ಅಹಿಂಸೆಯಿಂದ ಸ್ವಾತಂತ್ರ್ಯ ಬಂತೆಂಬ ಭ್ರಾಂತಿಯಿಂದ ಕಳಚಿಕೊಳ್ಳುವುದು ಯಾವಾಗ? (ತೆರೆದ ಕಿಟಕಿ)

ಅಹಿಂಸೆಯ ಪಠಣ ಮಾಡಿದ ಮಾತ್ರಕ್ಕೆ, ಅರ್ಜಿಗಳನ್ನು ಕೊಟ್ಟ ಮಾತ್ರಕ್ಕೆ ಬ್ರಿಟಿಷರು ಅದೊಂದು ದಿನ ಮನಕರಗಿ ಭಾರತ ಬಿಟ್ಟಿದ್ದಲ್ಲ. ವಸಾಹತು ಆಳ್ವಿಕೆಯ ಉದ್ದಕ್ಕೂ ಕ್ರಾಂತಿ, ಸಶಸ್ತ್ರ ಹೋರಾಟಗಳ ಒಂದು ಪರಂಪರೆ ತೀವ್ರವಾಗಿ ಮುಂದುವರಿದುಕೊಂಡುಬಂತು. ಅಲ್ಲಿನ ತ್ಯಾಗ ದೊಡ್ಡದು.
File pic
ಸಾಂಕೇತಿಕ ಚಿತ್ರonline desk
Updated on

1946ರ ಫೆಬ್ರವರಿ ತಿಂಗಳು. ಮುಂಬೈನಲ್ಲಿ ಬ್ರಿಟಿಷ್ ನೌಕೆಯಲ್ಲಿ ಸೇವಾ ನಿರತರಾಗಿದ್ದವರು ಒಂದು ಅನೂಹ್ಯ ಕಾರ್ಯವನ್ನೆಸಗಿದರು. ಅದೆಂದರೆ, ನೌಕೆಯಲ್ಲಿದ್ದ ಬ್ರಿಟಿಷರ ಯೂನಿಯನ್ ಜಾಕ್ ಧ್ವಜವನ್ನಿಳಿಸಿ ಆ ಜಾಗದಲ್ಲಿ ಭಾರತದ ಬೇರೆ ಬೇರೆ ಗುಂಪುಗಳ ಧ್ವಜವನ್ನು ಏರಿಸಿದರು. ಬ್ರಿಟಿಷ್ ಅಧಿಕಾರಿಗಳಿಂದ ಆದೇಶ ಸ್ವೀಕರಿಸುವುದಿಲ್ಲ ಎಂಬ ಸತ್ಯಾಗ್ರಹ ಆರಂಭಿಸಿದರು.

ನೋಡ ನೋಡುತ್ತಲೇ ಅದು ಭಾರತದ ಇತರೆಲ್ಲ ಪ್ರಾಂತ್ಯಗಳಿಗೆ, ಅಷ್ಟೇ ಏಕೆ, ಸಾಗರೋತ್ತರ ಬ್ರಿಟಿಷ್ ತೀರಗಳಲ್ಲಿ ಎಲ್ಲೆಲ್ಲ ಭಾರತೀಯ ನಾವಿಕರ ಪಡೆ ಇತ್ತೋ ಅಲ್ಲೆಲ್ಲ ಹಬ್ಬತೊಡಗಿತು. ಸುಮಾರು 21 ಕೇಂದ್ರಗಳ 78ಕ್ಕೂ ಹೆಚ್ಚು ನೌಕೆಗಳನ್ನು ಭಾರತೀಯ ನಾವಿಕರ ಪಡೆ ತನ್ನ ಹಿಡಿತಕ್ಕೆ ತೆಗೆದುಕೊಂಡಿತು. ನೌಕೆಯಲ್ಲಿ ಸೇವಾನಿರತ ಭಾರತೀಯರನ್ನು ತಾರತಮ್ಯ ಭಾವನೆಯಿಂದ ನೋಡಲಾಗುತ್ತಿದೆ ಎಂದು ಪ್ರಾರಂಭಿಕವಾಗಿ ಹೊತ್ತಿದ್ದ ಆ ಕಿಡಿ, ನಂತರದಲ್ಲಿ ನೇತಾಜಿ ಸುಭಾಷಚಂದ್ರ ಭೋಸರ ಆಜಾದ್ ಹಿಂದ್ ಪಡೆಯನ್ನು ಪ್ರೇರಕವಾಗಿ ತೆಗೆದುಕೊಂಡಿತು. ಇತ್ತ ಸಾರ್ವಜನಿಕರೂ ಮುಂಬೈನಂಥ ಶಹರಗಳಲ್ಲಿ ಬೀದಿಗೆ ಇಳಿದು ತಮ್ಮ ಬೆಂಬಲವನ್ನು ವ್ಯಕ್ತಪಡಿಸತೊಡಗಿದರು. ಬ್ರಿಟಿಷರು ಇದನ್ನು ಬಹಳ ಕ್ರೂರವಾಗಿಯೇ ಹತ್ತಿಕ್ಕಿದರು. ಬ್ರಿಟಿಷ್ ಕಾರ್ಯಾಚರಣೆಯಲ್ಲಿ ಸಾರ್ವಜನಿಕರು ಹಾಗೂ ಬಂಡಾಯನಿರತ ನಾವಿಕರು ಸೇರಿದಂತೆ ಒಟ್ಟೂ 400 ಮಂದಿ ಹತರಾದರೆ, ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡರು.

ಈ ನೌಕಾ ಬಂಡಾಯವನ್ನು ಹತ್ತಿಕ್ಕುವುದರಲ್ಲೇನೋ ಬ್ರಿಟಿಷರು ಯಶಸ್ವಿಯಾದರು. ಆದರೆ ಒಳಗೊಳಗೇ ಬ್ರಿಟಿಷ್ ವ್ಯವಸ್ಥೆ ಕಂಪಿಸಿಹೋಗಿತ್ತು. 1947ರಲ್ಲಿ ಸ್ವಾತಂತ್ರ್ಯ ಬಂದ ನಂತರ ನಮ್ಮ ಇತಿಹಾಸಕಾರರು ಸಹ ಅಹಿಂಸಾತ್ಮಕ ಹೋರಾಟ ಹಾಗೂ ಅರ್ಜಿಗಳಿಂದಲೇ ನಮಗೆ ಸ್ವಾತಂತ್ರ್ಯ ಬಂದಿತೆಂದು ರಸವತ್ತಾಗಿ ವಿವರಿಸಿಬಿಟ್ಟರು. ಆದರೆ ಅವತ್ತಿನ ಇಂಗ್ಲೆಂಡ್ ಪ್ರಧಾನಿ ಕ್ಲೆಮೆಂಟ್ ಅಟ್ಲಿ ನಂತರದ ದಿನಗಳಲ್ಲಿ ತಮ್ಮ ಮಾತುಕತೆಯೊಂದರಲ್ಲಿ ಬ್ರಿಟಿಷರು ಭಾರತ ತೊರೆಯುವುದಕ್ಕೆ ನೌಕಾ ಬಂಡಾಯವೂ ಪ್ರಮುಖ ಕಾರಣಗಳಲ್ಲೊಂದಾಗಿತ್ತೆಂಬುದನ್ನು ಹೇಳಿದ್ದರು.

ತಾರ್ಕಿಕವಾಗಿ ವಿಶ್ಲೇಷಿಸಿದಾಗಲೂ ನೌಕಾ ಬಂಡಾಯದ ಮಹತ್ತ್ವ ಅರ್ಥವಾಗುತ್ತದೆ. ಬ್ರಿಟಿಷರು ಭಾರತವನ್ನು ನಿಯಂತ್ರಿಸುತ್ತಿದ್ದದ್ದು ಇಲ್ಲಿನ ಪೊಲೀಸ್ ಪಡೆ ಹಾಗೂ ಭಾರತೀಯ ಯೋಧರ ಮೂಲಕವೇ. ಹೀಗಿರುವಾಗ ಸೇನೆಯಲ್ಲೇ ಬ್ರಿಟಿಷರ ವಿರುದ್ಧ ಭಾವನೆಗಳು ಪುಟಿದೆದ್ದರೆ ಅವರಿಗೆ ಉಳಿಗಾಲವಾದರೂ ಎಲ್ಲಿತ್ತು? ಅಲ್ಲದೇ, ಎರಡನೇ ವಿಶ್ವಯುದ್ಧದಲ್ಲಿ ಸಮರಾಂಗಣದಲ್ಲಿ ದೊಡ್ಡಮಟ್ಟದಲ್ಲಿ ಭಾಗಿಯಾಗಿ ಬಂದಿದ್ದ ಭಾರತೀಯ ಸೈನಿಕರಿಗೆ ಸಶಸ್ತ್ರ ಹೋರಾಟದ ಸಾಮರ್ಥ್ಯವೂ ವೃದ್ಧಿಸಿತ್ತು. ಕೇವಲ ಭಾರತದ ಬಂದರುಗಳಲ್ಲಿ ಮಾತ್ರವಲ್ಲದೇ ಬ್ರಿಟಿಷರು ಹಿಡಿತ ಹೊಂದಿದ್ದ ಬೇರೆಡೆಗಳ ಬಂದರುಗಳಲ್ಲೂ ಭಾರತೀಯರೇ ಸೇನಾ ನಿರತರಾಗಿದ್ದರು. ಅವರೆಲ್ಲ ತಮ್ಮ ಬ್ರಿಟಿಷ್ ಅಧಿಕಾರಿ ವಿರುದ್ಧ ತಿರುಗಿ ನಿಂತರೆ, ಕೆಲವೇ ಸಾವಿರಗಳ ಸಂಖ್ಯೆಯಲ್ಲಿದ್ದ ಬ್ರಿಟಿಷರು ಮರ್ಮಾಘಾತ ತಿನ್ನುವುದು ಎಷ್ಟರಮಟ್ಟಿಗಿನ ಮಾತು? ಈ ವಾಸ್ತವ ಎದುರಿಗಿದ್ದಿದ್ದರಿಂದಲೇ 1946ರ ಬಂಡಾಯವನ್ನು ಹತ್ತಿಕ್ಕುವಲ್ಲಿ ಸಫಲರಾದರೂ ಬ್ರಿಟಿಷರು ಒಂದೇ ವರ್ಷದಲ್ಲಿ ಭಾರತವನ್ನು ಬಿಡುವ ನಿರ್ಧಾರ ಕೈಗೊಂಡರು. ಇಲ್ಲಿನ ಕ್ಷಾತ್ರಭಾವ ಜಾಗೃತವಾದ ಮೇಲೆ ಉಳಿಗಾಲವಿಲ್ಲ ಎಂಬುದವರಿಗೆ ಖಾತ್ರಿಯಾಗಿತ್ತು. ನಾವು ಮಾತ್ರ 1942ರಲ್ಲಿ ನಡೆದ ಕ್ವಿಟ್ ಇಂಡಿಯಾ ಚಳವಳಿಯೇ ಐದು ವರ್ಷಗಳ ನಂತರ ಸ್ವಾತಂತ್ರ್ಯ ದೊರಕಿಸಿಕೊಳ್ಳುವುದಕ್ಕೆ ಸಂಪೂರ್ಣ ಕಾರಣ ಎಂದು ನಂಬಿದ್ದೇವೆ.

ಕ್ವೀನ್ ವಿಕ್ಟೋರಿಯಾಳ ವಜ್ರ ಮಹೋತ್ಸವ ಸಮಾರಂಭ ಮುಗಿಸಿಕೊಂಡು ಆ ಸಾರೋಟುಗಳು ಮರಳುತ್ತಿದ್ದಾಗ ಅದಾಗಲೇ ಸಂಜೆಯ ಕತ್ತಲು ಕವಿದಿತ್ತು. ಗಣೇಶಕಿಂಡ್ ರಸ್ತೆಯ ಬದಿಯಲ್ಲಿ ಅಡಗಿದ್ದ ಅವರಿಬ್ಬರೂ ರಸ್ತೆಯತ್ತ ನುಗ್ಗಿದರು. ಅವರಲ್ಲೊಬ್ಬ ಸಾರೋಟಿನ ಒಳಹೊಕ್ಕು ಗುಂಡು ಚಲಾಯಿಸಿದ. ಅದರ ಬೆನ್ನಲ್ಲೇ ಗೊತ್ತಾಗಿದ್ದು ಗುಂಡು ಬಿದ್ದದ್ದು ಇನ್ಯಾರಿಗೋ ಅಂತ. ಅದರ ಹಿಂದೆಯೇ ಬಂತು ಇನ್ನೊಂದು ಸಾರೋಟು. ಅದಕ್ಕೆ ಇನ್ನೊಬ್ಬ ನೆಗೆದು ಪಿಸ್ತೂಲು ಚಲಾಯಿಸಿ ಕೆಲಸ ಮುಗಿಸಿದರು. ಹಾಗವತ್ತು ಅಲ್ಲಿ ಸತ್ತಿದ್ದು ಬ್ರಿಟಿಷ್ ಅಧಿಕಾರಿ ವಾಲ್ಟರ್ ರಾಂಡ್ ಹಾಗೂ ಆತನ ಲೆಫ್ಟಿನೆಂಟ್ ಚಾರ್ಲ್ಸ್ ಅಯರೆಸ್ಟ್. ಇವರನ್ನು ಸಂಹರಿಸಿದವರು ಚಾಪೇಕರ್ ಸಹೋದರರು ಅಂತಲೇ ಕೊನೆಗೆ ಹೆಸರಾದ ದಾಮೋದರ ಹರಿ ಚಾಪೇಕರ್ ಹಾಗೂ ಬಾಲಕೃಷ್ಣ ಹರಿ ಚಾಪೇಕರ್. 1897ರ ಜೂನಿನಲ್ಲಿ ಆದ ಈ ಹತ್ಯೆ ಬ್ರಿಟಿಷ್ ಅಧಿಕಾರಿ ವರ್ಗವನ್ನು ರಾಷ್ಟ್ರಾದ್ಯಂತ ತತ್ತರಗೊಳಿಸಿಬಿಟ್ಟಿತು. ಈ ಹತ್ಯೆಗೆ ಕಾರಣೀಕರ್ತರ ಬಗ್ಗೆ ಮಾಹಿತಿ ಕೊಟ್ಟವರಿಗೆ ಆ ಕಾಲಕ್ಕೆ ದೊಡ್ಡ ಮೊತ್ತವಾದ 20,000 ರುಪಾಯಿಗಳನ್ನು ಘೋಷಿಸಿತ್ತು.

ಇಷ್ಟಕ್ಕೂ ಈ ಹತ್ಯೆ ಆಗಿದ್ದು ಏಕೆ? ಆ ವರ್ಷ ಪುಣೆಯನ್ನು ಪ್ಲೇಗ್ ಮಾರಿ ಕಾಡಿತ್ತು. ಆ ಸಂದರ್ಭದಲ್ಲಿ ಆಡಳಿತಕ್ಕೆ ತುರ್ತು ಅಧಿಕಾರಗಳನ್ನು ಕೊಡುವುದೇನೋ ಸರಿಯೇ. ಆದರೆ ಅದು ಸಾಂಕ್ರಾಮಿಕದ ಹತೋಟಿಗೆ ಹಾಗೂ ಜನರ ಆರೋಗ್ಯ ಸೇವೆಗೆ ಬಳಕೆಯಾಗಬೇಕಲ್ಲವೇ? ಆದರೆ ಇದರ ಉಸ್ತುವಾರಿ ವಹಿಸಿದ್ದ ವಾಲ್ಟರ್ ರಾಂಡ್ ಈ ಅಧಿಕಾರಗಳನ್ನು ತನ್ನ ವಿಕೃತಿಗೆ ಬಳಸಿಕೊಂಡ. ಆತನ ಯೋಧರು ಮನೆ ಮನೆಗಳಿಗೆ ನುಗ್ಗಿ ಇದೇ ಅವಕಾಶ ಬಳಸಿಕೊಂಡು ಹೆಂಗಸರ ಮೇಲೆ ಅನಾಚಾರಗಳನ್ನು ಮಾಡಿದರು. ಆಸ್ತಿಗಳನ್ನು ಸುಟ್ಟರು. ಪ್ರಾರ್ಥನಾ ಸ್ಥಳಗಳನ್ನು ಕೆಡಸಿದರು. ಪ್ಲೇಗ್ ಸಂತ್ರಸ್ತರನ್ನು ಮನೆಯಿಂದ ಹೊರದಬ್ಬಿ ಶಿಬಿರಗಳಲ್ಲಿರಿಸಿದರು. ಜನ ಅದನ್ನು ಸಹಿಸಿಕೊಳ್ಳುತ್ತಿದ್ದರೇನೋ. ಆದರೆ ಶಿಬಿರಗಳಲ್ಲಿ ಆಹಾರ-ವಸತಿ ಎಲ್ಲವೂ ಕೆಟ್ಟ ಸ್ಥಿತಿಯಲ್ಲಿದ್ದವು. ವಾಲ್ಟರ್ ರಾಂಡ್ ನೇತೃತ್ವದಲ್ಲಿನ ಈ ಅನಾಚಾರಗಳನ್ನು ಅತ್ಯುಗ್ರವಾಗಿ ಖಂಡಿಸಿದ ಲೇಖನಗಳನ್ನು ತಿಲಕರು ಕೇಸರಿ ಪತ್ರಿಕೆಯ ಮೂಲಕ ಪ್ರಚುರಗೊಳಿಸಿದರು. ಚಾಪೇಕರ್ ಸಹೋದರರು ಎದ್ದು ನಿಂತರು!

File pic
ಬದುಕು ಅರಳಿಸಿಕೊಳ್ಳುವ ಸಂಭ್ರಮಕ್ಕಿಂತ ಆತ್ಮಹತ್ಯೆಯೇ ಆಹ್ಲಾದವೆನಿಸುತ್ತಿರುವುದೇಕೆ? (ತೆರೆದ ಕಿಟಕಿ)

ಈ ಚಾಪೇಕರ್ ಸಹೋದರರ ಬಗ್ಗೆ ಸುಳಿವು ಕೊಟ್ಟು ಅವರ ಬಂಧನಕ್ಕೆ ನಂತರದಲ್ಲಿ ನೇಣಿಗೆ ಕಾರಣರಾದವರು ಇವರಿಗೆ ಪರಿಚಿತರೇ ಆಗಿದ್ದ ದ್ರಾವಿಡ್ ಸಹೋದರರು. ಆದರೆ ಇವರನ್ನು ಸಹ ಚಾಪೇಕರರ ಇನ್ನೊಬ್ಬ ಸಹೋದರ ವಾಸುದೇವ ಚಾಪೇಕರ್ ಹುಡುಕಿ ಕೊಲ್ಲುತ್ತಾರೆ. ಬ್ರಿಟಿಷರು ವಾಸುದೇವರನ್ನು ಸಹ ಹುಡುಕಿ ಗಲ್ಲಿಗೆ ಹಾಕಿದರು. ಹಿಂಸೆಗೆ ಪ್ರಚೋದಿಸಿದ್ದಾರೆಂಬ ಆರೋಪದ ಮೇಲೆ ತಿಲಕರಿಗೂ ಸೆರೆವಾಸವಾಯಿತು.

1857ರ ಪ್ರಥಮ ಸ್ವಾತಂತ್ರ್ಯಸಂಗ್ರಾಮ ಕ್ರಾಂತಿಯ ಕಿಡಿ ಹಚ್ಚಿತ್ತಾದರೂ ಅದನ್ನು ಹತ್ತಿಕ್ಕುವುದರಲ್ಲಿ ಬ್ರಿಟಿಷರು ಒಡೆದಾಳುವ ನೀತಿ ಉಪಯೋಗಿಸಿ ಯಶಸ್ವಿಯಾದರು. ನಂತರದಲ್ಲಿ ಮತ್ತ ಸಶಸ್ತ್ರ ಪ್ರತಿರೋಧದ ಕಿಡಿ ಹೊತ್ತಿಕೊಂಡಿದ್ದರ ಪ್ರಾರಂಭ ಭಾಗವಾಗಿ ಇತಿಹಾಸಕಾರರು ಈ ಘಟನೆಯನ್ನು ಗುರುತಿಸುತ್ತಾರೆ.

ಅಹಿಂಸೆಯ ಪಠಣ ಮಾಡಿದ ಮಾತ್ರಕ್ಕೆ, ಅರ್ಜಿಗಳನ್ನು ಕೊಟ್ಟ ಮಾತ್ರಕ್ಕೆ ಬ್ರಿಟಿಷರು ಅದೊಂದು ದಿನ ಮನಕರಗಿ ಭಾರತ ಬಿಟ್ಟಿದ್ದಲ್ಲ. ವಸಾಹತು ಆಳ್ವಿಕೆಯ ಉದ್ದಕ್ಕೂ ಕ್ರಾಂತಿ, ಸಶಸ್ತ್ರ ಹೋರಾಟಗಳ ಒಂದು ಪರಂಪರೆ ತೀವ್ರವಾಗಿ ಮುಂದುವರಿದುಕೊಂಡುಬಂತು. ಅಲ್ಲಿನ ತ್ಯಾಗ ದೊಡ್ಡದು. ಅದು ಬ್ರಿಟಿಷರಿಗೆ ಹುಟ್ಟಿಸಿದ್ದ ಹೆದರಿಕೆಯೂ ದೊಡ್ಡದು ಎಂಬುದಕ್ಕೆ ಅವರು ಕ್ರಾಂತಿಕಾರಿಗಳನ್ನು ಹೇಗೆ ನಡೆಸಿಕೊಂಡು ಬಂದರೆಂಬುದರ ವಿವರಗಳೇ ಸಾಕ್ಷಿ. ಮಾಮೀಲಿ ಕಾಂಗ್ರೆಸ್ಸಿಗರನ್ನು ಬ್ರಿಟಿಷ್ ಆಡಳಿತವು ಗೃಹಬಂಧನದಲ್ಲಿ, ಅರಮನೆಗಳಲ್ಲಿ ಇರಿಸಿದ ವಿವರಗಳೇ ದಟ್ಟವಾಗಿವೆ. ಅದೇ ಕ್ರಾಂತಿಕಾರಿ ಎನಿಸಿಕೊಂಡವರಿಗೆಲ್ಲ ಅಂಡಮಾನ್ ನಿಕೋಬಾರ್ ಗಳಲ್ಲಿ ಕಾಲಾಪಾನಿ ಶಿಕ್ಷೆ. ಅಲ್ಲಿನ ಶಿಕ್ಷೆಗಳಾದರೂ ಹೇಗೆ? ಉಪ್ಪಿಲ್ಲದ-ಖಾರವಿಲ್ಲದ, ಕ್ರಿಮಿಕೀಟಗಳನ್ನು ಹೊಂದಿರುವ ಆಹಾರ; ದಿನಕ್ಕೆ ಇಂತಿಷ್ಟೇ ಎಂಬ ಲೆಕ್ಕದಲ್ಲಿ ಹೊಸೆಯಬೇಕಾದ ಸೆಣಬಿನ ಹಗ್ಗ, ಗಾಣದಡಿ ಎತ್ತಿನ ಜಾಗದಲ್ಲಿ ತಾವು ನಿಂತು ಎಣ್ಣೆ ತೆಗೆಯಬೇಕಾದ ಕ್ರೌರ್ಯ, ಒಬ್ಬರ ಮುಖ ನೋಡಲಾಗದ ರೀತಿಯಲ್ಲಿ ಪ್ರತ್ಯೇಕ ಕೊಠಡಿಗಳಲ್ಲಿ ಬಂಧನ, ಅಲ್ಲೂ ನಿದ್ರೆ-ಶೌಚಗಳಿಗಿರದ ಸೌಕರ್ಯಗಳು, ಅಲ್ಲಿ ದಾಖಲಾಗುತ್ತಿದ್ದ ಅರ್ಧದಷ್ಟು ಕ್ರಾಂತಿಕಾರಿಗಳು ಅಲ್ಲಿನ ವಾತಾವರಣ ಹಾಗೂ ಮಾನಸಿಕ ಹಿಂಸೆ ಸಹಿಸಲಾಗದೇ ಸತ್ತಿರುವ -ಆತ್ಮಹತ್ಯೆ ಮಾಡಿಕೊಂಡಿರುವ ಸನ್ನಿವೇಶ ಹೀಗೆಲ್ಲ ಸ್ವಾತಂತ್ರ್ಯ ಹೋರಾಟಕ್ಕೆ ರಕ್ತತರ್ಪಣಗಳು ಹಲವು ವಿಧಗಳಲ್ಲಿವೆ. ಚಿತ್ತಗಾಂವಿನಲ್ಲಿ ಬ್ರಿಟಿಷರ ನಿದ್ದೆ ಕೆಡಿಸಿದ್ದ ಸುರಿಯ ಸೇನ್ ಮತ್ತವರ ಸಹವರ್ತಿಗಳು, ಇನ್ನೇನು ಸೆರೆಯಾಗುತ್ತೇನೆ ಎಂದಾದಾಗ ಸಯನೇಡ್ ಕಚ್ಚಿ ಪ್ರಾಣಾರ್ಪಣೆ ಮಾಡಿದ ಪ್ರೀತಿಲತಾ ವಡ್ಡೆದಾರ್… ಕತೆಗಳು ಬೆಳೆಯುತ್ತಲೇ ಹೋಗುತ್ತವೆ.

ಸರ್ಕಾರಿ ಕಚೇರಿಗಳು, ಮ್ಯಾಜಿಸ್ಟ್ರೇಟ್ ವಿರುದ್ಧ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಸೆರೆಯಾಗಿ ನ್ಯಾಯಾಲಯಕ್ಕೆ ಬಂದ ಖುದಿರಾಮ್ ಬೋಸ್ ಗೆ ಮರಣದಂಡನೆ ವಿಧಿಸಿದ ಬಳಿಕ ನ್ಯಾಯಾಧೀಶರು ಕೇಳುತ್ತಾರೆ, “ಮರಣದಂಡನೆ ಅಂದರೇನು ಅಂತ ಗೊತ್ತಿದೆಯಾ ನಿನಗೆ? ಏನಾದರೂ ಹೇಳುವುದಕ್ಕಿದೆಯಾ?” ಮುಗುಳ್ನಗುತ್ತಲೇ ಖುದಿರಾಮ್ ಹೇಳಿದ್ದು- “ಸಮಯ ಕೊಟ್ಟರೆ ಬಾಂಬ್ ತಯಾರಿಸುವುದು ಹೇಗೆ ಎಂದು ಹೇಳಿಕೊಡುತ್ತೇನೆ!”

ಈ ವರ್ಷದ ಸ್ವಾತಂತ್ರ್ಯ ದಿನ ಎದುರಿನಲ್ಲಿದೆ. “ಒಂದು ಹನಿ ರಕ್ತ ಚೆಲ್ಲದೇ ನಾವು ಸ್ವಾತಂತ್ರ್ಯ ಗಳಿಸಿಕೊಂಡುಬಿಟ್ಟೆವು” ಎನ್ನುವುದರ ಮೂಲಕ ನಮ್ಮ ನಿಜ ಸ್ವಾತಂತ್ರ್ಯವೀರರನ್ನು ಅವಮಾನಿಸುವ ಕೆಲಸ ಮಾಡುವುದು ಬೇಡ!

- ಚೈತನ್ಯ ಹೆಗಡೆ

cchegde@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com