಲಿ ಹೃದಯ ರಕ್ತವನ್ನು ಪಂಪ್ ಮಾಡಲು ಹೆಚ್ಚೇನು ಕಷ್ಟಪಡಬೇಕಾಗುವುದಿಲ್ಲ. ಸರಾಗವಾಗಿ ರಕ್ತ ಸಂಚಾರವಾಗುವುದರಿಂದ, ಹೃದಯ ಸ್ನಾಯುಗಳು ಬಲಹೀನವಾಗುವ ಸಾಧ್ಯತೆಗಳಿರುತ್ತವೆ. ಕುಳಿತಲ್ಲಿಂದ ಏಳುವಾಗ ತಲೆ ಸುತ್ತು ಕಂಡುಬರುವುದಕ್ಕೆ ಇದೂ ಕಾರಣವಾಗಿರಬಹುದು.

ಸುಸ್ತು, ಅಸ್ವಸ್ಥತೆ: ಗಗನಯಾತ್ರಿಗಳು ಎದುರಿಸುವ ಆರೋಗ್ಯ ತೊಂದರೆಗಳು
ಬಾಹ್ಯಾಕಾಶದಿಂದ ಸುರಕ್ಷಿತವಾಗಿ ಮರಳುವರೇ ಸುನಿತಾ ವಿಲಿಯಮ್ಸ್? ಎದುರಿಸಬೇಕಾದ ಆರೋಗ್ಯ ಅಪಾಯಗಳೇನು? (ಜಾಗತಿಕ ಜಗಲಿ)

ಸ್ಪೇಸ್ ಡಿಸ್‌ಕಂಡಿಷನಿಂಗ್ ಅಥವಾ ಕಕ್ಷೀಯ ಬಲಹೀನತೆ (ಆರ್ಬಿಟಲ್ ವೀಕ್‌ನೆಸ್)

ಬಾಹ್ಯಾಕಾಶದಲ್ಲಿ ಸುದೀರ್ಘ ಸಮಯ ಕಳೆದಾಗ, ಸ್ನಾಯುಗಳು ಮತ್ತು ಮೂಳೆಗಳು, ಅದರಲ್ಲೂ ಕಾಲುಗಳು ಮತ್ತು ಕೆಳಬೆನ್ನಿನ ಮೂಳೆಗಳು ದುರ್ಬಲವಾಗುತ್ತವೆ. ಭೂಮಿಯಲ್ಲಿ ಗುರುತ್ವಾಕರ್ಷಣೆ ಸದಾ ಕಾರ್ಯಾಚರಿಸುತ್ತಿರುತ್ತದೆ. ಆದ್ದರಿಂದ ನಮ್ಮ ಗಮನಕ್ಕೆ ಬಂದರೂ, ಬರದಿದ್ದರೂ, ನಾವು ನಮ್ಮ ದೇಹದ ಕೆಳಭಾಗದ ಸ್ನಾಯುಗಳನ್ನು ನಿರಂತರವಾಗಿ ಬಳಸುತ್ತಿರುತ್ತೇವೆ.

ಆದರೆ, ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಕನಿಷ್ಠ ಪ್ರಮಾಣದಲ್ಲಿರುತ್ತದೆ. ನೀವು ಅತ್ತಿತ್ತ ಓಡಾಡಲು ಎದ್ದು ನಿಲ್ಲುವ ಅಥವಾ ಕಾಲುಗಳನ್ನು ಬಳಸುವ ಅಗತ್ಯವೇ ಬೀಳುವುದಿಲ್ಲ. ಆದ್ದರಿಂದ, ಹೆಚ್ಚಿನ ಶ್ರಮದ ಅವಶ್ಯಕತೆ ಇಲ್ಲದೆ ಒಂದೇ ಭಂಗಿಯಲ್ಲಿ ಇರಬಹುದು. ಇದರಿಂದಾಗಿ, ಬಾಹ್ಯಾಕಾಶದಲ್ಲಿ ಅತ್ಯಂತ ಸುದೀರ್ಘ ಸಮಯವನ್ನು ಕಳೆದರೆ, ದೇಹದ ಸ್ನಾಯುಗಳು ದುರ್ಬಲಗೊಳ್ಳುತ್ತವೆ. ಅದರೊಡನೆ, ಮೂಳೆಗಳ ದ್ರವ್ಯರಾಶಿಯೂ ಕುಂಠಿತಗೊಳ್ಳುತ್ತದೆ.

ಗಗನಯಾತ್ರಿಗಳಲ್ಲಿ ಮೂಳೆಯ ದ್ರವ್ಯರಾಶಿ ಕಡಿಮೆಯಾಗುವುದನ್ನು ತಡೆಗಟ್ಟಲು ಬಾಹ್ಯಾಕಾಶದಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಇದರಲ್ಲಿ ಈಗಾಗಲೇ ಬಳಕೆಯಲ್ಲಿರುವ ಔಷಧಗಳ ಪರಿಣಾಮಕಾರಿತ್ವವನ್ನು ಪರೀಕ್ಷಿಸಲಾಗುತ್ತಿದೆ. ಅದಕ್ಕೆ ಪೂರಕವಾಗಿ, ಸ್ನಾಯುಗಳು ಮತ್ತು ಮೂಳೆಗಳು ದುರ್ಬಲವಾಗುವುದನ್ನು ತಡೆಯಲು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ (ಐಎಸ್ಎಸ್) ಗಗನಯಾತ್ರಿಗಳು ಪ್ರತಿದಿನವೂ ಕನಿಷ್ಠ ಎರಡು ಗಂಟೆಗಳ ಕಾಲ ವ್ಯಾಯಾಮ ನಡೆಸುತ್ತಾರೆ.

ವಾತಾವರಣ ಶೀಲ್ಡಿಂಗ್ ಅಥವಾ ವಿಕಿರಣಕ್ಕೆ ತೆರೆದುಕೊಳ್ಳುವಿಕೆ

ಭೂಮಿಯ ಮೇಲ್ಮೈಯ ಸುತ್ತಲೂ ವಾತಾವರಣ ಇರುತ್ತದೆ. ಇದು ನಮಗೆ ಉಸಿರಾಡಲು ಅತ್ಯಂತ ಅವಶ್ಯಕವಾದ ಆಮ್ಲಜನಕವನ್ನು ಒದಗಿಸಿ, ಅಪಾಯಕಾರಿ ಯುವಿ ಕಿರಣಗಳು ಮತ್ತು ವಿಕಿರಣಗಳಿಂದ ನಮ್ಮನ್ನು ರಕ್ಷಿಸುತ್ತದೆ.

ಬಾಹ್ಯಾಕಾಶದಲ್ಲಿ ವಾತಾವರಣ ಅತ್ಯಂತ ಕಡಿಮೆ ಇರುವುದರಿಂದ, ಅಥವಾ ವಾತಾವರಣವೇ ಇಲ್ಲದಿರುವುದರಿಂದ, ಗಗನಯಾತ್ರಿಗಳು ಭೂಮಿಗಿಂತ ಹೆಚ್ಚು ಹೆಚ್ಚು ತೀಕ್ಷ್ಣವಾದ ವಿಕಿರಣಗಳಿಗೆ ತೆರೆಯಲ್ಪಡುತ್ತಾರೆ. ಇಂತಹ ಅತ್ಯಂತ ಪ್ರಬಲ ಮತ್ತು ತೀಕ್ಷ್ಣ ವಿಕಿರಣಗಳಿಗೆ ತುತ್ತಾಗುವುದರಿಂದ, ಕ್ಯಾನ್ಸರ್‌ನಂತಹ ಅಪಾಯಗಳಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗುತ್ತವೆ.

ಸುಸ್ತು, ಅಸ್ವಸ್ಥತೆ: ಗಗನಯಾತ್ರಿಗಳು ಎದುರಿಸುವ ಆರೋಗ್ಯ ತೊಂದರೆಗಳು
International Space Station: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಕುರಿತು ವಾಸ್ತವದ ವಿಚಾರಗಳು

ಬಾಹ್ಯಾಕಾಶ ಒತ್ತಡ ಕಡಿಮೆಗೊಳಿಸುವುದು

ಹಿಂದಿನ ಬಾಹ್ಯಾಕಾಶ ನಿಲ್ದಾಣಗಳಿಗೆ ಹೋಲಿಸಿದರೆ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್) ಹೆಚ್ಚಿನ ಸ್ಥಳಾವಕಾಶ ಹೊಂದಿದೆ. ಆದರೂ, ಭೂಮಿಯಲ್ಲಿ ಜೀವನಕ್ಕೆ ಹೋಲಿಸಿದರೆ ಅಲ್ಲಿ ಓಡಾಟಕ್ಕೆ ಕಡಿಮೆ ಸ್ಥಳಾವಕಾಶ ಇರುತ್ತದೆ. ಈ ರೀತಿ ಅತ್ಯಂತ ಒತ್ತಾದ ಸ್ಥಳದಲ್ಲಿ ಇತರ ಗಗನಯಾತ್ರಿಗಳೊಡನೆ ತಿಂಗಳಾನುಗಟ್ಟಲೆ ಕಾರ್ಯ ನಿರ್ವಹಿಸುವ ಅನಿವಾರ್ಯತೆ ಇರುವುದರಿಂದ, ಗಗನಯಾತ್ರಿಗಳಿಗೆ ಒತ್ತಡ ಉಂಟಾಗುವ ಸಾಧ್ಯತೆಗಳಿವೆ. ಗಗನಯಾತ್ರಿಗಳ ಗಮನಕ್ಕೆ ಬರುವ ಮುನ್ನವೇ ಒತ್ತಡ ಅವರನ್ನು ಆವರಿಸುತ್ತದೆ. ಅವರ ಒತ್ತಡವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ, ಗಗನಯಾತ್ರಿಗಳಿಗೆ ಅವರ ಕುಟುಂಬಸ್ಥರೊಡನೆ, ಸ್ನೇಹಿತರೊಡನೆ ಸಂಪರ್ಕದಲ್ಲಿರಲು ಅವಕಾಶ ಕಲ್ಪಿಸಲಾಗಿದೆ. ಅದರೊಡನೆ, ಬಾಹ್ಯಾಕಾಶ ಆಹಾರದ ಗುಣಮಟ್ಟ ಹೆಚ್ಚಿಸಲೂ ಕ್ರಮ ಕೈಗೊಳ್ಳಲಾಗಿದೆ.

- ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com