ಭಾರತದಾಚೆಗಿನ ಈ ದೇಶಗಳೇಕೆ ದೇವಾಲಯಕ್ಕಾಗಿ ಸಂಘರ್ಷ ನಡೆಸುತ್ತಿವೆ? (ತೆರೆದ ಕಿಟಕಿ)

ನಾವು ಬೌದ್ಧ-ಹಿಂದು ಸಂಸ್ಕೃತಿ ಎಂದು ಹೇಳುವಾಗಲೆಲ್ಲ ಈಗಿನ ರಾಜಕೀಯವು ಹುಟ್ಟುಹಾಕಿರುವ ವೈದಿಕ ವರ್ಸಸ್ ಬೌದ್ಧ ಎಂಬ ಚೌಕಟ್ಟಿನಲ್ಲಿ ನೋಡಿ ಬೇಸ್ತು ಬೀಳುವಂತಿಲ್ಲ. ಬೌದ್ಧ ಧರ್ಮವಿರುವುದು ಹಿಂದು ವಿರೋಧಕ್ಕಾಗಿ ಎಂಬುದು ಪ್ರಸ್ತುತ ರಾಜಕೀಯಕ್ಕೆ ಕೃತಕವಾಗಿ ಸೃಷ್ಟಿಸಿಕೊಂಡಿರುವ ಅಂಶ...
Hindu temples in hailand and combodia
ತೈಲ್ಯಾಂಡ್, ಕಾಂಬೊಡಿಯ ಭಾಗದಲ್ಲಿರುವ ಹಿಂದೂ ದೇವಾಲಯonline desk
Updated on

ಇತ್ತೀಚಿನ ಸುದ್ದಿಗಳಲ್ಲಿ ಭಾರತದ ಹೊರಗಿನ ಎರಡು ದೇಶಗಳು ದೇವಾಲಯವೊಂದರ ವಿಷಯದಲ್ಲಿ ಹೋರಾಡುತ್ತಿರುವ ಅಂಶ ಸೋಜಿಗದ್ದಾಗಿ ತೋರಬಹುದು. ತೈಲ್ಯಾಂಡ್ ಮತ್ತು ಕಾಂಬೊಡಿಯಗಳ ನಡುವೆ ಒಂದು ಕಾಲದ ಶಿವ ದೇವಾಲಯ ಹಾಗೂ ಈಗ ಪ್ರೀಚ್ ವಿಹಾರ ಎಂದು ಕರೆಯಲಾಗುತ್ತಿರುವ ದೇವಾಲಯ ಸಮುಚ್ಛಯಗಳ ವಿಷಯದಲ್ಲಿ ಮಿಲಿಟರಿ ಸಂಘರ್ಷ ನಡೆದು ಪ್ರಾಣಹಾನಿಯೂ ಆಗಿದೆ.

ಇದೇನೂ ಇವತ್ತಿಗೆ ಏಕಾಏಕಿ ಭುಗಿಲೆದ್ದಿದ್ದಲ್ಲ. ಒಟ್ಟಾರೆ ದೇವಾಲಯ ಸಂಕೀರ್ಣವು ಕಾಂಬೋಡಿಯಾಕ್ಕೇ ಸೇರಿದ್ದು ಎಂಬುದು ನಿಚ್ಚಳವಾಗಿದ್ದರೂ ಅದರ ಪ್ರವೇಶದ ಕೆಲವು ಭಾಗಗಳು ತನ್ನ ವ್ಯಾಪ್ತಿಗೆ ಬರುತ್ತವೆ ಎಂಬ ನಿಲವು ತೈಲ್ಯಾಂಡಿನದ್ದು. ಹಾಗೆಂದೇ ಈ ವಿಷಯ 1959ರಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಹೋಗಿ 1962ರಲ್ಲಿ ಕಾಂಬೊಡಿಯ ಪರ ತೀರ್ಪು ಬಂದಿದ್ದೂ ಆಗಿದೆ.

ಈಗಿನ ರಾಜಕಾರಣ ಹಾಗೂ ಐತಿಹಾಸಿಕ ಅಡಿಪಾಯ

ಈಗಿರುವ ಆಯಾಮ ಜಿಯೊ ಪಾಲಿಟಿಕ್ಸ್ ನದ್ದು. ಕಾಂಬೊಡಿಯವು ಕಮ್ಯುನಿಸ್ಟ್ ಚೀನಾದ ಮಡಿಲಲ್ಲಿ ಕುಳಿತು ಹಲವು ವರ್ಷಗಳಾಗಿವೆ. ಇತ್ತ, ಏಷ್ಯದಲ್ಲಿ ತನ್ನ ರಾಜಕೀಯ ಆಯಾಮಗಳಿಗಾಗಿ ಅಮೆರಿಕವು ಕೈಹಾಕಿರುವುದರ ಭಾಗವಾಗಿ, ತೈಲ್ಯಾಂಡ್ ಮಿಲಿಟರಿಗೆ ಸಿಗುತ್ತಿರುವ ಬೆಂಬಲ ಅಲ್ಲಿಂದಲೇ ಬರುತ್ತಿದೆ. ಹೇಗೆ ಬಾಂಗ್ಲಾದೇಶದಲ್ಲಿ ರಾಜಕೀಯ ಚಿತ್ರಣವನ್ನು ಅಮೆರಿಕ ಬದಲಿಸಿದೆಯೋ ಅಂಥದೇ ಹಿಡಿತ ಅದಕ್ಕೆ ತೈಲ್ಯಾಂಡ್ ಮೇಲಿದೆ. ಚೀನಾ ಬೆಂಬಲವಿದೆ ಎನ್ನುವುದು ಹೌದಾದರೂ ಕಾಂಬೊಡಿಯವು ಮಿಲಿಟರಿ ಶಕ್ತಿಯನ್ನೇನೂ ಗಣನೀಯವಾಗಿ ಗಳಿಸಿಲ್ಲ. ಹೀಗಾಗಿ ಈ ಸಂಘರ್ಷ ಬೆಳೆಯುವುದು ಚೀನಾಕ್ಕೇನೂ ಬೇಕಿಲ್ಲ, ಆದರೆ ಅಮೆರಿಕದ ವಿಷಯದಲ್ಲಿ ಅನುಮಾನವಿದೆ ಎಂಬುದು ಕೆಲವು ವಿಶ್ಲೇಷಕರ ನೋಟ.

ಒಟ್ಟಿನಲ್ಲಿ ಆಗ್ನೇಯ ಏಷ್ಯದ ನೆಲದಲ್ಲಿ ದ್ವಿಪಕ್ಷೀಯ ಸಂಘರ್ಷ ಎಂದು ಕಂಡುಬರುತ್ತಿರುವುದರ ಹಿಂದೆಲ್ಲ ಜಾಗತಿಕ ರಾಜಕಾರಣದ್ದೇ ಆಟವಿದೆ. ಆದರೆ ಆಗ್ನೇಯ ಏಷ್ಯದ ಅಡಿಪಾಯವಿರುವುದೇ ಭಾರತೀಯ ಸಂಸ್ಕೃತಿಯ ಇಟ್ಟಿಗೆಗಳಲ್ಲಿ ಎಂಬುದು ಈ ಜಾಗತಿಕ ರಾಜಕಾರಣಗಳಾಚೆಗಿನ ನಾಗರಿಕತೆಯ ದೃಷ್ಟಿಕೋನ.

ತೈಲ್ಯಾಂಡ್, ಕಾಂಬೊಡಿಯ ಮತ್ತು ಪ್ರಾಚೀನ ಭಾರತ

ಈಗಿನ ಪ್ರೀಚ್ ವಿಹಾರವನ್ನೇ ಗಮನಿಸಿದರೆ, ಅದರ ನಿರ್ಮಾಣದ ಶ್ರೇಯಸ್ಸು ಕಮೇರ್ ಸಾಮ್ರಾಜ್ಯಕ್ಕೆ ಸಲ್ಲುತ್ತದೆ. ಒಂದನೇ ಯಶೋವರ್ಮನ್, ಒಂದನೇ ಹಾಗೂ ಎರಡನೇ ಸೂರ್ಯವರ್ಮನ್ ಇವರ ಕಾಲದಲ್ಲಿ, ಒಂಬತ್ತು ಮತ್ತು ಹನ್ನೆರಡನೇ ಶತಮಾನದ ಅವಧಿಯಲ್ಲಿ ನಿರ್ಮಾಣವಾಗಿರುವುದು. ಹಿಂದು ಮತ್ತು ಬೌದ್ಧ ನಂಬಿಕೆಗಳ ಸಮ್ಮಿಶ್ರವನ್ನು ಹೊಂದಿದ್ದ ಇವರೆಲ್ಲರೂ ಆ ಕಾಲಕ್ಕೆ ಅಲ್ಲಿನ ಪ್ರಾಂತ್ಯಗಳಲ್ಲೆಲ್ಲ ದೇವಾಲಯ ಸಂಕೀರ್ಣಗಳನ್ನು ನಿರ್ಮಿಸಿದರು. ಇವತ್ತಿಗೆ ಜಗತ್ತಿನ ಅತಿದೊಡ್ಡ ದೇವಾಲಯ ಸಮುಚ್ಛಯ ಎಂಬ ಹೆಗ್ಗಳಿಕೆ ಹೊಂದಿರುವ ಜಾಗವು ಭಾರತದಲ್ಲಿಲ್ಲ, ಬದಲಿಗೆ ಕಾಂಬೊಡಿಯದಲ್ಲಿದೆ. ಅಂಕೊರ್ ವಾಟ್ ಎಂಬ ಆ ಪ್ರಾಂತ್ಯವನ್ನು ನಿರ್ಮಿಸಿದ ಖ್ಯಾತಿ ಇಲ್ಲಿ ಹೆಸರಿಸಿರುವ ಕಮೇರ್ ಸಾಮ್ರಾಜ್ಯದ ಯಶೋವರ್ಮನ್ನರಿಗೆ ಸಂದರೆ, ಇಲ್ಲಿ ದೇವಾಲಯ ಸಂಕೀರ್ಣವನ್ನು ನೆಲೆಗೊಳಿಸಿದ ಖ್ಯಾತಿ ಎರಡನೇ ಸೂರ್ಯವರ್ಮನ್ನರಿಗೆ ಸಲ್ಲುತ್ತದೆ.

Hindu temples in hailand and combodia
ಡಾಲರ್, ಮುಕ್ತ ಕಾಮ, ವ್ಯಕ್ತಿ ಸ್ವಾತಂತ್ರ್ಯ, ಲಿಬರಲಿಸಂ ಹಾಗೂ ರೀಸೆಟ್ ಬಟನ್! (ತೆರೆದ ಕಿಟಕಿ)

ಪ್ರಾಚೀನ ಭಾರತದಿಂದ ಹೊರಟ ಹಿಂದು-ಬೌದ್ಧ ಸ್ಫೂರ್ತಿಯು ಆಗ್ನೇಯ ಏಷ್ಯದಲ್ಲಿ ಸಾಮ್ರಾಜ್ಯಗಳನ್ನು ಕಟ್ಟಿದ ಕಾಲಕ್ಕೆ ಅಲ್ಲಿನ ನಕಾಶೆ ತುಂಬ ಭಿನ್ನವಾಗಿತ್ತು. ಇವತ್ತಿನ ಕಾಂಬೊಡಿಯವು ಆಗಿನ ಕಂಬುಜ. ಇದನ್ನು ಮಹಾಭಾರತದಲ್ಲಿ ಬರುವ ವಾಯವ್ಯದ ಕಾಂಬೋಜದೊಂದಿಗೆ ಗೊಂದಲ ಮಾಡಿಕೊಳ್ಳಬಾರದಷ್ಟೆ. ಹಾಗೆಂದು ಈಗ ನಕಾಶೆಯಲ್ಲಿ ಕಾಣುವ ಕಾಂಬೊಡಿಯದ ಮಾದರಿಯಲ್ಲಿರಲಿಲ್ಲ ಕಂಬುಜ. ವಿಶೇಷವಾಗಿ, ಕಮೇರ್ ಸಾಮ್ರಾಜ್ಯವು ಆಳುತ್ತಿದ್ದಾಗ ಪ್ರಸ್ತುತದ ತೈಲ್ಯಾಂಡಿನ ಹೆಚ್ಚಿನ ಭಾಗಗಳು ಕಂಬುಜಕ್ಕೆ ಸೇರಿದ್ದವು. ಇವತ್ತಿನ ಸೆಂಟ್ರಲ್ ತೈಲ್ಯಾಂಡ್ ಮಾತ್ರ ದ್ವಾರಾವತಿ ಎಂಬ ಹೆಸರಿನಲ್ಲಿ ಬೇರೆಯದೇ ಅಸ್ತಿತ್ವ ಪಡೆದಿತ್ತು. ಆದರೆ ಅಲ್ಲಿನ ಸಂಸ್ಕೃತಿಯನ್ನು ರೂಪಿಸಿದ್ದು ಸಹ ಬೌದ್ಧ - ಹಿಂದು ಅಂಶಗಳೇ.

ಹೀಗೆ ನಾವು ಬೌದ್ಧ-ಹಿಂದು ಸಂಸ್ಕೃತಿ ಎಂದು ಹೇಳುವಾಗಲೆಲ್ಲ ಈಗಿನ ರಾಜಕೀಯವು ಹುಟ್ಟುಹಾಕಿರುವ ವೈದಿಕ ವರ್ಸಸ್ ಬೌದ್ಧ ಎಂಬ ಚೌಕಟ್ಟಿನಲ್ಲಿ ನೋಡಿ ಬೇಸ್ತು ಬೀಳುವಂತಿಲ್ಲ. ಬೌದ್ಧ ಧರ್ಮವಿರುವುದು ಹಿಂದು ವಿರೋಧಕ್ಕಾಗಿ ಎಂಬುದು ಪ್ರಸ್ತುತ ರಾಜಕೀಯಕ್ಕೆ ಕೃತಕವಾಗಿ ಸೃಷ್ಟಿಸಿಕೊಂಡಿರುವ ಅಂಶ ಎಂಬುದು ಭಾರತೀಯ ಮತಗಳ ತಾತ್ತ್ವಿಕ ನೆಲೆಗಳನ್ನು ಗಮನಿಸಿದಾಗ ಸ್ಪಷ್ಟವಾಗುತ್ತದೆ. ಸ್ವರ್ಗ, ನರಕ, ಮೋಕ್ಷ ಇವೆಲ್ಲವನ್ನೂ ಬೌದ್ಧಮತವೂ ಪ್ರತಿಪಾದಿಸಿಯೇ ಇದೆ. ವೈದಿಕ ಮತಕ್ಕೆ ಹೋಲಿಸಿದಾಗ ಆತ್ಮ-ದೈವದ ಪರಿಕಲ್ಪನೆಗಳು ತುಂಬ ಭಿನ್ನ ಎಂಬುದೇನೋ ಸರಿ. ಆದರೆ, ‘ಈಗಿರುವುದೊಂದೇ ಜೀವನ’ ಎಂದು ವಾದಿಸುತ್ತ ಉಳಿದಿದ್ದನ್ನೆಲ್ಲ ಮೂಢನಂಬಿಕೆಗಳಲ್ಲಿ ಇಟ್ಟುಬಿಡುವ ವಿಚಾರವಾದಿಗಳನ್ನು ಬೆಂಬಲಿಸುವ ಅಂಶಗಳೇನೂ ಬೌದ್ಧ ದರ್ಶನದಲ್ಲಿಲ್ಲ. ಈ ಎಚ್ಚರವನ್ನಿರಿಸಿಕೊಂಡು ನೋಡಿದಾಗ, ಇಡೀ ಆಗ್ನೇಯ ಏಷ್ಯದಲ್ಲಿ ಭಾರತದ ಹಿಂದು ಸಂಸ್ಕೃತಿ ಎದ್ದುನಿಲ್ಲಿಸಿದ್ದ ವ್ಯವಸ್ಥೆಯ ಬಗ್ಗೆ ಅಚ್ಚರಿ ಮತ್ತು ಅಭಿಮಾನಗಳಾಗುತ್ತವೆ.

ಬದಲಾಗುತ್ತಲೇ ಬಂದ ಆಗ್ನೇಯ ಏಷ್ಯ ನಕ್ಷೆಯಲ್ಲಿ ಭಾರತದ ಬಿಂಬ

ಆಗ್ನೇಯ ಏಷ್ಯದಲ್ಲಿ ಕಾಲಕಾಲಕ್ಕೆ ಅಸ್ತಿತ್ತ್ವದಲ್ಲಿದ್ದ ಬೇರೆ ಬೇರೆ ಸಾಮ್ರಾಜ್ಯಗಳು, ಅವು ಅಲ್ಲಿನ ನಕಾಶೆಯನ್ನು ಭಿನ್ನವಾಗಿ ರೂಪಿಸಿದ ಬಗೆ ಇವುಗಳ ಬಗ್ಗೆಯೆಲ್ಲ ಬರೆಯುತ್ತ ಹೋಗುವುದಕ್ಕೆ ತುಂಬ ದೀರ್ಘ ಸರಕಿದೆ. ಅಲ್ಲೆಲ್ಲ ಭಾರತದ ಪ್ರಭಾವವೂ ಅಚ್ಚಳಿಯದ್ದಾಗಿದೆ. ಆದರೆ, ಸದ್ಯದ ಆಸಕ್ತಿ ಕಾಂಬೊಡಿಯವಾಗಿರುವುದರಿಂದ ಈ ಹಿನ್ನೆಲೆಯಲ್ಲಿ ಚರಿತ್ರೆ-ಐತಿಹ್ಯಗಳನ್ನು ಕೆದಕೋಣ.

ಈ ಮೇಲೆ ವಿವರಿಸಿದಂತೆ ಕಾಂಬೊಡಿಯದಲ್ಲಿ ಇವತ್ತಿಗೆ ಕಾಣುತ್ತಿರುವ ದೇವಾಲಯಗಳ ನಿರ್ಮಿತಿಯಲ್ಲಿ ಹಿಂದು ರಾಜರ ಕೊಡುಗೆಯನ್ನು ಶಾಸನಗಳೂ ಸೇರಿದಂತೆ ಐತಿಹಾಸಿಕ ದಾಖಲೆಗಳೇ ಕಟ್ಟಿಕೊಡುತ್ತವೆ. ಆದರೆ, ಕಾಲದಲ್ಲಿ ಹಿಂದೆ ಹಿಂದೆ ಸಾಗುತ್ತ ಇವೆಲ್ಲದರ ಪ್ರಾರಂಭವನ್ನು ನೋಡುವುದಾದರೆ ಅಲ್ಲಿ ಕಾಣುವುದೇನು? ಇಲ್ಲಿ ಮಾತ್ರ ಐತಿಹ್ಯದ, ಜನಮಾನಸವು ನಂಬಿರುವ ಕಥಾನಕವನ್ನು ನಿರೂಪಿಸಬೇಕಾಗುತ್ತದೆ. ಕಮೇರ್ ರಾಜರುಗಳು ತಮ್ಮ ವಂಶಾವಳಿ ಹೇಳಿಕೊಳ್ಳುವಾಗ ಉಲ್ಲೇಖಿಸಿರುವ ಕತೆಯ ಆಧಾರದಲ್ಲೂ ಇವನ್ನು ಗಮನಿಸಬಹುದು.

ಒಂದು ಮತ್ತು ಎರಡನೇ ಶತಮಾನಗಳಷ್ಟು ಹಿಂದಕ್ಕೆ ಹೋದರೆ ಇವತ್ತಿನ ಕಾಂಬೊಡಿಯದ ದಕ್ಷಿಣದ ಭಾಗ ಹಾಗೂ ವಿಯೆಟ್ನಾಮಿನ ದಕ್ಷಿಣ ಭಾಗವನ್ನು ಒಳಗೊಂಡ ಫುನಾನ್ ಎಂಬ ಸಾಮ್ರಾಜ್ಯವೊಂದು ಅಸ್ತಿತ್ವದಲ್ಲಿತ್ತು. ಅವತ್ತಿನ ಭಾರತದಿಂದ ಬಂಗಾಳಕೊಲ್ಲಿ ಮೂಲಕ ನೌಕಾಯಾನದಲ್ಲಿ ಹೊರಟ ಕೌಂಡಿನ್ಯ ಎಂಬ ಬ್ರಾಹ್ಮಣನೊಬ್ಬ ವಿರಳ ಜನವಸತಿಯ ಆಗ್ನೇಯ ಏಷ್ಯದ ಈ ಭಾಗಕ್ಕೆ ಬಂದಾಗ, ಅಲ್ಲಿನ ನಾಗಾಗಳು ದಾಳಿ ಪ್ರಾರಂಭಿಸುತ್ತಾರೆ. ದಾಳಿ ನೇತೃತ್ವ ವಹಿಸಿದ್ದವಳು ನಾಗಾ ರಾಜಕುವರಿ ಸೋಮಾ. ಆದರೆ ಈ ದಾಳಿಯನ್ನು ಕೌಂಡಿನ್ಯ ಸಮರ್ಥವಾಗಿ ಎದುರಿಸಿದ ಬಗೆಗೆ ಬೆರಗಾಗಿ, ಆತನನ್ನು ಮೆಚ್ಚಿ ಆಕೆ ವರಿಸುತ್ತಾಳೆ. ಇವರಿಬ್ಬರಿಂದ ಮುಂದೆ ಗಟ್ಟಿಗೊಂಡ ವಂಶಾವಳಿಯೇ ಫುನಾನ್. ಹೀಗೆಂದು ಕತೆ ಹೇಳಿರುವುದು ಭಾರತದ ಗ್ರಂಥಗಳಲ್ಲ, ಬದಲಿಗೆ ಚೀನಾದ ಲಿಯಾಂಗ್ ಶು, ಜಿಂಗ್ ಶು ಎಂಬ ದಾಖಲೆಗಳು ಎಂಬುದಿಲ್ಲಿ ಗಮನಾರ್ಹ.

Hindu temples in hailand and combodia
ದಲೈ ಲಾಮಾ, ಚೀನಾ, ಮತ್ತು ಭಾರತದ ಸಾಫ್ಟ್ ಪವರ್! (ತೆರೆದ ಕಿಟಕಿ)

ಈ ವಿದ್ಯಮಾನದಲ್ಲಿ ವ್ಯಕ್ತಿಕೇಂದ್ರಿತ ವಿವರಗಳ ನಿಖರತೆ ಇಲ್ಲವಾಗಿದ್ದರೂ, ಇದರ ಒಟ್ಟಾರೆ ಸಾಧ್ಯತೆ ಬಗ್ಗೆ ಸಂಜೀವ ಸಾನ್ಯಾಲರ ‘ಒಷನ್ ಆಫ್ ಚರ್ನ್’ ಪುಸ್ತಕ ಉತ್ತಮ ನೋಟ ಒದಗಿಸುತ್ತದೆ. ಒಡಿಶಾ, ಬಂಗಾಳ ಸೇರಿದಂತೆ ಅವತ್ತಿನ ಭಾರತದ ಭಾಗವು ಆಗ್ನೇಯ ಏಷ್ಯಗಳಿಗೆ ನಾವೆಯಲ್ಲಿ ಸಾಗುತ್ತಿದ್ದ, ವ್ಯಾಪಾರಗಳಲ್ಲಿ ತೊಡಗಿಸಿಕೊಂಡಿದ್ದರ ಬಗ್ಗೆಯಂತೂ ನಿಖರ ದಾಖಲೆಗಳಿವೆ. ಇದೇ ಸಮುದ್ರ ತೀರದಲ್ಲೇ ಕೌಂಡಿನ್ಯ ಗೋತ್ರದ ಬ್ರಾಹ್ಮಣರು ವಾಸವಿದ್ದಿರುವುದೂ ಸತ್ಯನಿಷ್ಠವೇ. ಈ ಹಿನ್ನೆಲೆಯಲ್ಲಿ ಈ ನಿರ್ದಿಷ್ಟ ಪ್ರಕರಣವನ್ನು ಪರಿಭಾವಿಸಿಕೊಳ್ಳಬೇಕು ಎಂಬ ನೋಟವನ್ನು ಸಂಜೀವ ಸನ್ಯಾಲ್ ಒದಗಿಸುತ್ತಾರೆ.

ಇದು ಪ್ರಾರಂಭಿಕ ಫುನಾನ್ ವಂಶಾವಳಿಯ ಕತೆಯಾದರೆ, ಈ ಮೇಲೆ ಉಲ್ಲೇಖಿಸಿದಂತೆ ನಂತರದ ಕಾಲಘಟ್ಟದಲ್ಲಿ ಈ ಪ್ರಾಂತ್ಯವನ್ನು ಆಳಿದ, ಜಾಗತಿಕವಾಗಿ ಪ್ರಮುಖ ಸಾಮ್ರಾಜ್ಯಗಳಲ್ಲೊಂದು ಎನಿಸಿಕೊಂಡ ಕಮೇರ್ ಸಾಮ್ರಾಜ್ಯದವರು ತಮ್ಮನ್ನು ಯಾರ ವಾರಸುದಾರರೆಂದು ಗುರುತಿಸಿಕೊಂಡಿದ್ದರು ಎಂಬುದು ಸಹ ಕುತೂಹಲದ್ದು. ಇದಕ್ಕೆ ಐತಿಹಾಸಿಕ ಆಧಾರಗಳು ಏನೂ ಇಲ್ಲವಾದರೂ, ಆರ್ಯದೇಶ ಅರ್ಥಾತ್ ಭಾರತದಿಂದ ಬಂದ ಕಂಬು ಸ್ವಯಮ್ಭೂ ಎಂಬ ಋಷಿಯೊಬ್ಬ ಇಲ್ಲಿನ ಮೇರಾ ಎಂಬ ನಾಗಾ ಮಹಿಳೆಯನ್ನು ಮದುವೆಯಾಗಿ ಅಲ್ಲಿಂದ ಕುಡಿಯೊಡೆದಿದ್ದೇ ತಮ್ಮ ವಂಶ ಎಂದು ಕಮೇರ್ ರಾಜರು ತಮ್ಮ ಶಾಸನಗಳಲ್ಲಿ ತಮ್ಮನ್ನು ವರ್ಣಿಸಿಕೊಂಡಿದ್ದು ಕಾಣಸಿಗುತ್ತದೆ. ಕಂಬು ಮತ್ತು ಮೇರಾರ ನೆನಪಿನಲ್ಲೇ ತಮ್ಮ ವಂಶ ಕಮೇರ್ ಎಂಬುದವರ ಪ್ರತಿಪಾದನೆಯಾಗಿತ್ತು.

ಒಟ್ಟಿನಲ್ಲಿ, ಆಗ್ನೇಯ ಏಷ್ಯವು ಇವತ್ತಿಗೆ ಯಾವು ಸ್ವರೂಪದಲ್ಲೇ ಇದ್ದರೂ ಮೂಲತಃ ಅದು ಭಾರತದ್ದೇ ಮುಂದುವರಿದ ಭಾಗ ಎಂಬಂತಿತ್ತು ಎನ್ನುವುದಕ್ಕೆ ಅಲ್ಲಿನ ದೇವಾಲಯಗಳು, ಅವುಗಳ ಜತೆ ಬೆಸಗೊಂಡಿರುವ ರಾಜವಂಶಗಳು, ಮತ್ತವುಗಳ ಜತೆಗಿರುವ ಕತೆಗಳೇ ಸಾಕ್ಷ್ಯ ಹೇಳಿಕೊಂಡಿವೆ.

- ಚೈತನ್ಯ ಹೆಗಡೆ

cchegde@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com