
ನಿರ್ಣಾಯಕ ಯುದ್ಧಕ್ಕೆ ಸಿದ್ಧವಾಯ್ತು ವೇದಿಕೆ.
ವಿಧಾನ ಸಭೆಯಲ್ಲಿ ಗುರುವಾರ ಮತ್ತು ಶುಕ್ರವಾರ ನಡೆದ ವಿದ್ಯಮಾನಗಳನ್ನು ಗಮನಿಸಿದರೆ ಆಡಳಿತ ಕಾಂಗ್ರಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ತೆರೆಮರೆಯಲ್ಲಿ ಈ ವರೆಗೆ ನಡೆಯುತ್ತಿದ್ದ ಶೀತಲ ಸಮರಕ್ಕೆ ಹನಿ ಟ್ರ್ಯಾಪ್ ಪ್ರಕರಣ ಹೊಸ ತಿರುವು ನೀಡಿದ್ದು ಎರಡೂ ಬಣಗಳ ನಡುವಿನ ಯುದ್ಧಕ್ಕೆ ಅಖಾಡ ತಯಾರಾದಂತಿದೆ.
ಇದು ಒಂದು ಕಡೆಯಾದರೆ ಗುರುವಾರ ಈ ಪ್ರಕರಣ ವಿಧಾನಸಭೆಯಲ್ಲಿ ಪ್ರಸ್ತಾಪವಾದಾಗ ಅದನ್ನು ಕೈಗೆತ್ತಿಕೊಂಡು ಹೋರಾಟ ನಡೆಸಬೇಕಿದ್ದ ಪ್ರತಿ ಪಕ್ಷ ಬಿಜೆಪಿ ಎಡವಿದ್ದು ಆ ಪಕ್ಷದಲ್ಲೇ ಪ್ರತಿ ಪಕ್ಷದ ನಾಯಕ ಆರ್. ಅಶೋಕ್ ವಿರುದ್ಧ ಸ್ವ ಪಕ್ಷೀಯರೇ ಕುದಿಯತೊಡಗಿದ್ದಾರೆ. ಗುರುವಾರ ಮತ್ತು ಶುಕ್ರವಾರ ಈ ಪ್ರಕರಣ ಸದನದಲ್ಲಿ ಪ್ರಸ್ತಾಪವಾದಾಗ ಅದನ್ನು ಕೈಗೆತ್ತಿಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದವರು ಬಿಜೆಪಿಯ ಸುನಿಲ್ ಕುಮಾರ್ ಹಾಗೂ ಬಸವನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಕೆಲವೇ ಸದಸ್ಯರು. ಗುರುವಾರ ಪ್ರಕರಣವನ್ನು ನಿಭಾಯಿಸಲು ಎಡವಿದ್ದ ಅಶೋಕ್ ಶುಕ್ರವಾರ ಮಾತ್ರ ವೀರಾವೇಶದಿಂದ ಪ್ರತಿಭಟಿಸಿದರು. ಇದಕ್ಕೆ ಅವರ ಪಕ್ಷದ ದಿಲ್ಲಿ ನಾಯಕರು ನೀಡಿದ ಚುಚ್ಚುಮದ್ದೇ ಕಾರಣ ಎಂಬುದನ್ನು ಬಿಜೆಪಿ ಮೂಲಗಳೇ ಒಪ್ಪಿಕೊಳ್ಳುತ್ತವೆ.
ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರನ್ನು ಹನಿಟ್ರ್ಯಾಪ್ ಗೆ ಒಳಪಡಿಸುವ ಯತ್ನ ಒಂದೂವರೆ ತಿಂಗಳ ಹಿಂದೆ ನಡೆಯಿತು. ಇದರ ಮುನ್ಸೂಚನೆ ತಿಳಿದು ಎಚ್ಚೆತ್ತ ರಾಜಣ್ಣ ತನ್ನನ್ನು ಬಲೆಗೆ ಕೆಡವಲು ಬಂದಿದ್ದವರನ್ನು ಹಿಡಿದರು ಅಷ್ಟೇ ಅಲ್ಲ , ಈ ಷಡ್ಯಂತ್ರದ ಹಿಂದಿದ್ದ ಕಾಂಗ್ರೆಸ್ ನವರೇ ಎಂದು ಹೇಳಲಾದ ಕೆಲವು ಪ್ರಭಾವಿ ವ್ಯಕ್ತಿಗಳನ್ನೂ ಹಿಡಿದು ತಮ್ಮದೇ ಆದ ರೀತಿಯಲ್ಲಿ ಬುದ್ಧಿ ಕಲಿಸಿದರು. ಒಂದೂವರೆ ತಿಂಗಳ ಹಿಂದೆ ನಡೆದಿತ್ತೆನ್ನಲಾದ ಈ ಘಟನೆಯ ಪಿತೂರಿ ರೂಪಿಸಿದ ಪ್ರಭಾವೀ ಯುವ ನಾಯಕನ ತಪ್ಪೊಪ್ಪಿಗೆ ಹೇಳಿಕೆಯನ್ನೂ ಸಚಿವ ರಾಜಣ್ಣ ಬೆಂಬಲಿಗರು ವಿಡಿಯೋ ಚಿತ್ರೀಕರಣ ಮಾಡಿದ್ದು ಅದರಲ್ಲಿ ಕೆಲವು ಪ್ರಭಾವೀ ನಾಯಕರ ಹೆಸರನ್ನೂ ಆತ ಹೇಳಿದ್ದಾನೆ ಎಂಬುದು ಪ್ರಕರಣದ ಒಟ್ಟು ಸಾರಾಂಶ. ಈಗ ಈ ಪ್ರಕರಣವನ್ನು ಮುಂದಿಟ್ಟುಕೊಂಡು ವಿಧಾನಸಭೆಯಲ್ಲಿ ಶುಕ್ರವಾರ ತೀವ್ರ ಪ್ರತಿಭಟನೆ ನಡೆಸಿದ ಬಿಜೆಪಿ ಶಾಸಕರ ಪೈಕಿ 18 ಮಂದಿಯನ್ನು ಮಾತ್ರ ಆರು ತಿಂಗಳವರೆಗೆ ಸದನದ ಕಲಾಪದಿಂದ ಸಸ್ಪೆಂಡ್ ಮಾಡಲಾಗಿದೆ.
ಇಡೀ ವಿದ್ಯಮಾನಗಳನ್ನು ಗಮನಿಸಿದರೆ ಕಾಂಗ್ರೆಸ್ ನಲ್ಲಿ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಡುವೆ ನಡಯುತ್ತಿರುವ ಶೀತಲ ಸಮರದ ಹಿನ್ನೆಲೆಯ ಸರಮಾಲೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.
ಇಡೀ ವಿದ್ಯಮಾನ ನಡೆದ ಒಂದೂವರೆ ತಿಂಗಳು ಮೌನವಾಗಿದ್ದ ರಾಜಣ್ಣ ಗುರುವಾರ ಇದ್ದಕ್ಕಿದ್ದಂತೆ ಎಚ್ಚೆತ್ತವರಂತೆ ಪ್ರತಿಕ್ರಿಯೆ ನೀಡಿದ್ದು ಯಾಕೆ? ತನ್ನನ್ನು ಹನಿಟ್ರ್ಯಾಪ್ ಮಾಡಲು ಬಂದು ವಿಫಲರಾದ ಮತ್ತು ಹಿನ್ನಲೆಯಲ್ಲಿ ನಿಂತ ವ್ಯಕ್ತಿಗಳ ವಿರುದ್ಧ ತತ್ ಕ್ಷಣವೇ ಪೊಲೀಸರಿಗೆ ಏಕೆ ದೂರು ನೀಡಲಿಲ್ಲ.? ಸಚಿವರಾಗಿ ಅವರು ಅಷ್ಟೊಂದು ಅಮಾಯಕರೆ? ಎಂಬುದು ಸದ್ಯದ ಪ್ರಶ್ನೆ. ಗುರುವಾರ ಈ ವಿಚಾರ ಸದನದಲ್ಲಿ ಪ್ರಸ್ತಾಪಕ್ಕೆ ಬರುವ ಮುನ್ನವೇ ಪತ್ರಿಕೆಗಳಲ್ಲಿ ಹನಿಟ್ರ್ಯಾಪ್ ಕುರಿತು ಸುದ್ದಿ ಆಗಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಆಪ್ತ ಸಚಿವ ಸತೀಶ್ ಜಾರಕಿಹೊಳಿ ಈವರೆಗೆ ನಡೆದಿರುವ ಇಂತಹ ಘಟನೆಗಳನ್ನು ಪ್ರಸ್ತಾಪಿಸಿ ನಮ್ಮ ಪಕ್ಷದವರ ಕೈವಾಡವೂ ಇರಬಹುದು ಎಂಬ ಸಂಶಯ ಹೊರ ಹಾಕಿದರು. ಸದನದಲ್ಲಿ ಈ ವಿಚಾರವನ್ನು ಮೊದಲು ಪ್ರಸ್ತಾಪಿಸಿದವರು ಬಿಜೆಪಿಯ ಬಸವನಗೌಡ ಪಾಟೀಲ್ ಯತ್ನಾಳ್. ಅದಕ್ಕೂ ಮುನ್ನ ಪ್ರತಿಪಕ್ಷದ ಕಡೆಗೆ ಆಡಳಿತ ಪಕ್ಷದ ಕಡೆಯಿಂದ ಚೀಟಿಯೊಂದು ಬಂದಿತ್ತು. ಇದನ್ನು ಬಿಜೆಪಿಯ ಇನ್ನೊಬ್ಬ ಶಾಸಕ ಸುರೇಶ್ ಗೌಡ ಪ್ರಸ್ತಾಪಿಸಿದ್ದಾರೆ. ಆದರೆ ಅದಕ್ಕೆ ಸಮರ್ಪಕ ಉತ್ತರ ಆಡಳಿತ ಪಕ್ಷದಿಂದ ಬಂದಿಲ್ಲ.
ಪ್ರಕರಣದ ಬಗ್ಗೆ ಉನ್ನತ ತನಿಖೆ ಮಾಡಿಸುವುದಾಗಿ ಗೃಹ ಸಚಿವ, ಡಾ. ಪರಮೇಶ್ವರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ತನಿಖೆಯ ಸ್ವರೂಪ ಯಾವುದು ಎಂಬುದು ಖಚಿತವಾಗಿಲ್ಲ. ನಿವೃತ್ತ ನ್ಯಾಯಾಧೀಶರೊಬ್ಬರಿಂದ ತನಿಖೆ ನಡೆಸಬೇಕೆಂದು ಸ್ವತಃ ರಾಜಣ್ಣ ಅವರೇ ಒತ್ತಾಯಿಸಿದ್ದಾರೆ. ಹೀಗಾಗಿ ಸರ್ಕಾರದ ನಡೆ ಕುತೂಹಲ ಮೂಡಿಸಿದೆ.
ಇದು ಹೊರತು ಪಡಿಸಿ ವಿದ್ಯಮಾನಗಳನ್ನು ನೋಡಿದರೆ ನೇರವಾಗಿ ಇದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಗುರಿಯಾಗಿಸಿರುವ ಸಂಗತಿ ಬಯಲಾಗುತ್ತಾ ಹೋಗುತ್ತದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೂ ಮುಖ್ಯಮಂತ್ರಿ ಪದವಿಯ ಅಧಿಕಾರ ಹಂಚಿಕೆ ವಿಚಾರ ಚರ್ಚೆ ನಡೆಯುತ್ತಲೇ ಬಂದಿದೆ. ಇದರ ಜತೆಗೆ ಇತ್ತೀಚಿನ ಕೆಲವು ತಿಂಗಳುಗಳಿಂದ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ ಕುರಿತಂತೆ ಒತ್ತಾಯದ ಹೇಳಿಕೆಗಳು ಸಿದ್ದರಾಮಯ್ಯ ಬೆಂಬಲಿಗರಿಂದ ಕೇಳಿ ಬರುತ್ತಲೇ ಇದೆ.
ಸಚಿವರಾದ ರಾಜಣ್ಣ, ಸತೀಶ್ ಜಾರಕಿಹೊಳಿ, ಸೇರಿದಂತೆ ಸಿದ್ದರಾಮಯ್ಯ ಪರಮಾಪ್ತ ಬಳಗದಲ್ಲಿರುವ ಸಚಿವರು ಈ ಹೇಳಿಕೆಗಳ ಮುಂಚೂಣಿಯಲ್ಲಿದ್ದು ಅವರನ್ನು ನಿಯಂತ್ರಿಸಲು ಕಾಂಗ್ರೆಸ್ ಹೈಕಮಾಂಡ್ ಕೂಡಾ ವಿಫಲವಾಗಿದೆ.. ಸ್ವತಹಾ ಸಿದ್ದರಾಮಯ್ಯ ಕೂಡಾ ತಮ್ಮ ಆಪ್ತರಿಗೆ ಇಂತಹ ಹೇಳಿಕೆಗಳನ್ನು ನೀಡದಂತೆ ಸೂಚನೆ ನೀಡುತ್ತಿಲ್ಲ. ಈ ಹೇಳಿಕೆಗಳ ಬಗ್ಗೆ ಮೌನವಾಗಿದ್ದಾರೆ. ಇದು ಹಲವು ವಿದ್ಯಮಾನಗಳಿಗೆ, ಅನುಮಾನಗಳಿಗೆ ಪುಷ್ಠಿ ನೀಡಿದೆ. ಇತ್ತೀಚೆಗೆ ಶಿವಕುಮಾರ್ ದಿಲ್ಲಿಗೆ ಭೇಟಿ ನೀಡಿದ್ದರು. ಅಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಅಧಿಕಾರ ಹಂಚಿಕೆ ಒಪ್ಪಂದ ಜಾರಿಗೊಳಿಸುವಂತೆ ಆಗ್ರಹಿಸಿದರು. ಈ ಭೇಟಿಯನ್ನು ಅವರು ಎಷ್ಟೇ ಗುಟ್ಟಾಗಿ ಇಟ್ಟರೂ ಅದು ಬಹಿರಂಗವಾಯಿತು. ಈಗಿರುವ ಮಾಹಿತಿ ಪ್ರಕಾರ ಅಕ್ಟೋಬರ್ ವೇಳೆಗೆ ಕಾಂಗ್ರೆಸ್ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಲಿದ್ದು ಆ ವೇಳೆಗೆ ಅಧಿಕಾರ ಹಂಚಿಕೆ ಒಪ್ಪಂದ ಜಾರಿಗೊಳಿಸಲೇ ಬೇಕೆಂದು ವರಿಷ್ಠರ ಮುಂದೆ ಒತ್ತಡ ಹೇರಿದ್ದಾರೆ. ಈ ಬೆಳವಣಿಗೆಗಳಿಂದಾಗಿ ಕೈ ವರಿಷ್ಠರು ಇಕ್ಕಟ್ಟಿಗೆ ಸಿಲುಕಿದ್ದಾರೆ.
ಈ ಬೆಳವಣಿಗೆಗಳ ಮುಂದುವರಿದ ಭಾಗ ನೋಡಿದರೆ ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಡಿ.ಕೆ.ಶಿವಕುಮಾರ್ ವಿರುದ್ಧ ನಾನಾ ಕಾರಣಗಳಿಗಾಗಿ ತಿರುಗಿ ಬಿದ್ದಿದ್ದಾರೆ. ಇಬ್ಬರ ನುಡವಿನ ರಾಜಕೀಯ ಭಿನ್ನಾಭಿಪ್ರಾಯ ಇದೀಗ ವೈಯಕ್ತಿಕ ಪ್ರತಿಷ್ಠೆಯ ಹಣಾ ಹಣಿಗೆ ಮುಟ್ಟಿದೆ. ವಿಧಾನ ಸೌಧದಲ್ಲಿ ಮಾಧ್ಯಮಗಳ ಮುಂದೆ ಮಾತನಾಡುತ್ತ ಹನಿ ಟ್ರ್ಯಾಪ್ ಪ್ರಕರಣವೂ ಸೇರಿದಂತೆ ಹಿಂದೆ ನಡೆದಿರುವ ಸಿಡಿ ಪ್ರಕರಣಗಳಲ್ಲೂ ಶಿವಕುಮಾರ್ ಕೈವಾಡ ಇರುವ ಬಗ್ಗೆ ಆರೋಪಿಸಿದ್ದಾರೆ. ಮುನಿರತ್ನ ಬಿಜೆಪಿಯಲ್ಲಿದ್ದರೂ ಜೆಡಿಎಸ್ ನಾಯಕ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪರಮಾಪ್ತರಾಗಿದ್ದಾರೆ.
ಮುನಿರತ್ನ ಅವರನ್ನು ನಾನಾ ನಿಗೂಢ ಕಾರಣಗಳಿಗೆ ಬಿಜೆಪಿಯಲ್ಲೇ ಅನೇಕರು ಒಪ್ಪುತ್ತಿಲ್ಲ. ಅವರಿಂದ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ. ಇಡೀ ಪ್ರಕರಣವನ್ನು ಆಮೂಲಾಗ್ರವಾಗಿ ಗಮನಿಸಿದರೆ ಇದರ ಹಿಂದೆ ಕಾಂಗ್ರೆಸ್ ಬಣ ತಿಕ್ಕಾಟ ಇರುವುದು ಸ್ಪಷ್ಟವಾಗುತ್ತಾ ಹೋಗುತ್ತದೆ. ಇದೀಗ ವಿಧಾನಸಭೆ ಅಧಿವೇಶನ ಮುಗಿದಿರುವುದರಿಂದ ಸದ್ಯದಲ್ಲೇ ಸಿದ್ದರಾಮಯ್ಯ ಬೆಂಬಲಿಗ ಶಾಸಕರು ದಿಲ್ಲಿ ಯಾತ್ರೆ ಕೈಗೊಂಡು ಶಿವಕುಮಾರ್ ವಿರುದ್ಧ ದೂರು ನೀಡಲು ಸಿದ್ಧತೆ ನಡೆಸಿದ್ದಾರೆ. ಅಲ್ಲಿಗೆ ಕಾಂಗ್ರೆಸ್ ನಲ್ಲಿ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಕಿತ್ತಾಟ ಮುಂದಿನ ದಿನಗಳಲ್ಲಿ ಬೀದಿಗೆ ಬಂದರೂ ಅಚ್ಚರಿ ಇಲ್ಲ.
ಮುಖ್ಯಮಂತ್ರಿ ಹುದ್ದೆಗೆ ಸವಾಲಾಗಿ ನಿಂತಿರುವ ಶಿವಕುಮಾರ್ ಸಿದ್ದರಾಮಯ್ಯನವರಿಗೆ ಬೇಕಾಗಿಲ್ಲ. ಹಾಗೆಯೇ ಚೆನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಅದಕ್ಕೂ ಮುನ್ನ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ರಾಮನಗರದಿಂದ ಸ್ಪರ್ಧಿಸಿದ್ದ ತಮ್ಮ ಪುತ್ರನ ಸೋಲಿನ ಕಹಿಯನ್ನು ಕುಮಾರಸ್ವಾಮಿ ಮರೆತಿಲ್ಲ. ಹಳೇ ಮೈಸೂರು ಪ್ರಾಂತ್ಯದಲ್ಲಿ ಒಕ್ಕಲಿಗರ ಮೇಲಿನ ಪ್ರಭುತ್ವ ನಿಧಾನವಾಗಿ ತನ್ನ ಕೈಜಾರುತ್ತಿರುವುದರ ಕುರಿತು ಕುಮಾರಸ್ವಾಮಿ ಚಡಪಡಿಸುತ್ತಿದ್ದಾರೆ.
ಹೀಗಾಗಿ ಶಿವಕುಮಾರ್ ಅವರನ್ನು ವಿರೋಧಿಸಲು ಅವರಿಗೆ ಕಾರಣವೂ ಇದೆ. ಇದೇ ಕಾರಣಕ್ಕೆ ಅವರು ಸಿದ್ಧರಾಮಯ್ಯ ಅವರಿಗೆ ಈಗೀಗ ಹತ್ತಿರವಾಗುವ ಪ್ರಯತ್ನ ನಡೆಸಿದ್ದಾರೆ. ವಿಶೇಷ ಎಂದರೆ ಈ ಎಲ್ಲ ಬೆಳವಣಿಗೆಗಳ ಕುರಿತು ಗೃಹ ಸಚಿವ ಡಾ. ಪರಮೇಶ್ವರ್ ಅವರನ್ನು ಹೊರುತುಪಡಿಸಿ ಉಳಿದ ಮೂಲ ಕಾಂಗ್ರೆಸ್ಸಿಗರು ಮೌನವಾಗಿದ್ದರೆ , ಇಲ್ಲಿನ ವಿದ್ಯಮಾನಗಳ ಬಗ್ಗೆ ಪ್ರತಿ ನಿತ್ಯ ಮಾಹಿತಿ ಪಡೆಯುತ್ತಿರುವ ಕಾಂಗ್ರೆಸ್ ವರಿಷ್ಠರೂ ಅಸಹಾಯಕರಾಗಿದ್ದಾರೆ.
ಇನ್ನು ರಾಜಣ್ಣ ಮತ್ತು ಶಿವಕುಮಾರ್ ನಡುವಿನ ರಾಜಕೀಯ ಜಿದ್ಧಾಜಿದ್ದಿ ಇದೀಗ ನಿರ್ಣಾಯಕ ಹಂತಕ್ಕೆ ಬಂದು ಮುಟ್ಟಿದೆ. ಇತ್ತೀಚೆಗೆ ನಡೆದ ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷರ ಚುನಾವಣೆಯಲ್ಲಿ ಶಿವಕುಮಾರ್ ಬೆಂಬಲಿತ ಅಭ್ಯರ್ಥಿಯನ್ನು ಸೋಲಿಸಿದ್ದ ರಾಜಣ್ಣ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಇದರ ಮುಂದುವರಿದ ಭಾಗ ಎಂಬಂತೆ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಅವರನ್ನು ಕೆಳಗಿಳಿಸಿ ತಮ್ಮ ಆಪ್ತರೊಬ್ಬರನ್ನು ಆ ಸ್ಥಾನಕ್ಕೆ ಕೂರಿಸುವ ವಿಚಾರದಲ್ಲೂ ಶಿವಕುಮಾರ್ ಗೆ ಹಿನ್ನಡೆಯಾಗಿದೆ.
ಸಹಕಾರಿ ಕ್ಷೇತ್ರದ ರಾಜಕಾರಣದಲ್ಲಿ ಹಲವು ದಶಕಗಳಿಂದ ಸಾಕಷ್ಟು ಅನುಭವ ಗಳಿಸಿ ಪರಿಣಿತಿ ಹೊಂದಿರುವ ರಾಜಣ್ಣ ಈಗ ಅಧ್ಯಕ್ಷರಾಗಿರುವ ಬಿಜೆಪಿಯ ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅವರ ಪರ ನಿಂತಿದ್ದಾರೆ. ಹಿಂದೆ ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ ಅಧಿಕಾರದಲ್ಲಿದ್ದಾಗ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿದ್ದ ರಾಜಣ್ಣ ಅವರನ್ನು ಮುಂದುವರಿಸುವ ವಿಚಾರದಲ್ಲಿ ಯಡಿಯೂರಪ್ಪ ಉದಾರ ಮನೋಭಾವ ಪ್ರದರ್ಶಿಸಿದ್ದರು. ಇದು ಅದರ ಮುಂದುವರಿದ ಭಾಗ. ಈ ವಿಚಾರದಲ್ಲೂ ಶಿವಕುಮಾರ್ ಮತ್ತು ರಾಜಣ್ಣ ನಡುವೆ ತಿಕ್ಕಾಟ ನಡೆದಿದೆ.
ಇನ್ನು ಡಿ.ಕೆ.ಶಿವಕುಮಾರ್ ವಿಚಾರಕ್ಕೆ ಬಂದರೆ ತಮ್ಮ ರಾಜಕೀಯ ಮಹತ್ವಾಕಾಂಕ್ಷೆಯ ಈಡೇರಿಕೆಗೆ ಅಡ್ಡವಾಗಿದ್ದ ವಿವಿಧ ನಾಯಕರುಗಳನ್ನು ನಿಧಾನವಾಗಿ ತಮ್ಮ ದಾರಿಯಿಂದ ದೂರ ಸರಿಸುವಲ್ಲಿ ಭಾಗಶಃ ಅವರು ಯಶಸ್ವಿಯಾಗಿದ್ದಾರೆ. ರಮೇಶ್ ಜಾರಕಿಹೊಳಿ ಅಶ್ಲೀಲ ಸಿ.ಡಿ.ಪ್ರಕರಣ, ಮಾಜಿ ಪ್ರಧಾನಿ ದೇವೇಗೌಡರ ಪುತ್ರ ರೇವಣ್ಣ ಹಾಗೂ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಪ್ರಕರಣದಲ್ಲೂ ಅವರ ಪಾತ್ರದ ಕುರಿತು ಆರೋಪಗಳು ಕೇಳಿ ಬಂದಿತ್ತು. ತಮಗಾಗದ ರಾಜಕೀಯ ನಾಯಕರ ವಿರುದ್ಧ ಕೆಲವು ತಂತ್ರಗಳನ್ನು ಬಳಸಿ ಅವರನ್ನು ರಾಜಕೀಯವಾಗಿ ಮುಗಿಸುವ ಪ್ರಯತ್ನಗಳನ್ನು ಅವರು ಮಾಡುತ್ತಿದ್ದಾರೆ ಎಂಬ ಆರೋಪಗಳು ನಿರಂತರವಾಗಿ ಬರುತ್ತಿದ್ದರೂ ಅವನ್ನು ನಿಖರವಾಗಿ ನಿರಾಕರಿಸದೇ ಹಲವು ಅನುಮಾನಗಳು ಹಾಗೇ ಉಳಿಯುವಂತೆ ಮಾಡಿರುವುದು ಅನೇಕ ಊಹೋಪೋಹಗಳಿಗೆ ಕಾರಣವಾಗಿದೆ. ರಾಜಣ್ಣ ಪ್ರಕರಣದಲ್ಲೂ ಅವರು ನೀಡಿರುವ ಪ್ರತಿಕ್ರಿಯೆಯೂ ಹಲವು ಪ್ರಶ್ನೆಗಳನ್ನು ಮೂಡಿಸಿದೆ.
ಇತ್ತೀಚಿನ ದಿನಗಳಲ್ಲಿ ಚುನಾವಣೆಗೆ ಮಾತ್ರ ಸೀಮಿತವಾಗಿದ್ದ ರಾಜಕೀಯ ನಾಯಕರ ನಡುವಿನ ಭಿನ್ನಾಭಿಪ್ರಾಯ ಪರಸ್ಪರ ಒಬ್ಬರನ್ನೊಬ್ಬರು ವೈಯಕ್ತಿಕವಾಗಿ ತೇಜೋವಧೆ ಮಾಡಲು ಕುತಂತ್ರಗಳನ್ನು ನಡೆಸುವಷ್ಟರ ಮಟ್ಟಿಗೆ ರಾಜ್ಯ ರಾಜಕಾರಣ ಹಾದಿ ತಪ್ಪಿದೆ. ಈ ಪ್ರಕರಣ ಒಂದು ಕಡೆಯಾದರೆ. ರಾಜ್ಯದಲ್ಲಿ ಕೆಲವು ದಿನಗಳ ಹಿಂದೆ ಭಾರೀ ಸುದ್ದಿ ಮಾಡಿದ್ದ ಚಿತ್ರ ನಟಿ ರನ್ಯಾರಾವ್ ವಿರುದ್ಧದ ಬಂಗಾರ ಕಳ್ಳ ಸಾಗಣೆ ಪ್ರಕರಣದಲ್ಲಿ ರಾಜ್ಯದ ಪ್ರಭಾವಿ ಸಚಿವರ ಪಾತ್ರದ ಬಗ್ಗೆಯೂ ವದಂತಿಗಳು ಕೇಳಿ ಬಂದಿತ್ತು. ಅದು ನಿರ್ಣಾಯಕ ಘಟ್ಟ ಮುಟ್ಟಲೇ ಇಲ್ಲ. ಆ ಪ್ರಭಾವಿ ಯಾರು ಎಂದು ಬಯಲಾಗಲೇ ಇಲ್ಲ.
ಸಚಿವ ರಾಜಣ್ಣ ಹನಿ ಟ್ರ್ಯಾಪ್ ಯತ್ನದ ಪ್ರಕರಣವಷ್ಟೇ ಅಲ್ಲ ಇದುವರೆಗೆ ನಡೆದಿರುವ ಎಲ್ಲ ಇಂತಹ ಪ್ರಕರಣಗಳ ಹಿಂದಿನ ಕಾಣದ ಕೈಗಳು ಬಯಲಾಗಬೇಕು ಅದಕ್ಕಾಗಿ ಆ ಎಲ್ಲದರ ಬಗ್ಗೆಯೂ ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕು ಎಂಬ ಆಗ್ರಹದಲ್ಲಿ ನ್ಯಾಯವಿದೆ ನಿಜ. ಆದರೆ ಇಂತಹ ಪ್ರಕರಣಗಳಲ್ಲಿ ಬೆಂಕಿ ಇಲ್ಲದೇ ಹೊಗೆಯಾಡಲು ಸಾಧ್ಯವೆ? ಎಂಬುದು ಸದ್ಯದ ಪ್ರಶ್ನೆ. ಹನಿ ಟ್ರ್ಯಾಪ್ ಪ್ರಕರಣದಲ್ಲಿ ತಮ್ಮಲ್ಲಿರುವ ಸಾಕ್ಷಾಧಾರಗಳ ಸಮೇತ ಕಾಂಗ್ರೆಸ್ ವರಿಷ್ಠರಿಗೆ ದೂರು ನೀಡುವುದಾಗಿ ವಿಧಾನ ಪರಿಷತ್ ಸದಸ್ಯರೂ ಆಗಿರುವ ಸಚಿವ ರಾಜಣ್ಣ ಅವರ ಪುತ್ರ ರಾಜೇಂದ್ರ ಹೇಳಿದ್ದಾರೆ. ಹಾಗಾಗೇ ಇದು ಕಾಂಗ್ರೆಸ್ ನಲ್ಲಿ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಮುಂದಿನ ಆಂತರಿಕ ಸಮರಕ್ಕೆ ವೇದಿಕೆ ಸಜ್ಜಾಗುತ್ತಿದೆ ಎಂದೇ ಅರ್ಥ. ಅಧಿವೇಶನ ಮುಗಿದಿದೆ. ಅದರ ಬೆನ್ನಲ್ಲೇ ಕಾಂಗ್ರೆಸ್ ನಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಿವೆ. ಈ ಬಾರಿಯ ಯುದ್ಧ ನಿರ್ಣಾಯಕ ಆಗಲೂಬಹುದು.
Advertisement