Donald Trump- BRICS
ಡೊನಾಲ್ಡ್ ಟ್ರಂಪ್- ಬ್ರಿಕ್ಸ್ (ಸಂಗ್ರಹ ಚಿತ್ರ)online desk

ಅಮೇರಿಕಾಗೆ BRICS ಡಿಚ್ಚಿ! (ಹಣಕ್ಲಾಸು)

ಜಗತ್ತು ಇಂದಿಗೆ ಒಡೆದ ಮನೆ. ಹಾಗೊಮ್ಮೆ ಎಲ್ಲಾ ದೇಶಗಳೂ ಒಂದಲ್ಲ ಒಂದು ಪಕ್ಷವನ್ನು ಸೇರಿಕೊಳ್ಳಬೇಕು ಎನ್ನುವ ಪರಿಸ್ಥಿತಿ ನಿರ್ಮಾಣವಾದರೆ ಆಗ ಜಗತ್ತು ಮೂರು ಬಣಗಳಾಗಿ ಹೋಳಾಗುತ್ತದೆ. (ಹಣಕ್ಲಾಸು-470)
Published on

ಬ್ರಿಕ್ಸ್ ಒಕ್ಕೂಟದ ಸಮ್ಮಿಟ್ ಈ ಬಾರಿ ಬ್ರೆಜಿಲ್ ನಲ್ಲಿ ಮುಗಿದಿದೆ. ಬ್ರಿಕ್ಸ್ ಎನ್ನುವುದು ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ಸೌತ್ ಆಫ್ರಿಕಾ ದೇಶಗಳ ಒಕ್ಕೂಟಕ್ಕೆ ಇಟ್ಟಿರುವ ಹೆಸರು.

ಈ ಒಕ್ಕೂಟದಲ್ಲಿ ಇಂಡೋನೇಶಿಯಾ ದೇಶವನ್ನು ಹೊಸ ಸದಸ್ಯ ದೇಶವನ್ನಾಗಿ ಸೇರಿಸಿಕೊಂಡು ಹೇಳಿಕೆಯನ್ನು ಹೊರಡಿಸಲಾಗಿದೆ. ಇದರ ಜೊತೆಗೆ ಹತ್ತು ದೇಶಗಳನ್ನು ಬ್ರಿಕ್ಸ್ ಒಕ್ಕೂಟದ ಪಾಲುದಾರ ದೇಶಗಳು ಎಂದು ಗುರುತಿಸಲಾಗಿದೆ.

ಬೆಲಾರಸ್, ಬೊಲಿವಿಯಾ, ನೈಜೀರಿಯಾ, ಮಲೇಷ್ಯಾ, ಥೈಲ್ಯಾಂಡ್, ಕ್ಯೂಬಾ, ವಿಯೆಟ್ನಾಂ , ಉಗಾಂಡಾ, ಉಜ್ಬೇಕಿಸ್ತಾನ್ ಮತ್ತು ಕಝಕಿಸ್ತಾನ್ ದೇಶಗಳು ಬ್ರಿಕ್ಸ್ ಒಕ್ಕೂಟದ ಪಾಲುದಾರ ದೇಶಗಳಾಗಿ ಸೇರ್ಪಡೆಗೊಂಡಿವೆ.

ಈ ಬಾರಿಯ ಸಮ್ಮೇಳನಕ್ಕೆ ರಷ್ಯಾದ ಅಧ್ಯಕ್ಷ ಪುಟಿನ್ ಅವರು ಮತ್ತು ಚೀನಾದ ಅಧ್ಯಕ್ಷ ಜಿನ್ ಪಿಂಗ್ ಅವರು ಗೈರು ಹಾಜರಾಗಿರುವುದನ್ನು ಒಕ್ಕೂಟದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಕೂಗನ್ನು ತೇಲಿಬಿಡಲು ಸಹಾಯಕವಾಗಿದೆ. ಭಾರತ ಮತ್ತು ಚೀನಾ ದೇಶಗಳ ಮುಸುಕಿನ ಗುದ್ದಾಟ ಇಂದಿಗೆ ಜಗಜ್ಜಾಹೀರಾಗಿದೆ. ರಷ್ಯಾ ಎಲ್ಲವನ್ನೂ ಬ್ಯಾಲೆನ್ಸ್ ಮಾಡಬೇಕಾದ ಸ್ಥಿತಯಲ್ಲಿದೆ. ಈ ಒಕ್ಕೂಟಗಳನ್ನು ಬೆಸೆದಿರುವ ಏಕೈಕ ಅಂಶ ಎಂದರೆ ಅಮೇರಿಕಾ. ಹೌದು ಅಮೇರಿಕಾ ದೇಶದ ಕರೆನ್ಸಿ ಡಾಲರ್, ರಿಸೆರ್ವ್ ಕರೆನ್ಸಿ, ಗ್ಲೋಬಲ್ ಕರೆನ್ಸಿ ಎಂದು ಕಡೆಸಿಕೊಂಡು ಬರುತ್ತಿದೆ. ಜಗತ್ತಿನ ಮುಕ್ಕಾಲು ಪಾಲು ವ್ಯಾಪಾರ, ವಹಿವಾಟು ಆಗುವುದು ಡಾಲರಿನಲ್ಲಿ ಎನ್ನುವುದು ನಿಮಗೆ ಗೊತ್ತಿರಲಿ. 98 ಪ್ರತಿಶತವಿದ್ದ ಈ ಅವಲಂಬನೆ ಇಂದಿಗೆ 70 ಅಥವಾ ಅದಕ್ಕಿಂತ ಸ್ವಲ ಕಡಿಮೆ ಮಟ್ಟಕ್ಕೆ ಇಳಿದಿದೆ. ಕುಸಿಯುತ್ತಿರುವ ಡಾಲರ್ ಅವಲಂಬನೆ ಅಮೇರಿಕಾ ದೇಶಕ್ಕೆ ಎಂದಿಗೂ ಒಳ್ಳೆಯದಲ್ಲ. ಜಗತ್ತಿನ ಮೇಲಿನ ಅದರ ಹಿಡಿತ ತಪ್ಪಿ ಹೋಗಲು ಡಾಲರ್ ಕುಸಿತ ನಾಂದಿ ಹಾಡುತ್ತದೆ ಎನ್ನುವುದು ದೊಡ್ಡಣ್ಣನಿಗೆ ಗೊತ್ತಿದೆ. ಹೀಗಾಗಿ ಮೊನ್ನೆಯ ಸಮ್ಮೇಳನದ ನಂತರ ಬ್ರಿಕ್ಸ್ ಸದಸ್ಯ ದೇಶಗಳಿಂದ ಮತ್ತು ಪಾಲುದಾರ ದೇಶಗಳಿಂದ ಆಮದು ಮಾಡಿಕೊಳ್ಳುವ ದೇಶಗಳ ಮೇಲೆ ಹೆಚ್ಚಿನ ಹತ್ತು ಪ್ರತಿಶತ ತೆರಿಗೆಯನ್ನು ಹಾಕುತ್ತೇನೆ ಎಂದು ಗುಡುಗಿದ್ದಾರೆ. ಮುಂದುವರೆದು ನನಗೆ ಗೊತ್ತು ಬ್ರಿಕ್ಸ್ ಮೂಲ ಉದ್ದೇಶ ನಮ್ಮ ಡಾಲರನ್ನು ಅಸ್ಥಿರಗೊಳಿಸುವುದಾಗಿದೆ. ಆದರೆ ಆ ರೀತಿ ಆಗಲು ನಾನೆಂದಿಗೂ ಬಿಡುವುದಿಲ್ಲ ಎಂದಿದ್ದಾರೆ.

ಭಾರತದ ಪ್ರಧಾನ ಮಂತ್ರಿಯವರು ಬ್ರೆಜಿಲ್ ನಿಂದ ಬ್ರಿಕ್ಸ್ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದಾರೆ. ಮುಂದಿನ ವರ್ಷದಿಂದ ನಾವು ಬ್ರಿಕ್ಸ್ ಒಕ್ಕೂಟವನ್ನು ಹೊಸರೀತಿಯಲ್ಲಿ ಮುನ್ನೆಡೆಸುತ್ತೇವೆ ಎಂದಿದ್ದಾರೆ. BRICS ಎಂದರೆ ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ ಮತ್ತು ಸೌತ್ ಆಫ್ರಿಕಾವಲ್ಲ ಬದಲಿಗೆ ಬ್ರಿಕ್ಸ್ ಎಂದರೆ Building Resilience and Innovation for Cooperation and Sustainability. ಎನ್ನುವ ಮಾತನ್ನು ಆಡಿದ್ದಾರೆ. ಎಲ್ಲಕ್ಕೂ ಮೊದಲಿಗೆ ಹ್ಯುಮಾನಿಟಿ, ಮಾನವತೆಗೆ ಆದ್ಯತೆ ಎನ್ನುವ ಮಾತುಗಳನ್ನು ಕೂಡ ಆಡಿದ್ದಾರೆ. ಜಗತ್ತು ಒಂದಾಗಿ ಹೋದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎನ್ನುವುದು ನರೇಂದ್ರ ಮೋದಿ ಅವರ ಮಾತಿನ ಅರ್ಥ.

ಅಮೇರಿಕಾ ತನ್ನ ಹಿಂದಿನ ಶಕ್ತಿಯನ್ನು ಉಳಿಸಿಕೊಂಡಿಲ್ಲ ಎನ್ನುವುದು ಕೂಡ ಇಂದಿಗೆ ಎಲ್ಲರಿಗೂ ತಿಳಿದಿರುವ ಸತ್ಯ. ಅಮೆರಿಕಾ ಜಗತ್ತಿನ ಮೇಲೆ ಕಳೆದ 70 /80 ವರ್ಷದಿಂದ ಅಪಾರ ಹಿಡಿತವನ್ನು ಹೊಂದಲು ಸಾಧ್ಯವಾದದ್ದು ಆ ದೇಶದ ಕರೆನ್ಸಿ ಡಾಲರನ್ನು ಜಗತ್ತಿನ ಕರೆನ್ಸಿ ಎಂದು ಮಿಕ್ಕೆಲ್ಲಾ ದೇಶಗಳು ಒಪ್ಪಿಕೊಂಡ ಕಾರಣ. ಎರಡನೇ ಮಹಾಯುದ್ಧದ ಸಮಯದಲ್ಲಿ ಅತಿ ಹೆಚ್ಚು ಪೌರುಷದಿಂದ ಮೆರೆಯುತ್ತಿದ್ದ ಜಪಾನಿನ ಮೇಲೆ ಅಣುದಾಳಿ ಮಾಡುವ ಮೂಲಕ ಜಗತ್ತಿಗೆ ನಾನೇ ಮಹಾನ್ ನಾಯಕ ಎನ್ನುವುದನ್ನು ಅಮೇರಿಕಾ ಸಾರಿ ಹೇಳಿತು. ಇದರ ಜೊತೆಗೆ ಅಂದಿನ ದಿನದಲ್ಲಿ ಅತಿ ಹೆಚ್ಚು ಬಂಗಾರದ ಸಂಗ್ರಹವನ್ನು ಹೊಂದಿದ್ದು ಕೂಡ ಅಮೇರಿಕಾ, ಹೀಗಾಗಿ ಸಹಜವಾಗೇ ಅಮೇರಿಕಾ ಕರೆನ್ಸಿ ಡಾಲರನ್ನು ಎಲ್ಲಾ ದೇಶಗಳೂ ಗ್ಲೋಬಲ್ ಕರೆನ್ಸಿ ಎಂದು ಒಪ್ಪಿಕೊಂಡವು.

Donald Trump- BRICS
ವ್ಯಾಪಾರ ಆಯ್ಕೆ ಮಾಡಿಕೊಳ್ಳುವ ಮುಂಚಿನ ಪ್ರಶ್ನೆಗಳು! (ಹಣಕ್ಲಾಸು)

ಎರಡನೇ ಮಹಾಯುದ್ಧದ ಸಮಯದ ಸಮಯ ಇಂದಿಗೆ ಬದಲಾಗಿದೆ. ಭಾರತ , ಚೀನಾ ಮತ್ತು ರಷ್ಯಾ ದೇಶಗಳು ಜಾಗತಿಕವಾಗಿ ಬಲಿಷ್ಠವಾಗಿವೆ. ಅಮೇರಿಕಾ ದೇಶದ ಏಕಸಾಮ್ಯದ ವಿರುದ್ಧ ದೇಶಗಳು ದಶಕದಿಂದ ಸೊಲ್ಲೆತ್ತಲು ಶುರು ಮಾಡಿವೆ. ಹೀಗಾಗಿ ಅಮೇರಿಕಾ ವಿರುದ್ಧ ಒಂದು ಸಾಂಘಿಕ ಹೋರಾಟದ ಅಗತ್ಯವನ್ನು ಮನಗಂಡು ಜೂನ್ 2009 ರಲ್ಲಿ ಬ್ರಿಕ್ ಒಕ್ಕೂಟ ಸೃಷ್ಟಿಯಾಗುತ್ತದೆ. 2010ರಲ್ಲಿ ಸೌತ್ ಆಫ್ರಿಕಾ ದೇಶವನ್ನು ಕೂಡ ಸದಸ್ಯ ದೇಶವನ್ನಾಗಿ ಸೇರಿಸಿಕೊಳ್ಳಲಾಗಿದೆ. 2024 ರಲ್ಲಿ ಈಜಿಪ್ಟ್ , ಇಥಿಯೋಪಿಯಾ ,ಇರಾನ್ , ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳನ್ನು ಸೇರಿಸಿಕೊಳ್ಳಲಾಯಿತು. 2025 ರಲ್ಲಿ ಇಂಡೋನೇಶಿಯಾ ದೇಶಕ್ಕೆ ಸದಸ್ಯತ್ವ ಸಿಕ್ಕಿದೆ. ಇನ್ನಷ್ಟು ದೇಶಗಳು ಈ ಒಕ್ಕೂಟವನ್ನು ಸೇರಿಕೊಳ್ಳಲು ಅರ್ಜಿಯನ್ನು ಸಲ್ಲಿಸಿವೆ.

ಇಂದಿನ ದಿನದಲ್ಲಿ ನ್ಯಾಟೋ ಒಕ್ಕೂಟದೊಂದಿಗೆ ತುಲನೆ ಮಾಡಿದರೆ ಬ್ರಿಕ್ಸ್ ಹೆಚ್ಚು ಬಲಿಷ್ಠವಾಗಿದೆ ಎನ್ನುವುದು ತಿಳಿದು ಬರುತ್ತದೆ. ಅಮೇರಿಕಾ, ಯುನೈಟೆಡ್ ಕಿಂಗ್ಡಮ್, ಜರ್ಮನಿ, ಸ್ಪೇನ್, ಫಿನ್ಲ್ಯಾಂಡ್, ನೆದರ್ಲ್ಯಾಂಡ್, ಫ್ರಾನ್ಸ್, ಡೆನ್ಮಾರ್ಕ್, ಕೆನಡಾ ಸೇರಿದಂತೆ ಒಟ್ಟಾರೆ 32 ದೇಶಗಳ ನ್ಯಾಟೋ ಒಕ್ಕೂಟ ಜಾಗತಿಕ ಜಿಡಿಪಿಯ 43 ಪ್ರತಿಶತ ದೇಣಿಗೆ ನೀಡುತ್ತಿದೆ. ಹತ್ತು ದೇಶಗಳ ಬ್ರಿಕ್ಸ್ ಒಕ್ಕೂಟ ಜಾಗತಿಕ ಜಿಡಿಪಿಯ 46 ಪ್ರತಿಶತ ವನ್ನು ಹೊಂದಿದೆ. ನ್ಯಾಟೋ ಒಕ್ಕೂಟದ ಎಲ್ಲಾ ಸದಸ್ಯ ದೇಶಗಳ ಒಟ್ಟು ಜನಸಂಖ್ಯೆ ಜಾಗತಿಕ ಜನಸಂಖ್ಯೆಯ 12 ಪ್ರತಿಶತವಿದ್ದರೆ, ಬ್ರಿಕ್ಸ್ ಒಕ್ಕೂಟ ಜಾಗತಿಕ ಜನಸಂಖ್ಯೆಯ 40 ಪ್ರತಿಶತವನ್ನು ಹೊಂದಿವೆ. ನ್ಯಾಟೋ ಒಕ್ಕೂಟ ಮಿಲಿಟರಿ ಒಕ್ಕೂಟವಾಗಿದೆ. ಬ್ರಿಕ್ಸ್ ಎಕನಾಮಿಕ್ಸ್ ಕೋ ಆಪರೇಷನ್ ಗೆ ಜನ್ಮ ತಾಳಿದೆ. ಇದರರ್ಥ ಬ್ರಿಕ್ಸ್ ಮೂಲ ಉದ್ದೇಶ ಅಮೆರಿಕನ್ ಡಾಮಿನೇನ್ಸ್ ಕೊನೆಗೊಳಿಸುವುದಾಗಿದೆ. ಇದು ಅಮೆರಿಕಾದ ಅಧ್ಯಕ್ಷ ಟ್ರಂಪ್ ಅವರಿಗೆ ಚನ್ನಾಗಿ ಗೊತ್ತಿದೆ. ಡಾಲರ್ ಕುಸಿದರೆ ಅಮೇರಿಕಾ ಮುಂದೆಂದೂ ಅಮೆರಿಕವಾಗಿ ಉಳಿದುಕೊಳ್ಳುವುದಿಲ್ಲ ಎನ್ನುವುದು ಕೂಡ ಅವರಿಗೆ ಗೊತ್ತಿದೆ. ನಿಮಗೆಲ್ಲಾ ಗೊತ್ತಿರಲಿ ಅಮೇರಿಕಾ ಯುನೈಟೆಡ್ ಸ್ಟೇಟ್ಸ್ ಎಂದರೆ ಅದು ರಾಜ್ಯಗಳ ಒಕ್ಕೂಟ. ಅವುಗಳ ನಡುವೆ ಬಹಳ ಭಿನ್ನಾಭಿಪ್ರಾಯಗಳಿವೆ. ಈ ಒಕ್ಕೂಟವನ್ನು ಹಿಡಿದಿಟ್ಟುರುವುದು ಡಾಲರ್ ಮತ್ತು ಅದರಿಂದ ಆಗುತ್ತಿರುವ ಲಾಭ. ಇವತ್ತಿಗೆ ಅಮೇರಿಕಾ ಕೂಡ ಒಡೆದ ಮನೆ. ಪ್ರತಿಯೊಂದು ರಾಜ್ಯವೂ ತನ್ನದೇ ಆದ ಸಮಸ್ಯೆಗಳನ್ನು ಹೊಂದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅಮೇರಿಕಾ ದೇಶವನ್ನು ಇಂದು ತಿನ್ನುತ್ತಿರುವುದು ಹಣದುಬ್ಬರ. ಸಾಮಾನ್ಯ ಅಮೆರಿಕನ್ ಪ್ರಜೆ ಸಾಮಾನ್ಯ ಬದುಕು ನಡೆಸಲು ತಿಣುಕುವ ಪರಿಸ್ಥಿತಿ ಅಲ್ಲಿ ನಿರ್ಮಾಣವಾಗಿದೆ.

ದೀಪ ಆರುವ ಮುನ್ನ ಜೋರಾಗಿ ಉರಿಯುತ್ತದೆ ಎನ್ನುವ ಮಾತನ್ನು ನಾವು ಕೇಳಿದ್ದೇವೆ. ಅದು ಅಮೇರಿಕಾ ವಿಷಯದಲ್ಲಿ ನಿಜವಾಗಲಿದೆಯೇ ಎನ್ನುವುದನ್ನು ಕಾಯ್ದು ನೋಡಬೇಕು. ಈ ಮಾತುಗಳನ್ನು ಹೇಳಲು ಕಾರಣ, ನ್ಯಾಟೋ ಸದಸ್ಯ ದೇಶಗಳಲ್ಲಿ ಸಹ ಸೌಹಾರ್ದತೆ ಇಲ್ಲದೆ ಇರುವುದು. ಹೇಗೆ ಬ್ರಿಕ್ಸ್ ವಿಷಯದಲ್ಲಿ ಟ್ರಂಪ್ ಅಸಹನೆಯನ್ನು ವ್ಯಕ್ತಪಡಿಸಿದ್ದಾರೆ. ಹಾಗೆ ಯುರೋ ವಿಷಯದಲ್ಲಿ ಕೂಡ ಹೇಳಿಕೆ ನೀಡಿದ್ದಾರೆ. ಯುರೋ ಸೃಷ್ಟಿಯಾಗಿರುವುದೇ ಅಮೆರಿಕನ್ ಡಾಲರ್ ಪ್ರಭಾವ ಕುಗ್ಗಿಸಲು ಎನ್ನುವ ಹೇಳಿಕೆಯನ್ನು ಕೆಲವು ತಿಂಗಳ ಹಿಂದೆ ಅಂದರೆ ತೆರಿಗೆ ಯುದ್ಧ ಶುರು ಮಾಡುವ ಸಮಯದಲ್ಲಿ ಹೇಳಿದ್ದರು. ಟ್ರಂಪ್ ಅವರ ಕಣ್ಣಿಗೆ ಜಗತ್ತಿನ ಎಲ್ಲಾ ದೇಶಗಳೂ ಕೂಡ ಶತ್ರುವಿನಂತೆ ಕಾಣಲು ಶುರುವಾಗಿದೆ. ಅಮೇರಿಕಾ ತನ್ನ ಪ್ರಾಬಲ್ಯ ಕಡಿಮೆಯಾಗುತ್ತಿದೆ ಎನ್ನುವುದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಜಾಗತಿಕ ಹಿಡಿತವನ್ನು ಖಾಯಂ ತನ್ನ ಬಳಿ ಉಳಿಸಿಕೊಳ್ಳಲು ಅಮೇರಿಕಾ ಯಾವ ಮಟ್ಟಕ್ಕೂ ಹೋಗುತ್ತದೆ. ಅದರಲ್ಲೂ ಟ್ರಂಪ್ ಅಧಿಕಾರದಲ್ಲಿರುವಾಗ ಇದರ ಸಾಧ್ಯತೆ ಇನ್ನೂ ಹೆಚ್ಚು. ಅವರ ಬಳಿ ಇರುವ ಕೊನೆಯ ಅಸ್ತ್ರ ಯುದ್ಧ ಮತ್ತು ತನ್ಮೂಲಕ ಜಾಗತಿಕವಾಗಿ ಅಸ್ಥಿರತೆಯನ್ನು ಹೆಚ್ಚಿಸುವುದು. ಅವರು ನೆಮ್ಮದಿಯಾಗಿ, ಹಣವಂತರಾಗಿ ಉಳಿದುಕೊಳ್ಳಲು ಸಾಧ್ಯವಿಲ್ಲವೆಂದಾಗ ಜಗತ್ತು ಕೂಡ ನೆಮ್ಮದಿಯಾಗಿ, ಸ್ಥಿತಿವಂತರಾಗಿ ಉಳಿಯಲು ಬಿಡುವುದಿಲ್ಲ ಎನ್ನುವ ಸ್ಯಾಡಿಸ್ಟ್ ಮನೋಭಾವ ಟ್ರಂಪ್ ಅವರದು.

ಕೊನೆ ಮಾತು: ಜಗತ್ತು ಇಂದಿಗೆ ಒಡೆದ ಮನೆ. ಹಾಗೊಮ್ಮೆ ಎಲ್ಲಾ ದೇಶಗಳೂ ಒಂದಲ್ಲ ಒಂದು ಪಕ್ಷವನ್ನು ಸೇರಿಕೊಳ್ಳಬೇಕು ಎನ್ನುವ ಪರಿಸ್ಥಿತಿ ನಿರ್ಮಾಣವಾದರೆ ಆಗ ಜಗತ್ತು ಮೂರು ಬಣಗಳಾಗಿ ಹೋಳಾಗುತ್ತದೆ. ಅಮೇರಿಕಾ ಮತ್ತು ನ್ಯಾಟೋ ದೇಶಗಳು ಒಟ್ಟಾಗುತ್ತವೆ. ಜಪಾನ್ ನ್ಯಾಟೋ ಒಕ್ಕೂಟದಲ್ಲಿ ಇರದಿದ್ದರೂ ಅದು ಅಮೆರಿಕಾದ ಜೊತೆಗೆ ಹೆಜ್ಜೆ ಹಾಕುತ್ತದೆ. ಇಸ್ರೇಲ್ ಕೂಡ ಅಮೇರಿಕಾ ಜೊತೆಗೆ ಗುರುತಿಸಿಕೊಳ್ಳುತ್ತದೆ. ಇನ್ನೊಂದು ಬಣದಲ್ಲಿ ಚೀನಾ, ರಷ್ಯಾ ಮತ್ತಿತರ ದೇಶಗಳು ಸೇರಿಕೊಳ್ಳುತ್ತವೆ. ಯುದ್ಧ ಬೇಡ , ಮಾನವತೆ ನೆಲೆ ನಿಲ್ಲಲಿ ಎನ್ನುವ ಮೂರನೇ ಬಣದ ಅಧ್ಯಕ್ಷತೆ ಭಾರತಕ್ಕೆ ಸಿಗಲಿದೆ, ಅಚ್ಚರಿ ಎನ್ನುವಂತೆ ಯುನೈಟೆಡ್ ಅರಬ್ ಎಮಿರೇಟ್ಸ್ ಒಳಗೊಂಡು ಸಣ್ಣ ಪುಟ್ಟ ರಾಷ್ಟ್ರಗಳು ಭಾರತದ ಜೊತೆಗೆ ಹೆಜ್ಜೆಹಾಕಲಿವೆ. ಒಟ್ಟಾರೆ ಇದು ಜಾಗತಿಕ ಯಜಮಾನಿಕೆ ಬದಲಾಗುವ ಸಮಯ ಎನ್ನುವುದು ಮಾತ್ರ ವೇದ್ಯ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com