
ಹೊಸ ರಾಜಕೀಯ ವಿಪ್ಲವಕ್ಕೆ ಇದು ಮುನ್ನುಡಿ. ಇತ್ತೀಚೆಗೆ ನಗರದ ಹೋಟೇಲೊಂದರಲ್ಲಿ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷಗಳ ಶಾಸಕರು ಮತ್ತು ಪ್ರಮುಖ ಮುಖಂಡರು ನಡೆಸಿದ ಸಭೆ ಕುರಿತು ರಾಜಕೀಯ ವಲಯಗಳಲ್ಲಿ ಕುತೂಹಲ ಮೂಡಿದೆ.
ಇತ್ತೀಚೆಗೆ ಮೂರೂ ಪಕ್ಷಗಳ ಒಕ್ಕಲಿಗರು ಮತ್ತು ಲಿಂಗಾಯಿತ ಸಮುದಾಯದ ಶಾಸಕರು, ಮುಖಂಡರ ಸಭೆಯ ಉದ್ದೇಶ ಮೇಲ್ನೋಟಕ್ಕೆಸಾಮಾನ್ಯ ಔತಣ ಕೂಟದಂತೆ ಕಂಡರೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯದ ಎರಡು ಪ್ರಬಲ ಸಮುದಾಯಗಳು ರಾಜಕೀಯವಾಗಿ ಒಟ್ಟಾಗುತ್ತಿರುವುದರ ಮುನ್ಸೂಚನೆ ಇದು ಎಂದೇ ಅರ್ಥೈಸಲಾಗುತ್ತಿದೆ. ಇಡೀ ಬೆಳವಣಿಗೆಗಳನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಹೊಸ ಶಕ್ತಿಗಳ ಧ್ರುವೀಕರಣಕ್ಕೆ ಈ ಸಭೆಯ ಮೂಲಕ ಭೂಮಿಕೆ ಸಿದ್ಧವಾಗುತ್ತಿದೆ.
ಎರಡನೇ ಅವಧಿಗೆ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ಬರುವ ಮೇ ತಿಂಗಳಿಗೆ ಎರಡು ವರ್ಷಗಳ ಆಡಳಿತ ಪೂರೈಸಲಿದ್ದಾರೆ. ಇದರ ಬೆನ್ನಲ್ಲೇ ಈ ಹಿಂದೆ ಆಗಿದೆ ಎಂದೇ ಹೇಳಲಾಗುತ್ತಿರುವ ಮುಖ್ಯಮಂತ್ರಿ ಪದವಿಯ ಅಧಿಕಾರ ಹಂಚಿಕೆ ಒಪ್ಪಂದ ಜಾರಿಗೊಳಿಸುವಂತೆ ಕಾಂಗ್ರೆಸ್ ಹೈಕಮಾಂಡ್ ಮೇಲೆ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಅವರ ಬೆಂಬಲಿಗರು ಒತ್ತಡ ಹೇರುತ್ತಿದ್ದಾರೆ. ಇದೇ ಅವಕಾಶವನ್ನು ಬಳಸಿಕೊಂಡು ಸಿದ್ದರಾಮಯ್ಯ ಗುಂಪು ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಬದಲಾಯಿಸುವಂತೆ ಒತ್ತಡದ ರಾಜಕೀಯ ತಂತ್ರ ರೂಪಿಸುತ್ತಿದೆಯಾದರೂ ಹೈಕಮಾಂಡ್ ಅದಕ್ಕೆ ಮಣಿದಿಲ್ಲ.
ಮತ್ತೊಂದು ಕಡೆ ವರಿಷ್ಠರ ಎಚ್ಚರಿಕೆಯನ್ನೂ ಲೆಕ್ಕಿಸದೆ ಸಿದ್ದರಾಮಯ್ಯ ಬೆಂಬಲಿಗ ಸಚಿವರ ಪೈಕಿ ಕೆಲವು ಸಚಿವರು ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ. ಐದು ವರ್ಷವೂ ಅವರೇ ಅವಧಿಯನ್ನು ಪೂರೈಸುತ್ತಾರೆ ಎಂದು ಬಹಿರಂಗವಾಗೇ ಹೇಳುತ್ತಿರುವುದು ಸಹಜವಾಗೇ ಆ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಡಿ.ಕೆ.ಶಿವಕುಮಾರ್ ಗೆ ಕಿರಿಕಿರಿ ತಂದಿದೆ. ಈ ವಿಚಾರದಲ್ಲಿ ತಾನು ಸಾಕಷ್ಟು ತಾಳ್ಮೆ ವಹಿಸಿದ್ದರೂ ಸಿದ್ದರಾಮಯ್ಯ ಬೆಂಬಲಿಗರು ಕೆಣಕುವ ರೀತಿ ಹೇಳಿಕೆ ನೀಡುತ್ತಿರುವುದಲ್ಲದೇ ಮುಜುಗರ ಉಂಟು ಮಾಡುತ್ತಿರುವುದರ ಬಗ್ಗೆ ಸಿಡಿದೆದ್ದಿದ್ದಾರೆ. ಅದರ ಫಲವೇ ಇತ್ತೀಚೆಗೆ ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಆಗಿದ್ದ ಸಂದರ್ಭದಲ್ಲಿ ಅಧಿಕಾರ ಹಂಚಿಕೆ ಒಪ್ಪಂದ ಜಾರಿ ಕುರಿತಂತೆ ಸ್ಪಷ್ಟ ಉತ್ತರ ಕೊಡಿ ಇನ್ನು ನಾನು ಕಾಯಲು ಸಾಧ್ಯವಿಲ್ಲ. ಎಂದೂ ಪಟ್ಟು ಹಿಡಿದಿದ್ದಾರೆ ಇದರಿಂದ ಪೇಚಿಗೆ ಒಳಗಾದ ಖರ್ಗೆ ವಾಸ್ತವ ರಾಜಕಾರಣದ ಸೂಕ್ಷ್ಮತೆಗಳನ್ನು ವಿವರಿಸಿ ಆತುರ ಪಟ್ಟು ಯಾವುದೇ ನಿರ್ಧಾರ ಕೈಗೊಳ್ಳದಂತೆ ಕೆಲವು ತಿಂಗಳು ಕಾಯುವಂತೆ ಸೂಚಿಸಿದ್ದಾರೆ.
ಹೈಕಮಾಂಡ್ ಯಾವಾಗ ತನ್ನ ಪರ ಸಹಾನುಭೂತಿ ಹೊಂದಿರುವುದು ಖಚಿತವಾಯಿತೋ ಈ ಭೇಟಿ ನಂತರ ಶಿವಕುಮಾರ್ ಪಕ್ಷದೊಳಗೇ ಇರುವ ತಮ್ಮ ರಾಜಕೀಯ ವಿರೋಧಿಗಳ ವಿರುದ್ಧ ಸೌಮ್ಯವಾಗೇ ಆಕ್ರಮಣ ಮಾಡಲು ಆರಂಭಿಸಿದ್ದಾರೆ. ಕಾಂಗ್ರೆಸ್ ಮೂಲಗಳ ಪ್ರಕಾರ ಸದ್ಯದ ರಾಜಕೀಯ ಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರನ್ನೂ ಪಕ್ಷ ಎದುರು ಹಾಕಿಕೊಳ್ಳುವಂತಿಲ್ಲ, ಹಾಗೆಯೇ ಶಿವಕುಮಾರ್ ಅವರನ್ನೂ ನಿರ್ಲಕ್ಷಿಸುವುದು ಸಾಧ್ಯವಿಲ್ಲ. ಸಿದ್ದರಾಮಯ್ಯ ಜತೆಗೆ ಅಹಿಂದ ಮತ ಬ್ಯಾಂಕ್ ಗಟ್ಟಿಯಾಗಿದೆ. ಅವರನ್ನು ಮೀರಿಸುವ ಪರ್ಯಾಯ ನಾಯಕ ಯಾವ ಪಕ್ಷದಲ್ಲೂ ಇಲ್ಲ. ಹಾಗೆ ನೋಡಿದರೆ ಕಾಂಗ್ರೆಸ್ ಗೆ ದಲಿತರು ಅಲ್ಪ ಸಂಖ್ಯಾತರು ಹಿಂದುಳಿದ ವರ್ಗಗಳ ಮತಗಳೇ ಇಡುಗಂಟು ಈ ಸನ್ನಿವೇಶದಲ್ಲಿ ಸಿದ್ದರಾಮಯ್ಯ ಪದಚ್ಯುತಿಗೆ ಮುಂದಾದರೆ ಭವಿಷ್ಯದಲ್ಲಿ ಅದರಿಂದ ಪಕ್ಷಕ್ಕೆ ಹಾನಿಯೇ ಹೊರತೂ ಲಾಭವೇನೂ ಆಗುವದಿಲ್ಲ. ಹಾಗೆಂದು ಶಿವಕುಮಾರ್ ರನ್ನು ನಿರ್ಲಕ್ಷಿಸಿದರೆ ಪಕ್ಷದ ಸಂಘಟನೆಗಾಗಿ ಅವರು ಪಟ್ಟಿರುವ ಶ್ರಮವನ್ನು ನಿರ್ಲಕ್ಷಿಸಿದಂತಾಗುತ್ತದೆ.
ನಿಧಾನವಾಗಿ ಒಕ್ಕಲಿಗ ಸಮುದಾಯದ ಪ್ರಶ್ನಾತೀತ ನಾಯಕರಾಗುವತ್ತ ಒಂದೊಂದೇ ಮೆಟ್ಟಿಲುಗಳನ್ನು ಏರುತ್ತಿರುವ ಅವರು ಇತ್ತೀಚಿನ ದಿನಗಳಲ್ಲಿ ಹಿಂದುತ್ವದ ಸಿದ್ಧಾಂತಕ್ಕೆ ಹತ್ತಿರವಾಗುತ್ತ ಹಲವು ಪ್ರಶ್ನೆಗಳನ್ನು ರಾಜಕೀಯ ವಲಯಗಳಲ್ಲಿ ಎಬ್ಬಿಸಿದ್ದಾರೆ. ಇತ್ತೀಚಿಗೆ ಅವರು ಪ್ರಯಾಗ್ ರಾಜ್ ಕುಂಭ ಮೇಳದಲ್ಲಿ ಭಾಗವಹಿಸಿ ಬಂದ ನಂತರ ಹಿಂದುತ್ವದ ಸಿದ್ಧಾಂತಗಳಿಗೆ ಹತ್ತಿರವಾಗಿದ್ದಾರೆ. ಮೊದಲಿನಂತೆ ಪ್ರಖರವಾಗಿ ಬಿಜೆಪಿಯನ್ನು ಅದರ ನಾಯಕರನ್ನು ಟೀಕಿಸುತ್ತಿಲ್ಲ. ಮೇಲ್ನೋಟಕ್ಕೆ ಅವರು ಬಿಜೆಪಿಗೆ ಹತ್ತಿರವಾಗುತ್ತಿರುವಂತೆ ಅನ್ನಿಸುತ್ತಿದ್ದಾರೆ. ಆದರೆ ವಾಸ್ತವ ರಾಜಕಾರಣವೇ ಬೇರೆ.
ಶಿವಕುಮಾರ್ ನಡೆಯನ್ನು ಗಮನಿಸಿದರೆ ತಮ್ಮನ್ನು ನಿರ್ಲಕ್ಷಿಸಿದರೆ ಮುಂದೆ ತಾನು ರಾಜಕೀಯವಾಗಿ ಯಾವುದೇ ತೀರ್ಮಾನಗಳನ್ನು ಕೈಗೊಳ್ಳುವ ಸಂದರ್ಭ ಬರಬಹುದು ಎಂಬ ಸಂದೇಶವನ್ನು ಹೈಕಮಾಂಡ್ ಗೆ ನೀಡುವ ತಂತ್ರ ಇದೆಂಬುದು ಗೋಚರವಾಗುತ್ತದೆ.
ಈಗಿದರ ಮುಂದುವರಿದ ಭಾಗವೇ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಸದ್ಯದಲ್ಲೇ ಬೃಹತ್ ಕಾರ್ಯಕರ್ತರು ಮುಖಂಡರ ಸಮಾವೇಶ ಹಮ್ಮಿಕೊಳ್ಳಲು ಅವರು ತಯಾರಿ ನಡೆಸಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅವರ ಬೆಂಬಲಿಗ ಸಚಿವರ ಪ್ರತಿಕ್ರಿಯೆ ಇದಕ್ಕೆ ಪೂರಕವಾಗೇನೂ ಇಲ್ಲ. ವಿಧಾನ ಮಂಡಲದ ಅಧಿವೇಶನ ಮುಗಿದ ನಂತರ ಸಚಿವ ಸಂಪುಟ ಪುನಾರಚನೆಗೆ ಸಿದ್ದರಾಮಯ್ಯ ಚಿಂತನೆ ನಡೆಸಿದ್ದಾರೆ. ಒಂದಷ್ಟು ಮಂದಿಯನ್ನು ಕೈ ಬಿಟ್ಟು ಹೊಸದಾಗಿ ಕೆಲವರ ಸೇರ್ಪಡೆಗೆ ಚಿಂತನೆ ನಡೆಸಿದ್ದಾರೆ. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ಅದೂ ಸುಲಭವಲ್ಲ, ಸಚಿವ ಸಂಫುಟ ಪುನಾರಚನೆ ನೆಪದಲ್ಲಿ ಹೊಸದಾಗಿ ಎರಡು ಉಪಮುಖ್ಯಮಂತ್ರಿ ಹುದ್ದೆಯನ್ನು ಸೃಷ್ಟಿಸುವ ಮೂಲಕ ಶಿವಕುಮಾರ್ ಚಕ್ರಾಧಿಪಥ್ಯ ದುರ್ಬಲವಾಗುವಂತೆ ನೋಡಿಕೊಳ್ಳುವ ತಂತ್ರಗಾರಿಕೆ ಇದರ ಹಿಂದಿದೆಯಾದರೂ ಹೈಕಮಾಂಡ್ ಅಂತಹ ಪ್ರಯತ್ನಗಳಿಗೆ ಒಪ್ಪುವ ಸಾಧ್ಯತೆ ಇಲ್ಲ ವರಿಷ್ಠರನ್ನು ಧಿಕ್ಕರಿಸಿ ತೀರ್ಮಾನ ಕೈಗೊಳ್ಳುವ ಸ್ಥಿತಿಯಲ್ಲಿ ಸಿದ್ದರಾಮಯ್ಯನವರೂ ಇಲ್ಲ. ಹೀಗಾಗಿ ಕಾಂಗ್ರೆಸ್ ನಲ್ಲಿ ಅಧಿಕಾರ ಹಂಚಿಕೆ ಒಪ್ಪಂದದ ವಿಚಾರವೇ ಹೈಕಮಾಂಡ್ ಗೆ ದೊಡ್ಡ ತಲೆ ನೋವಾಗಿದೆ.
ಈ ಎಲ್ಲ ಬೆಳವಣಿಗೆಗಳು ನಡೆದಿರುವ ಹಂತದಲ್ಲೇ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಮೂರೂ ಪಕ್ಷಗಳ ಒಕ್ಕಲಿಗ ಮತ್ತು ಲಿಂಗಾಯಿತ ಶಾಸಕರು ಮತ್ತು ಪ್ರಮುಖ ಮುಖಂಡರ ಸಭೆಯ ವಿದ್ಯಮಾನಗಳನ್ನು ಗಮನಿಸಿದರೆ, ನಿಧಾನವಾಗಿ ಸಿದ್ದರಾಮಯ್ಯ ವಿರುದ್ಧ ಪ್ರಬಲ ಸಮುದಾಯಗಳು ಒಟ್ಟಾಗುತ್ತಿರುವುದರ ಮುನ್ಸೂಚನೆ ಇದು ಎಂಬುದು ಗೋಚರವಾಗುವ ಅಂಶ. ಮೀಸಲಾತಿ ಪುನರ್ ನಿಗದಿ ಕುರಿತಂತೆ ಆಯೋಗ ನೀಡಿರುವ ವರದಿ ಈಗ ಸರ್ಕಾರದ ಮುಂದಿದೆ. ಅದನ್ನು ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಹೇಳುತ್ತಿದ್ದಾರಾದರೂ ಜಾರಿಗೊಂಡಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವುದೂ ಸುಲಭ ಸಾಧ್ಯವೇನಲ್ಲ. ಅದರಿಂದ ಆಗಬಹುದಾದ ರಾಜಕೀಯ ಪರಿಣಾಮಗಳ ಬಗ್ಗೆ ಕೂಡಾ ಸಿದ್ದರಾಮಯ್ಯ ನವರಿಗೆ ಅರಿವಿದೆ. ಆದರೆ ಇದೇ ವೇಳೆ ಈ ವರದಿ ಕುರಿತಂತೆ ಪ್ರಬಲ ಸಮುದಾಯಗಳಲ್ಲಿ ಚರ್ಚೆ ಆರಂಭವಾಗಿದೆ. ಈ ನಿಟ್ಟಿನಲ್ಲಿ ಪಕ್ಷ ರಹಿತವಾಗಿ ಅಭಿಪ್ರಾಯ ರೂಪಿಸುವ ಪ್ರಯತ್ನಗಳು ಪ್ರಾರಂಭವಾಗಿವೆ. ಆದರೆ ಇಲ್ಲೂ ಇದು ನೆಪ ಮಾತ್ರ. ರಾಜ್ಯದ ರಾಜಕೀಯ ಇತಿಹಾಸ ಗಮನಿಸಿದರೆ ಮುಖ್ಯಮಂತ್ರಿ ಪದವಿಯ ಅಧಿಕಾರ ಇಲ್ಲದೇ ಪ್ರಬಲ ಸಮುದಾಯಗಳು ಕಾದು ಕುಳಿತ ಉದಾಹರಣೆಗಳು ಕಡಿಮೆ.
ಹೀಗೆ ಈ ಶಾಸಕರ ಸಭೆ ಏರ್ಪಾಟು ಮಾಡಿದವರು ಕಾಂಗ್ರೆಸ್ ನಲ್ಲಿ ಶಿವಕುಮಾರ್ ರವರಿಗೆ ಆಪ್ತರಾಗಿರುವ ಶಾಸಕ ವಿನಯ ಕುಲಕರ್ಣಿ. ಈ ಸಭೆಯಲ್ಲಿ ಸಮುದಾಯಗಳ ಎಲ್ಲ ಪಕ್ಷಗಳ ಬಹತೇಕ ಶಾಸಕರು ಪಾಲ್ಗೊಂಡಿದ್ದರು. ಮೀಸಲಾತಿಯ ವಿಚಾರದ ಜತೆಗೇ ಅಧಿಕಾರ ಹಂಚಿಎಕ ವಿಚಾರದಲ್ಲಿ ರಾಜಕೀಯ ಪಕ್ಷಗಳು ಪ್ರಬಲ ಸಮುದಾಯಗಳನ್ನು ಕೇವಲ ಬಳಸಿಕೊಂಡು ಕೈಬಿಡುತ್ತಿರುವ ವಿಷಯವೇ ಅನೌಪಚಾರಿಕವಾಗಿ ಚರ್ಚೆ ಆಯಿತು ಎಂದೂ ಗೊತ್ತಾಗಿದೆ. ಈ ಅವಕಾಶವನ್ನು ಬಳಸಿಕೊಂಡಿರುವ ಶಿವಕುಮಾರ್ ರಾಜ್ಯದಲ್ಲಿನ ಸರ್ಕಾರ ಬರೀ ಅಹಿಂದ ಜಪವನ್ನೇ ಮಾಡುತ್ತಾ ಮುಂದುವರಿದರೆ ಭವಿಷ್ಯದಲ್ಲಿ ಪ್ರಬಲ ಸಮುದಾಯಗಳು ಕಾಂಗ್ರೆಸ್ ವಿರುದ್ಧ ತಿರುಗಿ ಬೀಳಬಹುದು ಎಂಬ ಸಂದೇಶವನ್ನು ಹೈಕಮಾಂಡ್ ಗೆ ರವಾನಿಸಿದ್ದಾರೆ. ಇತ್ತೀಚೆಗೆ ಹಿಂದುತ್ವದ ಸಿದ್ದಾಂತಕ್ಕೆ ಹತ್ತಿರವಾಗುತ್ತಿರುವ ಶಿವಕುಮಾರ್ ಆ ಮೂಲಕ ಪ್ರಬಲ ಲಿಂಗಾಯಿತ ಸಮುದಾದ ಗಮನವನ್ನೂ ಸೆಳೆದಿದ್ದಾರೆ. ಆ ಸಮುದಾಯದ ಒಂದಷ್ಟು ಕುತೂಹಲದಿಂದ ಅವರತ್ತ ನೋಡುವಂತಾಗಿದೆ. ಇದೇ ಸನ್ನಿವೇಶವನ್ನು ಬಳಸಿಕೊಂಡು ಎರಡು ಪ್ರಬಲ ಸಮುದಾಯಗಳು ಒಟ್ಟಾದರೆ ಮುಂದಿನ ದಿನಗಳಲ್ಲಿ ಅಧಿಕಾರ ಪಡೆಯಬಹುದು ಎಂಬ ಸಂದೇಶವನ್ನು ರವಾನಿಸುವ ಪ್ರಯತ್ನಕ್ಕೆ ಕೈಹಾಕಿದ್ದಾರೆ.
ಲಿಂಗಾಯಿತರ ಮತ ಬ್ಯಾಂಕ್ ಮೇಲೆಯೇ ಸಂಘಟಿತವಾಗಿದ್ದ ಬಿಜೆಪಿ ಇತ್ತೀಚಿನ ದಿನಗಳಲ್ಲಿ ಯತ್ನಾಳ್ ಮತ್ತು ಯಡಿಯೂರಪ್ಪ ಕುಟುಂಬದ ನಡುವಿನ ಜಗಳದಿಂದ ದುರ್ಬಲವಾಗುತ್ತಿದೆ. ಜತೆಗೇ ಈ ಬಿಕ್ಕಟ್ಟನ್ನು ಬಗೆಹರಿಸಬೇಕಿದ್ದ ಬಿಜೆಪಿ ಹೈಕಮಾಂಡ್ ಕೂಡಾ ಅಸಹಾಯಕವಾಗಿ ಕೈ ಚೆಲ್ಲಿದೆ. ದಿನೇ ದಿನೇ ಬಸವನಗೌಡ ಪಾಟೀಲ್ ಯತ್ನಾಳ್ ನಡೆಸುತ್ತಿರುವ ಬಹಿರಂಗ ವಾಗ್ದಾಳಿಯನ್ನು ಕಂಡೂ ಏನೂ ಆಗೇ ಇಲ್ಲವೆಂಬಂತೆ ವರ್ತಿಸುತ್ತಿರುವ ವರಿಷ್ಠರ ವಿರುದ್ಧ ಹಿರಿಯ ನಾಯಕ ಯಡಿಯೂರಪ್ಪ ಕೂಡಾ ಬೇಸರ ಗೊಂಡಿದ್ದಾರೆ. ಈಗ ಮತ್ತೊಂದು ಕಡೆ ಬಿಜೆಪಿಯ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಲಿಂಗಾಯಿತ ಸ್ವಾಮೀಜಿಗಳನ್ನು ಸೇರಿಸಿ ಸಮುದಾಯದ ಸಮಾವೇಶ ನಡೆಸಲು ಮುಂದಾಗಿರುವುದು ಮುಂದೆ ರಾಜ್ಯದಲ್ಲಿ ಸಂಭವಿಸಲಿರುವ ಮಹತ್ವದ ರಾಜಕೀಯ ಬೆಳವಣಿಗೆಗಳ ಮುನ್ಸೂಚನೆ ಎನ್ನಲಾಗುತ್ತಿದೆ.
ಅಧಿಕಾರವೇ ಪ್ರಧಾನವಾಗಿರುವ ರಾಜಕಾರಣದಲ್ಲಿ ಇದುವರೆಗೆ ಶಿವಕುಮಾರ್ ಅವರನ್ನು ಪ್ರಬಲವಾಗಿ ವಿರೋಧಿಸುತ್ತಿದ್ದ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಕೂಡಾ ತಣ್ಣಗಾಗಿದ್ದಾರೆ. ಮತ್ತೊಂದು ಕಡೆ ಸರ್ಕಾರ ಬಂದು ಎರಡು ವರ್ಷಗಳಾಗುತ್ತಾ ಬಂದರೂ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆಆಗದಿರುವುದರ ಬಗ್ಗೆ ಕಾಂಗ್ರೆಸ್ ಶಾಸಕರೇ ಮುಖ್ಯಮಂತ್ರಿ ವಿರುದ್ಧ ಮುನಿಸಿಕೊಂಡಿದ್ದಾರೆ.
ಈ ಬೆಳವಣಿಗೆಗಳು ಒಂದು ಕಡೆಯಾದರೆ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದ ಜಾತ್ಯತೀತ ಜನತಾದಳ ದಿನೇ ದಿನೇ ದುರ್ಬಲವಾಗುತ್ತಿದೆ. ವಿಧಾನಸಭೆಯಲ್ಲಿ ಪ್ರತಿಪಕ್ಷವಾದರೂ ಸರ್ಕಾರದ ವಿರುದ್ಧ ಗಟ್ಟಿ ದನಿಯಲ್ಲಿ ಪ್ರತಿಭಟಿಸುತ್ತಿಲ್ಲ. ಬಿಜೆಪಿ ಕತೆಯೂ ಇದಕ್ಕಿಂತ ವಿಭಿನ್ನವಾಗೇನೂ ಇಲ್ಲ. ಕೇಂದ್ರದಲ್ಲಿ ಕೈಗಾರಿಕೆಯಂತಹ ಮಹತ್ವದ ಖಾತೆಯ ಕ್ಯಾಬಿನೆಟ್ ಮಂತ್ರಿಯಾಗಿದ್ದರೂ ಕುಮಾರ ಸ್ವಾಮಿ ಆಡಳಿತದಲ್ಲಿ ಸಕ್ರಿಯರಾಗಿಲ್ಲ. ಬಿಜೆಪಿ ಜತೆ ಸಖ್ಯ ಬೆಳೆಸಿ ತಾನು ತಪ್ಪು ಮಾಡಿದೆ ಎಂಬ ಅಸಹಾಯಕತೆ ಅವರನ್ನು ಕಾಡುತ್ತಿದೆ.
ಆ ಕಾರಣದಿಂದಲೇ ಇತ್ತೀಚೆಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಚಾರದಲ್ಲಿ ತಮ್ಮ ನಿಲುವು ಬದಲಾಯಿಸಿಕೊಂಡು ಮೆತ್ತಗಾಗಿದ್ದಾರೆ. ಅಧಿಕಾರ ಹಂಚಿಕೆ ವಿವಾದವೇ ಕಾಂಗ್ರೆಸ್ ನಲ್ಲಿ ದೊಡ್ಡ ಸಮಸ್ಯೆಯಾಗಿ ಮುಂದಿನ ದಿನಗಳಲ್ಲಿ ಬಿಕ್ಕಟ್ಟು ಉಂಟಾದರೆ ಪರಿಸ್ಥಿತಿಯ ಲಾಭ ಪಡೆದು ಕಾಂಗ್ರೆಸ್ ನ ಸಿದ್ದರಾಮಯ್ಯ ಗುಂಪಿನ ಜತೆ ಸ್ನೇಹ ಬೆಳೆಸುವ ಆಲೋಚನೆ ಕುಮಾರಸ್ವಾಮಿಯವರದ್ದು. ಆ ಕಾರಣಕ್ಕೇ ಅವರು ಡಿ.ಕೆ.ಶಿವಕುಮಾರ್ ಅವರನ್ನು ವಿರೋಧಿಸುತ್ತಿದ್ದಾರೆ.
ರಾಜಕೀಯ ಬೆಳವಣಿಗೆಗಳ ಮತ್ತೊಂದು ಮಗ್ಗುಲನ್ನು ನೋಡಿದರೆ ಬಿಜೆಪಿಯಲ್ಲೂ ಇದೇ ರೀತಿಯ ಬೆಳವಣಿಗೆ ನಡೆಯುತ್ತಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಪ್ರತ್ಯೇಕವಾಗಿ ಆಪ್ತರಾದ ಪ್ರಮುಖ ನಾಯಕರ ಗುಂಪು ರಾಜಕೀಯ ಬೆಳವಣಿಗೆಗಳ ವಿಚಾರದಲ್ಲಿ ಪ್ರತ್ಯೇಕ ಚರ್ಚೆಯಲ್ಲಿದೆ. ಎಲ್ಲವೂ ಸಂಖ್ಯಾ ಬಲವನ್ನು ಅವಲಂಬಿಸಿರುವುದರಿಂದ ಮುಂದಿನ ದಿನಗಳಲ್ಲಿ ಎರಡೂ ಪಕ್ಷಗಳಲ್ಲಿ ನಡೆಯುವ ಸಂಖ್ಯಾ ಬಲದ ಲೆಕ್ಕಾಚಾರ ಮತ್ತು ಬೆಳವಣಿಗೆಗಳ ಮೇಲೆ ರಾಜಕೀಯ ವಿದ್ಯಮಾನಗಳು ನಿಂತಿವೆ. ಮುಂದಿನ ದಿನಗಳಲ್ಲಿ ಕರ್ನಾಟಕದ ಅಧಿಕಾರ ರಾಜಕಾರಣದಲ್ಲಿ ಬಿಜೆಪಿ ಕಾಂಗ್ರೆಸ್ ಪಕ್ಷಗಳಲ್ಲಿರುವ ಅತೃಪ್ತರು ಒಂದೇ ವೇದಿಕೆಯಡಿ ಒಟ್ಟುಗೂಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.
ಸಿದ್ದರಾಮಯ್ಯ ವಿರುದ್ಧದ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಜಾರಿ ನಿರ್ದೇಶನಾಲಯ ಹೂಡಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಲೋಕಾಯುಕ್ತವೂ ಅವರನ್ನು ಆರೋಪ ಮುಕ್ತರನ್ನಾಗಿಸಿದೆ. ತೀರಾ ಇತ್ತೀಚೆಗೆ ಸಹಕಾರ ಸಚಿವ ಕೆ.ಎನ್ .ರಾಜಣ್ಣ ಮುಂದಿನ ವರ್ಷವೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಬಜೆಟ್ ಮಂಡಿಸುತ್ತಾರೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಪೂರಕ ಎಂಬಂತೆ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಕೂಡಾ ಐದು ವರ್ಷ ಮುಖ್ಯಮಂತ್ರಿಯಾಗಿ ಅವಧಿಯನ್ನು ಸಿದ್ದರಾಮಯ್ಯ ಪೂರೈಸುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.
2028 ರ ಚುನಾವಣೆ ವರೆಗೆ ಶಿವಕುಮಾರ್ ಮುಖ್ಯಮಂತ್ರಿಯಾಗಲು ಕಾಯುತ್ತಾರೆ ಎಂಬ ವರದಿಗಳು ಕೆಲವು ಕಡೆ ಬಿತ್ತರವಾಗುತ್ತಿವೆ. ರಾಜಕಾರಣ ಎಂಬುದು ಸಮಾಜಸೇವೆಯ ಮುಖವಾಡ ಹೊತ್ತ ಅಧಿಕಾರದ ಸುತ್ತ ಕೇಂದ್ರೀಕೃತವಾದ ಒಂದು ಆಟ. ಈಗಿನ ಬೆಳವಣಿಗೆ ನೋಡಿದರೆ ಮೇ ತಿಂಗಳ ನಂತರ ಶಿವಕುಮಾರ್ ತಮ್ಮ ನಿಜವಾದ ಚೆದುರಂಗಾಟ ಆರಂಭಿಸುತ್ತಾರೆ. ಇನ್ನು ಮೂರು ವರ್ಷದ ವರೆಗೆ ಅವರು ಕಾಯಲು ಸಿದ್ಧರಿಲ್ಲ. ಅವರ ರಾಜಕೀಯ ಕಾರ್ಯ ತಂತ್ರ ದ ಮುಂದಿನ ಭಾಗ ಏನು? ಎಂಬುದೇ ಈಗ ಕುತೂಹಲ.
Advertisement