
ಒಂದು ಜನ್ಮದಿನದ ಶುಭಾಶಯವೂ ದೇಶವೊಂದನ್ನು ಕೆರಳಿಸಬಲ್ಲುದೇ? ಹೌದೆಂದು ಚೀನಾ ತೋರಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ದಲೈ ಲಾಮಾ ಅವರ ತೊಂಬತ್ತನೇ ಜನ್ಮದಿನಕ್ಕೆ ಶುಭ ಕೋರಿರುವುದನ್ನೂ ಚೀನಾದ ವಿದೇಶ ಸಚಿವಾಲಯ ಆಕ್ಷೇಪಿಸಿದೆ. ಇದೇನೂ ಭಾರತಕ್ಕೆ ಅನಿರೀಕ್ಷಿತವೇನಲ್ಲ. ಕೇಂದ್ರ ಸಚಿವ ಕಿರಿಣ್ ರಿಜಿಜು ಅವರಂತೂ ಹಿಮಾಚಲ ಪ್ರದೇಶದ ಮೆಕ್ಲಿಯೊಡ್ಗಂಜ್ ನಲ್ಲಿ ದಲೈ ಲಾಮಾ ಅವರ ವಾಸ್ತವ್ಯದ ನೆಲೆಗೇ ಹೋಗಿ ಶುಭಾಶಯ ಕೋರಿದರು ಹಾಗೂ ಅದಕ್ಕೆ ಪ್ರಚಾರವನ್ನೂ ಕೊಡಲಾಯಿತು.
1959ರಲ್ಲಿ ಆಶ್ರಯ ಕೋರಿ ಭಾರತಕ್ಕೆ ಬಂದ ದಲೈ ಲಾಮಾ ಅವರನ್ನು ಜವಹರಲಾಲ ನೆಹರು ಅವರು ಖುದ್ದು ಹೋಗಿ ಬರಮಾಡಿಕೊಂಡಿದ್ದರು. ಅದಾದ ನಂತರ ಭಾರತದಲ್ಲಿ ಎಲ್ಲ ಸರ್ಕಾರಗಳೂ ದಲೈ ಲಾಮಾ ಅವರಿಗೆ ಗೌರವ ಸಲ್ಲಿಸಿವೆ. ಆದರೆ, ಅಂತಹ ಸಂದರ್ಭಗಳನ್ನೆಲ್ಲ ಬಹುತೇಕ ಕಣ್ಣಿಗೆ ರಾಚದ ರೀತಿಯಲ್ಲಿ, ಲೊ ಕೀ ಅಫೇರ್ ಅಂತಾರಲ್ಲ ಹಾಗಿರಿಸಲಾಗಿತ್ತು. 2020ರಿಂದೀಚೆಗೆ ಮೋದಿ ಸರ್ಕಾರ ಇದನ್ನು ಎಲ್ಲರಿಗೂ ತೋರುವ ವಿದ್ಯಮಾನವನ್ನಾಗಿಸಿದೆ. ಬರ್ತಡೇ ಪ್ರಯುಕ್ತ ಸಾಮಾನ್ಯವಾಗಿ ನರೇಂದ್ರ ಮೋದಿ ಪ್ರತಿವರ್ಷ ಟ್ವೀಟ್ ಮಾಡಿ ಶುಭ ಕೋರುತ್ತಾರೆ. ಅವರ ಸಚಿವರು ದಲೈ ಲಾಮಾ ಸನ್ನಿಧಾನಕ್ಕೆ ಹೋಗಿ ಬರುತ್ತಾರೆ. 2023ರಲ್ಲಿ ಕೇಂದ್ರದ ಸಂಸ್ಕೃತಿ ಸಚಿವಾಲಯವು ದೆಹಲಿಯಲ್ಲಿ ಜಾಗತಿಕ ಬೌದ್ಧ ಸಮ್ಮೇಳನ ನಡೆಸಿತು. ನೇಪಾಳ, ವಿಯೆಟ್ನಾಂ, ಮ್ಯಾನ್ಮಾರ್, ಟಿಬೆಟ್, ಮಂಗೊಲಿಯಾ, ಭೂತಾನ್, ಶ್ರೀಲಂಕಾ ಸೇರಿದಂತೆ ಹಲವು ದೇಶಗಳಿಂದ ಬೌದ್ಧ ಸಂಘಗಳ ಪ್ರಮುಖರು ಹರಿದು ಬಂದಿದ್ದ ಈ ಸಮ್ಮೇಳನದಲ್ಲಿ ದಲೈ ಲಾಮಾ ಪಾಲ್ಗೊಳ್ಳುವಿಕೆ ಇತ್ತು. ಖುದ್ದು ಪ್ರಧಾನಿ ಮೋದಿ ಇದನ್ನು ಉದ್ಘಾಟಿಸಿದ್ದರು.
ಹೀಗಾಗಿ ಈ ವಿಚಾರದಲ್ಲಿ ಚೀನಾ ಹರಿಹಾಯ್ದುಕೊಂಡಿರುವುದು ಹಾಗೂ ಭಾರತವು ಆ ಸ್ಥಿತಿಯನ್ನು ಆನಂದಿಸುತ್ತಿರುವುದು ಮೋದಿ ಸರ್ಕಾರದ ಅವಧಿಯಲ್ಲಿ ಹೊಸ ವಿದ್ಯಮಾನವೇನೂ ಅಲ್ಲ. ಹಾಗಾದರೆ ಚೀನಾ ತನ್ನ ಆಕ್ಷೇಪಕ್ಕೆ ಕೊಡುತ್ತಿರುವ ಕಾರಣವೇನು? ಟಿಬೆಟ್ ಚೀನಾದ ಭಾಗವೆಂದು ಭಾರತವೂ ಸೇರಿದಂತೆ ಜಗತ್ತಿನ ಪ್ರಮುಖ ದೇಶಗಳೆಲ್ಲ ಒಪ್ಪಿಕೊಂಡಿರುವಾಗ, ಮತದ ಆಧಾರದಲ್ಲಿ ಪ್ರತ್ಯೇಕತೆ ಬಿತ್ತುತ್ತಿರುವ ದಲೈ ಲಾಮಾರಿಗೆ ಮಾನ್ಯತೆ ಕೊಡಬಾರದು ಎಂಬುದು ಚೀನಾದ ನಿಲವು. ಅವರು ಟಿಬೆಟ್ ಅನ್ನು ಶಿಜಾಂಗ್ ಅಂದರೆ ಪಶ್ಚಿಮದ ತ್ಸಾಂಗ್ ಪ್ರದೇಶ ಎಂದೇ ಗುರುತಿಸುತ್ತಾರೆ.
ಮೇಲ್ನೋಟಕ್ಕೆ ಹೌದು ಎನಿಸಿದರೂ, ಟಿಬೆಟ್ ಕುರಿತ ಭಾರತದ ನಿಲವಿನಲ್ಲಿ ಬದಲಾವಣೆಯೇನೂ ಆಗಿಲ್ಲ. ಆದರೆ ಆ ಚೌಕಟ್ಟಿನಲ್ಲೇ ತನ್ನ ಸಾಫ್ಟ್ ಪವರ್ ಅನ್ನೂ ವಿಜೃಂಭಿಸುವ ಕೆಲಸವನ್ನು ಭಾರತ ಮಾಡುತ್ತಿದೆ. ಅದು ಹೇಗೆ ಗೊತ್ತೇ? 1950ರಲ್ಲಿ ಟಿಬೆಟ್ ಅನ್ನು ಚೀನಾ ಆಕ್ರಮಿಸಿಕೊಂಡಿತು. 1644 ರಿಂದ 1911ರವರೆಗೆ ಆಡಳಿತ ನಡೆಸಿದ ಚೀನಾದ ಕ್ವಿಂಗ್ ರಾಜವಂಶದ ಅಡಿಯಲ್ಲೇ ಟಿಬೆಟ್ ಇತ್ತಾದ್ದರಿಂದ ಅದು ಯಾವತ್ತಿಗೂ ಚೀನಾದ ಭಾಗವೇ ಎಂಬುದು ಅದರ ಪ್ರಮುಖ ಸಮರ್ಥನೆ.
1954ರ ಹೊತ್ತಿಗೆಲ್ಲ ಭಾರತವು ತಾನಿದನ್ನು “ಚೀನಾದ ಟಿಬೆಟ್ ಪ್ರಾಂತ್ಯ” ಎಂದು ಗುರುತಿಸುವುದಾಗಿ ಒಪ್ಪಂದ ಮಾಡಿಕೊಂಡಿತು. ಅಂದರೆ, ಚೀನಾದ ಭಾಗ ಎಂದು ಒಪ್ಪಿಕೊಳ್ಳುತ್ತಲೇ ಅದಕ್ಕೊಂದು ಸ್ವಾಯತ್ತವೂ ಇದೆ ಎಂಬ ಸೂಕ್ಷ್ಮ ಪ್ರತಿಪಾದನೆ. 2003ರಲ್ಲಿ ವಾಜಪೇಯಿಯವರ ಚೀನಾ ಭೇಟಿ ವೇಳೆಗೆ ಟಿಬೆಟ್ ಅನ್ನು ಸಂಪೂರ್ಣ ಚೀನಾದ ಭಾಗವೆಂದು ಭಾರತ ಗುರುತಿಸುವುದರೊಂದಿಗೆ ಸಿಕ್ಕಿಂ ಅನ್ನು ಭಾರತದ ಭಾಗವೆಂದು ಚೀನಾ ಒಪ್ಪಿಕೊಂಡಿತು. ಆದರೆ, ಭಾರತದಲ್ಲಿ ಸರ್ಕಾರಗಳು ಯಾವುದೇ ಇರಲಿ, ಅವತ್ತಿಗೂ ಇವತ್ತಿಗೂ ಈಗ ಭಾರತದಲ್ಲಿ ಆಶ್ರಯದಲ್ಲಿರುವ 14ನೇ ದಲೈ ಲಾಮಾ ಅವರನ್ನೇ ಟಿಬೆಟಿಯನ್ನರ ಮತಗುರುವನ್ನಾಗಿ ಭಾರತ ಗುರುತಿಸಿದೆ. ಅಮೆರಿಕ, ಫ್ರಾನ್ಸ್, ಇಂಗ್ಲೆಂಡ್ ಸೇರಿದಂತೆ ಜಗತ್ತಿನ ಪ್ರಮುಖ ದೇಶಗಳೆಲ್ಲವೂ ಟಿಬೆಟ್ ಅನ್ನು ಚೀನಾದ ಭಾಗವೆಂದು ಗುರುತಿಸಿವೆ. ಆದರೆ ಅಲ್ಲಿನ ಜನರ ಸಾಂಸ್ಕೃತಿಕ ಆಚರಣೆ ಗುರುತುಗಳಿಗೆ ಭಂಗ ಬರಬಾರದು ಎಂಬ ಅಂಶವನ್ನೂ ಸೇರಿಸಿವೆ. ಇದೇ ಅಂಶವನ್ನಿಟ್ಟುಕೊಂಡು ಆಗೀಗ ಅವು ಚೀನಾವನ್ನು ಪ್ರಶ್ನಿಸುತ್ತಲೂ ಇರುತ್ತವೆ.
ಭಾರತದ್ದೂ ಸಹ ಹೆಚ್ಚುಕಡಿಮೆ ಇದೇ ಮಾದರಿಯ ಪ್ರತಿಕ್ರಿಯೆಯೇ. ಮೋದಿ ಸರ್ಕಾರವೇನೂ ಟಿಬೆಟ್ ಅನ್ನು ಮತ್ತೆ ಅಲ್ಲಿನ ಬೌದ್ಧರಿಗೆ ಒದಗಿಸುವಷ್ಟರಮಟ್ಟಿಗೆ ನಿಲವಿನಲ್ಲಿ ಬದಲಾವಣೆ ಮಾಡಿಕೊಳ್ಳುವುದಿಲ್ಲ. ಭಾರತ ಹಾಗೆಲ್ಲ ಮಾಡಿಬಿಡಬಹುದೆಂಬ ಹೆದರಿಕೆ ಚೀನಾಕ್ಕೂ ಇಲ್ಲ. ಈ ಹಂತದಲ್ಲಿ ಕೆಲವರು ಉದ್ವೇಗದಿಂದ ಪ್ರಶ್ನಿಸುವುದೂ ಇದೆ. ಒಂದು ಕಾರ್ಯತಂತ್ರದ ಭಾಗವಾಗಿ ನಾವೇಕೆ ಟಿಬೆಟ್ ಪ್ರತ್ಯೇಕತೆಯನ್ನು ಪೋಷಿಸಬಾರದು, ಅದು ಚೀನಾದ ಭಾಗವೇ ಅಲ್ಲ ಎಂದು ಪೂರ್ತಿ ನಿಲವನ್ನೇ ಬದಲಾಯಿಸಿ ಚೀನಾಕ್ಕೆ ಸವಾಲು ಹಾಕಿದರೇನು ತಪ್ಪು ಎಂದೆಲ್ಲ ಉದ್ವೇಗದ ಅಭಿಪ್ರಾಯಗಳು ತೂರಿ ಬರುತ್ತವೆ. ಇದಕ್ಕೊಂದು ಸರಳ ಉತ್ತರವೇನೆಂದರೆ, ಅದು ಟಿಬೆಟ್ ಆಗಿರಲಿ, ಇನ್ಯಾವುದೇ ಭೂಭಾಗವಾಗಿರಲಿ… ಎಲ್ಲಿ ಸಮಾಜವೊಂದು ತನ್ನ ಕ್ಷಾತ್ರವನ್ನೇ ಸಂಪೂರ್ಣ ನಷ್ಟ ಮಾಡಿಕೊಂಡಿರುತ್ತದೆಯೋ ಅಂಥವಕ್ಕೆ ಸಹಾನುಭೂತಿಯ ಸಹಾಯ ಮಾಡಬಹುದಾಗಲೀ ಅವರ ಪಾಲಿನ ರಣರಂಗವನ್ನು ಯಾರೂ ಪ್ರವೇಶಿಸಲಾಗುವುದಿಲ್ಲ. ಹಾಗೆ ಯಾರೂ ಮಾಡುವುದೂ ಇಲ್ಲ. ಐತಿಹಾಸಿಕವಾಗಿ ಬೌದ್ಧ ಮತಾನುಯಾಯಿಗಳು ಭಾರತವೂ ಸೇರಿದಂತೆ ಎಲ್ಲೆಡೆ ಕ್ಷಾತ್ರನಷ್ಟಕ್ಕೆ ಕಾರಣವಾಗಿದ್ದ ಕಹಿಸತ್ಯದ ಅಧ್ಯಾಯಗಳನ್ನು ತಡವಿದರೆ, ಅದೇ ಒಂದು ಭಿನ್ನ ವಿಷಯವಾಗಿಬಿಡಬಹುದಾಗಿರುವುದರಿಂದ ಅದಿಲ್ಲಿ ಬೇಡ.
ಹಾಗಾದರೆ, ಭಾರತ ತನಗೆ ಮಾಡಬಹುದಾದ ಕಿರಿಕಿರಿ ಇಷ್ಟೇ ಎಂದಾಗಿದ್ದರೆ ಚೀನಾವೇಕೆ ಪ್ರತಿಬಾರಿಯೂ ದಲೈ ಲಾಮಾ ವಿಚಾರದಲ್ಲಿ ಅಷ್ಟೆಲ್ಲ ತೀವ್ರವಾಗಿ ಪ್ರತಿಕ್ರಿಯಿಸುತ್ತದೆ? ಏಕೆಂದರೆ, ದಲೈ ಲಾಮಾರಿಗೆ ಭಾರತದ ಬರ್ತಡೇ ಶುಭಾಶಯ ಎಂಬುದು ಕೇವಲ ತನ್ನನ್ನು ಕಿಚಾಯಿಸುವ ವಿದ್ಯಮಾನ ಅಲ್ಲ, ಬದಲಿಗೆ ದಲೈ ಲಾಮಾ ಎಂಬ ಸಾಂಸ್ಥಿಕ ವ್ಯವಸ್ಥೆಯನ್ನು ಜೀವಂತವಾಗಿಡುವ ಮೂಲಕ ತನ್ನನ್ನು ದೀರ್ಘಾವಧಿಗೆ ಸಂಕಷ್ಟಕ್ಕೆಡೆಮಾಡಬಲ್ಲ ಸಾಫ್ಟ್ ಪವರ್ ಪ್ರಯೋಗವಿದು ಎಂಬುದನ್ನು ಚೀನಾ ಚನ್ನಾಗಿ ಮನದಟ್ಟು ಮಾಡಿಕೊಂಡಿದೆ!
ದಲೈ ಲಾಮಾ ಎಂಬುದು ಹೆಸರಲ್ಲ, ಒಂದು ಪದವಿ. ತೆಂಜಿನ್ ಗಿಯಾಸ್ತೊ ಎಂಬ ಹೆಸರಿನ 90 ವರ್ಷದ ಭಾರತವಾಸಿ ಈಗಿರುವ 14ನೇ ದಲೈ ಲಾಮಾ. ಹೀಗೆ ದಲೈ ಲಾಮಾ ಪದವಿಯಲ್ಲಿರುವವರು ತಮ್ಮ ಮುಂದಿನ ಪುನರ್ಜನ್ಮ ಎಲ್ಲಾಗುತ್ತದೆ ಹಾಗೂ ಆ ಮೂಲಕ ಮುಂದಿನ ದಲೈ ಲಾಮಾರನ್ನು ಹುಡುಕಬೇಕಿರುವುದೆಲ್ಲಿ ಎಂದೆಲ್ಲ ಸೂಚಿಸುವ ಅಧಿಕಾರ ಪಡೆದಿರುತ್ತಾರೆ. ಕೆಲ ವಾರಗಳ ಹಿಂದೆ ದಲೈ ಲಾಮಾ ಅವರು ತಮ್ಮ ನಂತರವೂ ಈ ಪದವಿ ಅರ್ಥಾತ್ ದಲೈ ಲಾಮಾ ಎಂಬ ಸಾಂಸ್ಥಿಕ ರೂಪ ಮುಂದುವರಿಯುತ್ತದೆ ಎಂದು ಪ್ರಕಟಿಸಿದ್ದಾರಲ್ಲದೇ, ತಮ್ಮ ಪುನರ್ಜನ್ಮದ ಬಗ್ಗೆ ನಿರ್ಧರಿಸುವ ಅಧಿಕಾರವನ್ನು ನಿರ್ದಿಷ್ಟ ಟ್ರಸ್ಟ್ ಒಂದಕ್ಕೆ ಕೊಟ್ಟಿದ್ದಾರೆ.
ಹಾಗೆ ನೋಡಿದರೆ, ಟಿಬೇಟಿಯನ್ ಬೌದ್ಧರಲ್ಲಿ ಈ ಪುನರ್ಜನ್ಮವನ್ನು ಗುರುತಿಸುವುದಕ್ಕೆ ಸಾಂಪ್ರದಾಯಿಕ ವ್ಯವಸ್ಥೆಯೊಂದಿತ್ತು. ಆದರೆ ಅದನ್ನು ಚೀನಾ ಕದಡಿಬಿಟ್ಟಿದೆ! ದಲೈ ಲಾಮಾ ಎಂಬುದು ಉನ್ನತ ಮತಾಧಿಕಾರ ಹುದ್ದೆಯಾದರೆ, ಪಂಚೆನ್ ಲಾಮಾ ಎಂಬುದು ಎರಡನೇ ಪ್ರಮುಖ ಹುದ್ದೆ. ಈ ಪಂಚೆನ್ ಲಾಮಾರನ್ನು ದಲೈ ಲಾಮಾ ನೇಮಿಸುತ್ತಾರೆ. ಹಾಗೂ ದಲೈ ಲಾಮಾ ಆಗಿರುವವರ ಮರಣಾನಂತರ ಅವರ ಪುನರ್ಜನ್ಮ ಆಗಿರುವುದೆಲ್ಲಿ ಎಂದು ಗುರುತಿಸಿ, ಅಂಥ ವ್ಯಕ್ತಿಯನ್ನು ಮತ್ತೆ ದಲೈ ಲಾಮಾ ಹುದ್ದೆಗೆ ತರುವ ಅಧಿಕಾರ ಪಂಚೆನ್ ಲಾಮಾದ್ದಾಗಿರುತ್ತದೆ. 1989ರಲ್ಲಿ ಜೈಲಿನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಪಂಚೆನ್ ಲಾಮಾರ ಸಾವಾಯಿತು. ತನ್ನ ನೀತಿಗಳನ್ನು ಟೀಕಿಸಿದ್ದಕ್ಕಾಗಿ ಚೀನಾ ಆಡಳಿತವೇ ಇವರನ್ನು ಜೈಲಿನಲ್ಲಿಟ್ಟಿತ್ತು. ಇದರ ಬೆನ್ನಲ್ಲೇ ಟಿಬೆಟ್ ಬೌದ್ಧ ಮತಾನುಯಾಯಿಗಳು ಕೆಲವು ಅರ್ಹ ಪಂಚೆನ್ ಲಾಮಾ ಹೆಸರುಗಳನ್ನು ಭಾರತದಲ್ಲಿರುವ ದಲೈ ಲಾಮಾರಿಗೆ ಕಳುಹಿಸಿಕೊಟ್ಟಿದ್ದರು. ಆ ಪೈಕಿ ಆರು ವರ್ಷದ ಬಾಲಕನನ್ನು ಮುಂದಿನ ಪಂಚೆನ್ ಲಾಮಾ ಆಗಿ 1993ರಲ್ಲಿ ದಲೈ ಲಾಮಾ ಸೂಚಿಸಿದರು.
ಅದರ ಬೆನ್ನಲ್ಲೇ ಬಾಲಕ ಪಂಚೆನ್ ಲಾಮಾ ಕುಟುಂಬ ಸಮೇತ ಅಪಹರಣಕ್ಕೊಳಗಾದರು. ಅವರ ಸ್ಥಿತಿ ಏನೆಂಬುದು ಇಂದಿಗೂ ಗೊತ್ತಿಲ್ಲ. ಇದಾಗಿ ಆರೇ ದಿನಗಳಿಗೆ ತಾನು ನಿಜವಾದ ಪಂಚೆನ್ ಲಾಮಾರನ್ನು ಗುರುತಿಸಿರುವುದಾಗಿ ಜಗತ್ತಿಗೆ ಘೋಷಿಸಿದ ಚೀನಾ, ಗಿಯಾಲ್ಸ್ತೆನ್ ನೊರ್ಬು ಎಂಬ ಟಿಬೆಟಿಯನ್ ವ್ಯಕ್ತಿಯನ್ನು ಅಲ್ಲಿ ನೇಮಿಸಿತು. ಇದನ್ನು ಟಿಬೆಟಿಯನ್ನರು ಮಾತ್ರವಲ್ಲ, ಯಾವ ಬೌದ್ಧ ಮತಾನುಯಾಯಿಗಳೂ ಒಪ್ಪಿಕೊಂಡಿಲ್ಲ. ಇವತ್ತು ಬೌದ್ಧ ಜನಸಂಖ್ಯೆ ಹೆಚ್ಚಿರುವ ದೇಶಗಳೆಲ್ಲ ವಜ್ರಯಾನ ಪಥದ ಟಿಬೆಟಿಯನ್ ಬೌದ್ಧ ಮತವನ್ನೇ ಅನುಸರಿಸುತ್ತಿದ್ದಾರೆ ಎಂದೇನಿಲ್ಲ. ಆದರೂ, ಬೇರೆ ಬೇರೆ ಪಂಥಗಳಿದ್ದರೂ ಯಾವುದೋ ನಿರ್ದಿಷ್ಟ ಮಠಾಧೀಶರ ಮೇಲಾಗುವ ವಾಗ್ದಾಳಿಗಳನ್ನು ಹಿಂದು ಸಮಾಜವು ಹೇಗೆ ತನ್ನ ಮೇಲೆ ಆಗುತ್ತಿರುವ ದಾಳಿ ಎಂದು ಪರಿಗಣಿಸುತ್ತದೋ ಅಂಥದೇ ಭಾವವವೊಂದು ಸಹಜವಾಗಿ ವಿಭಿನ್ನ ಮಾರ್ಗಗಳ ಬೌದ್ಧರಲ್ಲೂ ಇರುತ್ತದೆ. ಹೀಗಾಗಿ ದಲೈ ಲಾಮಾ ಎಂಬ ವ್ಯವಸ್ಥೆಯನ್ನು ಚೀನಾದ ರಾಜಕೀಯ ವ್ಯವಸ್ಥೆ ನಿರ್ಧರಿಸುವುದಕ್ಕೆ ಹೋಗುತ್ತಿರುವುದು ಸಹಜವಾಗಿಯೇ ಹೆಚ್ಚಿನ ಬೌದ್ಧಾನುಯಾಯಿಗಳಿಗೆ ಸಹ್ಯವಾಗುತ್ತಿಲ್ಲ.
ಈ ಹಂತದಲ್ಲಿ, ಬೌದ್ಧ ಮತದ ತವರು ದೇಶವಾದ ಭಾರತವು ದಲೈ ಲಾಮಾರ ಬೆನ್ನಿಗೆ ಪ್ರಬಲವಾಗಿ ನಿಂತು, ವ್ಯಕ್ತಿಯಾಚೆಗೆ ಆ ಸಾಂಸ್ಥಿಕ ರೂಪವು ಮುಂದುವರಿದುಕೊಂಡು ಹೋಗುವುದಕ್ಕೆ ದಾರಿ ಮಾಡಿಕೊಡುತ್ತಿರುವ ರೀತಿ ಚೀನಾಕ್ಕೆ ಅರಗಿಸಿಕೊಳ್ಳಲಾಗುತ್ತಿಲ್ಲ. ಏಕೆಂದರೆ, ಇಲ್ಲಿ ಕೇವಲ ಟಿಬೆಟ್ ಪ್ರಶ್ನೆ ಇಲ್ಲ. ಮುಂದೊಂದು ದಿನ ಭಾರತದ ಈ ಸಾಫ್ಟ್ ಪವರ್ ಚೀನಾದ ಮುಖ್ಯ ನೆಲದಲ್ಲೇ ಪ್ರಭಾವ ಬೀರಿಬಿಡಬಲ್ಲದೆಂಬ ಹೆದರಿಕೆ ಅದಕ್ಕಿದೆ. ಚೀನಾದ ಈ ಭಯಕ್ಕೆ ಇತಿಹಾಸವೂ ಧ್ವನಿಗೂಡಿಸುತ್ತದೆ!
ಅಧಿಕೃತವಾಗಿ ಚೀನಾದಲ್ಲಿ ಯಾವುದೇ ಮತಾಚರಣೆಗೂ ಸರ್ಕಾರದ ಬೆಂಬಲವಿಲ್ಲ ನಿಜ. ಆದರೆ, ಮಾನವ ಸ್ವಭಾವವು ಯಾವತ್ತೂ ನಂಬಿಕೆ-ಆರಾಧನಾ ವ್ಯವಸ್ಥೆಗಳಿಗೆ ಒಳಗಾಗುವುದಕ್ಕೆ, ಮತ್ತದರಲ್ಲಿ ಮಾನಸಿಕ ನೆಮ್ಮದಿ ಹುಡುಕುವುದಕ್ಕೆ ಪ್ರಯತ್ನಿಸುತ್ತಲೇ ಇರುತ್ತದೆ. ಹಾಗಂತ ದೊಡ್ಡ ಜನವರ್ಗವೊಂದು ಆಧ್ಯಾತ್ಮಿಕ ಮಟ್ಟಕ್ಕೇರುತ್ತದೆ ಎಂದೇನೂ ಇಲ್ಲ, ಮತ್ತದು ಏಕಾಏಕಿ ಸಾರ್ವತ್ರಿಕವಾಗುವ ಪ್ರಕ್ರಿಯೆಯೂ ಅಲ್ಲ. ಆದರೆ, ಕೊನೆಪಕ್ಷ ಆಚರಣೆಗಳ ಮಟ್ಟದಲ್ಲಿ ನಂಬಿಕೆಗೆ ಅಂಟಿಕೊಳ್ಳುವುದಕ್ಕೆ ಸರಾಸರಿ ಜನಸಮೂಹ ಸಿದ್ಧವಾಗಿಯೇ ಇರುತ್ತದೆ.
ಚೀನಾದಲ್ಲೂ ಗುಪ್ತಗಾಮಿನಿಯಾಗಿ ಇಂಥದೊಂದು ಪ್ರವಾಹ ಇದೆ ಎಂದು ಆಗಿಂದಾಗ್ಗೆ ಕೆಲವು ಮಾಧ್ಯಮ ವಿಶ್ಲೇಷಣೆಗಳು ಬರುತ್ತಿರುತ್ತವೆ. ಸಮೀಕ್ಷೆಯೊಂದಕ್ಕೆ ಒಳಗಾದವರ ಪೈಕಿ ಸುಮಾರು 10 ಶೇಕಡದಷ್ಟು ಯುವಜನರು ಚೀನಾದಲ್ಲಿ ಅಧಿಕೃತವಾಗಿ ಬೌದ್ಧರೆಂದು ಗುರುತಿಸಿಕೊಳ್ಳುವುದಕ್ಕೆ ಸಿದ್ಧರಿದ್ದರೆ, ಸಮೀಕ್ಷೆಗೆ ಸಿಕ್ಕಿದವರ ಪೈಕಿ ಶೇ. 33 ಚೀನಿಯರು ತಾವು ದಿನಕ್ಕೊಂದಾವರ್ತಿ ತಪ್ಪದೇ ಊದಿನಕಡ್ಡಿ ಬೆಳಗುವುದಾಗಿ ಹೇಳಿದ್ದಾರೆ. ಇದು ಪ್ಯೂ ರೀಸರ್ಚ್ ವರದಿಯೊಂದರ ಸಾರ. ಇನ್ನು, ಗಾರ್ಡಿಯನ್ ವರದಿಯೊಂದರ ಪ್ರಕಾರ ಚೀನಾದ ಮೇಲ್ಮಧ್ಯಮ ವರ್ಗದ ಜನ ಟಿಬೆಟಿಯನ್ ಬೌದ್ಧ ವಿಚಾರಗಳತ್ತ ಆಕರ್ಷಿತರಾಗುತ್ತಿದ್ದಾರೆ. ನಿರೀಶ್ವರವಾದವನ್ನು ಸಾರುವ ಕಮ್ಯುನಿಸ್ಟ್ ವ್ಯವಸ್ಥೆಯ ನಡುವೆಯೇ ಭವಿಷ್ಯ ಹೇಳುವ ಕೆಫೆಗಳು, ಧ್ಯಾನ ಮಾಡಿಸುವ ಕ್ಲಬ್ಬುಗಳು ಇವೆಲ್ಲವೂ ಜನಪ್ರಿಯವಾಗುತ್ತಿವೆ.
ಇವುಗಳ ನಮೂನೆಗಳು ಹೇಗೆಯೇ ಇದ್ದಿರಲಿ. ಕೊನೆಗೂ ಇವೆಲ್ಲ ಜನರನ್ನು ಬೌದ್ಧ ಮತಕ್ಕೆ ಜೋಡಿಸುತ್ತಿವೆ ಹಾಗೂ ಅದರ ವ್ಯಾಖ್ಯಾನ ಶಕ್ತಿ ಭಾರತದ ಬಳಿ ಇದೆ ಎಂಬಂಶವೇ ಚೀನಾದ ದುಗುಡಕ್ಕೆ ನಿಜ ಕಾರಣ. ಪ್ರಾಚೀನ ಭಾರತದಿಂದ ಚೀನಾ ಪ್ರವೇಶಿಸಿದ ಬೌದ್ಧಮತದ ವಿಚಾರಗಳು ಹಾಗೂ ಅದರ ಸುತ್ತಲಿನ ರಾಜಕೀಯಗಳು ಆ ಕಾಲದಲ್ಲಿ ಚೀನಾದಲ್ಲಿ ಏನೆಲ್ಲ ಬದಲಾವಣೆ ಪ್ರೇರೇಪಿಸಿದ್ದವೆಂಬುದನ್ನು ವಿವರಿಸಿದರೆ ಅದೊಂದು ಬೇರೆಯದೇ ಕತೆಯಾಗುತ್ತದೆ. ಮುಂದೆ ಅವಕಾಶವಾದಾಗ ಅದನ್ನೂ ಗಮನಿಸೋಣ.
- ಚೈತನ್ಯ ಹೆಗಡೆ
cchegde@gmail.com
Advertisement