ಬದುಕು ಅರಳಿಸಿಕೊಳ್ಳುವ ಸಂಭ್ರಮಕ್ಕಿಂತ ಆತ್ಮಹತ್ಯೆಯೇ ಆಹ್ಲಾದವೆನಿಸುತ್ತಿರುವುದೇಕೆ? (ತೆರೆದ ಕಿಟಕಿ)

ವಿಶ್ವ ಆರೋಗ್ಯ ಸಂಸ್ಥೆಯ 2021ರ ಅಂಕಿ-ಅಂಶವೊಂದು ಹೇಳಿರುವುದೇನೆಂದರೆ, ಆತ್ಮಹತ್ಯೆ ಎಂಬುದು 15-29ರ ವಯೋಮಾನದವರ ಪೈಕಿ ಜಗತ್ತಿನ ಸಾವುಗಳಲ್ಲಿ ಮೂರನೇ ಪ್ರಮುಖ ಕಾರಣವಾಗಿದೆ ಎನ್ನುವುದು.
file pic
ಸಾಂಕೇತಿಕ ಚಿತ್ರonline desk
Updated on

ನಮ್ಮೆಲ್ಲ ಟಿವಿ-ಸಿನಿಮಾ ಮತ್ತು ಬೇರೆ ಬಗೆಯ ಕಥಾನಕಗಳ ಚಿತ್ರಕಥೆಯನ್ನು ಇದೊಂದು ವಿಷಯದಲ್ಲಿ ತ್ವರಿತವಾಗಿ ಬದಲಾಯಿಸಿಕೊಳ್ಳಬೇಕಿದೆ. ಬದಲಾವಣೆಗೂ ಮುನ್ನ, ಸದ್ಯಕ್ಕೆ ನಮ್ಮ ಮನಸಿನಲ್ಲಿ ಪಡಿಮೂಡಿರುವ ಕೆಲವು ಚಿತ್ರಣಗಳನ್ನು ಒಮ್ಮೆ ಮುನ್ನೆಲೆಗೆ ತಂದುಕೊಳ್ಳೋಣ.

ಅವನೊಬ್ಬ ರೈತ. ಮೇಲಿಂದ ಮೇಲೆ ಬೆಳೆ ಕೈಕೊಡುತ್ತಿದೆ. ಬರ-ನೆರೆ ಇವೆಲ್ಲ ಒಂದಾದ ಮೇಲೊಂದರಂತೆ ಬಂದು ಬದುಕನ್ನು ಹಿಂಡಿವೆ. ಅದೊಂದು ದಿನ ಆತ ಸಂಸಾರಕ್ಕೂ ವಿಷ ಉಣಿಸಿ, ತಾನೂ ಆತ್ಮಹತ್ಯೆಗೆ ಒಡ್ಡಿಕೊಳ್ಳುತ್ತಾನೆ.

ಇನ್ನೊಬ್ಬ ವ್ಯಾಪಾರಿ. ಹಲವು ಅನಿರೀಕ್ಷಿತ ನಷ್ಟಗಳು ನಿಂತ ನೆಲೆಯನ್ನೇ ಅಲ್ಲಾಡಿಸಿವೆ. ಸಾಲ ಕೊಟ್ಟವರು ಕತ್ತು ಹಿಸುಕಿದಂತೆ ಭಾಸವಾಗುತ್ತಿದೆ. ಹಣ ಹುಟ್ಟಬಹುದಾದ ಎಲ್ಲ ದಾರಿಗಳೂ ಬಂದ್ ಆಗಿವೆ ಎಂದು ಆತನಿಗೆ ಅನಿಸಿದೆ. ಈ ಹಂತದಲ್ಲಿ ಆತ ಕೊರಳನ್ನು ನೇಣಿಗೆ ಕೊಟ್ಟ.

ಮತ್ತೊಬ್ಬಾಕೆಗೆ ಹಂತ ಹಂತದಲ್ಲಿ ಲೈಂಗಿಕ ಶೋಷಣೆ. ಮನಸ್ಸು-ದೇಹಗಳ ಮೇಲಾಗುತ್ತಿರುವ ಸತತ ಆಘಾತಗಳಿಂದ ಆಕೆಗೆ ಚೇತರಿಸಿಕೊಳ್ಳುವ ಹಾದಿಯೇ ಕಾಣುತ್ತಿಲ್ಲ. ಅವಮಾನ ಕೊನೆಗೊಳಿಸುವುದಕ್ಕೆ ಆಕೆ ಆತ್ಮಹತ್ಯೆಗೆ ಶರಣಾಗುತ್ತಾಳೆ. ಹೀಗೆ ಮೇಲೆ ವಿವರಿಸಿದ ಎಲ್ಲವೂ ನಮಗೆ ಕತೆಗಳ ಮೂಲಕವೋ, ಸುದ್ದಿಗಳ ಮೂಲಕವೋ, ಸಿನಿಮಾಗಳ ಮೂಲಕವೋ ಮನಸ್ಸಲ್ಲಿ ಮುದ್ರೆಯೊತ್ತಿವೆ. ಮನಮಿಡಿಯುವಂತೆಯೂ ಮಾಡಿವೆ. ಇವೆಲ್ಲದರ ಸಾರಾಂಶ ಏನೆಂದರೆ - ಜೀವನದ ಹೊಡೆತ-ಕಷ್ಟಗಳನ್ನು ಸಹಿಸಲಾಗದ ಸ್ಥಿತಿ ವ್ಯಕ್ತಿಗಳಿಗೆ ಎದುರಾದಾಗ ಅವರು ಆತ್ಮಹತ್ಯೆಗೆ ಇಳಿಯುತ್ತಾರೆ ಅನ್ನೋದು.

ಇಲ್ಲಿಯೇ ಈಗ ಕಥಾನಕವು ಬದಲಾಗುತ್ತಿದೆ ನೋಡಿ…

ಅಂಥ ದುಃಖ ಭಾರವೇನೂ ಗೋಚರಿಸಿದೇ ಇರುವ ನಡಿಗೆ ಆ ಶಾಲಾ ಹುಡುಗಿಯದ್ದು. ಬಿರುಸು-ಲವಲವಿಕೆಯಿಂದಲೇ ಕೂಡಿರುವ ಹೆಜ್ಜೆಗಳು ಸಿಸಿಟಿವಿಯಲ್ಲಿ ಸ್ಪಷ್ಟವಾಗಿವೆ. ಆದರೆ, ಹಾಗೆ ಶಾಲಾ ಮಹಡಿಯ ಕಾರಿಡಾರಿನಲ್ಲಿ ಸಾಗುತ್ತಿದ್ದವಳು ಇದ್ದಕ್ಕಿದ್ದಂತೆ ಅದರ ಪಕ್ಕದ ಅಡ್ಡಪಟ್ಟಿಗಳನ್ನು ಹತ್ತಿ ಕೆಳಗೆ ಧುಮುಕಿ ಪ್ರಾಣ ತೆರುತ್ತಾಳೆ! ಮೇಲ್ಮಧ್ಯಮ ವರ್ಗದ್ದೇ ಕುಟುಂಬಕ್ಕೆ ಸೇರಿರುವ ಹದಿನಾಲ್ಕರ ಹುಡುಗನಿಗೆ ಅದಾಗಲೇ ಬದುಕು ಸಾಕೆನಿಸಿ ನೀಟಾಗಿ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ನಿಜ, ಇಂಥ ಎಲ್ಲ ಪ್ರಕರಣಗಳಲ್ಲೂ ಸಾರ್ವತ್ರಿಕವಾಗಿ ಅನ್ವಯಿಸಲಾಗದ, ನಿರ್ದಿಷ್ಟವಾದ ಕಾರಣಗಳಿದ್ದಿರಬಹುದು. ಅವೇನೇ ಇದ್ದರೂ ಆರ್ಥಿಕ ಬಡತನ, ಬದುಕಿನ ವಿಪರೀತ ಸಂಘರ್ಷ ಮತ್ತು ಕಷ್ಟಕಾರ್ಪಣ್ಯಗಳಷ್ಟೇ ಆತ್ಮಹತ್ಯೆಗೆ ಕಾರಣವಾಗುತ್ತವೆ ಎಂಬ ಗ್ರಹಿಕೆಯನ್ನಂತೂ ಬದಲಿಸಿಕೊಳ್ಳಲೇಬೇಕಿದೆ.

ವಿಶ್ವ ಆರೋಗ್ಯ ಸಂಸ್ಥೆಯ 2021ರ ಅಂಕಿಅಂಶವೊಂದು ಹೇಳಿರುವುದೇನೆಂದರೆ, ಆತ್ಮಹತ್ಯೆ ಎಂಬುದು 15-29ರ ವಯೋಮಾನದವರ ಪೈಕಿ ಜಗತ್ತಿನ ಸಾವುಗಳಲ್ಲಿ ಮೂರನೇ ಪ್ರಮುಖ ಕಾರಣವಾಗಿದೆ ಎನ್ನುವುದು. ಅವರ ಪ್ರಕಾರ ವಾರ್ಷಿಕವಾಗಿ 7,20,000 ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದೇ ವಯೋಮಾನದವರು ಸಾವು ಕಾಣುವುದಕ್ಕೆ ಕ್ಷಯ ರೋಗ ಮೊದಲ ಕಾರಣವಾಗಿದ್ದರೆ, ರಸ್ತೆ ಅಪಘಾತಗಳು ಎರಡನೇ ಸ್ಥಾನದಲ್ಲಿವೆ. ಭಾರತದ ನ್ಯಾಷನಲ್ ಕ್ರೈಂ ರಿಕಾರ್ಡ್ ಬ್ಯೂರೊದ 2022ರ ವರದಿ ಪ್ರಕಾರ ಭಾರತದಲ್ಲಿ ವಾರ್ಷಿಕ 1.71 ಲಕ್ಷ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಲ್ಲಿ ಶೇಕಡ 40ರಷ್ಟು ಪ್ರಕರಣಗಳು 30ರ ವಯೋಮಾನದ ಒಳಗಿನವು.

ಹಾಗಾದರೆ, ಇನ್ನೂ ಬದುಕಿನ ಅಸಂಖ್ಯ ತಿರುವುಗಳನ್ನು ಪರೀಕ್ಷಿಸುವುದು ಬಾಕಿ ಇರುವ ಹಂತದಲ್ಲೇ ಬದುಕು ಸಾಕೇ ಸಾಕೆನಿಸುತ್ತಿರುವ ಆಧುನಿಕ ಕಾಲಘಟ್ಟದ ಈ ಬಿಕ್ಕಟ್ಟಿಗೇನರ್ಥ? ನಾಲ್ಕೈದು ದಶಕಗಳ ಹಿಂದಿನ ಆಹಾರ ತತ್ತ್ವಾರದ ಸನ್ನಿವೇಶವಂತೂ ಈಗಿಲ್ಲ. ಸಂವಹನ, ಅವಕಾಶಗಳು, ಹಣದ ಹರಿವು ಎಲ್ಲವು ಅವತ್ತಿಗೆ ಹೋಲಿಸಿದರೆ ಹೆಚ್ಚೇ ಆಗಿವೆ ಹೊರತು ಕಡಿಮೆಯಿಲ್ಲ. ಅಂದಮೇಲೆ ಬದುಕಲ್ಲಿ ಅಷ್ಟರಮಟ್ಟಿಗೆ ಹತಾಶೆ, ದುಃಖಗಳೆಲ್ಲ ಕಡಿಮೆಯಾಗಬೇಕಿತ್ತಲ್ಲವೇ?

file pic
ಭಾರತದಾಚೆಗಿನ ಈ ದೇಶಗಳೇಕೆ ದೇವಾಲಯಕ್ಕಾಗಿ ಸಂಘರ್ಷ ನಡೆಸುತ್ತಿವೆ? (ತೆರೆದ ಕಿಟಕಿ)

ಅಲ್ಲಿಗೆ, ಬದುಕಿನ ಸಂತೋಷವು ವಸ್ತುಗಳಲ್ಲಿಲ್ಲ ಎಂದಾಯಿತು. ಇದರರ್ಥ ಹಣವನ್ನು ದ್ವೇಷಿಸಬೇಕು ಎಂದೋ, ಸೀಮೆಎಣ್ಣೆ ಬೆಳಕಲ್ಲಿ ಓದುತ್ತಿದ್ದ ದಿನಗಳೇ ಚೆನ್ನಾಗಿದ್ದವು ಎಂದು ವಾದಿಸುವುದೋ, ಇಂಟರ್ನೆಟ್ಟಿಗಿಂತ ಅಂತರ್ದೇಶಿ ಪತ್ರದ ಕಾಲವೇ ಅಮೋಘವಾಗಿತ್ತು ಎಂಬ ರಮ್ಯನೆನಪುಗಳಿಗೆ ಜಾರಬೇಕೆಂದೋ ಅಲ್ಲ. ಬದಲಿಗೆ, ಈಗಿನ ಕಾಲದ ಸೌಕರ್ಯಗಳನ್ನು ಸವಿಯುತ್ತಲೇ ಬದುಕಿಗೆ ಬೇಕಿರುವುದು ಈ ಭೌತವಸ್ತುಗಳಿಗಿಂತಲೂ ಹೆಚ್ಚಿನದೊಂದು ಭಾವ ಎನ್ನುವುದರ ಮನಗಾಣುವಿಕೆ. ಹೀಗೆ ಮನಗಂಡಾಕ್ಷಣ ಏನೋ ಸಾಧಿಸಿಬಿಡುತ್ತೇವೆ ಎಂದೇನಲ್ಲ. ಈ ಮನೆ, ಈ ಕಾರು, ಈ ವಿಮಾನಯಾನ, ಈ ಸಂಪರ್ಕ ಸಾಧನ ಇವೆಲ್ಲವೂ ಬದುಕಿಗೆ ಇರುವ ಉನ್ನತ ಗುರಿ ಯಾವುದದು ಎಂದು ಯೋಚನೆಗೆ ತೊಡಗುವುದಕ್ಕೆ ಕಾರಣವಾಗಬೇಕೇ ಹೊರತು, ಈ ಸಾಧನಗಳ ಪ್ರಾಪ್ತಿಯೇ ಅಂತಿಮ ಸಾಧನೆ ಎಂದುಕೊಳ್ಳಬಾರದು. ಈ ಉನ್ನತ ಗುರಿ ಎನ್ನುವುದು ತೀರ ವೈಯಕ್ತಿಕ ಮಟ್ಟದ್ದಾಗಿದ್ದರೆ ಉನ್ನತವಾಗಿರುವುದಕ್ಕೆ ಸಾಧ್ಯವಿಲ್ಲ. ಊರಿಗೊಂದು ಕೆರೆ ಕಟ್ಟಿಸುವುದರಿಂದ ಹಿಡಿದು, ಭಾರತದ ಇಂಧನ ಸಮೀಕರಣವನ್ನೇ ಬದಲಿಸಬಲ್ಲ ನವೋದ್ದಿಮೆ ಕಟ್ಟುತ್ತೇನೆ ಎನ್ನುವವರೆಗೆ ಆ ಉನ್ನತ ಗುರಿ ಹೇಗೂ ಇದ್ದಿರಬಹುದು. ಅಲ್ಲೂ ಇರುವುದು ಭೌತಿಕ ಯಶಸ್ಸೇ. ಆದರೆ ಅಲ್ಲೊಂದು ಸಮಷ್ಟಿ ಪ್ರಜ್ಞೆ ಇರುವುದರಿಂದ ನಮ್ಮ ಮನದಂಗಳ ವಿಶಾಲವಾಗುತ್ತದೆ.

ಹಾಗೆ ನೋಡಿದರೆ ಇಂದಿನ ಯೂಟ್ಯೂಬ್ ಯುಗದಲ್ಲಿ ಉನ್ನತ ಗುರಿಗಳ ಕುರಿತಾದ ಮಾತುಗಳಿಗೇನೂ ಬರವಿಲ್ಲ. ಉದ್ಯಮ ಕಟ್ಟಿ ಬಿಲಿಯನೇರ್ ಆಗುವುದು ಹೇಗೆ?, ಅಣಬೆ ಬೆಳೆದು ಕೋಟ್ಯಧೀಶನಾಗುವುದು ಹೇಗೆ?, ಷೇರು ಮಾರುಕಟ್ಟೆಗಿಳಿದು ಶ್ರೀಮಂತನಾಗುವುದು ಹೇಗೆ?, ನಂಬರ್ ಒನ್ ಗಾಯಕನಾಗುವುದು ಹೇಗೆ?, ಅತಿದೊಡ್ಡ ಸಂಬಳದ ಪ್ಯಾಕೇಜಿನ ಸಿಇಒ ಆಗುವುದು ಹೇಗೆ?... ಹೀಗೆಲ್ಲ ದಂಡಿಯಾಗಿ ತರಬೇತುದಾರರು ಮಾರುಕಟ್ಟೆಯಲ್ಲಿದ್ದಾರೆ. ಅವರನ್ನು ಅನುಸರಿಸಿದರೆ ಯಶಸ್ಸು ಸಿಗಲಾರದು ಎಂದೇನೂ ಅಲ್ಲ. ಆದರೆ ಇವೆಲ್ಲವೂ ವೈಯಕ್ತಿಕ ಯಶಸ್ಸುಗಳು. ಅದು ಕನಿಷ್ಟ ಎಂದೇನಲ್ಲ, ಆದರೆ ನಿಮ್ಮ ಖಾಲಿತನವನ್ನು ತುಂಬುವ ಶಕ್ತಿ ಇವ್ಯಾವ ಮಾದರಿಗಳಿಗೂ ಇಲ್ಲ.

ಊರಿನ ಗಟಾರಗಳನ್ನು ತುಂಬಿಕೊಳ್ಳುತ್ತಿರುವ ಹೆಂಡದ ಬಾಟಲಿಗಳಿಂದ ಮುಕ್ತವಾಗುವುದು ಹೇಗೆ? ದೇವಾಲಯಗಳ ಪ್ರಾಂಗಣಕ್ಕೆ ಸಾಂಸ್ಕೃತಿಕ ಮೆರಗು ತುಂಬುವುದಕ್ಕೆ ಹೇಗೆ ಜನರನ್ನು ಒಗ್ಗೂಡಿಸಬಹುದು? ಭಾರತದ ಥೋರಿಯಂ ನಿಕ್ಷೇಪಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಲ್ಲ ಅನ್ವೇಷಣೆಗಳು ಸಾಧ್ಯವೇ? ಭಾರತದ ಜ್ಞಾನ ಪರಂಪರೆಗೆ ಸಂಬಂಧಿಸಿದ ಗ್ರಂಥಾಧ್ಯಯನಕ್ಕೆ ದಿನದ ಒಂದು ತಾಸು ಹೊಂದಿಸಿಕೊಳ್ಳಬಹುದೇ….? ಬದುಕಿಗೆ ಒಂದು ಉದ್ದೇಶವನ್ನೂ, ಅರ್ಥವನ್ನೂ ತುಂಬಬಲ್ಲವು ಇಂಥ ಸಂಗತಿಗಳೇ ಹೊರತು ಹೊಸ ಅವತರಣಿಕೆಯ ಕಾರು, ಮೊಬೈಲ್ ಫೋನುಗಳಲ್ಲ. ಅವುಗಳ ಬಗ್ಗೆ ತಿರಸ್ಕಾರವಿರಬೇಕು ಎಂದಲ್ಲ, ಅವೇ ಬದುಕನ್ನು ಶ್ರೀಮಂತಗೊಳಿಸುತ್ತವೆ ಎಂದುಕೊಳ್ಳಬಾರದಷ್ಟೆ.

ಮೊನ್ನೆ ಸಾಮಾಜಿಕ ಮಾಧ್ಯಮದಲ್ಲಿ ಯಾವುದು ಮಿಲಿಯನ್ಗಟ್ಟಲೇ ಶೇರ್ ಆಗಿ ಟ್ರೆಂಡ್ ಆಗಿತ್ತು ಎಂಬ ಸಂಗತಿ ಇವತ್ತಿಗೆ ಅದಾಗಲೇ ಮರೆತುಹೋಗಿದೆ. ಗಮನಿಸಿ ನೋಡಿದರೆ, ಈಗ ನಾಲ್ಕು ವರ್ಷಗಳ ಹಿಂದೆ ಯಾವ ಯೂಟ್ಯೂಬ್ ವ್ಯಕ್ತಿಯನ್ನು ನಾವು ನೋಡುಗರಾಗಿ ಹೊತ್ತು ಮೆರೆಸಿದ್ದೆವೋ ಇವತ್ತಿಗೆ ನಮಗೆ ಆ ಚಾನೆಲ್ ಹೆಸರೇ ನೆನಪಿಗೆ ಬರುತ್ತಿಲ್ಲ. ಬದುಕಿನ ಸಕ್ಸಸ್ಸಿಗೆ ಮಾನದಂಡ ಎಂಬಂತೆ ಕೊಂಡಿದ್ದ ದುಬಾರಿ ಕಾರು ಮೂರು ತಿಂಗಳಾಗುತ್ತಲೇ ಸಾಮಾನ್ಯ ಎನಿಸತೊಡಗಿದೆ.

ತೊಂಬತ್ತೈದು -ತೊಂಬತ್ತೊಂಬತ್ತರ ನಡುವೆಯೇ ಇಡೀ ಕ್ಲಾಸಿಗೆ ಅಂಕ ಬರುತ್ತದೆ. “ನಾವು ಪಟ್ಟ ಯಾವ ಶ್ರಮವನ್ನೂ ನಮ್ಮ ಏಕಮೇವ ಸಂತಾನ ಪಡಬಾರದು” ಎಂದು ಆದಷ್ಟೂ ಸೌಕರ್ಯಗಳ ನಡುವೆಯೇ ಮಕ್ಕಳನ್ನು ಬೆಳೆಸುವ ಪಾಲಕರು. ನಾಲ್ಕು ತಿಂಗಳು ಸ್ಪರ್ಧೆಗೆ ಬಿದ್ದವರಂತೆ ಎಲ್ಲರೂ ಸಂಗೀತದ ಕ್ಲಾಸಿಗೆ ಸೇರಿಕೊಂಡಿದ್ದಾಯ್ತು. ಯಾವುದೋ ತತ್ ಕ್ಷಣದ ಟ್ರೆಂಡ್ ಬೆನ್ನೇರಿ ಎಲ್ಲರೂ ಸಾಲಿನಲ್ಲಿ ನಿಂತು ಮ್ಯಾಂಡರಿನ್ನೋ, ಫ್ರೆಂಚೋ ಕಲಿಯುವುದಕ್ಕೆ ಪ್ರಯತ್ನಿಸಿದ್ದಾಯ್ತು. ಮಗುವಿನಲ್ಲಿರುವ ಆಸಕ್ತಿ-ಸಾಮರ್ಥ್ಯಗಳ ಆಧಾರದಲ್ಲಿ ಯಾವುದು ಬೇಕು ಇನ್ಯಾವುದು ಬೇಡ ಎಂಬ ತರ್ಕಕ್ಕೆಲ್ಲ ಸಮಯವಿಲ್ಲ. ಒಟ್ಟಿನಲ್ಲಿ “ಯಾವುದರಲ್ಲೂ ಹಿಂದೆ ಬೀಳಬಾರದು ನೋಡಿ… ಈ ಜಗತ್ತು ಎಷ್ಟು ಫಾಸ್ಟ್ ಗೊತ್ತೇನ್ರೀ? ಓಡದಿದ್ದರೆ ಕಾಲಡಿಗೆ ಸಿಕ್ಕು ಸತ್ಹೋಗ್ತೀರಾ…..”

ಹೀಗೊಂದು ಅಶಾಂತ ಓಟದಲ್ಲಿ ಬದುಕು ಏಕತಾನತೆಯದ್ದು, ಒತ್ತಡದ್ದು ಅನಿಸಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಈ ಲೇಖನ ಓದುತ್ತಿರುವವರು 35-40ರ ವಯೋಮಾನದವರಾಗಿದ್ದರೆ, ಅವರ ಬದುಕಿನಲ್ಲಿ ಬಹುಶಃ 20ರ ವಯಸ್ಸು ದಾಟುವವರೆಗೆ “ಅಯ್ಯೋ….ಬೋರಾಗುತ್ತಿದೆ” ಎಂಬ ಮಾತು ಬಂದಿರಲಿಕ್ಕಿಲ್ಲ. ಅದರರ್ಥ ಎಲ್ಲವೂ ಸೂಪರ್ ಆಗಿತ್ತು ಎಂದಲ್ಲ. ಅಲ್ಲಿ ಆತಂಕಗಳಿದ್ದವು, ಹೆದರಿಕೆಗಳಿದ್ದವು, ದಿಕ್ಕು ತೋಚದ ಸ್ಥಿತಿಗಳೂ ಬಂದಿದ್ದವು, ಅವಮಾನಗಳಾಗಿದ್ದವು, ಖುಷಿ -ದುಃಖ ಎಲ್ಲ ಭಾವಗಳೂ ತಾಗಿದ್ದವು. ಈ ಎಲ್ಲ ಭಾವನೆಗಳ ಏರಿಳಿತಗಳಲ್ಲಿ ಬದುಕು ಹೊಯ್ದಾಡಿಕೊಂಡಿದ್ದಾಗ ಸುಮ್ಮನೇ ನಿಂತುಕೊಂಡು ಬೋರ್ ಆಗುತ್ತಿದೆ, ಖಾಲಿತನ ಕಾಡುತ್ತಿದೆ ಎಂದೆಲ್ಲ ಅಂದುಕೊಳ್ಳುವಷ್ಟರಮಟ್ಟಿಗಿನ ಪುರಸೊತ್ತು ಹಾಗೂ ಸನ್ನಿವೇಶಗಳೆಡಕ್ಕೂ ಅವಕಾಶ ಕಡಿಮೆ ಇತ್ತು. ಇವತ್ತಿಗೆ ಐದಾರು ವರ್ಷ ಪ್ರಾಯದ ಮಗು ಹತ್ತೆಂಟು ಆಟಿಕೆಗಳು, ಮೊಬೈಲ್ ಫೋನ್ ಎಲ್ಲವನ್ನೂ ಕೆಲವೇ ನಿಮಿಷಗಳಲ್ಲಿ ಜಾಲಾಡಿ, “ಈಗ ಬೋರ್ ಹೊಡೀತಿದೆ, ಏನ್ಮಾಡ್ಲೀ” ಅಂತ ಬೊಬ್ಬೆ ಹಾಕುತ್ತದೆ.

ಸಾಯುವುದು ಹೇಡಿತನ, ಈಸಬೇಕು-ಇದ್ದು ಜೈಸಬೇಕು ಎಂದೆಲ್ಲ ನಮ್ಮಲ್ಲಿ ಆತ್ಮಹತ್ಯೆಗಳ ವಿರುದ್ಧ ಮಾತನಾಡುವುದಿದೆ. ಸಾಯಲು ಸಿದ್ಧವಾಗಿರುವವನನ್ನು ಹೇಡಿ ಎಂದು ಹಂಗಿಸಿದ ಮಾತ್ರಕ್ಕೆ ಆತ ನಿರ್ಧಾರ ಬದಲು ಮಾಡಿಕೊಳ್ಳುತ್ತಾನೆ ಎಂದು ನಮಗೇಕೆ ಅನಿಸುವುದೋ? ಇಲ್ಲಿಯೂ ಎಳವೆಯಲ್ಲೇ ದಾಖಲಾಗಬೇಕಿರುವುದು ಸನಾತನ ಪ್ರಜ್ಞೆ. ಕರ್ಮವನ್ನು ಅನುಭವಿಸಿಯೇ ತೀರಬೇಕು. ದೇಹವನ್ನು ಕೊಂದುಕೊಂಡಮಾತ್ರಕ್ಕೆ ಕಷ್ಟ ತೀರುವುದಿಲ್ಲ. ಜೀವವು ಇನ್ನೊಂದು ದೇಹ ಪಡೆದ ಬೆನ್ನಲ್ಲೇ ಬಾಕಿ ಚುಕ್ತಾ ಮತ್ತೆ ಶುರು. ಹೀಗಾಗಿ ಅತಿಯಾದ ಇಂಡಿವಿಡ್ಯುವಾಲಿಟಿ ಹಾಗೂ “ಈಗಿನದೊಂದೇ ಬದುಕು” ಎಂಬ ಭೌತವಾದ ಇವೆರಡರಿಂದಲೂ ಹೊರಬಂದರಷ್ಟೇ ನೆಮ್ಮದಿ ದಾರಿ ಸಿಗಬಹುದೇನೋ.

file pic
ಡಾಲರ್, ಮುಕ್ತ ಕಾಮ, ವ್ಯಕ್ತಿ ಸ್ವಾತಂತ್ರ್ಯ, ಲಿಬರಲಿಸಂ ಹಾಗೂ ರೀಸೆಟ್ ಬಟನ್! (ತೆರೆದ ಕಿಟಕಿ)

ಇದೇಕೆ ಈಗ ಇಷ್ಟೊಂದು ಮಹತ್ತ್ವದ್ದು ಎಂದರೆ, ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಯಾಂತ್ರೀಕರಣ ಹೆಚ್ಚುತ್ತ ಹೋದಂತೆಲ್ಲ ನಮ್ಮ ಅಸ್ತಿತ್ವ ಇರುವುದಾದರೂ ಏಕೆ ಎಂಬ ಖಾಲಿತನ ಇನ್ನಷ್ಟು ದಟ್ಟವಾಗುತ್ತ ಹೋಗಲಿದೆ. ಈಗ ಎಂಭತ್ತು ವರ್ಷದ ಹಿಂದೆ ಹುಲಿ ಕೂಗುತ್ತಿದ್ದ ಅರಣ್ಯದ ನಡುವೆ ಹೋಗಿ ತೋಟ ಮಾಡಿದ ಅಜ್ಜನ ಕತೆ, ಊದುಬತ್ತಿ ಹೊಸೆದು ಸಂಸಾರ ಬೆಳಗಿಸಿದ ಅಜ್ಜಿಯಂದಿರು, ಸುಮ್ಮನೇ ಖುಷಿಗೆಂದು ಹಾರ್ಮೋನಿಯಂ ವಿನ್ಯಾಸ ಮಾಡಿಟ್ಟಿದ್ದ ಹಿರಿ ಮನುಷ್ಯ ಇಂಥವರೆಲ್ಲರಲ್ಲಿ ನಮ್ಮ ಹೀರೋಗಳನ್ನು ಹುಡುಕಿಕೊಳ್ಳಬೇಕು. ಹಾಗೆಲ್ಲ ಮಾಡಿದ್ದರಿಂದ ಅವರು ಎಷ್ಟು ಹಣ ಮಾಡಿದರು ಎಂಬ ಲೆಕ್ಕಾಚಾರಕ್ಕೆ ಹೋದರೆ ಅಲ್ಲಿ ಸ್ವಾರಸ್ಯವಿಲ್ಲ. ಆಗವರು ನಮಗೆ ಹೀರೋಗಳಾಗಿ ತೋರುವುದೂ ಇಲ್ಲ. ಬದುಕಿಗೆ ಅವರು ಅವರ ವ್ಯಾಪ್ತಿಯಲ್ಲೊಂದು ಉದ್ದೇಶ ಹುಡುಕಿಕೊಂಡು ಅದರಲ್ಲಿ ವ್ಯಸ್ತರಾಗಿದ್ದರಲ್ಲ…ಹಾಗೊಂದು ಪರ್ಪಸ್ ಹುಡುಕಿಕೊಳ್ಳದಿದ್ದರೆ ನಮ್ಮೆಲ್ಲರ ಬದುಕುಗಳೂ ಭವಿಷ್ಯದಲ್ಲಿ ದಯನೀಯವಾಗಲಿಕ್ಕಿವೆ, ನಮ್ಮೆಲ್ಲ ಪ್ಯಾಕೇಜುಗಳು ಹಾಗೂ ಸವಲತ್ತುಗಳ ಹೊರತಾಗಿಯೂ!

- ಚೈತನ್ಯ ಹೆಗಡೆ

cchegde@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com