ಕಾಂಗ್ರೆಸ್ ಗೆ ತಲೆ ನೋವಾದ ಸಿದ್ದರಾಮಯ್ಯ (ಸುದ್ದಿ ವಿಶ್ಲೇಷಣೆ)

ಕಾಂಗ್ರೆಸ್ ಹೈಕಮಾಂಡ್ ಎದುರಿಸುತ್ತಿರುವ ಗೊಂದಲ ಇದು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಪಡೆದ ಸಂಬಂಧ ಕಾನೂನು ಸಮರದಲ್ಲಿ ಸದ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿನ್ನಡೆಯಾಗಿದೆ.
Mallikarjun kharge-Siddaramaiah
ಮಲ್ಲಿಕಾರ್ಜುನ ಖರ್ಗೆ- ಸಿಎಂ ಸಿದ್ದರಾಮಯ್ಯ online desk
Updated on

ಇಕ್ಕಟ್ಟಿನ ಸ್ಥಿತಿ. ರಾಜೀನಾಮೆಗೆ ಒತ್ತಾಯಿಸ ಬೇಕೆ?… ಬೇಡವೆ? ಸ್ವಯಂ ಸ್ಫೂರ್ತಿಯಿಂದ ಸಿದ್ದರಾಮಯ್ಯ ರಾಜೀನಾಮೆ ಕೊಡುವುದು ಸಾಧ್ಯವೇ ಇಲ್ಲ. ಹಾಗಂತ ಮನವೊಲಿಕೆಗೂ ಅವರು ಬಗ್ಗುತ್ತಿಲ್ಲ. ಹಾಗೂ ಹಟಕ್ಕೆ ಬಿದ್ದು ರಾಜೀನಾಮೆಗೆ ಒತ್ತಡ ತಂದರೆ ಅವರು ಬಂಡಾಯ ಏಳಬಹುದು. ಬಲಾಬಲ ಪ್ರದರ್ಶನಕ್ಕೂ ಮುಂದಾಗಬಹುದು. ಮತ್ತೊಂದು ಕಡೆ ಆರೋಪ ಹೊತ್ತ ಮುಖ್ಯಮಂತ್ರಿಯಿಂದ ರಾಜೀನಾಮೆ ಪಡೆಯದಿದ್ದರೆ ಅದರಿಂದ ಭವಿಷ್ಯದ ರಾಜಕಾರಣದಲ್ಲಿ ಪಕ್ಷ ಮುಜುಗರದ ಪರಿಸ್ಥಿತಿ ಎದುರಿಸಬೇಕಾಗಬಹುದು. ಹೀಗಿರುವಾಗ ಮುಂದೇನು?

ಕಾಂಗ್ರೆಸ್ ಹೈಕಮಾಂಡ್ ಎದುರಿಸುತ್ತಿರುವ ಗೊಂದಲ ಇದು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಪಡೆದ ಸಂಬಂಧ ಕಾನೂನು ಸಮರದಲ್ಲಿ ಸದ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿನ್ನಡೆಯಾಗಿದೆ. ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆಗೆ ನ್ಯಾಯಾಲಯ ಆದೇಶ ನೀಡಿದ್ದು, ಮೂರು ತಿಂಗಳಲ್ಲಿ ತನಿಖೆ ಮುಗಿಸಿ ವರದಿ ನೀಡಲು ಸೂಚಿಸಿದೆ. ಈಗಿನ ಲೆಕ್ಕಾಚಾರದ ಪ್ರಕಾರ ಡಿಸೆಂಬರ್ 24 ರ ವೇಳೆಗೆ ಲೋಕಾಯುಕ್ತ ಪೊಲೀಸರು ತನಿಖೆ ಪ್ರಕ್ರಿಯೆ ಮುಗಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು.

ಕಾನೂನಾತ್ಮಕ ಪ್ರಕ್ರಿಯೆಗಳು ಒಂದು ಕಡೆಯಾದರೆ. ಇಡೀ ಪ್ರಕರಣ ಇದೀಗ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದು ಬಿಜೆಪಿ ರಾಷ್ಟ್ರೀಯ ನಾಯಕರು ಕಾಂಗ್ರೆಸ್ ವಿರುದ್ಧ ಚುನಾವಣಾ ಅಸ್ತ್ರವಾಗಿಯೂ ಬಳಸಿಕೊಳ್ಳಲು ಆರಂಭಿಸಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಮತ್ತೆ ಅಸ್ತಿತ್ವ ಪುನರ್ ಸ್ಥಾಪಿಸುವ ಪ್ರಯತ್ನದಲ್ಲಿರುವ ಕಾಂಗ್ರೆಸ್ ಗೆ ಇದು ಗಂಟಲಲ್ಲಿನ ಬಿಸಿ ತುಪ್ಪ. ನ್ಯಾಯಾಲಯಗಳ ತೀರ್ಪು ಹೊರ ಬಿದ್ದ ನಂತರ ಹೈಕಮಾಂಡ್ ನ ನಾಯಕರನ್ನು ಸಂಪರ್ಕಿಸಿರುವ ಸಿದ್ದರಾಮಯ್ಯ ತಾನು ಕಾನೂನು ಸಮರವನ್ನು ಮುಂದುವರಿಸಲಿದ್ದು, ರಾಜೀನಾಮೆಗೆ ಒತ್ತಡ ತರುವುದು ಬೇಡ ಎಂದು ಮನವಿ ಮಾಡಿದ್ದಾರೆ. ಇದೊಂದು ರೀತಿ ಅವರು ವರಿಷ್ಠರಿಗೆ ನೀಡಿರುವ ಪರೋಕ್ಷ ಎಚ್ಚರಿಕೆಯೂ ಹೌದು. ಸದ್ಯದ ಪರಿಸ್ಥಿತಿಯಲ್ಲಿ ಲೋಕಾಯುಕ್ತ ಪೊಲಿಸರಿಂದ ಎಫ್.ಐ.ಆರ್. ದಾಖಲಾದರೂ ನೈತಿಕ ಹೊಣೆಗಾರಿಕೆ ಹೊತ್ತು ರಾಜೀನಾಮೆ ನೀಡುವ ಯಾವುದೇ ಸಾಧ್ಯತೆಗಳು ಇಲ್ಲ. ಸದ್ಯಕ್ಕೇನೋ ರಾಜ್ಯ ಸಚಿವ ಸಂಪುಟ ಸಬೆಯಲ್ಲಿ ಎಲ್ಲ ಸಚಿವರೂ ಒಮ್ಮತದ ಬೆಂಬಲಕ್ಕೆ ನಿಂತಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಕಾನೂನು ಸಮರ ಮುಂದುವರಿದಂತೆ ಇದೇ ನಿಷ್ಠೆ ಮುಂದುವರಿಯುತ್ತದೆ ಎಂಬ ಯಾವ ಭರವಸೆಯೂ ಇಲ್ಲ. ಕಾಲಾನಂತರದಲ್ಲಿ ನಿಷ್ಠೆ ಬದಲಾಗಲೂಬಹುದು.

ಇಂಥದೊಂದು ಸನ್ನಿವೇಶ ಎದುರಾಗಬಹುದೆಂಬ ಅಂದಾಜು ಸ್ವತಹಾ ಸಿದ್ದರಾಮಯ್ಯನವರಿಗೂ ಗೊತ್ತಿದೆ. ಅದಕ್ಕಾಗೇ ಎಂಥದೇ ಒತ್ತಡ ಎದುರಾದರೂ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡದೇ ಅಧಿಕಾರದಲ್ಲಿ ಮುಂದುವರಿಯಲು ಬಯಸಿದ್ದಾರೆ. ಮತ್ತೊಂದು ಕಡೆ ಹರ್ಯಾಣ ಸೇರಿದಂತೆ ಉತ್ತರದ ಕೆಲವು ರಾಜ್ಯಗಳಲ್ಲಿ ಈಗ ವಿಧಾನಸಬೆ ಚುನಾವಣೆ ಬಿಸಿ ಆರಂಭವಾಗಿದ್ದು ಕರ್ನಾಟಕದ ಈ ನಿವೇಶನ ಹಗರಣವನ್ನೇ ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರಮುಖ ಅಸ್ತ್ರವಾಗಿಸಿಕೊಂಡಿದೆ. ಇದು ಅಲ್ಲಿನ ಚುನಾವಣೆಗಳ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆಂದು ಹೇಳಲು ಸಾಧ್ಯವಿಲ್ಲವಾದರೂ ಕಾಂಗ್ರೆಸ್ ಗೆ ಅಲ್ಪ ಮಟ್ಟಿನ ಹಿನ್ನಡೆ ಆಗುವ ಸಾಧ್ಯತೆಗಳೂ ಇಲ್ಲದಿಲ್ಲ. ಸದ್ಯದಲ್ಲೇ ನೆರೆಯ ಮಹಾರಾಷ್ಟ್ರ ವಿಧಾನಸಭೆಗೂ ಚುನಾವಣೆ ಘೋಷಣೆ ಆಗುವ ಸಾಧ್ಯತೆಗಳಿವೆ. ಆಗಲೂ ಇದೇ ಅಸ್ತ್ರವನ್ನು ಕಾಂಗ್ರೆಸ್ ವಿರುದ್ಧ ಬಿಜೆಪಿ ಬಳಸುವುದು ಖಚಿತ. ಆದರೆ ಹರ್ಯಾಣ ಮತ್ತು ಮಹಾರಾಷ್ಟ್ರದಲ್ಲಿನ ರಾಜಕೀಯ ಸ್ಥಿತಿಗತಿಗಳು ಬೇರೆ ಬೇರೆ ಸ್ವರೂಪದ್ದಾಗಿರುವುದರಿಂದ ಪರಿಣಾಮಗಳೂ ವಿಭಿನ್ನವಾಗುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ.

ಕರ್ನಾಟಕದಲ್ಲಿ ಈಗಿನ ಸನ್ನಿವೇಶದಲ್ಲಿ ಕಾಂಗ್ರೆಸ್ ನಲ್ಲಿನ ಆಂತರಿಕ ಬೇಗುದಿ ಬಹಿರಂಗವಾಗಿ ಕಾಣಿಸುತ್ತಿಲ್ಲ ಎಂಬುದೇನೋ ನಿಜ. ಆದರೆ ಮುಖ್ಯಮಂತ್ರಿ ಬದಲಾವನೆಗೆ ತೆರೆ ಮರೆಯಲ್ಲಿ ಪ್ರಯತ್ನಗಳು ಉನ್ನತ ಮಟ್ಟದಲ್ಲಿ ನಡೆಯುತ್ತಿರುವುದಂತೂ ಸತ್ಯ. ಈ ವಿಚಾರ ತಿಳಿದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಕ್ಕಿದ್ದಂತೆ ಕೇರಳಕ್ಕೆ ಭೇಟಿ ನೀಡಿ ಹೈಕಮಾಂಡ್ ನ ನಾಯಕರಾದ ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿ ಬಂದಿರುವುದು ಪರಿಸ್ಥಿತಿಯ ದಿಕ್ಸೂಚಿ ಎನ್ನಬಹುದು.

Mallikarjun kharge-Siddaramaiah
ರಾಜೀನಾಮೆ ಇಲ್ಲ; ಮತ್ತೆ ಹೋರಾಟದ ಹಾದಿ ಹಿಡಿದ ಸಿದ್ದರಾಮಯ್ಯ (ಸುದ್ದಿ ವಿಶ್ಲೇಷಣೆ)

ಮುಖ್ಯಮಂತ್ರಿ ಕಾರ್ಯ ನಿರ್ವಹಣೆಯ ಕುರಿತಂತೆಯೇ ಕಾಂಗ್ರೆಸ್ ಶಾಸಕರಲ್ಲಿ ಅಸಮಾಧಾನ ಕುದಿಯುತ್ತಿದೆ. ಇದಕ್ಕೆ ಅಭಿವೃದ್ಧಿ ಯೋಜನೆಗಳಿಗೆ ಕಾಮಗಾರಿಗಳಿಗೆ ಹಣ ಬಿಡುಗಡೆ ಆಗುತ್ತಿಲ್ಲ ಎಂಬುದು ಈ ಅಸಮಾಧಾನಕ್ಕೆ ಮೂಲ ಕಾರಣ. ಸರ್ಕಾರದ ಹೆಚ್ಚು ಪಾಲು ಆದಾಯವೆಲ್ಲ ಗ್ಯಾರಂಟಿ ಯೋಜನೆಗಳಿಗೆ ಖರ್ಚಾಗುತ್ತಿದೆ. ರಸ್ತೆ, ನೀರಾವರಿ, ಕುಡಿಯುವ ನೀರು ಸೇರಿದಂತೆ ವಿಧಾನಸಭಾ ಕ್ಷೇತ್ರಗಳಲ್ಲಿ ಅಗತ್ಯವಾಗಿ ನಡೆಯಬೇಕಾದ ಅಭಿವೃದ್ಧಿ ಕಾರ್ಯಗಳಿಗೆ ಈ ವರೆವಿಗೆ ಬಿಡಿಗಾಸೂ ಬಿಡುಗಡೆ ಆಗಿಲ್ಲ. ಇದೆಲ್ಲದರ ಬಗ್ಗೆ ಸಂಬಂಧಪಟ್ಟ ಖಾತೆಗಳ ಸಚಿವರ ಗಮನ ಸೆಳೆದರೆ ಗ್ಯಾರಂಟಿ ಯೋಜನೆಗಳಿಗೇ ಅನುದಾನ ಒದಗಿಸಲು ಕಸರತ್ತು ನಡೆಯುತ್ತಿರುವುದರಿಂದ ಸಂಪನ್ಮೂಲದ ಕೊರತೆ ಕಾರಣ ಹೇಳಿ ಜಾರಿಕೊಳ್ಳುತ್ತಿದ್ದಾರೆ. ಹಾಗೂ ಒತ್ತಡ ಹಾಕಿದರೆ ಮುಖ್ಯಮಂತ್ರಿಗಳನ್ನೇ ಕೇಳಿ ಹಣಕಾಸು ಖಾತೆ ಅವರ ಬಳಿಯೇ ಇದೆ. ಎಂದೂ ಶಾಸಕರನ್ನು ಸಾಗಹಾಕುತ್ತಾರೆ. ಮುಖ್ಯಮಂತ್ರಿ ಬಳಿ ಹೋದರೂ ಬೇಡಿಕೆಗಳು ಈಡೇರುತ್ತಿಲ್ಲ. ಇದು ಕಾಂಗ್ರೆಸ್ ನ ಹೆಚ್ಚುಪಾಲು ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ. ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯವಾಗಿ ಲಾಭವೇನೂ ಆಗಿಲ್ಲ ಎಂಬುದನ್ನು ಅನೇಕ ಸಚಿವರು ಖಾಸಗಿಯಾಗಿ ಒಪ್ಪಿಕೊಳ್ಳುತ್ತಾರೆ. ಆದರೆ ಬಹಿರಂಗವಾಗಿ ಇದೇ ಅಭಿಪ್ರಾಯ ವ್ಯಕ್ತಪಡಿಸಲು ಹಿಂಜರಿಯುತ್ತಿದ್ದಾರೆ. ಒಟ್ಟಾರೆ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ವಿರುದ್ಧ ಶಾಸಕರಲ್ಲಿ ಅಸಮಧಾನ ಮಡುಗಟ್ಟಿದೆ. ಇದೂ ಕೂಡಾ ಭವಿಷ್ಯದಲ್ಲಿ ಸಿದ್ದರಾಮಯ್ಯ ಅವರಿಗೆ ಮುಳುವಾಗಲಿದೆ.

ಮೈಸೂರಿನ ನಿವೇಶನ ಹಂಚಿಕೆ ಹಗರಣದ ವಿಚಾರದಲ್ಲಿ ಆರೋಪ ಬಂದ ತಕ್ಷಣ ಪ್ರಾಧಿಕಾರದಿಂದ ಪಡೆದ ನಿವೇಶನಗಳಲ್ಲಿ ಹಿಂದಿರುಗಿಸುವ ಜಾಣ್ಮೆಯನ್ನು ಸಿದ್ದರಾಮಯ್ಯ ಪ್ರದರ್ಶಿಸಿದ್ದರೆ ಇವತ್ತು ಪ್ರಕರಣ ದೊಡ್ಡದಾಗುವ ಸನ್ನಿವೇಶ ಎದುರಾಗುತ್ತಿರಲಿಲ್ಲ ಆದರೆ ಈ ವಿಚಾರದಲ್ಲಿ ತಮ್ಮ ಸುತ್ತ ಇರುವ ಭಟ್ಟಂಗಿಗಳ ಮಾತು ಕೇಳಿದ್ದೇ ಪರಿಸ್ಥಿತಿ ಗಂಭೀರವಾಗಲು ಕಾರಣ ಎಂಬುದು ಹಲವು ಕಾಂಗ್ರೆಸ್ ನಾಯಕರು ಹೇಳುವ ಮಾತು.

ಕಾಂಗ್ರೆಸ್ ವರಿಷ್ಠ ಮಂಡಳಿ ಎದುರಿಸುತ್ತಿರುವ ಇಕ್ಕಟ್ಟಿನ ಸನ್ನಿವೇಶ ಎಂದರೆ ಪರಿಸ್ಥಿತಿಯ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿಯ ರಾಜೀನಾಮೆ ಪಡೆದರೆ ಆ ಸ್ಥಾನಕ್ಕೆ ಮತ್ತೊಬ್ಬ ಸರ್ವ ಸಮ್ಮತ ವ್ಯಕ್ತಿಯನ್ನು ತಂದು ಕೂರಿಸುವುದು ಈಗಿನ ಸನ್ನಿವೇಶದಲ್ಲಿ ಕಷ್ಟ. ಈಗಿನ ಪರಿಸ್ಥಿತಿಯಲ್ಲಿ ಯಾರನ್ನೇ ಮುಖ್ಯಮಂತ್ರಿ ಹುದ್ದೆಗೆ ಸೂಚಿಸಿದರೂ ಅದು ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆ ಮೇಲೆ ಪರಿಣಾಮ ಬೀರುವುದು ಖಚಿತ. ಇದೇ ವೇಳೆ ಒತ್ತಡ ಹಾಕಿ ಸಿದ್ದರಾಮಯ್ಯ ರಾಜೀನಾಮೆ ಪಡೆದರೆ ಅದರಿಂದ ಮುಂದೆ ಅಹಿಂದ ವರ್ಗ ಕಾಂಗ್ರೆಸ್ ವಿರುದ್ಧ ತಿರುಗಿ ಬೀಳಬಹುದು. ಬಲವಂತಕ್ಕೆ ಕಟ್ಟು ಬಿದ್ದು ಒಂದು ವೇಳೆ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೂ ತಾವು ಹೇಳಿದವರನ್ನೇ ಮುಖ್ಯಮಂತ್ರಿ ಹುದ್ದೆಗೆ ಕೂರಿಸಬೇಕೆಂಬ ಷರತ್ತನ್ನೂ ಒಡ್ಡಬಹುದು ಆದರೆ ಅದನ್ನು ಈಗಾಗಲೇ ಮುಖ್ಯಮಂತ್ರಿ ಪಟ್ಟಕ್ಕೆ ಕಾದು ಕುಳಿತಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಉಳಿದವರು ವಿರೋಧಿಸುವ ಸಾಧ್ಯತೆಗಳೂ ಹೆಚ್ಚಾಗಿವೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರೂ ಆಗಿರುವುದರಿಂದ ಅವರನ್ನು ಕಡೆಗಣಿಸಿ ಕಾಂಗ್ರೆಸ್ ವರಿಷ್ಠರು ಯಾವುದೇ ನಿರ್ಧಾರ ಕೈಗೊಳ್ಳುವ ಸ್ಥಿತಿಯಲ್ಲಿ ಇಲ್ಲ.

ಮೂರು ದಿನಗಳ ಹಿಂದೆ ದಿಲ್ಲಿಯಲ್ಲಿ ಖಾಸಗಿಯಾಗಿ ಮಾತನಾಡಿದ ಕರ್ನಾಟಕ ಮೂಲದ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಿಸುವ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ ಎಂಬ ಸಂಗತಿಯನ್ನು ಒಪ್ಪಿಕೊಂಡಿರುವುದು ಈ ಬೆಳವಣಿಗೆಗಳಿಗೆ ಪೂರಕ ಅಂಶ.

Mallikarjun kharge-Siddaramaiah
ಡಿ.ಕೆ.ಶಿ ರಣತಂತ್ರಕ್ಕೆ ಬಿಜೆಪಿ- ಜೆಡಿಎಸ್ ಕಂಗಾಲು! (ಸುದ್ದಿ ವಿಶ್ಲೇಷಣೆ)

ಡಿ.ಕೆ.ಶಿ ಲೆಕ್ಕಾಚಾರ ಏನು?: ಮುಖ್ಯಮಂತ್ರಿ ಪಟ್ಟಕ್ಕೆ ಸರತಿ ಸಾಲಿನಲ್ಲಿ ಮೊದಲಿಗರಾಗಿ ನಿಂತಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸದ್ಯಕ್ಕೆ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತಿರುವುದರ ಹಿಂದೆ ಅನೇಕ ಲೆಕ್ಕಾಚಾರಗಳಿವೆ. ಕಾಂಗ್ರೆಸ್ ನಲ್ಲಿ ಒಂದೂವರೆ ವರ್ಷದ ಹಿಂದೆ ಆಗಿದೆ ಎಂದು ಹೇಳಲಾಗುತ್ತಿರುವ ಒಪ್ಪಂದದ ಪ್ರಕಾರ ಮುಂದಿನ ಮೇ ತಿಂಗಳಿಗೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಎರಡು ವರ್ಷದ ಅವಧಿ ಪೂರೈಸುತ್ತಾರೆ. ಬಹುತೇಕ ನಿವೇಶನ ಹಗರಣಕ್ಕೆ ಸಂಬಂಧಿಸಿದ ಕಾನೂನು ಹೋರಾಟ ಮುಂದಿನ ಆರು ತಿಂಗಳವರೆಗೆ ನಡೆಯ ಬಹುದು. ಅಲ್ಲಿಯವರೆಗೆ ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಕೈ ಹಾಕದೇ ಸಿದ್ದರಾಮಯ್ಯ ಬೆಂಬಲಕ್ಕೇ ನಿಂತರೆ ಭವಿಷ್ಯದಲ್ಲಿ ಈ ನಿಷ್ಠೆ ತಮ್ಮ ದಾರಿಯನ್ನು ಸುಗಮಗೊಳಿಸಬಹುದು ಎಂಬುದು ಶಿವಕುಮಾರ್ ಲೆಕ್ಕಾಚಾರ. ಕಾನೂನು ಸಮರ ಮುಗಿಯುವ ವೇಳೆಗೆ ಅವಧಿ ಮುಗಿಯುವ ಸಂದರ್ಭವೂ ಬಂದಿರುತ್ತದೆ. ಆ ವೇಳೆಗೆ ಒಪ್ಪಂದದಂತೆ ಅಧಿಕಾರ ಬಿಡಲು ಸಿದ್ದರಾಮಯ್ಯ ಮನವೊಲಿಸುವುದು ಅವರ ಲೆಕ್ಕಾಚಾರ.

ಸದ್ಯಕ್ಕೆ ಕಾಂಗ್ರೆಸ್ ನಲ್ಲಿ ಹಿರಿತನ ಸೇರಿದಂತೆ ಶಾಸಕರ ವಿಶ್ವಾಸಕ್ಕೆ ಪಾತ್ರರಾಗಿರುವ ನಾಯಕ ಎಂದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮಾತ್ರ. ಮುಖ್ಯಮಂತ್ರಿ ಹುದ್ದೆ ಅಯಾಚಿತವಾಗಿ ತಮಗೆ ಒಲಿದು ಬರಬಹುದು ಎಂಬ ನಿರೀಕ್ಷೆಯಲ್ಲಿ ಅವರೂ ಇದ್ದಾರೆ. ಪರಿಸ್ಥಿತಿಗಳ ಲಾಭ ಪಡೆದು ಖರ್ಗೆಯವರು ಮುಖ್ಯಮಂತ್ರಿ ಪಟ್ಟಕ್ಕೆ ಏರಿದರೆ ಅವರನ್ನು ಕದಲಿಸುವುದು ಕಷ್ಟ. ಹಾಗಾದಾಗ ಉನ್ನತ ಹುದ್ದೆ ಪಡೆಯುವ ತನ್ನ ಕನಸು ನುಚ್ಚು ನೂರಾಗಬಹುದು. ಆದರೆ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತರೆ ಭವಿಷ್ಯದಲ್ಲಿ ತನಗೆ ಬೆಂಬಲ ಸಿಗಬಹುದು ಎಂಬುದೂ ಅವರ ಲೆಕ್ಕಾಚಾರ. ಆದರೆ ಎಂಥದೇ ಸಂದರ್ಭ ಒದಗಿ ಬಂದರೂ ಸಿದ್ದರಾಮಯ್ಯ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಬೆಂಬಲಿಸುತ್ತಾರ ಎಂಬುದು ದೂರದ ಮಾತು.

ಮತ್ತೊಂದು ಕಡೆ ಸಿದ್ದರಾಮಯ್ಯ ಅವರನ್ನು ಕಟುವಾಗಿ ವಿರೋಧಿಸುತ್ತಿದ್ದ ಜೆಡಿಎಸ್ ನಾಯಕ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಈಗ ತಮ್ಮ ನಿಲುವು ಬದಲಾಯಿಸಿಕೊಂಡಿದ್ದು ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕೆಂದೂ ತಾನು ಒತ್ತಾಯಿಸಿಯೇ ಇಲ್ಲ ಎಂದು ಹೇಳುವ ಮೂಲಕ ಮಾತಿನ ವರಸೆ ಬದಲಾಯಿಸಿದ್ದಾರೆ. ಒಂದು ವೇಳೆ ಪರಿಸ್ಥಿತಿಗಳು ಬದಲಾಗಿ ಡಿ.ಕೆ.ಶಿವಕುಮಾರ್ ಅವರೇ ಮುಖ್ಯಮಂತ್ರಿಯಾದರೆ ರಾಜಕೀಯವಾಗಿ ತಮ್ಮನ್ನು ಹಳೇ ಮೈಸೂರು ಪ್ರಾಂತ್ಯದಲ್ಲಿ ಅದರಲ್ಲೂ ಒಕ್ಕಲಿಗರ ಪ್ರಭಾವ ಇರುವ ಕ್ಷೇತ್ರಗಳಲ್ಲಿ ಉಳಿಯಗೊಡುವುದಿಲ್ಲ ಎಂಬ ಆತಂಕವೂ ಅವರಿಗಿದೆ. ಹೀಗಾಗಿ ತಮ್ಮ ಹೇಳಿಕೆ ಬದಲಾಯಿಸಿದ್ದಾರೆ. ಕಾಂಗ್ರೆಸ್ ಗೆ ಸಿದ್ದರಾಮಯ್ಯ ವಿಚಾರವೇ ದೊಡ್ಡ ತಲೆ ನೋವು ತಂದಿದೆ. ಅದರಿಂದ ನಿವಾರಣೆ ಸದ್ಯಕ್ಕೆ ಕಷ್ಟ. ಮುಂದಿನ ದಿನಗಳಲ್ಲಿ ಅದು ಇನ್ನೂ ಹೆಚ್ಚಾಗಬಹುದು.

100%

-ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com