ಹೊಲಿದು ಮಾಡಿರುವ ಈ ಹಡಗು ಹೊರಟಿರುವುದಾದರೂ ಎಲ್ಲಿಗೆ? (ತೆರೆದ ಕಿಟಕಿ)

ಭಾರತದಿಂದ ಹೊಸ ಮಾದರಿಯ ಹಡಗು ತಯಾರಾಗುತ್ತಿದೆ ಎಂದುಕೊಂಡಿರಾ? ಇದು ಯಶಸ್ಸಾದರೆ ಭಾರತದಲ್ಲಿ ಇದರ ಉತ್ಪಾದನೆ ಶುರುವಾಗುತ್ತದೆ ಎಂದೇನಾದರೂ ಅಂದುಕೊಂಡಿರಾ? ಅಂಥದ್ದೇನಿಲ್ಲ. ಈ ಹಡಗು ತಯಾರಾಗುತ್ತಿರುವುದು ಭವಿಷ್ಯದ ಉತ್ಪನ್ನವಾಗಿ ಅಲ್ಲವೇ ಅಲ್ಲ.
stitched ship
ಹೊಲಿದು ಮಾಡಿರುವ ಹಡಗುonline desk
Updated on

ಹಲವಾರು ತಿಂಗಳುಗಳ ನಿರಂತರ ಪ್ರಯತ್ನದ ನಂತರ ಭಾರತದಲ್ಲಿ ಅದೊಂದು ಹಡಗು ತಯಾರಾಗಿದೆ. ಗೋವಾದ ಸಮುದ್ರದಲ್ಲಿ ನೀರಿನಲೆಗಳ ಮೇಲೆ ತೇಲಿಕೊಂಡಿರುವ ಆ ಹಡಗಿನ್ನೂ ಪರೀಕ್ಷಾರ್ಥ ಹಂತದಲ್ಲಿದೆ. ಅದು ನೀರಿನಲ್ಲಿ ಉಳಿದುಕೊಳ್ಳಬಹುದು, ಅಲ್ಲಿ ಯಾವ ಸೋರಿಕೆಗಳೂ ಆಗುತ್ತಿಲ್ಲ ಎಂದೆಲ್ಲ ಖಾತ್ರಿ ಪಡಿಸಿಕೊಂಡಮೇಲೆ ಇನ್ನಷ್ಟು ನಿರ್ಮಾಣ ಪ್ರಕ್ರಿಯೆಗಳಿಗೆ ತನ್ನನ್ನು ಒಡ್ಡಿಕೊಳ್ಳಲಿದೆ. ಅದನ್ನು ಚಲಿಸುವ ಬಗೆ ಎಂಥಾದ್ದು ಎಂಬುದನ್ನೂ ಇನ್ನಷ್ಟೇ ಖಾತ್ರಿ ಮಾಡಿಕೊಳ್ಳಬೇಕಿದೆ! ಅಷ್ಟೆಲ್ಲ ಆದಮೇಲೆ ಇನ್ನೊಂದು ಬಾರಿ ನೀರಿಗಿಳಿದು, ಹತ್ತಿರದ ಕಡಲ ಪ್ರಾಂತ್ಯಗಳಲ್ಲೇ ಒಂದಿಷ್ಟು ತಿರುಗಿ, ನಂತರ ಅದು ಒಮಾನ್ ದೇಶಕ್ಕೆ ಪ್ರಯಾಣ ಬೆಳೆಸಲಿಕ್ಕಿದೆ. ಅದೇನಾದರೂ ಸಾಕಾರವಾಗಿದ್ದೇ ಆದರೆ ಭಾರತದ ಚರಿತ್ರೆ ಒಮ್ಮೆ ಜಗತ್ತಿನ ಕಣ್ಣಲ್ಲಿ ಜಗಮಗಿಸುತ್ತದೆ.

ಭಾರತದಿಂದ ಹೊಸ ಮಾದರಿಯ ಹಡಗು ತಯಾರಾಗುತ್ತಿದೆ ಎಂದುಕೊಂಡಿರಾ? ಇದು ಯಶಸ್ಸಾದರೆ ಭಾರತದಲ್ಲಿ ಇದರ ಉತ್ಪಾದನೆ ಶುರುವಾಗುತ್ತದೆ ಎಂದೇನಾದರೂ ಅಂದುಕೊಂಡಿರಾ? ಅಂಥದ್ದೇನಿಲ್ಲ. ಈ ಹಡಗು ತಯಾರಾಗುತ್ತಿರುವುದು ಭವಿಷ್ಯದ ಉತ್ಪನ್ನವಾಗಿ ಅಲ್ಲವೇ ಅಲ್ಲ. ಇದೊಂದು ಇತಿಹಾಸದ ಉತ್ಪನ್ನ. ಆದರೆ, ವರ್ತಮಾನದ ಪೀಳಿಗೆಯು ಭವ್ಯ ಭವಿತವ್ಯ ಕಟ್ಟುವುದಕ್ಕೆ ಇದೊಂದು ಸ್ಫೂರ್ತಿಯಾಗಬಲ್ಲದು ಎಂಬ ಕಾರಣಕ್ಕಾಗಿ ಹೀಗೊಂದು ಹಡಗನ್ನು ಜಗತ್ತಿನೆದುರು ನಿಲ್ಲಿಸುವುದಕ್ಕೆ ಭಾರತೀಯ ನೌಕಾಸೇನೆ ಪ್ರಯತ್ನದಲ್ಲಿದೆ.

ಇಷ್ಟಕ್ಕೂ ಏನಿದರ ವೈಶಿಷ್ಟ್ಯ? ಪ್ರಮುಖವಾಗಿ ಮರ ಹಾಗೂ ನಾರಿನ ಹಗ್ಗಗಳನ್ನು ಬಳಸಿ ಇಡೀ ಈ ಮಿನಿ ಹಡಗನ್ನು ಹೊಲಿದು ಕಟ್ಟಲಾಗಿದೆ! ಒಂದೇ ಒಂದು ಮೊಳೆಯನ್ನೂ ಹೊಡೆಯಲಾಗಿಲ್ಲ. ಹೀಗೆ ಹೊಲಿದಿರುವ ಹಡಗು ಎಂಬುದು ಪ್ರಾಚೀನ ಭಾರತ ಮಾತ್ರವೇ ಅರಿತಿದ್ದ ಕೌಶಲವಾಗಿತ್ತು. ನಶಿಸಿಯೇ ಹೋಗುತ್ತಿದ್ದ ಇಂಥದೊಂದು ಜ್ಞಾನವನ್ನು ಕೊನೆ ಕ್ಷಣದಲ್ಲಿ ಮುಳುಗದಂತೆ ತಡೆಹಿಡಿಯಲಾಗಿದೆ. ಕೆಲವೇ ಮೀನುಗಾರರ ನಡುವೆ ದೋಣಿ ನಿರ್ಮಾಣದ ಪ್ರಕ್ರಿಯೆಯಲ್ಲಿ ಮಾತ್ರವೇ ಇಂಥದೊಂದು ಜ್ಞಾನದ ಮಾದರಿ ಜೀವಂತವಿತ್ತು. ಕೇರಳದ ಬಾಬು ಶಂಕರನ್ ಎಂಬ ಕಸಬುದಾರರನ್ನು ಬಳಸಿಕೊಂಡು ಈ ಹೊಲಿದ ಹಡಗು ತಯಾರಾಗಿದೆ.

ಹೊಲಿದ ಹಡಗುಗಳೇನೂ ಮತ್ತೆ ಬರವು, ಆದರೆ…

ಹೊಲಿದ ಹಡಗು ಪ್ರಯೋಗ ಯಶಸ್ವಿಯಾದರೆ ಅಂಥವನ್ನೇ ಮತ್ತೆ ಪ್ರಚಲಿತಕ್ಕೆ ತರುವುದೇನೂ ಇಲ್ಲಿನ ಉದ್ದೇಶವಲ್ಲ. ಅದು ಸಾಧುವೂ ಅಲ್ಲ. ಬದಲಿಗೆ, ಭಾರತದ ಶ್ರೀಮಂತ ಸಾಗರ ಚರಿತ್ರೆಯ ಝಲಕನ್ನು ಜೀವಂತವಾಗಿರಿಸುವುದು ಇಲ್ಲಿನ ಉದ್ದೇಶ. ಈಗಿನ ತಲೆಮಾರಿಗೆ ನಮ್ಮ ನಿರ್ಮಾಣ ಇತಿಹಾಸ ಹೀಗಿತ್ತು ಅಂತ ಗೊತ್ತಿದ್ದರೆ ಮಾತ್ರವಲ್ಲವೇ ನಾವು ಆ ಪರಂಪರೆಯ ವಾರಸುದಾರರು ಎಂಬ ಹೆಮ್ಮೆ ಬರುವುದು? ಕೇವಲ ಹೆಮ್ಮೆ ಹೊಂದುವುದು ಪ್ರಯೋಜನಕ್ಕೆ ಬರಲಾರದು ನಿಜ. ಆದರೆ ಅದು ಪ್ರಾರಂಭ ಬಿಂದು. ನಮ್ಮ ಹಿರಿಯರ ವಾರಸುದಾರಿಕೆಗೆ ತಕ್ಕಂತೆ ನಮ್ಮ ಎಂಜಿನಿಯರಿಂಗ್ ಸಾಮರ್ಥ್ಯಗಳನ್ನು ಇವತ್ತಿಗೆ ಬೇಕಾಗುವಂತೆ ವೃದ್ಧಿಸಿಕೊಳ್ಳುವ ಹುಮ್ಮಸ್ಸು ಹುಟ್ಟುವುದು ಅಲ್ಲಿಂದಲೇ.

ಕೆಲವು ನೂರು ವರ್ಷಗಳ ಹಿಂದಷ್ಟೇ ಭಾರತವನ್ನು ಗುಲಾಮರನ್ನಾಗಿಸಲು ಬಂದ ಪಾಶ್ಚಾತ್ಯರೇ ನಮಗೆ ಹಡಗು ನಿರ್ಮಾಣವನ್ನು ಕಲಿಸಿದರು, ಅದಕ್ಕೂ ಮುಂಚೆ ನಮಗೇನೂ ಗೊತ್ತೇ ಇರಲಿಲ್ಲ ಎಂಬ ವಿಸ್ಮೃತಿಯೊಂದಕ್ಕೆ ತುತ್ತಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಇಂಥ ಪ್ರಯತ್ನಗಳು ಮಹತ್ತ್ವದ್ದಾಗಿವೆ. ಮುಸ್ಲಿಂ ದಾಳಿಕೋರರು ಹಾಗೂ ಬ್ರಿಟಿಷರ ಆಳ್ವಿಕೆ ಅಡಿಯಲ್ಲಿ ಆಗಿರುವ ಎಲ್ಲ ಭೌತಿಕ ನಷ್ಟಗಳ ಜತೆಯಲ್ಲಿ ಸಂಭವಿಸಿರುವ ಅತಿದೊಡ್ಡ ಹಾನಿ ಎಂದರೆ ಅದು ಆತ್ಮವಿಸ್ಮೃತಿಯದ್ದು. ಇದಕ್ಕೆ ಸ್ವಾತಂತ್ರ್ಯಾನಂತರದ ಕೆಲ ರಾಜಕಾರಣದ ಆಯಾಮಗಳೂ ಸೇರಿಕೊಂಡು, ನಮಗೆಲ್ಲ ಇತಿಹಾಸವನ್ನು ಕಾಣಿಸಿರುವ ಬಗೆ ಹೇಗಿದೆ ಎಂದರೆ, ವಾಸ್ಕೊ ದ ಗಾಮ ಬರುವುದಕ್ಕೆ ಮುಂಚೆ ಭಾರತೀಯರಿಗೆ ಜಲಮಾರ್ಗದ ಬಗ್ಗೆ ಅಷ್ಟಾಗಿ ಗೊತ್ತೇ ಇರಲಿಲ್ಲವೇನೋ ಎಂಬ ಗ್ರಹಿಕೆ ಮೂಡಿಸುತ್ತದೆ.

stitched ship
ಯಾರು ಬದಲಾದರೂ ಆ ನೆಲಗಳಲ್ಲಿ ರಕ್ತವೇ ಚೆಲ್ಲುವುದು, ಏಕೆಂದರೆ ಅಲ್ಲಿ 'ಧರ್ಮ'ವಿಲ್ಲ! (ತೆರೆದ ಕಿಟಕಿ)

ಅರಬ್ಬರು ಮತ್ತು ಭಾರತೀಯರ ನಡುವೆ ವ್ಯಾಪಾರ ಸಮೃದ್ಧವಾಗಿದ್ದೇ ಸಮುದ್ರದಲೆಗಳ ಮೇಲಿನ ವ್ಯಾಪಾರಮಾರ್ಗದಲ್ಲಿ ಎಂಬುದನ್ನು ಅದು ಮರೆಸಿಬಿಡುತ್ತದೆ. ಅದಕ್ಕಿಂತ ಹಿಂದೆ, ಚೋಳರ ಕಾಲದಲ್ಲಿ ಭಾರತದ ವ್ಯಾಪಾರಿಗಳು ಸಮುದ್ರಮಾರ್ಗಗಳ ಮೂಲಕ ಜಗತ್ತಿನ ಬಹುಭಾಗಗಳಲ್ಲಿ ತಮ್ಮ ಛಾಪು ಮೂಡಿಸಿದ್ದರ ಕತೆ ಮಸುಕಾಗಿಹೋಗಿದೆ.

ಹೀಗಾಗಿ ಹೊಲಿದ ಹಡಗು ಸಾಗರದಲೆಗಳ ಮೇಲೆ ಸಾಗುವುದಕ್ಕೆ ಸಫಲವಾಗಿದ್ದೇ ಆದರೆ, ಅದು ಈ ಎಲ್ಲ ವಾರಸುದಾರಿಕೆಗಳನ್ನು ನೆನಪಿಸಿ, ಭಾರತೀಯರ ಆತ್ಮವಿಸ್ಮೃತಿಯ ಪರದೆಯನ್ನು ಸರಿಸಲಿಕ್ಕಿದೆ. ಈ ಹೊಲಿದ ಹಡಗಿನ ಪ್ರಯಾಣವು ಇತಿಹಾಸದೆಡೆಗೆ ಇದ್ದಿರುವಾಗಲೂ ಸಹ, ಈ ಅರ್ಥದಲ್ಲಿ ಅದು ಭಾರತದ ಭವಿತವ್ಯದ ಕಡೆಗಿನ ಪ್ರಯಾಣವೂ ಆಗಿದೆ.

Stitched ship
ಹೊಲಿದು ಮಾಡಿರುವ ಹಡಗುonline desk

ನೀರ ನಡಿಗೆಯ ಹಿಂದಿನ ಅಧ್ಯಯನ

ದೆಹಲಿಯಲ್ಲಿ ಇವತ್ತಿಗೂ ನೋಡಬಹುದಾದ ತುಕ್ಕು ಹಿಡಿಯದೇ ಇರುವ ಕಬ್ಬಿಣದ ಕಂಬವನ್ನು ಗಮನಿಸಿದರೆ ಸಾಕು, ಭಾರತೀಯರಿಗೆ ಕನಿಷ್ಟ ನಾಲ್ಕು-ಐದನೇ ಶತಮಾನದ ವೇಳೆಯಲ್ಲೇ ಕಬ್ಬಿಣದ ಬಳಕೆ ಬಗ್ಗೆ ವ್ಯಾಪಕ ಜ್ಞಾನವಿತ್ತು ಎಂದು ತಿಳಿಯುತ್ತದೆ. ಅಷ್ಟಾಗಿಯೂ ಹಡಗು ನಿರ್ಮಾಣಕ್ಕೆ ಭಾರತೀಯರು ಆಯ್ದುಕೊಂಡ ಮಾರ್ಗ ವಿಭಿನ್ನ. ನಿರ್ದಿಷ್ಟ ಮರದ ದಿಮ್ಮಿಗಳನ್ನು ಬಳಸಿ, ತೆಂಗಿನ ನಾರಿನ ಹಗ್ಗದಿಂದ ಅವನ್ನು ಹೊಲಿದು, ಈ ಮರದ ಹಲಗೆಗಳಲ್ಲಿ ನೀರಿನ ಪ್ರತಿರೋಧ ಗುಣ ತರುವುದಕ್ಕೆ ಮೀನಿನ ಎಣ್ಣೆ ಬಳಸುತ್ತಿದ್ದರು. ಮಳೆಗಾಲದ ಪ್ರಖರ ಅಲೆಗಳನ್ನು ತಡೆದುಕೊಂಡು ದೂರತೀರಗಳಿಗೆ ಸಾಗುವ ಕ್ಷಮತೆ ಈ ಹಡಗುಗಳಿಗಿತ್ತು ಎಂಬುದು ಸೋಜಿಗ. ಇವುಗಳ ಸಹಾಯದಿಂದಲೇ ಪ್ರಾಚೀನ ಭಾರತದ ಜನರು ಆಗ್ನೇಯ ಏಷ್ಯದ ಮಸಾಲೆ ದ್ವೀಪಗಳಿಗೆ ಹಾಗೂ ಅತ್ತ ಒಮಾನಿನ ವ್ಯಾಪಾರ ಕೇಂದ್ರಗಳಿಗೆ ಹೋಗಿ ಬರುತ್ತಿದ್ದರು.

ತಮ್ಮ ‘ಓಷನ್ ಆಫ್ ಚರ್ನ್’ ಪುಸ್ತಕದಲ್ಲಿ ಪ್ರಾಚೀನ ಭಾರತದ ಸಮಗ್ರ ಸಾಗರ ಚರಿತ್ರೆಯನ್ನು ವರ್ಣಿಸಿರುವ ಸಂಜೀವ ಸನ್ಯಾಲ್ ಅವರು ಪ್ರಧಾನಿಯವರ ಆರ್ಥಿಕ ಸಲಹೆಗಾರರಿದ್ದಾಗ ವಿನ್ಯಾಸಗೊಳಿಸಿರುವ ಪ್ರಾಜೆಕ್ಟ್ ಇದು. ಇದನ್ನು ಸಾಕಾರಗೊಳಿಸುವುದಕ್ಕೆ ಹಲವು ಖಾಸಗಿ ಹಡಗು ನಿರ್ಮಾಣ ಕಂಪನಿಗಳು, ಸಂಶೋಧಕರು ಇವರೆಲ್ಲರ ಜತೆಗೂಡಿ ಭಾರತೀಯ ನೌಕಾಸೇನೆ ಕಾರ್ಯ ಶುರು ಮಾಡಿತು. ಭಾರತದ ಶಿಕ್ಷಣ ಸಚಿವಾಲಯ ವಿನ್ಯಾಸಗೊಳಿಸುತ್ತಿರುವ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಇದೊಂದು ಉದಾಹರಣೆಯ ಮಾದರಿಯಾಗಬೇಕು ಎಂಬ ಆಶಯವಿದೆ.

ಅಜಂತಾ ಗುಹೆಗಳಲ್ಲಿ ಕಂಡುಬರುವ ಚಿತ್ರಗಳಲ್ಲೊಂದು, ನಾಲ್ಕನೇ ಶತಮಾನಕ್ಕೆ ಸೇರಿಂದ ಹೊಲಿದ ಹಡಗಿನದ್ದು. ಬೇರೆ ಗ್ರಂಥಗಳು ಹಾಗೂ ವಿದೇಶಿಗರ ಬರವಣಿಗೆಗಳಲ್ಲಿ ಕಂಡುಬರುವ ವಿವರಣೆಗಳ ಆಧಾರದಲ್ಲಿ ಇದೇ ಮಾದರಿಯನ್ನು ಪ್ರಮುಖ ಆಕರವನ್ನಾಗಿರಿಸಿಕೊಳ್ಳಲಾಗಿದೆ. ಹಾಗೆಂದು, ಭಾರತೀಯರ ಹಡಗು ನಿರ್ಮಾಣ ಕೌಶಲವು 2,000 ವರ್ಷಗಳಷ್ಟು ಹಿಂದಕ್ಕೆ ಹೋಗುತ್ತದೆ.

stitched ship
ಭಾಷಾ ಬಿಕ್ಕಟ್ಟಿನ ವಾಗ್ವಾದಗಳ ನಡುವೆ ಬೇರುಗಳನ್ನು ತಡಕುತ್ತ… (ತೆರೆದ ಕಿಟಕಿ)

11ನೇ ಶತಮಾನದಲ್ಲಿ ಮಾಳ್ವದಲ್ಲಿದ್ದ ರಾಜ ಭೋಜನ ಕಾಲದ್ದು ಎಂದು ಗುರುತಿಸಲಾಗಿರುವ ಕೃತಿ ‘ಯುಕ್ತಿಕಲ್ಪತರು’ ಈ ಹಡಗು ವಿನ್ಯಾಸ ಕೌಶಲದ ಚರಿತ್ರೆಯನ್ನು ಕಟ್ಟಿಕೊಡುತ್ತದೆ. ರಾಷ್ಟ್ರೀಯ ದೃಷ್ಟಿಕೋನದ ಆಧುನಿಕ ಇತಿಹಾಸಕಾರರ ಪೈಕಿ ಒಬ್ಬರಾಗಿರುವ ರಾಧಾ ಕುಮದ ಮುಖರ್ಜಿಯವರು ‘Indian Shipping: A History of the Sea-Borne Trade and Maritime Activity of the Indians from the Earliest Times’ ಎಂಬ ಕೃತಿಯಲ್ಲಿ ‘ಯುಕ್ತಿಕಲ್ಪತರು’ ಗ್ರಂಥದ ವಿಶ್ಲೇಷಣೆ ಮಾಡಿದ್ದಾರೆ. ನೌಕಾಸೇನೆ ಹಾಗೂ ರಕ್ಷಣಾ ಸಚಿವಾಲಯದ ಪ್ರೋತ್ಸಾಹದೊಂದಿಗೆ ನಡೆಯುತ್ತಿರುವ ವಿಚಾರಕೂಟವಾಗಿರುವ ನ್ಯಾಷನಲ್ ಮಾರಿಟೈಮ್ ಫೌಂಡೇಶನ್, ಈ ಎಲ್ಲದರ ಆಧಾರದಲ್ಲಿಯೇ ಹೊಲಿದ ಹಡಗಿನ ನಿರ್ಮಾಣಕ್ಕೆ ಅಧ್ಯಯನದ ಚೌಕಟ್ಟೊಂದನ್ನು ಹಾಕಿಕೊಟ್ಟಿದೆ.

ಕಬ್ಬಿಣದ ಮೊಳೆಗಳನ್ನು ಬಳಸದ, 19.6 ಮೀಟರುಗಳ ಈ ಹೊಲಿದಿಟ್ಟ ನಾವೆ ಸಾಗರದಲೆಗಳ ಮೇಲೆ ಚಲಿಸಿ ಸಫಲವಾಗಿದ್ದೇ ಆದರೆ ಅದೊಂದು ಶೈಕ್ಷಣಿಕ ಹಾಗೂ ಪ್ರವಾಸೋದ್ದಿಮೆಯ ಆಕರ್ಷಣೆಯಾಗಲಿದೆ. ಪ್ರಾಚೀನ ಭಾರತದ ಸಾಮರ್ಥ್ಯವನ್ನು ಸಾಕ್ಷೀಕರಿಸುತ್ತ, ಈಗಿನ ಪೀಳಿಗೆಗೆ ಸ್ಫೂರ್ತಿಯ ಬಿಂದುವೂ ಆಗಲಿದೆ.

- ಚೈತನ್ಯ ಹೆಗಡೆ

cchegde@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com