ಸುಂಕ ಸಮರ: ವ್ಯಾಪಾರ, ಸ್ನೇಹಕ್ಕೆ ಪೆಟ್ಟು; ಸರಿಪಡಿಸಬಲ್ಲವೇ ಭಾರತ-ಅಮೆರಿಕಾ? (ಜಾಗತಿಕ ಜಗಲಿ)

ಸುಂಕ ಸಮರ: ವ್ಯಾಪಾರ, ಸ್ನೇಹಕ್ಕೆ ಪೆಟ್ಟು; ಸರಿಪಡಿಸಬಲ್ಲವೇ ಭಾರತ-ಅಮೆರಿಕಾ? (ಜಾಗತಿಕ ಜಗಲಿ)

ಟ್ರಂಪ್ ಇತ್ತೀಚಿನ ಹೇಳಿಕೆಗಳು ಅವರು ತನ್ನ ಸರ್ಕಾರದ ಆರಂಭಿಕ ದಿನಗಳಲ್ಲಿ ನೀಡುತ್ತಿದ್ದ ಹೇಳಿಕೆಗಳಿಂದ ಸಂಪೂರ್ಣವಾಗಿ ಭಿನ್ನವಾಗಿವೆ.
Published on

ಕೆಲವು ತಿಂಗಳ ಹಿಂದಷ್ಟೇ ಭಾರತವನ್ನು ಅಮೆರಿಕಾದ ಪ್ರಮುಖ ಸಹಯೋಗಿ ಎನ್ನುತ್ತಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈಗ ಭಾರತದ ಆರ್ಥಿಕತೆ ಕುಸಿದು ಹೋದರೂ ತನಗೆ ಚಿಂತೆ ಇಲ್ಲ ಎಂಬ ಮಾತುಗಳನ್ನಾಡಿದ್ದಾರೆ.

ಅಧಿಕಾರಿಗಳು ಟ್ರಂಪ್ ಆಡಳಿತ ಇಂದಿಗೂ ಭಾರತವನ್ನು ತನ್ನ ಮಹತ್ವದ ಸಹಯೋಗಿ ಎಂದೇ ಪರಿಗಣಿಸಿದೆ ಎನ್ನುತ್ತಿದ್ದಾರೆ. ಆದರೆ, ವ್ಯಾಪಾರ, ರಷ್ಯಾಗಳ ಕುರಿತ ಭಿನ್ನಾಭಿಪ್ರಾಯಗಳು, ಮತ್ತು ಮೇ ತಿಂಗಳಲ್ಲಿ ಭಾರತ - ಪಾಕಿಸ್ತಾನಗಳ ನಡುವೆ ನಡೆದ ನಾಲ್ಕು ದಿನಗಳ ಕದನ ನಿಲ್ಲಿಸಲು ಟ್ರಂಪ್ ಕಾರಣರೋ ಅಲ್ಲವೋ ಎಂಬ ಕುರಿತ ಭಿನ್ನಾಭಿಪ್ರಾಯಗಳು ಸಹ ಭಾರತ ಅಮೆರಿಕಾಗಳ ನಡುವಿನ ಸಂಬಂಧವನ್ನು ಉದ್ವಿಗ್ನಗೊಳಿಸಿವೆ.

ಡೊನಾಲ್ಡ್ ಟ್ರಂಪ್ ಭಾರತವನ್ನು ಬಹಿರಂಗವಾಗಿ ಟೀಕಿಸಿದ ಪರಿಣಾಮವಾಗಿ ಈಗಾಗಲೇ ಸಂಕೀರ್ಣವಾಗಿರುವ ಭಾರತ - ಅಮೆರಿಕಾಗಳ ಸಂಬಂಧದ ಮೇಲೆ ಇನ್ನಷ್ಟು ಒತ್ತಡ ಬಿದ್ದಂತಾಗಿದೆ. ಅದರೊಡನೆ, ಪ್ರಧಾನಿ ನರೇಂದ್ರ ಮೋದಿಯವರೊಡನೆ ಡೊನಾಲ್ಡ್ ಟ್ರಂಪ್ ಬೆಳೆಸಿದ ಸ್ನೇಹವನ್ನೂ ಇದು ಹಾನಿಗೊಳಿಸುವ ಅಪಾಯವಿದೆ. ಇದೇ ಸಮಯದಲ್ಲಿ, ಅಮೆರಿಕಾ ಪಾಕಿಸ್ತಾನದ ಜೊತೆಗೂ ಆತ್ಮೀಯವಾಗುತ್ತಿದ್ದು, ಜೂನ್ ತಿಂಗಳಲ್ಲಿ ಟ್ರಂಪ್ ಪಾಕ್ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರನ್ನು ಶ್ವೇತ ಭವನದಲ್ಲಿ ಭೇಟಿಯಾದುದು ಇದನ್ನು ಸ್ಪಷ್ಟಪಡಿಸಿತ್ತು.

ಅಬ್ಸರ್ವರ್ ರಿಸರ್ಚ್ ಫೌಂಡೇಷನ್ನಿನ ಹಿರಿಯ ತಜ್ಞರಾದ ಮನೋಜ್ ಜೋಶಿಯವರು ಈ ಬೆಳವಣಿಗೆಗಳಿಂದ ಪ್ರಧಾನಿ ನರೇಂದ್ರ ಮೋದಿಯವರು ತೀವ್ರ ಅಸಮಾಧಾನಗೊಂಡಿರುವ ಸಾಧ್ಯತೆಗಳಿವೆ ಎಂದಿದ್ದಾರೆ.

ಚೀನಾದ ವಿರುದ್ಧ ನಿಲ್ಲಲು ಅಮೆರಿಕಾ ಭಾರತವನ್ನು ಒಂದು ಪ್ರಮುಖ ಸಹಯೋಗಿಯನ್ನಾಗಿ ಪರಿಗಣಿಸುತ್ತದೆ. ಆದರೆ, ಭಾರತ ರಷ್ಯಾದೊಡನೆಯೂ ಬಲವಾದ ಬಾಂಧವ್ಯವನ್ನು ಮುಂದುವರಿಸುವ ಮೂಲಕ ಅಮೆರಿಕಾದ ಅಸಮಾಧಾನಕ್ಕೆ ಕಾರಣವಾಗಿದೆ. ಭಾರತ ರಷ್ಯಾದಿಂದ ತೈಲ ಮತ್ತು ಆಯುಧಗಳನ್ನು ಖರೀದಿಸುತ್ತಿದ್ದು, ಇದು ರಷ್ಯಾದ ಆರ್ಥಿಕತೆಗೆ ನೆರವಾಗುತ್ತಿದೆ. ಅದರೊಡನೆ, ಐದು ರಾಷ್ಟ್ರಗಳು ಜೊತೆಯಾಗಿ ಕಾರ್ಯ ನಿರ್ವಹಿಸುವ ಬ್ರಿಕ್ಸ್ ಒಕ್ಕೂಟದಲ್ಲೂ ಭಾರತ - ರಷ್ಯಾಗಳು ಸದಸ್ಯರಾಗಿವೆ.

ಉಕ್ರೇನ್ ಯುದ್ಧವನ್ನು ನಿಲ್ಲಿಸದ ಕಾರಣಕ್ಕಾಗಿ ಟ್ರಂಪ್ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮೇಲೆ ಕೋಪಗೊಂಡಿದ್ದಾರೆ. ಈ ಕಾರಣದಿಂದಲೇ ಟ್ರಂಪ್ ರಷ್ಯಾದ ಜೊತೆ ವ್ಯಾಪಾರ ವ್ಯವಹಾರ ನಡೆಸುವ ದೇಶಗಳ ಮೇಲೆ ಹೆಚ್ಚುವರಿ ಸುಂಕ (ಟ್ಯಾರಿಫ್) ವಿಧಿಸುವುದು ಖಂಡಿತಾ ಎಂದಿದ್ದಾರೆ. ಬುಧವಾರ, ಜೂನ್ 30ರಂದು ಮಾತನಾಡಿದ ಟ್ರಂಪ್, ರಷ್ಯಾದಿಂದ ಸರಕು ಖರೀದಿ ನಡೆಸುತ್ತಿರುವುದಕ್ಕೆ ಭಾರತದ ಮೇಲೆ 'ದಂಡ' ವಿಧಿಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

ಜುಲೈ 31ರಂದು, ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡ ಟ್ರಂಪ್, "ಭಾರತ ರಷ್ಯಾದೊಡನೆ ಏನು ಮಾಡುತ್ತದೆ ಎಂಬ ಕುರಿತು ನಾವು ತಲೆ ಕೆಡಿಸಿಕೊಂಡಿಲ್ಲ. ಅವೆರಡೂ ದೇಶಗಳ ಆರ್ಥಿಕತೆ ಈಗಾಗಲೇ ಸತ್ತಿದ್ದು, ಅವುಗಳು ಜೊತೆಯಾಗಿ ಆರ್ಥಿಕತೆಗಳನ್ನು ಪಾತಾಳಕ್ಕೆ ಒಯ್ಯಲಿ. ಅದು ಅವುಗಳ ಸಮಸ್ಯೆಯಷ್ಟೇ" ಎಂದಿದ್ದಾರೆ.

ಶುಕ್ರವಾರ, ಆಗಸ್ಟ್ 1ರಂದು, ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರರಾದ ರಣಧೀರ್ ಜೈಸ್ವಾಲ್ ಅವರು ಭಾರತ ಅಮೆರಿಕಾಗಳ ಸಂಬಂಧ ಹಿಂದೆಯೂ ಸಾಕಷ್ಟು ಏರಿಳಿತಗಳನ್ನು ಕಂಡಿದ್ದು, ಉಭಯ ದೇಶಗಳ ಸ್ನೇಹ ಭದ್ರವಾಗಿದೆ ಎಂದಿದ್ದಾರೆ. ಎರಡೂ ದೇಶಗಳು ಮಹತ್ವದ ಗುರಿಗಳನ್ನು ಸಾಧಿಸಲು ಜೊತೆಯಾಗಿ ಕಾರ್ಯಾಚರಿಸುತ್ತಿದ್ದು, ತಮ್ಮ ನಡುವಿನ ಸ್ನೇಹ ಸುಧಾರಿಸಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಸುಂಕ ಸಮರ: ವ್ಯಾಪಾರ, ಸ್ನೇಹಕ್ಕೆ ಪೆಟ್ಟು; ಸರಿಪಡಿಸಬಲ್ಲವೇ ಭಾರತ-ಅಮೆರಿಕಾ? (ಜಾಗತಿಕ ಜಗಲಿ)
ಹೊಸಕಿ ಹಾಕಲು ಭಾರತ ಬಾಂಗ್ಲಾವಲ್ಲ! ಭಾರತವೀಗ ಗ್ಲೋಬಲ್ ಲೀಡರ್! (ಹಣಕ್ಲಾಸು)

ಟ್ರಂಪ್ ಇತ್ತೀಚಿನ ಹೇಳಿಕೆಗಳು ಅವರು ತನ್ನ ಸರ್ಕಾರದ ಆರಂಭಿಕ ದಿನಗಳಲ್ಲಿ ನೀಡುತ್ತಿದ್ದ ಹೇಳಿಕೆಗಳಿಂದ ಸಂಪೂರ್ಣವಾಗಿ ಭಿನ್ನವಾಗಿವೆ. ಆಗ, ಭಾರತ ಮತ್ತು ಅಮೆರಿಕಾ ಎರಡೂ ದೇಶಗಳ ಅಧಿಕಾರಿಗಳು ಟ್ರಂಪ್ ಮೊದಲ ಅವಧಿಯಲ್ಲಿ ಆರಂಭಗೊಂಡಿದ್ದ ಟ್ರಂಪ್ - ಮೋದಿ ಸ್ನೇಹವನ್ನು ಇನ್ನಷ್ಟು ಬಲಪಡಿಸುವ ಆಸಕ್ತಿ ಹೊಂದಿದ್ದರು. ಡೊನಾಲ್ಡ್ ಟ್ರಂಪ್ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಆಗುವ ಮುನ್ನ, ಮೈಕ್ ವಾಲ್ಟ್ಜ್ ಅವರು ಭಾರತ - ಅಮೆರಿಕಾ ಸಹಯೋಗವನ್ನು '21ನೇ ಶತಮಾನದ ಅತ್ಯಂತ ಪ್ರಮುಖ ಸಂಬಂಧ' ಎಂದು ಬಣ್ಣಿಸಿದ್ದರು.

ಫೆಬ್ರವರಿ ತಿಂಗಳಲ್ಲಿ ಮೋದಿಯವರನ್ನು ಶ್ವೇತ ಭವನಕ್ಕೆ ಸ್ವಾಗತಿಸಿದ ಟ್ರಂಪ್, 'ಮೋದಿ ನನಗಿಂತಲೂ ಚೆನ್ನಾಗಿ ಚೌಕಾಶಿ ಮಾಡಬಲ್ಲ, ಅತ್ಯುತ್ತಮ ಮಾತುಕತೆಗಾರ' ಎಂದು ಶ್ಲಾಘಿಸಿದ್ದರು. ಮೋದಿಯವರೂ ಸಹ ಟ್ರಂಪ್ ಅವರ ಜನಪ್ರಿಯ ಘೋಷ ವಾಕ್ಯವನ್ನು ಬಳಸಿ, ತಾನೂ 'ಮೇಕ್ ಇಂಡಿಯಾ ಗ್ರೇಟ್ ಅಗೇನ್' ಉದ್ದೇಶದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದಿದ್ದರು. ಆ ಬಳಿಕ, ಅಮೆರಿಕಾದ ಉನ್ನತ ನಾಯಕರಾದ, ಗುಪ್ತಚರ ವಿಭಾಗದ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್, ಮತ್ತು ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತಿತರರು ನವದೆಹಲಿಗೆ ಭೇಟಿ ನೀಡಿದರು.

ಆದರೆ, ಈ ಸ್ನೇಹದ ಮನಸ್ಥಿತಿ ಹೆಚ್ಚು ದಿನಗಳು ಮುಂದುವರಿಯಲಿಲ್ಲ. ಅದಾದ ಕೆಲವು ತಿಂಗಳುಗಳಲ್ಲಿ, ಭಾರತ ಮತ್ತು ಅಮೆರಿಕಾಗಳ ನಡುವೆ ವ್ಯಾಪಾರ ಒಪ್ಪಂದದ ಕುರಿತ ಮಾತುಕತೆಗಳು ವಿಫಲವಾದವು. ಅಮೆರಿಕಾದ ಪ್ರಸ್ತುತ ಮತ್ತು ಮಾಜಿ ಅಧಿಕಾರಿಗಳ ಪ್ರಕಾರ, ಭಾರತದ ಜೊತೆಗಿನ ವ್ಯಾವಹಾರಿಕ ಪ್ರಗತಿ ಸಾಕಷ್ಟು ನಿಧಾನವಾಗಿರುವ ಕುರಿತು ಟ್ರಂಪ್ ಅಸಮಾಧಾನ ಹೊಂದಿದ್ದಾರೆ.

ವ್ಯಾಪಾರ ಸಂಬಂಧಿ ಮಾತುಕತೆಗಳಲ್ಲಿ ಇರುವ ಒಂದು ಪ್ರಮುಖ ಸಮಸ್ಯೆ ಎಂದರೆ, ಭಾರತ ತನ್ನ ಕೃಷಿ ಮಾರುಕಟ್ಟೆಗಳನ್ನೂ ಮುಕ್ತವಾಗಿಸಬೇಕು ಎಂದು ಅಮೆರಿಕಾ ಬಯಸುತ್ತಿದೆ. ಆದರೆ, ಭಾರತದಲ್ಲಿ 40%ಗೂ ಹೆಚ್ಚು ಜನರಿಗೆ ಕೃಷಿಯೇ ಜೀವನೋಪಾಯ ಆಗಿರುವುದರಿಂದ, ಈ ವಿಚಾರ ಭಾರತಕ್ಕೆ ಬಹಳ ಸೂಕ್ಷ್ಮವಾಗಿದೆ.

ಭಾರತ ನಿರಂತರವಾಗಿ ತನ್ನ ಕೃಷಿ ಕ್ಷೇತ್ರವನ್ನು ರಕ್ಷಿಸುತ್ತಾ ಬಂದಿದೆ. ಕೃಷಿಯನ್ನು ವಿದೇಶೀ ವ್ಯಾಪಾರಕ್ಕೆ ಮುಕ್ತವಾಗಿಸುವುದು ಬಹುದೊಡ್ಡ ಪ್ರಮಾಣದ ಮತದಾರರಾಗಿರುವ ಭಾರತೀಯ ರೈತರ ಅಸಮಾಧಾನಕ್ಕೆ ಕಾರಣವಾಗಬಹುದು. ಇದು ಪ್ರಧಾನಿ ಮೋದಿಯವರಿಗೆ ಅಪಾಯಕಾರಿ ಬೆಳವಣಿಗೆಯಾಗಿದೆ. 2021ರಲ್ಲಿ, ದೇಶಾದ್ಯಂತ ರೈತರು ಪ್ರತಿಭಟನೆ ನಡೆಸಿದ ಕಾರಣದಿಂದ ಮೋದಿಯವರು ಕೃಷಿ ಕಾಯ್ದೆಯನ್ನು ಬದಲಾಯಿಸುವ ಯೋಚನೆಯನ್ನು ಕೈಬಿಡಬೇಕಾಯಿತು.

ಭಾರತ ಮತ್ತು ಅಮೆರಿಕಾ ಇನ್ನೂ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ನಡೆಸುತ್ತಿವೆ ಎಂದು ಟ್ರಂಪ್ ಹೇಳಿದ್ದು, ಅದಕ್ಕೆ ಗಡುವಾಗಿದ್ದ ಆಗಸ್ಟ್ 1 ಈಗಾಗಲೇ ಕಳೆದು ಹೋಗಿದೆ.

ಕದನ ವಿರಾಮ: ಯಾರು ಕಾರಣ?

ಮೇ ತಿಂಗಳಲ್ಲಿ, ಪರಮಾಣು ಶಕ್ತಿಗಳಾದ ಭಾರತ ಮತ್ತು ಪಾಕಿಸ್ತಾನಗಳು ನಾಲ್ಕು ದಿನಗಳ ಕಾಲ ಕದನಕ್ಕೆ ಇಳಿದಾಗ, ಭಾರತ ಮತ್ತು ಅಮೆರಿಕಾಗಳ ಸಂಬಂಧಕ್ಕೆ ಇನ್ನೊಂದಷ್ಟು ಧಕ್ಕೆ ಉಂಟಾಯಿತು. ಭಾರತದ ಅವಿಭಾಜ್ಯ ಅಂಗವಾದ ಕಾಶ್ಮೀರದಲ್ಲಿ ನಡೆದ ಭಯೋತ್ಪಾದನಾ ದಾಳಿಯ ಪರಿಣಾಮವಾಗಿ ಈ ಚಕಮಕಿ ಆರಂಭಗೊಂಡಿತು. ಈ ದಾಳಿಗೆ ಭಾರತ ಸರ್ಕಾರ ಪಾಕಿಸ್ತಾನವೇ ಕಾರಣ ಎಂದರೆ, ಪಾಕಿಸ್ತಾನ ಎಂದಿನಂತೆ ಭಯೋತ್ಪಾದನಾ ಕೃತ್ಯದಲ್ಲಿ ತನ್ನ ಪಾತ್ರವಿಲ್ಲ ಎಂದಿತು.

ಟ್ರಂಪ್ ಆಡಳಿತದ ಅಧಿಕಾರಿಗಳ ಪ್ರಕಾರ, ಈ ಯುದ್ಧದ ಸಂದರ್ಭದಲ್ಲಿ, ಪಾಕಿಸ್ತಾನದಲ್ಲಿನ ಗುರಿಗಳ ಮೇಲೆ ದಾಳಿ ನಡೆಸುವ ಸಲುವಾಗಿ ಭಾರತ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಗಳನ್ನು ಬಳಸಿಕೊಂಡಿದೆ ಎಂದು ಅಮೆರಿಕಾಗೆ ಮಾಹಿತಿ ಲಭಿಸಿತು. ರಷ್ಯಾದ ಸಹಯೋಗದಲ್ಲಿ ಭಾರತ ನಿರ್ಮಿಸುತ್ತಿರುವ ಬ್ರಹ್ಮೋಸ್ ಕ್ಷಿಪಣಿ ಪರಮಾಣು ಶಸ್ತ್ರಾಸ್ತ್ರಗಳನ್ನು ಒಯ್ಯಬಲ್ಲ ಸಾಮರ್ಥ್ಯ ಹೊಂದಿದೆ ಎಂದು ಅಮೆರಿಕಾ ಆತಂಕಿತವಾಗಿದೆ. ಆದರೆ, ಭಾರತ ತಾನು ಬ್ರಹ್ಮೋಸ್ ಕ್ಷಿಪಣಿಯನ್ನು ಸಾಂಪ್ರದಾಯಿಕ ಸಿಡಿತಲೆಗಳನ್ನು ಪ್ರಯೋಗಿಸಲು ಬಳಸುವುದಾಗಿ ಸ್ಪಷ್ಟಪಡಿಸಿದೆ.

ಒಂದು ವೇಳೆ ಯುದ್ಧ ಏನಾದರೂ ಕೈ ಮೀರಿ ಹೋದರೆ, ಭಾರತ ತನ್ನ ಕ್ಷಿಪಣಿಯೊಂದರಲ್ಲಿ ಪರಮಾಣು ಶಸ್ತ್ರಾಸ್ತ್ರ ಇಡಬಹುದು, ಅಥವಾ ಯುದ್ಧಕ್ಕೆ ಪ್ರತಿಕ್ರಿಯೆಯ ರೂಪದಲ್ಲಿ ಪಾಕಿಸ್ತಾನ ಭಾರತದ ಮೇಲೆ ಪರಮಾಣು ದಾಳಿ ನಡೆಸಬಹುದು ಎಂದು ಟ್ರಂಪ್ ಆತಂಕ ಹೊಂದಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಆತಂಕದಿಂದಲೇ ಟ್ರಂಪ್ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತು ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೋ ಅವರ ಬಳಿ ಉಭಯ ದೇಶಗಳ ನಾಯಕರೊಡನೆ ಮಾತುಕತೆ ನಡೆಸುವಂತೆ ಸೂಚಿಸಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡ ಟ್ರಂಪ್, ತಾನು ಮತ್ತು ತನ್ನ ತಂಡ ಮೇ 10ರಂದು ಭಾರತ ಪಾಕಿಸ್ತಾನ ಯುದ್ಧ ನಿಲ್ಲಿಸಲು ಒಂದು ಒಪ್ಪಂದ ಮಾಡಲು ನೆರವಾಗಿರುವುದಾಗಿ ಹೇಳಿದರು. ಪಾಕಿಸ್ತಾನ ಈ ಸುದ್ದಿಯನ್ನು ಸ್ವಾಗತಿಸಿ, ಟ್ರಂಪ್ ಅವರನ್ನು ಶ್ಲಾಘಿಸಿತು. ಅಷ್ಟೇ ಸಾಲದೆಂಬಂತೆ, ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು ನೊಬೆಲ್ ಶಾಂತಿ ಪುರಸ್ಕಾರಕ್ಕೂ ಶಿಫಾರಸು ಮಾಡಿತು!

ಭಾರತ ಡೊನಾಲ್ಡ್ ಟ್ರಂಪ್ ಹೇಳಿಕೆಗಳನ್ನು ಬಲವಾಗಿ ತಳ್ಳಿ ಹಾಕಿದ್ದು, ಕದನ ವಿರಾಮ ನಡೆಸಲು ಯಾವುದೇ ವಿದೇಶ ಸಹಾಯ ಮಾಡಿಲ್ಲ ಎಂದು ಸ್ಪಷ್ಟಪಡಿಸಿತು. ಡೊನಾಲ್ಡ್ ಟ್ರಂಪ್ ಹೇಳಿಕೊಳ್ಳುವಂತೆ, ಅಮೆರಿಕಾ ಯಾವುದೇ ದೊಡ್ಡ ಪಾತ್ರ ನಿರ್ವಹಿಸಿಲ್ಲ ಎಂದು ಭಾರತ ಸ್ಪಷ್ಟಪಡಿಸಿತು. ಭಾರತದ ಇಂತಹ ಸ್ಪಷ್ಟ ಪ್ರತಿಕ್ರಿಯೆ ಟ್ರಂಪ್‌ರನ್ನು ಇನ್ನಷ್ಟು ಕೆರಳಿಸಿದ್ದು ಹೌದು. ಮೋದಿ ತನಗೆ ಧನ್ಯವಾದ ಸಲ್ಲಿಸದಿರುವುದಕ್ಕೆ ತನಗೆ ಅಸಮಾಧಾನವಾಗಿದೆ ಎಂದು ಟ್ರಂಪ್ ತನ್ನ ತಂಡದೊಡನೆ ದೂರಿದ್ದರು.

ಅಮೆರಿಕಾ ಮಾಧ್ಯಮ ವರದಿಗಳ ಪ್ರಕಾರ, ಭಾರತ ಮತ್ತು ಪಾಕಿಸ್ತಾನಗಳ ಜೊತೆಗಿನ ತನ್ನ ಸಂಬಂಧವನ್ನು ಬಳಸಿಕೊಂಡ ಟ್ರಂಪ್, ಉಭಯ ದೇಶಗಳ ನಡುವೆ ಕದನ ವಿರಾಮ ಜಾರಿಗೊಳಿಸಲು ನೆರವಾದರು ಎಂದು ಶ್ವೇತ ಭವನದ ಅಧಿಕಾರಿಗಳು ಹೇಳಿದ್ದಾರೆ. ಒಂದು ವೇಳೆ ಟ್ರಂಪ್ ಮಧ್ಯ ಪ್ರವೇಶಿಸದಿದ್ದರೆ, ಭಾರತ - ಪಾಕ್ ಯುದ್ಧ ಪರಮಾಣು ಯುದ್ಧದ ರೂಪ ತಳೆಯುತ್ತಿತ್ತು ಎಂದು ಅಮೆರಿಕಾ ಸರ್ಕಾರ ಭಾವಿಸಿದೆ. ಆದರೆ, ಭಾರತ ಬ್ರಹ್ಮೋಸ್ ಕ್ಷಿಪಣಿ ಬಳಸಿದ್ದೇ ಟ್ರಂಪ್ ಆತಂಕಕ್ಕೆ ಕಾರವಾಗಿತ್ತೇ ಎಂಬ ಕುರಿತು ಅಧಿಕಾರಿಗಳು ಯಾವುದೇ ಹೇಳಿಕೆ ನೀಡಿಲ್ಲ.

ವಾಷಿಂಗ್ಟನ್ನಿನ ಭಾರತೀಯ ರಾಯಭಾರ ಕಚೇರಿಯಲ್ಲಿರುವ ಅಧಿಕಾರಿಗಳು ಭಾರತ ತಾನು 'ನೋ ಫಸ್ಟ್ ನ್ಯೂಕ್ಲಿಯರ್ ಪಾಲಿಸಿ' ಅನ್ನು ಅನುಸರಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಂದರೆ, ಭಾರತ ತಾನೇ ಮೊದಲಾಗಿ ಎಂದಿಗೂ ಪರಮಾಣು ದಾಳಿ ನಡೆಸುವುದಿಲ್ಲ ಎಂಬ ನೀತಿಯನ್ನು ಅನುಸರಿಸುತ್ತದೆ. ಆದ್ದರಿಂದ, ಭಾರತ ಬ್ರಹ್ಮೋಸ್ ಕ್ಷಿಪಣಿಯನ್ನು ಬಳಸಿದ್ದಕ್ಕೆ ಅಮೆರಿಕಾ ಸಂಭಾವ್ಯ ಪರಮಾಣು ದಾಳಿಯ ಬಗ್ಗೆ ಆತಂಕಗೊಳ್ಳುವ ಅಗತ್ಯ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಇಷ್ಟು ಸಾಲದೆಂಬಂತೆ, ಭಾರತ - ಪಾಕಿಸ್ತಾನಗಳ ನಡುವೆ ದೀರ್ಘ ಕಾಲದಿಂದಲೂ ಸಮಸ್ಯೆಯಾಗಿರುವ ಕಾಶ್ಮೀರ ವಿಚಾರವನ್ನು ಬಗೆಹರಿಸಲು ತಾನು ಸಹಾಯ ಮಾಡಲು ಬಯಸುವುದಾಗಿ ಹೇಳಿಕೆ ನೀಡಿದ ಟ್ರಂಪ್, ಪರಿಸ್ಥಿತಿಯನ್ನು ಇನ್ನಷ್ಟು ಹಾಳುಗೆಡವಿದರು.

ಟ್ರಂಪ್ ಮೊದಲ ಅಧ್ಯಕ್ಷೀಯ ಅವಧಿಯಲ್ಲಿ ದಕ್ಷಿಣ ಏಷ್ಯಾ ವಿಚಾರಗಳನ್ನು ನಿರ್ವಹಿಸುತ್ತಿದ್ದ, ಅಮೆರಿಕಾದ ಮಾಜಿ ಉನ್ನತ ಅಧಿಕಾರಿ ಲಿಸಾ ಕರ್ಟಿಸ್ ಅವರು ಈ ಕುರಿತು ಹೇಳಿಕೆ ನೀಡಿದ್ದು, "ಟ್ರಂಪ್ ಮಾತುಗಳು ಭಾರತಕ್ಕೆ ಸಾಕಷ್ಟು ಇರಿಸುಮುರಿಸು ಉಂಟುಮಾಡಿತ್ತು. ಭಾರತ ಕಾಶ್ಮೀರ ವಿಚಾರವನ್ನು ಸರಿಪಡಿಸಲು ಯಾವುದೇ ಬಾಹ್ಯ ಸಹಾಯದ ಅಗತ್ಯವಿಲ್ಲ ಎಂಬ ಐತಿಹಾಸಿಕ ನಿಲುವು ಹೊಂದಿದ್ದರೆ, ಪಾಕಿಸ್ತಾನ ವಿದೇಶೀ ಮಧ್ಯಸ್ಥಿಕೆಯನ್ನು ಸ್ವಾಗತಿಸುತ್ತದೆ" ಎಂದಿದ್ದರು.

ಒಂದು ವೇಳೆ ಟ್ರಂಪ್ ಮೇ 10ರಂದು ಒಂದು ಅಥವಾ ಎರಡು ಹೇಳಿಕೆಗಳನ್ನು ಮಾತ್ರ ನೀಡಿದ್ದರೆ, ಭಾರತ ಮತ್ತು ಅಮೆರಿಕಾ ಎರಡೂ ಅದನ್ನು ಮರೆತು ಮುಂದೆ ಸಾಗುತ್ತಿದ್ದವು. ಆದರೆ, ಟ್ರಂಪ್ ಪದೇ ಪದೇ ಅಮೆರಿಕಾ ಯುದ್ಧ ನಿಲ್ಲಿಸಲು ನೆರವಾಯಿತು ಎಂದು ಹೇಳುತ್ತಲೇ ಬಂದಿದ್ದು ಪರಿಸ್ಥಿತಿಯನ್ನು ಹದಗೆಡಿಸಿ, ಭಾರತ ಅಮೆರಿಕಾ ಸಂಬಂಧಕ್ಕೆ ಧಕ್ಕೆ ಉಂಟುಮಾಡಿತು.

ಸುಂಕ ಸಮರ: ವ್ಯಾಪಾರ, ಸ್ನೇಹಕ್ಕೆ ಪೆಟ್ಟು; ಸರಿಪಡಿಸಬಲ್ಲವೇ ಭಾರತ-ಅಮೆರಿಕಾ? (ಜಾಗತಿಕ ಜಗಲಿ)
ಅಮೇರಿಕಾಗೆ BRICS ಡಿಚ್ಚಿ! (ಹಣಕ್ಲಾಸು)

ಭಾರತ - ರಷ್ಯಾ ಸಂಬಂಧ

ಪಾಕಿಸ್ತಾನಕ್ಕೆ ಟ್ರಂಪ್ ಬೆಂಬಲ ನೀಡುತ್ತಿರುವುದು ಮತ್ತು ರಷ್ಯಾದೊಡನೆ ಸ್ನೇಹ ಮತ್ತು ವ್ಯವಹಾರ ನಡೆಸುವುದಕ್ಕಾಗಿ ಭಾರತದ ಮೇಲೆ ಒತ್ತಡ ಹೇರುತ್ತಿರುವುದು ತಪ್ಪು ನಡೆಯಾಗಬಹುದು. ಅದರಲ್ಲೂ ಈಗ ಭಾರತ ಪಾಶ್ಚಾತ್ಯ ದೇಶಗಳ ಜೊತೆಗೂ ಬಲವಾದ ರಕ್ಷಣಾ ಬಾಂಧವ್ಯ ವೃದ್ಧಿಸುತ್ತಿರುವ ಸಂದರ್ಭದಲ್ಲಿ ನಡೆದಿರುವ ಈ ಬೆಳವಣಿಗೆ ಸೂಕ್ತವಾದುದಲ್ಲ.

ಇತ್ತೀಚಿನ ವರ್ಷಗಳಲ್ಲಿ, ಅದರಲ್ಲೂ ಉಕ್ರೇನ್ ಯುದ್ಧದ ಬಳಿಕ ರಷ್ಯಾದಿಂದ ಮಿಲಿಟರಿ ಪೂರೈಕೆಯನ್ನು ಸಮಯಕ್ಕೆ ಸರಿಯಾಗಿ ಪಡೆಯುವುದು ಕಷ್ಟಕರವಾದ ಕಾರಣ, ಭಾರತ ರಷ್ಯನ್ ಆಯುಧಗಳ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಲು ಪ್ರಯತ್ನ ಆರಂಭಿಸಿತ್ತು.

2020ರಿಂದ 2024ರ ನಡುವೆ, ಭಾರತ ತನ್ನ 36% ಮಿಲಿಟರಿ ಉಪಕರಣಗಳನ್ನು ರಷ್ಯಾದಿಂದ ಖರೀದಿಸಿದೆ. ರಷ್ಯಾ ಇಂದಿಗೂ ಭಾರತದ ಬಹುದೊಡ್ಡ ಆಯುಧ ಪೂರೈಕೆದಾರನಾಗಿದೆ. ಆದರೆ, 2006ರಿಂದ 2010ರ ಅವಧಿಗೆ ಹೋಲಿಸಿದರೆ ಇದು ಬಹುದೊಡ್ಡ ಬದಲಾವಣೆಯಾಗಿದ್ದು, ಆ ಅವಧಿಯಲ್ಲಿ ಭಾರತ ತನ್ನ 82% ಆಯುಧಗಳನ್ನು ರಷ್ಯಾದಿಂದಲೇ ಆಮದು ಮಾಡುತ್ತಿತ್ತು ಎಂದು ಸ್ಟಾಕ್‌ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಹೇಳಿದೆ.

ಅಮೆರಿಕಾ ಹಿಂದೆ ಒಂದಷ್ಟು ಭಾರತೀಯ ಕಂಪನಿಗಳ ಮೇಲೆ ನಿರ್ಬಂಧ ಹೇರಿದ್ದು, ಅವುಗಳು ನಾಗರಿಕ ಮತ್ತು ಮಿಲಿಟರಿ ಉದ್ದೇಶಗಳೆರಡಕ್ಕೂ ಬಳಕೆಯಾಗುವಂತಹ ತಂತ್ರಜ್ಞಾನಗಳನ್ನು ರಷ್ಯಾಗೆ ಮಾರಾಟ ಮಾಡಿವೆ ಎಂದು ಆರೋಪಿಸಿತ್ತು. ಇದು ರಷ್ಯಾಗೆ ಆಯುಧ ನಿರ್ಮಾಣಕ್ಕೆ ನೆರವಾಗಲಿದೆ ಎನ್ನುವುದು ಅಮೆರಿಕಾ ಆತಂಕವಾಗಿತ್ತು.

ಅಮೆರಿಕಾ ಭಾರತೀಯ ಉತ್ಪನ್ನಗಳ ಮೇಲೆ 25% ಸುಂಕ ವಿಧಿಸಿದಾಗ, ಅವರು ಭಾರತ ರಷ್ಯಾದಿಂದ ಅಪಾರ ತೈಲ ಖರೀದಿಸುತ್ತಿದೆ ಎಂದು ದೂರಿದ್ದರು. ಬಹಳಷ್ಟು ರಾಷ್ಟ್ರಗಳು ರಷ್ಯಾದಿಂದ ತೈಲ ಖರೀದಿಯನ್ನು ಕಡಿಮೆಗೊಳಿಸಿದಾಗ, ಅಥವಾ ಸ್ಥಗಿತಗೊಳಿಸಿದಾಗ, ಭಾರತ ಕಡಿಮೆ ಬೆಲೆಗೆ ಹೆಚ್ಚಿನ ತೈಲ ಖರೀದಿಸಲು ಆರಂಭಿಸಿತು. 2024ರ ಕೊನೆಯ ಭಾಗದಲ್ಲಿ, ರಷ್ಯಾ ಮಾರಾಟ ಮಾಡಿದ ತೈಲದಲ್ಲಿ 33% ತೈಲವನ್ನು ಭಾರತವೇ ಖರೀದಿ ಮಾಡಿತ್ತು ಎಂದು ಒಆರ್‌ಎಫ್ ಹೇಳಿದೆ.

ಜುಲೈ 31ರಂದು ಸಂದರ್ಶನ ಒಂದರಲ್ಲಿ ಮಾತನಾಡಿದ ರುಬಿಯೋ, ಭಾರತ ಮತ್ತು ಅಮೆರಿಕಾ ನಡುವೆ ಮನಸ್ತಾಪಕ್ಕೆ ಇದು ಖಂಡಿತವಾಗಿಯೂ ಒಂದು ಮುಖ್ಯ ವಿಚಾರವಾಗಿದೆ ಎಂದಿದ್ದರು. ಭಾರತಕ್ಕೆ ಬೇರೆಡೆಗಳಿಂದ ತೈಲ ಖರೀದಿಸುವ ಅವಕಾಶ ಇದ್ದಾಗಿಯೂ ಭಾರತ ರಷ್ಯಾದಿಂದ ಅಪಾರ ಪ್ರಮಾಣದ ತೈಲ ಖರೀದಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಇದು ರಷ್ಯಾಗೆ ಉಕ್ರೇನ್ ಯುದ್ಧ ಮುಂದುವರಿಸಲು ಪರೋಕ್ಷವಾಗಿ ನೆರವಾಗುತ್ತಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ತೈಲ ಖರೀದಿಯ ಕುರಿತು ಅಮೆರಿಕಾ ಹೆಚ್ಚಿನ ಗಮನ ಹರಿಸಿರುವುದು ಭಾರತದ ಪರಿಸ್ಥಿತಿಯನ್ನು ಕಠಿಣವಾಗಿಸಿದೆ.

"ಒಂದು ವೇಳೆ ಭಾರತ ಇದ್ದಕ್ಕಿದ್ದಂತೆ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಿದರೆ, ಅದು ರಷ್ಯಾದ ಜೊತೆಗಿನ ಸ್ನೇಹಕ್ಕೆ ತೊಂದರೆ ಉಂಟುಮಾಡಬಹುದು. ಆದರೆ, ಅಮೆರಿಕಾ ಏನಾದರೂ ನಿರ್ಬಂಧ ವಿಧಿಸಿದರೆ, ಅದೂ ಸಮಸ್ಯೆ ಉಂಟುಮಾಡುತ್ತದೆ. ಎರಡೂ ಬದಿಗಳಲ್ಲಿ ಸಮತೋಲನ ಸಾಧಿಸುವಂತಹ ಕ್ರಮ ಕೈಗೊಳ್ಳುವುದು ಕಷ್ಟಕರವಾದ ವಿಚಾರವಾಗಿದೆ" ಒಆರ್‌ಎಫ್‌ನ ಜೋಶಿಯವರು ಅಭಿಪ್ರಾಯ ಪಡುತ್ತಾರೆ.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com