
ಕಳೆದ ವಾರದ ಅಂಕಣವು ಚೀನಾ ಮತ್ತು ಭಾರತಗಳ ನಡುವಿನ ಜನಸಂಖ್ಯಾ ಬೆಳವಣಿಗೆಯ ಒಳನೋಟವೊಂದನ್ನು ಪ್ರಸ್ತುತಗೊಳಿಸುತ್ತ ಮುಗಿದಿತ್ತು. ಇವತ್ತಿಗೆ ಚೀನಾದ ಜನಸಂಖ್ಯೆಯ ಸರಾಸರಿ ವಯೋಮಾನ 39 ವರ್ಷಗಳಾದರೆ, ಭಾರತದ್ದು 28. ಇದೇ ಟ್ರೆಂಡ್ ಮುಂದುವರಿದರೆ 2044ರಲ್ಲಿ ಚೀನಾ ಜನಸಂಖ್ಯೆಯ ಸರಾಸರಿ ವಯೋಮಾನ 50 ವರ್ಷಗಳು. ಇದರರ್ಥ ಅದರ ಜನಸಂಖ್ಯೆಯ ಅರ್ಧ ಪ್ರಮಾಣಕ್ಕೆ 50ರ ಪ್ರಾಯವಾಗಿರುತ್ತದೆ ಎಂದರ್ಥ. ಹೀಗಾಗಿ ಜಾಗತಿಕ ಕಾರ್ಯತಂತ್ರದ ದೃಷ್ಟಿಯಿಂದ ಭಾರತವು ತನ್ನ ಜನನ ಪ್ರಮಾಣದ ಓಘವನ್ನು ಸರಿಯಾಗಿರಿಸಿಕೊಂಡು ಈ ನಡುವಿನ 10-15 ವರ್ಷಗಳನ್ನು ನಿಭಾಯಿಸಬೇಕಿದೆ ಎಂಬುದೊಂದು ಅಭಿಮತ.
ಇದಕ್ಕೆ ಕೆಲವು ಪ್ರತಿಕ್ರಿಯೆಗಳೂ ಬಂದಿವೆ. ದೇಶದ ಒಟ್ಟಾರೆ ಜನಸಂಖ್ಯೆ ಬಗ್ಗೆ ಯೋಚಿಸಬೇಕೇ ಅಥವಾ ಸಮುದಾಯ ನಿರ್ದಿಷ್ಟವೇ ಎಂಬುದೊಂದು ಪ್ರಶ್ನೆ. ಇನ್ನೊಂದು, ಯಂತ್ರ ಮತ್ತು ತಂತ್ರಜ್ಞಾನಗಳೇ ಯುದ್ಧಗಳಲ್ಲಿ ದೊಡ್ಡಮಟ್ಟದ ಕಾರ್ಯ ನಿರ್ವಹಿಸುತ್ತಿರುವಾಗ ಈ ಜನಸಂಖ್ಯಾ ಸಮೀಕರಣಗಳ ಬಗ್ಗೆ ನಿಜಕ್ಕೂ ತಲೆಕೆಡಿಸಿಕೊಳ್ಳಬೇಕೇ ಎನ್ನುವುದು. ಇವುಗಳಿಗೆ ಉತ್ತರಿಸುತ್ತಲೇ, ನಾವು ತುಂಬ ಪ್ರಗತಿಪರ, ಆಧುನಿಕ ಚಿಂತನೆಯವು ಎಂದೆಲ್ಲ ಅಂದುಕೊಳ್ಳುತ್ತಿರುವ ಪಾಶ್ಚಾತ್ಯ ದೇಶಗಳು ಸಹ ಜನಸಂಖ್ಯೆ ಬಗ್ಗೆ ತಲೆಕೆಡಿಸಿಕೊಂಡಿರುವುದೇಕೆ ಹಾಗೂ ಈ ನಿಟ್ಟಿನಲ್ಲಿ ಅವು ಆಡಿರುವ ಆಟಗಳೇನು ಎಂಬೆಲ್ಲದರ ಕತೆಗಳನ್ನೂ ಅರಿಯೋಣ.
ಸರಿ-ತಪ್ಪುಗಳಾಚೆ ಕಾರ್ಯತಂತ್ರವಾಗಿ ಜನಸಂಖ್ಯೆ
ಜನಸಂಖ್ಯೆ ಸಂಬಂಧಿಸಿ ಎರಡು ವಿರುದ್ಧ ಬಿಂದುಗಳಲ್ಲಿರುವ ಅಭಿಪ್ರಾಯಗಳು ಸಾಮಾನ್ಯವಾಗಿ ಚರ್ಚೆಯಾಗುತ್ತವೆ. ಮೊದಲನೆಯದು, “ಭೂಮಿಗೆ ಇನ್ನಷ್ಟು ಭಾರ ಸೇರಿಸಬೇಕಾ, ದೇಶದಲ್ಲಿ ನೂರೈವತ್ತು ಕೋಟಿಯ ಹತ್ತಿರ ಹತ್ತಿರ ನುಗ್ಗುತ್ತಿರುವ ಓಟದಲ್ಲಿ ನಮ್ಮದೊಂದಿರಲಿ ಅಂತೇಕೆ ಸೇರಿಸಬೇಕು? ಜಗತ್ತಿಗೆ ಈಗ ಜನರ ಸೇರ್ಪಡೆಯಂತೂ ಖಂಡಿತ ಬೇಕಿಲ್ಲ.” ಎಂಬೆಲ್ಲ ಆದರ್ಶದ ಚಿಂತನೆಗಳು ಒಂದೆಡೆ. ನಮ್ಮ ಬಲ ಮತ್ತು ಅಸ್ತಿತ್ವಗಳು ಗಟ್ಟಿಗೊಳ್ಳುವುದೇ ಜನೋತ್ಪಾದನೆಯಲ್ಲಿ ಎಂಬ ಪ್ರತಿಪಾದನೆ ಇನ್ನೊಂದು ದಡದ್ದು.
ವಾಸ್ತವ ಏನೆಂದರೆ, ಜಗತ್ತಿನಲ್ಲಿ 800 ಕೋಟಿ ಜನಸಂಖ್ಯೆಯಿದೆ ಹಾಗೂ ಭಾರತದಲ್ಲಿ 135 ಕೋಟಿಗೆ ಮೀರಿದ ಜನಸಂಖ್ಯೆ ಇದೆ ಎಂಬ ಸಂಖ್ಯೆಗಳನ್ನಷ್ಟೇ ಮುಂದಿಟ್ಟುಕೊಂಡು ಜನಸಂಖ್ಯೆ ಕೆಟ್ಟದ್ದು ಹಾಗೂ ಈಗ ಅಗತ್ಯವಿಲ್ಲದ್ದು ಎಂಬ ನಿರ್ಧಾರಕ್ಕೆ ಬರಲಾಗುವುದಿಲ್ಲ. ಏಕೆಂದರೆ, ಒಂದುಮಟ್ಟದಲ್ಲಿ ಯುವರಕ್ತ ಜನಸಂಖ್ಯೆಗೆ ಸೇರುತ್ತಲೇ ಇರಬೇಕು. ಬೌದ್ಧಿಕ ಬಲ ಹಾಗೂ ಭುಜಬಲಗಳೆರಡರ ಅಭಿವೃದ್ಧಿ ಮತ್ತು ಅಪ್ಡೇಟ್ ಕಾರ್ಯಕ್ಕೆ ಇದು ಅಗತ್ಯ. ಕೇವಲ ಸೇನೆಗೆ ಸೇರುವುದಕ್ಕೆ ಯುವಕರು ಬೇಕು ಎಂದಲ್ಲ, ಡ್ರೋನ್-ಕ್ಷಿಪಣಿಗಳನ್ನೇ ಬಳಸಿ ತಂತ್ರಜ್ಞಾನದ ಯುದ್ಧ ಹೂಡುವುದಕ್ಕೇ ಆದರೂ ಹೊಸ ಚಿಂತನೆಯ ಯುವ ಜನಾಂಗ ಆಗಾಗ ಕೆಲಸದ ಪಡೆಗೆ ಸೇರುತ್ತಲೇ ಇರಬೇಕಲ್ಲವೇ? ವಯಸ್ಸಾದವರ ನಾಯಕತ್ವ, ಅವರ ಜೀವನಾನುಭವ ಎಲ್ಲವೂ ಉತ್ತಮ ಸಂಗತಿಗಳೇ. ಆದರೆ, ಅನುಷ್ಠಾನ ಮಾರ್ಗದಲ್ಲಿ ಯುವಜನಸಂಖ್ಯೆ ಇರದಿದ್ದರೆ ದೇಶದ ಅಂತಃಸತ್ವ ಸೊರಗುತ್ತದೆ. ಕೆಲವೊಂದು ನಿರ್ದಿಷ್ಟ ಆಯಾಮಗಳಲ್ಲಿ “ಬೂಟ್ಸ್ ಆನ್ ದಿ ಗ್ರೌಂಡ್” ಸಹ ಮುಖ್ಯವಾಗುತ್ತದೆ. ಉದಾಹರಣೆಗೆ, ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಪಡಿಸಿಕೊಳ್ಳುವುದಕ್ಕೆ ಬಹಳ ದೊಡ್ಡಮಟ್ಟದಲ್ಲಿ ಸೈನಿಕರನ್ನು ಬಳಸದೇ ತಂತ್ರಜ್ಞಾನವನ್ನೇ ನೆಚ್ಚಿಕೊಳ್ಳುವುದು ಸಾಧ್ಯವಾಗಬಹುದೇನೋ. ಆದರೆ, ಆ ಭೂಭಾಗ ಪುನಃ ಭಾರತಕ್ಕೆ ಬಂದಾಗ ಕೇವಲ ತಂತ್ರಜ್ಞಾನವನ್ನಿಟ್ಟುಕೊಂಡು ಅದನ್ನು ನಿಭಾಯಿಸುತ್ತೇವೆ ಎನ್ನಲಾಗದು. ಅಲ್ಲಿ ನಮ್ಮ ದೇಶದ ಜನಸಂಖ್ಯೆ ಇರಬೇಕಾಗುತ್ತದೆ.
ಚೀನಾದ ಶಿಂಜಿಯಾಂಗ್ ಪ್ರಾಂತ್ಯ 1 ಕೋಟಿಗೂ ಹೆಚ್ಚು ಮುಸ್ಲಿಮ್ ಜನಸಂಖ್ಯೆ ಹೊಂದಿದೆ. ಅಲ್ಲಿ ಚೀನಾ ಅನುಸರಿಸುತ್ತಿರುವ ನೀತಿಯೇನು? ಒಂದು, ತನ್ನ ಹಾನ್ ಚೀನಿ ಜನಾಂಗದ ಜನಸಂಖ್ಯೆಯನ್ನು ಶಿಂಜಿಯಾಂಗ್ ಪ್ರಾಂತ್ಯದಲ್ಲಿ ಹೆಚ್ಚುಹೆಚ್ಚಾಗಿ ಹೋಗಿ ನೆಲೆಸುವಂತೆ ಮಾಡುತ್ತಿದೆ. ಎರಡನೆಯದಾಗಿ, ತಥಾಕಥಿತ ಶಿಕ್ಷಣ ಶಿಬಿರಗಳ ಮೂಲಕ ಇಸ್ಲಾಮಿನಿಂದ ಅಲ್ಲಿನ ಜನಸಂಖ್ಯೆಯನ್ನು ಹೊರಗೆ ತರುತ್ತಿದೆ. ಇದು ಸರಿಯೋ-ತಪ್ಪೋ ಎಂಬೆಲ್ಲ ಚರ್ಚೆಗಳು ಆಮೇಲಿನದ್ದು. ವಾಸ್ತವ ಏನೆಂದರೆ, ಇಲ್ಲೆಲ್ಲ ಚೀನಾವು ಅಸ್ತ್ರವಾಗಿ, ಸಂಪನ್ಮೂಲವಾಗಿ ಬಳಸಿಕೊಳ್ಳುತ್ತಿರುವುದು ಮೂಲ ಜನಸಂಖ್ಯೆಯನ್ನೇ.
ನಮಗೆಲ್ಲ ಇವತ್ತಿಗೆ ಅಮೆರಿಕವು ಬಹುದೊಡ್ಡ ಮಿಲಿಟರಿ ಬಲ ಎಂಬ ಗ್ರಹಿಕೆ ಇದೆ. ಆದರೆ ಇದು ಅರ್ಧಸತ್ಯ ಎಂದು ಅರಿವಾಗುವುದು ಅಮೆರಿಕವು ಈಚಿನ ದಶಕಗಳಲ್ಲಿ ಕೈಹಾಕಿದ ಯುದ್ಧಗಳ ಗತಿ ಏನಾಗಿದೆ ಎಂಬುದನ್ನು ಗಮನಿಸಿದಾಗ. ಅಫಘಾನಿಸ್ತಾನ, ಇರಾಕ್, ಲಿಬಿಯಾ…ಅಷ್ಟೇಕೆ, ಇನ್ನೂ ಹಿಂದಕ್ಕೆ ಹೋದರೆ ವಿಯೆಟ್ನಾಂ ಈ ಯಾವ ಯುದ್ಧಗಳನ್ನೂ ದೀರ್ಘಾವಧಿಯಲ್ಲಿ ಅಮೆರಿಕಕ್ಕೆ ದಕ್ಕಿಸಿಕೊಳ್ಳಲಾಗಲಿಲ್ಲ. ಏಕೆಂದರೆ, ಅಮೆರಿಕಕ್ಕೆ ತಾನು ಯಾವೆಲ್ಲ ನೆಲಗಳಲ್ಲಿ ಇಳಿದೆನೋ ಅಲ್ಲೆಲ್ಲ ಬಿಳಿಯರನ್ನೇ ಇಟ್ಟು ಅಲ್ಲಿನ ಜನಸಂಖ್ಯಾ ರಚನೆ ಬದಲಿಸುವ ತಾಕತ್ತೇನೂ ಇಲ್ಲ. ಹೀಗಾಗಿ ಅದು ಆಡುವ ಆಟಗಳೆಲ್ಲ ಡಾಲರ್ ಬಲದ ಕಾರಣದಿಂದ ಮಾತ್ರವೇ ಒಂದಷ್ಟು ಅವಧಿಗೆ ಸದ್ದು ಮಾಡುತ್ತವೆ.
ಪಾಶ್ಚಾತ್ಯರು ಜನಸಂಖ್ಯೆ ಆಟವನ್ನು ಈ ಹಿಂದೆ ಗೆದ್ದಿದ್ದಾದರೂ ಹೇಗೆ?
ಐತಿಹಾಸಿಕವಾಗಿ ಭಾರತವಾಗಲೀ, ಜಗತ್ತಾಗಲೀ ಈ ಮಟ್ಟದ ಜನಸಂಖ್ಯೆಯನ್ನು ನೋಡಿಲ್ಲವಾಗಿದ್ದು ಹೌದಾದರೂ, ಭಾರತದ ಜನಸಂಖ್ಯೆ ತುಲನಾತ್ಮಕವಾಗಿ ಬಹಳ ಕಡಿಮೆ ಎಂಬಂಥ ಸನ್ನಿವೇಶವು ಇತಿಹಾಸದಲ್ಲಿ ಕಡಿಮೆ. ಇಲ್ಲಿನ ವಾತಾವರಣ-ಭೂರಚನೆಗಳೂ ಪೂರಕವೇ. ಇದೇ ಜನಸಂಖ್ಯೆ ಮತ್ತದರ ಪ್ರತಿಭೆಯನ್ನಾಧಾರವಾಗಿಟ್ಟುಕೊಂಡೇ ಚಾಣಕ್ಯ ಚಂದ್ರಗುಪ್ತನ ಕಾಲದಲ್ಲಿ ಭಾರತವು ಮಿಲಿಟರಿ ಶಕ್ತಿಯಾಗಿ ಹೊರಹೊಮ್ಮಿತು. ಅಲ್ಲಿಂದ ಸುಮಾರು 12ನೇ ಶತಮಾನದವರೆಗೂ ಹಲವು ಸಾಮ್ರಾಜ್ಯಗಳು ಭಾರತವನ್ನಾಳಿದವು, ಅಷ್ಟೇ ಅಲ್ಲ ಈ ನೆಲವನ್ನು ಜಾಗತಿಕ ಶಕ್ತಿಯನ್ನಾಗಿಯೂ ಮೆರೆಸಿದವು. ಪ್ರಾಚೀನ ಭಾರತದ ವ್ಯಾಪಾರ, ವಿದ್ಯೆ, ಕಲಾಕೌಶಲ, ವಿಜ್ಞಾನಗಳೆಲ್ಲ ಇವತ್ತಿಗೂ ಅಚ್ಚಳಿಯದ ಪುಟಗಳಾಗಿರುವುದಕ್ಕೆ ಅವನ್ನೆಲ್ಲ ಕಾಪಾಡಿದ ಕ್ಷಾತ್ರ ಹಾಗೂ ಅದಕ್ಕೆ ನಿರಂತರವಾಗಿ ಪೂರೈಕೆಯಾಗುತ್ತಿದ್ದ ಹೊಸರಕ್ತ ಕಾರಣ.
ಎಂಟನೇ ಶತಮಾನದಲ್ಲೇ ಇಸ್ಲಾಮಿನ ದಾಳಿ ಆರಂಭವಾದರೂ ಅದು ಸಿಂಧ್ ನಿಂದ ದೆಹಲಿ ತಲುಪಿಕೊಳ್ಳುವುದಕ್ಕೆ ಹತ್ತಿರ ಹತ್ತಿರ 500 ವರ್ಷಗಳನ್ನೇ ತೆಗೆದುಕೊಂಡಿತು. ಅದಾದ ನಂತರ ಇಸ್ಲಾಂ ಹಾಗೂ ಬ್ರಿಟಿಷ್ ಮತ್ತು ಐರೋಪ್ಯ ವಸಾಹತುಗಳು ಒಂದರ್ಥದಲ್ಲಿ ಭಾರತದ ‘ಜನಸಂಖ್ಯೆ’ಯನ್ನು ಬಳಸಿಕೊಂಡೇ ನಮ್ಮನ್ನು ಗುಲಾಮರನ್ನಾಗಿಸಿದರು. ಇಸ್ಲಾಮಿನ ಕ್ರೌರ್ಯ ಜನಜನಿತ. ಅದು ದೊಡ್ಡಮಟ್ಟದಲ್ಲಿ ಇಲ್ಲಿನ ಜನಸಂಖ್ಯೆಯನ್ನೇ ರಾಷ್ಟ್ರಭಾವ ರಹಿತವಾದ ಹೊಸ ಆಕ್ರಮಕ ಮತಕ್ಕೆ ಮತಾಂತರಿಸಿತು. ಅಷ್ಟೇ ದೊಡ್ಡಮಟ್ಟದಲ್ಲಿ ಹಿಂದು ಬಾಲಕರನ್ನು ಹಾಗೂ ಮಹಿಳೆಯರನ್ನು ಜಾಗತಿಕ ಗುಲಾಮಿ ಮಾರುಕಟ್ಟೆಗೆ ಕಳುಹಿಸಿತು.
ಪಾಶ್ಚಾತ್ಯ ವಸಾಹತುಶಾಹಿಯ ಕ್ರೌರ್ಯ ಇಸ್ಲಾಮಿಗೆ ಹೋಲಿಸಿದರೆ ತುಲನಾತ್ಮಕವಾಗಿ ಕಡಿಮೆ. ಆದರೆ ಭಾರತದ ಸಂಪನ್ಮೂಲ ದೋಚುವಿಕೆಯ ಜತೆ ಜತೆಯಲ್ಲೇ ಜನಸಂಖ್ಯೆಯನ್ನು ತನ್ನ ಹಿತಾಸಕ್ತಿಗೆ ದುಡಿಸಿಕೊಳ್ಳುವಲ್ಲಿ ಅದರ ವಿನ್ಯಾಸವೂ ಸ್ಪಷ್ಟವಾಗಿತ್ತು. ಕೈಗಾರಿಕಾ ಯಂತ್ರಯುಗವು ತೆರೆದುಕೊಳ್ಳುವುದಕ್ಕೆ ಮುಂಚೆ ದೈಹಿಕ ದುಡಿಮೆಗೆ ಅದು ಭಾರತೀಯರನ್ನು ಗುಲಾಮರನ್ನಾಗಿಸಿ ಜಗತ್ತಿನಾದ್ಯಂತ ದುಡಿಸಿಕೊಂಡಿತು. ಎರಡನೇ ವಿಶ್ವಯುದ್ಧದಲ್ಲಿ ಬರೋಬ್ಬರಿ 87,000 ಭಾರತೀಯ ಯೋಧರು ಬ್ರಿಟಿಷ್ ಸಾಮ್ರಾಜ್ಯಕ್ಕಾಗಿ ಸೆಣೆಸುತ್ತ, ತಾವು ಕಂಡುಕೇಳರಿಯದಿದ್ದ ಭೂಪ್ರದೇಶಗಳಲ್ಲಿ ಹೆಣವಾಗಿಹೋದರು. ಇದು ಭಾರತದ ಜನಸಂಖ್ಯೆಯನ್ನು ವಸಾಹತು ಶಕ್ತಿ ಉಪಯೋಗಿಸಿಕೊಂಡಿದ್ದರ ಒಂದು ಉದಾಹರಣೆ ಮಾತ್ರ.
ವಸಾಹತುಕಾಲದಾಚೆಯ ಜನಸಂಖ್ಯೆಯ ಆಟ
ಬ್ರಿಟಿಷರು ಭಾರತ ಬಿಡುವಷ್ಟರಲ್ಲಿ ಜಗತ್ತಿನ ನಂಬರ್ ಒನ್ ಸ್ಥಾನವನ್ನು ಅದಾಗಲೇ ಅಮೆರಿಕಕ್ಕೆ ಬಿಟ್ಟುಕೊಟ್ಟಿದ್ದರು. ಆದರೆ ಅದರಲ್ಲಿ ತೀರ ವ್ಯತ್ಯಾಸವೇನಿದ್ದಿರಲಿಲ್ಲ. ಅದೇ ಕ್ರೈಸ್ತ-ಇಂಗ್ಲೀಷ್ ಭಾಷೆಯ ಜನರು ಹೋಗಿ, ಮೂಲ ನಿವಾಸಿಗರ ಮೇಲೆ ಇನ್ನಿಲ್ಲದ ಅತ್ಯಾಚಾರ ಎಸಗಿ, ಆಫ್ರಿಕದ ಕಪ್ಪು ಜನಾಂಗದವರನ್ನು ದುಡಿಯುವ ಗುಲಾಮರನ್ನಾಗಿಸಿಕೊಂಡು ಕಟ್ಟಿದ ದೇಶವೇ ಅಮೆರಿಕ.
ಈಗ ಬದುಕಿನ ಮೂರೂವರೆ ದಶಕಗಳನ್ನು ಕಳೆದಿರುವ ಭಾರತೀಯರೆಲ್ಲ ಶಾಲೆಯಲ್ಲಿ ಓದುತ್ತಿದ್ದಾಗ ಅಲ್ಲಿನ ಪಠ್ಯದಲ್ಲಿ ಜನಸಂಖ್ಯೆ ಎಂಬುದನ್ನು ತುಂಬ ಕೆಟ್ಟ ಪದವನ್ನಾಗಿಸಿ ತೋರಿಸಿದ, ನಮ್ಮ ಅಜ್ಜ-ಅಜ್ಜಿಯಂದಿರನ್ನು “ಥೂ ಎಷ್ಟೆಲ್ಲ ಮಕ್ಕಳನ್ನು ಮಾಡಿಕೊಳ್ತಿದ್ದರು, ಬುದ್ಧಿ ಇಲ್ಲದೇ” ಅಂತ ಅಣಕಿಸುವಂತೆ ಮಾಡಿದ ಖ್ಯಾತಿ ಅಮೆರಿಕದಿಂದ ಉತ್ಪನ್ನವಾದ ವಿಚಾರಲಹರಿಗೆ ಸಲ್ಲುತ್ತದೆ.
ಹೀಗೆ ಅಮೆರಿಕವು ಭಾರತ ಸೇರಿದಂತೆ ಏಷ್ಯದ ದೇಶಗಳಲ್ಲಿ ಜನಸಂಖ್ಯೆ ಕಡಿಮೆಯಾಗಲಿ ಎಂಬ ಮನೋಭೂಮಿಕೆಯೊಂದನ್ನು ಸೃಷ್ಟಿಸಿದ್ದು ಯಾವುದೇ ಲೋಕಕಲ್ಯಾಣದ ವಿಚಾರ ಹೊತ್ತುಕೊಂಡಲ್ಲ. ಬದಲಿಗೆ, ತನ್ನ ಜನಾಂಗೀಯ ಶ್ರೇಷ್ಟತೆಗೆ ಕುತ್ತು ಬರಬಾರದು ಎಂಬ ಕಾರಣಕ್ಕೆ. ಮಾರಾ ವಿಸ್ತೆಂದಾಲ್ (Mara Hvistendahl) ಅವರ ಸಂಶೋಧನಾ ಪುಸ್ತಕ ‘ಅನ್ ನ್ಯಾಚುರಲ್ ಸೆಲೆಕ್ಷನ್’ ಈ ಬಗ್ಗೆ ವಿಸ್ತಾರವಾಗಿ ವಿಶ್ಲೇಷಿಸುತ್ತದೆ. ಬಿಳಿಯೇತರ ಜನಾಂಗವು ಜಗತ್ತಿನಲ್ಲಿ ದೊಡ್ಡಸಂಖ್ಯೆಯಲ್ಲಿ ಬೆಳೆಯುವುದು ಆತಂಕದ ವಿಷಯ ಎಂದು ಅವತ್ತಿನ ಪಾಶ್ಚಾತ್ಯ ರಾಜಕಾರಣವು ಪರಿಭಾವಿಸಿತ್ತು. ಅಲ್ಲದೇ ಅದು ಶೀತಲಯುದ್ಧದ ಸಂದರ್ಭ. ಸೋವಿಯತ್ ರಷ್ಯಾವೋ, ಅಮೆರಿಕವೋ ಎಂಬ ಪೈಪೋಟಿಯಿದ್ದ ಕಾಲ. ಆಗ ಏಷ್ಯದಲ್ಲಿ ಜನಸಂಖ್ಯೆ ಹೆಚ್ಚಾದಷ್ಟೂ ಅವರು ಕಮ್ಯುನಿಸಂ ವ್ಯವಸ್ಥೆಗೆ ಸೇರಿಕೊಳ್ಳುವ ಸಾಧ್ಯತೆ ಹೆಚ್ಚು ಎಂಬುದು ಅಮೆರಿಕದ ವಿಚಾರವಾಗಿತ್ತು.
1960 ಮತ್ತು 1970ರ ಅವಧಿಯಲ್ಲಿ ಅಮೆರಿಕವು ಏಷ್ಯದ ರಾಷ್ಟ್ರಗಳಿಗೆ ಲಿಂಗಪತ್ತೆಯ ಮೂಲಕ ಗರ್ಭಪಾತ ಮಾಡುವ ಐಡಿಯಾವನ್ನು ದೊಡ್ಡಮಟ್ಟದಲ್ಲಿ ಪ್ರಚಾರಪಡಿಸಿತು. ಗಮನಿಸಿ…ಇದು ಕೇವಲ ಸಂತಾನ ನಿಯಂತ್ರಣವಲ್ಲ. ಸಂತಾನ ನಿಯಂತ್ರಣದ ಐಡಿಯಾ ಮಾತ್ರವೇ ಆದರೆ ಅದು ಮೊದಲ ಸಂತಾನ ಗಂಡಾಗಲೀ-ಹೆಣ್ಣಾಗಲೀ ನಂತರ ಸಂತಾನ ಬೇಡ ಎಂದು ನಿರೋಧಕ ಕ್ರಮಗಳನ್ನೋ, ಅದು ವಿಫಲವಾದರೆ ಗರ್ಭಪಾತವನ್ನೋ ಮಾಡಿಕೊಳ್ಳುವುದು. ಆದರೆ, ಎಲ್ಲ ಸಮಾಜಗಳಿಗಿದ್ದಂತೆ ಭಾರತಕ್ಕೆ-ಏಷ್ಯಕ್ಕೆ ಗಂಡುಮಕ್ಕಳ ಆಸೆ ಇದ್ದಿದ್ದೇನೂ ಸುಳ್ಳಲ್ಲ. ಆದರೆ ಏಷ್ಯವು ಈ ಬಗ್ಗೆ ಕಾರ್ಯಪ್ರವೃತ್ತವಾಗುವಂತೆ ಆಗಿದ್ದು ಅಮೆರಿಕದ ವೈದ್ಯತಂತ್ರಜ್ಞಾನದ ಜಗತ್ತು ಅಲ್ಟ್ರಾಸೌಂಡ್ ಉಪಕರಣಗಳನ್ನು ಇಲ್ಲಿನ ಸರ್ಕಾರಗಳು ಮತ್ತು ಸಂಸ್ಥೆಗಳಿಗೆ ಮಾರಿದ್ದರಲ್ಲಿ. ಎರಡನೇ ತ್ರೈಮಾಸಿಕದ ಅವಧಿಯಲ್ಲಿ ಗರ್ಭದಲ್ಲಿರುವ ಮಗು ಗಂಡೋ-ಹೆಣ್ಣೋ ಎಂಬುದನ್ನು ನಿಖರವಾಗಿ ತಿಳಿದುಕೊಳ್ಳುವ ಅವಕಾಶ ನೀಡಿದ್ದು ಈ ಉಪಕರಣವೇ. ಹೆಣ್ಣೆಂದು ಗೊತ್ತಾದಕೂಡಲೇ ಗರ್ಭಪಾತ ಮಾಡಿಸಿಕೊಂಡು ಮತ್ತೆ ಗಂಡು ಸಂತಾನಕ್ಕೆ ಪ್ರಯತ್ನಿಸುವ ಅಭ್ಯಾಸ ದಟ್ಟವಾಗಿದ್ದು ಅಲ್ಲಿಂದಲೇ.
ಜನಸಂಖ್ಯೆ ಬಗ್ಗೆ ಏನಿದೆ ಜಗತ್ತಿನ ವರ್ತಮಾನದ ಚಿಂತನೆ?
ಮನುಷ್ಯ ಹೆಚ್ಚುಹೆಚ್ಚು ನಗರಜೀವಿಯಾದಂತೆ ಸಂತಾನೋತ್ಪತ್ತಿ ಕಡಿಮೆ ಮಾಡುವುದು ಜಗತ್ತಿನ ಒಟ್ಟಾರೆ ಅನುಭವ. ಹಾಗಾದರೆ, ಇಂಥದೊಂದು ನಗರೀಕರಣ ಮತ್ತು ಆಧುನಿಕತೆಗಳನ್ನು ಹಾಗೂ ಈಚಿನ ನೂರು ವರ್ಷಗಳ ಆರ್ಥಿಕತೆಯ ನಮೂನೆಗಳನ್ನು ರೂಪಿಸಿರುವ ಶ್ರೀಮಂತ-ಸ್ಥಿತಿವಂತ ದೇಶಗಳೆಲ್ಲ ಜನಸಂಖ್ಯೆಯ ಕುಸಿತದ ದಿನಗಳ ಬಗ್ಗೆ ಖುಷಿಯಿಂದ ಇರಬೇಕಲ್ಲವೇ? ಒಟ್ಟಾರೆ ಜಗತ್ತಿನಲ್ಲಿ 800 ಕೋಟಿ ಮಂದಿಯಿರುವಾಗ ಮತ್ತೆ ಮಕ್ಕಳನ್ನು ಮಾಡಿಕೊಳ್ಳವ ಬಗ್ಗೆ ಏಕೆ ಯೋಚಿಸಬೇಕು ಅಂತ ತಥಾಕಥಿತ ಪ್ರಗತಿಪರ, ಶ್ರೀಮಂತ ದೇಶಗಳ ನಿಲವಿದ್ದಿರಬಹುದೆಂಬುದು ನಿಮ್ಮ ಭಾವನೆಯಾಗಿದ್ದರೆ ಅದು ತಪ್ಪು.
ಅಮೆರಿಕದ ಟ್ರಂಪ್ ಆಡಳಿತವು ಬೇಬಿ ಬೋನಸ್ ಎಂದು ಹಣಕಾಸು ಉತ್ತೇಜನ ನೀಡುವ, ಉನ್ನತವ್ಯಾಸಂಗದ ಸ್ಕಾಲರ್ಶಿಪ್ ಪೈಕಿ ಒಂದು ಭಾಗವನ್ನು ವಿವಾಹಿತ ವಿದ್ಯಾರ್ಥಿಗಳಿಗೆ ನೀಡುವ ಪ್ರಸ್ತಾವಗಳ ಬಗ್ಗೆ ಯೋಚನೆ ಮಾಡುತ್ತಿದೆ. ಸಿರಿವಂತಿಕೆಯ ಸಿಂಗಾಪುರ “ಹ್ಯಾವ್ ತ್ರೀ ಆರ್ ಮೋರ್” ಎಂದು ತನ್ನ ಪ್ರಜೆಗಳ ಪೈಕಿ ಸ್ಥಿತಿವಂತರು ನಾಲ್ಕು ಮಕ್ಕಳನ್ನು ಮಾಡಿಕೊಳ್ಳಿ ಅಂತ 1987ರಿಂದಲೇ ನೀತಿ ಜಾರಿಯಲ್ಲಿಟ್ಟಿದೆ. ಫ್ರಾನ್ಸ್, ಜರ್ಮನಿ, ಇಟಲಿ ಸೇರಿದಂತೆ ಯುರೋಪಿನ ಅನೇಕ ದೇಶಗಳು ಹೆಚ್ಚು ಮಕ್ಕಳನ್ನು ಮಾಡಿಕೊಳ್ಳುವುದಕ್ಕೆ ಪ್ರಜೆಗಳನ್ನು ಉತ್ತೇಜಿಸುವ ಹಣಕಾಸು ಕ್ರಮಗಳನ್ನು ಕೈಗೊಂಡಿವೆ. ಇನ್ನು, ರಷ್ಯಾವಂತೂ “ಮಾಮ್ ಎಟ್ 16” ಎಂಬರ್ಥ ಕೊಡುವ ಟಿವಿ ಕಾರ್ಯಕ್ರಮಗಳ ಮೂಲಕ ಹೆಣ್ಣುಮಕ್ಕಳು ಸಣ್ಣವಯಸ್ಸಿನಲ್ಲಿ ತಾಯಿಯರಾಗುವ ಟ್ರೆಂಡ್ ಅನ್ನೇ ಪ್ರೋತ್ಸಾಹಿಸುತ್ತಿದೆ ಹಾಗೂ ಹಣಕಾಸು ನೆರವುಗಳನ್ನೂ ಕೊಡುತ್ತಿದೆ.
ಹೀಗೆ ಇನ್ನಷ್ಟು ದೇಶಗಳನ್ನು ಪಟ್ಟಿ ಮಾಡುತ್ತ ಹೋಗಬಹುದು. ಆದರೆ ಸಾರಾಂಶವಿಷ್ಟೆ. ಮೇಲೆ ಹೆಸರಿಸಿದ ಯಾವ ದೇಶದ ಫಲವತ್ತತೆ ದರವೂ ಅದಿರುವ ಜನಸಂಖ್ಯೆಯನ್ನು ಉಳಿಸಿಕೊಳ್ಳಲು ಬೇಕಿರುವ 2.1ರ ದರವನ್ನು ಹೊಂದಿಲ್ಲ. ಒಟ್ಟಾರೆಯಾಗಿ ಭಾರತ ಇದರ ಹತ್ತಿರದಲ್ಲಿದೆ. ಆದರೆ, ಇದರಲ್ಲಿ ರಾಷ್ಟ್ರದ ಪರಿಕಲ್ಪನೆಯನ್ನೇ ನಂಬದ ‘ಉಮ್ಮಾ’ಗಾಗಿ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿರುವವರ ಪಾಲೂ ದೊಡ್ಡದಿದ್ದರಬಹುದು. ಏಕೆಂದರೆ, ಜಗತ್ತಿನ ಇವತ್ತಿನ ಲೆಕ್ಕಾಚಾರದಲ್ಲಿ, 2.1 ಟೋಟಲ್ ಫರ್ಟಿಲಿಟಿ ದರವನ್ನು ಮೀರಿ ಉತ್ಪಾದಿಸುವ ರಾಷ್ಟ್ರಗಳ ಪಟ್ಟಿಯನ್ನು ಆಫ್ರಿಕಾ ಮತ್ತು ಪಶ್ಚಿಮ ಏಷ್ಯಗಳ ಮುಸ್ಲಿಂ ದೇಶಗಳೇ ಆವರಿಸಿಕೊಂಡಿವೆ.
ಅತ್ತ ಚೀನಾವು ತನ್ನ ಒಂದೇ ಮಗು ನೀತಿಯನ್ನು ಕಿತ್ತುಹಾಕಿ, ಮೂರು ಮಾಡಿಕೊಳ್ಳಿ ಎಂದು ಬೊಬ್ಬೆ ಹಾಕುತ್ತಿದ್ದರೂ ಕೇಳುವವರ್ಯಾರಿಲ್ಲ. ಅದರ ದರ 1.71ರಲ್ಲಿ ಹೊಯ್ದಾಡಿದೆ. ಅರ್ಥಾತ್, ಜನೋತ್ಪಾದನೆ ಎಂಬುದೊಂದು ಮನಸ್ಥಿತಿ. “ಈಗ ಸಾಕು, ಮತ್ತೀಗ ಶುರು ಮಾಡಿ” ಎಂದು ಸುಲಭದಲ್ಲಿ ಟ್ರೆಂಡ್ ಬದಲಿಸಲಾಗುವುದಿಲ್ಲ. ಒಮ್ಮೆ ಕುಟುಂಬ ಪದ್ಧತಿಯಿಂದ ಹೊರಗೆ ತಂದ ಮೇಲೆ ಮತ್ತೆ ಅಲ್ಲಿಗೆ ಕೂರಿಸುವುದು ಕಷ್ಟ ಎಂಬುದು ಚೀನಾದ ಅನುಭವ ಸಾರುತ್ತಿರುವ ಸಂಗತಿ.
ಈಗಿನದ್ದೇನು ಯುದ್ಧ?
ಪಾಶ್ಚಾತ್ಯರು ಈ ಹಿಂದೆ ಭಾರತದ ಜನಸಂಖ್ಯೆಯನ್ನು ಹೇಗೆಲ್ಲ ನಿಭಾಯಿಸಿಕೊಂಡು ಬಂದರೆಂಬ ಆಟಗಳನ್ನು ಮೇಲೆ ನೀಡಿರುವ ಬೇರೆ ಬೇರೆ ಉದಾಹರಣೆಗಳಲ್ಲಿ ಗಮನಿಸಿದ್ದೇವೆ. ಮತ್ತವೇ ಟೆಂಪ್ಲೇಟುಗಳು ಈಗ ಕೆಲಸಕ್ಕೆ ಬರುತ್ತವೆ ಅಂತೇನಿಲ್ಲ. ಆದರೆ ಈಗ ಅಮೆರಿಕದಂಥ ಶಕ್ತಿಗಳೇ ಆಗಲಿ, ಚೀನಾವೇ ಆಗಲೀ ಭಾರತದ ಈ ಜನಸಂಖ್ಯಾ ಲಾಭವನ್ನು ಇಲ್ಲವಾಗಿಸುವುದಕ್ಕೆ ಯಾವೆಲ್ಲ ವ್ಯೂಹಗಳನ್ನು ಹಮ್ಮಿಕೊಳ್ಳಬಹುದು?
ಭಾರತದ ಯುವಜನಸಂಖ್ಯೆಯನ್ನು ಇದ್ದು ಇಲ್ಲದಂತಾಗಿಸುವುದು. ಅಂದರೆ ಅವರ ಶಕ್ತಿಯನ್ನು ಆ ಕ್ಷಣದ ಡೊಪಮೈನ್ ರೋಚಕತೆ ಕೊಡುವ ರೀಲ್ಸ್ ಗಳಲ್ಲಿ, ಆನ್ಲೈನ್ ಗೇಮುಗಳಲ್ಲಿ ವ್ಯಯವಾಗುವಂತೆ ಮಾಡುವುದು. ಗಡಿಭಾಗಗಳಲ್ಲಿ ಯುವಜನರು ಮದ್ಯ, ಅಫೀಮು ಇತ್ಯಾದಿಗಳ ವಶಕ್ಕೆ ಸಿಗುವಂಥ ಪರಿಸ್ಥಿತಿ ನಿರ್ಮಿಸುವುದು. ಹಳೆಯ ವಸಾಹತು ಮಾದರಿ ಆಟವಾಗಿರುವ ಜಾತಿ-ಕೋಮುಗಳ ನಡುವಿನ ಜಗಳ ಉದ್ದೀಪನೆ. ಅದಕ್ಕೀಗ ಸಾಮಾಜಿಕ ಮಾಧ್ಯಮವಿದೆ. ಅವುಗಳ ಅಲ್ಗೊರಿದಂಗಳು ಪಾಶ್ಚಾತ್ಯರ ಕೈನಲ್ಲಿವೆ. ದೇಶದ ಗಡಿಗಳು, ಧಾರ್ಮಿಕ ಆಚರಣೆಗಳು ಇವೆಲ್ಲವೂ ಕೆಲಸಕ್ಕೆ ಬಾರದವರ ಹಾಗೂ ವಿಚಾರಶಕ್ತಿ ಇಲ್ಲದವರ ಚರ್ಚೆಯ ವಸ್ತುಗಳೆಂಬ ಭಾವವನ್ನು ಯುವಕರಲ್ಲಿ ಹುಟ್ಟುಹಾಕಿ ಅವರನ್ನು ಸಿನಿಕರನ್ನಾಗಿಯೂ, ಕೇವಲ ಬಡಬಡಿಕೆಯಲ್ಲಿ ದಿನಗಳೆಯುವ ಕಾರ್ಯ ವಿಮುಖಿಗಳನ್ನಾಗಿಯೂ ಮಾಡುವುದು. ಗಂಡು-ಹೆಣ್ಣು ಇತ್ಯಾದಿಗಳ ಐಡೆಂಟಿಟಿಯಲ್ಲೇ ಬಿರುಕು ಮೂಡಿಸಿ, ಬೆಳಗ್ಗೆ ಗಂಡಾಗಿದ್ದೆ, ಮಧ್ಯಾಹ್ನದ ನಂತರ ನಾನು ಹೆಣ್ಣೆಂದು ಗುರುತಿಸಿಕೊಳ್ಳುತ್ತೇನೆ ಎಂದೆಲ್ಲ ವಾದಿಸುವ ಮತ್ತು ತಾವು ವಾದಿಸುತ್ತಿರುವುದನ್ನೂ ನಿಜವೆಂದೇ ಅಂದುಕೊಳ್ಳುವ ಜನಾಂಗವೊಂದನ್ನು ರೂಪುಗೊಳಿಸುವುದು. ಪ್ರೈವಸಿ, ಇಂಡಿವಿಡ್ಯುವಾಲಿಟಿ ಇಂಥ ಅಂಶಗಳನ್ನು ಎಲ್ಲ ಜಾಹೀರಾತುಗಳು ಹಾಗೂ ರಂಜನೆಯ ಮಾಧ್ಯಮಗಳ ಮೂಲಕ ತಲೆಗೆ ತುಂಬಿ ಯುವಕರನ್ನು ಸಮುದಾಯ ಕುಟುಂಬಗಳಿಂದ ಮಾನಸಿಕವಾಗಿ ದೂರವಾಗಿಸುವುದು…..
ಅರೇ, ಇವೆಲ್ಲ ಅದಾಗಲೇ ಆಗುತ್ತಿವೆ ಎಂದಿರಾ? ಅರ್ಥಾತ್ ನಾವೆಲ್ಲರೂ ಯುದ್ಧದ ನಡುವೆಯೇ ಇದ್ದೇವೆ ಹಾಗೂ ಪ್ರಾರಂಭಿಕ ಹೊಡೆತಗಳನ್ನೂ ತಿನ್ನುತ್ತಿದ್ದೇವೆ. ಇವುಗಳಿಂದ ಪಾರಾಗುವ ಬಗ್ಗೆ ಯೋಚಿಸದಿದ್ದರೆ ವೈರಿಯ ಗೆಲವು ನಿಶ್ಚಿತ!
ಇಸ್ಲಾಂ ಜನೋತ್ಪಾದನೆಯ ಭವಿಷ್ಯವೇನು?
ಈ ಒಟ್ಟಾರೆ ಜನಸಂಖ್ಯಾ ಕಥನದಲ್ಲಿ ಸದ್ಯಕ್ಕೆ ಮೇಲುಗೈ ಇರುವುದು ಪಾಶ್ಚಾತ್ಯರದ್ದೂ ಅಲ್ಲ, ನಮ್ಮ ಸಮೀಪ ಪ್ರತಿಸ್ಪರ್ಧಿ ಚೀನಾದ್ದೂ ಅಲ್ಲ. ಇಸ್ಲಾಂ ಮತೀಯರ ಜಾಗತಿಕ ಜನೋತ್ಪಾದನೆ ಅತ್ಯಂತ ವೇಗದ ದರದಲ್ಲಿ ಬೆಳವಣಿಗೆ ಕಾಣುತ್ತಿರುವುದು ಯಾರೂ ಅಲ್ಲಗಳೆಯಲಾಗದ ಸತ್ಯ. ಅವೆಷ್ಟೇ ಅಂತರ್ಯುದ್ಧಗಳ ಸೃಷ್ಟಿಯಾದರೂ ಈ ದರದಲ್ಲಿ ಬದಲಾವಣೆ ಕಾಣುವ ಯಾವ ಸೂಚನೆಗಳೂ ಸಿಗುತ್ತಿಲ್ಲ. ಸುಮ್ಮನೇ ಉದಾಹರಣೆಗೆ ತೆಗೆದುಕೊಳ್ಳುವುದಾದರೆ ಪಾಕಿಸ್ತಾನ ಮತ್ತು ಪ್ಯಾಲಿಸ್ತೀನ್ ಪ್ರದೇಶ ಇವೆರಡು ಕಡೆಗಳಲ್ಲೂ ಟೋಟಲ್ ಫರ್ಟಿಲಿಟಿ ರೇಟ್ 3.6ರ ಹಂತದಲ್ಲಿ ಪುಷ್ಕಳವಾಗಿದೆ! ಯುರೋಪಿನ ಸ್ಥಿತಿವಂತ ದೇಶಗಳು ಅದಾಗಲೇ ಈ ಜನೋತ್ಪಾದಕರ ವಲಸೆಯ ಬಿಸಿಯನ್ನು ಅನುಭವಿಸುತ್ತಿದ್ದಾರೆ.
ಇದಕ್ಕೇನು ಪರಿಹಾರವೆಂಬುದಕ್ಕೆ ಸ್ಪಷ್ಟ ಉತ್ತರಗಳಿಲ್ಲವಾದರೂ, ಇಸ್ಲಾಮ್ ಹುಟ್ಟಿರುವ ಪ್ರಾಂತ್ಯಗಳಲ್ಲಿ ಬಿಚ್ಚಿಕೊಂಡಿರುವ ಹೊಸ ಯೋಚನಾಧಾಟಿಯೊಂದು, ಈ ಜನಸಂಖ್ಯೆಯನ್ನು ಜೀರ್ಣಿಸಿಕೊಳ್ಳಬಲ್ಲ ಸಮೀಕರಣವೊಂದು ಮುಂದಿನ ದಿನಗಳಲ್ಲಿ ಸಿಗಬಹುದೆಂಬ ಆಶಾವಾದವೊಂದಕ್ಕೆ ಜಾಗ ಕೊಡುತ್ತಿದೆ. ಅದರ ಬಗ್ಗೆ ಇನ್ಯಾವಾಗಲಾದರೂ ವಿವರಿಸೋಣ.
- ಚೈತನ್ಯ ಹೆಗಡೆ
cchegde@gmail.com
Advertisement