
ಇದೊಂದು ಪದಪುಂಜವಿದೆಯಲ್ಲ? ಎಂಥೆಂಥವರಿಗೆಲ್ಲ ಮಾರ್ಕೆಂಟಿಂಗ್ ಸರಕಾಗಿದೆ ಎಂಬ ಅಚ್ಚರಿ ಹುಟ್ಟಿಸುತ್ತದೆ. ತಮ್ಮ ದೇಶದಲ್ಲಿ ನೇಟಿವ್ ಅಮೆರಿಕನ್ನರ ಮಾರಣಹೋಮ ಮಾಡಿ ಅಧಿಕಾರ ಹಿಡಿದುಕೊಂಡ ಅಮೆರಿಕನ್ನರೂ ಡೆಮಾಕ್ರಸಿ ಎಂಬ ಶಬ್ದವನ್ನು ಢಾಳಾಗಿ ಬಳಸುತ್ತಾರೆ. ತಮ್ಮಲ್ಲೇ ಡೆಮಾಕ್ರಸಿ ಹುಟ್ಟಿತು ಎನ್ನುವ ಯುರೋಪಿನ ದೇಶಗಳು ಇತರರ ಹಕ್ಕುಗಳನ್ನು ಕಸಿದು ತಮ್ಮ ವಸಾಹತುಗಳನ್ನಾಗಿ ಮಾಡಿಕೊಳ್ಳುವುದು ಹೇಗೆ ಎಂಬುದರಲ್ಲೇ ಚರಿತ್ರೆಯನ್ನು ಸವೆಸಿದ್ದಾರೆ. ಅಮೆರಿಕದ ನೇತೃತ್ವದಲ್ಲಿ ಜಗತ್ತಿನ ಯಾವ್ಯಾವುದೋ ಭಾಗಗಳ ಜನತಂತ್ರವನ್ನೇ ಬುಡಮೇಲಾಗಿಸಿ ಸರ್ವಾಧಿಕಾರಿಗಳನ್ನು ಇಟ್ಟ ಇತಿಹಾಸವಿರುವವರೂ ಪ್ರಜಾಪ್ರಭುತ್ವದ ಮೌಲ್ಯ, ವ್ಯಕ್ತಿ ಸ್ವಾತಂತ್ರ್ಯ, ಸಮಾನತೆ ಎಂದೆಲ್ಲ ತಮ್ಮನ್ನು ತಾವು ನೈತಿಕತೆಯ ಮಹಾಪೀಠದಲ್ಲಿರಿಸಿಕೊಂಡು ಮಾತನಾಡುತ್ತಾರೆ.
ನಮ್ಮ ದೇಶ, ನಾಡಿನಲ್ಲಿ ಸಹ ಈ ಸೋಗಲಾಡಿತನವನ್ನು ಸ್ಪಷ್ಟವಾಗಿ ಕಾಣಬಹುದು. ಇವತ್ತು ಯಾವ ಬುದ್ಧಿಜೀವಿ ವಲಯದಲ್ಲಿ ಗುರುತಿಸಿಕೊಂಡವರು ಪ್ರಜಾಪ್ರಭುತ್ವವು ಸರ್ವಾಧಿಕಾರವಾಗಿಬಿಡುತ್ತಿದೆ ಎಂದು ಮಾತನಾಡುತ್ತಿದ್ದಾರೋ ಅವರಲ್ಲಿ ಹೆಚ್ಚಿನವರ್ಯಾರೂ ಹಾಗೆ ನಿಜಕ್ಕೂ ಆಗಿದ್ಯಾವಾಗ ಎಂಬ ಬಗ್ಗೆ ಮಾತನಾಡುವುದಿಲ್ಲ. ತಾವು ಬೆಂಬಲಿಸುವ ಮಾರ್ಕ್ಸವಾದಿ ಚಿಂತನೆಗಳು ಹೆಚ್ಚಿನ ಕಡೆ ಪ್ರಜಾಪ್ರಭುತ್ವವನ್ನು ತುಳಿದು ಏಕಚಕ್ರಾಧಿಪತ್ಯವನ್ನೇ ಹುಟ್ಟುಹಾಕಿವೆ ಎಂಬುದರ ಬಗ್ಗೆಯೂ ಅವರಿಗೆ ಕುರುಡುಗಣ್ಣು. ಸಂವಿಧಾನಕ್ಕೆ ಅಪಾಯ ಎದುರಾಗಿದೆ ಎಂಬ ರಾಜಕೀಯದ ಮಾತನಾಡುವವರು, ಸ್ವಾತಂತ್ರ್ಯೋತ್ತರ ಭಾರತದಲ್ಲಿ ಹಾಗೆ ಸಂವಿಧಾನವು ಕುಸಿದ ಕಾಲ ಯಾವುದಾಗಿತ್ತು ಎಂಬುದರ ಬಗ್ಗೆ ತುಟಿಬಿಚ್ಚುವುದಿಲ್ಲ.
ಇವೆಲ್ಲದರ ಸಂಪೂರ್ಣ ದರ್ಶನವಾಗಿದ್ದು 1975ರಲ್ಲಿ ಇಂದಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿ ಪ್ರಕರಣದಲ್ಲಿ. ಈ ಲೇಖಕನೂ ಸೇರಿದಂತೆ, ಇದನ್ನು ಓದುತ್ತಿರುವ ಹೆಚ್ಚಿನವರು ಆಗ ಹುಟ್ಟಿರಲಿಕ್ಕಿಲ್ಲ. ಆದರೆ, ನಾವು ನಂತರ ಓದಿಕೊಂಡ ಇತಿಹಾಸಗಳಲ್ಲಿ ಇಲ್ಲವೇ ಕತೆ-ಕಾದಂಬರಿಗಳಲ್ಲಿ, ಸಿನಿಮಾಗಳಲ್ಲಿ ಈ ಬಗ್ಗೆ ಕಥನವೊಂದು ನಮ್ಮನ್ನು ತಾಗಬೇಕಿತ್ತಲ್ಲವೇ? ಅದೇಕೆ ಆಗಿಲ್ಲ ಎಂಬುದಕ್ಕೆ ಉತ್ತರವೆಂದರೆ, ಅವತ್ತಿಗೆ ಬಂಡಾಯ, ಸಾಮಾಜಿಕ ಅಸಮಾನತೆ ವಿರುದ್ಧ ಸಾಹಿತ್ಯ ಸೃಷ್ಟಿ, ಊಳಿಗಮಾನ್ಯ ವ್ಯವಸ್ಥೆ ವಿರುದ್ಧದ ಧ್ವನಿ ಎಂದು ಮುಂತಾಗಿ ತಮ್ಮನ್ನು ಕ್ರಾಂತಿಕಾರಿ ಬರಹಗಾರರಾಗಿ ಬಿಂಬಿಸಿಕೊಂಡ ಅಗ್ರಮಾನ್ಯರ್ಯಾರೂ ಹೆಚ್ಚಿನದಾಗಿ ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ಮುಖ್ಯ ಭೂಮಿಕೆಯನ್ನೇನೂ ವಹಿಸಿಕೊಳ್ಳಲಿಲ್ಲ. ಅದು ಹೋಗಲಿ, 1977ರಲ್ಲಿ ತುರ್ತು ಪರಿಸ್ಥಿತಿ ತೆರವಾದ ನಂತರ ಇಷ್ಟು ವರ್ಷಗಳಲ್ಲಿ ಆ ಬಗ್ಗೆ ಉತ್ತಮ ಪುಸ್ತಕವನ್ನೋ, ನಾಟಕವನ್ನೋ, ಸಿನಿಮಾವನ್ನೋ ಸೃಷ್ಟಿಸುವ ಮೂಲಕವಾದರೂ ‘ಅಧಿಕಾರಕ್ಕೆ ಎದುರಾಗಿ ಮಾತನಾಡುವ ಧೈರ್ಯ’ ತಮಗಿದೆ ಎಂಬುದನ್ನು ಬಂಡಾಯವೀರರ್ಯಾರೂ ಸಾಬೀತು ಮಾಡಲಿಲ್ಲ. ಕೆಲವರಂತೂ, “ಎಮರ್ಜೆನ್ಸಿ ಚೆನ್ನಾಗಿಯೇ ಇತ್ತು. ರೈಲುಗಳು ಸರಿ ಸಮಯಕ್ಕೆ ಬರುತ್ತಿದ್ದವು” ಎಂದೆಲ್ಲ ವ್ಯಾಖ್ಯಾನ ಕಟ್ಟಿದ್ದಾರೆ.
ಇವನ್ನೆಲ್ಲ ಈಗ ನೆನಪಿಸಿಕೊಳ್ಳುತ್ತಿರುವುದೇಕೆ? ಆ ಕರಾಳ ದಿನಗಳು ಹಾಗೂ ಅಲ್ಲಿ ನಿಜಕ್ಕೂ ಹೋರಾಡಿದ ಸಾಮಾನ್ಯರ ವಿವರಗಳಿರುವ ಪುಸ್ತಕವೊಂದು ಈಗ (ಜೂನ್ 25, 2025) ಮರುಮುದ್ರಣವಾಗಿ ಬಿಡುಗಡೆಯಾಗುತ್ತಿದೆ. ರಾಷ್ಟ್ರೋತ್ಥಾನ ಸಾಹಿತ್ಯ 1977ರಲ್ಲೇ ಪ್ರಕಟಿಸಿದ್ದ ‘ಭುಗಿಲು’ ಪುಸ್ತಕದ ಪ್ರತಿಗಳು ಬಹಳ ಹಿಂದೆಯೇ ಖಾಲಿಯಾಗಿದ್ದವು. ಅದೀಗ ಮತ್ತೆ ಓದುಗರ ಕೈಗೆ ಸಿಗುತ್ತಿರುವುದು ಬಹುಳ ಪ್ರಸ್ತುತವೇ.
ಇವತ್ತಿಗೆ ಮಾತು-ಮಾತಿಗೆಲ್ಲ ಪ್ರಜಾಪ್ರಭುತ್ವ, ಸಂವಿಧಾನ ಎಂಬ ಪದಗಳನ್ನು ಯಥೇಚ್ಛವಾಗಿ ಬಳಸುತ್ತ ಇರುವ ಅನೇಕ ಹಿರಿ ಸಾಹಿತಿ-ಚಿಂತಕರೆಲ್ಲ ಅವತ್ತು ಸುಮ್ಮನಿದ್ದರು ಎಂದು ಬೊಟ್ಟು ಮಾಡುವ ಒಂದು ಕಾರಣಕ್ಕಾಗಿಯೇ ಈ ಪುಸ್ತಕ ಪ್ರಸ್ತುತವಾಗುತ್ತದೆ ಎಂದು ಖಂಡಿತ ಅಲ್ಲ. ಆಫ್ಕೋರ್ಸ್, ಶಿವರಾಮ ಕಾರಂತರು, ಅಡಿಗರು ಸೇರಿದಂತೆ ಹಲವು ಪ್ರಮುಖರು ತುರ್ತು ಪರಿಸ್ಥಿತಿ ವಿರುದ್ಧ ಧ್ವನಿ ಎತ್ತಿದ ಬಗೆಯನ್ನೂ ಪುಸ್ತಕವು ದಾಖಲಿಸಿದೆ. ಇದರಾಚೆಗೆ, ಭುಗಿಲಿನಲ್ಲಿ ಸಿಗುವ ಚಿತ್ರಣ ಏನೆಂದರೆ, ತಮ್ಮ ದೈನಂದಿನ ಕಾಯಕ ಮಾಡಿಕೊಂಡಿದ್ದ ದೊಡ್ಡ ಜನಸಮೂಹವೊಂದು, ತನ್ನ ವೈಯಕ್ತಿಕ ನಷ್ಟವನ್ನು ಲೆಕ್ಕಿಸದೇ, ಅವತ್ತಿನ ಅತಿ ಬಲಶಾಲಿ ನಾಯಕಿಯಾಗಿದ್ದ ಇಂದಿರಾ ಗಾಂಧಿಯನ್ನು ವಿರೋಧಿಸಿತೆಂಬುದು. ವರ್ಷಗಟ್ಟಲೇ ಜೈಲು ಸೇರಿದ ಜನರೆಷ್ಟು? ನೌಕರಿ ಕಳೆದುಕೊಂಡವರೆಷ್ಟು? ವಿದ್ಯೆಯನ್ನು ಅರ್ಧಕ್ಕೆ ಬಿಡಬೇಕಾಗಿ ಬಂದವರೆಷ್ಟು? ಜೈಲಿನಲ್ಲಿ ಕ್ರೂರ ಹಿಂಸೆ ಮತ್ತು ಅವಮಾನಗಳಿಗೆ ತುತ್ತಾದವರೆಷ್ಟು?
ಹೀಗೆ ಜನಸಾಮಾನ್ಯರು ಎಬ್ಬಿಸಿದ ಕಿಚ್ಚಿನ ಬಗ್ಗೆ ವಿವರಗಳನ್ನು ಕಟ್ಟಿಕೊಡುವ ಕಾರಣಕ್ಕೆ ‘ಭುಗಿಲು’ ಮುಖ್ಯವಾಗುತ್ತದೆ. ಬಂಡಾಯದ ಬರಿ ಭಾಷಣಗಳನ್ನು ಮಾಡಿದವರಿಂದ ಹುಟ್ಟಿದ ಭುಗಿಲು ಇದಾಗಿರಲಿಲ್ಲ ಎಂಬುದು ಒಂದು ಆಯಾಮ. ಆದರೆ, ‘ಭುಗಿಲು’ ಪುಸ್ತಕದಲ್ಲಿ ಅನಾವರಣವಾಗಿರುವ ಕೆಲವು ವಿವರಗಳನ್ನು ಹಿನ್ನೆಲೆಯಲ್ಲಿ ಇಟ್ಟುಕೊಂಡು, “ನಾವೇನಾದರೂ ಆ ಜಾಗದಲ್ಲಿದ್ದರೆ ನಮ್ಮ ನೌಕರಿ-ಸಂಸಾರಗಳನ್ನೆಲ್ಲ ಅಪಾಯಕ್ಕೊಡ್ಡಿ ನಿಜಕ್ಕೂ ಆಂದೋಲನದಲ್ಲಿ ಭಾಗಿಯಾಗುತ್ತಿದ್ದೆವಾ” ಎಂಬ ಪ್ರಶ್ನೆಯನ್ನೂ ಹಾಕಿಕೊಳ್ಳಬೇಕಾಗುತ್ತದೆ. “ತುರ್ತು ಪರಿಸ್ಥಿತಿಯೋ, ಇನ್ನೊಂದೋ…ಎಲ್ಲರಿಗೂ ಆಗುವುದು ನಮಗೂ ಆಗುತ್ತದೆ ಬಿಡು” ಎಂಬ ಯೋಚನೆ ಬಂದರಷ್ಟೇ ಸಾಕಿತ್ತಲ್ಲವೇ? ಆದರೆ, ಸಹಸ್ರ ಸಹಸ್ರ ಸಂಖ್ಯೆಯ ಮಂದಿ ಆ ಯೋಚನೆಯನ್ನು ಮೀರಿ ಹೋರಾಟಕ್ಕೆ ಸಮರ್ಪಿಸಿಕೊಂಡರೆಂಬುದನ್ನು ಸಮರ್ಥವಾಗಿ ದಾಖಲಿಸಿರುವುದರಲ್ಲೇ ಭುಗಿಲು ಪುಸ್ತಕದ ಹೆಚ್ಚುಗಾರಿಕೆ ಇದೆ.
ಎಮೆರ್ಜೆನ್ಸಿ ಬಗ್ಗೆ ನಂತರದ ದಿನಗಳಲ್ಲಿ ಪುಸ್ತಕಗಳು ಬಂದಿಲ್ಲವೆಂದೇನಿಲ್ಲ. ಅಲ್ಲೆಲ್ಲ ಒಟ್ಟಾರೆ ಚೌಕಟ್ಟಿನ ಚಿತ್ರಣವೊಂದು ಸಿಗುತ್ತದೆ. ಎಮರ್ಜೆನ್ಸಿ ಎಂದಾಗ ಜಯಪ್ರಕಾಶ ನಾರಾಯಣ, ಜಾರ್ಜ್ ಫರ್ನಾಂಡೀಸ್, ವಾಜಪೇಯಿ, ಆಡ್ವಾಣಿ, ಸ್ನೇಹಲತಾ ಪ್ರಕರಣ ಈ ಸುತ್ತಲಿನ ವಿವರಗಳು ಪುಸ್ತಕ ಹಾಗೂ ಅಂತರ್ಜಾಲ ಮಾಹಿತಿಗಳಲ್ಲಿ ಹೆಚ್ಚಿನದಾಗಿ ಸಿಗುತ್ತವೆ. ಇವೆಲ್ಲ ಆಯಾಮಗಳೂ ಪ್ರಮುಖವೇ. ಭುಗಿಲು ಸಹ ದೇವೇಗೌಡರ ಪ್ರತಿರೋಧದ ಮಾತುಗಳಿಂದ ಹಿಡಿದು ಈ ಎಲ್ಲವನ್ನೂ ಸ್ಪರ್ಶಿಸಿದೆ. ಆದರೆ ಇದರಾಚೆಗೆ ಆಂದೋಲನದಲ್ಲಿ ಧುಮುಕಿದ ಸಾಮಾನ್ಯರಿದ್ದರಲ್ಲ. ಸಾರ್ವಜನಿಕ ಜೀವನದ ವರ್ಚಸ್ಸು-ಪ್ರಸಿದ್ಧಿಗಳ್ಯಾವುದರ ಬಲವಿಲ್ಲದೆಯೂ ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟಕ್ಕೆ ಧುಮುಕಿದ ಲಕ್ಷಾಂತರ ಮಂದಿ ಇದ್ದರಲ್ಲ? ತುರ್ತು ಪರಿಸ್ಥಿತಿ ಅವಧಿಯಲ್ಲಿ ದೇಶಾದ್ಯಂತ ಬಂಧಿತರಾಗಿದ್ದ 1,30,000 ಮಂದಿಯಲ್ಲಿ 1,00,000 ಮಂದಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರೇರಣೆ ಪಡೆದ ಸಾಮಾನ್ಯರೇ ಆಗಿದ್ದರು. ಮಿಸಾ ಎಂಬ ಅತಿ ಕಠಿಣ ಕಾಯ್ದೆ ಅಡಿ ತುರ್ತು ಪರಿಸ್ಥಿತಿ ವೇಳೆ ಬಂಧಿಸಲಾಗಿದ್ದ 30,000 ಮಂದಿ ಪೈಕಿ 25,000ದಷ್ಟು ಜನ ಆರೆಸ್ಸೆಸ್ ಸಂಪರ್ಕ ಹೊಂದಿದ್ದವರೇ. ಹೀಗೆ ಬೃಹತ್ ಶಕ್ತಿಯೊಂದಕ್ಕೆ ಎದುರಾಗಿ ಸೆಣೆಸಿದ, ನಿಜಾರ್ಥದಲ್ಲಿ ಸಂವಿಧಾನ - ವ್ಯಕ್ತಿ ಸ್ವಾತಂತ್ರ್ಯಗಳಿಗಾಗಿ ತಮ್ಮನ್ನು ಅರ್ಪಿಸಿಕೊಂಡ ಇಂಥ ಹಲವರ ಝಲಕ್ ಅನ್ನು ದಾಖಲಿಸುವಲ್ಲಿ ಭುಗಿಲು ಪುಸ್ತಕದ ಅನನ್ಯತೆ ಇದೆ.
ಹಲವು ಕಡೆಗಳಲ್ಲಿ ಆಂದೋಲನ ನಿರತರನ್ನು ಪತ್ತೆಮಾಡಿ ಪೊಲೀಸರು ಅವರನ್ನು ಜೈಲಿನಲ್ಲಿ ಹಿಂಸೆಗೆ ತಳ್ಳಿದ್ದರ ವಿವರಗಳನ್ನೂ ಪುಸ್ತಕವು ದಾಖಲಿಸಿದೆ. ತುರ್ತು ಪರಿಸ್ಥಿತಿ ವಿರುದ್ಧ ಭೂಗತ ಸಂಘಟನೆಯಲ್ಲಿದ್ದ ಯುವಕರನ್ನು ಹಿಡಿಯುವುದಕ್ಕೆ ಅವರ ಮನೆಗಳಿಗೆ ಬಂದಾಗ ಅವರು ಸಿಗದಿದ್ದಾಗ, ತಂದೆ-ಚಿಕ್ಕಪ್ಪ ಹೀಗೆ ಕೈಗೆ ಸಿಕ್ಕಿದವರನ್ನೆಲ್ಲ ಪೊಲೀಸರು ದ್ವೇಷದಿಂದ ಥಳಿಸಿದ್ದರ ಕ್ರೌರ್ಯವೂ ಇಲ್ಲಿ ದಾಖಲಾಗಿದೆ. ಕೆಲವೆಡೆ, ಆಂದೋಲನ ನಿರತ ಯುವಕರ ಬಟ್ಟೆ ಬಿಚ್ಚಿಸಿ ಮೆರವಣಿಗೆ ಮಾಡಿದ ಘಟನೆಗಳನ್ನೂ ಪುಸ್ತಕವು ಒಳಗೊಂಡಿದೆ. ಕಷ್ಟಕಾಲದಲ್ಲಿ, ಸಂಘರ್ಷದ ನಡುವಿನಲ್ಲಿ ತಮ್ಮ ವ್ಯಕ್ತಿತ್ವವನ್ನು ಸಾಣೆ ಹಚ್ಚಿಸಿಕೊಂಡು ಹೊಳೆಯಿಸಿಕೊಂಡವರ ವಿವರಗಳೂ ಮನಕಲಕುತ್ತವೆ.
ತುಮಕೂರಿನಲ್ಲಿ ಜೈನ ವ್ಯಾಪಾರಿಯೊಬ್ಬರ ಮಗನಿಗೆ ಭೂಗತ ಆಂದೋಲನದ ಸಂಘಟನೆ ಹಾಗೂ ಅದಕ್ಕಾಗಿ ನಿಧಿ ಸಂಗ್ರಹದ ಜವಾಬ್ದಾರಿ. ಆದರೆ, ಅದೇ ಸಮಯಕ್ಕೆ ಅವರ ತಂದೆ ಅಪಾರ ನಷ್ಟ ಅನುಭವಿಸಿ ನಾಪತ್ತೆಯಾಗಿದ್ದರು. ಮನೆಯಲ್ಲಿ ಹೊತ್ತಿನ ಊಟಕ್ಕೂ ತತ್ವಾರವಿದ್ದ ಸಂದರ್ಭದಲ್ಲೂ ಆ ಯುವಕ ತನ್ನ ಕೈಗೆ ಸೇರುತ್ತಿದ್ದ ಸಾವಿರಾರು ರುಪಾಯಿಗಳಲ್ಲಿ ಒಂದು ಪೈಸೆಯನ್ನೂ ವೈಯಕ್ತಿಕಕ್ಕೆ ಎತ್ತಿಟ್ಟುಕೊಳ್ಳದೇ ತುರ್ತು ಪರಿಸ್ಥಿತಿಯ 21 ತಿಂಗಳೂ ತನ್ನ ಕರ್ತವ್ಯ ಮೆರೆದ.
ಅದೇ ಜಿಲ್ಲೆಯ ಭೂಗತ ಸಂಚಾಲಕರಾಗಿದ್ದ ಡಾ. ಪ್ರಹ್ಲಾದ ಜಾಲಿಹಾಳರು ತಮ್ಮ ಸಹವರ್ತಿಯ ಪತ್ನಿ ಹೆರಿಗೆ ನಂತರದ ಸಮಸ್ಯೆಗಳಿಂದ ಹಾಸಿಗೆ ಹಿಡಿದಿರುವ ಸುದ್ದಿ ಕೇಳಿ ನೋಡಲು ಹೋಗಿದ್ದರು. ಚಿಕ್ಕ ಮನೆಯಲ್ಲಿ ಆಕೆ ಗಂಭೀರ ಸ್ಥಿತಿಯಲ್ಲಿದ್ದರು, ಮಾತನಾಡುವುದಕ್ಕೂ ಕಷ್ಟಪಡುತ್ತಿದ್ದರು. ಆದರೂ ಸನ್ನೆ ಮಾಡಿ ಪ್ರಹ್ಲಾದರಿಗೆ ಏನೋ ಎಚ್ಚರಿಸುತ್ತಿದ್ದರು. ಆಗವರ ಪತಿ ಹೇಳಿದರು- “ಈಗೆರಡು ದಿನಗಳ ಹಿಂದೆ ಪೊಲೀಸರು ನಿಮ್ಮನ್ನು ವಿಚಾರಿಸಿಕೊಂಡು ಬಂದಿದ್ದರು. ಹೀಗಾಗಿ ಬಾಗಿಲು ಮುಚ್ಚಿ ಎಂದು ಸನ್ನೆ ಮಾಡುತ್ತಿದ್ದಾಳೆ” ಎಂದು! ಹೀಗೆ, ಅವತ್ತಿನ ದಿನಗಳಲ್ಲಿ ತಮ್ಮ ಅನಾನುಕೂಲ ಪಕ್ಕಕ್ಕಿಟ್ಟು ಲೋಕತಂತ್ರದ ಸೇನಾನಿಗಳಿಗೆ ಅನ್ನ-ಆಶ್ರಯ ಕೊಟ್ಟ ಅನಾಮದೇಯರೆಷ್ಟೋ ಏನೋ.
ಸಂವಿಧಾನ, ಪ್ರಜಾಪ್ರಭುತ್ವಗಳ ರಕ್ಷಣೆ ಬಗ್ಗೆ ಮೈಕಿನಲ್ಲಿ ಮಾತಾಡುವವರು ಸಾವಿರ ಸಿಕ್ಕಾರು. ಆದರೆ ಅದನ್ನು ಅನುಷ್ಠಾನ ಮಾಡುವುದಕ್ಕೆ ತೆರಬೇಕಿರುವುದೇನು, ಆ ಯೋಗ್ಯತೆ ಇರುವುದು ಯಾರಿಗೆ ಎಂಬುದನ್ನು ಮನದಟ್ಟಾಗಿಸಿಕೊಳ್ಳುವುದಕ್ಕೆ ಭುಗಿಲು ಓದಬೇಕು!
- ಚೈತನ್ಯ ಹೆಗಡೆ
cchegde@gmail.com
Advertisement