ವ್ಯಾಪಾರ ಆಯ್ಕೆ ಮಾಡಿಕೊಳ್ಳುವ ಮುಂಚಿನ ಪ್ರಶ್ನೆಗಳು! (ಹಣಕ್ಲಾಸು)

ವ್ಯಾಪಾರ ಆಯ್ಕೆ ಮಾಡಿಕೊಳ್ಳುವ ಮುಂಚಿನ ಪ್ರಶ್ನೆಗಳು! (ಹಣಕ್ಲಾಸು)

ಒಮ್ಮೆ ನಾವು ಯಾವ ಉದ್ದಿಮೆಯ ದಾರಿಯಲ್ಲಿ ನಡೆಯಬೇಕು ಎಂದು ನಿರ್ಧರಿಸಿದ ಮೇಲೆ ಯಾವ ವ್ಯಾಪಾರ ಅಥವಾ ಉದ್ದಿಮೆ ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದನ್ನು ಕಂಡುಕೊಳ್ಳುವುದು ಹೇಗೆ ಎನ್ನುವುದರ ಬಗ್ಗೆ ಚರ್ಚಿಸೋಣ. (ಹಣಕ್ಲಾಸು-469)
Published on

ಯಾವ ವ್ಯಾಪಾರಗಳನ್ನು ಮಾಡಬಹುದು? ಯಾವ ಉದ್ದಿಮೆ ತೆರೆದರೆ ಉತ್ತಮ? ಎನ್ನುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದಕ್ಕೆ ಬಿಸಿನೆಸ್ ಐಡಿಯಾ ಎನ್ನುತ್ತೇವೆ. ಇದೊಂದು ಪರಿಕಲ್ಪನೆ. ಇಂತಹ ವ್ಯಾಪಾರ ಅಥವಾ ಉದ್ದಿಮೆ ಯಶಸ್ಸು ಕಾಣುತ್ತದೆ ಎನ್ನುವುದರ ಒಟ್ಟಾರೆ ಕಲ್ಪನೆ. ಬಿಸಿನೆಸ್ ಪ್ಲಾನ್ ಎನ್ನುವುದು ಬೇರೆಯಾಗುತ್ತದೆ. ಒಮ್ಮೆ ನಾವು ಯಾವ ಉದ್ದಿಮೆಯ ದಾರಿಯಲ್ಲಿ ನಡೆಯಬೇಕು ಎಂದು ನಿರ್ಧರಿಸಿದ ಮೇಲೆ ಅದರ ಯಶಸ್ಸಿಗೆ ರೂಪಿಸುವ ರೋಡ್ ಮ್ಯಾಪ್ ಪ್ಲಾನ್ ಎನ್ನಿಸಿಕೊಳ್ಳುತ್ತದೆ. ಯಾವ ವ್ಯಾಪಾರ ಅಥವಾ ಉದ್ದಿಮೆ ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದನ್ನು ಕಂಡುಕೊಳ್ಳುವುದು ಹೇಗೆ ಎನ್ನುವುದರ ಬಗ್ಗೆ ಚರ್ಚಿಸೋಣ.

ವ್ಯಾಪಾರದ ಪರಿಕಲ್ಪನೆ ಮಾಡಿಕೊಳ್ಳುವುದು ನಮ್ಮ ಅಭಿವ್ಯಕ್ತಿ ಕೂಡ ಆಗಿರುತ್ತದೆ ಎನ್ನುವುದನ್ನು ಎಲ್ಲದಕ್ಕೂ ಮೊದಲು ನೆನಪಿನಲ್ಲಿಟ್ಟುಕೊಳ್ಳೋಣ. ಆ ನಂತರ ಸಮಾಜದಲ್ಲಿನ ಸಮಸ್ಯೆ, ಕುಂದುಕೊರತೆ , ಅವಶ್ಯಕೆತೆಗಳೇನು ಎನ್ನುವುದನ್ನು ನೋಡಬೇಕು. ಮಾರುಕಟ್ಟೆ ಎಷ್ಟರಮಟ್ಟಿಗೆ ಈ ವ್ಯಾಪಾರಕ್ಕೆ ತೆರೆದುಕೊಂಡಿದೆ ಅಥವಾ ಸಿದ್ಧವಿದೆ ಎನ್ನುವುದನ್ನು ಕೂಡ ಗಮನಿಸಬೇಕು. ಇತರ ಸಮಕಾಲೀನರೊಂದಿಗೆ ಚರ್ಚಿಸುವ ಅವಶ್ಯಕತೆ ಕೂಡ ಇರುತ್ತದೆ. ಇವೆಲ್ಲವೂ ಸರಿಯಿದೆ ಎನ್ನಿಸಿದರೆ ಒಮ್ಮೆ ಆ ವಲಯದ ತಜ್ಞರೊಂದಿಗೆ ಮಾತನಾಡಿ ಹೋಗುತ್ತಿರುವ ದಾರಿ ಸರಿಯಿದೆಯೇ ಎನ್ನುವುದನ್ನು ಕೂಡ ಅರಿತುಕೊಳ್ಳಬೇಕು.

  • ನಮ್ಮ ಅಭಿರುಚಿಯೇನು? ನಮ್ಮ ಕೌಶಲವೇನು? ಯಾವುದು ಹೆಚ್ಚು ಮನಸ್ಸಿಗೆ ಹಿಡಿಸುತ್ತದೆ? ಎನ್ನುವ ಪ್ರಶ್ನೆಗಳಿಗೆ ಮೊದಲು ಉತ್ತರ ಕಂಡುಕೊಳ್ಳಬೇಕು. ಗಮನಿಸಿ ನೋಡಿ ನಮ್ಮ ಸಮಾಜದಲ್ಲಿ ನಮ್ಮ ಅಭಿರುಚಿಯನ್ನು ಪರಿಗಣಿಸುವುದು ಬಹಳ ಕಡಿಮೆ. ಉದಾಹರಣೆಗೆ ಮಗುವಿಗೆ ಗಣಿತದಲ್ಲಿ ಆಸಕ್ತಿ ಇರುವುದಿಲ್ಲ. ಪೋಷಕರು ಬಿಡುವುದಿಲ್ಲ. ಗಣಿತ ಎನ್ನುವುದು ಮಗುವಿನ ಪಾಲಿನ ರಾಕ್ಷಸನಾಗಿ ಪರಿವರ್ತನೆಯಾಗುತ್ತದೆ. ಬಯಸಿದ ಫಲಿತಾಂಶ ಬರಲು ಹೇಗೆ ಸಾಧ್ಯ? ಹೋಟೆಲ್ ವ್ಯಾಪಾರದಲ್ಲಿ ತುಂಬಾ ಲಾಭವಿದೆ ಎನ್ನುವ ಮಾತು ಕೇಳಿ ಹೋಟೆಲ್ ತೆರೆದವರು ಅನೇಕ. ಹೋಟೆಲ್ ಉದ್ಯಮ ದಿನದ 16/18 ಗಂಟೆ ನಮ್ಮ ಇರುವಿಕೆಯನ್ನು ಬಯಸುತ್ತದೆ. ನಾವು ಪೂರ್ಣವಾಗಿ ಅಲ್ಲಿ ತೊಡಗಿಸಿಕೊಳ್ಳಬೇಕು. ಬಂಡವಾಳ ಹಾಕಿ ಮನೆಯಲ್ಲಿ ಕೂರಲು ಈ ಉದ್ಯಮದಲ್ಲಿ ಸಾಧ್ಯವಿಲ್ಲ. ಅರ್ಥ ನಾವು ಇಷ್ಟಪಟ್ಟು ಶುರು ಮಾಡಿದ ವ್ಯಾಪಾರದ ಗುಲಾಮರಾಗಿ ನಾವು ಪರಿವರ್ತಿತರಾಗುತ್ತೇವೆ.ನಾವು ಇದಕ್ಕೆ ಸಿದ್ಧವಿದ್ದೆಯೇ ? ನನಗಿನ್ನೇನೂ ಬೇಡ ಎನ್ನುವ ಮನಸ್ಥಿತಿ ಉಳ್ಳವರಿಗೆ ಹೋಟೆಲ್ ಬಿಸಿನೆಸ್ ಕೈ ಹತ್ತುತ್ತದೆ. ಕೇವಲ ಲಾಭ ಹೆಚ್ಚಾಗಿರುತ್ತದೆ ಎನ್ನುವ ಕಾರಣಕ್ಕೆ ಹೋಟೆಲ್ ತೆಗೆದರೆ ಅಲ್ಲಿ ಲಾಭ ಸಿಗುವುದಿಲ್ಲ. ನಮಗೆ ದಿನದ 16/18ಗಂಟೆ ಅದಕ್ಕೆ ನೀಡುವ ವ್ಯವಧಾನವಿದೆಯೇ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಕೆಲವರಿಗೆ ಬುದ್ಧಿಯೇ ಬಂಡವಾಳ ಅಂತಹವರು ಸೇವೆ ನೀಡಲು ಶುರು ಮಾಡಬೇಕು. ಶಾಲೆಯಲ್ಲಿ ಗಣಿತದ ಪಾಠ ಮಾಡುವ ಮೇಷ್ಟ್ರು ನಿಧಾನವಾಗಿ ಒಂದೊಳ್ಳೆ ಕೋಚಿಂಗ್ ಕ್ಲಾಸ್ ತೆಗೆಯಬಹುದು. ಮೇಷ್ಟ್ರು ಶಾಲೆಯಲ್ಲೂ , ಕೋಚಿಂಗ್ ಕ್ಲಾಸಿನಲ್ಲೂ ಸೇರಿ ದಿನದಲ್ಲಿ ೧೬ ಗಂಟೆ ದುಡಿಯುತ್ತಿರಬಹುದು. ಆದರೆ ಅದರಲ್ಲಿ ಅವರಿಗೆ ದಣಿವು ಕಾಣಿಸುವುದಿಲ್ಲ. ಬೋಧಿಸುವುದು ಅವರ ಶಕ್ತಿ. ಪ್ಯಾಶನ್ . ನಮ್ಮ ಮನಸ್ಸಿಗೆ ಹತ್ತಿರವಾದದ್ದನ್ನು ಮಾಡುತ್ತಾ ಹೋದರೆ ಅದು ಕೆಲಸ ಎನ್ನಿಸಿಕೊಳ್ಳುವುದಿಲ್ಲ. ಸಮಯ ಹೋದದ್ದು ತಿಳಿಯುವುದಿಲ್ಲ. ಹೀಗಾಗಿ ಉತ್ತಮ ಫಲಿತಾಂಶ ಸಿಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹತ್ತು ಗಂಟೆ, ಹದಿನೈದು ಗಂಟೆ ದುಡಿದೆ ಎನ್ನುವುದಕ್ಕಿಂತ ದುಡಿಮೆಯ ಅಷ್ಟೂ ಸಮಯ ಖುಷಿಯಾಗಿದ್ದೇವೆ ಎನ್ನುವುದು ಬಹಳ ಮುಖ್ಯವಾಗುತ್ತದೆ. ಏಕೆಂದರೆ ಇದು ಒಂದೆರೆಡು ದಿನ ಮಾಡಿ ಬಿಡುವಂತಹದ್ದಲ್ಲ. ಹೀಗಾಗಿ ಯಾವ ಬಿಸಿನೆಸ್? ಯಾವ ಸೇವೆ? ಎನ್ನುವ ಮುನ್ನ ನಮ್ಮ ಅಭಿರುಚಿಯೇನು? ನಮ್ಮ ಸ್ಟ್ರೆಂಥ್ ಏನು? ನಮ್ಮಲ್ಲಿ ಯಾವ ಕೌಶಲವಿದೆ ಎನ್ನುವುದನ್ನು ಅರಿತುಕೊಂಡು ಅದಕ್ಕೆ ಸರಿಹೊಂದುವ ವಲಯವನ್ನು ಆಯ್ಕೆ ಮಾಡಿಕೊಳ್ಳಬೇಕು.

  • ಸಮಾಜದಲ್ಲಿ ಇರುವ ಸಮಸ್ಯೆಗಳನ್ನು , ನೋವುಗಳನ್ನು ಅರ್ಥ ಮಾಡಿಕೊಳ್ಳಬೇಕು. ನಮಗಿರುವ ನೋವು , ಕುಟುಂಬದ ಸದಸ್ಯರಿಗೆ ಆಗುತ್ತಿರುವ ಅಡಚಣೆ ಕೂಡ ಬಿಸಿನೆಸ್ ಐಡಿಯಾ ಕೊಡುತ್ತವೆ. ನಿಜ ಹೇಳಬೇಕೆಂದರೆ ಸಮಾಜದಲ್ಲಿರುವ ಸಮಸ್ಯೆಗಳನ್ನು ಆಧಾರವಾಗಿಟ್ಟು ಕೊಂಡು ಅದಕ್ಕೆ ಪರಿಹಾರ ಒದಗಿಸುವ ಉದ್ದಿಮೆಗಳು ಬಹಳಷ್ಟು ಯಶಸ್ಸು ಕಂಡಿವೆ. ಜಪಾನ್ ದೇಶದಲ್ಲಿ ವ್ಯಕ್ತಿಯೊಬ್ಬ ತನಗಾಗುತ್ತಿದ್ದ ಅಡಚಣೆಗೆ ಪರಿಹಾರವನ್ನು ಕಂಡು ಹಿಡಿದು ಅದೊಂದು ದೊಡ್ಡ ಉದ್ದಿಮೆಯನ್ನಾಗಿ ಕಟ್ಟಿದ್ದಾರೆ. ಆ ಟಾಯ್ಲೆಟ್ ಕಮೋಡ್ ಮೇಲೆ ಕುಳಿತು ನಂತರ ಏಳುವಾಗ ಕಷ್ಟವಾಗುತ್ತಿತ್ತು. ಟಾಯ್ಲೆಟ್ ಪಕ್ಕದಲ್ಲಿ ಹಿಡಿಯೊಂದನ್ನು ಅಳವಡಿಸುವ ಉದ್ದಿಮೆ ಭಾರಿ ಜಯಗಳಿಸುತ್ತದೆ. ಏಕೆಂದರೆ ಅದು ಕೇವಲ ಆತನ ಸಮಸ್ಯೆಯಾಗಿರದೆ ಆ ಸಮಾಜದ ಬಹು ಜನರ ಸಮಸ್ಯೆಯಾಗಿತ್ತು. ಇದೊಂದು ಉದಾಹರಣೆ ಮಾತ್ರ. ಜಪಾನ್ ನಲ್ಲಿ ಇಂತಹ ನೂರಾರು ಉದಾಹರಣೆ ಸಿಗುತ್ತದೆ. ನಮ್ಮ ಸಮಾಜದಲ್ಲೂ ಸಮಸ್ಯೆಗಳಿಗೆ ಕೊರತೆಯಿಲ್ಲ. ಅಂತಹ ಒಂದು ಸಮಸ್ಯೆಯನ್ನು ಕೈಗೆತ್ತಿಕೊಂಡು ಅದಕ್ಕೊಂದು ಸಮಾಧಾನ ಕಂಡು ಹಿಡಿದರೆ ನಮ್ಮ ಸಮಾಜದಲ್ಲೂ ಅದಕ್ಕೆ ಗ್ರಾಹಕರು ಸೃಷ್ಟಿಯಾಗುತ್ತಾರೆ. ಸ್ವೀಗ್ಗಿ ಮತ್ತು ಝೋಮೋಟೋ ಇನ್ನಿತರ ಆಹಾರವನ್ನು ಮನೆ ಬಾಗಿಲಿಗೆ ಒದಗಿಸುವ ಸಂಸ್ಥೆಗಳು ಗೆದ್ದಿರುವುದು ಮಹಾನಗರಗಳಲ್ಲಿ ಇರುವ ಟ್ರಾಫಿಕ್ ಸಮಸ್ಯೆಯಿಂದ! ಜನರಿಗೆ ಒಮ್ಮೆ ಮನೆ ಸೇರಿದರೆ ಮತ್ತೆ ಹೊರಕ್ಕೆ ಹೋಗಬೇಕು ಎನ್ನಿಸುವುದಿಲ್ಲ. ಅಡುಗೆ ಮಾಡಲು ಮನಸ್ಸಿಲ್ಲದ ದಿನ ಮನೆಬಾಗಿಲಿಗೆ ಆಹಾರ ಒದಗಿಸುವ ಸೇವೆ ಇಷ್ಟ್ವವಾಯ್ತು. ಅದು ಹಿಟ್ ಆಯ್ತು. ಇಂದಿಗೂ ನಮ್ಮದು ಅಗಣಿತ ಸಮಸ್ಯೆಗಳ ದೇಶ. ನಮ್ಮ ಉದ್ದಿಮೆ ಯಶಸ್ಸಿಗೆ ಒಂದು ಸಮಸ್ಯೆಗೆ ಪರಿಹಾರ ಒದಗಿಸುವ ಪ್ರಯತ್ನ ಮಾಡಿದರೂ ಸಾಕು ಯಶಸ್ಸು ಕಟ್ಟಿಟ್ಟ ಬುತ್ತಿ.

  • ಮೇಲಿನ ಎರಡು ಅಂಶಗಳಲ್ಲಿ ಒಂದಷ್ಟು ನಿಖರತೆ ಬಂದ ಮೇಲೆ ನಂಬಿಕೆಯುಳ್ಳ ಆಪ್ತರ ಜೊತೆಗೆ ಇದನ್ನು ಕುರಿತು ಸಮಾಲೋಚನೆ ನಡೆಸಬೇಕು. ಬಹುತೇಕ ವೇಳೆ ನಾವು ಸಮಸ್ಯೆಯನ್ನು ನೋಡುವ, ಅರ್ಥೈಸಿಕೊಳ್ಳುವ ರೀತಿ ಬೇರೆಯದಾಗಿರುತ್ತದೆ. ಸಮಾಜ ಅದನ್ನು ನೋಡುವ ರೀತಿ ಬೇರೆಯಿರುತ್ತದೆ. ಸಮಾಜದಲ್ಲಿನ ಬಹು ಸಂಖ್ಯಾತ ಜನ ಅದನ್ನು ಹೇಗೆ ನೋಡುತ್ತಾರೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಆಗ ಮಾತ್ರ ಉದ್ದಿಮೆ ಗೆಲ್ಲಲು ಸಾಧ್ಯ. ಹೀಗಾಗಿ ತೀರಾ ಆಪ್ತ ವರ್ಗದಲ್ಲಿ ಸಣ್ಣ ಸರ್ವೇ ಮಾಡಬೇಕು. ಇಂತಹ ಸಮಸ್ಯೆಗೆ ಇಂತಹ ಪರಿಹಾರ ನೀಡಲು ಬಯಸಿದ್ದೇವೆ, ಹೀಗಾಗಿ ಈ ವಲಯವನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎನ್ನುವುದನ್ನು ಹೇಳಬೇಕು. ಓಲೈಕೆಯ ಫೀಡ್ ಬ್ಯಾಕ್ ಬೇಕಿಲ್ಲ. ಸರಿಯಿದ್ದರೆ ಸರಿ, ಇಲ್ಲದಿದ್ದರೆ ಇಲ್ಲ ಎನ್ನುವ ನಿಷ್ಠುರವಾದ ಫೀಡ್ ಬ್ಯಾಕ್ ಕೊಡಿ ಎಂದು ಹೇಳಬೇಕು. ಕೆಲವೊಮ್ಮೆ ಸಮಸ್ಯೆ ಇರುವುದು ಸತ್ಯವಾಗಿರುತ್ತದೆ. ಅದಕ್ಕೆ ಪರಿಹಾರವೂ ಹುಡುಕಿರುತ್ತೇವೆ, ಆದರೆ ಸಮಾಜ ಅದನ್ನು ಸ್ವೀಕರಿಸಲು ಸಿದ್ಧವಿರುವುದಿಲ್ಲ. ಇದೇನು ದೊಡ್ಡ ಸಮಸ್ಯೆಯಲ್ಲ ಎನ್ನುವ ಉದಾಸೀನ ಮಾಡುವ ಸಾಧ್ಯತೆಯಿರುತ್ತದೆ. ಹೀಗಾಗಿ ಆಂತರಿಕವಾಗಿ ಇಂತಹ ಪುಟಾಣಿ ನಂಬಿಕಸ್ಥ ಜನರ ಅಭಿಪ್ರಾಯ ಪಡೆದುಕೊಳ್ಳುವುದು ಉತ್ತಮ ಮಾರ್ಗ.

  • ಮಾರ್ಕೆಟ್ ಸರ್ವೆ, ರಿಸೆರ್ಚ್ ಜೊತೆಗೆ ಸಮಾನ ಮನಸ್ಕರ ಜೊತೆಗೆ ಕೊಲಾಬರೇಶನ್ ಮಾಡಿಕೊಳ್ಳುವುದು ಕೂಡ ಮುಖ್ಯವಾಗುತ್ತದೆ. ಮೂರನೇ ಅಂಶದಲ್ಲಿ ಹೇಳಿದಂತೆ ಆತಂರಿಕ ಸರ್ವೆಯಲ್ಲಿ ನಾವು ಇಡುತ್ತಿರುವ ಹೆಜ್ಜೆ ಸರಿಯಾಗಿದೆ ಎಂದಾದರೆ ಆಗ ಮಾರುಕಟ್ಟೆ ಈ ಹೊಸ ಐಡಿಯಾಗೆ ಸಿದ್ಧವಿದೆಯೇ ಎನ್ನುವುದನ್ನು ಸರ್ವೇ ಮೂಲಕ ತಿಳಿದುಕೊಳ್ಳಬಹುದು. ಇದಕ್ಕೆಂದು ನೂರಾರು ಸಂಸ್ಥೆಗಳು ಮಾರುಕಟ್ಟೆಯಲ್ಲಿವೆ. ಅಂತಹ ಸಂಸ್ಥೆಗಳ ಸೇವೆಯನ್ನು ಬಳಸಿಕೊಂಡು ಮುಂದುವರಿಯುವುದು ಉತ್ತಮ. ಇಂತಹ ಸಂಸ್ಥೆಗಳ ಸಹಾಯದಿಂದ ಮಾರುಕಟ್ಟೆಯಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವ ಇತರ ಇದೆ ವಲಯದ ಸಂಸ್ಥೆಗಳ ಬಗ್ಗೆಯೂ ತಿಳುವಳಿಕೆ ಪಡೆದುಕೊಳ್ಳಬಹುದು. ಇದರ ಜೊತೆಗೆ ಕೆಲವೊಮ್ಮೆ ಮಾರುಕಟ್ಟೆಯಲ್ಲಿ ಸುಮ್ಮನೆ ಸ್ಪರ್ಧೆ ಮಾಡುವುದರ ಬದಲು ಅಂತಹ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ಕೂಡ ಲಾಭದಾಯಕ.

  • ನಾವು ಆಯ್ದು ಕೊಂಡ ವಲಯದ ತಜ್ಞರಿಂದ ಮಾರ್ಗದರ್ಶನ ಪಡೆಯುವುದು ಕೂಡ ಬಹಳ ಮುಖ್ಯವಾದ ಅಂಶ. ಆಂತರಿಕ ಸರ್ವೇ ಮತ್ತು ಮಾರುಕಟ್ಟೆ ಸರ್ವೇ ಜೊತೆಗೆ ಆಯ್ದ ವಲಯದ ತಜ್ಞರ ಸಲಹೆ ಮತ್ತು ಸೂಚನೆಗಳನ್ನು ಮತ್ತೂ ಬೇಕಿದ್ದಲ್ಲಿ ಅಂತಹವರನ್ನು ಸಂಸ್ಥೆಗೆ ಮೆಂಟರ್, ಮಾರ್ಗದರ್ಶಕರಾಗಿ ಸಲಹಾ ಮಂಡಳಿಯಲ್ಲಿ ಸೇರಿಸಿಕೊಳ್ಳಬೇಕು. ನಮ್ಮ ಐಡಿಯಾಗಳು ಎಷ್ಟರ ಮಟ್ಟಿಗೆ ಪ್ರಾಯೋಗಿಕವಾಗಿ ಜಾರಿಗೆ ತರಬಹುದು ಎನ್ನುವ ನಿಖರವಾದ ತಿಳುವಳಿಕೆ ಅವರಿಗೆ ಇರುತ್ತದೆ. ಆ ವಲಯದಲ್ಲಿ ಈಗಾಗಲೇ ಏಳುಬೀಳು ಕಂಡ ನೂರಾರು, ಸಾವಿರಾರು ವೆಂಚರ್ಗಳನ್ನು ನೋಡಿದ ಅನುಭವ ಅವರಿಗಿರುತ್ತದೆ. ಹೀಗಾಗಿ ಗೆಲುವಿಗೆ, ಉಳಿವಿಗೆ ಬೇಕಾದ ಸಲಹೆಯನ್ನು, ಬದಲಾವಣೆಯನ್ನು ತರುವ ಶಕ್ತಿ ಅವರಲ್ಲಿರುತ್ತದೆ. ಆಗೊಮ್ಮೆ ನಮ್ಮ ಯೋಜನೆ ಸರಿಯಾಗಿಲ್ಲ ಎಂದರೆ ಅದನ್ನು ಪೂರ್ಣವಾಗಿ ತಿದ್ದಿಕೊಳ್ಳುವುದು ಅಥವಾ ಬೇರೊಂದು ಹೊಸ ಯೋಜನೆಗೆ ಅಣಿಯಾಗುವುದಕ್ಕೂ ಇವರ ಸಲಹೆ ಬೇಕಾಗುತ್ತದೆ. ಭಾರತದಂತಹ ಬಹು ದೊಡ್ಡ ದೇಶದಲ್ಲಿ ಕೇವಲ ಒಂದೆರೆಡು ಪ್ರತಿಶತ ಜನರು ಗ್ರಾಹಕಗರಿ ಬದಲಾದರೂ ಸಾಕು ಉದ್ದಿಮೆ ಪರವಾಗಿಲ್ಲ ಎನ್ನುವ ಮಟ್ಟಕ್ಕೆ ಯಶಸ್ಸು ಗಳಿಸಿಕೊಂಡು ಬಿಡುತ್ತದೆ.

ವ್ಯಾಪಾರ ಆಯ್ಕೆ ಮಾಡಿಕೊಳ್ಳುವ ಮುಂಚಿನ ಪ್ರಶ್ನೆಗಳು! (ಹಣಕ್ಲಾಸು)
ಇಸ್ರೇಲ್-ಹಮಾಸ್ ಯುದ್ಧ: ಭಾರತದ ಮೇಲಿನ ಪರಿಣಾಮವೇನು? ಆಗಲಿದೆಯೇ ವಿತ್ತ ಜಗತ್ತಿನ ಸ್ಪೀಡ್ ಬ್ರೇಕರ್? (ಹಣಕ್ಲಾಸು)

ಕೊನೆಮಾತು: ಇವತ್ತಿನ ಕಾಲಘಟ್ಟದಲ್ಲಿ ಕೆಲಸವಿಲ್ಲ ಎನ್ನುವ ಕೂಗು ಹೆಚ್ಚಾಗುತ್ತಿದೆ. ಆದರೆ ಅದೇ ಸಮಯದಲ್ಲಿ ಕೆಲಸ ಮಾಡುವವರಿಲ್ಲ ಎನ್ನುವ ಕೂಗು ಕೂಡ ಅದಕ್ಕಿಂತ ಜೋರಾಗಿದೆ. ಸ್ವಲ್ಪ ಸಂಶೋಧನೆ ಮಾಡುವುದರಿಂದ ಬಹಳಷ್ಟು ಸಣ್ಣ ಉದ್ದಿಮೆಗಳನ್ನು ನಾವು ಮನೆಯಲ್ಲಿ ಕುಳಿತು ಆರಂಭಿಸಬಹುದು. ಇದರ ಬಗ್ಗೆ ಒಂದಷ್ಟು ಆಸಕ್ತಿ, ಸಂಶೋಧನೆ ನಡೆಸಿದರೆ ಇವನ್ನು ಶುರು ಮಾಡಲು ಹೆಚ್ಚಿನ ಬಂಡವಾಳದ ಅಗತ್ಯ ಕೂಡ ಇರುವುದಿಲ್ಲ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com