
ಸಮಸ್ತ ಜಗತ್ತಿನ ಗಮನ ಸೆಳೆಯುವಂತಹ ಘೋಷಣೆ ಒಂದನ್ನು ಮಾಡಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಶೀಘ್ರದಲ್ಲೇ ರಷ್ಯಾ ಮತ್ತು ಉಕ್ರೇನ್ ನಡುವಿನ ಕದನ ವಿರಾಮ ಒಪ್ಪಂದ ವಾಸ್ತವವಾಗಿ ತಲೆದೋರುವ ಸಾಧ್ಯತೆಗಳಿವೆ ಎಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಬರೆದುಕೊಂಡಿರುವ ಟ್ರಂಪ್, ತಾನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಆಗಸ್ಟ್ 15ರಂದು ಅಲಾಸ್ಕಾದಲ್ಲಿ ನಡೆಯುವ ಸಭೆಯಲ್ಲಿ ಆತಿಥ್ಯ ವಹಿಸುವುದಾಗಿ ಹೇಳಿದ್ದಾರೆ. ಸಭೆಯನ್ನು ನಡೆಸಲು ಅಲಾಸ್ಕಾವನ್ನು ಆರಿಸಿರುವುದು ತರ್ಕಬದ್ಧ ನಿರ್ಧಾರ ಎಂದು ಕ್ರೆಮ್ಲಿನ್ ಸಹ ಅಭಿಪ್ರಾಯ ಪಟ್ಟಿದೆ.
ಈ ಕುರಿತು ಮಾತನಾಡಿರುವ ಡೊನಾಲ್ಡ್ ಟ್ರಂಪ್, ಪುಟಿನ್ ಸಹ ಭೇಟಿಗೆ ಉತ್ಸುಕರಾಗಿದ್ದು, ಉಕ್ರೇನಿನಲ್ಲಿ ನಡೆಯುತ್ತಿರುವ ಭೀಕರ ಯುದ್ಧ ಕೊನೆಗೂ ಮುಕ್ತಾಯ ಕಾಣಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಭದ್ರತಾ ಕಾರಣಗಳಿಂದ ಈ ಸಭೆಯ ಘೋಷಣೆ ಬಹಳಷ್ಟು ವಿಳಂಬಗೊಂಡಿತ್ತು. ಆದರೆ, ಈಗ ಜಗತ್ತಿನ ಸ್ಥಿರತೆಯ ಮೇಲೆ ಪರಿಣಾಮ ಬೀರಬಲ್ಲಂತಹ ಮಾತುಕತೆ ನೆರವೇರಿಸಲು ಎಲ್ಲ ಸಿದ್ಧತೆಗಳೂ ನಡೆಯುತ್ತಿವೆ.
ಶುಕ್ರವಾರ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಂಭಾವ್ಯ ಶಾಂತಿ ಮಾತುಕತೆಯ ಅತ್ಯಂತ ಚರ್ಚಿತ ವಿಚಾರದ ಕುರಿತು ಒಂದು ಸುಳಿವು ನೀಡಿದರು. ಈ ಸಭೆಯಲ್ಲಿ ರಷ್ಯಾ ಮತ್ತು ಉಕ್ರೇನ್‌ಗಳ ನಡುವೆ ವಿವಿಧ ಪ್ರಾಂತ್ಯಗಳ ಹಸ್ತಾಂತರದ ಕುರಿತು ಮಾತುಕತೆ ನಡೆಯುವ ಸಾಧ್ಯತೆಗಳಿವೆ ಎಂದು ಟ್ರಂಪ್ ಸುಳಿವು ನೀಡಿದ್ದಾರೆ. ಉಭಯ ದೇಶಗಳಿಗೂ ಪ್ರಯೋಜನಕರವಾಗುವಂತಹ ತೀರ್ಮಾನಕ್ಕೆ ಬರಲು ಇದೇ ಅತ್ಯುತ್ತಮ ಪ್ರಾಯೋಗಿಕ ಕ್ರಮವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.
ಆದರೆ, ಉಕ್ರೇನ್ ಈ ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದು, ರಷ್ಯಾ ಸ್ವತಃ 2022ರಲ್ಲಿ ಉಕ್ರೇನ್ ಮೇಲೆ ದಾಳಿ ನಡೆಸಿದ್ದು, ತಾನು ತನ್ನ ಯಾವುದೇ ಭೂಮಿಯನ್ನು ಬಿಟ್ಟುಕೊಡಲು ಸಿದ್ಧವಿಲ್ಲ ಎಂದಿದೆ. ಈ ಯುದ್ಧದಿಂದ ಈಗಾಗಲೇ ಸಾಕಷ್ಟು ಪ್ರಾಣಹಾನಿ ಸಂಭವಿಸಿದ್ದು, ಹತ್ತಾರು ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪೂರ್ವ ಮತ್ತು ದಕ್ಷಿಣ ಉಕ್ರೇನಿನ ಲಕ್ಷಾಂತರ ಜನರು ಮನೆಗಳನ್ನು ತ್ಯಜಿಸಿ ಸ್ಥಳಾಂತರಗೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಅಮೆರಿಕಾದ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಅವರನ್ನು ಮಾಸ್ಕೋದಲ್ಲಿ ಭೇಟಿಯಾದ ಬಳಿಕ, ಶಾಂತಿ ಮಾತುಕತೆಯ ಪ್ರಯತ್ನ ಇನ್ನಷ್ಟು ಬಲ ಪಡೆದುಕೊಂಡಿತು. ಅಮೆರಿಕನ್ ಮಾಧ್ಯಮ ವರದಿಗಳ ಪ್ರಕಾರ, ಉಕ್ರೇನ್ ಪಡೆಗಳು ಡೊನ್‌ಬಾಸ್ ಪ್ರದೇಶದಿಂದ ಹಿಂದೆ ಸರಿಯಲು ಒಪ್ಪಿಕೊಂಡರೆ, ಪುಟಿನ್ ಕದನ ವಿರಾಮ ಜಾರಿಗೆ ತರಲು ಇಚ್ಛೆ ಹೊಂದಿದ್ದಾರೆ. ಇದರ ಪರಿಣಾಮವಾಗಿ, ರಷ್ಯಾಗೆ ಅದು ಈಗಾಗಲೇ ಯುದ್ಧದಲ್ಲಿ ಆಕ್ರಮಿಸಿಕೊಂಡು, ನಿಯಂತ್ರಿಸುತ್ತಿರುವ ಡಾನೆಟ್ಸ್ಕ್, ಲುಹಾನ್ಸ್ಕ್, ಮತ್ತು 2014ರಲ್ಲಿ ಆಕ್ರಮಿಸಿಕೊಂಡ ಕ್ರಿಮಿಯಾಗಳನ್ನು ತನ್ನಲ್ಲೇ ಉಳಿಸಿಕೊಂಡು, ಅವುಗಳನ್ನು ಅಧಿಕೃತವಾಗಿ ತನ್ನ ದೇಶದೊಳಗೆ ಸೇರಿಸಿಕೊಳ್ಳಲು ಸಾಧ್ಯವಾಗುತ್ತದೆ.
ಹಲವಾರು ಯುರೋಪಿಯನ್ ಅಧಿಕಾರಿಗಳು ಈ ಕುರಿತು ಅನುಮಾನ ಹೊಂದಿದ್ದು, ಈ ರೀತಿಯಲ್ಲಿ ಕದನ ವಿರಾಮ ಜಾರಿಗೆ ಬಂದು, ರಷ್ಯಾ ಆಕ್ರಮಣ ನಿಲ್ಲಿಸುವ ಭರವಸೆ ನೀಡಬೇಕಾದರೆ ಉಕ್ರೇನ್ ತನ್ನ ನೆಲವನ್ನು ಬಿಟ್ಟುಕೊಡಬೇಕಾಗಿ ಬರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಅಲಾಸ್ಕಾವನ್ನು ಬಹಳ ಜಾಗರೂಕವಾಗಿ ಸಭೆಯ ಜಾಗವಾಗಿ ಆರಿಸಲಾಗಿದೆ. ಇದಕ್ಕೆ ಮುಖ್ಯ ಕಾರಣವೆಂದರೆ, ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ (ಇಂಟರ್ನ್ಯಾಷನಲ್ ಕ್ರಿಮಿನಲ್ ಕೋರ್ಟ್ - ಐಸಿಸಿ) ಯುದ್ಧಾಪರಾಧಗಳಡಿ ವ್ಲಾಡಿಮಿರ್ ಪುಟಿನ್ ವಿರುದ್ಧ ಬಂಧನದ ವಾರಂಟ್ ನೀಡಿದೆ. ಪುಟಿನ್ ಯಾವುದಾದರೂ ಐಸಿಸಿ ಸದಸ್ಯ ರಾಷ್ಟ್ರಕ್ಕೆ ಭೇಟಿ ನೀಡಿದರೆ, ಆ ರಾಷ್ಟ್ರ ತಕ್ಷಣವೇ ಪುಟಿನ್‌ರನ್ನು ಬಂಧಿಸುವ ಅನಿವಾರ್ಯತೆ ಉಂಟಾಗುತ್ತದೆ. ಆದರೆ, ಅಮೆರಿಕಾ ಐಸಿಸಿ ಸದಸ್ಯ ರಾಷ್ಟ್ರವಾಗಿಲ್ಲ. ಅದರೊಡನೆ, ಅಮೆರಿಕಾ ಐಸಿಸಿಯ ಅಧಿಕಾರವನ್ನೂ ಒಪ್ಪಿಕೊಂಡಿಲ್ಲ. ಈ ಕಾರಣದಿಂದಾಗಿ, ಅಲಾಸ್ಕಾದಲ್ಲಿ ನಡೆಯುವ ಮಾತುಕತೆ ಐಸಿಸಿ ಬಂಧನದ ಸಮಸ್ಯೆಯಿಂದ ಮುಕ್ತವಾಗಿರುತ್ತದೆ.
ಅಲಾಸ್ಕಾದಲ್ಲಿ ಸಭೆ ನಡೆಸುವುದಕ್ಕೆ ಭೌಗೋಳಿಕತೆ ಇನ್ನೊಂದು ಪ್ರಮುಖ ಕಾರಣ. ಅತ್ಯಂತ ಸನಿಹದ ಬಿಂದುವಾದ ಬೇರಿಂಗ್ ಕೊಲ್ಲಿಯಲ್ಲಿ ರಷ್ಯಾ ಮತ್ತು ಅಮೆರಿಕಾಗಳು ಪರಸ್ಪರ ಕೇವಲ 88 ಕಿಲೋಮೀಟರ್ (55 ಮೈಲಿ) ಅಷ್ಟೇ ದೂರದಲ್ಲಿವೆ. ಇದು ಉಭಯ ದೇಶಗಳ ನಾಯಕರಿಗೂ ಸಮಾನ ಪ್ರಯಾಣದ ಅಂತರದಲ್ಲಿ, ಮಧ್ಯದಲ್ಲಿ ಸಿಗುವ ತಾಣವಾಗಿದೆ.
ಅಲಾಸ್ಕಾ ಮತ್ತು ರಷ್ಯಾದ ಸಂಬಂಧ ಬಹಳ ಹಳೆಯದಾಗಿದೆ. ಅಂದಾಜು 125 ವರ್ಷಗಳ ಹಿಂದಿನ ತನಕ, ಅಲಾಸ್ಕಾ ರಷ್ಯನ್ ಸಾಮ್ರಾಜ್ಯದ ಭಾಗವಾಗಿದ್ದು, ಉತ್ತರ ಅಮೆರಿಕಾದಲ್ಲಿ ರಷ್ಯನ್ ಸಾಮ್ರಾಜ್ಯದ ನೆಲೆಯಾಗಿತ್ತು. ಇದರ ನಿಯಂತ್ರಣ ದಕ್ಷಿಣಕ್ಕೆ ಬಹುತೇಕ ಕ್ಯಾಲಿಫೋರ್ನಿಯಾದ ಫೋರ್ಟ್ ರಾಸ್ ತನಕ ವ್ಯಾಪಿಸಿತ್ತು.
1867ರಲ್ಲಿ, 'ಅಲಾಸ್ಕಾ ಪರ್ಚೇಸ್' ಎಂದು ಕರೆಯಲಾದ ವ್ಯಾಪಾರದಲ್ಲಿ, ರಷ್ಯಾ ಅಲಾಸ್ಕಾವನ್ನು ಅಮೆರಿಕಾಗೆ ಮಾರಾಟ ಮಾಡಿತು. ಅಮೆರಿಕಾ ಬಹುತೇಕ 1.52 ಮಿಲಿಯನ್ ಚದರ ಮೈಲಿ ಭೂ ಪ್ರದೇಶವನ್ನು ಖರೀದಿಸಲು 7.2 ಮಿಲಿಯನ್ ಡಾಲರ್ ಮೊತ್ತವನ್ನು ರಷ್ಯಾಗೆ ಪಾವತಿಸಿತು. ಕ್ರಿಮಿಯನ್ ಯುದ್ಧವನ್ನು ಸೋತಿದ್ದ ರಷ್ಯಾಗೆ ತುರ್ತಾಗಿ ದುಡ್ಡಿನ ಅವಶ್ಯಕತೆ ಇದ್ದು, ಗ್ರೇಟ್ ಬ್ರಿಟನ್ ಸುಲಭವಾಗಿ ಈ ದೂರದ ಪ್ರದೇಶವನ್ನು ವಶಪಡಿಸಿಕೊಳ್ಳಬಹುದು ಎಂಬ ಆತಂಕವಿತ್ತು. ಅಮೆರಿಕಾಗೆ ಈ ಖರೀದಿ ಒಂದು ಸ್ಮಾರ್ಟ್ ನಡೆಯಾಗಿದ್ದು, ಅಲಾಸ್ಕಾ ಅಪಾರ ಪ್ರಮಾಣದ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿತ್ತು. ಇದಕ್ಕಾಗಿ ಅಮೆರಿಕಾ ಪ್ರತಿ ಎಕರೆಗೆ ಕೇವಲ ಎರಡು ಸೆಂಟ್ ಅಷ್ಟೇ ಪಾವತಿ ಮಾಡಿತ್ತು.
1959ರ ಅಲಾಸ್ಕಾ ಸ್ಟೇಟ್‌ಹುಡ್ ಆ್ಯಕ್ಟ್ ಮೂಲಕ ಅಲಾಸ್ಕಾ ಅಧಿಕೃತವಾಗಿ ಅಮೆರಿಕಾದ 49ನೇ ರಾಜ್ಯವಾಗಿ ಹೊರಹೊಮ್ಮಿತು. ಇದು ರಾಜ್ಯಕ್ಕೆ ಒಟ್ಟು 375 ಮಿಲಿಯನ್ ಎಕರೆ ಭೂಮಿಯ ಪೈಕಿ 104 ಮಿಲಿಯನ್ ಎಕರೆಯ ಮೇಲೆ ಅಧಿಕಾರ ನೀಡಿತು. ಇನ್ನುಳಿದ ಭೂಮಿ ಫೆಡರಲ್ ನಿಯಂತ್ರಣದಲ್ಲೇ ಉಳಿಯಿತು.
ಆದರೆ, ಈ ಕಾನೂನಿನ ಪ್ರಕಾರ, ಅಲಾಸ್ಕನ್ನರು ಮೂಲ ನಿವಾಸಿ ನೆಲೆಯಲ್ಲಿ ಹೊಂದಿದ್ದ ಭೂಮಿಯ ಮೇಲಿನ ಹಕ್ಕನ್ನು ಬಿಟ್ಟು ಕೊಡಬೇಕಾಗಿತ್ತು. ಪಾರಂಪರಿಕವಾಗಿ ಸ್ಥಳೀಯ ಸಮುದಾಯಗಳು ಭೂಮಿಯನ್ನು ಹೊಂದಿದ್ದರೂ, ಅವುಗಳು ಹಕ್ಕು ಬಿಟ್ಟು ಬಿಡುವ ಪರಿಸ್ಥಿತಿ ಉಂಟಾಗಿತ್ತು. 1971ರಲ್ಲಿ ಜಾರಿಗೆ ಬಂದ ಅಲಾಸ್ಕಾ ನೇಟಿವ್ ಸೆಟಲ್‌ಮೆಂಟ್ ಆ್ಯಕ್ಟ್ (ಎಎನ್‌ಸಿಎಸ್ಎ) ಈ ಸಮಸ್ಯೆಯನ್ನು ಪರಿಹರಿಸಿತು. ಈ ಕಾನೂನು ಅಲಾಸ್ಕಾ ಮೂಲ ನಿವಾಸಿಗಳಿಗೆ 44 ಮಿಲಿಯನ್ ಎಕರೆ ಭೂಮಿ ಮತ್ತು ಬಹುತೇಕ 1 ಬಿಲಿಯನ್ ಡಾಲರ್ ಮೊತ್ತವನ್ನು ಒದಗಿಸಿ, ರಾಜ್ಯದ ಭೂ ಮಾಲೀಕತ್ವದ ವ್ಯವಸ್ಥೆಯನ್ನು ಬದಲಿಸಿತು.
ಆರ್ಕ್‌ಟಿಕ್ ಆಧಾರಸ್ತಂಭ: ಅಲಾಸ್ಕಾದ ಪ್ರಾಮುಖ್ಯತೆ
ಇಂದು ಅಲಾಸ್ಕಾದ ಭೂ ಪ್ರದೇಶದ ಕಾರಣದಿಂದ ಅದು ಅಮೆರಿಕಾದ ರಕ್ಷಣಾ ಕಾರ್ಯತಂತ್ರದಲ್ಲಿ ಬಹು ಮುಖ್ಯ ಪಾತ್ರವನ್ನು ಹೊಂದಿದೆ. ಆ್ಯಂಕರಾಜ್ ಬಳಿಯ ಜಾಯಿಂಟ್ ಬೇಸ್ ಎಲ್ಮೆಂಡಾರ್ಫ್ - ರಿಚರ್ಡ್‌ಸನ್ ಮತ್ತು ಫೇರ್‌ಬ್ಯಾಂಕ್ಸ್ ಬಳಿಯ ಈಲ್ಸನ್ ವಾಯು ಸೇನಾ ನೆಲೆಯಂತಹ ಪ್ರಮುಖ ಸೇನಾ ನೆಲೆಗಳನ್ನು ಅಲಾಸ್ಕಾ ಹೊಂದಿದೆ.
ಅದರೊಡನೆ, ಆರ್ಕ್‌ಟಿಕ್ ನಲ್ಲಿ ಅಮೆರಿಕಾ ಹೊಂದಿರುವ ಏಕೈಕ ರಾಜ್ಯ ಅಲಾಸ್ಕಾ ಆಗಿದೆ. ಹವಾಮಾನ ಬದಲಾವಣೆಯ ಪರಿಣಾಮವಾಗಿ ಆರ್ಕ್‌ಟಿಕ್‌ನ ಹಿಮಗಡ್ಡೆಗಳು ಕರಗುತ್ತಿದ್ದು, ಹೊಸ ವ್ಯಾಪಾರ ಮಾರ್ಗಗಳು ತೆರೆಯುತ್ತಿವೆ. ಅತ್ಯಂತ ಬೃಹತ್ತಾದ ತೈಲ, ಅನಿಲ ಮತ್ತು ಖನಿಜ ಸಂಪನ್ಮೂಲಗಳನ್ನು ಬಳಸಲು ಸಾಧ್ಯವಾಗಲಿದೆ. ಇದು ಅಲಾಸ್ಕಾವನ್ನು ಭವಿಷ್ಯದ ವ್ಯಾಪಾರ ಮತ್ತು ಸಂಪನ್ಮೂಲ ಅನ್ವೇಷಣೆಗೆ ಮುಖ್ಯ ಕೇಂದ್ರವಾಗಿಸಿದೆ.
ಆಗಸ್ಟ್ 15ರಂದು ನಡೆಯುವ ಸಭೆ ಅಲಾಸ್ಕಾದಲ್ಲಿ ನಡೆಯುವ ಮೊದಲ ಪ್ರಮುಖ ಅಂತಾರಾಷ್ಟ್ರೀಯ ವಿದ್ಯಮಾನವೇನಲ್ಲ. ಮಾರ್ಚ್ 2021ರಲ್ಲಿ, ಆ್ಯಂಕರೇಜ್‌ನಲ್ಲಿ ಅಮೆರಿಕಾ ಮತ್ತು ಚೀನಾಗಳ ಅಧಿಕಾರಿಗಳ ಸಭೆ ನಡೆದಿತ್ತು. ಆದರೆ, ಮಾಧ್ಯಮಗಳ ಮುಂದೆ ಉಭಯ ಪಕ್ಷಗಳೂ ಪರಸ್ಪರರನ್ನು ಬಹಿರಂಗವಾಗಿ ಟೀಕಿಸಿ, ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. 1984ರಲ್ಲಿ, ಪೋಪ್ ಜಾನ್ ಪಾಲ್ 2 ಅಲಾಸ್ಕಾಗೆ ಭೇಟಿ ನೀಡಿ, ಆಗಿನ ಅಧ್ಯಕ್ಷ ರೊನಾಲ್ಡ್ ರೇಗನ್ ಅವರನ್ನು ಭೇಟಿಯಾಗಿದ್ದರು. 1971ರಲ್ಲಿ ಅಧ್ಯಕ್ಷ ರಿಚರ್ಡ್ ನಿಕ್ಸನ್ ಜಪಾನ್ ಚಕ್ರವರ್ತಿಯನ್ನು ಅಲಾಸ್ಕಾದಲ್ಲಿ ಭೇಟಿಯಾಗಿದ್ದರು.
ಇವೆಲ್ಲವೂ ಅಲಾಸ್ಕಾ ಹೇಗೆ ಶಕ್ತಿಶಾಲಿ ರಾಷ್ಟ್ರಗಳ ನಡುವಿನ ಪ್ರಾಯೋಗಿಕ ಮಾತುಕತೆಯ ಸ್ಥಳವಾಗಿ ವಿಶೇಷ ಪಾತ್ರವನ್ನು ನಿರ್ವಹಿಸುತ್ತದೆ ಎನ್ನುವುದಕ್ಕೆ ಸಾಕ್ಷಿಯಾಗಿವೆ. ಆ ಮೂಲಕ, ಯುದ್ಧವನ್ನು ಕೊನೆಗೊಳಿಸಿ, ಯುರೋಪಿನ ಭದ್ರತಾ ನಕ್ಷೆಯನ್ನು ಬದಲಾಯಿಸುವಂತಹ ಪ್ರಮುಖ ಸಭೆಗೆ ಅಲಾಸ್ಕಾ ಸೂಕ್ತ ವೇದಿಕೆಯಾಗಿದೆ.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com
Advertisement