ತುಟಿಗಳ ಉರಿಯೂತ ಅಥವಾ ಚೆಲೈಟಿಸ್ (ಕುಶಲವೇ ಕ್ಷೇಮವೇ)

ತುಟಿಗಳ ಉತ್ತಮ ಆರೈಕೆ, ಕಿರಿಕಿರಿ ಉಂಟುಮಾಡುವ ಉತ್ಪನ್ನಗಳನ್ನು ತ್ಯಜಿಸುವುದು ಮತ್ತು ಅಹಿತಕರ ಪರಿಸರದಿಂದ ದೂರವಿರುವುದರಿಂದ ಚೆಲೈಟಿಸ್ಸನ್ನು ಬಹುಪಾಲು ತಡೆಗಟ್ಟಬಹುದು.
file pic
ಸಾಂಕೇತಿಕ ಚಿತ್ರonline desk
Updated on

ಚೆಲೈಟಿಸ್ ಎಂದರೆ ತುಟಿಗಳ ಉರಿಯೂತ. ಸೋಂಕುಗಳು, ಕಿರಿಕಿರಿ ಉಂಟುಮಾಡುವ ಅಂಶಗಳು, ಅಲರ್ಜಿ ಮತ್ತು ಕೆಲವು ನಿರ್ದಿಷ್ಟ ಆರೋಗ್ಯ ಪರಿಸ್ಥಿತಿಗಳು ತುಟಿಗಳ ಉರಿಯೂತಕ್ಕೆ ಕಾರಣವಾಗಬಹುದು. ಚೆಲೈಟಿಸ್ ಒಂದು ಅಥವಾ ಎರಡೂ ತುಟಿಗಳು ಮತ್ತು ಸುತ್ತಮುತ್ತಲಿನ ಚರ್ಮದ ಮೇಲೆ ಪರಿಣಾಮ ಬೀರಬಹುದು.

ಚೆಲೈಟಿಸ್ಸಿನಲ್ಲಿ ಹಲವಾರು ವಿಧಗಳಿವೆ. ಅವುಗಳಲ್ಲಿ ಅತ್ಯಂತ ಸಾಮಾನ್ಯವಾಗಿರುವ ವಿಧಗಳೆಂದರೆ:

  1. ಕೋನೀಯ (ಆಂಗ್ಯುಲರ್) ಚೆಲೈಟಿಸ್: ಇದು ಬಂದರೆ ಬಾಯಿಯ ಮೂಲೆಗಳಲ್ಲಿ ಉರಿಯೂತ ಮತ್ತು ಬಿರುಕುಗಳು ಕಾಣಿಸಿಕೊಳ್ಳುತ್ತವೆ. ಹೆಚ್ಚಾಗಿ ಶಿಲೀಂಧ್ರ ಅಥವಾ ಬ್ಯಾಕ್ಟೀರಿಯಾದ ಸೋಂಕಿನಿಂದ ಕೋನೀಯ (ಆಂಗ್ಯುಲರ್) ಚೆಲೈಟಿಸ್ ಉಂಟಾಗುತ್ತದೆ.

  2. ಆಕ್ಟಿನಿಕ್ ಚೆಲೈಟಿಸ್: ದೀರ್ಘ ಕಾಲ ಸೂರ್ಯನಿಗೆ ಒಡ್ಡಿಕೊಳ್ಳುವುದರಿಂದ ಆಕ್ಟಿನಿಕ್ ಚೆಲೈಟಿಸ್ ಉಂಟಾಗುತ್ತದೆ, ಇದು ಸಾಮಾನ್ಯವಾಗಿ ಕೆಳ ತುಟಿಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಚಿಕಿತ್ಸೆ ನೀಡದೆ ಬಿಟ್ಟರೆ ಹೆಚ್ಚು ಗಂಭೀರ ಸಮಸ್ಯೆಯಾಗುವ ಸಂಭವವಿದೆ.

  3. ಕಾಂಟಾಕ್ಟ್ ಚೆಲೈಟಿಸ್: ಲಿಪ್ಸ್ಟಿಕ್, ಟೂತ್ಪೇಸ್ಟ್ ಅಥವಾ ಕೆಲವು ಆಹಾರಗಳಂತಹ ವಸ್ತುಗಳ ಸಂಪರ್ಕದಿಂದ ಉಂಟಾದ ಅಲರ್ಜಿಯ ಪ್ರತಿಕ್ರಿಯೆಯಿಂದಾಗಿ ಕಾಂಟಾಕ್ಟ್ ಚೆಲೈಟಿಸ್ ಬರುತ್ತದೆ.

  4. ಎಕ್ಸ್ಫೋಲಿಯೇಟಿವ್ ಚೆಲೈಟಿಸ್: ತುಟಿಗಳ ಮೇಲಿನ ಚರ್ಮದ ಸುಲಿಯುವಿಕೆ ಇದರ ಲಕ್ಷಣವಾಗಿದೆ. ಇದು ಒತ್ತಡ, ಆತಂಕ ಅಥವಾ ಆಗಾಗ ತುಟಿಗಳನ್ನು ಅಭ್ಯಾಸಬಲದಿಂದ ಲಾಲಾರಸದಿಂದ ಒದ್ದೆ ಮಾಡಿಕೊಳ್ಳುವುದರಿಂದ ಬರುತ್ತದೆ..

  5. ಎಕ್ಜಿಮಾಟಸ್ ಚೆಲೈಟಿಸ್: ಕಿರಿಕಿರಿ ಉಂಟುಮಾಡುವ ಪದಾರ್ಥಗಳು, ಉತ್ಪನ್ನಗಳು, ಅಂಶಗಳು ಅಥವಾ ಅಲರ್ಜಿಕಾರಕಗಳು ತುಟಿಗಳ ಮೇಲೆ ಪರಿಣಾಮ ಬೀರಿದಾಗ ಇದು ಕಂಡುಬರುತ್ತದೆ.

ಚೆಲೈಟಿಸ್ಸಿನ ಲಕ್ಷಣಗಳು

ಚೆಲೈಟಿಸ್ಸಿನ ಲಕ್ಷಣಗಳು ಪರಿಸ್ಥಿತಿಯ ಪ್ರಕಾರ ಮತ್ತು ತೀವ್ರತೆಯನ್ನು ಅವಲಂಬಿಸಿ ಬದಲಾಗಬಹುದು. ಆದರೆ ಕೆಲವು ಸಾಮಾನ್ಯ ಲಕ್ಷಣಗಳು ಹೀಗಿವೆ:

  • ತುಟಿಗಳು ಅತಿಯಾಗಿ ಒಣಗಿದಂತೆ, ಒಡೆದುಹೋದಂತೆ ಅಥವಾ ಬಿರುಕು ಬಿಟ್ಟಂತೆ ಕಾಣುತ್ತವೆ. ವಿಶೇಷವಾಗಿ ಕೋನೀಯ (ಆಂಗ್ಯುಲರ್) ಮತ್ತು ಎಕ್ಸ್ಫೋಲಿಯೇಟಿವ್ ಚೆಲೈಟಿಸ್ ಬಂದಾಗ ತುಟಿಗಳು ಒಣಗಿದಂತೆ ಅಥವಾ ಬಿರುಕು ಬಿಟ್ಟಂತೆ ಎದ್ದು ಕಾಣುತ್ತವೆ.

  • ಸಾಮಾನ್ಯವಾಗಿ ತುಟಿಗಳು ಅಥವಾ ಬಾಯಿಯ ಮೂಲೆಗಳಲ್ಲಿ ಗಮನಾರ್ಹವಾಗಿ ಕೆಂಪು ಬಣ್ಣ ಎದ್ದು ಕಾಣುವುದು.

  • ಕೆಲವು ಸಂದರ್ಭಗಳಲ್ಲಿ ತುಟಿಗಳು ಊದಿಕೊಳ್ಳಬಹುದು ಅಥವಾ ಉಬ್ಬಿಕೊಳ್ಳಬಹುದು.

  • ಚೆಲೈಟಿಸ್ ಅಹಿತಕಾರಿ ಅನುಭವ ಉಂಟುಮಾಡಬಹುದು. ಹೀಗಾದಾಗ ತುಟಿಗಳನ್ನು ಚಲಿಸಲು ಅಥವಾ ಮಾತನಾಡಲು ನೋವುಂಟಾಗುತ್ತದೆ.

  • ತುಟಿಗಳ ಉರಿಯೂತವು ರಕ್ತಸ್ರಾವಕ್ಕೆ ಕಾರಣವಾಗಬಹುದು. ಚರ್ಮವು ಬಿರುಕು ಬಿಟ್ಟಾಗ ಅಥವಾ ಸಿಪ್ಪೆಸುಲಿಯುವ ಸಂದರ್ಭಗಳಲ್ಲಿ ರಕ್ತಸ್ರಾವವಾಗಬಹುದು.

  • ತೀವ್ರತರ ಪ್ರಕರಣಗಳಲ್ಲಿ ತುಟಿಗಳ ಮೇಲೆ ಗುಳ್ಳೆಗಳು ಅಥವಾ ಹುಣ್ಣುಗಳು ಬೆಳೆಯಬಹುದು. ಇದು ಮತ್ತಷ್ಟು ಅಸ್ವಸ್ಥತೆ ಮತ್ತು ಸೋಂಕಿನ ಅಪಾಯಕ್ಕೆ ಕಾರಣವಾಗುತ್ತದೆ.

  • ತುಟಿಗಳ ಮೇಲಿನ ಚರ್ಮವನ್ನು ನಿರಂತರವಾಗಿ ಒಣಗಿ ಉದುರಬಹುದು ಅಥವಾ ಕೈನಿಂದ ಅದನ್ನು ತೆಗೆದುಹಾಕಬೇಕು ಎನಿಸುತ್ತದೆ.

ಚೆಲೈಟಿಸ್ ಗೆ ಚಿಕಿತ್ಸೆ

ಚೆಲೈಟಿಸ್ಸಿಗೆ ಚಿಕಿತ್ಸೆಯು ಉರಿಯೂತದ ಪ್ರಕಾರ ಮತ್ತು ಮೂಲ ಕಾರಣವನ್ನು ಅವಲಂಬಿಸಿರುತ್ತದೆ. ಕೆಲವು ಸಾಮಾನ್ಯ ಚಿಕಿತ್ಸಾ ವಿಧಾನಗಳು ಹೀಗಿವೆ:

  1. ತುಟಿಗಳನ್ನು ಒಣಗದಂತೆ ಇಟ್ಟುಕೊಳ್ಳುವುದು ಚೆಲೈಟಿಸ್ಸಿನ ನಿರ್ವಹಣೆಯಲ್ಲಿ ಬಹಳ ಮುಖ್ಯವಾಗಿದೆ. ಜೇನುಮೇಣ, ಬೆಣ್ಣೆ, ತುಪ್ಪ, ಕೊಬ್ಬರಿ ಎಣ್ಣೆಯಂತಹ ಪದಾರ್ಥಗಳನ್ನು ಒಳಗೊಂಡಿರುವ ಕಿರಿಕಿರಿಯುಂಟುಮಾಡದ ಲಿಪ್ ಬಾಮ್ಗಳ ಬಳಕೆ ತೇವಾಂಶವನ್ನು ತುಟಿಗಳಲ್ಲಿ ಹಿಡಿದಿಡುತ್ತದೆ.

  2. ಆಂಟಿಫಂಗಲ್ ಅಥವಾ ಆಂಟಿಬ್ಯಾಕ್ಟೀರಿಯಲ್ ಕ್ರೀಮುಗಳು: ಬ್ಯಾಕ್ಟೀರಿಯಾ ಅಥವಾ ಫಂಗಲ್ ಸೋಂಕಿನಿಂದ ಉಂಟಾಗುವ ಕೋನೀಯ ಚೆಲೈಟಿಸ್ ಪ್ರಕರಣಗಳಲ್ಲಿ ಆಂಟಿಫಂಗಲ್ ಅಥವಾ ಆಂಟಿಬ್ಯಾಕ್ಟೀರಿಯಲ್ ಕ್ರೀಮ್ಗಳು ಆಧಾರವಾಗಿರುವ ಸೋಂಕಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುತ್ತವೆ.

  3. ಕಿರಿಕಿರಿ ಉಂಟುಮಾಡುವ ಅಲರ್ಜಿಕಾರಕಗಳನ್ನು ಗುರುತಿಸಿ ಅವುಗಳನ್ನು ಹೋಗಲಾಡಿಸುವುದು ಬಹಳ ಮುಖ್ಯ. ಇವುಗಳಲ್ಲಿ ಕೆಲವು ಸೌಂದರ್ಯವರ್ಧಕಗಳು, ಸುಗಂಧ ದ್ರವ್ಯಗಳು ಮತ್ತು ಆಹಾರ ಪದಾರ್ಥಗಳು ಸೇರಿವೆ. ಉತ್ತಮ ಮೌಖಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ತುಟಿಗಳ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

  4. ಬಹಳ ಹೊತ್ತು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಉಂಟಾಗುವ ಆಕ್ಟಿನಿಕ್ ಚೆಲೈಟಿಸ್ ಅನ್ನು ಸನ್ ಪ್ರೊಟೆಕ್ಷನ್ ಫ್ಯಾಕ್ಟರ್ (ಎಸ್ಪಿಎಫ್) ಹೊಂದಿರುವ ಲಿಪ್‌ಬಾಮುಗಳನ್ನು ಬಳಸುವ ಮೂಲಕ ತಡೆಗಟ್ಟಬಹುದು.

  5. ಪೌಷ್ಟಿಕಾಂಶದ ಕೊರತೆಯಿದ್ದಾಗ ಅದರಲ್ಲಿಯೂ ವಿಶೇಷವಾಗಿ ಕಬ್ಬಿಣ, ವಿಟಮಿನ್ ಬಿ ಮತ್ತು ಫೋಲಿಕ್ ಆಮ್ಲಗಳಿರುವ ಸಪ್ಲಿಮೆಂಟುಗಳನ್ನು ಕೊಟ್ಟು ತುಟಿಗಳ ಉರಿಯೂತವನ್ನು ತಡೆಯಬಹುದು.

  6. ಆಯುರ್ವೇದದಲ್ಲಿ ಹೇಳಿರುವಂತೆ ಜಾತ್ಯಾದಿ ಘೃತ/ಜಾತ್ಯಾದಿ ತೈಲವನ್ನು ತುಟಿಗೆ ಹಚ್ಚಿ ಚೆಲೈಟಿಸ್ಸನ್ನು ತಡೆಗಟ್ಟಬಹುದು.

file pic
Paralysis ಅಥವಾ ಪಾರ್ಶ್ವವಾಯು / ಸ್ಟ್ರೋಕ್ (ಕುಶಲವೇ ಕ್ಷೇಮವೇ)

ಚೆಲೈಟಿಸ್ ತಡೆಗಟ್ಟುವಿಕೆ

ತುಟಿಗಳ ಉತ್ತಮ ಆರೈಕೆ, ಕಿರಿಕಿರಿ ಉಂಟುಮಾಡುವ ಉತ್ಪನ್ನಗಳನ್ನು ತ್ಯಜಿಸುವುದು ಮತ್ತು ಅಹಿತಕರ ಪರಿಸರದಿಂದ ದೂರವಿರುವುದರಿಂದ ಚೆಲೈಟಿಸ್ಸನ್ನು ಬಹುಪಾಲು ತಡೆಗಟ್ಟಬಹುದು. ನಿಯಮಿತವಾಗಿ ತುಟಿಗಳನ್ನು ತೇವಗೊಳಿಸುವುದು ಮತ್ತು ಪ್ರತಿದಿನ ಸಾಕಷ್ಟು ನೀರು ಕುಡಿಯುವುದು ಶುಷ್ಕತೆ ಮತ್ತು ಬಿರುಕುಗಳನ್ನು ತಡೆಯಲು ಸಹಾಯ ಮಾಡುತ್ತದೆ. ಸೂರ್ಯನ ಸುಡುಬಿಸಿಲಿನಿಂದ ರಕ್ಷಣೆ ಪಡೆಯಲು ಮೃದುವಾದ ಲಿಪ್ ಬಾಮನ್ನು ಹಿತಮಿತವಾಗಿ ನಿಯಮಿತವಾಗಿ ಬಳಸುವುದು ಒಳ್ಳೆಯುದು. ತೀಕ್ಷ್ಣ ರಸಾಯನಿಕಗಳು, ಸುಗಂಧ ದ್ರವ್ಯಗಳು ಅಥವಾ ಅಲರ್ಜಿಕಾರಕಗಳನ್ನು ಹೊಂದಿರುವ ತುಟಿಯ ಸೌಂದರ್ಯವರ್ಧಕ ಉತ್ಪನ್ನಗಳನ್ನು ಬಳಸಬೇಡಿ. ತುಟಿ ಮತ್ತು ಹಲ್ಲುಗಳ ಸರಿಯಾದ ಆರೈಕೆ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಲಿಪ್ಸ್ಟಿಕ್ಕುಗಳನ್ನು ಖರೀದಿಸುವಾಗ ಗಿಡಮೂಲಿಕೆಗಳಿಂದ ತಯಾರಿಸಿದ ಲಿಪ್‌ಸ್ಟಿಕ್ ಖರೀದಿಸಿ. ದಿನಪೂರ್ತಿ ಲಿಪ್‌ಸ್ಟಿಕ್ ಹಾಕಿಕೊಂಡಿರುವುದು ಒಳ್ಳೆಯದಲ್ಲ. ಸ್ವಲ್ಪ ಹೊತ್ತು ಹಾಕಿಕೊಂಡು ತೆಗೆಯಬೇಕು.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com