
ಹಿಂದಿ ಹೇರಿಕೆ ಸುತ್ತಲಿನ ವಿವಾದಗಳು, ವಾಗ್ವಾದಗಳೇನೂ ಹೊಸದಲ್ಲ. ದಕ್ಷಿಣದ ರಾಜ್ಯಗಳು ಹಿಂದಿ ಪಾರಮ್ಯಕ್ಕೆ ಹೆದರುವುದಕ್ಕೆ ಅವರದ್ದೇ ಆದ ಕಾರಣಗಳೂ ಇವೆ. ಆದರೆ ನಾನಾ ಭಾಷೆಗಳಲ್ಲಿ ಸಮೃದ್ಧವಾಗಿರುವ ಭಾರತಕ್ಕೆ ಪರಸ್ಪರ ವ್ಯವಹಾರಕ್ಕೊಂದು ಸಾಮಾನ್ಯ ಭಾಷೆ ಬೇಕಲ್ಲ ಎಂಬುದು ವ್ಯಾವಹಾರಿಕ ಅವಶ್ಯ. ಆ ಜಾಗದಲ್ಲಿ ಇಂಗ್ಲಿಷ್ ಇರಲಿ, ಆಗ ಹಿಂದಿ ಭಾಷಿಕರಿಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉಳಿದವರಿಗಿಂತ ಹೆಚ್ಚಿನ ಲಾಭ ಸಿಗುವುದು ತಪ್ಪುತ್ತದೆ ಎನ್ನುವುದು ಬಹುತೇಕ ದಕ್ಷಿಣದವರ ವಾದ. ವಿದೇಶಿ ಭಾಷೆಯನ್ನು ಲಿಂಕ್ ಭಾಷೆಯಾಗಿ ಒಪ್ಪುವುದಕ್ಕೆ ಸಿದ್ಧವಿರುವವರು ಭಾರತೀಯ ಭಾಷೆಯನ್ನು ವಿರೋಧಿಸುವುದೇಕೆ ಎನ್ನುವುದು ಮತ್ತೊಂದು ಪಾಳೆಯದವರ ವಾದ.
ಹಾಗಾದರೆ, ಉತ್ತರ-ದಕ್ಷಿಣದವರಿಬ್ಬರೂ ತಾವು ಕರಗತ ಮಾಡಿಕೊಳ್ಳುವುದಕ್ಕೆ ಸಮಪ್ರಮಾಣದಲ್ಲಿ ಈಗ ಶ್ರಮ ವಹಿಸಬೇಕಾದ ಭಾಷೆ ಎಂದರೆ ಸಂಸ್ಕೃತ. ಅದು ಭಾರತದ್ದೇ ಭಾಷೆ. ಸಂವಿಧಾನ ಸಭೆಯ ಡಿಬೇಟುಗಳಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರೂ ಕೇಂದ್ರದ ಆಡಳಿತಾತ್ಮಕ ಭಾಷೆಯಾಗಲಿ ಎಂದು ಸಂಸ್ಕೃತದ ಪರ ಸಲ್ಲಿಸಿದ್ದ ತಿದ್ದುಪಡಿ ಪ್ರಸ್ತಾವವನ್ನೂ ನೆನಪಿಸಿಕೊಳ್ಳಬಹುದು.
ಈಗ ಅಂಬೇಡ್ಕರವಾದಿಗಳೆಂದು ಗುರುತಿಸಿಕೊಳ್ಳುವವರೇ ಸಂಸ್ಕೃತವನ್ನು ವಿಲನ್ ಸ್ಥಾನದಲ್ಲಿ ನಿಲ್ಲಿಸುವುದಕ್ಕೆ ಪ್ರಯತ್ನಪಡುತ್ತಿರುವುದು ಒಂದೆಡೆಯಾದರೆ, ಉಳಿದ ಹಲವರಿಗೂ ಸಂಸ್ಕೃತವು ಈಗ ಪ್ರಸ್ತುತವಾಗಿರುವ ಭಾಷೆ ಅಲ್ಲ ಎನ್ನಿಸಿದೆ. ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಹೇಳಿರುವ ಮಾತೊಂದನ್ನು ಗಮನಿಸಿ, “ನಾವು ಹಿಂದಿ ಹೇರಿಕೆ ವಿರೋಧಿಸುತ್ತೇವೆ. ಆದರೆ ಹಿಂದಿ ಮುಖವಾಡ ಮಾತ್ರ, ಸಂಸ್ಕೃತವೇ ಈ ಹೇರಿಕೆಯ ನಿಜವಾದ ಮುಖ.”
ನಿಜವೇ. ಪ್ರತೀ ಭಾರತೀಯ ಭಾಷೆಗೂ ಅದರದ್ದೇ ಆದ ಶಕ್ತಿ ಇದೆ. ಹೀಗಾಗಿ ‘ಯಾವುದು ಶ್ರೇಷ್ಠ’ ಎಂಬ ಚೌಕಟ್ಟಿನಲ್ಲಿ ನಡೆಯುವ ಚರ್ಚೆಗಳೆಲ್ಲವೂ ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಿಸುತ್ತವೆ. ಆದರೆ, ಸಂಸ್ಕೃತವು ಎಲ್ಲ ಭಾರತೀಯ ಭಾಷೆಗಳಿಗೂ ಪೂರಕವಾದ ಭೂಮಿಕೆ ನಿಭಾಯಿಸುತ್ತದೆ ಎಂಬುದಂತೂ ನಿಜ. ದಕ್ಷಿಣ ಭಾರತೀಯರಿಗೆ ಕಷ್ಟವೆನಿಸುವುದು ಉರ್ದು-ಪರ್ಷಿಯನ್ ಶಬ್ದಗಳು ಹೆಚ್ಚಾಗಿರುವ ಹಿಂದಿಯ ಬಳಕೆ. ಎಲ್ಲೆಲ್ಲಿ ಹಿಂದಿ ಮಾತುಗಳಲ್ಲಿ ಸಂಸ್ಕೃತ ಶಬ್ದಗಳು ಹೆಚ್ಚಿವೆಯೋ ಅವು ತುಲನಾತ್ಮಕವಾಗಿ ಹಿಂದಿಯೇತರ ಭಾಷಿಕರಿಗೆ ಅರ್ಥಮಾಡಿಕೊಳ್ಳುವಲ್ಲಿ ಸುಲಭವಾಗುತ್ತವೆ.
ಸಂಸ್ಕೃತದ ಭಾಷಾ ವಿನ್ಯಾಸವೇ ಅನುಭವವೊಂದನ್ನು ನಿರ್ದಿಷ್ಟವಾಗಿ ನಮ್ಮದಾಗಿಸಿಕೊಳ್ಳುವುದಕ್ಕೆ ಅನುವಾಗಿಸುತ್ತದೆ. ಹೀಗಾಗಿ, ಕೆಲವು ಅನುವಾದಿಸಲಾಗದ ಸಂಸ್ಕೃತ ಪದಗಳನ್ನು ಯಾವುದೇ ಭಾರತೀಯ ಭಾಷೆಯಲ್ಲಿ ಹಾಗೆಯೇ ಉಳಿಸಿಕೊಂಡು ಬಳಸಬೇಕು ಎಂಬುದು ‘ಬ್ಯಾಟಲ್ ಫಾರ್ ಸಂಸ್ಕೃತ’ ಸೇರಿದಂತೆ ಹಲವು ಕೃತಿಗಳನ್ನು ಬರೆದಿರುವ ರಾಜೀವ್ ಮಲ್ಹೋತ್ರ ಅವರ ವಿಚಾರಧಾರೆ. ಅವರು ನೀಡುವ ಉದಾಹರಣೆಯೊಂದರ ಪ್ರಕಾರ, ಆತ್ಮ ಎಂಬ ಪದಕ್ಕೆ ಸೋಲ್ ಎಂಬ ಇಂಗ್ಲಿಷ್ ಪದವನ್ನು ಸಮಾನಾರ್ಥಕವಾಗಿ ಬಳಸುವುದು, ಅಂದರೆ ಆತ್ಮ ಎಂದು ಹೇಳುವ ಜಾಗದಲ್ಲಿ ಸೋಲ್ ಎಂದು ಹೇಳುವುದು ಪ್ರಮಾದ. ನೀವು ಆಂಗ್ಲಭಾಷೆಯಲ್ಲೇ ಸಂವಹನ ಮಾಡುತ್ತಿದ್ದರೂ ಇಂಥ ಕೆಲವು ಪದಗಳನ್ನು ಸಂಸ್ಕೃತಮೂಲದಲ್ಲೇ ಉಳಿಸಿಕೊಳ್ಳಬೇಕು.
ಆತ್ಮ ಎಂಬುದಕ್ಕೆ ಭಾರತೀಯ ದರ್ಶನಗಳ ವ್ಯಾಖ್ಯಾನವೆಂದರೆ ಅದು ಸತ್ ಚಿತ್ ಆನಂದಸ್ವರೂಪವಾದ ಅಳಿವಿಲ್ಲದ ಸಂಗತಿ. ಆದರೆ ಪಾಶ್ಚಾತ್ಯ ಪರಿಕಲ್ಪನೆಯ ಸೋಲ್ ಎಂಬುದು ಒಂದು ನಿರ್ಮಿಸಲ್ಪಟ್ಟ, ಸೃಷ್ಟಿಕರ್ತ ಶಕ್ತಿಗೆ ಭಿನ್ನವಾಗಿರುವ ಒಂದು ಸಂಗತಿ. ಹೀಗಾಗಿ ಆತ್ಮದ ಜಾಗದಲ್ಲಿ ಸೋಲ್ ಎಂಬ ಪದ ಬಳಸಿದರೆ ನಮ್ಮ ಭಾರತೀಯ ತತ್ವ್ವಜ್ಞಾನ ದೃಷ್ಟಿಯನ್ನೇ ಬಿಟ್ಟುಕೊಟ್ಟಂತೆ ಆಗುತ್ತದೆ.
ಸಂಸ್ಕೃತದ ಶಬ್ದ ವಿನ್ಯಾಸವನ್ನು ತಮ್ಮ ಕೃತಿಗಳಲ್ಲಿ ಮತ್ತಷ್ಟು ತಾರ್ಕಿಕವಾಗಿ ಬಿಚ್ಚಿಡುತ್ತ ಹೋಗುತ್ತಾರೆ ರಾಜೀವ ಮಲ್ಹೋತ್ರ. ಸಂಸ್ಕೃತದ ಪ್ರತಿಪದವೂ ಮೂಲಶಬ್ದವೊಂದರಿಂದ ಹುಟ್ಟಿ ಅನುಭವವೊಂದನ್ನು ಅಭಿವ್ಯಕ್ತಿಸುತ್ತದೆ. ಈ ರೂಟ್ ಅಥವಾ ಮೂಲಶಬ್ದವನ್ನಿಟ್ಟುಕೊಂಡೇ, ವ್ಯಾಕರಣ ನಿಯಮಗಳಿಗೆ ಬದ್ಧರಾಗಿ ಸಂಸ್ಕೃತದಲ್ಲಿ ಇವತ್ತಿಗೂ ಹೊಸ ಶಬ್ದಗಳನ್ನು ಸೃಷ್ಟಿಸಬಹುದು ಹಾಗೂ ಆಧುನಿಕ ಸಂವೇದನೆ-ಸಾಧನ-ಸಲಕರಣೆಗಳನ್ನೆಲ್ಲ ಅಭಿವ್ಯಕ್ತಿಸಲೂಬಹುದು. ಅರ್ಥಾತ್, ಯಾರಿಗೋ ಇಷ್ಟವಾಯಿತೆಂಬ ಮಾತ್ರಕ್ಕೆ ಹೊಸ ಪದವೊಂದನ್ನು ಟಂಕಿಸಿಬಿಡಲಾಗುವುದಿಲ್ಲ, ಅದು ಮೂಲಶಬ್ದವೊಂದರಿಂದಲೇ ಹುಟ್ಟಿರಬೇಕಾಗುತ್ತದೆ. ಹಾಗೆಂದೇ ಅದೇ ಭಾಷೆಯೊಳಗಿನ ಸಮಾನಾರ್ಥಕ ಪದಗಳನ್ನು ಸಹ ಅದರ ಬದಲು ಇದು ಎಂದು ಕಣ್ಣುಮುಚ್ಚಿ ಪ್ರಯೋಗಿಸುವಂತಿಲ್ಲ. ಇವನ್ನೆಲ್ಲ ವಿವರಿಸುತ್ತ ರಾಜೀವ ಮಲ್ಹೋತ್ರರು ನೀಡುವ ಕೆಲವು ಉದಾಹರಣೆಗಳು ಸೊಗಸಾಗಿವೆ.
ಉದಾಹರಣೆಗೆ, ಬೆಂಕಿ ಎಂಬ ಪದಕ್ಕೆ ಅಮರಕೋಶವು ಪದಬಳಕೆಯ ದೊಡ್ಡ ಯಾದಿಯನ್ನೇ ಕೊಡುತ್ತದೆ. ಅರೆ, ಒಂದು ಅನುಭವವನ್ನು ಹೇಳುವುದಕ್ಕೆ ಇಷ್ಟೆಲ್ಲ ಶಬ್ದಗಳ ಅಗತ್ಯವಾದರೂ ಏಕೆ, ಒಂದರ ಹಿಂದೆ ಮತ್ತೊಂದನ್ನು ಸುಮ್ಮನೇ ಹುಟ್ಟಿಸಲಾಗಿದೆಯಾ? ಬಳಕೆಗೆ ಯಾವುದೋ ಒಂದೆರಡು ಇಟ್ಟುಕೊಂಡರೆ ಸಾಕಲ್ಲವೇ ಎಂಬ ಪ್ರಶ್ನೆಗೆ ಭಿನ್ನ ಉತ್ತರವೊಂದು ಸಿಗುತ್ತದೆ. ಬೆಂಕಿಯ ಅನುಭವವನ್ನು ಸಾರುವ ಒಂದು ಪದ - ವಹ್ನಿ. ಇದು ವಹ್ ಎಂಬ ಶಬ್ದಮೂಲ ಹೊಂದಿದೆ. ವಹ್ ಎಂದರೆ ಯಾವುದು ತನ್ನೊಡನೆ ತೆಗೆದುಕೊಂಡು ಹೋಗುತ್ತದೆಯೋ ಅದು ಎಂಬರ್ಥದಲ್ಲಿ. ಜ್ವಲನ ಎಂಬ ಶಬ್ದದ ಮೂಲ ಜ್ವಲ್ ಅಂದರೆ ಸುಡುವುದು ಯಾವುದೋ ಅದು. ಇನ್ನು, ಪಾವಕ ಎಂಬ ಶಬ್ದ ಪು ಎಂಬ ಮೂಲಶಬ್ದ ಅಂದರೆ ಪರಿಶುದ್ಧಗೊಳಿಸುವಿಕೆ ಅರ್ಥದಲ್ಲಿ ಹೊರಹೊಮ್ಮಿರುವುದು. ಬೆಂಕಿಯಿಂದಾದ ಯಾವ ನಿರ್ದಿಷ್ಟ ಅನುಭವವನ್ನು ಅಭಿವ್ಯಕ್ತಿಗೊಳಿಸುವುದಕ್ಕೆ ಹೊರಟಿದ್ದೇವೆ ಎಂಬುದರ ಮೇಲೆ ಸೂಕ್ತ ಪದಪ್ರಯೋಗ ಮಾಡಬೇಕಾಗುತ್ತದೆ. ಹೀಗೊಂದು ವಿನ್ಯಾಸವಿರುವುದರಿಂದಲೇ ಹಲವರು ಸಂಸ್ಕೃತವನ್ನು ‘ಸೈಂಟಿಫಿಕ್’ ಎಂದು ವಿಶ್ಲೇಷಿಸುವ ಉತ್ಸಾಹ ತೋರುತ್ತಾರಷ್ಟೆ. ಅಂದರೆ, ಈ ಗಣಿತೀಯ ವಿನ್ಯಾಸ ಬಳಸಿಕೊಂಡು ವಿಸ್ತಾರ ಪಡೆಯುವ, ಕಾಲ-ಕಾಲಕ್ಕೆ ಪ್ರಸ್ತುತವಾಗಬಲ್ಲ ಅಂತಃಶಕ್ತಿಯೊಂದು ಇಲ್ಲಿದೆ ಎಂದರ್ಥ.
ತಮ್ಮ ಸಂದರ್ಶನವೊಂದರಲ್ಲಿ ಭಾರತದ ವಿದೇಶ ಮಂತ್ರಿ ಎಸ್ ಜೈಶಂಕರ್ ಅವರು ವಿದೇಶಿ ಭಾಷೆಗಳನ್ನು ಮೇಲ್ಪದರದಲ್ಲಾದರೂ ಅರ್ಥಮಾಡಿಕೊಳ್ಳಬೇಕಾದ ರಾಯಭಾರಿಗಳ ಅಗತ್ಯತೆ ಹಾಗೂ ಅದಕ್ಕೆ ಅವರನ್ನು ಸಿದ್ಧಗೊಳಿಸುವ ಬಗೆಯ ಬಗ್ಗೆ ಮಾತನಾಡುತ್ತಿದ್ದರು. ರಷ್ಯನ್ ಭಾಷೆಯನ್ನು ಅರ್ಥಮಾಡಿಕೊಳ್ಳುವುದಕ್ಕೆ ಭಾರತದ ರಾಜತಾಂತ್ರಿಕರಿಗೆ ಪ್ರಾರಂಭದಲ್ಲಿ ಸಂಸ್ಕೃತ ಭಾಷೆಯ ವ್ಯಾಕರಣ ಮತ್ತು ಶಬ್ದಪ್ರಯೋಗಗಳ ಪಾಠ ಮಾಡಲಾಗುತ್ತದೆ ಎಂಬ ಮಾಹಿತಿ ಅವರೇ ಹಂಚಿಕೊಂಡಿದ್ದರು. ಕೇವಲ ರಷ್ಯನ್ ಅಲ್ಲದೇ, ಲ್ಯಾಟಿನ್, ಜರ್ಮನ್, ಐರಿಶ್ ಭಾಷೆ, ಅವೆಸ್ತಿಯನ್, ಲಿಥುವೆನಿಯ ಸೇರಿದಂತೆ ಬಾಲ್ಟಿಕ್ ದೇಶಗಳ ಭಾಷೆಗಳಲ್ಲೆಲ್ಲ ಸಂಸ್ಕೃತದ ನೆರಳಿರುವುದರ ಬಗ್ಗೆ ಸಾಕಷ್ಟು ಮಾಹಿತಿಗಳು ಇವತ್ತಿಗೆ ಲಭ್ಯ.
ಒಟ್ಟಿನಲ್ಲಿ, ಜಗತ್ತನ್ನು ಅರ್ಥಮಾಡಿಕೊಳ್ಳುವುದಕ್ಕೆ ಸಂಸ್ಕೃತವೊಂದು ಸಾಧನ ಎಂದಾಯಿತು. ಈ ವ್ಯಾವಹಾರಿಕ ಜಗತ್ತಿನಾಚೆಗಿನ ವೈಶ್ವಿಕ ಮೆಟಾಫಿಸಿಕ್ಸ್ ಅರ್ಥ ಮಾಡಿಕೊಳ್ಳುವುದಕ್ಕೂ ಅದು ಬೇಕು. ಹೀಗೆಂದ ಮೇಲೆ, ಭಾರತದ ಸಂದರ್ಭದಲ್ಲಿ ಸಂಸ್ಕೃತ ಬೇಕೇ ಬೇಡವೇ ಎಂಬ ಚರ್ಚೆ ಏಕೆ? ಎಷ್ಟು ಜನ ಸಂಸ್ಕೃತವನ್ನೇ ಮಾತನಾಡುತ್ತಾರೆ ಎಂಬುದನ್ನಷ್ಟೇ ಆಧಾರವಾಗಿರಿಸಿಕೊಂಡು ಅದನ್ನು ‘ಮೃತಭಾಷೆ’ ಎಂದೆಲ್ಲ ಕುಹಕವಾಡುವುದು ಸುಲಭ. ಆದರೆ ಮೇಲಿನ ಉದಾಹರಣೆಗಳು ತೋರಿಸುತ್ತಿರುವಂತೆ ಅದರ ಗಣಿತೀಯ ವಿನ್ಯಾಸ ಹಾಗೂ ಬೇರುಮೂಲದ ಚರಿತ್ರೆಯಲ್ಲೇ ಸಂಸ್ಕೃತದ ಅಮೃತತ್ವವಿದೆ. ಹೀಗಾಗಿಯೇ, ಅನುವಾದ ಅಶಕ್ಯವೆನಿಸುವ ಸಾವಿರದಷ್ಟು ಸಂಸ್ಕೃತ ಶಬ್ದಗಳನ್ನು ಪಟ್ಟಿಮಾಡಿ, ಅವನ್ನು ಭಾರತೀಯ ಭಾಷೆಗಳು ಹಾಗೂ ಆಂಗ್ಲ ಭಾಷೆ ಬಳಕೆ ನಡುವೆಯೂ ಉಪಯೋಗಿಸುವ ಕೆಲಸವಾಗಬೇಕು ಎಂಬುದು ರಾಜೀವ್ ಮಲ್ಹೋತ್ರ ಪ್ರತಿಪಾದನೆ.
ಸ್ವಾತಂತ್ರ್ಯೋತ್ತರ ನೆಹರು ಪ್ರಣೀತ ವ್ಯವಸ್ಥೆ ತನ್ನ ಅಧಿಕಾರದ ಮಟ್ಟದಲ್ಲಿ ಭಾರತೀಯತೆಯನ್ನು ಅಷ್ಟಾಗಿ ಪೋಷಿಸದಿದ್ದರೂ, ಕೆಲವು ವ್ಯಕ್ತಿಗಳು ಹಾಗೂ ಸಂಸ್ಥೆಗಳ ಕಾರಣದಿಂದ ಸಂಸ್ಕೃತದ ತತ್ತ್ವಪಥವು ಕೆಲವೆಡೆಗಳಲ್ಲಿ ಹರಿವು ಪಡೆದುಕೊಂಡು ಬಂದಿರುವುದು ಸಮಾಧಾನದ ಸಂಗತಿ. ರಾಷ್ಟ್ರ ಲಾಂಛನದಲ್ಲಿ ‘ಸತ್ಯಮೇವ ಜಯತೆ’, ಸರ್ವೋಚ್ಚ ನ್ಯಾಯಾಲಯದ ಘೋಷವಾಕ್ಯ ‘ಯತೋ ಧರ್ಮಸ್ತತೋ ಜಯಃ’ ಇವೆಲ್ಲವೂ ಪ್ರತಿ ಪೀಳಿಗೆಯಲ್ಲಿ ಕೆಲವರಾದರೂ ಭಾರತೀಯ ಪರಿಕಲ್ಪನೆಯಲ್ಲಿ ಸತ್ಯ ಮತ್ತು ಧರ್ಮ ಎಂದರೆ ಏನು ಎಂದು ಅನ್ವೇಷಿಸಿಕೊಳ್ಳುವಂತೆ ಮಾಡುತ್ತವೆ.
ಭಾರತದ ವಾಯುಸೇನೆ ಭಗವದ್ಗೀತೆಯ ವಿಶ್ವರೂಪದರ್ಶನದ ಭಾಗವೊಂದರ ಚೇತೋಹಾರಿ ಚಿತ್ರಣ ಕೊಡುವ ‘ನಭಃ ಸ್ಪೃಶಂ ದೀಪ್ತಂ’ ಅನ್ನು ಘೋಷವಾಕ್ಯವಾಗಿಸಿಕೊಂಡು ತನ್ನ ಸಾಮರ್ಥ್ಯ-ವೈಭವಗಳನ್ನು ಆಕಾಶದೆತ್ತರದಲ್ಲಿರಿಸಿಕೊಳ್ಳುವ ಸಂಕಲ್ಪ ತೊಟ್ಟಿದೆ. ಆರೋಗ್ಯ-ಆಯಸ್ಸುಗಳು ಕೈಕೊಟ್ಟಾಗ ವಿತ್ತೀಯ ಸಮಾಧಾನವೊಂದರ ಆಯ್ಕೆಯನ್ನು ಜನರ ಮುಂದಿರಿಸಿ ಕೆಲಸ ಮಾಡುತ್ತಿರುವ ಎಲ್ ಐ ಸಿ ಎಂಬ ಸರ್ಕಾರಿ ಸಂಸ್ಥೆ ಮತ್ತದೇ ಗೀತಾಚಾರ್ಯನ ನೆನಪಿನಲ್ಲಿ ‘ಯೋಗಕ್ಷೇಮಂ ವಹಾಮ್ಯಹಮ್’ ಎಂದು ಅಭಯ ಕೊಟ್ಟಿದೆ. ಭಾರತದ ನೌಕಾಸೇನೆ ‘ಶಂ ನೊ ವರುಣಃ’ ಎಂದು ಅಗೋಚರ ನೀರ ಮಾಲಿಕನಿಗೆ ನಮಿಸಿದೆ.
ಭಾಷಾಮಂಥನ ದಟ್ಟವಾಗಿರುವ ವರ್ತಮಾನದಲ್ಲಿ ಹೀಗೊಂದು ಸನಾತನ ಹರಿವು ಬತ್ತದಿರಲೆಂದು ಆಶಿಸೋಣವಲ್ಲವೇ?
- ಚೈತನ್ಯ ಹೆಗಡೆ
cchegde@gmail.com
Advertisement