
ಜ್ಞಾನ ಮತ್ತು ಕ್ಷಾತ್ರ. ಇವು ಒಟ್ಟಾಗಿ ತಮ್ಮ ಅಭಿವ್ಯಕ್ತಿ ತೋರಿದಾಗಲೆಲ್ಲ ಭಾರತವು ಔನ್ನತ್ಯವನ್ನೇ ಕಂಡಿದೆ. ಚಾಣಕ್ಯನ ಕಾರ್ಯತಂತ್ರ ಜ್ಞಾನ ಹಾಗೂ ಚಂದ್ರಗುಪ್ತನ ಶೌರ್ಯ ಸೇರಿದಾಗ ಭಾರತವು ಅತ್ಯುತ್ಕೃಷ್ಟ ಸಾಮ್ರಾಜ್ಯವನ್ನು ಕಟ್ಟಿತು. ಹಲವು ನೂರು ವರ್ಷಗಳ ನಂತರ ಅಹಿಂಸೆಯ ಆದರ್ಶವನ್ನು ಅಪ್ರಾಯೋಗಿಕವಾಗಿ ಅಪ್ಪಿಕೊಳ್ಳುತ್ತ ಹೋಗಿದ್ದರಿಂದ, ಬೃಹದ್ರಥನ ಕಾಲಕ್ಕೆ ಕ್ಷಾತ್ರ ಮಂಕಾಗಿ ವಿದೇಶಿ ಆಕ್ರಮಣಕಾರರು ಮತ್ತೆ ಭಾರತದೊಳಕ್ಕೆ ಬರುವಂತಾಯಿತು. ಕ್ಷಾತ್ರ ಮತ್ತು ವೈದಿಕ ಪರಂಪರೆಯ ಹೊಳಪುಗಳೆರಡೂ ಮಂಕಾಗಿದ್ದಾಗ ಪುಷ್ಯಮಿತ್ರ ಶುಂಗ ಅವೆರಡನ್ನೂ ಮರುಸ್ಥಾಪಿಸಿದ. ಭಾರತದ ಚರಿತ್ರೆಯುದ್ದಕ್ಕೂ ಹೀಗೆ ಜ್ಞಾನ-ಕ್ಷಾತ್ರಗಳ ಹೊಯ್ದಾಟವೇ ಉತ್ತುಂಗ ಮತ್ತು ಪತನಗಳ ಗ್ರಾಫ್ ಸೃಷ್ಟಿಸಿರುವುದು ಗಮನಕ್ಕೆ ಬರುತ್ತ ಹೋಗುತ್ತದೆ.
ಪಾಕಿಸ್ತಾನದ ಮೇಲೆ ಭಾರತದ ಇತ್ತೀಚಿನ ಪ್ರಹಾರವು ಇದೇ ಜ್ಞಾನ ಮತ್ತು ಕ್ಷಾತ್ರಗಳ ಸಮ್ಮಿಲನವನ್ನು ತೋರಿಸುತ್ತಿದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಮಿಲಿಟರಿ ಯಾವತ್ತೂ ತನ್ನ ಶೌರ್ಯಕ್ಕೆ ಕುಂದು ತಂದುಕೊಂಡಿಲ್ಲ. ಆದರೆ, ಎಲ್ಲ ಅವಧಿಯಲ್ಲೂ ರಾಜಕೀಯ ನಾಯಕತ್ವವೂ ಅಷ್ಟೇ ದೃಢವಾಗಿತ್ತು ಎಂದು ಹೇಳುವುದಕ್ಕಾಗುವುದಿಲ್ಲ. ಏಕೆಂದರೆ ಸ್ವಾತಂತ್ರ್ಯದ ಬೆನ್ನಲ್ಲೇ ಅಧಿಕಾರ ಹಿಡಿದವರು “ನಮ್ಮ ದೇಶಕ್ಕೆ ಪೊಲೀಸ್ ಬಲ ಇದ್ದರೆ ಸಾಕು, ಮಿಲಿಟರಿ ಇಲ್ಲದಿದ್ದರೂ ನಡೆಯುತ್ತದೆ” ಎಂದಿದ್ದರು. ಪ್ರಸ್ತುತ ರಾಜಕೀಯ ನಾಯಕತ್ವವು ಮಿಲಿಟರಿಗೆ ಅದರ ಬಲದ ಸಾರ್ಥಕ ವಿನಿಯೋಗಕ್ಕೆ ಅನುವು ಮಾಡಿಕೊಟ್ಟಿರುವುದಷ್ಟೇ ಅಲ್ಲ, ಈ ಮೂರು ದಿನದ ಸಂಘರ್ಷವು ಕ್ಷಾತ್ರದ ಜತೆ ಜ್ಞಾನದ ಔನ್ನತ್ಯವನ್ನೂ ಜಗತ್ತಿಗೆ ಜಾಹೀರಾಗಿಸಿದೆ. ಅದು ಹೇಗೆ ಎನ್ನುವುದಕ್ಕೆ ರಕ್ಷಣಾ ಪರಿಕರಗಳ ಅಭಿವೃದ್ಧಿ ಹಾಗೂ ಅವೆಲ್ಲ ಉಪಯೋಗವಾಗಿರುವ ರೀತಿಯನ್ನು ಗಮನಿಸಿದರೆ ಸಾಕು.
ವೈರಿಯ ಭೂಮಿಯನ್ನು ಪಾದಸ್ಪರ್ಶವಿಲ್ಲದೆಯೇ ಧ್ವಂಸಗೊಳಿಸಬಹುದಾದ ಹೊಸಯುಗದ ಯುದ್ಧಸಾಮರ್ಥ್ಯವನ್ನು ಭಾರತವು ಈ ಬಾರಿಯ ಕದನದಲ್ಲಿ ಪ್ರದರ್ಶಿಸಿದೆ ಎಂಬುದು ಬಹುದೊಡ್ಡ ಮುಖ್ಯಾಂಶ. ಗಮನಿಸಬೇಕಾದ ಅಂಶ ಎಂದರೆ, ಇಲ್ಲಿ ಬಿದ್ದಿರುವ ಹೊಡೆತವು ಕೇವಲ ಪಾಕಿಸ್ತಾನದ ಪಾಲಿಗೆ ಮಾತ್ರವಲ್ಲ. ಅದರ ಬೆನ್ನಿಗಿದ್ದ ಅಮೆರಿಕ, ಚೀನಾ ಹಾಗೂ ಟರ್ಕಿಗಳ ಡಿಫೆನ್ಸ್ ಇಂಡಸ್ಟ್ರಿಗೆ ಸಹ ಇದು ಹೊಡೆತವೇ.
ಭಾರತವು ಅಣ್ವಸ್ತ್ರ ಕೇಂದ್ರದ ಬೆಟ್ಟಕ್ಕೆ ಆಘಾತ ಕೊಟ್ಟಿದೆಯೇ ಎಂಬುದರ ಬಗ್ಗೆ ಇರುವ ಅನುಮಾನಗಳನ್ನು, ಆ ಬಗ್ಗೆ ಅಲ್ಲಲ್ಲಿ ಸಿಗುತ್ತಿರುವ ಹೊಳಹುಗಳನ್ನೆಲ್ಲ ಪಕ್ಕಕ್ಕಿಟ್ಟುಬಿಡೋಣ. ಪಾಕಿಸ್ತಾನದ ಸೈನಿಕ ವಿಮಾನಗಳನ್ನು ಆಗಸದಲ್ಲಿಯೇ ಉರಿದುಹೋಗುವಂತೆ ಮಾಡಲಾಗಿದೆಯಾ ಎಂಬ ಸಾಧ್ಯತೆಯನ್ನೂ ಗಣನೆಗೆ ತೆಗೆದುಕೊಳ್ಳುವುದು ಬೇಡ. ಅವೆಲ್ಲ ದೃಢೀಕೃತವಲ್ಲ. ಆದರೆ, ಸಾಕ್ಷ್ಯಗಳ ಮೂಲಕ ಅನುಮಾನಕ್ಕೆಡೆಯಿಲ್ಲದಂತೆ ಸಾಬೀತಾಗಿರುವುದೇನೆಂದರೆ ಭಾರತವು ಪಾಕಿಸ್ತಾನದ ವೈಮಾನಿಕ ಸೇನಾನೆಲೆಗಳ ಮೇಲೆ ದಾಳಿ ಮಾಡಿ ಅಲ್ಲಿನ ರೆಡಾರ್ ವ್ಯವಸ್ಥೆ, ರನ್ ವೇ, ಕಟ್ಟಡಗಳು ಸೇರಿದಂತೆ ಮೂಲಸೌಕರ್ಯಗಳನ್ನೆಲ್ಲ ಧ್ವಸ್ತಗೊಳಿಸಿರುವುದು. ಹೀಗೆ ಆಗಬೇಕೆಂದರೆ ಈ ಎಲ್ಲ ನೆಲೆಗಳಲ್ಲಿರುವ ರಕ್ಷಣಾ ವ್ಯವಸ್ಥೆಯನ್ನು ನೆಲಕಚ್ಚಿಸಿರುವುದು, ಅವ್ಯಾವವೂ ಭಾರತದ ಆಘಾತವನ್ನು ಆಗಸದಲ್ಲೇ ತಡೆಯುವಂತೆ ಮಾಡುವಲ್ಲಿ ವಿಫಲವಾಗಿರುವುದು ಸುಸ್ಪಷ್ಟ.
ಪಾಕಿಸ್ತಾನದಲ್ಲಿರುವ ಇಂಥ ಏರ್ ಡಿಫೆನ್ಸ್ ವ್ಯವಸ್ಥೆ ಕೆಲವೆಡೆ ಅಮೆರಿಕದ ರಕ್ಷಣಾ ಉಪಕರಣಗಳನ್ನು ಬಳಸಿದ್ದಾಗಿದ್ದರೆ, ಇನ್ನು ಕೆಲವೆಡೆ ಚೀನಿ ಪರಿಕರಗಳು. ಭಾರತದ ಆಘಾತವು ಇವೆರಡೂ ವ್ಯವಸ್ಥೆಗಳಿಗೆ ಮಣ್ಣುಮುಕ್ಕಿಸಬಹುದಾದಷ್ಟರಮಟ್ಟಿಗೆ ಬೆಳೆದುನಿಂತಿದೆ ಎನ್ನುವುದು ಈಗ ಜಗಜ್ಜಾಹೀರಾಗಿರುವ ಅಂಶ. ಪಂಜಾಬಿನ ಹೋಶಿಯಾರಪುರದಲ್ಲಿ ಬಿದ್ದಿದ್ದ ಚೀನಾ ನಿರ್ಮಿತ ಪಿಎಲ್-15 ಏರ್ ಟು ಏರ್ ಕ್ಷಿಪಣಿಯ ಅವಶೇಷಗಳ ಚಿತ್ರವನ್ನು ಭಾರತದ ಸೇನಾಧಿಕಾರಿಗಳು ಪತ್ರಿಕಾಗೋಷ್ಟಿಯಲ್ಲೇ ಪ್ರದರ್ಶಿಸಿದ್ದಾರೆ. ನಿಖರ ಗುರಿ ಇರಿಸಿಕೊಂಡು ಅತಿವೇಗದಲ್ಲಿ ದಾಳಿ ಮಾಡುವ ಸಾಮರ್ಥ್ಯದ ಕ್ಷಿಪಣಿ ಇದು ಎಂದು ಚೀನಾ ಹೇಳಿಕೊಂಡಿರುವಾಗ, ಅದನ್ನು ಭಾರತವು ಹೊಡೆದುಹಾಕಿರುವುದು ಈ ದೇಶದ ಹೆಚ್ಚುತ್ತಿರುವ ರಕ್ಷಣಾ ತಂತ್ರಜ್ಞಾನ ಸಾಮರ್ಥ್ಯದ ಪ್ರತೀಕ. ಇನ್ನು, ಐನೂರು-ಸಾವಿರಗಳ ಲೆಕ್ಕದಲ್ಲಿದ್ದ ಟರ್ಕಿ ನಿರ್ಮಿತ ಡ್ರೋನುಗಳಲ್ಲಿ ಒಂದೂ ಸಹ ಗುರಿಮುಟ್ಟಲಿಲ್ಲ. ದೆಹಲಿಯನ್ನು ಗುರಿಯಾಗಿಸಿ ಕಳುಹಿಸಿದ್ದ ಕ್ಷಿಪಣಿಯನ್ನು ಸಹ ಭಾರತದ ವಾಯುರಕ್ಷಣಾ ವ್ಯವಸ್ಥೆಯು ಹರ್ಯಾಣದ ಆಗಸದಲ್ಲೇ ಸದೆಬಡಿಯಿತು.
ಈ ಕ್ಷಿಪ್ರಯುದ್ಧದಲ್ಲಿ ಭಾರತದ ಪರವಾಗಿ ಆಗಿರುವ ಪ್ರಾಣಹಾನಿಗಳು ಪಾಕ್ ಕಡೆಯಿಂದ ಆದ ಶೆಲ್ಲಿಂಗ್ ನಲ್ಲಿ ಗಡಿಭಾಗದಲ್ಲಾಗಿರುವುದು. ಅಂದರೆ, ಪಾಕ್ ವಿರುದ್ಧ ಸೆಣೆಸಾಟಕ್ಕೆ ಪ್ರವೇಶಿಸಿದ್ದ ಯಾವ ರಣರಂಗದಲ್ಲೂ ಭಾರತದ ಕಡೆ ಪ್ರಾಣಹಾನಿ ಆಗಿಲ್ಲ. ಲಭ್ಯ ಕಾರ್ಯಾಚರಣೆ ವಿವರಗಳನ್ನು ಮೇಲ್ನೋಟದ ವಿಶ್ಲೇಷಣೆಗೆ ಒಳಪಡಿಸಿದರೆ ತಿಳಿಯುವ ಸಂಗತಿ ಏನೆಂದರೆ, ಭಾರತವು ಹೆಚ್ಚಿನ ಆಘಾತಗಳನ್ನು ಕೊಟ್ಟಿರುವುದು ಯಂತ್ರ-ತಂತ್ರಜ್ಞಾನಗಳ ಮುಖಾಂತರವೇ, ಜನರನ್ನೇನೂ ಗಣನೀಯವಾಗಿ ಅತ್ತ ಕಡೆಗೆ ಸೆಣೆಸುವುದಕ್ಕೆ ಕಳುಹಿಸದೇ! ಇಲ್ಲೆಲ್ಲ ಕ್ಷಾತ್ರದ ಜತೆ ಹೆಗಲು ಕೊಟ್ಟು ಕೆಲಸ ಮಾಡಿರುವುದು, ಈ ಹಿಂದೆ ಯಾವುದು ಬ್ರಾಹ್ಮ ಎಂದು ಕರೆಸಿಕೊಳ್ಳುತ್ತಿತ್ತೋ ಅಂಥ ಜ್ಞಾನವೇ. ಪಾಕಿಸ್ತಾನದ ಅಷ್ಟೊಂದು ಪ್ರದೇಶಗಳಿಗೆ ಪದಾರ್ಪಣೆಯನ್ನೇ ಮಾಡದೇ ಹೊಡೆದಿರುವುದಕ್ಕೆ ಕಾರಣ ಕಂಪ್ಯೂಟರ್ ಮುಂದೆ ಕುಳಿತಿರುವ ಅವೆಷ್ಟೋ ಮಿದುಳುಗಳು ಹಾಗೂ ಅವರಿಂದ ಸೃಷ್ಟಿಯಾಗಿರುವ ತಂತ್ರಜ್ಞಾನ.
ನಿಜ. ಭಾರತದ ಮೇಲೆ ಬೀಳಬಹುದಾಗಿದ್ದ ಕ್ಷಿಪಣಿಗಳನ್ನು ತಡೆಯುವ ನಿಟ್ಟಿನಲ್ಲಿ ರಷ್ಯಾದಿಂದ ಆಮದು ಮಾಡಿಕೊಂಡಿರುವ ಎಸ್ -400 ಕ್ಷಿಪಣಿ ನಿರೋಧಕ ವ್ಯವಸ್ಥೆ ಸಹಾಯ ಮಾಡಿದ್ದಿರಬಹುದು. ಆದರೆ ಮೂರು ದಿನಗಳ ತೀವ್ರ ಸಂಘರ್ಷದಲ್ಲಿ ಪಾಕಿಸ್ತಾನದಿಂದ ಹೆಚ್ಚಾಗಿ ಹಾರಿಬಂದಿದ್ದು ಟರ್ಕಿ ನಿರ್ಮಿತ ಡ್ರೋನುಗಳು. ಇವನ್ನೆಲ್ಲ ಹೊಡೆದುರುಳಿಸುವುದಕ್ಕೆ ಉಪಯೋಗವಾಗಿರುವುದು ಸ್ವದೇಶಿ ನಿರ್ಮಿತ ವಾಯು ರಕ್ಷಣಾ ವ್ಯವಸ್ಥೆ. ಅವುಗಳಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರು ಆಕಾಶತೀರ್. ತೀರ್ ಎಂದರೆ ಹಿಂದಿಯಲ್ಲಿ ಬಾಣ ಎಂದರ್ಥ. ಈ ಆಕಾಶ ಬಾಣ ತಯಾರಿಸಿರುವುದು ಸರ್ಕಾರಿ ಸ್ವಾಮ್ಯದ ಡಿ ಆರ್ ಡಿ ಒ. ರಡಾರ್ ಮತ್ತು ಸೆನ್ಸಾರ್ ಎಲ್ಲದರ ಮಾಹಿತಿಗಳನ್ನು ಸಂಸ್ಕರಿಸಿ, ಆಕಾಶದಲ್ಲಿ ಸಿಗುವ ಸೂಚನೆಗಳನ್ನೆಲ್ಲ ಜಾಲಾಡಿ, ಆ ಪೈಕಿ ನಮ್ಮನ್ನು ಗುರಿಯಾಗಿಸಿ ನುಗ್ಗಿಬರುತ್ತಿರುವ ಅಪಾಯಕಾರಿ ಡ್ರೋನ್ ಇಲ್ಲವೇ ಕ್ಷಿಪಣಿಗಳನ್ನು ಪ್ರತ್ಯೇಕವಾಗಿ ಗುರುತಿಸಿ, ಹಾಗೆ ಗುರುತಿಗೆ ಸಿಕ್ಕವುಗಳ ಮೇಲೆ ಆಕಾಶ್ ಕ್ಷಿಪಣಿ ವ್ಯವಸ್ಥೆಯು ಹೋಗಿ ಘಾತಿಸುವುದನ್ನೊಳಗೊಂಡ ಸಂಗ್ರಹ ವ್ಯವಸ್ಥೆ ಇದು. ಮೋದಿ ಸರ್ಕಾರದ ಮಿಲಿಟರಿ ಆಧುನೀಕರಣದ ಅಂಗವಾಗಿ ವರ್ಷದ ಹಿಂದಷ್ಟೇ ವಾಯುರಕ್ಷಣಾ ವ್ಯವಸ್ಥೆಗೆ ಸೇರಿಕೊಂಡಿರುವಂಥದ್ದಿದು. “ಪಾಕಿಸ್ತಾನದ ಶಸ್ತ್ರಭರಿತ ಡ್ರೋನ್ ಹಾಗೂ ಕ್ಷಿಪಣಿಗಳನ್ನು ಮಾರ್ಗಮಧ್ಯದಲ್ಲೇ ಧ್ವಸ್ತಗೊಳಿಸುವಲ್ಲಿ ಆಕಾಶತೀರ್ ವ್ಯವಸ್ಥೆ ಅಂದುಕೊಂಡಿದ್ದಕ್ಕಿಂತ ಹೆಚ್ಚು ಕ್ಷಮತೆಯಿಂದ ಕೆಲಸ ಮಾಡಿದೆ” ಎಂದು ಈ ಯೋಜನೆಯಲ್ಲಿದ್ದ ವಿಜ್ಞಾನಿ ಪ್ರಹ್ಲಾದ ರಾಮರಾವ್ ಹೇಳಿರುವುದು ಮಾಧ್ಯಮದಲ್ಲಿ ವರದಿಯಾಗಿದೆ.
ಪಾಕಿಸ್ತಾನವು ತೂರಿಬಿಟ್ಟ ಎಲ್ಲ ಡ್ರೋನುಗಳೂ ಶಸ್ತ್ರಭರಿತವಾಗಿದ್ದವು ಎಂದಲ್ಲ. ಒಟ್ಟಾರೆ ವಾಯು ರಕ್ಷಣಾ ವ್ಯವಸ್ಥೆಯನ್ನು ಗಲಿಬಿಲಿಗೊಳಿಸಿ ದಿಕ್ಕುತಪ್ಪಿಸುವುದಕ್ಕೆ ಆ ಪ್ರಮಾಣದ ಡ್ರೋನ್ ತೂರಿಬಿಡಲಾಗಿತ್ತಷ್ಟೆ. ಆದರೆ, ಈ ಪೈಕಿ ಸ್ಫೋಟಕಗಳನ್ನು ಹೊತ್ತಿದ್ದವನ್ನು ಗುರುತಿಸಿ ಹೊಡೆದುರುಳಿಸುವ ಕೆಲಸವನ್ನು ಆಕಾಶತೀರ್ ವ್ಯವಸ್ಥೆ ಮಾಡಿದರೆ, ಉಳಿದವನ್ನು ಎಲ್-70 ಗನ್ ಗಳು ವಿಚಾರಿಸಿಕೊಂಡವು. ಮೂಲತಃ ಸೋವಿಯತ್ ಮಾದರಿಯ ಇದನ್ನು ಇತ್ತೀಚೆಗೆ ಭಾರತ್ ಎಲೆಕ್ಟ್ರಾನಿಕ್ಸ್ ಮೇಲ್ದರ್ಜೆಗೆ ಏರಿಸಿಕೊಂಡಿದೆ ಎಂಬುದಿಲ್ಲಿ ಗಮನಾರ್ಹ.
ಇನ್ನು, ಈ ಸಂಘರ್ಷದ ಪ್ರಾರಂಭದಲ್ಲಿ ಮೊದಲಿಗೆ ಪಾಕಿಸ್ತಾನದ ಒಂಬತ್ತು ಉಗ್ರ ಶಿಬಿರಗಳು ಹಾಗೂ ನಂತರದಲ್ಲಿ ಪಾಕ್ ಮಿಲಿಟರಿ ನೆಲೆಗಳ ಮೇಲೆ ಪ್ರಹಾರ ಮಾಡುವುದಕ್ಕೆ ಬಳಕೆಯಾಗಿರುವ ತಂತ್ರಜ್ಞಾನಗಳು ಸಹ ಭಾರತದ ಖಾಸಗಿ ರಕ್ಷಣಾ ಉದ್ದಿಮೆಗಳ ನವೋದ್ದಿಮೆ ಉತ್ಸಾಹವನ್ನು ಜಗತ್ತಿಗೆ ಸಾರಿ ಹೇಳಿವೆ. ದಾಳಿಯ ಎಲ್ಲ ವಿವರಗಳೂ ಅಧಿಕೃತವಾಗಿಲ್ಲವಾದರೂ ರಕ್ಷಣಾ ಪರಿಣತರು ಈ ದಾಳಿಗಳಲ್ಲಿ ಬಳಕೆಯಾಗಿರಬಹುದಾದ ಅಸ್ತ್ರಗಳ ಬಗ್ಗೆ ಹಲವು ಆಯಾಮಗಳಲ್ಲಿ ವಿಶ್ಲೇಷಿಸಿದ್ದಾರೆ. ಇನ್ನು ಕೆಲವು ವಿವರಗಳನ್ನು ಸೇನೆಯೇ ಹಂಚಿಕೊಂಡಿದೆ.
ಇವೆಲ್ಲವುಗಳಿಂದ ಸಿಕ್ಕ ಚಿತ್ರಣವೇನೆಂದರೆ, ಇವುಗಳಲ್ಲಿ ಬ್ರಿಟಿಷ್ ಸ್ಕಾಲ್ಪ್ ಕ್ಷಿಪಣಿಗಳು ಮತ್ತು ಫ್ರಾನ್ಸ್ ನ ಹ್ಯಾಮರ್ ಬಾಂಬ್ ಇವೆಲ್ಲ ಬಳಕೆಯಾಗಿದ್ದರೂ ಸಾಥ್ ನೀಡಿರುವ ದೇಸಿ ಶಸ್ತ್ರಗಳ ಹಿರಿಮೆಯೂ ದೊಡ್ಡದು. ಉದಾಹರಣೆಗೆ, ಭವಾಲ್ಪುರದ ಜೈಷೆ ಉಗ್ರ ಕೇಂದ್ರ ಹಾಗೂ ಮುರಿದ್ಕೆಯ ಲಷ್ಕರ್ ಉಗ್ರ ಕೇಂದ್ರದ ಮೇಲೆ “ನಾಗಾಸ್ತ್ರ” ಪ್ರಯೋಗಿಸಲಾಗಿದೆ ಎಂಬ ವರದಿಗಳಿವೆ. ದೇಶಿಯವಾದ ಸೊಲಾರ್ ಇಂಡಸ್ಟ್ರಿ ಉತ್ಪಾದಿಸಿರುವ ಈ ಹಂತಕ ಡ್ರೋನುಗಳನ್ನು ಜೂನ್ 2024ರಲ್ಲಿ ಸುಮಾರು 400 ಚಿಲ್ಲರೆ ಸಂಖ್ಯೆಯಲ್ಲಿ ಸೇನೆಗೆ ಸೇರಿಸಿಕೊಳ್ಳಲಾಗಿದೆ. ಒಂದೂವರೆ ಕೆಜಿವರೆಗಿನ ಸ್ಫೋಟಕಗಳನ್ನು ಹೊತ್ತು ಸಾಗಬಲ್ಲ ಈ ನಾಗಾಸ್ತ್ರವು ತನ್ನ ನಿರ್ದೇಶಿತ ಗುರಿಯ ತಲೆಯ ಮೇಲೆ ಸುತ್ತುತ್ತ ಸುಳಿದಾಡಿ, ಗುರಿಯನ್ನು ಮತ್ತೊಮ್ಮೆ ಖಾತ್ರಿ ಪಡಿಸಿಕೊಂಡೇ ಕೆಳಕ್ಕೆ ಧುಮುಕುತ್ತದೆ.
ಬೆಂಗಳೂರಿನ ಅಲ್ಫಾ ಡಿಸೈನ್ ಕಂಪನಿಯು ಇಸ್ರೇಲಿನ ಕಂಪನಿಯ ಜತೆ ಸೇರಿ ನಿರ್ಮಿಸಿರುವ ಸ್ಕೈಸ್ಟ್ರೈಕರ್ ಸಹ ಇನ್ನೊಂದು ಬಗೆಯ ಸೂಸೈಡ್ ಡ್ರೋನ್. ಐದು ಕೆಜಿವರೆಗೆ ಸ್ಫೋಟಕಗಳನ್ನು ಹೊತ್ತು, ನೂರು ಕಿಲೊಮೀಟರ್ ವ್ಯಾಪ್ತಿಯಲ್ಲಿ ಇರುವ ಗುರಿಗಳನ್ನು ಕರಾರುವಾಕ್ ಆಗಿ ತಲುಪಬಲ್ಲ, ನಂತರ ತಮ್ಮನ್ನು ತಾವು ಸ್ಫೋಟಿಸಿಕೊಂಡು ವೈರಿ ನೆಲೆಯನ್ನು ಧ್ವಂಸಗೊಳಿಸುವ ಈ ಡ್ರೋನುಗಳನ್ನು 2021ರಲ್ಲೇ ನೂರರ ಸಂಖ್ಯೆಯಲ್ಲಿ ಭಾರತೀಯ ಸೇನೆಗೆ ಸೇರಿಸಿಕೊಳ್ಳಲಾಗಿತ್ತು.
ಅದಂಪುರದ ವಾಯುನೆಲೆಯಲ್ಲಿ ಯೋಧರಿಗೆ ಯಶಸ್ಸಿನ ಅಭಿನಂದನೆ ಸಲ್ಲಿಸುತ್ತ ಪ್ರಧಾನಿ ಹೇಳಿರುವ ಮಾತುಗಳು ಮಾರ್ಮಿಕವಾಗಿವೆ. “ನಮ್ಮ ಶಸ್ತ್ರಗಳನ್ನು ಪರೀಕ್ಷಿಸುವುದಕ್ಕೂ ಒಳ್ಳೇ ಅವಕಾಶವಾಯಿತು. ತರಬೇತಿ ಪಡೆದಿದ್ದ ನೀವೆಲ್ಲ ಇವನ್ನು ಯಾವಾಗ ಪ್ರಯೋಗಿಸುವ ಅವಕಾಶ ಸಿಗುತ್ತದೆ ಎಂದು ಕಾತರದಿಂದ್ದಿರಿ…”
ಯಾವುದನ್ನು ಜಗತ್ತು ಪ್ರಾಚೀನ ಇತಿಹಾಸ ಎಂದು ಗುರುತಿಸುತ್ತದೋ ಅದರಲ್ಲಿ ಭಾರತದ ರಕ್ಷಣಾ ಪರಿಕರದ ಕೊಡುಗೆ ಮಹತ್ತ್ವದ್ದಾಗಿತ್ತು. ಏಕೆಂದರೆ, ಅವತ್ತಿಗೆ ಖಡ್ಗಗಳು ಪ್ರಮುಖ ಆಯುಧಗಳಲ್ಲೊಂದು. ಅದಕ್ಕೋಸ್ಕರ ಅರಬ್ಬರು, ಪಶ್ಚಿಮದವರೆಲ್ಲ ಬಹುಬೇಡಿಕೆಯಿಂದ ಆತುಕೊಂಡಿದ್ದು ಭಾರತದಲ್ಲಿ ಉತ್ಪಾದನೆಯಾಗುತ್ತಿದ್ದ ಉಕ್ಕನ್ನು. ವೂಟ್ಜ್ ಸ್ಟೀಲ್ ಎಂದೇ ಅದು ಪ್ರಸಿದ್ಧವಾಗಿತ್ತು. ವೂಟ್ಜ್ ಎಂಬುದು ತಮಿಳು-ಕನ್ನಡಗಳಲ್ಲಿ ಬಳಕೆಯಲ್ಲಿರುವ ಉಕ್ಕು ಶಬ್ದದ ಅಪಭ್ರಂಶ. ನಮ್ಮವರು ಜಗತ್ತಿನ ಬೇರ್ಯಾವುದೇ ಭಾಗಕ್ಕಿಂತ ಉತ್ತಮ ಗುಣಮಟ್ಟದ ಉಕ್ಕು ತಯಾರಿಸುವುದರಲ್ಲಿ ಕ್ರಿಸ್ತ ಪೂರ್ವ 300ನೇ ಇಸ್ವಿಯಿಂದಲೇ ಪ್ರಸಿದ್ಧರಾಗಿದ್ದರು. ಹಾಗೆಂದೇ, ಡಮಾಸ್ಕಸ್ ಖಡ್ಗ ಅತಿ ಪ್ರಸಿದ್ಧವಾಗಿದ್ದರೂ ಅದರ ತಯಾರಿಕೆಗೆ ಬೇಕಾದ ಸ್ಟೀಲ್ ಹೋಗುತ್ತಿದ್ದದ್ದು ಭಾರತದಿಂದಲೇ. ಖಡ್ಗ ತಯಾರಿಕೆಗೆ ಇಲ್ಲಿನ ಸ್ಟೀಲ್ ಗಟ್ಟಿಗಳನ್ನೇ ರೋಮ್ ಸೇರಿದಂತೆ ಪಶ್ಚಿಮದ ರಾಜಸತ್ತೆಗಳೆಲ್ಲ ಪಟ್ಟು ಹಿಡಿದವರಂತೆ ಬಳಸುತ್ತಿದ್ದವು.
ಹತ್ತೇ ವರ್ಷ ಹಿಂದಕ್ಕೆ ಹೋದರೆ, ಆಗ ಭಾರತದ ರಕ್ಷಣಾ ಪರಿಕರಗಳ ವ್ಯವಸ್ಥೆ ಶೇ. 70ರಷ್ಟು ಆಮದನ್ನೇ ಅವಲಂಬಿಸಿದ್ದ ಸ್ಥಿತಿ ಇತ್ತು. ಇವತ್ತಿಗೆ, ಶೇ. 65ರಷ್ಟು ರಕ್ಷಣಾ ಪರಿಕರಗಳು ಭಾರತದಲ್ಲೇ ಉತ್ಪಾದನೆ ಆಗುತ್ತಿವೆ. 2023-24ರ ವಿತ್ತೀಯ ವರ್ಷದಲ್ಲಿ 1.27 ಲಕ್ಷ ಕೋಟಿ ರುಪಾಯಿಗಳ ಮೌಲ್ಯದ ರಕ್ಷಣಾ ಪರಿಕರಗಳ ಉತ್ಪಾದನೆ ಭಾರತದಲ್ಲಾಗಿದೆ. 2014-15ರ ಸಾಲಿಗೆ ಹೋಲಿಸಿದರೆ ಇದು ಬರೋಬ್ಬರಿ ಶೇ. 174ರಷ್ಟು ಏರಿಕೆ. 2023-24ರಲ್ಲಿ ಭಾರತವು ದಾಖಲೆಯ 21,083 ಕೋಟಿ ರುಪಾಯಿಗಳ ಮೌಲ್ಯದ ರಕ್ಷಣಾ ಪರಿಕರಗಳ ರಫ್ತು ಸಾಧಿಸಿತ್ತು.
ಇದೀಗ, ಪಾಕ್ ಜತೆಗಿನ ಮೂರೇ ದಿನಗಳ ಸಂಘರ್ಷವು ಭಾರತದ ರಕ್ಷಣಾ ಉತ್ಪಾದನೆಯು ಡ್ರೋನ್, ರಡಾರ್, ಗುರಿ ನಿರ್ದೇಶಿತ ದಾಳಿ ಸೇರಿದಂತೆ ಹಲವು ವಿಭಾಗಗಳಲ್ಲಿ ಜಗತ್ತಿನ ಸರ್ವಶ್ರೇಷ್ಠರ ಗುಂಪಿನಲ್ಲಿ ನಿಲ್ಲುತ್ತಿರುವುದನ್ನು ಖಾತ್ರಿಪಡಿಸಿದೆ. ಕುಳಿತಲ್ಲಿಂದಲೇ ಯುದ್ಧ ಮಾಡುವ ಹೊಸ ಯುಗದ ಸಾಮರ್ಥ್ಯದಲ್ಲಿ ಭಾರತವನ್ನು ಹೊಸ ಎತ್ತರದಲ್ಲಿರಿಸುತ್ತಿದೆ ಅವೆಷ್ಟೋ ಅನಾಮಿಕ ಯುವ ತಂತ್ರಜ್ಞರ ನೇಪಥ್ಯದ ಬೌದ್ಧಿಕ ಕಾರ್ಯತಂತ್ರದ ಕ್ಷಾತ್ರ!
- ಚೈತನ್ಯ ಹೆಗಡೆ
cchegde@gmail.com
Advertisement