
ಮ್ಯಾನ್ಮಾರನ್ನು ಅಲ್ಲಾಡಿಸಿಬಿಟ್ಟಿರುವ ಭೂಕಂಪದ ಬಗ್ಗೆ ಭಯಾನಕ, ಕರುಣಾಜನಕ ವಿವರಗಳು ಹೊರಬೀಳುತ್ತಲೇ ಇವೆ. ಅಲ್ಲಿರುವುದು ಮಿಲಿಟರಿ ಆಡಳಿತವಾದ್ದರಿಂದ ಮಾಧ್ಯಮ ಪೂರ್ತಿಯಾಗಿ ಸರ್ಕಾರದ ನಿಯಂತ್ರಣದಲ್ಲಿದೆ. ಅಲ್ಲದೇ ವಿದೇಶಿ ಮಾಧ್ಯಮಕ್ಕೆ ಅಲ್ಲಿ ಅಷ್ಟಾಗಿ ಅವಕಾಶವೇನೂ ಇಲ್ಲ. ಹೀಗಾಗಿ ಭೂಕಂಪದ ವಿಷಯದಲ್ಲಿ ಅಲ್ಲಿಂದ ಹೊರಬೀಳುತ್ತಿರುವ ಮಾಹಿತಿಗಳು ತುಂಬ ನಿಯಂತ್ರಿತವಾಗಿವೆ, ಸ್ಪಷ್ಟ ಚಿತ್ರಣವೇನೂ ಗೊತ್ತಾಗುತ್ತಿಲ್ಲ ಎಂಬುದು ಸುದ್ದಿ ವಿಶ್ಲೇಷಕರ ಒಟ್ಟಾರೆ ಅಭಿಪ್ರಾಯ.
ಅದೇನೇ ಇರಲಿ, ರಿಕ್ಟರ್ ಮಾಪನದಲ್ಲಿ ಏಳಕ್ಕಿಂತ ಹೆಚ್ಚಿನ ಪ್ರಮಾಣದ ಯಾವುದೇ ಭೂಕಂಪವು ಪ್ರಾಣ ಮತ್ತು ಆಸ್ತಿಹಾನಿಗಳನ್ನು ಮಾಡುವಂಥದ್ದೇ. ಸುಮಾರು ಎರಡೂವರೆ ಸಾವಿರ ಮಂದಿ ಸತ್ತಿದ್ದಾರೆ ಹಾಗೂ ನಾಲ್ಕೂವರೆ ಸಾವಿರ ಮಂದಿ ಗಾಯಗೊಂಡಿದ್ದಾರೆ ಎಂಬ ಲೆಕ್ಕವನ್ನು ಅಲ್ಲಿನ ಮಿಲಿಟರಿ ಆಡಳಿತ ಕೊಟ್ಟಿದೆ. ಆದರೆ, ಅಮೆರಿಕದ ಜಿಯಾಲಜಿಕಲ್ ಸರ್ವೆ ಅಂದಾಜಿನ ಪ್ರಕಾರ ಕನಿಷ್ಟ 10,000 ಮಂದಿ ಮ್ಯಾನ್ಮಾರ್ ಭೂಕಂಪದಲ್ಲಿ ಸತ್ತಿದ್ದಾರೆ. ಇವು ಸಾವು-ನೋವಿನ ಕತೆಯಾದರೆ, ಈ ಮಟ್ಟದ ಭೂಕಂಪವು ಯಾವುದೇ ದೇಶದ ಆರ್ಥಿಕ ಶಕ್ತಿಯನ್ನೇ ಉಡುಗಿಸಿಬಿಡುತ್ತದೆ.
ಒಂದು ಮಹಾಭೂಕಂಪನವೆಂಬುದು ಆ ಕ್ಷಣದ ಸಾವು-ನೋವಿನ ವಿದ್ಯಮಾನವಾಗಿ ಮಾತ್ರವೇ ಉಳಿಯುವುದಿಲ್ಲ. ಅದು ಚರಿತ್ರೆ-ಭೂಗೋಳಗಳನ್ನು ಬದಲಿಸುತ್ತದೆ. ಹಾಗೆಂದೇ ಅದು ಭಾಗ್ಯ-ದೌರ್ಭಾಗ್ಯಗಳ ಆಟವೂ ಆಗಿರುತ್ತದೆ. ಈಗ ಮ್ಯಾನ್ಮಾರನ್ನೇ ತೆಗೆದುಕೊಳ್ಳಿ. ತಕ್ಷಣಕ್ಕೆ ಕಾಣುತ್ತಿರುವ ಸಾವು-ನೋವಿನ ಸಂಖ್ಯೆಗಳು ಹಾಗೂ ಆರ್ಥಿಕ ನಷ್ಟಗಳ ಆಚೆಗೆ ಅಲ್ಲಿನ ಜನಮಾನಸದಲ್ಲಿ ಈ ದುರಂತವು ಹೊಸದೊಂದು ವ್ಯಾಖ್ಯಾನವನ್ನೂ ಹುಟ್ಟಿಸಿದೆ! ಮ್ಯಾನ್ಮಾರ್ ಶಕುನಗಳನ್ನು ಬಹುವಾಗಿ ನಂಬುವ ಸಮಾಜ.
ಅಲ್ಲಿನ ಮಿಲಿಟರಿ ಆಡಳಿತದ ಪ್ರಮುಖರೂ ಹಾಗೆಯೇ. 1962 ಮತ್ತು 1988ರ ಅವಧಿಗೆ ಮಿಲಿಟರಿ ಅಧಿಕಾರ ನಡೆಸಿದ್ದ ಜನರಲ್ ನೆ ಮಿಂಗ್ ಎಂಬಾತ ಅಲ್ಲಿನ ಕರೆನ್ಸಿಯ ಹಲವು ಮುಖಬೆಲೆ ನೋಟುಗಳನ್ನೆಲ್ಲ ಅಮಾನ್ಯಗೊಳಿಸಿ, 45 ಮತ್ತು 90 ಕ್ಯಾತ್ (ಮ್ಯಾನ್ಮಾರ್ ಕರೆನ್ಸಿ) ಮುಖಬೆಲೆಯ ನೋಟುಗಳನ್ನು ಹೊರಡಿಸಿದ್ದ. ಈ ಎರಡೂ ಸಂಖ್ಯೆಗಳ ವಿಷಯದಲ್ಲಿ ಅವುಗಳ ಎರಡು ಸಂಖ್ಯೆಗಳನ್ನು ಕೂಡಿಸಿದಾಗ 9 ಬರುತ್ತದೆ ಹಾಗೂ 9 ಮಂಗಳಕರ ಎಂಬ ಯೋಚನೆಯೇ ಹೀಗೆ ಮಾಡುವುದಕ್ಕೆ ಪ್ರೇರೇಪಿಸಿತ್ತು. ಸೂರ್ಯಕಾಂತಿ ಹೂವು ಶುಭ ತರುತ್ತದೆ ಎಂದು ಜ್ಯೋತಿಷಿಗಳು ಹೇಳಿದ್ದಾರೆಂಬ ಕಾರಣಕ್ಕೆ 2007ರಲ್ಲಿ ಅಲ್ಲಿನ ಹಲವು ಪ್ರಾಂತಗಳ ರೈತರಿಗೆ ಆ ಬೆಳೆಯನ್ನು ಬೆಳೆಯುವುದನ್ನು ಕಡ್ಡಾಯಗೊಳಿಸಲಾಗಿತ್ತು.
ಈಗಿನ ಮಿಲಿಟರಿ ಸರ್ವಾಧಿಕಾರಿ ಮಿನ್ ಅಂಗ್ ಹ್ಲಯಾಂಗ್ ಸಹ ಶಕುನಗಳನ್ನು ನಂಬುವಾತ ಎಂಬ ಮಾತಿದೆ. ಆತ ಮ್ಯಾನ್ಮಾರಿನ ವಾರ್ಷಿಕ ಮಿಲಿಟರಿ ಪರೇಡಿನಲ್ಲಿ ಭಾಗವಹಿಸಿದ ಒಂದು ದಿನದ ನಂತರ ಆ ದೇಶವನ್ನು ಭೂಕಂಪವು ಕಾಡಿದೆಯಾದ್ದರಿಂದ ಇದು ಆತನ ಪತನದ ಸೂಚನೆ ಎಂದೆಲ್ಲ ಅಲ್ಲಿನ ಜನರ ಮಧ್ಯೆ ಚರ್ಚೆ ಶುರುವಾಗಿರುವುದಾಗಿ ವರದಿಗಳಾಗುತ್ತಿವೆ. ಇದನ್ನೇ ಅಲ್ಲಿನ ಜನ ಬಲವಾಗಿ ನಂಬುತ್ತ ಹೋಗಿಬಿಟ್ಟರೆ ಅದು ಮುಂದೆ ಸರ್ವಾಧಿಕಾರಿ ವಿರುದ್ಧದ ಜನಾಂದೋಲನ ರೂಪುಗೊಳ್ಳುವುದಕ್ಕೂ ಕಾರಣವಾಗಿಬಿಡಬಹುದು. ಇತ್ತ, ಕೆಲವು ವಾಸ್ತವ ಮತ್ತು ವ್ಯಾವಹಾರಿಕ ನೆಲೆಗಟ್ಟನ್ನು ಗಮನಿಸುವುದಾದರೂ ಈ ಭೂಕಂಪವು ಮಿಲಿಟರಿ ಆಡಳಿತಕ್ಕೆ ಹೆಚ್ಚಿನ ತಲೆನೋವನ್ನೇ ತಂದೊಡ್ಡಿದೆ. ಏಕೆಂದರೆ, ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ಯಾವುದೇ ಪ್ರಜಾಪ್ರಭುತ್ವ ಸರ್ಕಾರವು ಜಾಗತಿಕ ನೆರವನ್ನು ಒದಗಿಸಿಕೊಳ್ಳುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿರುತ್ತದೆ. ಮಿಲಿಟರಿ ಸರ್ವಾಧಿಕಾರದ ರಾಷ್ಟ್ರಗಳಿಗೆ ಆಮಟ್ಟಿಗಿನ ನೆರವು ಹರಿದುಬರುವುದು ಕೂಡ ಕಷ್ಟವೇ. ಆದ್ದರಿಂದಲೇ, ಮ್ಯಾನ್ಮಾರಿನ ಭೂಕಂಪದ ದುರಂತವು ಕೇವಲ ವರ್ತಮಾನವನ್ನಷ್ಟೇ ಪ್ರಭಾವಿಸುತ್ತಿಲ್ಲ, ಬದಲಿಗೆ ಚರಿತ್ರೆ ನಿರ್ಮಾಣದ ಸಾಧ್ಯತೆಗಳನ್ನೂ ಇರಿಸಿಕೊಂಡಿದೆ ಎಂಬುದು ಸೋಜಿಗದ ಅಂಶ.
ಈಗ ಭಾರತಕ್ಕೂ ಪಾಕಿಸ್ತಾನಕ್ಕೂ ಇರುವ ಒಂದು ಚೌಕಾಶಿ ಸಾಧನ ಎಂದರೆ ಸಿಂಧು ನದಿ. ಮೋದಿ ಸರ್ಕಾರ ಬಂದಾಗಿನಿಂದ ಸಿಂಧು ನದಿ ನೀರನ್ನು ಹೆಚ್ಚಿನ ಮಟ್ಟದಲ್ಲಿ ಭಾರತದಲ್ಲೇ ಹಿಡಿದಿಟ್ಟುಕೊಳ್ಳುವ ಯೋಜನೆಗಳಾಗುತ್ತಿವೆ. ಅಂತಾರಾಷ್ಟ್ರೀಯ ನೀರು ಹಂಚಿಕೆ ಕಾನೂನುಗಳ ಪ್ರಕಾರ ಇದು ತಪ್ಪು ಎಂದೆಲ್ಲ ಪಾಕಿಸ್ತಾನ ವಾದಿಸುವುದನ್ನೂ ಕೇಳಿದ್ದೇವೆ. ಅದೇನೇ ಇದ್ದರೂ, ಸದ್ಯಕ್ಕೆ ಸಿಂಧು ಹರಿವಿನ ಪ್ರಾರಂಭಿಕ ಮಾರ್ಗ ಭಾರತದಲ್ಲೇ ಇದ್ದರೂ ಅದರ ಬಹುಪಾಲು ಹರಿವು ಪಾಕಿಸ್ತಾನದಲ್ಲಿದೆ. ಅಲ್ಲದೇ ಭಾರತದಲ್ಲಿರುವ ಸೀಮಿತ ಹರಿವಿನ ಪ್ರದೇಶದಲ್ಲೇ ಅದಕ್ಕೆ ದೊಡ್ಡಮಟ್ಟದ ತಡೆ ನಿರ್ಮಿಸಿ, ಪಾಕಿಸ್ತಾನದ ಕಡೆ ಹರಿವನ್ನು ಪ್ರತಿಬಂಧಿಸುವ ಹಾಗೆ ಮಾಡುವುದು ಪ್ರಾಯೋಗಿಕವಾಗಿ ಕಷ್ಟದ ಕೆಲಸ.
ಆದರೆ, ನಿಮಗೆ ಗೊತ್ತೇ? ಕೆಲವೇ ಶತಮಾನಗಳ ಹಿಂದೆ ಸಿಂಧು ನದಿಯ ಹರಿವಿನ ಹಾದಿ ಅದಾಗಿರಲೇ ಇಲ್ಲ. ಸಿಂಧು ನದಿಯ ಬಹುದೊಡ್ಡ ಪ್ರವಾಹವು ಇವತ್ತಿನ ಗುಜರಾತಿನ ರಣ್ ಆಫ್ ಕಚ್ ಬಳಿ ಹರಿದು ಅರಬ್ಬಿ ಸಮುದ್ರಕ್ಕೆ ಸೇರುತ್ತಿತ್ತು. 1819ರಲ್ಲಿ ಸಂಭವಿಸಿದ ಮಹಾಭೂಕಂಪವೊಂದು ಸಿಂಧುವಿನ ಹರಿವನ್ನು ಸಿಂಧ್ ಪ್ರಾಂತ್ಯ ಹಾಗೂ ಕರಾಚಿಯ ಕಡೆಗೆ ತಿರುಗಿಸಿಬಿಟ್ಟಿತು.
ಇವತ್ತಿಗೆ ಮರುಭೂಮಿಯಾಗಿರುವ ಕಛ್ ಪ್ರಾಂತ್ಯದಲ್ಲಿ ಹಿಂದೊಮ್ಮೆ ನಗರವೇ ಎದ್ದು ನಿಂತಿತ್ತು ಎಂಬುದಕ್ಕೆ 1960ರಲ್ಲಿ ಧೊಲವಿರಾದಲ್ಲಿ ಸಿಕ್ಕ ಕುರುಹುಗಳೇ ಸಾಕ್ಷಿ. 1990ರ ವೇಳೆಗೆ ಹೆಚ್ಚಿನ ಉತ್ಖನನಗಳು ನಡೆದು ಧೊಲವಿರಾ ಎಂಬುದು ಹರಪ್ಪ ನಾಗರಿಕತೆಯ ಪ್ರಮುಖ ನಗರಗಳಲ್ಲಿ ಒಂದಾಗಿತ್ತು ಎಂಬುದು ದೃಢಪಟ್ಟಿದೆ. ನಾಗರಿಕತೆಗಳು ನದಿ ತಟದಲ್ಲೇ ಬೆಳೆದವು ಎಂಬ ಅಂಶ ಗಣನೆಗೆ ತೆಗೆದುಕೊಂಡಾಗ, ಅವತ್ತಿಗೆ ಸಿಂಧು ಹರಿವು ಅಲ್ಲಿನ ಜನಜೀವನವನ್ನು ಪ್ರಭಾವಿಸಿದ್ದ ರೀತಿಯನ್ನು ಊಹಿಸಿಕೊಳ್ಳಬಹುದು.
ಅವತ್ತಿಗೂ ಇವತ್ತಿಗೂ ಜನಜೀವನದ ಸಮೃದ್ಧಿ ಎಂಬುದು ನೀರ ಹರಿವನ್ನು ಅವಲಂಬಿಸಿಕೊಂಡಿದೆ. ನದಿ ಪಾತ್ರಗಳಷ್ಟೇ ಅಲ್ಲದೇ, ಅಂತರ್ಜಲದ ಹಾದಿಯನ್ನೂ ಬದಲಿಸುವಮಟ್ಟಿಗೆ ಭೂಕಂಪ ಹಾಗೂ ಭೂಫಲಕಗಳ ಸರಿದಾಡುವಿಕೆ ಪರಿಣಾಮಕಾರಿ. 1812ರ ಫೆಬ್ರವರಿಯಲ್ಲಿ ಅಮೆರಿಕದ ನ್ಯೂ ಮ್ಯಾಡ್ರಿಡ್ ಭಾಗವನ್ನು ಭೂಕಂಪನವು ಸವರಿತ್ತು. ಆಗ ಹಲವು ತಾಸುಗಳವರೆಗೆ ಹಿಮ್ಮುಖವಾಗಿ ಹರಿದ ಮಿಸಿಸಿಪ್ಪಿ ನದಿಯು (mississippi river) ರೀಲ್ಫೂಟ್ (reelfoot lake) ಎಂಬ ಸರೋವರವನ್ನೇ ಸೃಷ್ಟಿಸಿತು. 2001ರ ಭುಜ್ ಭೂಕಂಪನವು ಒಂದೆಡೆ ಭಾರಿ ನಷ್ಟ, ಸಾವು-ನೋವುಗಳನ್ನು ಉಂಟುಮಾಡಿದರೆ ಇನ್ನೊಂದೆಡೆ ಅಂತರ್ಜಲದ ಜಾಲವನ್ನು ಸಹ ಪ್ರಭಾವಿಸಿದ್ದರ ಪರಿಣಾಮವಾಗಿ ಚಿಕ್ಕ ಚಿಕ್ಕ ಕೆರೆಗಳು ಹುಟ್ಟಿಕೊಂಡವು. 2004ರಲ್ಲಿ ಹಿಂದು ಮಹಾಸಾಗರದಲ್ಲಿ ಆದ ಮಹಾಕಂಪನವು ತ್ಸುನಾಮಿ ಹೆಸರಲ್ಲಿ ಪ್ರಖ್ಯಾತ. ಇದು ಅಂಡಮಾನ್-ನಿಕೊಬಾರ್ ದ್ವೀಪ ಸಮೂಹದ ದಕ್ಷಿಣ ಭಾಗಗಳನ್ನು ಮುಳುಗಿಸಿದರೆ, ಉತ್ತರ ಭಾಗವನ್ನು ಕೆಲವು ಸೆಂಟಿಮೀಟರುಗಳಷ್ಟು ಸಮುದ್ರದಿಂದ ಇನ್ನಷ್ಟು ಎತ್ತರಕ್ಕೆ ತಂದಿತು. ಸುಮಾತ್ರಾದಲ್ಲಿ ಸಹ ಭೂಭಾಗಗಳು ಕೆಲವು ಅಡಿ ಮೇಲೆದ್ದವು.
ಭೂಪಲಕಗಳ ಸರಿದಾಡುವಿಕೆ, ಅವುಗಳ ಒತ್ತಡ ಇವೆಲ್ಲ ಕೇವಲ ಕಟ್ಟಡಗಳನ್ನು ಅಲುಗಾಡಿಸುವುದಷ್ಟೇ ಅಲ್ಲ ಭೂಸಂರಚನೆಯನ್ನೇ ಬದಲಿಸಬಲ್ಲವು ಎಂಬುದು ಸ್ಪಷ್ಟವಾಯಿತಷ್ಟೆ. ಹೀಗಾಗಿ, ಲಿಖಿತ ಇತಿಹಾಸ ಲಭ್ಯತೆಯ ಆಚೆಗಿರುವ ಸಹಸ್ರಮಾನಗಳ ಚರಿತ್ರೆಯನ್ನು ಕಟ್ಟಿಕೊಳ್ಳುವಾಗಲೆಲ್ಲ ಅಲ್ಲಿ ಆಗಿರಬಹುದಾದ ಭೂಸಂರಚನೆಯ ಬದಲಾವಣೆಗಳನ್ನು ಕಲ್ಪನೆಯಲ್ಲಿ ಇರಿಸಿಕೊಳ್ಳಬೇಕೆಂಬುದು ಇಲ್ಲಿ ಸಿಗುತ್ತಿರುವ ಪಾಠ.
ನೀಲೇಶ್ ಓಕ್ ಥರದ ಅಧ್ಯಯನ ಪರಿಣತರು ರಾಮಾಯಣವನ್ನು ಇತಿಹಾಸವನ್ನಾಗಿ ಪರಿಭಾವಿಸುತ್ತ, ಸಾಮಾನ್ಯ ಕಾಲಮಾನಕ್ಕಿಂತ 12,000 ವರ್ಷಗಳ ಹಿಂದೆ ಅದರ ಕಾಲಮಾನವಾಗಿತ್ತು ಎಂದು ಗುರುತಿಸುತ್ತಾರೆ. ಈ ವ್ಯಾಖ್ಯಾನದಲ್ಲಿ ಬರುವ ಒಂದು ಪ್ರಮುಖಾಂಶ ಎಂದರೆ, ರಾವಣನ ಲಂಕೆ ಎಂಬುದು ಇವತ್ತಿನ ಶ್ರೀಲಂಕಾ ಎಂಬ ಜಾಗ ಅಲ್ಲ ಎನ್ನುವುದು. ಏಕೆಂದರೆ, ವಾಲ್ಮೀಕಿ ರಾಮಾಯಣದ ವಿವರಣೆಗಳು ಈಗಿರುವ ಶ್ರೀಲಂಕಾಕ್ಕೆ ಹಲವು ಆಯಾಮಗಳಲ್ಲಿ ಸರಿ ಹೊಂದುವುದೇ ಇಲ್ಲ. ಇವತ್ತಿನ ಹಿಂದು ಮಹಾಸಾಗರದ ಪ್ರಾಂತ್ಯದಲ್ಲಿ, ಸಮಭಾಜಕ ರೇಖೆಯ ಬಳಿಯೇ ಅಪಾರ ಭೂಭಾಗವೊಂದಿತ್ತು ಹಾಗೂ ಅದುವೇ ಅಂದಿನ ಲಂಕೆಯಾಗಿತ್ತು ಎಂಬ ಪ್ರತಿಪಾದನೆ ಇದೆ.
ತಮಿಳು ಸಂಪ್ರದಾಯದ ಕೆಲವು ಕೃತಿಗಳಲ್ಲಿ ‘ಕುಮಾರಿ ಖಂಡಮ್’ ಎಂಬ ಪರಿಕಲ್ಪನೆ ಇದೆ. ಈಗಿನ ಉಪಗ್ರಹ ಚಿತ್ರಗಳು ಸಹ ಇಂಡಿಯನ್ ಒಷನ್ ಭಾಗದಲ್ಲಿ ಮುಳುಗಿರುವ ಭೂಭಾಗದ ಕುರುಹುಗಳನ್ನು ತೋರಿಸುತ್ತವೆ. ಅತ್ತ ಮಡಗಾಸ್ಕರ್ ದ್ವೀಪಸಮೂಹ ಹಾಗೂ ಇತ್ತ ಆಸ್ಟ್ರೇಲಿಯ ನಡುವೆ ವಿಶಾಲ ಭೂಭಾಗವೊಂದಿತ್ತು. ಸ್ವರ್ಣಮಯ ಲಂಕೆಗೆ ಹೊಂದುವ ಭೂಭಾಗವೆಂದರೆ ಅದುವೇ ಎಂಬುದೊಂದು ಪ್ರತಿಪಾದನೆ.
ಇವತ್ತು ನಾವು ನೋಡುತ್ತಿರುವ ಬೇರೆ ಬೇರೆ ಭೂಖಂಡಗಳು ಪೃಥ್ವಿಯ ಪ್ರಾರಂಭಿಕ ದಿನಗಳಲ್ಲಿ ಕೂಡಿಕೊಂಡಿದ್ದವು ಎಂಬ ಸಿದ್ಧಾಂತವನ್ನು ನಾವೆಲ್ಲಿ ಭೂಗೋಳದ ಪಾಠದಲ್ಲಿ ಓದಿರುತ್ತೇವೆ. ಹೀಗೆ ಖಂಡಗಳು ದೂರ ಸರಿದಿರುವ, ಹಾಗೂ ಇವತ್ತಿಗೂ ವರ್ಷಕ್ಕೆ ಸೆಂಟಿಮೀಟರ್ ಲೆಕ್ಕದಲ್ಲಿ ಸೂಕ್ಷ್ಮವಾಗಿ ದೂರ ಸರಿಯುತ್ತಿರುವ ಉದಾಹರಣೆ ಒಂದು ಬಗೆಯದ್ದು. ಹೀಗೆ ಇಡಿ ಇಡಿಯಾಗಿ ಭೂಫಲಕಗಳು ಪ್ರಯಾಣ ಬೆಳೆಸುವ ಬಗೆ ಒಂದಾದರೆ, ಭೂಮಿಯ ಮೇಲ್ಪದರ ಮಾತ್ರವೇ ಸ್ಥಾನ ಬದಲಿಸುವ ಪ್ರಕ್ರಿಯೆಯೂ ಇದೆ. ಟ್ರೂ ಪೊಲಾರ್ ವಾಂಡರ್ ಎಂಬ ಹೆಸರಿನಿಂದ ಇದನ್ನು ವಿಶ್ಲೇಷಿಸಲಾಗುತ್ತದೆ.
ರಾಮಾಯಣ, ಮಹಾಭಾರತಗಳು ಇತಿಹಾಸವೇ ಎಂಬುದು ಭಾರತೀಯ ಪ್ರತಿಪಾದನೆ. ಈ ಪರಿಕಲ್ಪನೆಯನ್ನು ಮನಸ್ಸಿನಲ್ಲಿ ಹರವಿಟ್ಟುಕೊಳ್ಳುವಾಗ ಭೂಫಲಕಗಳ ವರ್ತನೆ, ಭೂಕಂಪವು ಬದಲಿಸಿರಬಹುದಾದ ನದಿಪಾತ್ರಗಳು, ಹವಾಮಾನ ವೈಪರೀತ್ಯದಿಂದ ಮುಳುಗಿರಬಹುದಾದ ಹಾಗೂ ಮತ್ತೆದ್ದು ಬಂದಿರಬಹುದಾದ ಭೂಭಾಗಗಳು ಹೀಗೆಲ್ಲ ಹಲವು ಸಾಧ್ಯತೆಗಳನ್ನಿಟ್ಟುಕೊಂಡು ಯೋಚಿಸಬೇಕಾಗುತ್ತದೆ.
ಭಾರತದ ಶೇ. 59 ಭೂಭಾಗವು ಭೂಕಂಪದ ಸಾಧ್ಯತೆಗೆ ತೆರೆದುಕೊಂಡಿದೆ. ಒಂದೆಡೆ ಹಿಮಾಲಯ ಭಾಗದ ಭೂಫಲಕಗಳು ಯುರೇಷಿಯನ್ ಭೂಫಲಕಗಳೊಂದಿಗೆ ಕುಸ್ತಿ ಮಾಡುತ್ತಿದ್ದರೆ, ಇತ್ತ ಭಾರತದಡಿಯ ಭೂಪಲಕವು ಬರ್ಮಾ ಭೂಫಲಕದೊಂದಿಗೂ ಸಂಘರ್ಷದಲ್ಲಿದೆ. ಹೀಗಾಗಿ ಭಾರತದ ಈಶಾನ್ಯ ರಾಜ್ಯಗಳು, ಉತ್ತರಾಖಂಡ, ಹಿಮಾಚಲ ಪ್ರದೇಶ, ಬಿಹಾರ, ದೆಹಲಿ, ಮುಂಬೈ, ಕೊಲ್ಕತಾ ಇವೆಲ್ಲವೂ ಭೂಕಂಪ ವಲಯಗಳಲ್ಲಿವೆ. ಹಿಮಾಲಯ ಪ್ರದೇಶದಲ್ಲಿ 8 ರಿಕ್ಟರ್ ಪ್ರಮಾಣಕ್ಕೆ ಮೀರಿದ ಭೂಕಂಪವೊಂದು ಭಾರಿ ವಿಧ್ವಂಸವನ್ನೇ ಸೃಷ್ಟಿಸಲಿಕ್ಕಿದೆ, ಯಾವಾಗ ಸಂಭವಿಸುತ್ತದೋ ಗೊತ್ತಿಲ್ಲ ಎಂಬ ಭವಿಷ್ಯ ಭೂಗರ್ಭಶಾಸ್ತ್ರಜ್ಞರದ್ದು.
ಇವ್ಯಾವವನ್ನೂ ತಡೆಯುವುದು ಮಾನವರ ವ್ಯಾಪ್ತಿಯಲ್ಲಿಲ್ಲ. ಆದರೆ, ಈ ಬಗ್ಗೆ ಪ್ರಜ್ಞೆ ಹೊಂದಿರುವವವರು ನಿರ್ಮಾಣ ಕಾಮಗಾರಿ ಹಾಗೂ ಕಟ್ಟಡ ನಿರ್ಮಾಣಗಳನ್ನು ಆ ಅಪಾಯದ ಸಾಧ್ಯತೆಯ ಪರಿಜ್ಞಾನದಲ್ಲಿ ಮಾಡಿದರೆ ಕನಿಷ್ಟಪಕ್ಷ ಸಾವುನೋವುಗಳನ್ನು ಕಡಿಮೆಯಾಗಿಸಬಹುದು.
ಭೂಕಂಪ, ನೈಸರ್ಗಿಕ ವಿಕೋಪಗಳು, ಸಾಗರಮಟ್ಟದಲ್ಲಾಗುವ ಏರಿಕೆ ಇವೆಲ್ಲವೂ ಚರಿತ್ರೆಯನ್ನು ಹೇಗೆಲ್ಲ ಬದಲಿಸಬಲ್ಲವು ಎಂಬುದು ನಾವು ಇರಿಸಿಕೊಳ್ಳಬಹುದಾದ ಕುತೂಹಲ.
- ಚೈತನ್ಯ ಹೆಗಡೆ
cchegde@gmail.com
Advertisement