ಜಾಗತಿಕ ನವೋದ್ದಿಮೆಗಳಲ್ಲಿ ಬಹುಪಾಲು 1 ವರ್ಷದೊಳಗೇ ಮುಚ್ಚುವುದು ಏಕೆ? (ಹಣಕ್ಲಾಸು)

ನಮ್ಮಲ್ಲಿ ಒಂದು ಮನಸ್ಥಿತಿಯನ್ನು ಬಿತ್ತಿ ಬಿಟ್ಟಿದ್ದಾರೆ. ಸೋಲು ಎನ್ನುವುದು ಕೆಟ್ಟದ್ದು, ಬುದ್ದಿ ಇಲ್ಲದವರು, ಸರಿಯಾಗಿ ಕೈ ಹಿಡಿದ ಕೆಲಸವನ್ನು ಮಾಡದವರು, ದಡ್ಡರು ಮಾತ್ರ ಸೋಲುತ್ತಾರೆ ಎನ್ನುವುದು ಆ ಭಾವನೆ. (ಹಣಕ್ಲಾಸು-456)
File pic
ಸಾಂಕೇತಿಕ ಚಿತ್ರonline desk
Updated on

ನನ್ನಪ್ಪ ಸದಾ ಒಂದು ಮಾತು ಹೇಳುತ್ತಿದ್ದರು. ಗೆಲುವೆಲ್ಲ ಗೆಲುವಲ್ಲ, ಸೋಲೆಲ್ಲ ಸೋಲು ಅಲ್ಲ ಎನ್ನುವುದು ಆ ಮಾತು. ನನ್ನಪ್ಪ ಜಗತ್ತಿನ ಕಣ್ಣಿನಲ್ಲಿ ಫೇಲ್ಯೂರ್. ಸೋತವರು. ಏಕೆಂದರೆ ಜಗತ್ತಿನ ಗೆಲುವಿನ ಡೆಫಿನಿಷನ್ ಏನಿದೆ ಆ ಪ್ಯಾರಾಮೀಟರ್ಟಿಕ್ ಮಾಡುವುದರಲ್ಲಿ ಅಪ್ಪ ಸೋತಿದ್ದರು. ಆದರೆ ಅವರೊಬ್ಬದಾರ್ಶನಿಕರಾಗಿ ಬದಲಾಗಿದ್ದರು. ಬದುಕೆಂದರೆ ಅದು ರಿಲೇ ಓಟವಿದ್ದಂತೆ! ಅಪ್ಪ ತನ್ನ ಸೋಲಿನಲ್ಲಿ ಕಲಿತ ಪಾಠವನ್ನು ತನ್ನಮಕ್ಕಳಿಗೆ ವರ್ಗಾಯಿಸಿದ ಕಾರಣ, ಆತನ ಮೂರೂ ಮಕ್ಕಳೂಕೂಡ ಇಂದು ಜಗತ್ತಿನ ಗೆಲುವಿನ ಡೆಫಿನಿಷನ್ ಟಿಕ್ ಹಾಕುವಲ್ಲಿ ಸಫಲರಾಗಿದ್ದಾರೆ.

ನಮ್ಮಲ್ಲಿ ಒಂದು ಮನಸ್ಥಿತಿಯನ್ನು ಬಿತ್ತಿ ಬಿಟ್ಟಿದ್ದಾರೆ. ಸೋಲು ಎನ್ನುವುದು ಕೆಟ್ಟದ್ದು, ಬುದ್ದಿ ಇಲ್ಲದವರು, ಸರಿಯಾಗಿ ಕೈ ಹಿಡಿದ ಕೆಲಸವನ್ನು ಮಾಡದವರು, ದಡ್ಡರು ಮಾತ್ರ ಸೋಲುತ್ತಾರೆ ಎನ್ನುವುದು ಆ ಭಾವನೆ.

ನಾವು ಕೂಡ ಹೆಚ್ಚು ಪ್ರಶ್ನೆಯನ್ನು ಮಾಡದೆ ಇದನ್ನು ಒಪ್ಪಿಕೊಂಡು ಬಿಟ್ಟಿದ್ದೇವೆ. ಜಗತ್ತಿನಲ್ಲಿ ಮೆಜಾರಿಟಿ ಜನ ವೇತನಕ್ಕೆ ಏಕೆ ಕೆಲಸ ಮಾಡುತ್ತಾರೆ ಎನ್ನುವುದು ಗೊತ್ತಾಯ್ತು ಎಂದುಕೊಳ್ಳುವೆ. ಅವರು ಈ ಭಾವನೆಯಿಂದ ಹೊರಬರಲು ಸಾಧ್ಯವಾಗಿಲ್ಲ.

ಅವರಿಗೆ ಸಮಾಜದ ಎದುರು ಸೋತ ಮುಖವನ್ನು ತೋರಿಸುವ ಧೈರ್ಯವಿಲ್ಲ. ಸಮಾಜ ಏನೆಂದುಕೊಂಡೀತು? ಕುಟುಂಬದವರ ಕಣ್ಣಲ್ಲಿ ನನ್ನ ಘನತೆ ಏನಾಗುತ್ತದೆ? ಇತ್ಯಾದಿ ಭಯಗಳ ಕಾರಣ ಅವರು ಹೊಸತನ್ನುಮಾಡಲು, ಸ್ವ-ಉದ್ಯೋಗ ಮಾಡಲು ಸಿದ್ದರಿಲ್ಲ. ಹೀಗಾಗಿ ವೇತನಕ್ಕೆ ಜೋತು ಬೀಳುತ್ತಾರೆ. ಸೋಲಿಗಿಂತ ಸೋಲಿನ ಬಗೆಗಿನ ಭಯ ಅವರನ್ನು ಮುಕ್ತವಾಗಿ ಯೋಚನೆ ಮಾಡಲು ಅಡ್ಡಿಯಾಗಿದೆ.

ನಿಮಗೆಲ್ಲಾ ಒಂದು ವಿಷಯವನ್ನು ಹೇಳಲು ಬಯಸುತ್ತೇನೆ. ಭಾರತ ಒಂದೇ ಅಲ್ಲ ಜಗತ್ತಿನಾದ್ಯಂತ ನೂರು ನವೋದ್ದಿಮೆಗಳಲ್ಲಿ 90 ಪ್ರತಿಶತ ಒಂದು ವರ್ಷ ಪೂರೈಸುವುದರಲ್ಲಿ ಮುಚ್ಚಿ ಹೋಗುತ್ತವೆ. ಅಂದರೆ ಯಶಸ್ಸಿನ ಪರ್ಸಂಟೇಜ್ ಕೇವಲ 10! ಹೀಗೆ ಉಳಿದ ನವೋದ್ದಿಮೆಗಳಲ್ಲಿ 20 ಪ್ರತಿಶತ ಎರಡು ವರ್ಷದಲ್ಲಿ ಮುಳುಗಿ ಹೋಗುತ್ತವೆ. ಹೀಗೆ ಎರಡು ವರ್ಷದ ನಂತರವೂ ಉಳಿದ ಕೊಡ ನವೋದ್ದಿಮೆಗಳಲ್ಲಿ 45 ಪ್ರತಿಶತ 5 ವರ್ಷದಲ್ಲಿ ಮುಚ್ಚಿ ಹೋಗುತ್ತವೆ ಎನ್ನುತ್ತದೆ ಅಂಕಿ-ಅಂಶ.

ಅಯ್ಯೋ ಇದೇನಿದು ಅಂತ ಭಯ ಪಡಬಾರದು. ಸೋಲಿನ ಭಯವೇ ಹೊಸತನಕ್ಕೆ ತೆರೆದುಕೊಳ್ಳದಿರಲು ಕಾರಣ ಎಂದೆಲ್ಲಾ ಹೇಳಿ, ಈಗ ಇಷ್ಟೊಂದು ಭಯಪಡಿಸುವ ಅಂಕಿ-ಅಂಶವನ್ನು ಮುಂದಿಟ್ಟರೆ ಭಯ ಪಡದಿರುವುದು ಹೇಗೆ? ಎನ್ನುವ ಪ್ರಶ್ನೆ ನಿಮ್ಮಲ್ಲಿ ಬಂದಿರುತ್ತದೆ. ಅದಕ್ಕೆ ಉತ್ತರಸರಳವಿದೆ.

ಒಂದು ವರ್ಷದೊಳಗೆ ಮುಳುಗಿ ಹೋಗಿರುವ ಉದ್ದಿಮೆಗಳು ಯಾವುವು ಎನ್ನುವುದನ್ನು ಗಮನಿಸಿ ನೋಡಿ. ಉಳಿದ 10 ಪ್ರತಿಶತ ಉದ್ದಿಮೆಗಳು ಯಾವುದು ಎನ್ನುವುದನ್ನು ತಿಳಿದುಕೊಂಡಾಗ ಸತ್ಯ ಹೊರಬರುತ್ತದೆ. ಮೂಲಭೂತ ಉದ್ದಿಮೆಗಳು ಸೋತಿಲ್ಲ. ಹೊಸದಾಗಿ ಸೃಷ್ಟಿಯಾದ ಬಿಸಿನೆಸ್ ಮಾಡೆಲ್ ಗಳು ವೇಗವಾಗಿ ಅಭಿವೃದ್ಧಿ ಹೊಂದಿದ್ದು ನಿಜವಾದರೂ ಅಷ್ಟೇ ವೇಗದಲ್ಲಿ ಅವಸಾನವನ್ನು ಕೂಡ ಕಂಡಿವೆ.

ಇನ್ನೊಂದು ಮುಖ್ಯ ಅಂಶವನ್ನು ಕೂಡ ಗಮನಿಸಬೇಕು. ಹೀಗೆ ಸೋತ ಉದ್ದಿಮೆಗಳಲ್ಲಿ 42 ಪ್ರತಿಶತ ಸೋಲುಂಟಾಗುವುದು ಮಾರುಕಟ್ಟೆಗೆ ಬೇಕಾಗಿರುವ ಪದಾರ್ಥವನ್ನು ನೀಡದೆ ಇರುವುದು ಎನ್ನುವುದು ತಿಳಿದು ಬಂದಿದೆ. ಸರಳವಾಗಿ ಹೇಳಬೇಕೆಂದರೆ ಒಂದು ಬಡಾವಣೆಯಲ್ಲಿ ಹೋಟೆಲ್ ತೆರೆದಿರುತ್ತೇವೆ ಅಲ್ಲಿ ಜೈನ ಧರ್ಮಿಯರು ಹೆಚ್ಚು ಸಂಖ್ಯೆಯಲ್ಲಿಇದ್ದಾರೆ ಎಂದುಕೊಳ್ಳಿ, ಅಂತಹ ಜಾಗದಲ್ಲಿ ವೆಜ್ ಮತ್ತು ನಾನ್ವೆಜ್ ಎರಡೂ ಆಹಾರ ನೀಡುವ ಹೋಟೆಲ್ ತೆರೆದರೆ ಅದು ಮುಚ್ಚಿ ಹೋಗುವುದು ಗ್ಯಾರಂಟಿ. ಆಗೊಮ್ಮೆ ನಾನ್ ವೆಜ್ ನೀಡದೇ ಇದ್ದರೂ ಆಹಾರಾದಲ್ಲಿ ಬೆಳ್ಳುಳ್ಳಿ ಬಳಸಿದರೂ ಸಹ ಬಿಸಿನೆಸ್ ಮುಚ್ಚಿ ಹೋಗುತ್ತದೆ. ಅರ್ಥ ಇಷ್ಟೇ ಮಾರುಕಟ್ಟೆಗೆ ಏನು ಬೇಕು ಅದನ್ನು ಕೊಡಬೇಕು. ಯಾವಾಗ ಮಾರುಕಟ್ಟೆಗೆ ಏನು ಬೇಕು ಎನ್ನುವುದರ ತಿಳುವಳಿಕೆ ಇಲ್ಲದೆ ಹೋಗುತ್ತದೆ, ಆಗೆಲ್ಲಾ ಬಿಸಿನೆಸ್ ಕುಸಿತ ಕಾಣುತ್ತದೆ.

File pic
ಗ್ಲೋಬಲೈಸಷನ್ ಎನ್ನುವ ಆಟಕ್ಕೆ ಟ್ರಂಪ್ ತೆರೆ ಎಳೆಯಲಿದ್ದಾರೆಯೇ? (ಹಣಕ್ಲಾಸು)

ಹಾಗೆ 29 ಪ್ರತಿಶತ ಉದ್ದಿಮೆಗಳು ಸರಿಯಾಗಿ ಬಜೆಟ್ ಮಾಡದ ಕಾರಣ, ಹಣದ ಕೊರತೆಯಿಂದ ಮುಳುಗಿ ಹೋಗಿವೆ ಎನ್ನುತ್ತದೆ ಅಂಕಿ-ಅಂಶ. ಅಂದರೆ ಅವುಗಳು ಉಳಿಯ ಬಹುದಾದ ಸಾಧ್ಯತೆಯಿತ್ತು. ಆದರೆ ಇನ್ನಷ್ಟು ಸಮಯ ಅದನ್ನು ನಡೆಸಲುಬೇಕಾಗುವ ಹಣದ ಕೊರತೆಯ ಕಾರಣ ಅವು ಮುಳುಗಿಹೋಗಿವೆ. ಉಳಿದಂತೆ ಸರಿ ಸುಮಾರು 17 ಪ್ರತಿಶತ ವ್ಯಾಪಾರಗಳು ಸರಿಯಾದ ಬಿಸಿನೆಸ್ ಮಾಡೆಲ್ ಇಲ್ಲದೆ ಮುಚಲ್ಪಡುತ್ತವೆ. ಬಿಸಿನೆಸ್ ಶುರು ಮಾಡಿದಾಗ ನಾವು ಇದನ್ನುಈ ರೀತಿ ನಡೆಸಬೇಕು ಎನ್ನುವ ಒಂದು ರೂಪುರೇಷೆ ಹಾಕಿಕೊಂಡಿರುತ್ತೇವೆ. ಆದರೆ ಆ ರೂಪುರೇಷೆ ಸರಿಯಿಲ್ಲದಿದ್ದಾಗಕೂಡ ವ್ಯಾಪಾರಗಳು ಮುಳುಗಿ ಹೋಗುತ್ತವೆ.

ಹೀಗೆ ಇನ್ನಷ್ಟು ಕಾರಣಗಳಿಂದ ವ್ಯಾಪಾರ ಕುಸಿತ ಕಾಣುತ್ತದೆ. ಇವುಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಸರಿಯಾದ ಸಿದ್ಧತೆಮತ್ತು ಬದ್ಧತೆಯಿಂದ ಶುರು ಮಾಡಿದ ವ್ಯಾಪಾರಗಳು ಇಂದು ಗೆದ್ದಿವೆ. ನಾವು ಸೋಲಿನ ಪ್ರತಿಶತಗಳ ಅಂಕಿ-ಅಂಶವನ್ನು ನೋಡಿಭಯ ಪಡಬಾರದು. ಮಾರುಕಟ್ಟೆಗೆ ಬೇಕಾದ ಪದಾರ್ಥವನ್ನು ನೀಡಿದರೆ, ವ್ಯಾಪಾರ ಗೆದ್ದೇ ಗೆಲ್ಲುತ್ತದೆ. ಅಲ್ಲದೆ ಇನ್ನೊಂದು ಅಂಶವನ್ನು ಕೂಡ ಗಮನಿಸಿ. ಎಲ್ಲೋ ಬೆರಳೆಣಿಕೆಯಷ್ಟು ಜನ, ವ್ಯಾಪಾರ ಮೊದಲ ಪ್ರಯತ್ನದಲ್ಲಿ ಗೆದ್ದಿದ್ದಾರೆ, ಗೆದ್ದಿವೆ. ಹೀಗೆಸೋತು ಅದರ ಅನುಭವದಿಂದ ಮತ್ತೆ ವ್ಯಾಪಾರ ಮಾಡಿಗೆದ್ದವರ ದೊಡ್ಡ ಪಟ್ಟಿಯಿದೆ. ಸೋತೆನೆಂದು ಕುಳಿತ್ತಿದ್ದರೆ ಅವರು ಯಶಸ್ಸು ಕಾಣುತ್ತಿರಲಿಲ್ಲ. ಇಂತಹ ಮಹಾನುಭಾವರ ಸಂಖ್ಯೆಬಹಳ ದೊಡ್ಡದ್ದು.

ಉಳಿದಂತೆ ಸೋಲು ನಾವು ಅಂದುಕೊಂಡಷ್ಟು ಕೆಟ್ಟದ್ದಲ್ಲ ಎನ್ನವುದಕ್ಕೆ ಒಂದಷ್ಟು ಕಾರಣಗಳನ್ನು ನೋಡೋಣ:

  • ಸೋಲು ನಮ್ಮನ್ನು ಇನ್ನಷ್ಟು ಶಕ್ತಿಶಾಲಿಯನ್ನಾಗಿ ಮಾಡುತ್ತದೆ: ಪ್ರಸಿದ್ದ ಲೇಖಕ ರಾಯ್ ಟಿ ಬೆನ್ನೆಟ್ “The one who falls and gets up is stronger than the one who never tried. Do not fear failure but rather fear not trying.” ಎನ್ನುತ್ತಾರೆ. ಸೋತವನು ಮತ್ತೆ ಬಲಿಷ್ಠವಾಗಿ ಎದ್ದು ನಿಲ್ಲುತ್ತಾನೆ. ಯಾರುಪ್ರಯತ್ನ ಪಡದೆ ಇರುತ್ತಾರೆ ಅವರಿಗಿಂತ ಸೋತವನು ಖಂಡಿತ ಹೆಚ್ಚು ಬಲಶಾಲಿ. ಸೋಲಿಗೆ ಹೆದರುವುದಕ್ಕಿಂತ ಪ್ರಯತ್ನ ಪಡೆದೆಇರುವುದಕ್ಕೆ ಹೆದರಬೇಕು ಎನ್ನುವುದು ಅವರ ಮಾತು. “what doesn’t kill you makes you stronger.” ಎನ್ನುವ ಮಾತುಕೂಡ ಪ್ರಬಲಶಾಲಿಯಾಗಿದೆ. ಸೋಲು ಎನ್ನುವುದು ಕೊನೆಯ ಅಂಶ. ಹೀಗಾಗಿ ಅದಕ್ಕಿಂತ ಹೆಚ್ಚು ನೋವುಂಟು ಮಾಡುವುದುಇನ್ನೇನಿರಲು ಸಾಧ್ಯ? ಯಾವಾಗ ನಾವು ಅಲ್ಟಿಮೇಟ್ ನೋವಿಗೆ ಸಿದ್ಧರಾಗುತ್ತೇವೆ ಅಥವಾ ಅಂತಹ ನೋವನ್ನು ಅನುಭವಿಸುತ್ತೇವೆ, ಆಗ ಮನಸ್ಸು ಹೆಚ್ಚು ಬಲಿಷ್ಠವಾಗುತ್ತದೆ. ಸೋಲು ಕೂಡ ಪರಿಚಿತವಾಗುತ್ತದೆ. ಅಪರಿಚಿತ ಗೆಲುವುಗಿಂತ ಪರಿಚಿತ ಸೋಲು ಆಪ್ತವಾಗುತ್ತದೆ. ಸೋಲನ್ನು ಸಂಭ್ರಮಿಸುವ ಮನಸ್ಥಿತಿ ಬೆಳೆದು ಬಿಟ್ಟರೆ, ಅದು ಕೂಡ ಬದುಕಿನ ದಾರಿಯಲ್ಲಿ ಸಿಕ್ಕ ಒಂದಂಶ ಎನ್ನುವುದು ಅರ್ಥವಾಗುತ್ತದೆ.

  • ಹೊಸ ಆಯಾಮವನ್ನು ಕಲಿಸುತ್ತದೆ. ಹೊಸಕಲಿಕೆಯಾಗುತ್ತದೆ: ಸೋಲು ಎಂದರೆ ನಾವು ಈ ರೀತಿ ಮಾಡಿದರೆ ಗೆಲುವು ಸಿಗುತ್ತದ್ದೆ ಎಂದುಕೊಂಡು ಕೆಲವೊಂದು ಕ್ರಮದಲ್ಲಿ, ದಾರಿಯಲ್ಲಿ ಸವೆಸಿದಾಗ ಅದು ಸಿಗದೆ ಹೋದ ಪರಿಸ್ಥಿತಿ ಅಷ್ಟೇ! ಅಂದರೆ ಗಮನಿಸಿ ಇದರಿಂದ ನಮಗೆ ನಾವು ಉಪಯೋಗಿಸಿದ ಮೆಥಡ್, ನಮ್ಮ ಐಡಿಯ, ನಾವು ಕೆಲಸಮಾಡಿದ ರೀತಿ, ಕ್ರಮಿಸಿದ ದಾರಿ ಸರಿಯಿಲ್ಲ ಎನ್ನುವುದನ್ನು ತಿಳಿಸುತ್ತದೆ. ಅದೇ ಸಮಯದಲ್ಲಿ ಇದು ಸರಿಯಿಲ್ಲ ಎಂದಾಗ ಯಾವುದು ಸರಿ ಎನ್ನುವ ಚಿಂತನೆಗೆ ನಮ್ಮನ್ನು ಹಚ್ಚುತ್ತದೆ. ಹೀಗೆ ಮಾಡಿದ್ದರೆ ಸರಿಯಿರುತ್ತಿತ್ತು ಎನ್ನುವ ಹೊಸ ಆಯಾಮ ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ಒಂದು ಸೋಲು ಸಾವಿರ ಪಾಠ ಕಲಿಸುತ್ತದೆ. ಒಂದು ಆಯಾಮವನ್ನು ನಾವು ಒಪ್ಪಿಕೊಳ್ಳುವ ಹಂತವನ್ನು ಮೀರಿರುತ್ತೇವೆ. ಹೀಗಾಗಿ ಹತ್ತಾರು ಆಯಾಮಗಳನ್ನು ನಾವು ಚಿಂತಿಸಿ ನೋಡುತ್ತೇವೆ. ಅವುಗಳ ಫಲಿತಾಂಶದ ಬಗ್ಗೆಯೂ ಒಂದಷ್ಟು ಗ್ರಹಿಕೆ ನಮಗೆ ಸಿಗುತ್ತದೆ. ನಿಜ ಹೇಳಬೇಕೆಂದರೆ ಮೊದಲನೇ ಪ್ರಯತ್ನದಲ್ಲಿ ಗೆದ್ದವರಿಗಿಂತ, ಒಂದೆರೆಡು ಸೋಲಿನ ನಂತರ ಗೆದ್ದವರ ಬದುಕು ಇನ್ನಷ್ಟು ಗಟ್ಟಿಯಾಗಿರುತ್ತದೆ. ಹೇಳಲು ನೂರು ಕಥೆ, ಸಾವಿರ ಅನುಭವವಿರುತ್ತದೆ.

  • ಕ್ರಿಯಾಶೀಲತೆ ಹೆಚ್ಚಿಸುತ್ತದೆ: ಸೋಲು ಎನ್ನುವುದು ಗೆಲುವಿಗೆ ಒಂದೇ ದಾರಿಯಲ್ಲ ಎನ್ನುವುದನ್ನು ಹೇಳಿಕೊಡುತ್ತದೆ. ಆಗ ಅದು ಹತ್ತಾರು ದಾರಿಗಳನ್ನು ಕಲ್ಪಿಸಿಕೊಳ್ಳಲು ಪ್ರರೇಪಣೆನೀಡುತ್ತದೆ. ಇದು ನಮ್ಮ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ. ನೆನಪಿರಲಿ ಈ ಸಮಾಜದಲ್ಲಿ ಯಾವುದನ್ನು ಯಾರು ಮೊದಲಿಗೆ ಮಾಡುತ್ತಾರೆ ಅದು ಅವರಿಗೆ ದೊಡ್ಡ ಮಟ್ಟದ ಹೆಸರನ್ನು ತಂದುಕೊಡುತ್ತದೆ. ನಿಮಗೆಲ್ಲಾ ಶಾರ್ಕ್ ಟ್ಯಾಂಕ್ ಎನ್ನುವ ಕಾರ್ಯಕ್ರಮದ ಬಗ್ಗೆ ಗೊತ್ತಿದೆ. ಅದರಲ್ಲಿ ಒಬ್ಬ ಶಾರ್ಕ್ ಹೆಸರು ಬಾರ್ಬರಾ. ಈಕೆ ಅಮೆರಿಕಾದ ರಿಯಲ್ ಎಸ್ಟೇಟ್ ಟೈಕೂನ್. 1980ರಲ್ಲಿ ಈಕೆ ಮಾರಾಟಕ್ಕಿರುವ ಮನೆಗಳನ್ನು ವಿಡಿಯೋಮಾಡಿ ಅದನ್ನು ಅಪ್ಲೋಡ್ ಮಾಡುತ್ತಿದ್ದರು. ಜನರು ಮನೆಯಿರುವ ಜಾಗಕ್ಕೆ ಬಂದು ನೋಡುವುದರ ಬದಲು ಅವರಮನೆಯಲ್ಲಿ ಕುಳಿತು ಇದನ್ನು ನೋಡಬಹುದು ಎನ್ನುವುದು ಆಕೆಯ ಉದ್ದೇಶವಾಗಿತ್ತು. ಜನರಿಗೆ ಈಕೆಯ ಐಡಿಯಾ ಇಷ್ಟವಾಗುವುದಿಲ್ಲ. ಕೊನೆಗೆ 9 ವರ್ಷಗಳ ನಂತರ ಮಾರಾಟಕ್ಕಿರುವ ಎಲ್ಲಾ ಪ್ರಾಪರ್ಟಿಗಳನ್ನು ಒಂದು ವೆಬ್ಪೇಜಿನಲ್ಲಿ ಲಿಸ್ಟಿಂಗ್ ಮಾಡುವುದು ಮತ್ತು ಆಯಾ ಪ್ರೊಪರ್ಟಿಗೆ ಸಂಬಂಧಿಸಿದ ಒಂದಷ್ಟು ಫೋಟೋಗಳನ್ನು ಅಪ್ಲೋಡ್ ಮಾಡುವುದು ಮಾಡುತ್ತಾರೆ. ಇದು ಬಹಳ ಯಶಸ್ಸು ಕಾಣುತ್ತದೆ. ಇಂದಿಗೆ ಜಗತ್ತಿನ ಎಲ್ಲಾ ದೇಶಗಳಲ್ಲೂ ಈ ಮಾದರಿಯನ್ನು ಕಾಪಿಮಾಡಿ ಸಾವಿರಾರು ಜನ ಯಶಸ್ಸು ಕಂಡಿದ್ದಾರೆ. ಬಾರ್ಬರಾ ಅಮೇರಿಕಾದಲ್ಲಿ ಮನೆ ಮಾತಾಗಿದ್ದಾರೆ. ಆಕೆಯ ವಿಡಿಯೋ ಐಡಿಯಾ ಸೋತಾಗ , ಅಯ್ಯೋ ರಿಯಲ್ ಎಸ್ಟೇಟ್ ಉದ್ದಿಮೆ ನನಗಲ್ಲ ಎಂದಿದ್ದರೆ ಇಂದಿನ ದಿನವನ್ನು ಕಾಣಲಾಗುತ್ತಿರಲಿಲ್ಲ. ಆಕೆ ಬರೋಬ್ಬರಿ 9 ವರ್ಷ ಅದರಲ್ಲೇ ಕಳೆಯುತ್ತಾರೆ. ಏನು ಮಾಡಿದರೆ ಒಳ್ಳೆಯದು, ಬೇರೆ ಯಾವ ದಾರಿಯಿದೆ ಎಂದು ಚಿಂತಿಸುತ್ತಾರೆ. ಹೆಚ್ಚಿನ ಬದಲಾವಣೆ ಮಾಡದೆ ಅದೇ ವಲಯದಲ್ಲಿ ಗೆಲುವು ಕಾಣುತ್ತಾರೆ. ಪ್ರಯಾಣದ ಹಾದಿಯಲ್ಲಿ ನಾವು ಹಡಗು ಬದಲಿಸುವುದು ಬೇಕಿಲ್ಲ. ಹಡಗು ಹೋಗುವ ದಾರಿಯಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿಕೊಂಡರೂ ಸಾಕು, ನಾವು ತಲುಪುವ ಗಮ್ಯ ಬದಲಾಗುತ್ತದೆ ಎನ್ನವುದಕ್ಕೆ ಬಾರ್ಬರಾ ಸಾಕ್ಷಿಯಾಗಿದ್ದಾರೆ. ಒಂದು ಸೋಲು ಸಾವಿರ ಹೊಸ ದಾರಿ ಸೃಷ್ಟಿಸುತ್ತದೆ.

  • ಹೊಸ ಆವಿಷ್ಕಾರಕ್ಕೆ ಕಾರಣವಾಗುತ್ತದೆ: ಹೊಸ ಆವಿಷ್ಕಾರ ಎಂದ ತಕ್ಷಣ, ಹೊಸ ಪದಾರ್ಥ ಅಥವಾ ಉತ್ಪನ್ನದ ಆವಿಷ್ಕಾರ ಎಂದು ಕೊಳ್ಳುವುದು ಬೇಡ. ನಮ್ಮನ್ನು ನಾವು ಕಂಡುಕೊಳ್ಳುವುದು, ನಮ್ಮಲಿರುವ ಮೇಧಾವಿಯನ್ನು ಹುಡುಕಿಕೊಳ್ಳುವುದು ಕೂಡ ಯಾವ ಅವಿಷ್ಕಾರಕ್ಕೂ ಕಡಿಮೆಯಿಲ್ಲ. ಓಪ್ರಾ ವಿನ್ಫ್ರೆ ಎನ್ನುವ ಮಹಿಳೆಯ ಬಗ್ಗೆ ನಾನೆಂದಿಗೂ ಸೋಲುವುದಿಲ್ಲ, ಸೋತರದು ನಾನಲ್ಲ ಎಂಬ ನನ್ನ ಪುಸ್ತಕದಲ್ಲಿ ಬರೆದ್ದಿದ್ದೇನೆ. ಆಕೆ “I don’t believe in failure. Failure is just information and an opportunity to change your course.” ಎನ್ನುತ್ತಾರೆ. ಫೇಲ್ಯೂರ್ ಎನ್ನವುದು ಅಳುತ್ತಾ ಕೂರುವುದಕ್ಕೆ ಆದದ್ದಲ್ಲ. ಅದು ಬದಲಾವಣೆ ಮಾಡಿಕೊಳ್ಳಲು, ನಾವು ನಡೆಯುವ ಹಾದಿ ಬದಲಿಸಿಕೊಳ್ಳಲು ನಮಗೊಂದಿಷ್ಟು ಮಾಹಿತಿಯನ್ನು ಮತ್ತು ಅವಕಾಶವನ್ನು ನೀಡಿದ ಒಂದು ಕ್ರಿಯೆ ಅಷ್ಟೇ ಎನ್ನುತ್ತಾರೆ. ಅಮೆರಿಕಾದಂತಹ ದೇಶದಲ್ಲಿ ಕಪ್ಪು ವರ್ಣಿಯಾಳಾಗಿ, ಹೆಣ್ಣಾಗಿ ಒಂದಲ್ಲ ಹಲವಾರು ಮನಸ್ಸು ಮುರಿದು ಹೋಗುವ ಸನ್ನಿವೇಶವನ್ನು ಎದುರಿಸಿ ಆಕೆ ಏರಿದಮಟ್ಟ ಎಂಥವರಿಗೂ ಮಾದರಿ. ಇದೆ ಪುಸ್ತಕದಲ್ಲಿ ಇರುವ ನಮ್ಮಲಿರುವ ಮೇಧಾವಿಯನ್ನು ಹುಡುಕಿಕೊಳ್ಳಬೇಕು ಎನ್ನುವ ಅಧ್ಯಾಯವನ್ನು ಮತ್ತೊಮ್ಮೆ ಮನನ ಮಾಡಿಕೊಳ್ಳುವುದು ಒಳ್ಳೆಯದು.

  • ಮನುಷ್ಯತ್ವವನ್ನು ಹೆಚ್ಚಸುತ್ತದೆ: ಸೋತು ಗೆದ್ದವರನ್ನು ಒಮ್ಮೆಗಮನಿಸಿ ನೋಡಿ ಅವರಲ್ಲಿ, ಮನುಷ್ಯತ್ವ, ಭೂತದಯೆ ಹೆಚ್ಚಾಗಿರುತ್ತದೆ. ಸೋತವರ ಬಗ್ಗೆ ಅನುಕಂಪ, ಅವರ ಮನಸ್ಥಿತಿ ಹೇಗಿರಬಹುದು ಎನ್ನುವ ಕಲ್ಪನೆ ಮಾಡಿಕೊಳ್ಳಲು ಅವರಿಗೆ ಹೆಚ್ಚು ಸಾಧ್ಯವಾಗುತ್ತದೆ. ಸೋಲನ್ನು ಕಾಣದೆ ಇರುವವರಲ್ಲಿ ನಾವು ಸಿಂಪಥಿ, ಎಂಪಥಿ ಯಾವುದನ್ನೂ ಬಯಸಲು ಸಾಧ್ಯವಿಲ್ಲ. ಒಮ್ಮೆಲೇ ಗೆದ್ದವರಲ್ಲಿ ಸೋಮಾರಿತನ ಬರುವ ಧ್ಯತೆ ಕೂಡ ಹೆಚ್ಚಾಗಿರುತ್ತದೆ. ಸೋತು ಗೆದ್ದವರು ಆ ಗೆಲುವಿಗೆ ನೀಡಿರುವ ಬೆಲೆಯನ್ನು ಮರೆಯುವುದಿಲ್ಲ. ಹೀಗಾಗಿ ಟೇಕನ್ಫಾರ್ ಗ್ರಾಂಟೆಡ್ ಎನ್ನುವ ಮನಸ್ಥಿತಿ ಅವರಲ್ಲಿ ಇರುವುದಿಲ್ಲ. ಸಿಕ್ಕಿರುವ ಯಶಸ್ಸನ್ನು ಉಳಿಸಿಕೊಳ್ಳಲು ಸದಾ ಶ್ರಮಿಸುತ್ತಾರೆ. ಫಸ್ಟ್ ಜನರೇಶನ್ ಸಾಧಕರನ್ನು ನೀವು ಗಮನಿಸಿ ನೋಡಿ ಅವರಲ್ಲಿ ಇನ್ನೊಬ್ಬರಿಗೆ ಮರುಗುವ ಗುಣ, ತಮ್ಮ ಗೆಲುವಿಗೆ ಸದಾ ಸನ್ನದ್ಧವಾಗಿರುವ ಗುಣವನ್ನು ನೀವು ಕಾಣಬಹುದು.

File pic
ಜಾಗತಿಕ ಆರ್ಥಿಕ ಕುಸಿತಕ್ಕೆ ಕಾರಣವಾಗಲಿದೆಯೇ ಅಮೇರಿಕಾ ಷೇರು ಮಾರುಕಟ್ಟೆ ಕುಸಿತ? (ಹಣಕ್ಲಾಸು)

ಸೋಲಿಗೆ ಹೆದರದೆ, ಗೆಲುವನ್ನು ಅತಿಯಾಗಿ ಸಂಭ್ರಮಿಸದೆ ಇರುವುದು ಯಶಸ್ವಿ ವ್ಯಕ್ತಿಗಳ ಇನ್ನೊಂದು ದೊಡ್ಡ ಗುಣ. ಸೋಲು, ಗೆಲುವು ಎನ್ನುವುದು ಆಯಾ ಕ್ಷಣದ ಫಲಿತಾಂಶಗಳು ಎನ್ನುವುದು ಅವರಿಗೆ ಗೊತ್ತಿರುತ್ತದೆ. ಇಂದಿನ ಸೋಲು ನಾಳಿನ ಗೆಲುವಿನ ಮೆಟ್ಟಿಲು, ಹಾಗೆ ಮೈಮರೆತರೆ ಗೆಲುವು ಮತ್ತೆ ಸೋಲಾಗಿ ಮಾರ್ಪಾಟಾಗಲು ಕ್ಷಣ ಸಾಕು ಎನ್ನವುದರ ಅರಿವು ಅವರಿಗಿರುತ್ತದೆ. ಈ ಗುಣವನ್ನು ನಾವು ನಮ್ಮದಾಗಿಸಿಕೊಳ್ಳಬಹುದು. ಎರಡನೇ ತಲೆಮಾರಿನ ಯಶಸ್ವಿಗಳಿಗಿಂತ, ಮೊದಲ ತಲೆಮಾರಿನ ಸಿರಿವಂತರು ಮತ್ತು ಯಶಸ್ವಿ ವ್ಯಕ್ತಿಗಳಲ್ಲಿ ಈ ಗುಣವನ್ನು ನೀವು ಹೆಚ್ಚಾಗಿ ಕಾಣಬಹುದು.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com