ಅದೊಂದು ಘಟನೆ ಬಿಜೆಪಿ- ಜೆಡಿಎಸ್ ಪಾಳೇಯಗಳಲ್ಲಿ ತಲ್ಲಣಕ್ಕೆ ಕಾರಣವಾಗಿದೆ. ಉಪ ಮುಖ್ಯಮಂತ್ರಿ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಉರುಳಿಸಿರುವ ರಾಜಕೀಯ ದಾಳಕ್ಕೆ ರಾಜ್ಯ ಬಿಜೆಪಿ ದಿಕ್ಕೆಟ್ಟು ಕುಳಿತಿದ್ದರೆ, ಜೆಡಿಎಸ್ ನಾಯಕರನ್ನು ಗೊಂದಲಕ್ಕೆ ತಳ್ಳಿದೆ.
ಬೆಂಗಳೂರು ನಗರದ ಭಾಗವೇ ಆಗಿರುವ, ಕನಕಪುರ ಲೋಕಸಭಾ ಕ್ಷೆತ್ರದ ವ್ಯಾಪ್ತಿಗೊಳಪಡುವ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಮಹಿಳೆಯೊಬ್ಬರಿಗೆ ಅವಮಾನ ಮಾಡಿದರೆಂಬ ಪ್ರಕರಣ ಇದೀಗ ಜಾತಿ ಸ್ವರೂಪ ಪಡೆದಿದೆ. ಒಕ್ಕಲಿಗ ಮಹಿಳೆಗೆ ಅವಮಾನ ಆಗುವ ರೀತಿಯಲ್ಲಿ ಜಾತಿ ಹೆಸರು ಹಿಡಿದು ನಿಂದಿಸಿದರೆಂಬುದು ಅವರ ವಿರುದ್ಧದ ದೂರು. ಮೊದಲ ಪ್ರಕರಣದಲ್ಲಿ ಅವರಿಗೆ ನ್ಯಾಯಾಲಯದಿಂದ ಜಾಮೀನು ಸಿಕ್ಕಿದೆ. ಮತ್ತೊಂದು ಅತ್ಯಾಚಾರ ಆರೋಪ ಪ್ರಕರಣದಲ್ಲಿ ಪೊಲೀಸರು ಅವರನ್ನು ಈಗ ಬಂಧಿಸಿದ್ದಾರೆ. ಪ್ರಕರಣಗಳ ಸತ್ಯಾಸತ್ಯತೆ ಮುಂದಿನ ದಿನಗಳಲ್ಲಿ ನಿರ್ಧಾರವಾಗಬೇಕಷ್ಟೆ.
ಎರಡೂ ಪ್ರಕರಣಗಳು ಸಾಗುತ್ತಿರುವ ಜಾಡನ್ನು ಸೂಕ್ಷ್ಮವಾಗಿ ಗಮನಿಸಿದರೆ ರಾಜಕೀಯ ತಂತ್ರಗಾರಿಕೆ ಕಂಡು ಬರುತ್ತದೆ, ಜತೆಗೇ ಇದನ್ನೇ ಅಸ್ತ್ರವಾಗಿ ಬಳಸಿಕೊಂಡಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡೆಸಿರುವ ರಾಜಕೀಯ ತಂತ್ರಗಾರಿಕೆ ಇದೀಗ ಹಳೇ ಮೈಸೂರು ಪ್ರಾಂತ್ಯದ ಒಕ್ಕಲಿಗರೇ ಪ್ರಬಲರಾಗಿರುವ ಜಿಲ್ಲೆಗಳಲ್ಲಿ ರಾಜಕೀಯ ಅಸ್ತಿತ್ವ ಕಂಡುಕೊಳ್ಳಲು ಬಿಜೆಪಿ ನಡೆಸಿದ್ದ ಪ್ರಯತ್ನಕ್ಕೆ ಪೆಟ್ಟು ಬಿದ್ದಿದೆ. ಆ ಪಕ್ಷದಿಂದ ಸಮುದಾಯದ ನಾಯಕರಾಗಲು ಹೊರಟಿದ್ದ ಸೇನಾನಿಗಳು ಈ ತಂತ್ರಕ್ಕೆ ಸಿಕ್ಕಿ ಕಂಗೆಟ್ಟಿದ್ದಾರೆ.
ಮತ್ತೊಂದು ಕಡೆ ಮುಂದಿನ ಮುಖ್ಯಮಂತ್ರಿ ಆಗಲು ಶತ ಪ್ರಯತ್ನ ನಡೆಸಿರುವ ಶಿವಕುಮಾರ್ ಈ ಪ್ರಕರಣವನ್ನು ಬಳಸಿಕೊಂಡು ಜೆಡಿಎಸ್ ಪ್ರಾಬಲ್ಯ ಮುರಿದು ತಾನು ಸಮುದಾಯದ ಪ್ರಶ್ನಾತೀತ ನಾಯಕನಾಗುವ ಹವಣಿಕೆಯಲ್ಲಿರುವುದು ಆಳಕ್ಕಿಳಿದು ನೋಡಿದರೆ ಗೊತ್ತಾಗುತ್ತದೆ.
ಶಾಸಕ ಮುನಿರತ್ನ ಇತ್ತೀಚಿನ ವರ್ಷಗಳಲ್ಲಿ ಶಿವಕುಮಾರ್ ಸೋದರರ ಪ್ರಾಬಲ್ಯದ ವಿರುದ್ಧ ತಿರುಗಿ ಬಿದ್ದಿದ್ದರು. ಹಾಗಂತ ಅವರು ಕಾಂಗ್ರೆಸ್ ಪಕ್ಷದ ಕಡು ವಿರೋಧಿಯೇನೂ ಅಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈಗಲೂ ಪರಮಾಪ್ತರು. ಈ ಹಿಂದೆ ಕಾಂಗ್ರೆಸ್ ನಿಂದ ಗೆದ್ದು ಶಾಸಕರಾಗಿದ್ದು ಬಿಜೆಪಿ ನಡೆಸಿದ ಆಪರೇಷನ್ ಕಮಲ ಕಾರ್ಯಾಚರಣೆಗೆ ಆಕರ್ಷಿತರಾಗಿ ರಮೇಶ್ ಜಾರಕಿಹೊಳಿ ಸೇರಿದಂತೆ ಇತರ ಸಹೋದ್ಯೋಗಿಗಳ ಜತೆ ಬಿಜೆಪಿ ಸೇರಿ ಮಂತ್ರಿಯೂ ಆಗಿದ್ದರು. ರಾಜಕಾರಣದ ಜತೆಗೇ ಕನ್ನಡ ಚಲನಚಿತ್ರ ನಿರ್ಮಾಪಕರೂ ಆಗಿದ್ದಾರೆ.
ಮುನಿರತ್ನ ಪ್ರತಿನಿಧಿಸುವ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ಕನಕಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುತ್ತದೆ. ಈ ಕ್ಷೇತ್ರದಿಂದ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಿವಕುಮಾರ್ ಅವರ ಸೋದರ ಡಿ.ಕೆ.ಸುರೇಶ್ ಭಾರೀ ಮತಗಳ ಅಂತರದಿಂದ ಪರಾಭವಗೊಂಡರು. ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾದ ಹೆಸರಾಂತ ಹೃದ್ರೋಗ ತಜ್ಞ ಡಾ. ಸಿ.ಎಎನ್. ಮಂಜುನಾಥ್ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಅಳಿಯ. ಅವರನ್ನು ಚುನಾವಣೆಯಲ್ಲಿ ಗೆಲ್ಲಿಸುವಲ್ಲಿ ಮುನಿರತ್ನ ಪಾತ್ರ ಬಹಳ ದೊಡ್ಡದು. ಬಿಜೆಪಿಯಲ್ಲಿದ್ದರೂ ದೇವೇಗೌಡರ ಕುಟುಂಬಕ್ಕೆ ಹಾಗೂ ಜೆಡಿಎಸ್ ಗೆ ಅನೇಕ ಕಾರಣಗಳಿಂದ ಅವರು ಹತ್ತಿರವಾಗಿದ್ದಾರೆ. ಈ ಎಲ್ಲ ಕಾರಣದಿಂದ ಡಿ.ಕೆ.ಶಿವಕುಮಾರ್ ಅವರ ಕಡು ವಿರೋಧವನ್ನೂ ಕಟ್ಟಿಕೊಂಡಿದ್ದಾರೆ.
ಮನಿರತ್ನ ಒಕ್ಕಲಿಗ ಸಮುದಾಯದ ಹೆಣ್ಣುಮಗಳ ವಿಚಾರದಲ್ಲಿ ಅಸಹ್ಯಕರವಾಗಿ ಮಾತಾಡಿದ್ದಾರೆಂಬ ಆರೋಪ ಈಗ ದೊಡ್ಡ ವಿವಾದ ಸೃಷ್ಟಿಸಿದೆ. ಸಮುದಾಯದ ಮುಖಂಡರು,ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಪಡಿಸಿದ್ದಾರೆ.
ಮುನಿರತ್ನ ವಿರುದ್ಧದ ಆರೋಪಗಳ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿರುವುದರಿಂದ ತೀರ್ಪು ಹೊರಬರುವರೆಗೂ ಅದರ ಸತ್ಯಾಸತ್ಯತೆ ಕುರಿತ ವಿಶ್ಲೇಷಣೆ ಇಲ್ಲಿ ಅಗತ್ಯವಿಲ್ಲ.ಆದರೆ ಇದರಹಿಂದಿನ ರಾಜಕೀಯ ಲೆಕ್ಕಾಚಾರಗಳನ್ನು ಗಮನಿಸಿದರೆ ಒಕ್ಕಲಿಗರ ಪ್ರಶ್ನಾತೀತ ನಾಯಕನ ಪಟ್ಟಕ್ಕೆ ಶಿವಕುಮಾರ್ ನಡೆಸುತ್ತಿರುವ ಸಾಹಸ, ಆ ಮೂಲಕ ತಮ್ಮ ಮಹತ್ವಾಕಾಂಕ್ಷೆಯ ಮುಖ್ಯಮಂತ್ರಿ ಪಟ್ಟ ಪಡೆದುಕೊಳ್ಳಲು ನಡೆಸಿರುವ ಹೋರಾಟ ಕಂಡು ಬರುತ್ತದೆ.
ಮಾಜಿ ಪ್ರಧಾನಿ ದೇವೇಗೌಡರನ್ನು ಈಗಲೂ ಒಕ್ಕಲಿಗ ಸಮಾಜ ಸರ್ವ ಸಮ್ಮತ ನಾಯಕ ಎಂದು ಒಪ್ಪಿಕೊಂಡಿದೆ. ಅವರ ಬಗ್ಗೆ ಗೌರವ ಹೊಂದಿದೆ. ಇತ್ತೀಚೆಗೆ ಕುಮಾರಸ್ವಾಮಿ ಎರಡುಬಾರಿ ಮುಖ್ಯಮಂತ್ರಿ ಆದ ನಂತರ ಆ ಪರಂಪರೆಯನ್ನು ಮುಂದುವರಿಸಲು ಪ್ರಯತ್ನ ನಡೆಸಿದರೂ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಅದಕ್ಕೆ ಬೇರೆಯದೇ ಕಾರಣಗಳಿವೆ. ಇತ್ತೀಚೆಗೆ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಗೆದ್ದು ಕೇಂದ್ರ ಸಚಿವರಾದ ನಂತರ ಈ ಭಾಗದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಇದರ ಜತೆಗೇ ಅವರ ಭಾವ ಡಾ.ಸಿ.ಎನ್. ಮಂಜುನಾಥ್ ಪಕ್ಕದ ಕನಕಪುರ ಕ್ಷೆತ್ರದಲ್ಲಿ ಗೆದ್ದು ಸಂಸದರಾಗಿರುವುದು ಅವರ ರಾಜಕೀಯ ಚಟುವಟಿಕೆಗಳಿಗೆ ಹೆಚ್ಚು ಬಲ ಬಂದಿದೆ. ಈ ಹಿನ್ನೆಲೆಯಲ್ಲೇ ಶಿವಕುಮಾರ್ ರಾಜಕೀಯ ಚಟುವಟಿಕೆಗಳಿಗೆ ಅವರು ಅಡ್ಡಗಾಲಾಗಿದ್ದಾರೆ. ಈ ಇಬ್ಬರೂ ನಾಯಕರ ನಡುವೆ ಮಾತಿನ ಸಂಘರ್ಷ ಕೆಲವೊಮ್ಮೆ ಅತಿರೇಕಕ್ಕೂ ಹೋಗಿದ್ದು ಇದೆ.
ಇದೀಗ ಅವರಿಗೆ ಬಿಜೆಪಿಯ ಕೇಂದ್ರ ನಾಯಕರ ಬೆಂಬಲವೂ ದೊರಕಿರುವುದರಿಂದ ವಿವಿಧ ಪಕ್ಷಗಳಲ್ಲಿರುವ ಶಿವಕುಮಾರ್ ವಿರೋಧಿ ಶಾಸಕರು ಹಾಗೂ ಮುಖಂಡರ ಒಲವು ಗಳಿಸಿಕೊಳ್ಳುವ ಪ್ರಯತ್ನದಲ್ಲಿ ಒಂದಷ್ಟರ ಮಟ್ಟಿಗೆ ಯಶಸ್ವಿಯಾಗಿದ್ದಾರೆ.ಮತ್ತೆ ಬಿಜೆಪಿ ನೆರವು ಪಡೆದು ಮುಖ್ಯಮಂತ್ರಿ ಆಗುವ ಅವರ ಕನಸಿಗೆ ಸಹಜವಾಗಿ ಶಿವಕುಮಾರ್ ಅಡ್ಡಿಯಾಗಿದ್ದಾರೆ. ಈ ಹಿನ್ನಲೆಯಲ್ಲಿ ರಾಜಕೀಯ ಸಮರವಂತೂ ನಡೆದೇ ಇದೆ. ಸರ್ಕಾರದಲ್ಲಿನ ತಮ್ಮ ಪ್ರಭಾವವನ್ನು ಬಳಸಿಕೊಂಡು ಹಳೆಯ ಪ್ರಕರಣಗಳಿಗೆ ಮರು ಜೀವ ನೀಡಿ ಅವನ್ನು ಕುಮಾರಸ್ವಾಮಿ ವಿರುದ್ಧ ವಿಚಾರಣೆಗೆ ಒಪ್ಪಿಸುವ ನಿರ್ಧಾರಗಳ ಹಿಂದೆ ಅವರ ಕಾರ್ಯತಂತ್ರ ತಳ್ಳಿ ಹಾಕುವಂತಿಲ್ಲ. ಇದಕ್ಕೆ ಇತ್ತೀಚಿನ ಘಟನಾವಳಿಗಳು ಪೂರಕ ಬೆಂಬಲ ಒದಗಿಸಿವೆ.
ಚೆನ್ನಪಟ್ಟನ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಘೋಷಣೆಗೆ ಮುನ್ನವೇ ಅದನ್ನೊಂದು ಪ್ರತಿಷ್ಠೆಯ ಸವಾಲಾಗಿ ಸ್ವೀಕರಿಸಿರುವ ಶಿವಕುಮಾರ್ ಇತ್ತಿಚೆಗೆ ಅಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ತೀರಾ ಇತ್ತೀಚೆಗೆ ನಗರಸಭೆಯ 16 ಮಂದಿ ಜೆಡಿಎಸ್ ಸದಸ್ಯರ ಪೈಕಿ 13 ಮಂದಿಯನ್ನು ಸಾರಾಸಗಟಾಗಿ ಕಾಂಗ್ರೆಸ್ ಗೆ ಸೇರಿಸಿಕೊಳ್ಳುವ ಮೂಲಕ ಕುಮಾರಸ್ವಾಮಿಯವರ ಪ್ರಾಬಲ್ಯ ಕಸಿಯುವ ಪ್ರಯತ್ನ ಮುಂದುವರಿಸಿದ್ದಾರೆ. ಹೀಗೆ ಒಕ್ಕಲಿಗ ಸಮುದಾಯದ ಪ್ರಶ್ನಾತೀತ ನಾಯಕನಾಗುವ ತಮ್ಮ ಕನಸನ್ನು ಈಡೇರಿಸಿಕೊಳ್ಳುವ ಹಾದಿಯಲ್ಲಿ ತಮಗಿರುವ ಅಡೆತಡೆಗಳನ್ನು ನಿವಾರಿಸಿಕೊಳ್ಳುವ ಪ್ರಯತ್ನದಲ್ಲಿರುವ ಶಿವಕುಮಾರ್ ಗೆ ಮುನಿರತ್ನ ಪ್ರಕರಣ ಅಸ್ತ್ರವಾಗಿ ಸಿಕ್ಕಿದೆ.
ಮತ್ತೊಂದು ಕಡೆ ಈ ಪ್ರಕರಣದ ಕುರಿತಂತೆ ಬಿಜೆಪಿ ನಾಯಕರೂ ತಣ್ಣಗಾಗಿದ್ದಾರೆ. ಮುನಿರತ್ನ ರನ್ನು ಸಮರ್ಥಿಸಿಕೊಳ್ಳುವಂತೆಯೂ ಇಲ್ಲ ಬಿಡುವಂತೆಯೂ ಇಲ್ಲ ಎಂಬ ಇಕ್ಕಟ್ಟಿನ ಸ್ಥಿತಿ ಅವರದ್ದು. ಹಾಗಾಗೇ ಈ ಪ್ರಕಣರಣದಲ್ಲಿ ಬಿಜೆಪಿ ಮುನಿರತ್ನ ಅವರಿಗೆ ನೋಟಿಸ್ ನೀಡಿ ಸುಮ್ಮನಾಗಿದೆ. ಆ ಪಕ್ಷದ ನಾಯಕರುಗಳಾದ ಶಾಸಕ ಡಾ. ಅಶ್ವತ್ಥನಾರಾಯಣ, ಪ್ರತಿಪಕ್ಷದ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮೊದಲಾದವರಿಗೆ ಈ ಪ್ರಕರಣ ಇಕ್ಕಟ್ಟಿನ ಸನ್ನಿವೇಶ ತಂದೊಡ್ಡಿದೆ.ಮುನಿರತ್ನ ಪರ ನಿಂತರೆ ಇಡೀ ಸಮುದಾಯದ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಹಾಗಿಲ್ಲವಾದರೆ ಪಕ್ಷದ ಶಾಸಕನೊಬ್ಬನ ವಿರುದ್ಧ ಆರೋಪಗಳು ಬಂದಾಗ ಸಂಕಷ್ಟ ಸ್ಥಿತಿಯಲ್ಲಿ ಅವರ ಬೆಂಬಲಕ್ಕೆ ನಿಲ್ಲಲಾಗದ ಅಸಹಾಯಕ ಸ್ಥಿತಿಯಂತಾಗುತ್ತದೆ. ಮುಂದಿನ ದಿನಗಳಲ್ಲಿ ಇದು ಪಕ್ಷದ ಅಸ್ತಿತ್ವದ ವಿಚಾರವೂ ಆಗಿರುವುದರಿಂದ ಏನನ್ನೂ ಮಾಡಲು ತೋಚದೆ ಈ ನಾಯಕರು ಪೇಚಾಡುತ್ತಿದ್ದಾರೆ.
ಮುನಿರತ್ನ ಅವರನ್ನು ಗುರಿಯಾಗಿಸಿಕೊಂಡಿರುವ ಶಿವಕುಮಾರ್ ರಾಜಕೀಯ ಕಾರ್ಯತಂತ್ರದ ಹಿಂದೆ ಇನ್ನೊಂದು ಗುರಿಯೂ ಇದೆ.ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ದಿವಂಗತ ಐಎಎಸ್ ಅಧಿಕಾರಿ ಡಿ.ಕೆ.ರವಿಯವರ ಪತ್ನಿ ಶ್ರೀಮತಿ ಕುಸುಮಾ ಇತ್ತೀಚೆಗೆ ರಾಜಕಾರಣದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ. ಒಮ್ಮೆ ಅವರು ವಿಧಾನಸಭೆಗೆ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಮುನಿರತ್ನ ವಿರುದ್ಧವೇ ಸೋತಿದ್ದರು. ಅವರ ಬೆಂಬಲಕ್ಕೆ ಶಿವಕುಮಾರ್ ನಿಂತಿದ್ದಾರೆ. ಆ ಮೂಲಕ ರಾಜರಾಜೇಶ್ವರಿ ವಿಧಾನಸಭಾ ಕ್ಷೆತ್ರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ತಂತ್ರಗಾರಿಕೆ ಇದರ ಹಿಂದೆ ಇದೆ. ಆ ಕಾರಣಕ್ಕೇ ಮಹಿಳೆಯ ನಿಂದನಾ ಪ್ರಕರಣ ಹಾಗೂ ಅತ್ಯಾಚಾರ ಆರೋಪ ಪ್ರಕರಣಗಳನ್ನು ಮುನಿರತ್ನ ವಿರುದ್ಧ ಪ್ರಬಲ ಜಾತಿ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ಸದ್ಯದಲ್ಲೇ ಬೃಹತ್ ಸಮಾವೇಶವೊಂದನ್ನೂ ನಡೆಸಲು ತಯಾರಿ ನಡೆದಿದೆ ಎಂಬ ಮಾಹಿತಿಯೂ ಇದೆ.
ಒಮ್ಮೆ ಒಕ್ಕಲಿಗ ಶಾಸಕರು, ಸಮುದಾಯದ ಬೆಂಬಲ ಸಿಕ್ಕರೆ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಆಗುವ ತಮ್ಮ ಕನಸು ಈಡೇರಿಸಿಕೊಳ್ಳಲು ದಾರಿ ಸುಗಮವಾಗುತ್ತದೆ ಎಂಬುದು ಈ ತಂತ್ರದ ಇನ್ನೊಂದು ಭಾಗ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಕುರಿತ ವಿವಾದದಲ್ಲಿನ ಕಾನೂನು ಸಂಘರ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮಸ್ಯೆ ತಂದೊಡ್ಡಿದೆ. ಇದನ್ನು ಬಳಸಿಕೊಂಡು ಪಕ್ಷದೊಳಗೇ ಇರುವ ತನ್ನ ವಿರೋಧಿಗಳು ಪದಚ್ಯುತಗೊಳಿಸುವ ಪ್ರಯತ್ನ ನಡೆಸಿರುವುದನ್ನು ಅರಿತಿರುವ ಅವರು ಪಕ್ಷದೊಳಗೆ ತಮ್ಮ ಪರ ಶಾಸಕರ ಬೆಂಬಲ ಹೆಚ್ಚಿಸಿಕೊಳ್ಳವ ಪ್ರಯತ್ನದಲ್ಲಿದ್ದಾರೆ, ಅದರ ಫಲ ಎಂಬಂತೆ ಮುಖ್ಯಮಂತ್ರಿ ಪಟ್ಟಕ್ಕೆ ತಾವೂ ಆಕಾಂಕ್ಷಿಗಳು ಎಂದು ಬಹಿರಂಗವಾಗೇ ಘೋಷಣೆ ಮಾಡಿದ್ದ ಕಾಂಗ್ರೆಸ್ ಮುಖಂಡರುಗಳಾದ ಆರ್.ವಿ. ದೇಶಪಾಂಡೆ, ಬಸವರಾಜ ರಾಯರೆಡ್ಡಿ, ಎಂ.ಬಿ.ಪಾಟೀಲ್ ,ಡಾ.ಜಿ.ಪರಮೇಶ್ವರ್ ಸೇರಿದಂತೆ ಹಲವು ಪ್ರಮುಖರನ್ನು ಉಪಹಾರ ಕೂಟಕ್ಕೆ ಕರೆದು ಅವೆಲ್ಲರೊಂದಿಗೆ ಸಮಾಲೋಚನೆ ನಡೆಸಿರುವುದು, ಇದಾದ ನಂತರ ಎಂಥದೇ ಪ್ರಸಂಗದಲ್ಲೂ ಬೆಂಬಲಕ್ಕೆ ನಿಲ್ಲುವುದಾಗಿ ಈ ಶಾಸಕರು ಭರವಸೆ ನೀಡಿರುವುದನ್ನು ಗಮನಿಸಿದರೆ ಸಿದ್ದರಾಮಯ್ಯ ಶತಾಯಗತಾಯ ತಮ್ಮ ಪಟ್ಟ ಉಳಿಸಿಕೊಳ್ಳಲು ರಾಜತಂತ್ರ ನಡೆಸಿರುವುದು ಗೊತ್ತಾಗುತ್ತದೆ. ಬಹು ಮುಖ್ಯವಾಗಿ ಈ ರೀತಿ ಹೇಳಿಕೆ ನೀಡಿರುವ ಪ್ರಮುಖರೆಲ್ಲ ಸಿದ್ದರಾಮಯ್ಯ ಅವರ ಬೆಂಬಲಿಗರು ಮತ್ತು ಅದೇ ರೀತಿ ಡಿ.ಕೆ.ಶಿವಕುಮಾರ್ ಅವರ ರಾಜಕೀಯ ವಿರೋಧಿಗಳು ಎಂಬುದು ಗಮನಾರ್ಹ ಸಂಗತಿ. ಒಂದು ಕಡೆ ಸಿದ್ದರಾಮಯ್ಯ ತಮ್ಮ ಪರ ಅಹಿಂದ ಸಮುದಾಯಗಳನ್ನ ಗಟ್ಟಿ ಮಾಡಿಕೊಳ್ಳುತ್ತಿದ್ದರೆ ಮತ್ತೊಂದು ಕಡೆ ಶಿವಕುಮಾರ್ ಒಕ್ಕಲಿಗ ನಾಯಕರಾಗಿ ಹೊರ ಹೊಮ್ಮುವ ದಿಕ್ಕಿನಲ್ಲಿ ತಂತ್ರಗಳ ಮೊರೆ ಹೊಕ್ಕಿದ್ದಾರೆ, ಮುನಿರತ್ನ ಪ್ರಕರಣ ಒಂದು ನೆಪವಷ್ಟೆ. ಈ ಪ್ರಕರಣವನ್ನು ಬಳಸಿಕೊಂಡು ಸಿದ್ದರಾಮಯ್ಯ ಅವರನ್ನೂ ಕಟ್ಟಿ ಹಾಕಲು ಅವರು ಸನ್ನಾಹ ನಡೆಸಿರುವುದು ಗುಟ್ಟೇನೂ ಅಲ್ಲ.
ಬರುವ ವರ್ಷದ ಮೇ ತಿಂಗಳಿಗೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರ ಎರಡು ವರ್ಷದ ಅವಧಿ ಮುಗಿಯುತ್ತದೆ. ಅಂತರಿಕ ಒಪ್ಪಂದದ ಪ್ರಕಾರ ಅವರು ಅಧಿಕಾರ ತ್ಯಜಿಸಿ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಬೆಂಬಲಿಸಬೇಕು. ಆದರೆ ಸದ್ಯದ ರಾಜಕೀಯ ಸ್ಥಿತಿ ನೋಡಿದರೆ ಇದು ಯಾವುದೂ ನಡೆಯುವ ಲಕ್ಷಣಗಳಿಲ್ಲ.
Advertisement