ಇಸ್ರೇಲ್-ಹಮಾಸ್ ಯುದ್ಧ: ಭಾರತದ ಮೇಲಿನ ಪರಿಣಾಮವೇನು? ಆಗಲಿದೆಯೇ ವಿತ್ತ ಜಗತ್ತಿನ ಸ್ಪೀಡ್ ಬ್ರೇಕರ್? (ಹಣಕ್ಲಾಸು)

ಹಣಕ್ಲಾಸು-383-ರಂಗಸ್ವಾಮಿ ಮೂಕನಹಳ್ಳಿ
ಇಸ್ರೇಲ್-ಹಮಾಸ್ ಯುದ್ಧ (ಸಂಗ್ರಹ ಚಿತ್ರ)
ಇಸ್ರೇಲ್-ಹಮಾಸ್ ಯುದ್ಧ (ಸಂಗ್ರಹ ಚಿತ್ರ)

ಇಸ್ರೇಲ್ ಮೇಲೆ ಹಮಾಸ್ ಉಗ್ರರ ದಾಳಿಯಾಗಿದೆ. ಹಮಾಸ್ ಉಗ್ರರಿಂದ ದಾಳಿಯಾಗುವುದು ಹೊಸ ವಿಷಯವಲ್ಲ. ಆದರೆ ದಶಕಗಳಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ದಾಳಿ ಆದದ್ದು ಇದೆ ಮೊದಲು. ಅಷ್ಟು ದೊಡ್ಡ ಪ್ರಮಾಣದ ಸಾವು ನೋವುಗಳಿಗೆ ಈ ಯುದ್ಧ ಕಾರಣವಾಗಿದೆ. 

ಜಗತ್ತಿನಾದ್ಯಂತ ಇದು ಹೊಸ ತಲ್ಲಣವನ್ನು ಸೃಷ್ಟಿಸಿದೆ. ಮುಂದೇನು? ಎನ್ನುವ ಪ್ರಶ್ನೆ ಎಲ್ಲರ ಮುಂದಿದೆ. ಏಕೆಂದರೆ ಇಸ್ರೇಲ್ ಎಂದಿಗೂ ಸುಮ್ಮನೆ ಕೂರುವ ದೇಶವಲ್ಲ. ಒಂದು ಹೊಡೆದರೆ ಹತ್ತು ತಿರುಗಿಸಿ ಹೊಡೆಯುವ ದೇಶವದು. ಹೀಗಾಗಿ ಸಹಜವಾಗೇ ಜಗತ್ತಿನೆಲ್ಲೆಡೆ ತಲ್ಲಣ, ಕುತೂಹಲ ಎರಡೂ ಜೋರಾಗಿದೆ. ಈ ಮಧ್ಯೆ ಹೂಡಿಕೆದಾರ ಭಯವಿದೆಯಲ್ಲ ಅದು ಬೇರೆ ರೀತಿಯದು. ರಷ್ಯಾ ಮತ್ತು ಉಕ್ರೈನ್ ಯುದ್ಧದಿಂದ ಜಗತ್ತಿನ ಹಲವು ರಾಷ್ಟ್ರಗಳ ಹೂಡಿಕೆದಾರರು ಮೂಲ ಹಣವನ್ನು ಕೂಡ ಕಳೆದುಕೊಂಡು ತೆನಾಲಿ ರಾಮನ ಬೆಕ್ಕಿನ ಸ್ಥಿತಿಯನ್ನು ತಲುಪಿದ್ದಾರೆ. 

ಮಾರುಕಟ್ಟೆ ಆರೋಗ್ಯಕರವಾಗಿದೆ ಎಂದರೂ ಹೂಡಿಕೆ ಮಾಡಲು ಹೆದರುವ ಸ್ಥಿತಿಯಲ್ಲಿದ್ದಾರೆ. ಆದರೆ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಬಹುತೇಕರು ಈ ಯುದ್ಧದ ಸಮಯದ ಏರಿಳಿತಗಳನ್ನು ಚೆನ್ನಾಗಿ ದುಡಿಸಿಕೊಂಡು ಬಹಳಷ್ಟು ಹಣ ಸೃಷ್ಟಿಸಿಕೊಂಡರು. ಭಾರತದ ಮಟ್ಟಿಗೆ ರಷ್ಯಾ-ಉಕ್ರೈನ್ ಯುದ್ಧ ಲಾಭದಾಯಕವಾಗಿತ್ತು. ಅದರಲ್ಲಿ ಯಾವುದೇ ಸಂಶಯ ಬೇಡ. ಯುದ್ಧದ ಜೊತೆಗೆ ಬರುವ ಹಣದುಬ್ಬರ ನಮ್ಮನ್ನು ಕೂಡ ತಲುಪಿತ್ತು. ಆದರೆ ಒಟ್ಟಾರೆ ಲಾಭ ಮತ್ತು ನಷ್ಟದ ಲೆಕ್ಕಾಚಾರದಲ್ಲಿ ಲಾಭವೇ ಹೆಚ್ಚಾಗಿತ್ತು.

ಈ ಲೇಖನವನ್ನು ಬರೆಯುವ ವೇಳೆಯಲ್ಲಿ ಇಸ್ರೇಲ್-ಹಮಾಸ್ ಯುದ್ಧ ನಾಲ್ಕನೇ ದಿನಕ್ಕೆ ಸಾಗಿದೆ. ಮೊದಲೆರೆಡು ದಿನಗಳಲ್ಲಿ ಷೇರು ಮಾರುಕಟ್ಟೆ ಕಳೆದುಕೊಂಡಿದ್ದ ಮೌಲ್ಯವನ್ನು ಇಂದು ಗಳಿಸಿಕೊಂಡಿದೆ. ಇಸ್ರೇಲ್ ಗಾಝ ಮೇಲೆ ಹಿಂದೆದೂ ಕಾಣದ ಮಟ್ಟಿನ ಮಿಸೈಲ್ ಸುರಿಸುತ್ತಿದೆ. ಯುದ್ಧ ಮುಂದುವರಿದರೆ ಭಾರತಕ್ಕೆ ಯಾವ ಪರಿಣಾಮವಾಗಬಹುದು? ಷೇರು ಮಾರುಕಟ್ಟೆಯ ಮೇಲೆ ಇದರ ಪರಿಣಾಮವೇನು? ಜನ ಸಾಮಾನ್ಯನ ಬದುಕಿಗಿನ ಮೇಲೆ ಏನಾದರೂ ಪರಿಣಾಮ ಬೀರಲಿದೆಯೇ? ಎನ್ನುವುದರ ಅವಲೋಕನವನ್ನು ಮಾಡೋಣ.

ಭಾರತದ ಮೇಲೆ ಯುದ್ಧದ ಪರಿಣಾಮವೇನು?

ಗಮನಿಸಿ ಯುದ್ಧ ದೀರ್ಘಕಾಲ ನಡೆದಾಗ ಆಗುವ ಪರಿಣಾಮಗಳು ಹಲವು, ಯುದ್ಧ ಇನ್ನೊಂದೆರೆಡು ದಿನದಲ್ಲಿ ಶಮನವಾದರೆ ಅದರ ಪರಿಣಾಮವೇ ಬೇರೆ. ರಷ್ಯಾ ಮತ್ತು ಉಕ್ರೈನ್ ಯುದ್ಧ ದೀರ್ಘಕಾಲ ನಡೆಯಿತು, ನಡೆಯುತ್ತಿದೆ. ರಷ್ಯಾ ದೇಶದ ಮೇಲೆ ಯೂರೋಪು ಮತ್ತು ಅಮೇರಿಕಾ ದೇಶಗಳು ನಿರ್ಬಂಧಗಳನ್ನು ಹೇರಿದ ಕಾರಣ ರಷ್ಯಾ ತನ್ನ ತೈಲವನ್ನು ಮಾರಲಾಗಿರಲಿಲ್ಲ. ಆದರೆ ಭಾರತ ಬೇರೊಂದು ದಾರಿಯನ್ನು ಕಂಡುಕೊಂಡು ತೈಲವನ್ನು ಕಡಿಮೆ ಬೆಲೆಗೆ ಖರೀದಿ ಮಾಡಿತು. ಹೀಗಾಗಿ ಅದು ನಮಗೆ ಲಾಭದಾಯಕವಾಯಿತು. ಇತ್ತೀಚಿಗೆ ಒಪೆಕ್ ಎನ್ನುವ ತೈಲ ಉತ್ಪಾದಿಸುವ ರಾಷ್ಟ್ರಗಳು ತೈಲವನ್ನು ಕಡಿಮೆ ಉತ್ಪಾದಿಸಲು ತನ್ಮೂಲಕ ಬೆಲೆಯನ್ನು ಹೆಚ್ಚಿಸಿಕೊಳ್ಳಲು ನಿರ್ಧಾರವನ್ನು ಕೈ ಗೊಂಡಿದ್ದವು. ಇದೀಗ ಅಂತರರಾಷ್ಟ್ರೀಯ ತೈಲ ಬೆಲೆ ಹೆಚ್ಚಾಗಿದೆ. ಆದರೂ ಭಾರತದಲ್ಲಿ ಅದೇ ಬೆಲೆಗೆ ತೈಲವನ್ನು ನೀಡಲಾಗುತ್ತಿದೆ. ಇದು ಈಗಾಗಲೇ ತೈಲ ಸಂಸ್ಥೆಗಳಿಗೆ ಕೋಟ್ಯಂತರ ರೂಪಾಯಿ ನಷ್ಟವನ್ನು ಅನುಭವಿಸುವಂತೆ ಮಾಡಿದೆ. ಯುದ್ಧ ಮುಂದುವರೆಯದೆ ಇದ್ದರೂ ಕೂಡ ಕೇಂದ್ರದ ಚುನಾವಣೆ ನಂತರ ಭಾರತದಲ್ಲಿ ಇನ್ನೊಂದು ಹೊಸ ಹಣದುಬ್ಬರ ದೇಶವನ್ನು ಬಾಧಿಸಲಿದೆ. ಯುದ್ಧ ಇನ್ನಷ್ಟು ದಿನ ಮುಂದುವರಿದರೆ ಹಣದುಬ್ಬರ ಎನ್ನುವ ರಾಕ್ಷಸ ಹಮಾಸ್ ಉಗ್ರರಿಗಿಂತ ಉಗ್ರವಾಗಿ ನಮ್ಮ ಮೇಲೆ ಮುಗಿ ಬಿಳಲಿದ್ದಾನೆ. ಅದು ಭಾರತೀಯ ಅರ್ಥ ವ್ಯವಸ್ಥೆಯನ್ನು ಒಂದಷ್ಟು ಅಲ್ಲಾಡಿಸುವುದು ಖಂಡಿತ. ತೈಲ ಬೆಲೆಯ ಹೆಚ್ಚಳ ಮಿಕ್ಕೆಲ್ಲಾ ವಸ್ತು ಮತ್ತು ಸೇವೆಯ ಮೇಲಿನ ಬೆಲೆಯನ್ನು ಹೆಚ್ಚಿಸಲಿದೆ, ಆದಾಯದಲ್ಲಿ ಗಣನೀಯ ಹೆಚ್ಚಳವಾಗುವುದಿಲ್ಲ ಆದರೆ ಖರ್ಚು ಮಾತ್ರ ಏರುತ್ತಲೇ ಹೋಗುತ್ತದೆ. ಸಮಾಜದಲ್ಲಿ ಈಗಿರುವ ಉಳ್ಳವರ-ಇಲ್ಲದವರ ಅಂತರ ಇನ್ನಷ್ಟು ಹೆಚ್ಚಾಗುತ್ತದೆ. ಮೂಲಭೂತ ವಸ್ತುಗಳ ಮೇಲಿನ ಬೆಲೆ ಹೆಚ್ಚಾಗುವುದರಿಂದ ಬದುಕು ಇನ್ನಷ್ಟು ಕಷ್ಟವಾಗುತ್ತದೆ. ಇದರ ಜೊತೆಗೆ ದೀರ್ಘಾವಧಿ ಯುದ್ಧ ಮುಂದುವರಿದರೆ ಭಾರತ ಅನ್ಯ ಮಾರ್ಗವಿಲ್ಲದೆ ತನ್ನ ಸೈನಿಕರನ್ನು ಇಸ್ರೇಲ್ ಸಹಾಯಕ್ಕೆ ಕಳುಹಿಸಬೇಕಾಗುತ್ತದೆ. ಇಸ್ರೇಲ್ ಭಾರತದ ಮಿತ್ರ ರಾಷ್ಟ್ರವಾಗಿದೆ. ಅಲ್ಲಿನ ನೋವು ಸಂಕಟಗಳ ಕಥೆ ಬೇರೆಯ ರೀತಿಯದ್ದು.

ಷೇರು ಮಾರುಕಟ್ಟೆಯ ಕಥೆಯೇನು?
ಅವರವರಿಗೆ ಅವರ ಚಿಂತೆ! ಹೌದು, ಸೈನಿಕನ ಮನೆಯವರಿಗೆ ತನ್ನವರ ಭದ್ರತೆಯ ಚಿಂತೆ, ಸಮಾಜಕ್ಕೆ ಹಣದುಬ್ಬರದ ಚಿಂತೆ, ಉಳ್ಳವರಿಗೆ, ಹೂಡಿಕೆದಾರರಿಗೆ ಇದರಿಂದ ಅವರ ಸಂಪತ್ತು ಕರಗುವುದೇ ಅಥವಾ ವೃದ್ಧಿಸುವುದೇ ಎನ್ನುವ ಚಿಂತೆ. ಯಾವುದನ್ನೂ ನಾವು ತಪ್ಪು ಅಥವಾ ಸರಿ ಎನ್ನಲಾಗುವುದಿಲ್ಲ. ಒಂದು ಸಮಾಜ ಆರ್ಥಿಕವಾಗಿ ಸಬಲವಾಗಿ ಮುಂದುವರೆಯಲು ಹೂಡಿಕೆದಾರ ಬೇಕೇಬೇಕು. ಕೊನೆಗೂ ಅವನು ಖುಷಿಯಾಗಿ, ಲಾಭ ಮಾಡಿಕೊಂಡರೆ ಅದು ಸಮಾಜಕ್ಕೂ ಒಂದಷ್ಟು ಸೇರುತ್ತದೆ.

ಷೇರು ಮಾರುಕಟ್ಟೆಯ ತಲ್ಲಣಗಳಿಗೆ ಕಾರಣವೇ ಬೇಡ, ಇನ್ನು ಅದಕ್ಕೆ ಕಾರಣ ಸಿಕ್ಕರೆ ಕಂಪಿಸದೆ ಬಿಟ್ಟೀತೇ? ಏರಿಳಿತಗಳು ಸಹಜ. ಟ್ರೇಡಿಂಗ್ ಮಾಡುವವರಿಗೆ, ನಿತ್ಯ ಇಲ್ಲಿಯ ದುಡಿಮೆಯಲ್ಲಿ ಬದುಕು ಕಟ್ಟಿಕೊಳ್ಳುವ ಅವಶ್ಯಕತೆ ಇರುವ ಜನರಿಗೆ ಒಂದಷ್ಟು ತೊಂದರೆಯಾಗುವುದು ಸಹಜ. ಅದು ಈಗ ಕೂಡ ಆಗಲಿದೆ. ಉಳಿದಂತೆ ನಿಮಗೊಂದು ಟ್ರಿಕ್ ಅಥವಾ ರಹಸ್ಯ ಹೇಳುತ್ತೇನೆ. ಹೆಚ್ಚು ಲಾಭ ಮಾಡಿಕೊಳ್ಳಲು ಸಾಧ್ಯವಿರುವುದು ಕ್ರೈಸಿಸ್ ಸಮಯದಲ್ಲಿ! ಉತ್ತಮ ಹೂಡಿಕೆದಾರ ಇಂತಹ ಸಮಯದಲ್ಲಿ ಮಾರುಕಟ್ಟೆಯಿಂದ ಹೊರಹೋಗುವುದಿಲ್ಲ, ಬದಲಿಗೆ ಇನ್ನಷ್ಟು  ಹಣವನ್ನು ಮಾರುಕಟ್ಟೆಗೆ ಹೂಡಿಕೆ ಮಾಡುತ್ತಾನೆ. ಹೂಡಿಕೆ ದೀರ್ಘಾವಧಿಯಾಗಿದ್ದರೆ ಚಿಂತಿಸುವ ಅವಶ್ಯಕತೆಯಿಲ್ಲ. ಟ್ರೇಡರ್ ಗಳು ಕೂಡ ಒಂದಷ್ಟು ಹೆಚ್ಚಿನ ಜಾಗ್ರತೆವಹಿಸಿದರೆ ಸಾಕು. ನಿಮಗೆಲ್ಲ ಗೊತ್ತಿರಲಿ, ಭಾರತೀಯ ಷೇರು ಮಾರುಕಟ್ಟೆ ಸುವರ್ಣ ಕಾಲದಲ್ಲಿದೆ. 2024ರ ಚುನಾವಣೆಯ ಫಲಿತಾಂಶದ ಆಧಾರದ ಮೇಲೆ ಅದರ ಮುಂದಿನ ಭವಿಷ್ಯ ಅವಲಂಬಿಸಿದೆ.

ಜನ ಸಾಮಾನ್ಯನ ಕಥೆಯೇನು?

ಭಾರತದ ಜನ ಸಾಮಾನ್ಯನ ಕಥೆ ಸ್ವಲ್ಪ ವಿಚಿತ್ರವಾದದ್ದು. ಯುದ್ಧವಾಗದೆ ಇದ್ದಿದ್ದರೂ, ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಹಣದುಬ್ಬರ ಅವನನ್ನು ಕಾಡದೆ ಬಿಡುವುದಿಲ್ಲ. ಇನ್ನೊಂದು ಸುತ್ತು ಬೆಲೆಯೇರಿಕೆಯನ್ನು ಆತ ಅನುಭವಿಸಲು ಸಿದ್ಧನಿರಬೇಕು. ಮೊದಲೇ ಹೇಳಿದಂತೆ ತೈಲಬೆಲೆಯನ್ನು ಸರಕಾರ ಏರಿಸಿಲ್ಲ, ಆದರೆ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಳವಾಗಿದೆ. ಚುನಾವಣೆ ನಂತರ ಬೆಳೆ ಕಾಳುಗಳಿಂದ ಹಿಡಿದು ಎಲ್ಲವೂ ಏರಿಕೆಯನ್ನು ಕಾಣಲಿವೆ. ಇದು ಒಂದಂಶವಾದರೆ, ಇನ್ನೊಂದು ದೊಡ್ಡ ಅಂಶ, ನಮ್ಮ ಸಮಾಜದಲ್ಲಿ ಈಗಾಗಲೇ ಸಾಮರಸ್ಯ ಮಾಯವಾಗುತ್ತಿದೆ. ಇಸ್ರೇಲ್ ಯುದ್ಧ ಇನ್ನೊಂದು ರೀತಿಯ ವಿಭಜನೆಗೆ, ಅದು ಕಣ್ಣಿಗೆ ಕಾಣುವ ವಿಭಜನೆಗೆ ನಾಂದಿ ಹಾಡಲಿದೆ. 2024ರ ಚುನಾವಣೆಯ ಮೇಲೆ ಇದು ಪರಿಣಾಮ ಬಿರುವುದರಲ್ಲಿ ಕೂಡ ಸಂಶಯವಿಲ್ಲ. ಒಟ್ಟಿನಲ್ಲಿ ಯುದ್ಧವಾಗಲಿ, ಹಣದುಬ್ಬರವಾಗಲಿ ಜನ ಸಾಮಾನ್ಯನನ್ನು ಸುಡದೆ ಬಿಡುವುದಿಲ್ಲ. ತನ್ನದಲ್ಲದ ತಪ್ಪಿಗೆ ಯಾವಾಗಲೂ ದಂಡ ಕಟ್ಟುವುದು ಜನ ಸಾಮಾನ್ಯ ಮಾತ್ರ. ಇದರ ಜೊತೆಗೆ ಡಾಲರ್ ಮೌಲ್ಯ, ಚಿನ್ನ ಮತ್ತಿತರ ವಸ್ತುಗಳ ಮೇಲಿನ ಬೆಲೆಯಲ್ಲಿ ಕೂಡ ವ್ಯತ್ಯಯವಾಗಲಿದೆ. ಇವೆಲ್ಲವೂ ಚೈನ್ ಲಿಂಕ್ ಇದ್ದಹಾಗೆ ಒಂದು ಏರಿದರೆ ಇನ್ನೊಂದು ತಾನಾಗೇ ಏರುತ್ತದೆ. ಜಾಗತಿಕ ಮಟ್ಟದಲ್ಲಿ ಚಿನ್ನಕ್ಕೆ ಇನ್ನಷ್ಟು ಡಿಮ್ಯಾಂಡ್ ಹೆಚ್ಚಾಗುವ ಸಾಧ್ಯತೆಯನ್ನು ಅಲ್ಲಗೆಳೆಯಾಗುವುದಿಲ್ಲ.

ಭಾರತ-ಇಸ್ರೇಲ್ ನಡುವಿನ ವ್ಯಾಪಾರದ ಕಥೆಯೇನು?
ಅಲ್ಪಕಾಲದ ಯುದ್ದದಿಂದ, ಅಂದರೆ ಸದ್ಯಕ್ಕೆ ಯಾವುದೇ ತೊಂದರೆಯಿಲ್ಲ. ಯುದ್ಧ ಮುಂದುವರಿದರೆ ಆಗ ಸಪ್ಲೈ ಚೈನ್ ಕುಸಿತಕ್ಕೆ ಸಿಲುಕಿ ವ್ಯಪಾರದಲ್ಲಿ ಏರುಪೇರು ಉಂಟಾಗಬಹುದು. ಭಾರತ ಇಸ್ರೇಲ್ನಿಂದ ಆಮದು ಮಾಡಿಕೊಳ್ಳುವುದು ಕೆಲವೊಂದು ಮೆಷಿನರಿ, ಪರ್ಲ್ಸ್, ಡೈಮಂಡ್, ಒಟ್ಟಾರೆ ಮೌಲ್ಯ ವಾರ್ಷಿಕ ಎರಡೂವರೆ ಬಿಲಿಯನ್ ಡಾಲರ್. ಆದರೆ ಭಾರತ ಇಸ್ರೇಲ್ಗೆ ಕಳಿಸುವ ಅಂದರೆ ರಫ್ತು ಮಾಡುವ ಪೆಟ್ರೋಲಿಯಂ ಪದಾರ್ಥಗಳ ಮೌಲ್ಯ ವಾರ್ಷಿಕ ಎಂಟೂವರೆ ಬಿಲಿಯನ್ ಅಮೆರಿಕಾನ್ ಡಾಲರ್. ನಾವು ತರಿಸಿಕೊಳ್ಳುವ ವಸ್ತು ನಿಂತು ಹೋದರೆ ಅದರಿಂದ ಭಾರತಕ್ಕೇನೂ ನಷ್ಟವಿಲ್ಲ, ಅಪಾಯವೂ ಇಲ್ಲ. ಆದರೆ ಇಸ್ರೇಲ್ಗೆ ನಮ್ಮ ಪೆಟ್ರೋಲಿಯಂ ಪದಾರ್ಥಗಳು ಬೇಕೇ ಬೇಕು. ಹೀಗಾಗಿ ದೀರ್ಘಾವಧಿ ಯುದ್ಧ ಭಾರತಕ್ಕಿಂದ ಇಸ್ರೇಲ್ ದೇಶಕ್ಕೆ ಹೆಚ್ಚು ನಷ್ಟ.

ಕೊನೆಮಾತು: ಇಲ್ಲಿಯವರೆಗೆ ಸಾವಿರಾರು ಸಾವುಗಳಿಗೆ ನಾವೆಲ್ಲಾ ಸಾಕ್ಷಿಯಾಗಿದ್ದೇವೆ. ಯುದ್ಧ ಮುಂದುವರಿದರೆ ಈ ಸಂಖ್ಯೆಯಲ್ಲಿ ಇನ್ನಷ್ಟು ಹೆಚ್ಚಳವಾಗಲಿದೆ. ನಿತ್ಯವೂ ಯುದ್ಧಕೆಂದು ಖರ್ಚಾಗುವ ಹಣದ ಮೊತ್ತ ಕೋಟಿಗಳಲ್ಲಿ ಇರುತ್ತದೆ. ಯುದ್ಧದಲ್ಲಿ ಸೋತರೂ, ಗೆದ್ದರೂ ನೋವಂತೂ ತಪ್ಪಿದ್ದಲ್ಲ. ಕೆಲವೇ ಕೆಲವು ಜನರ ಮನಸ್ಥಿತಿಯ ಕಾರಣ ಜಗತ್ತು ಸಂಕಷ್ಟಕ್ಕೆ ಒಳಗಾಗುತ್ತದೆ. ಯುದ್ಧದ ಕಾರಣ ಉಂಟಾಗುವ ಆರ್ಥಿಕ ನಷ್ಟವನ್ನು ನಾವು ಭರಿಸಬಹುದು, ಆದರೆ ಇದರಿಂದ ಉಂಟಾಗುವ ಮಾನಸಿಕ ನಷ್ಟವನ್ನು, ನೋವನ್ನು ತುಂಬುವುದೆಂತು? ಮೈಮೇಲಿನ ಗಾಯ ವಾಸಿಯಾಗುತ್ತದೆ. ಆದರೆ ಮನಸ್ಸಿನ ಮೇಲಿನ ಗಾಯ ಮಾಯುವುದಿಲ್ಲ. ಒಟ್ಟಿನಲ್ಲಿ ಜಾಗತಿಕ ವಿತ್ತ ಜಗತ್ತು ಒಂದು ಹೆಜ್ಜೆ ಮುಂದೆ ಹೋಗಿ ಎರಡು ಹೆಜ್ಜೆ ಹಿಂದೆ ಬರುತ್ತಿದೆ. ಇದರ ಪರಿಣಾಮ ತಮ್ಮ ತಪ್ಪಿಲ್ಲದ ಚಿಕ್ಕ ಪುಟ್ಟ ರಾಷ್ಟ್ರಗಳು ಬೆಲೆ ತೆರಬೇಕಾಗುತ್ತದೆ. ಜಾಗತಿಕ ವಿತ್ತ ಜಗತ್ತಿನ ವೇಗಕ್ಕೆ ಈ ಯುದ್ಧ ಸ್ಪೀಡ್ ಬ್ರೇಕರ್ ಆಗಲಿದೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com