
ಕೆಪಿಸಿಸಿಗೆ ನೂತನ ಅಧ್ಯಕ್ಷರ ನೇಮಕ, ಹೆಚ್ಚುವರಿ ಉಪ ಮುಖ್ಯಮಂತ್ರಿಗಳ ಹುದ್ದೆ ಸೃಷ್ಟಿಯೊಂದಿಗೆ ಸಚಿವ ಸಂಪುಟ ಪುನಾರಚನೆ, ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳಿಗೆ ನೂತನ ಸದಸ್ಯರ ನೇಮಕ ವಿಚಾರವೂ ಸೇರಿದಂತೆ ರಾಜ್ಯ ಕಾಂಗ್ರೆಸ್ ನಲ್ಲಿನ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಒಂದು ಸ್ಪಷ್ಟ ನಿರ್ಧಾರಕ್ಕೆ ಬರಲು ಕಾಂಗ್ರೆಸ್ ಹೈಕಮಾಂಡ್ ಗೆ ಸಾಧ್ಯವಾಗುತ್ತಿಲ್ಲ.
ಸಚಿವ ಸಂಪುಟ ಪುನಾರಚನೆಯೂ ಸೇರಿದಂತೆ ಕೆಲವೊಂದು ನಿರ್ದಿಷ್ಟಕಾರ್ಯ ಸೂಚಿಗಳನ್ನು ಮುಂದಿಟ್ಟುಕೊಂಡು ದಿಲ್ಲಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಎಐಇಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಯಾರಿಂದಲೂ ಸ್ಪಷ್ಟ ಭರವಸೆಯಾಗಲೀ ಉತ್ತರವಾಗಲೀ ಸಿಕ್ಕಿಲ್ಲ. ಅದರಲ್ಲೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ವರಿಷ್ಠರು "ಸದ್ಯಕ್ಕೆ ಬೇಡ ಕಾದು ನೋಡೋಣ" ಎಂಬ ಸಮಾಧಾನಕರ ಉತ್ತರ ನೀಡಿದ್ದು ವಿಧಾನ ಪರಿಷತ್ತಿನ ನಾಲ್ಕು ಖಾಲಿ ಸ್ಥಾನಗಳಿಗೆ ನೂತನ ಸದಸ್ಯರ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ನೀಡಿದ್ದ ಪಟ್ಟಿಯನ್ನು ತಮ್ಮಲ್ಲೇ ಇರಿಸಿಕೊಂಡಿದ್ದು ಹಿರಿಯ ಸಚಿವರು ಹಾಗೂ ಕೆಪಿಸಿಸಿ ಅಧ್ಯಕ್ಷರ ಸಹಮತ ಪಡೆದು ಒಮ್ಮತದ ನಿರ್ಧಾರಕ್ಕೆ ಬಂದು ಇನ್ನೊಂದು ಪಟ್ಟಿಯನ್ನು ಸಿದ್ಧ ಮಾಡಿ ಕಳಿಸುವಂತೆ ಸೂಚನೆ ನೀಡಿದ್ದಾರೆ.
ಅಲ್ಲಿಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಯ ಮೂಲಕ ಪಕ್ಷದ ಮೇಲೆ ತಮ್ಮದೇ ಹಿಡಿತ ಸಾಧಿಸುವ ಮೂಲಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಮೂಲೆಗೊತ್ತುವ ಸಿದ್ದರಾಮಯ್ಯ ತಂತ್ರ ಫಲ ನೀಡಿಲ್ಲ. ಬರುವ ಮೇ ತಿಂಗಳಿಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳು ಪೂರ್ಣಗೊಳ್ಳಲಿದೆ. ಇದರ ಜತೆಗೇ ಜಿಲ್ಲಾ, ತಾಲ್ಲೂಕು ಪಂಚಾಯ್ತಿಗಳಿಗೆ ಚುನಾವಣೆ ನಡೆಸಲು ಸರ್ಕಾರ ತಯಾರಿ ನಡೆಸಿದೆ. ಈ ವಿಷಯ ಮನಗಂಡಿರುವ ದಿಲ್ಲಿ ಕಾಂಗ್ರೆಸ್ ವರಿಷ್ಠರು ಸದ್ಯಕ್ಕೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯೂ ಬೇಡ, ಸಚಿವ ಸಂಪುಟ ಪನಾರಚನೆಯೂ ಬೇಡ ಮುಂದೆ ನೋಡೋಣ ಎಂದು ಉತ್ತರ ನೀಡಿ ಕಳಿಸಿದ್ದಾರೆ.
ತಮ್ಮ ಕಾರ್ಯ ಸೂಚಿಗಳ ಪೈಕಿ ಯಾವುದಕ್ಕೂ ಹೈಕಮಾಂಡ್ ಸ್ಪಷ್ಟ ಉತ್ತರ ನೀಡದೇ ಸಮ್ಮತಿಯನ್ನೂ ನೀಡದೇ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ನಿಲುವು ತಳೆದಿರುವುದರ ಬಗ್ಗೆ ಸಿದ್ದರಾಮಯ್ಯ ಅಸಹನೆಗೊಂಡಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ವರಿಷ್ಠರನ್ನು ಕಡೆಗಣಿಸಿ ಯಾವುದೇ ನಿರ್ಧಾರ ಕೈಗೊಳ್ಳುವ ಸ್ಥಿತಿಯಲ್ಲಿ ಅವರೂ ಇಲ್ಲ.
ಈ ಬೆಳವಣಿಗೆಗಳು ಒಂದು ಕಡೆಯಾದರೆ ಇತ್ತೀಚೆಗೆ ದಿಲ್ಲಿಗೆ ಭೇಟಿ ನೀಡಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕ ರಾಹುಲ್ ಗಾಂಧಿ, ಅಧಿನಾಯಕಿ ಸೋನಿಯಾಗಾಂಧಿಯವರನ್ನು ಭೇಟಿ ಮಾಡಿ ಈ ಹಿಂದೆ ಸರ್ಕಾರ ಅಸ್ತಿತ್ವಕ್ಕೆ ಬರುವ ಸಂದರ್ಭದಲ್ಲಿ ಆದ ಆಂತರಿಕ ಒಪ್ಪಂದದಂತೆ ಮುಖ್ಯಮಂತ್ರಿ ಸ್ಥಾನದ ಅಧಿಕಾರ ಹಸ್ತಾಂತರ ಆಗಬೇಕು ಅದಾಗುವ ತನಕ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಕೈಬಿಡಬೇಕು. ಯಾವುದೇ ಕಾರಣಕ್ಕೂ ತಾನು ಕೆಪಿಸಿಸಿ ಅಧ್ಯಕ್ಷರ ಹುದ್ದೆಯನ್ನು ತ್ಯಜಿಸುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿ ಬಂದಿದ್ದಾರೆ.
ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ನಡೆಯುತ್ತಿರುವ ಆಂತರಿಕ ಸಮರ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಎಂಥದೇ ಸಂದರ್ಭ ಎದುರಾದರೂ ಮುಖ್ಯಮಂತ್ರಿ ಸ್ಥಾನ ತ್ಯಜಿಸುವ ಮಾತೇ ಇಲ್ಲ ಎಂಬ ತೀರ್ಮಾನಕ್ಕೆ ಬಂದಿರುವ ಸಿದ್ದರಾಮಯ್ಯ ಅದಕ್ಕಾಗಿ ರಣತಂತ್ರಗಳನ್ನು ಹೆಣೆಯುತ್ತಿದ್ದಾರೆ. ಇದರ ಒಂದು ಭಾಗವೇ ಸಚಿವ ಕೆ.ಎನ್.ರಾಜಣ್ಣ ಪ್ರಸ್ತಾಪಿಸಿರುವ ಹನಿ ಟ್ರ್ಯಾಪ್ ಪ್ರಕರಣ. ವಿಧಾನಸಭೆಯ ಅಧಿವೇಶನದಲ್ಲಿ ಪ್ರಸ್ತಾಪಕ್ಕೆ ಮೊದಲು ಮುಖ್ಯಮಂತ್ರಿಗಳಿಗೆ ಎಲ್ಲ ವಿಚಾರವೂ ಗೊತ್ತಿತ್ತು ಎಂದು ಹೇಳಲಾಗುತ್ತಿದೆ.
ಅವರ ಗಮನಕ್ಕೆ ಬರದೇ ಏಕಾಏಕಿ ಈ ವಿಚಾರ ಸದನದಲ್ಲಿ ಪ್ರಸ್ತಾಪ ಆಗಲು ಸಾಧ್ಯವಿಲ್ಲ ಎಂಬುದು ಕಾಂಗ್ರೆಸ್ ನ ಉನ್ನತ ಮೂಲಗಳು ನೀಡುವ ವಿವರಣೆ. ಈ ಪ್ರಕರಣವನ್ನು ನೆಪವಾಗಿಟ್ಟುಕೊಂಡು ಡಿ.ಕೆ.ಶಿವಕುಮಾರ್ ಅವರನ್ನು ಇಕ್ಕಟ್ಟಿಗೆ ಸಿಕ್ಕಿಸಲು ಸಿದ್ದರಾಮಯ್ಯ ಬಣ ಆಲೋಚಿಸಿತ್ತಾದರೂ ಆ ತಂತ್ರ ಈಗ ವಿಫಲವಾಗಿದೆ. ಈ ಪ್ರಕರಣದಲ್ಲಿ ಯಾವುದೇ ಸಾಕ್ಷ್ಯಾಧಾರಗಳನ್ನು ಪೊಲೀಸರಿಗೆ ನೀಡಲು ಇದುವರೆವಿಗೆ ಸಾಧ್ಯವಾಗಿಲ್ಲ. ಹೀಗಾಗಿ ಇಡೀ ಪ್ರಕರಣದ ತನಿಖೆಯಿಂದ ಯಾವುದೇ ನಿಖರ ಫಲಿತಾಂಶ ಸಿಗುವ ಸಾಧ್ಯತೆಗಳು ಇಲ್ಲ ಎನ್ನಲಾಗುತ್ತಿದೆ. ಇನ್ನು ರಾಜಣ್ಣ ಅವರ ಪುತ್ರ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಅವರ ಕೊಲೆಗೆ ಸಂಚು ರೂಪಿಸಿ ಸುಪಾರಿ ನೀಡಿದ ಪ್ರಕರಣದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರಾದರೂ ಅದಕ್ಕೂ ಕಾಂಗ್ರೆಸ್ ನ ಆಂತರಿಕ ಕಿತ್ತಾಟಕ್ಕೂ ಸಂಬಂಧ ಇಲ್ಲ ಎಂಬ ಮಾಹಿತಿಗಳುಪ್ರಾಥಮಿಕ ತನಿಖೆಯಿಂದ ಹೊರ ಬೀಳುತ್ತಿವೆ.
ರಾಜೇಂದ್ರ ವಿರುದ್ಧ ಸಂಚು ರೂಪಿಸಿ ಈಗ ಬಂಧಿತರಾಗಿರುವ ಆರೋಪಿಗಳು ಸ್ಥಳೀಯರೇ ಆಗಿರುವುದು ಒಂದು ಕುತೂಹಲದ ಸಂಗತಿಯಾದರೆ , ಪ್ರಕರಣಕ್ಕೆ ಬೇರೆಯದೇ ಆದ ರಾಜಕೀಯದಿಂದ ಹೊರತಾದ ನಿಗೂಢ ಆಯಾಮಗಳು ಇವೆ ಎಂದೂ ಹೇಳಲಾಗುತ್ತಿದೆ.
ಹೀಗಾಗಿ ಈ ಪ್ರಕರಣವನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುವ ಪ್ರಯತ್ನಗಳೂ ಫಲ ನೀಡಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ಕಾಂಗ್ರೆಸ್ ಪಕ್ಷವನ್ನು ರಾಷ್ಟ್ರ ಮಟ್ಟದಲ್ಲಿ ಸಚಿವ ರಾಜಣ್ಣ ಹೇಳಿಕೆ ಇಕ್ಕಟ್ಟಿಗೆ ಸಿಕ್ಕಿಸಿದೆ. ವಿಧಾನಸಭೆಯಲ್ಲಿ ಅವರು ನೀಡಿದ ಹೇಳಿಕೆಯ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿಡಿಮಿಡಿಗೊಂಡಿದ್ದಾರೆ. ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂದು ಒತ್ತಡ ಹೇರಿದ್ದಾರೆ. ಇದಕ್ಕೆ ಪೂರಕ ಎಂಬಂತೆ ದಿಲ್ಲಿಯಲ್ಲಿ ಕಾಂಗ್ರೆಸ್ ವರಿಷ್ಠರನ್ನು ಭೇಟಿಯಾಗಿದ್ದ ಡಿ.ಕೆ.ಶಿವಕುಮಾರ್ ಇಡೀ ಪ್ರಕರಣದಿಂದ ಪಕ್ಷ ಮತ್ತು ಸರ್ಕಾರ ಮುಜುಗರದ ಸನ್ನಿವೇಶವನ್ನು ಎದುರಿಸಬೇಕಾಗಿ ಬಂದಿರುವುದರ ಬಗ್ಗೆ ಸವಿಸ್ತಾರವಾದ ವಿವರಣೆಯನ್ನು ನೀಡಿದ್ದು ಇದು ಉದ್ದೇಶ ಪೂರ್ವಕವಾಗಿ ಪಕ್ಷದಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನಎಂದು ಹೇಳಿ ಬಂದಿದ್ದಾರೆ.
ಸಹಜವಾಗೇ ವರಿಷ್ಠರ ಅಸಮಾಧಾನದ ದೃಷ್ಟಿ ಸಿದ್ದರಾಮಯ್ಯರತ್ತ ತಿರುಗಿದೆ. ಮೊನ್ನೆ ದಿಲ್ಲಿಯಲ್ಲಿ ತಮ್ಮೊಂದಿಗೆ ಮಾತುಕತೆ ನಡೆಸಿದ ಮುಖ್ಯಮಂತ್ರಿಗಳ ಜತೆ ಈ ವಿಷಯ ಪ್ರಸ್ತಾಪಿಸಿದ ಖರ್ಗೆ ಸದನದಲ್ಲಿ ಈ ವಿಚಾರದ ಬಗ್ಗೆ ಹೇಳಿಕೆ ನೀಡಲು ರಾಜಣ್ಣ ಅವರಿಗೆ ಅವಕಾಶ ನೀಡಿದ್ದರ ಬಗ್ಗೆ ಪ್ರಸ್ತಾಪಿಸಿ ನೀವು ಅವರನ್ನು ತಡೆಯಬಹುದಿತ್ತು ಎಂದೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದೂ ಹೇಳಲಾಗುತ್ತಿದೆ. ಈ ಹಂತದಲ್ಲಿ ಸಿದ್ದರಾಮಯ್ಯ ವಿವರಣೆ ನೀಡಿದರಾದರೂ ಎಐಸಿಸಿ ಅಧ್ಯಕ್ಷರು ಸಮಧಾನಗೊಳ್ಳಲಿಲ್ಲ ಎಂಬುದು ದಿಲ್ಲಿ ಮೂಲಗಳು ನೀಡಿರುವ ಮಾಹಿತಿ.
ಈ ಬೆಳವಣಿಗೆಯ ಬೆನ್ನಲ್ಲೇ ಇತ್ತೀಚೆಗೆ ದಿಲ್ಲಿಗೆ ಭೇಟಿ ನೀಡಿದ್ದ ಸಚಿವ ಸತೀಶ ಜಾರಕಿಹೊಳಿ ಕಾಂಗ್ರೆಸ್ ವರಿಷ್ಠರನ್ನು ಭೇಟಿಯಾಗಿ ಮಾತುಕತೆ ನಡೆಸಿ ಬಂದರು ಇದರ ಜತೆಗೇ ಅವರು ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿಯರ ಮನೆಗೆ ಭೋಜನಕೂಟಕ್ಕೆ ಹೋಗಿದ್ದರು. ನಂತರ ಅವರು ಜೆಡಿಎಸ್ ನ ಪರಮೋಚ್ಚ ನಾಯಕ ಮಾಜಿ ಪ್ರಧಾನಿ ದೇವೇಗೌಡರನ್ನೂ ಭೇಟಿ ಮಾಡಿ ಬಂದರು. ಈ ಎರಡೂ ಬೆಳವಣಿಗೆಗಳು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಭಾರೀ ಸುದ್ದಿಯಾಯಿತು. ಸುದ್ದಿಯಾಯಿತು ಎಂಬುದಕ್ಕಿಂತ ಸಿದ್ದರಾಮಯ್ಯ ಬಳಗ ಅದು ವ್ಯವಸ್ಥಿತವಾಗಿ ಸುದ್ದಿಯಾಗುವಂತೆ ನೋಡಿಕೊಂಡಿತು ಎಂದರೆ ಸರಿಯಾಗಬಹುದು. ಇದೂ ಕೂಡಾ ಒಂದು ರಾಜಕೀಯ ತಂತ್ರ ಎಂದೂ ಹೇಳಲಾಗುತ್ತಿದೆ.
ಸತೀಶ್ ಜಾರಕಿಹೊಳಿ ದಿಲ್ಲಿಗೆ ಹೋಗಿ ಬಂದ ನಂತರ ದಿಲ್ಲಿ ವರಿಷ್ಟರನ್ನು ಭೇಟಿಯಾದ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಶಿವಕುಮಾರ್ ಅವರನ್ನು ಬದಲಾಯಿಸಿ ಸತೀಶಜಾರಕಿಹೊಳಿಯವರನ್ನು ನೇಮಿಸಬೇಕು ಹಾಗೂ ಹೆಚ್ಚುವರಿಯಾಗಿ ಮೂರು ಉಪಮುಖ್ಯಮಂತ್ರಿ ಹುದ್ದೆಗಳನ್ನ ಸೃಷ್ಟಿ ಮಾಡಬೇಕು ಎಂಬ ಪ್ರಸ್ತಾವನೆ ಮುಂದಿಟ್ಟಿದ್ದಾರೆ. ಜತೆಗೇ ಪಕ್ಷದಲ್ಲಿ ಸತೀಶ್ ಅವರಿಗೆ ಗಣನೀಯ ಶಾಸಕರ ಬೆಂಬಲ ಇದ್ದು ಅವರು ಒಂದು ವೇಳೆಪಕ್ಷ ತೊರೆದರೆ ಸರ್ಕಾರದ ಅಸ್ತಿತ್ವಕ್ಕೆ ಕಷ್ಟವಾಗುತ್ತದೆ ಎಂದೂ ಸೂಕ್ಷ್ಮವಾಗಿ ಪ್ರಸ್ತಾಪಿಸಿದ್ದಾರೆ. ಈ ಮಾತುಗಳ ಬಗ್ಗೆಯೂ ದಿಲ್ಲಿ ವರಿಷ್ಟರು ಗಂಭೀರವಾಗಿ ಗಮನ ಹರಿಸಿದಂತೆ ಕಾಣುತ್ತಿಲ್ಲ.
ಕಾಂಗ್ರೆಸ್ ನಲ್ಲಿ ತೀರಾ ಇತ್ತೀಚೆಗೆ ಪರಿಶಿಷ್ಟ ಸಚಿವರು, ಶಾಸಕರ ನಿರಂತರ ಸಭೆಗಳು ನಡೆಯಿತು. ಈ ಸಭೆಗಳ ನೇತೃತ್ವ ವಹಿಸಿದ್ದವರು ಗೃಹ ಸಚಿವ ಹಾಗೂ ಹಿರಿಯ ನಾಯಕ ಡಾ. ಪರಮೇಶ್ವರ್ . ಹಾಗೆ ನೋಡಿದರೆ ಅವರು ಮುಖ್ಯಮಂತ್ರಿ ಖಾಸಾ ಆಪ್ತ ಬಳಗದಲ್ಲೇನೂ ಇಲ್ಲ. ಇತ್ತೀಚೆಗೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಂತೆ ಸಿದ್ದರಾಮಯ್ಯ ಆಪ್ತರು ವರ್ತಿಸುತ್ತಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ, ಅಧಿಕಾರ ಹಸ್ತಾಂತರದ ವಿಚಾರಗಳು ಪ್ರಸ್ತಾಪವಾದಾಗಲೆಲ್ಲ ನೇರವಾಗಿ ಮತ್ತು ನಿಷ್ಠುರವಾಗಿ ಸಿದ್ದರಾಮಯ್ಯ ಪರ ಪ್ರತಿಕ್ರಿಯಿಸುತ್ತಿದ್ದ ಡಾ. ಪರಮೇಶ್ವರ್ ಇತ್ತೀಚೆಗೆ ಈ ವಿಚಾರದಲ್ಲಿ ತಣ್ಣಗಾಗಿದ್ದಾರೆ. ದಿಲ್ಲಿಯಲ್ಲಿ ಮೊನ್ನೆ ನಡೆದ ಕರ್ನಾಟಕ ಭವನ ಹೊಸ ಕಟ್ಟಡದ ಉದ್ಘಾಟನೆಗೆ ಅವರಿಗೆ ಆಹ್ವಾನವೇ ಇರಲಿಲ್ಲ.ಇಷ್ಟಕ್ಕೂ ಕಟ್ಟಡಕ್ಕೆ ಶಿಲಾನ್ಯಾಸ ಮಾಡುವುದರಿಂದ ಹಿಡಿದು ಅದರ ಕಾಮಗಾರಿ ವೇಗಗತಿಯಲ್ಲಿ ಸಾಗಲು ಪರಮೇಶ್ವರ್ ರವರ ಪರಿಶ್ರಮ ಆಸಕ್ತಿ ಇತ್ತು. ಆದರೆ ಉದ್ಘಾಟನೆ ಸಮಾರಂಭಕ್ಕೆ ಅವರಿಗೇ ಆಹ್ವಾನ ಇರಲಿಲ್ಲ.
ಇದರ ಬಗ್ಗೆ ಬಹಿರಂಗವಾಗೇ ಅವರು ತಮ್ಮ ಬೇಸರ ತೋಡಿಕೊಂಡಿದ್ದಾರೆ. ಸಮಾರಂಭಕ್ಕೆ ಆಹ್ವಾನಿಸುವ ಸೌಜನ್ಯವನ್ನು ಮುಖ್ಯಮಂತ್ರಿ ಕೂಡಾ ಪ್ರದರ್ಶಿಸದೇ ಇರುವುದು ಡಾ.ಪರಮೇಶ್ವರ್ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಈವರೆಗೆ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ ಹೇಳಿಕೆ ನೀಡುತ್ತಿದ್ದ ಅವರು ಈಗ ಅಂತರ ಕಾಯ್ದುಕೊಂಡಿದ್ದಾರೆ.
ಕಾಂಗ್ರೆಸ್ ನ ಕೆಲವು ನಾಯಕರು ಹೇಳುವ ಪ್ರಕಾರ ರಾಜ್ಯದಲ್ಲಿ ಪಕ್ಷದ ಅಸ್ತಿತ್ವ ಉಳಿಯಬೇಕೆಂದರೆ ತಾನು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುವುದು ಅನಿವಾರ್ಯ ಎಂಬ ಅಂಶವನ್ನು ಕಾಂಗ್ರೆಸ್ ವರಿಷ್ಠರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನದಲ್ಲಿರುವ ಸಿದ್ದರಾಮಯ್ಯ ತಮ್ಮ ಅಭೀಷ್ಟ ಈಡೇರಿಕೆಗೆ ಸಚಿವರಾದ ರಾಜಣ್ಣ, ಡಾ. ಪರಮೇಶ್ವರ್ ಸೇರಿದಂತೆ ಕೆಲವರನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ಅದೇ ಇಂತಹ ವಿಚಾರಗಳಲ್ಲಿ ಅವರ ಪರಮಾಪ್ತರಾದ ಹಳೆಯ ಜನತಾ ಪರಿವಾರದಿಂದ ಬಂದ ಡಾ. ಮಹದೇವಪ್ಪ, ಜಮೀರ್ ಮೊದಲಾದವರ ಮೌನದ ಹಿಂದೆ ನಿಗೂಢ ರಹಸ್ಯಗಳು ಇವೆ ಎಂದೂ ದೂರುತ್ತಾರೆ.
ಇನ್ನು ವಿಧಾನ ಪರಿಷತ್ ನಲ್ಲಿ ಖಾಲಿ ಇರುವ ನಾಲ್ಕು ಸ್ಥಾನಗಳಿಗೆ ಹೊಸಬರನ್ನು ನಾಮಕರಣ ಮಾಡುವ ವಿಚಾರದಲ್ಲೂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಸಂಘರ್ಷ ನಡೆಯುತ್ತಿದೆ. ಪಕ್ಷಕ್ಕಾಗಿ ದುಡಿದ ಕೆಲವರ ಪಟ್ಟಿಯನ್ನು ನೀಡಿರುವ ಶಿವಕುಮಾರ್ ನಾಮಕರಣ ಸಂದರ್ಭದಲ್ಲಿ ಅವರ ಹೆಸರನ್ನು ಪರಿಗಣಿಸಬೇಕು ಎಂದೂ ಆಗ್ರಹಿಸಿದ್ದಾರೆ.
ಆದರೆ ಇದನ್ನು ನೇರವಾಗಿ ನಿರಾಕರಿಸಿರುವ ಸಿದ್ದರಾಮಯ್ಯ ಅದೇನಿದ್ದರೂ ಮುಖ್ಯಮಂತ್ರಿ ಯಾಗಿ ತನ್ನ ಪರಮಾಧಿಕಾರ ಎಂದು ಪ್ರತಿಕ್ರಿಯಿಸಿದ್ದಾರೆ. ಒಂದು ಮೂಲದ ಪ್ರಕಾರ ಹಿಂದುಳಿದ ವರ್ಗಕ್ಕೆ ಸೇರಿದ ಸಣ್ಣ ಸಣ್ಣ ಜಾತಿಗಳಿಗೆ ವಿಧಾನ ಪರಿಷತ್ ಸದಸ್ಯತ್ವದ ಪ್ರಾತಿನಿಧ್ಯ ನೀಡಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ. ಆದರೆ ಶಿವಕುಮಾರ್ ಪಕ್ಷದ ಸಂಘಟನೆಗೆ ದುಡಿದವರಿಗೆ ಆಧ್ಯತೆ ನೀಡಲು ಒತ್ತಾಯಿಸಿದ್ದಾರೆ. ಇದೀಗ ಈ ವಿವಾದವೂ ಹೈಕಮಾಂಡ್ ಅಂಗಳಕ್ಕೆ ಮುಟ್ಟಿದೆ.
ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಹುದ್ದೆಯ ಅಧಿಕಾರ ಹಂಚಿಕೆ ಮುಂದಿನ ದಿನಗಳಲ್ಲಿ ದೊಡ್ಡ ವಿವಾದವಾಗಿ ಬಹಿರಂಗ ಯುದ್ಧವಾಗಿ ಮಾರ್ಪಟ್ಟರೂ ಆಶ್ಚರ್ಯ ಪಡಬೇಕಿಲ್ಲ. ಅಂತಹ ಸನ್ನಿವೇಶಕ್ಕೆ ಈಗ ನಡೆಯುತ್ತಿರುವ ವಿದ್ಯಮಾನಗಳು ಒಂದು ಪೂರ್ವ ತಾಲೀಮು ಅಷ್ಟೆ.
Advertisement