ಪಶ್ಚಿಮ ಬಂಗಾಳದಲ್ಲಿ ಹತಾಶ ಹಿಂದುಗಳನ್ನು ಕಂಡಾಗಲೆಲ್ಲ ಗೋಪಾಲ ಮುಖರ್ಜಿ ನೆನಪಾಗುವುದೇಕೆ? (ತೆರೆದ ಕಿಟಕಿ)

ಯಾವ ವಕ್ಫ್ ಕಾಯ್ದೆ ತಿದ್ದುಪಡಿಯು ಸಂಸತ್ತಿನಲ್ಲಿ ಅಂಗೀಕಾರವಾಗಿದೆಯೋ ಅದನ್ನು ತನ್ನ ರಾಜ್ಯದಲ್ಲಿ ಜಾರಿ ಮಾಡುವುದಿಲ್ಲ ಎನ್ನುತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಒಂದೆಡೆ. ಇದರ ಬಲದಲ್ಲೇ ಹಿಂದುಗಳ ವಿರುದ್ಧ ಬೀದಿಗೆ ಇಳಿದದಿರುವ ಮುಸ್ಲಿಂ ಗೂಂಡಾಗಳು ಇನ್ನೊಂದೆಡೆ.
West Bengal
ಬಂಗಾಳ ಹಿಂಸಾಚಾರ
Updated on

ಪಶ್ಚಿಮ ಬಂಗಾಳದ ಬಗ್ಗೆ ಬರೆಯುವುದೆಂದರೆ ಅದೊಂದು ರೀತಿಯ ಹಳಹಳಿಕೆಯೇ ಆಗಿಬಿಡುತ್ತದೆ. ಅಲ್ಲಿನ ಹಿಂಸಾಚಾರ, ಆಡಳಿತದಲ್ಲಿರುವವರಿಂದ ನಿರಂತರ ನಡೆದುಕೊಂಡೇ ಬಂದಿರುವ ಕೋಮು ತುಷ್ಟೀಕರಣ, ಲಾಗಾಯ್ತಿನಿಂದಲೂ ಆ ರಾಜ್ಯದ ಆರ್ಥಿಕ ಅಧಃಪತನ ಇವನ್ನೆಲ್ಲ ಗಮನಿಸುವ ಯಾರಿಗಾದರೂ ಅನಿಸುವುದು ನೇತಾಜಿ, ಬಂಕಿಮ, ಸ್ವಾಮಿ ವಿವೇಕಾನಂದ, ಅರವಿಂದರೇ ಮೊದಲಾದ ಮೇರುವ್ಯಕ್ತಿಗಳ ನೆಲ ಈಗ ಹೇಗಾಗಿಬಿಟ್ಟಿದೆ ಎಂದು.

ವಕ್ಫ್ ವಿರೋಧದ ಹೆಸರಲ್ಲಿ ಏಪ್ರಿಲ್ 8ರಂದು ಪಶ್ಚಿಮ ಬಂಗಾಳದಲ್ಲಿ ಹುಟ್ಟಿಕೊಂಡ ಹಿಂಸೆ ಮತ್ತೆ ಅಲ್ಲಿನ ಹಿಂದುಗಳ ಬದುಕನ್ನು ದುರ್ಭರಗೊಳಿಸಿದೆ. ಆ ಬಗ್ಗೆ ಬರುತ್ತಿರುವ ವಿವರಗಳು ದೇಶದ ಇತರೆಲ್ಲೆಡೆ ಹಿಂದು ಮನಸ್ಸುಗಳನ್ನು ಕ್ರೋಧ, ಹತಾಶೆ, ಅಸಹಾಯಕತೆಗಳ ಮಿಶ್ರಭಾವಗಳಿಗೆ ನೂಕುತ್ತಿವೆ.

ಬಂಗಾಳ ಹೀಗೇಕಾಗಿಹೋಯಿತು ಎಂಬ ಪ್ರಶ್ನೆಯ ಬೆಂಬತ್ತಿ

ಭಾರತದ ಸ್ವಾತಂತ್ರ್ಯ ಇತಿಹಾಸದಲ್ಲಿ ನಿಜಾರ್ಥದಲ್ಲಿ ಬ್ರಿಟಿಷರ ಎದೆ ನಡುಗಿಸಿದ್ದು ಕ್ರಾಂತಿಕಾರಿಗಳ ಹೋರಾಟವೇ. ಈ ಕ್ರಾಂತಿಕಾರಿಗಳು ಭಾರತದ ಬೇರೆ ಬೇರೆ ಭಾಗಗಳಿಂದ ಬಂದಿದ್ದಾರಾದರೂ ಕೋಲ್ಕತಾ ಮತ್ತು ಪಂಜಾಬುಗಳು ದೊಡ್ಡಮಟ್ಟದಲ್ಲಿ ಕ್ರಾಂತಿಕಾರಿಗಳನ್ನು ದೇಶಕ್ಕೆ ಕೊಟ್ಟ ಪ್ರಾಂತ್ಯಗಳಾಗಿದ್ದವು. ವಿಪರ್ಯಾಸ ಇಲ್ಲವೇ ಚರಿತ್ರೆಯ ಕ್ರೂರ ವ್ಯಂಗ್ಯ ಹೇಗಿದೆ ನೋಡಿ. ಇದೇ ಪ್ರಾಂತ್ಯಗಳ ಜನರೇ ಸ್ವಾತಂತ್ರ್ಯ ಬರುತ್ತಲೇ ವಿಭಜನೆಯ ಕಾರಣಕ್ಕೆ ಅತಿಹೆಚ್ಚು ಪೆಟ್ಟು ತಿಂದರು. ಅಷ್ಟೆಲ್ಲ ವರ್ಷ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ರಕ್ತ ಸುರಿಸಿಕೊಂಡು ಹೋರಾಡಿದ್ದ ಬಂಗಾಳ ಹಾಗೂ ಪಂಜಾಬಿನ ಎಷ್ಟೋ ಸ್ವಾತಂತ್ರ್ಯ ಸೇನಾನಿಗಳು ಮತ್ತವರ ಕುಟುಂಬಕ್ಕೆ ತಮ್ಮ ಮನೆಮಾರುಗಳೇ ವಿಭಜನೆ ವೇಳೆ ತಪ್ಪಿಹೋಗುವ ದುಸ್ತರ ಪರಿಸ್ಥಿತಿ ಎದುರಾಯಿತು.

ಇತ್ತ, ಬ್ರಿಟಿಷರು ಹೋದ ಜಾಗದಲ್ಲಿ ಆಡಳಿತ ವ್ಯವಸ್ಥೆಗೆ ಯಾವ ಕಾಂಗ್ರೆಸ್ ಬಂದು ಕುಳಿತಿತೋ ಅಲ್ಲಿಯೂ ಕ್ರಾಂತಿಕಾರಿಗಳ ಪಾಳೆಯದಲ್ಲಿದ್ದವರು ಬಹುತೇಕ ‘ಅಸ್ಪೃಶ್ಯ’ರಾಗಿದ್ದರು. ಅಂದರೆ, ಯಾರು ಸ್ವಾತಂತ್ರ್ಯಕ್ಕಾಗಿ ರಕ್ತ ಸುರಿಸಿದ್ದರೋ ಅವರಿಗೆ ಭಾರತದ ನೀತಿ ನಿರೂಪಣೆಗಳಲ್ಲಿ ಭಾಗವಹಿಸುವ ಅವಕಾಶವೇ ಸಿಗದೇ, ಅವರ ಕುಟುಂಬಗಳು ಸಾಧಾರಣ ಬದುಕನ್ನು ಉಳಿಸಿಕೊಳ್ಳುವುದಕ್ಕೂ ಹೆಣಗಾಡಬೇಕಾಯಿತು. ಅವತ್ತಿಗೆ ಪಾಕಿಸ್ತಾನ ಮತ್ತು ಪೂರ್ವ ಪಾಕಿಸ್ತಾನ ಎಂಬ ಎರಡು ಬೇರೆ ಬೇರೆ ತುದಿಯ ತುಂಡುಗಳನ್ನು ಮುಸ್ಲಿಮರಿಗಾಗಿ ಭಾರತದಿಂದ ಕಿತ್ತುಕೊಡುವ ಪ್ರಕ್ರಿಯೆಯಲ್ಲಿ ಆದ ಅವಘಡವಿದು. ಪಶ್ಚಿಮ ಬಂಗಾಳವೇಕೆ ಹಾಗಾಗಿಹೋಗಿದೆ, ಪಂಜಾಬ್ ಏಕೆ ಹೀಗಾಗುತ್ತಿದೆ ಎಂಬ ಹಳಹಳಿಕೆಗಳಿಗೆಲ್ಲ ಉತ್ತರ ಇದುವೇ.

West Bengal
ನಾಸಿಕ್ ನಲ್ಲಿ ದರ್ಗಾ ಧ್ವಂಸ ವೇಳೆ ಘರ್ಷಣೆ: 21 ಪೊಲೀಸರಿಗೆ ಗಾಯ, 15 ಮಂದಿ ಬಂಧನ; Video

ಇವಿಷ್ಟು ಹಿನ್ನೆಲೆ ಇರಿಸಿಕೊಂಡು, ಈಗ ಮತ್ಯಾವ ದಾರಿಯೂ ಕಾಣದೇ ಬಂಗಾಳದಲ್ಲಿ ನೇತಾಜಿ ಹುಟ್ಟಿಬರಲಿ, ಅರವಿಂದರ ವಿಚಾರಗಳು ಧ್ವನಿಸಲಿ ಎಂದೆಲ್ಲ ಆಶಿಸುವುದು, ಅದೆಷ್ಟೇ ಉದಾತ್ತವೇ ಆಗಿದ್ದರೂ ಈ ಹೊತ್ತಿನಲ್ಲಿ ಪ್ರಾಯೋಗಿಕವೆನಿಸುತ್ತಿಲ್ಲ. ಒಂದು ಸಾಮಾಜಿಕ ಪರಿವರ್ತನೆಗೆ ನಿರ್ದಿಷ್ಟ ಅವಧಿ ಹಿಡಿಯುತ್ತದೆ. ಹೀಗಾಗಿ, ನಾವು ಆಶಿಸುವ ಹಾಗೆ ಪಶ್ಚಿಮ ಬಂಗಾಳದಲ್ಲಿ ಸುಧಾರಕ ವ್ಯಕ್ತಿಯಾರೋ ಮುನ್ನೆಲೆಗೆ ಬಂದುಬಿಡುತ್ತಾರೆ ಎಂಬ ಭರವಸೆಯನ್ನೇ ಇಟ್ಟುಕೊಂಡರೂ, ಅಂಥವರು ಬಂದು ಹರಡಿಕೊಳ್ಳುವಷ್ಟರಲ್ಲಿ ಅಲ್ಲಿನ ಹಿಂದು ಜನಸಂಖ್ಯೆಯೇ ಗಣನೆಗೆ ಸಿಗದ ರೀತಿಯಲ್ಲಿ ಕುಸಿದುಬಿಟ್ಟಿರಬಹುದೇನೋ.

ಹೀಗಾಗಿ, ಈ ಹೊತ್ತಿನಲ್ಲಿ ಪಶ್ಚಿಮ ಬಂಗಾಳದ ಬಗ್ಗೆ ಏನೋ ಆಶಯ ಹೇಳಿಕೊಳ್ಳುವುದಕ್ಕಾದರೂ ತಕ್ಷಣಕ್ಕೆ ಚುರುಕು ಮುಟ್ಟಿಸಬಲ್ಲ ಉದಾಹರಣೆಗಳು ಬೇಕು. ಇವತ್ತು ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯ ಮೂಲಕ ಹಿಂದುಗಳನ್ನು ಹೆದರಿಸುತ್ತಿರುವ ಹಿಂಸಾಚಾರ ತೆರೆದುಕೊಂಡಿರುವ ಹೊತ್ತಲ್ಲಿ ಸಮಾಜ ನೆನಪಿಸಿಕೊಳ್ಳಬೇಕಾದ ಉದಾಹರಣೆ ಎಂದರೆ ಗೋಪಾಲ ಪಥಾ ಅಥವಾ ಗೋಪಾಲ ಮುಖರ್ಜಿ ಅವರದ್ದು. ಅರೆ, ಇವರ್ಯಾರು ಎಂದು ಕೇಳುವಮಟ್ಟಿಗೆ ಹಿಂದು ಸಮಾಜಕ್ಕೆ ಇಂಥವರ ಪರಿಚಯವೇ ಇಲ್ಲದಿರುವ ಇಂದಿನ ಸನ್ನಿವೇಶ ನಿಜಕ್ಕೂ ಮುಜುಗರದ ವಿಷಯವಾಗಬೇಕು.

ಗೋಪಾಲರು ತೋರಿಸಿದ್ದ ಪ್ರತಿರೋಧದ ಮಾದರಿ

1946ರ ಆಗಸ್ಟ್ 16ರಿಂದ 21. ಕೋಲ್ಕತಾ ಹೊತ್ತಿ ಉರಿದಿತ್ತು, ಹೆಣದ ರಾಶಿ ಮತ್ತು ಆಕ್ರಂದನಗಳನ್ನೇ ಹೊದ್ದುಕೊಂಡಿತ್ತು. ಡೈರೆಕ್ಟ್ ಆ್ಯಕ್ಶನ್ ಡೇ ಹಾಗೂ ಕೋಲ್ಕತಾ ಕಿಲ್ಲಿಂಗ್ ಎಂಬ ಪದಪುಂಜಗಳಿಂದ ಚರಿತ್ರೆ ಆ ದಿನಗಳನ್ನು ಗುರುತಿಸುತ್ತದೆ. ಆಗಿನ್ನೂ ಬಂಗಾಳವು ಪೂರ್ವ ಪಾಕಿಸ್ತಾನವಾಗಿ ವಿಭಜನೆ ಆಗಿರಲಿಲ್ಲ. ಆ ನಿಟ್ಟಿನಲ್ಲಿ ಜಿನ್ನಾ ನೇತೃತ್ವದಲ್ಲಿ ಮುಸ್ಲಿಮರ ಯೋಜನೆ ತಾರಕಕ್ಕೇರಿದ್ದ ಸಂದರ್ಭ. ಇವತ್ತು ಯಾವ ಪಶ್ಚಿಮ ಬಂಗಾಳವೆಂಬ ರಾಜ್ಯ ಭಾರತದ ಜತೆಗಿದೆಯೋ ಅದನ್ನೂ ಒಳಗೊಂಡಂತೆ ಇಡೀ ಬಂಗಾಳವನ್ನು ತಮ್ಮದಾಗಿಸಿಕೊಳ್ಳಬೇಕೆಂಬ ಉದ್ದೇಶ ಮುಸ್ಲಿಂ ಲೀಗಿನದ್ದಾಗಿತ್ತು.

ಜುಲೈ 27-29ರ ಅವಧಿಯಲ್ಲಿ ಸಭೆ ಸೇರಿದ್ದ ಮುಸ್ಲಿಂ ಲೀಗ್ ನೇರ ಕಾರ್ಯಾಚರಣೆಗೆ ಕರೆ ಕೊಟ್ಟಾಗಿತ್ತು. ಇಂಡಿಯಾ ತುಂಡಾಗಲೇಬೇಕು ಇಲ್ಲವೇ ನಾವದನ್ನು ಇಡಿ ಇಡಿಯಾಗಿ ಸುಡುತ್ತೇವೆ ಅಂತ ಮೊಹಮ್ಮದ್ ಅಲಿ ಜಿನ್ನಾ ಹೇಳಿದ್ದ. ಅವತ್ತಿಗೆ ಕೋಲ್ಕತಾದ ಮೇಯರ್ ಆಗಿದ್ದ ಸಯ್ಯದ್ ಮೊಹಮ್ಮದ್ ಉಸ್ಮಾನ್ ಹೇಳಿದ್ದ- “ಮುಸ್ಲಿಮರು ನಾವು ರಾಜಸತ್ತೆಯಲ್ಲಿದ್ದು ಆಳಿದವರು. ಓ ಮುಸ್ಲಿಮರೇ ಹೆದರದೇ ಕತ್ತಿ ತೆಗೆದುಕೊಳ್ಳಿ. ಕಾಫಿರರೇ ನಿಮ್ಮ ಅಂತ್ಯ ಬಂದಿದೆ ಗೊತ್ತಿರಲಿ” ಅಂತ. ಬ್ರಿಟಿಷ್ ಸಾಮ್ರಾಜ್ಯದ ಅಡಿಯಲ್ಲೇ ಅವತ್ತಿಗೆ ಬಂಗಾಳದ ಮುಖ್ಯಮಂತ್ರಿ ಪಟ್ಟದಲ್ಲಿದ್ದ ಹುಸೇನ್ ಶಾಹಿದ್ ಸುರ್ಹಾವರ್ದಿ ತನ್ನ ಭಾಷಣಗಳಲ್ಲಿ “ಶಸ್ತ್ರಸಜ್ಜಿತ ಮುಸ್ಲಿಮರು ಕಾರ್ಯಾಚರಣೆಗೆ ಇಳಿದರೆ ನಾವೇನೂ ಮಾಡಲಾಗುವುದಿಲ್ಲ” ಎನ್ನುವುದರ ಮೂಲಕ ಪರೋಕ್ಷವಾಗಿ ಮುಸ್ಲಿಮರಿಗೆ ಅಭಯವಿತ್ತಿದ್ದ.

West Bengal
ಟ್ರಂಪ್ ಕಂಪನದಡಿ ಜಾಗತಿಕ ಅರ್ಥವ್ಯವಸ್ಥೆ, ಭಾರತೀಯರಿಗೆ ಗೊತ್ತಿರಬೇಕಿರುವ ಸ್ವಚರಿತ್ರೆ! (ತೆರೆದ ಕಿಟಕಿ)

1946ರ ಆಗಸ್ಟ್ 16ರ ಶುಕ್ರವಾರ ಬೆಳಗ್ಗೆ ಇಬ್ಬರು ಬಿಹಾರಿ ಹಾಲು ಮಾರಾಟಗಾರರನ್ನು ಕೊಲ್ಲುವ ಮೂಲಕ ಹಿಂಸೆ ಶುರುವಾಯಿತು. ಹಿಂದುಗಳ ಅಂಗಡಿಗಳು, ಹೊಟೇಲ್, ವ್ಯವಹಾರ ಕೇಂದ್ರಗಳನ್ನೆಲ್ಲ ಮೊದಲೇ ಗುರುತುಮಾಡಿಕೊಂಡಿದ್ದ ಮುಸ್ಲಿಂ ಲೀಗ್ ಒಂದೊಂದಾಗಿ ಅವಕ್ಕೆಲ್ಲ ಬೆಂಕಿ ಹಚ್ಚುತ್ತ ಬಂತು. ನಂತರದ ಹಂತದಲ್ಲಿ ಮುಸ್ಲಿಂ ಗೂಂಡಾಗಳು ಹಿಂದುಗಳ ಮನೆಗೆ ನುಗ್ಗಿದರು. ಆ ಗುಂಪು ಪುರುಷರು ಮಕ್ಕಳನ್ನು ನಿರ್ದಯವಾಗಿ ಕೊಚ್ಚಿ ಹಾಕಿದರೆ, ಎಲ್ಲ ಇಸ್ಲಾಂ ಕ್ರೌರ್ಯಗಳಲ್ಲಿ ಆಗುವಂತೆ ಹಿಂದು ಮಹಿಳೆಯರಿಗೆ ಕಾದಿದ್ದು ಅತ್ಯಾಚಾರದ ಕ್ರೌರ್ಯ. ಮಹಿಳೆಯರನ್ನು ಎಗ್ಗಿಲ್ಲದೇ ಅಪಹರಿಸಿಕೊಂಡುಹೋಗಿ ಸರಣಿ ಅತ್ಯಾಚಾರಗಳನ್ನು ಮಾಡುತ್ತ ಅವರನ್ನೆಲ್ಲ ಲೈಂಗಿಕ ಗುಲಾಮರನ್ನಾಗಿರಿಸಿಕೊಳ್ಳಲಾಯಿತು. ಅನೇಕ ಇತಿಹಾಸಕಾರರ ವಿಶ್ಲೇಷಣೆ ಪ್ರಕಾರ ಬ್ರಿಟಿಷ್ ಸರ್ಕಾರವು ಪರೋಕ್ಷವಾಗಿ ಇವನ್ನು ಬೆಂಬಲಿಸಿತು. ಏಕೆಂದರೆ, ಕೋಲ್ಕತಾದ ಬೀದಿಗಳಲ್ಲಿ ಸಾವಿರಗಳ ಸಂಖ್ಯೆಯಲ್ಲಿ ಹೆಣ ಬೀಳುತ್ತಿದ್ದರೂ ತ್ವರಿತ ಸೇನಾ ನಿಯೋಜನೆ ಆಗಲೇ ಇಲ್ಲ.

ಆಗ ಎದ್ದು ನಿಂತರು ಗೋಪಾಲ ಮುಖರ್ಜಿ. ಅನುಕೂಲಚಂದ ಮುಖೋಪಾಧ್ಯಾಯ ಎಂಬ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಕ್ಕೆ ಸೇರಿದವರಾಗಿದ್ದರು ಗೋಪಾಲ ಮುಖರ್ಜಿ. ತಮ್ಮ ಕೆಲ ಸ್ನೇಹಿತರ ಜತೆ ಸೇರಿ ‘ಭಾರತ್ ಜಟಿಯಾ ಬಾಹಿನಿ’ ಎಂಬ ಗುಂಪು ರಚಿಸಿ ಹಿಂದುಗಳ ಕೈಗೆ ಪಿಸ್ತೂಲು, ಚಾಕು, ಖಡ್ಗ, ಆ್ಯಸಿಡ್ ಬಾಂಬುಗಳನ್ನು ಕೊಟ್ಟು ಬಲಪಡಿಸಿದರು. ಕೋಲ್ಕತಾದ ವ್ಯಾಯಾಮ ಸಮಿತಿಗಳಲ್ಲಿ ಭಾಗವಹಿಸಿಕೊಂಡಿದ್ದ ಬಂಗಾಳಿಯೇತರ ಹಿಂದುಗಳು ಸಹ ದೊಡ್ಡ ಸಂಖ್ಯೆಯಲ್ಲಿ ಗೋಪಾಲ ಮುಖರ್ಜಿಯವರ ತಂಡಕ್ಕೆ ಕೈಗೂಡಿಸಿದರು. ಆರ್ಯ ಸಮಾಜ ಹಾಗೂ ಹಿಂದು ಮಹಾಸಭಾ ಸದಸ್ಯರ ಬೆಂಬಲವೂ ದೊರೆಯಿತು.

ಆಗಸ್ಟ್ 18ಕ್ಕೆ ಶುರುವಾಯಿತು ನೋಡಿ ಹಿಂದುಗಳ ಪ್ರತಿಘಾತ! ಮುಸ್ಲಿಂ ಲೀಗ್ ದಂಗೆಕೋರರು ಹಾಗೂ ಅತ್ಯಾಚಾರಿಗಳನ್ನು ಹುಡುಕಿ ಹುಡುಕಿ ಕೊಲ್ಲಲಾಯಿತು. ಮುಸ್ಲಿಂ ಅತ್ಯಾಚಾರಿ ಹಾಗೂ ಕೊಲೆಗಡುಕರ ಗುಂಪು ತತ್ತರಿಸಿ ಹೋಯಿತು. ಪಶ್ಚಿಮ ಬಂಗಾಳದಲ್ಲಿ ಹಿಂದುಗಳನ್ನೆಲ್ಲ ಕೊಂದು ಹಾಗೂ ಓಡಿಸಿ ಆ ಪ್ರದೇಶವನ್ನು ಪಾಕಿಸ್ತಾನಕ್ಕೆ ಸೇರಿಸುವುದಕ್ಕೆ ಶುರುವಾಗಿದ್ದ ಹಿಂಸೆ ಅದು. ಆದರೆ ಗೋಪಾಲ ಮುಖರ್ಜಿ ರಂಗ ಪ್ರವೇಶದ ನಂತರ ಮುಸ್ಲಿಂ ಸಾವು-ನೋವುಗಳ ಸಂಖ್ಯೆಯೇ ಮೇಲಾಗಿಹೋಯಿತು. ಹಿಂದುಗಳ ರಕ್ಷಣೆಗೆ ಬೇರೆ ಯಾವ ಮಾರ್ಗಗಳೂ ಸಿಗದಿದ್ದಾಗ ಹುಟ್ಟಿಕೊಂಡ ಈ ಹಿಂಸಾತ್ಮಕ ಪ್ರತಿರೋಧದ ವಿಶೇಷವೇನು ಗೊತ್ತೇ? ಮುಸ್ಲಿಂ ಮಹಿಳೆಯರ ಮೇಲೆ ಯಾವ ರೀತಿಯ ಹಿಂಸೆ-ಅತ್ಯಾಚಾರಗಳೂ ಆಗದಂತೆ ಈ ಹಿಂದು ಪ್ರತಿರೋಧವು ಎಚ್ಚರಿಕೆ ವಹಿಸಿತ್ತು.

ಯಾವ ಸುರ್ಹಾವರ್ದಿ ಬಂಗಾಳದಿಂದ ಹಿಂದುಗಳನ್ನು ಇಲ್ಲವಾಗಿಸಿ ಅದನ್ನು ಸಂಪೂರ್ಣ ಪಾಕಿಸ್ತಾನಕ್ಕೆ ಸೇರಿಸಬೇಕೆಂದುಕೊಂಡಿದ್ದನೋ ಆತ ಆಗಸ್ಟ್ 20ರ ವೇಳೆಗೆಲ್ಲ ಮಂಡಿಯೂರಿಬಿಟ್ಟಿದ್ದ. ದಯವಿಟ್ಟು ನಿಮ್ಮವರಿಗೆ ಶಸ್ತ್ರಗಳನ್ನು ಕೆಳಗಿಳಿಸುವಂತೆ ಹೇಳಿ, ಸಾಕು ಮಾಡಿ ಇದನ್ನು ಎಂದು ಗೋಪಾಲ ಮುಖರ್ಜಿಯವರಿಗೆ ಬಹಿರಂಗವಾಗಿ ಮನವಿ ಮಾಡಿಕೊಂಡ. ಅದನ್ನು ಆಮೇಲೆ ಪರಿಗಣಿಸೋಣ, ಮೊದಲು ಮುಸ್ಲಿಂ ಲೀಗಿನವರು ನಿಶ್ಶಸ್ತ್ರರಾಗಲಿ ಹಾಗೂ ಹಿಂದುಗಳ ಮೇಲಿನ ದಾಳಿ ನಿಲ್ಲಿಸಲಿ ಎಂದರು ಗೋಪಾಲ ಮುಖರ್ಜಿ. ಆಗಸ್ಟ್ 21ಕ್ಕೆ ಬ್ರಿಟಿಷ್ ಸರ್ಕಾರವು ಸೇನಾ ನಿಯೋಜನೆ ಮಾಡಿ ಅಲ್ಲಿನ ಮುಸ್ಲಿಂ ಲೀಗ್ ಸರ್ಕಾರವನ್ನು ಕಿತ್ತು ಹಾಕಿದ ನಂತರ ಪರಿಸ್ಥಿತಿ ಹತೋಟಿಗೆ ಬಂತು.

ಅದರ ಬೆನ್ನಲ್ಲೇ ಗಾಂಧೀಜಿಯವರು ಕೋಲ್ಕತಾದ ಹಿಂದುಗಳೆಲ್ಲ ಶಸ್ತ್ರ ತ್ಯಜಿಸಬೇಕೆಂದು ಕರೆ ಕೊಟ್ಟರು. “ನಿಮ್ಮ ಮಾತಿಗೆ ಒಪ್ಪಿ ಶಸ್ತ್ರ ಕೆಳಗಿಡುವುದಿಲ್ಲ. ಕೋಲ್ಕತಾದ ಬೀದಿಗಳಲ್ಲಿ ಹಿಂದುಗಳ ಹೆಣಗಳು ಬೀಳುತ್ತಿದ್ದಾಗ ನೀವೆಲ್ಲಿದ್ದಿರಿ?” ಎಂದು ಪ್ರತಿಕ್ರಿಯಿಸಿದ್ದರು ಗೋಪಾಲ ಮುಖರ್ಜಿ. 2005ರಲ್ಲಿ ತೀರಿಕೊಂಡ ಗೋಪಾಲ ಮುಖರ್ಜಿ ಅವರ ನೆನಪೀಗ ವಿಸ್ಮೃತಿಗೆ ಸರಿದುಹೋಗಿದೆ.

West Bengal
ಭೂಕಂಪ ಈ ಕ್ಷಣದ ಬದುಕನ್ನಷ್ಟೇ ಅಲ್ಲಾಡಿಸುವುದಿಲ್ಲ, ಚರಿತ್ರೆಯ ಗತಿಯನ್ನೇ ಬದಲಿಸುತ್ತದೆ! (ತೆರೆದ ಕಿಟಕಿ)

ಹಿಂದುಗಳು ಈಗಲ್ಲಿ ಹೇಳುತ್ತಿರುವುದೇನು?

ಈಗ ವರ್ತಮಾನದ ಮುರ್ಶಿದಾಬಾದ್ ಹಿಂಸಾಕಾಂಡಕ್ಕೆ ಮರಳುವುದಾದರೆ, ಇದೂ ಸಂವಿಧಾನವನ್ನು ಪಕ್ಕಕ್ಕಿರಿಸಿ ನೇರ ಕಾರ್ಯಾಚರಣೆ ಮಾಡಿಕೊಳ್ಳುತ್ತೇವೆ ಎಂಬಂತಿರುವ ಮಾದರಿಯೇ. ಯಾವ ವಕ್ಫ್ ಕಾಯ್ದೆ ತಿದ್ದುಪಡಿಯು ಸಂಸತ್ತಿನಲ್ಲಿ ಅಂಗೀಕಾರವಾಗಿದೆಯೋ ಅದನ್ನು ತನ್ನ ರಾಜ್ಯದಲ್ಲಿ ಜಾರಿ ಮಾಡುವುದಿಲ್ಲ ಎನ್ನುತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಒಂದೆಡೆ. ಇದರ ಬಲದಲ್ಲೇ ಹಿಂದುಗಳ ವಿರುದ್ಧ ಬೀದಿಗೆ ಇಳಿದದಿರುವ ಮುಸ್ಲಿಂ ಗೂಂಡಾಗಳು ಇನ್ನೊಂದೆಡೆ.

ಮುಸ್ಲಿಂ ಕೊಲೆಗಡುಕ ಗುಂಪು 72ರ ಹರೆಯದ ಹರ್ಗೊಬಿಂದೊ ದಾಸ್ ಹಾಗೂ ಅವರ ಮಗ 40ರ ಹರೆಯದ ಚಂದನ ದಾಸರನ್ನು ಮನೆಯಿಂದ ಹೊರಗೆಳೆದು ಕೊಂದು ಹಾಕಿತು. ಬೀದಿ ಬೀದಿಗಳಲ್ಲಿ ತೆರೆದುಕೊಂಡ ಹಿಂಸಾಚಾರವು ಹಿಂದುಗಳನ್ನು ಪಕ್ಕದ ಜಿಲ್ಲೆಗಳಿಗೆ ಕಾಲ್ಕೀಳುವಂತೆ ಮಾಡಿದೆ. ಅಲ್ಲಿನ ಪೊಲೀಸರೇನೋ ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎನ್ನುತ್ತಿದ್ದಾರೆ, ಆದರೆ ಹಿಂದುಗಳ ಬದುಕಂತೂ ಕದಡಿದೆ.

ಎಂಟು ವರ್ಷದ ಮಗುವನ್ನು ತೊಡೆ ಮೇಲಿರಿಸಿಕೊಂಡು ಹೈಸ್ಕೂಲ್ ಒಂದರ ನಿರಾಶ್ರಿತ ಶಿಬಿರದಲ್ಲಿರುವ ಸಪ್ತಮಿ ಮೊಂಡಲ್, ಪತ್ರಿಕೆಯೊಂದರ ಜತೆ ಮಾತನಾಡುತ್ತ ತನಗೆ ಊರಿಗೆ ಮರಳುವುದಕ್ಕೇ ಭಯ ಹಿಡಿದಿದೆ ಎನ್ನುತ್ತಿದ್ದಾಳೆ. ಆಕೆಯ ಜತೆ 400 ಹಿಂದುಗಳ ಗುಂಪು ಅಲ್ಲಿ ಆಶ್ರಯ ಪಡೆದಿದೆ. ಬಿ ಎಸ್ ಎಫ್ ಯೋಧರು ಇಲ್ಲದಿದ್ದರೆ ನಾವೂ ದೊಂಭಿಗೆ ಸಿಲುಕಿ ಹೆಣವಾಗುತ್ತಿದ್ದೆವು, ಅವರೇ ನಮ್ಮನ್ನು ಬೇರೆ ಸ್ಥಳಕ್ಕೆ ದಾರಿ ತೋರಿಸಿದರು ಎಂದು ನಿರಾಶ್ರಿತರು ಹೇಳುತ್ತಿದ್ದಾರೆ. ಧುಲಿಯಾನ್ ನಿವಾಸಿ ಪ್ರಜಕ್ತಾ ದಾಸ್, “ಮತ್ತಿಲ್ಲಿ ಹಿಂಸಾಚಾರ ಶುರುವಾಗಬಾರದು ಎಂದಾದರೆ ಕೇಂದ್ರದ ಪಡೆ ಶಾಶ್ವತವಾಗಿ ಇಲ್ಲಿರಬೇಕು” ಎನ್ನುತ್ತಿದ್ದರೆ ಜತೆಗಿರುವ ಹಿಂದುಗಳೆಲ್ಲ ಹೌದೆಂದು ಧ್ವನಿಗೂಡಿಸುತ್ತಿದ್ದಾರೆ.

ಗೋಪಾಲ ಮುಖರ್ಜಿ ನೆನಪಾಗುತ್ತಿದ್ದಾರೆ…

- ಚೈತನ್ಯ ಹೆಗಡೆ

cchegde@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com