
ಇಸ್ರೇಲ್ ಮತ್ತು ಇರಾನಿನ ನಡುವೆ ತೆರೆದುಕೊಂಡಿರುವ ಯುದ್ಧದ ಬಗ್ಗೆ ಬಹಳಷ್ಟು ರೋಚಕ ವಿವರಗಳನ್ನು ನೀವೆಲ್ಲ ಅದಾಗಲೇ ಓದಿರುತ್ತೀರಿ. ಎರಡು ವರ್ಷದ ಹಿಂದೆ ಗಾಜಾದಿಂದ ಬಂದ ಹಮಾಸ್ ಉಗ್ರರು ಇಸ್ರೇಲಿಯರ ಅಪಹರಣ ಮತ್ತು ಹತ್ಯೆ ಮಾಡಿದಾಗಿನಿಂದ ತೆರೆದುಕೊಂಡಿರುವ ಕದನ ಕಣವು, ಈಗ ಹೆಚ್ಚು-ಕಡಿಮೆ ಇರಾನಿನಲ್ಲಿ ಮತಾಧಾರಿತ ಆಡಳಿತ ವ್ಯವಸ್ಥೆಯನ್ನು ಬದಲಾಯಿಸುವ ಸೂಚನೆಯವರೆಗೆ ಬಂದು ನಿಂತಿದೆ.
ಮೊದಲಿಗೆ ಹಮಾಸ್ ನೆಲೆ ಗಾಜಾವನ್ನು ಇಸ್ರೇಲ್ ನೆಲಸಮಗೊಳಿಸಿದ ರೀತಿ, ನಂತರ ಇರಾನ್ ಪ್ರೇರಿತ ಹಮಾಸ್ ಹಾಗೂ ಹಿಜ್ಬುಲ್ಲಾ ಇವೆರಡೂ ಉಗ್ರ ಸಂಘಟನೆಗಳ ಪ್ರಮುಖರನ್ನೆಲ್ಲ ಗೂಢಚರಿಕೆ ಆಧರಿತ ಗುರಿನಿರ್ದೇಶಿತ ಹತ್ಯೆಗಳಲ್ಲಿ ಮುಗಿಸಿದ ರೀತಿ ಇವೆಲ್ಲವೂ ಅಡಿಗಡಿಗೇ ಇಸ್ರೇಲ್ ಎಂಬ ಪುಟ್ಟ ದೇಶದ ಸಾಮರ್ಥ್ಯವನ್ನು ಜಾಹೀರು ಮಾಡಿಬಿಟ್ಟಿದ್ದವು. ತೀರ ಇರಾನ್ ಮೇಲೆ ನೇರ ಯುದ್ಧ ಆಗಲಿಕ್ಕಿಲ್ಲವಾ ಅಂತ ಅಂದುಕೊಳ್ಳುತ್ತಿರುವಾಗಲೇ ಇಸ್ರೇಲ್ ಅದನ್ನೂ ಸಹ ನಿಜ ಮಾಡಿಬಿಟ್ಟಿದೆ. ಪ್ರತಿಯಾಗಿ ಇರಾನ್ ನಡೆಸಿದ ಕ್ಷಿಪಣಿ ದಾಳಿಗಳಿಗೆ ಸಹಜವಾಗಿಯೇ ಇಸ್ರೇಲ್ ತುಸುಮಟ್ಟಿಗೆ ಘಾಸಿ ಅನುಭವಿಸಿದೆ. ಪ್ರಾಣಹಾನಿಗಳೂ ಆಗಿವೆ. ಆದರೆ, ಇರಾನ್ ಈ ಯುದ್ಧವನ್ನು ತುಂಬ ದೂರದವರೆಗೆ ಮುಂದುವರಿಸುವುದಕ್ಕೆ ಸಾಮರ್ಥ್ಯ ಹೊಂದಿಲ್ಲ ಎಂಬುದು ಅದಾಗಲೇ ಅರಿವಿಗೆ ಬರುತ್ತಿದೆ.
ಈ ಎಲ್ಲ ಹಿನ್ನೆಲೆಗಳಲ್ಲಿ ಇಸ್ರೇಲಿನ ಪರಾಕ್ರಮ, ಕಾರ್ಯತಂತ್ರಗಳನ್ನು ವಿಶ್ಲೇಷಿಸುತ್ತ ಹಾಗೂ ದೃಶ್ಯ ಕಟ್ಟಿಕೊಡುತ್ತ ಹೋಗಬಹುದು. ಆದರೆ, ಈ ಅಂಕಣದ ಉದ್ದೇಶ ಇವೆಲ್ಲದರ ಸಾರಾಂಶ ಪಾಠವೇನು, ಮುಖ್ಯವಾಗಿ ಇಸ್ರೇಲಿಗೆ ದಕ್ಕುತ್ತಿರುವ ಫಲವೇನು ಎಂಬುದನ್ನು ವಿಶ್ಲೇಷಿಸುವುದು. ಎರಡು ವರ್ಷಗಳ ಹಿಂದೆ ತನ್ನ ಮೇಲಾದ ದಾಳಿಗೆ ಇಸ್ರೇಲ್ ಸೇಡು ತೀರಿಸಿಕೊಂಡಿತು ಎಂಬುದಷ್ಟೇ ಇಲ್ಲಿನ ಸಾರಾಂಶವೇನು? ಖಂಡಿತ ಅಲ್ಲ. ಈ ಒಟ್ಟಾರೆ ಸಮರದಲ್ಲಿ ಮೂರು ಮುಖ್ಯ ಅಚ್ಚರಿಗಳಿವೆ. ಒಂದು, ಇಡೀ ಪ್ರಕರಣದಲ್ಲಿ ಅಮೆರಿಕವನ್ನು ಇಸ್ರೇಲ್ ತನ್ನ ಬೆನ್ನಿಗೆ ನಿಲ್ಲುವಂತೆ ಮಾಡಿರುವ ರೀತಿ. ಎರಡು, ಭಾರತ ತೆರೆದಿರಿಸುತ್ತಿರುವ ಐಮೆಕ್ ಆರ್ಥಿಕ ಕಾರಿಡಾರ್ ಅನ್ನು ಸ್ವಾಗತಿಸುವುದಕ್ಕೆ ತಕ್ಕಂತೆ ಬದಲಾಗುತ್ತಿದ್ದ ಪಶ್ಚಿಮ ಏಷ್ಯದ ಬದಲಾವಣೆಯ ವೇಗವನ್ನು ಇಸ್ರೇಲ್ ಹೆಚ್ಚಿಸಿರುವ ರೀತಿ. ಮೂರು, ಇಡೀ ಪಶ್ಚಿಮ ಏಷ್ಯ ಪ್ರಾಂತ್ಯದ ನಕಾಶೆಯಲ್ಲಿ ಇಸ್ರೇಲ್ ಏಕಮೇವ ‘ಅಘೋಷಿತ’ ಅಣ್ವಸ್ತ್ರ ಬಲವಾಗಿ ಹೊರಹೊಮ್ಮುತ್ತಿರುವುದು.
ಇಸ್ರೇಲ್-ಅಮೆರಿಕ ಯಾವತ್ತಿಗೂ ಮಿತ್ರರು ಎಂಬುದೇನೋ ಸರಿ. ಡೀಪ್ ಸ್ಟೇಟ್ ಎಂದು ಕರೆಸಿಕೊಳ್ಳುವ ಅಮೆರಿಕದ ಪಟ್ಟಭದ್ರರ ನೆಲೆಯಲ್ಲಿ ಹಾಗೂ ವ್ಯಾಪಾರ-ಹಣಕಾಸು ವ್ಯವಸ್ಥೆಗಳಲ್ಲಿ ಯಹೂದಿಗಳು ಪ್ರಬಲವಾಗಿರುವುದರಿಂದ ಅಮೆರಿಕವು ಯಾವತ್ತೂ ಇಸ್ರೇಲ್ ಪರ ಎಂಬುದು ಮೇಲ್ನೋಟದ ಸಂಗತಿ ಹೌದು. ಆದರೆ, ಇವೆಲ್ಲದರ ನಡುವೆಯೇ ಅಲ್ಲೊಂದು ಹಿತಾಸಕ್ತಿಗಳ ಸ್ಪರ್ಧೆ ಇದೆ.
ಈಗಿನ ಸಂದರ್ಭವನ್ನೇ ಗಮನಿಸಿದರೂ ಅಂಥದೊಂದು ಸೂಕ್ಷ್ಮ ತಿಳಿಯುತ್ತದೆ. ಉದಾಹರಣೆಗೆ, ವಾರದ ಹಿಂದೆ ಇಸ್ರೇಲ್ ಮೊದಲಿಗೆ ಇರಾನಿನಲ್ಲಿ ದಾಳಿ ನಡೆಸಿದಾಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು, “ದಾಳಿ ನಡೆಸುವ ಮುಂದೆ ಇಸ್ರೇಲ್ ನಮಗೆ ಸೂಚನೆ ಕೊಟ್ಟಿತ್ತೆಂಬುದು ನಿಜ. ಆದರೆ ಈ ದಾಳಿ ಪ್ರಕ್ರಿಯೆಯಲ್ಲಿ ನಾವಿರಲಿಲ್ಲ” ಎಂದು. ಇದರರ್ಥ ಎಂದರೆ ಇರಾನ್ ಪ್ರತಿದಾಳಿಯಲ್ಲಿ ಅಮೆರಿಕವನ್ನು ಗುರಿಯಾಗಿಸಿಕೊಳ್ಳುವುದು ಬೇಡ, ಏಕೆಂದರೆ ಇದರಲ್ಲಿ ನಮ್ಮ ಪಾಲ್ಗೊಳ್ಳುವಿಕೆ ಇಲ್ಲ ಎನ್ನುವುದು. ಆದರೆ, ಯಾವಾಗ ಇರಾನಿನ ಮಿಲಿಟರಿ ಹಾಗೂ ಗುಪ್ತಚರ ನಾಯಕತ್ವ ಹಾಗೂ ವೈಮಾನಿಕ ಸಾಮರ್ಥ್ಯವನ್ನು ಸಂಪೂರ್ಣ ನೆಲಕಚ್ಚಿಸಿರುವುದು ಖಾತ್ರಿಯಾಯಿತೋ ಆಗ ಡೊನಾಲ್ಡ್ ಟ್ರಂಪ್ ಧ್ವನಿಯೇ ಬದಲಾಯಿತು. “ಬೇಷರತ್ ಶರಣಾಗದಿದ್ದರೆ ಇಸ್ರೇಲ್ ಜತೆಗೆ ಸೇರಿ ಇರಾನಿನ ಪರಮೋಚ್ಛ ನಾಯಕ ಖಮೇನಿಯನ್ನು ಇಲ್ಲವಾಗಿಸುವುದಕ್ಕೂ ಸಿದ್ಧ” ಎಂದು ಬೆದರಿಕೆ ಹಾಕುವ ಮಟ್ಟಿಗೆ ಅಮೆರಿಕ ಬದಲಾಗಿದೆ. ಮಧ್ಯ ಏಷ್ಯದ ಚರಿತ್ರೆ ತಿರುಗಿಕೊಳ್ಳುತ್ತಿರುವ ಈ ಹಂತದಲ್ಲಿ ಅಲ್ಲಿ ತಮ್ಮ ಹೆಸರಿಗೊಂದು ಜಾಗ ಕಲ್ಪಿಸಿಕೊಳ್ಳುವುದು ಯಾರಿಗಿಷ್ಟವಿಲ್ಲ ಹೇಳಿ?
ಅದಿರಲಿ. ಇಸ್ರೇಲ್ ಆಗಿರಲಿ, ಭಾರತವಾಗಿರಲಿ ಅಥವಾ ಇನ್ಯಾವುದೇ ದೇಶವಾಗಿರಲೀ ಪ್ರಾಂತ್ಯವೊಂದರ ಏಕಮೇವ ಹೀರೋ ಆಗುವುದನ್ನು ಅಮೆರಿಕದ ವ್ಯವಸ್ಥೆ ಸಹಿಸುವುದಿಲ್ಲ. ಮಧ್ಯ ಏಷ್ಯದಲ್ಲಿ ಸೌದಿ ಅರೇಬಿಯ ಹಾಗೂ ಇತರ ದೇಶಗಳು ತೈಲ ವ್ಯವಹಾರ ಸೇರಿದಂತೆ ಹಲವು ವಿಚಾರಗಳಲ್ಲಿ ಅಮೆರಿಕದ ಮಾತು ಕೇಳಬೇಕೆಂದರೆ ಅವರಿಗೊಂದು ಹೆದರಿಕೆ ಇರಬೇಕು. ನಿಮ್ಮನ್ನು ಇರಾನ್ ದಾಳಿ ಮಾಡಿಬಿಟ್ಟರೆ ನಾವು ರಕ್ಷಣೆಗೆ ಬರುತ್ತೇವೆ, ಇಸ್ರೇಲ್ ನಿಮ್ಮ ಮೇಲೆ ದಾಳಿ ಮಾಡದಂತೆ ಅದನ್ನು ಮಿತ್ರತ್ವದಲ್ಲೇ ನಿಭಾಯಿಸುತ್ತೇವೆ… ಎಂದೆಲ್ಲ ಮಧ್ಯ ಏಷ್ಯದ ಇತರ ಶಕ್ತಿಗಳನ್ನು ತನ್ನ ಲಾಭಕ್ಕೆ ಪಳಗಿಸಿಕೊಳ್ಳುವುದಕ್ಕೆ ಅಮೆರಿಕವು ಇರಾನ್ ಅನ್ನು ಬಳಸಿಕೊಂಡಿತ್ತು. ಇರಾಕ್, ಸಿರಿಯಾ ಇಲ್ಲೆಲ್ಲವೂ ಇದೇ ಕತೆ. ಹೀಗಾಗಿಯೇ, ಅಮೆರಿಕವು ಈವರೆಗೆ ಇರಾನ್ ವಿಚಾರದಲ್ಲಿ ಆರ್ಥಿಕ ದಿಗ್ಬಂಧನಗಳ ಮೂಲಕ ಬಹಳ ಕಟುವಾಗಿಯೇ ವರ್ತಿಸಿದೆ ಎಂದೆನಿಸಿದರೂ ಅಣ್ವಸ್ತ್ರದ ವಿಚಾರದಲ್ಲಿ ಅದು ಇಸ್ರೇಲಿನಷ್ಟು ಬಿಗಿ ನಿಲವನ್ನು ಹೊಂದಿರಲೇ ಇಲ್ಲ. 2015ರಲ್ಲಿ ‘ಜಾಯಿಂಟ್ ಕಾಂಪ್ರಹೆನ್ಸಿವ್ ಪ್ಲಾನ್ ಆಫ್ ಆ್ಯಕ್ಶನ್’ ಎಂಬ ಅಮೆರಿಕ ಪ್ರಣೀತ ಒಪ್ಪಂದವನ್ನೇ ಗಮನಿಸಿದರೂ ಅಲ್ಲಿ ಇರಾನ್ ಅಣ್ವಸ್ತ್ರ ಹೊಂದುವ ಸಮಯವನ್ನು ಇನ್ನಷ್ಟು ದೂರ ಮಾಡುವ ಪ್ರಯತ್ನವಿತ್ತೇ ಹೊರತು, ಸಂಪೂರ್ಣ ಅದನ್ನು ನಿರ್ಬಂಧಿಸುವ ನಡೆಯಾಗಿರಲಿಲ್ಲ. ತಮ್ಮ ಮೊದಲ ಅವಧಿಯಲ್ಲಿ ಈ ಒಪ್ಪಂದವನ್ನು ಸಂಪೂರ್ಣ ಬರ್ಖಾಸ್ತಾಗಿಸಿದ್ದ ಡೊನಾಲ್ಡ್ ಟ್ರಂಪ್, ಈ ಬಾರಿ ಅಧಿಕಾರಕ್ಕೆ ಬರುತ್ತಲೇ ಇರಾನ್ ಜತೆಗೆ ಮಾತುಕತೆಯ ದಾರಿ ಎಂಬ ಹೊಸರಾಗ ಹಾಡಿದ್ದರು.
ಇಸ್ರೇಲ್ ವಾದ ಪ್ರಾರಂಭದಿಂದಲೂ ಖಚಿತವಾಗಿತ್ತು. ಇರಾನ್ ಅದಾಗಲೇ ಸಾವಿರಾರು ಕಿಲೊಮೀಟರ್ ದೂರದಲ್ಲಿರುವ ಇಸ್ರೇಲನ್ನು ತಲುಪುವ ಖಂಡಾಂತರ ಕ್ಷಿಪಣಿಗಳನ್ನು ದೊಡ್ಡಮಟ್ಟದಲ್ಲಿ ಹೊಂದಿದೆ. ಅವು ನೂರರ ಸಂಖ್ಯೆಯಲ್ಲಿ ತೂರಿಬಂದಾಗ ಕೆಲವಾದರೂ ಇಸ್ರೇಲಿನ ವಾಯು ರಕ್ಷಣಾ ವ್ಯವಸ್ಥೆಯಿಂದ ತಪ್ಪಿಸಿಕೊಂಡು ಗುರಿಗೆ ಬಡಿಯುವುದು ಸಹಜ. ಅವುಗಳಲ್ಲೊಂದರಲ್ಲಿ ಅಣ್ವಸ್ತ್ರ ಇದ್ದಿದ್ದೇ ಆದರೆ, ಭೂವಿಸ್ತಾರದಲ್ಲಿ ತುಂಬ ಚಿಕ್ಕ ದೇಶವೇ ಆಗಿರುವ ಇಸ್ರೇಲಿನ ಕತೆಯೇ ಮುಗಿದುಹೋಗುತ್ತದೆಯಲ್ಲವೇ? ಹೀಗಾಗಿ ನಮಗಿದು ಅಸ್ತಿತ್ವದ ಪ್ರಶ್ನೆ. ಹಾಗೆಂದೇ, ಇರಾನ್ ಅರವತ್ತು ಶೇಕಡಕ್ಕಿಂತ ಹೆಚ್ಚಿನ ಯುರೇನಿಯಂ ಸಂವರ್ಧನೆ ಮಾಡುವುದಕ್ಕೆ ಸಫಲವಾಗಿರುವ ಮಾಹಿತಿ ಸಿಗುತ್ತಲೇ ದಾಳಿ ನಡೆಸಿದ್ದೇವೆ ಎಂಬುದು ಅದು ನೀಡಿರುವ ಸಮಜಾಯಿಶಿ.
ಒಟ್ಟಿನಲ್ಲಿ ಅಮೆರಿಕವನ್ನು ಕೊನೆಗೂ ತನ್ನ ಧ್ವನಿ ಜತೆಗೇ ಧ್ವನಿ ಸೇರಿಸುವಂತೆ ಮಾಡಿರುವುದರಲ್ಲೇ ಇಸ್ರೇಲಿನ ದೊಡ್ಡ ಫಲಶ್ರುತಿ ಇದೆ!
ಸೌದಿ ಅರೇಬಿಯ, ಯುಎಇ, ಒಮನ್, ಜೊರ್ಡಾನ್ ಸೇರಿದಂತೆ ಪಶ್ಚಿಮ ಏಷ್ಯದ ಬಹುತೇಕ ದೇಶಗಳೆಲ್ಲ ತಮ್ಮ ಇಸ್ಲಾಂ ಐಡೆಂಟಿಟಿಯನ್ನು ಹಿನ್ನೆಲೆಗೆ ತಳ್ಳಿ, ವ್ಯಾಪಾರ ಕೇಂದ್ರೀತವಾಗುವುದಕ್ಕೆ ಹೆಜ್ಜೆ ಹಾಕಿರುವುದು ಈ ದಶಕದಲ್ಲಿ ಮುಖ್ಯ ಬೆಳವಣಿಗೆ. ತೈಲೋತ್ತರ ಆರ್ಥಿಕತೆಗೆ ಸಿದ್ಧವಾಗಬೇಕಾದ ಒತ್ತಡ ಒಂದೆಡೆಯಾದರೆ, ಈ ಎಲ್ಲ ದೇಶಗಳಲ್ಲಿ ಅಲ್ಲಿನ ರಾಜಮನೆತನಗಳ ಅಧಿಕಾರಕ್ಕಿರುವ ಸವಾಲು ಖುದ್ದು ಇಸ್ಲಾಂ ನೆಲೆಯದ್ದೇ ಎಂಬುದು ಇನ್ನೊಂದು ವಾಸ್ತವ. ಉದಾಹರಣೆಗೆ, ಸೌದಿ ಅರೇಬಿಯದ ಅಲ್ ಸೌದ್ ಮನೆತನವನ್ನು ನಾಳೆ ಅಧಿಕಾರದಿಂದ ಯಾರಾದರೂ ಭ್ರಷ್ಟಗೊಳಿಸಬಲ್ಲರೆಂದರೆ ಅದು ಇಸ್ರೇಲ್ ಅಥವಾ ಇನ್ಯಾವುದೇ ಕ್ರೈಸ್ತ ದೇಶ ಎಂಬ ಸಾಧ್ಯತೆಗಿಂತ, ಐಸಿಸ್ ಇಲ್ಲವೇ ಇರಾನ್ ಬೆಂಬಲಿತ ಉಗ್ರ ಸಂಘಟನೆಗಳು ಆ ಕೆಲಸ ಮಾಡುವ ಸಾಧ್ಯತೆಗಳೇ ಹೆಚ್ಚು. ಹೀಗಾಗಿಯೇ, ಖುದ್ದು ತಾನೇ ಒಂದು ಕಾಲದಲ್ಲಿ ಉಗ್ರವಾದವನ್ನು ಸಲಹಿದ್ದ ಸೌದಿ ಅರೇಬಿಯವು ಈಗ ಅಂಥ ಎಲ್ಲ ಆಯಾಮಗಳಿಂದ ಮುಕ್ತಿ ಹೊಂದುವ ಬಗ್ಗೆ ಉತ್ಸುಕವಾಗಿದೆ. ಭಾರತವು ಗುಜರಾತ್ ತೀರದಿಂದ ಶುರುಮಾಡಿ ಯುಎಇ-ಸೌದಿ-ಜೋರ್ಡಾನ್-ಇಸ್ರೇಲ್ ಹಾದುಕೊಂಡು ಮುಂದೆ ಗ್ರೀಸ್ ತಲುಪಿಕೊಳ್ಳುವ ಐಮೆಕ್ ವ್ಯಾಪಾರ ಕಾರಿಡಾರ್ ಈ ಕಾರಣಕ್ಕಾಗಿಯೇ ಇವರೆಲ್ಲರ ಆಸಕ್ತಿ ಹೆಚ್ಚಿಸಿದೆ.
ಆದರೆ ಈ ಕಾರಿಡಾರ್ ಸೂಸೂತ್ರವಾಗಿರುವುದಕ್ಕೆ ಹಿಜ್ಬುಲ್ಲ, ಹೂತಿ, ಹಮಾಸ್ ಥರದ ಗುಂಪುಗಳು ಆ ಪ್ರಾಂತ್ಯದಲ್ಲಿ ಬಲ ಕಳೆದುಕೊಳ್ಳುವುದು ಅವಶ್ಯವಿತ್ತು. ಭಾರತಕ್ಕೆ ದ್ವಿಪಕ್ಷೀಯ ನೆಲೆಯಲ್ಲಿ ಇರಾನ್ ಜತೆಗೆ ಉತ್ತಮ ಸಂಬಂಧವೇ ಇದ್ದರೂ ಇವೆಲ್ಲ ಆತಂಕದ ವಿಷಯಗಳೇ ಆಗಿದ್ದವು. ಹೀಗಾಗಿ, ಇರಾನಿನ ಅಣ್ವಸ್ತ್ರ ಹಾಗೂ ಮಿಲಿಟರಿ ಸಾಮರ್ಥ್ಯಗಳನ್ನು ಏನಿಲ್ಲವೆಂದರೂ ಕನಿಷ್ಟ 20 ವರ್ಷಗಳಷ್ಟು ಹಿಂದಕ್ಕೆ ತೆಗೆದುಕೊಂಡುಹೋಗಿರುವ ಇಸ್ರೇಲ್ ದಾಳಿಯ ಬಗ್ಗೆ ಬಹುತೇಕ ದೇಶಗಳಿಗೆ ಖುಷಿಯಿದೆ.
ಇಷ್ಟೆಲ್ಲ ಆಗುತ್ತಿರುವಾಗ, ಗ್ರೀಸ್ ಮತ್ತು ಇಸ್ರೇಲ್ ಮಧ್ಯೆ ಸಮುದ್ರದಲ್ಲಿ ಮಲಗಿಕೊಂಡಂತಿರುವ ಸೈಪ್ರಸ್ ಎಂಬ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಕೊಟ್ಟಿರುವುದೂ ಪ್ರಮುಖ ನಡೆ. ಏಕೆಂದರೆ, ಇರಾನ್ ಹೊರತುಪಡಿಸಿದರೆ ತನ್ನದೇ ಆದ ಇಸ್ಲಾಮಿಕ್ ಸಾಮ್ರಾಜ್ಯವೊಂದನ್ನು ಪಶ್ಚಿಮ ಏಷ್ಯದಲ್ಲಿ ಹೊಂದುವ ಕನಸಿರುವುದು ಟರ್ಕಿಗೆ. ಯಾವ ಸೈಪ್ರಸ್ ದೇಶದ ಉತ್ತರ ಭಾಗವನ್ನು ಟರ್ಕಿ ಆಕ್ರಮಿಸಿಕೊಂಡಿದೆಯೇ ಅಂಥ ದೇಶಕ್ಕೆ ಹೋಗಿ ಅಲ್ಲಿ ರಕ್ಷಣಾ ಒಪ್ಪಂದಗಳ ಬಗ್ಗೆ ಮಾತನಾಡಿರುವ ಭಾರತದ ನಡೆಯು ಆ ಪ್ರಾಂತ್ಯದಲ್ಲಿ ಅಳಿದುಳಿದಿರುವ ಅರಾಜಕ ಶಕ್ತಿಗಳನ್ನೂ ವಿಚಾರಿಸಿಕೊಳ್ಳುವ ಸೂಚನೆಯೊಂದನ್ನು ರವಾನಿಸಿದಂತಿದೆ.
ಸೌದಿ ಸೇರಿದಂತೆ ಅನೇಕ ಮುಸ್ಲಿಂ ದೇಶಗಳ ಅಧಿಕೃತ ಹೇಳಿಕೆ ನೋಡಹೋದರೆ ಅವರ್ಯಾರೂ ಇಸ್ರೇಲ್ ಮಾಡಿರುವ ದಾಳಿ ಸರಿ ಎಂದು ಅನುಮೋದಿಸಿಲ್ಲ. ಇಸ್ರೇಲನ್ನು ಬೆಂಬಲಿಸುವ ಮೂಲಕ ತಮ್ಮ ಮುಸ್ಲಿಂ ಜನಸಂಖ್ಯೆಯ ಕಣ್ಣಲ್ಲಿ ವಿಲನ್ ಆಗುವುದು ಸಹಜವಾಗಿಯೇ ಅವಕ್ಕೆ ಇಷ್ಟವಿಲ್ಲ. ಆದರೆ ಈ ತೋರಿಕೆಯ ಆಕ್ರೋಶದ ಕೆಳಗೆ ನಗುವೂ ಅವಿತಿದೆ ಎಂದು ತರ್ಕಿಸುವುದಕ್ಕೆ ಕಾರಣಗಳಿವೆ.
“ನಮಗೆ ಅಣ್ವಸ್ತ್ರ ಹೊಂದುವ ಬಯಕೆ ಇಲ್ಲ. ಆದರೆ ಇರಾನ್ ಅಂಥದೊಂದನ್ನು ಹೊಂದಿದರೆ ನಾವೂ ಹೊಂದುವುದು ಅನಿವಾರ್ಯ” ಎಂದು ಸೌದಿ ರಾಜಾಡಳಿತಗಾರ ಎಂಬಿಎಸ್ ಸಂದರ್ಶನವೊಂದರಲ್ಲಿ ಬಹಿರಂಗವಾಗಿಯೇ ಹೇಳಿದ್ದರು. ಸೌದಿ ಹಾಗೂ ಹಲವು ಗಲ್ಫ್ ದೇಶಗಳು ಇಸ್ಲಾಮಿಗೆ ತಕ್ಕಂತೆ ಆಡಳಿತ ನಡೆಸುತ್ತಿಲ್ಲ ಎಂದು ಇರಾನಿನ ಅಧಿಕಾರ ಸೂತ್ರ ಹಿಡಿದವರು, ಮುಲ್ಲಾಗಳೆಲ್ಲ ಬಹಳ ಸಾರಿ ಆಕ್ರೋಶ ವ್ಯಕ್ತಪಡಿಸಿದ್ದಿದೆ. ಹೀಗಾಗಿ ಪಶ್ಚಿಮ ಏಷ್ಯದಲ್ಲಿ ಪ್ರಾಬಲ್ಯ ಮೆರೆಯುವ ಇರಾನ್ ಹಾದಿಯನ್ನು ಮೊಟಕುಗೊಳಿಸುವುದಕ್ಕೆ ಇಸ್ರೇಲ್ ಕಾರ್ಯಾಚರಣೆ ಉಪಯೋಗಕ್ಕೆ ಬಂದಿರುವುದಕ್ಕೆ ಸೌದಿ ಸೇರಿದಂತೆ ಹಲವು ಮುಸ್ಲಿಂ ದೇಶಗಳಿಗೆ ಒಳಗೊಳಗೇ ಖುಷಿ ಇದೆ.
ಆದರೆ, ಇಡೀ ವಿದ್ಯಮಾನದಲ್ಲಿ ಅವರಿಗೆಲ್ಲ ಸಂಕಟವನ್ನೂ ತರುತ್ತಿರುವ ಸಂಗತಿ ಎಂದರೆ, ಪಶ್ಚಿಮ ಏಷ್ಯದಲ್ಲಿ ಕೊನೆಗೂ ಇಸ್ರೇಲ್ ನಾಯಕನಾಗುತ್ತಿದೆಯಲ್ಲ ಎನ್ನುವುದು! ಏಕೆಂದರೆ, ಸೌದಿ-ಕತಾರ್-ಯುಎಇ ಸೇರಿದಂತೆ ಹೆಚ್ಚಿನ ದೇಶಗಳ ಆರ್ಥಿಕ ಶ್ರೀಮಂತಿಕೆ ಏನೇ ಇದ್ದರೂ ಅವರ ಬಳಿ ದೊಡ್ಡಮಟ್ಟದ ಸನ್ನದ್ಧ ಸೈನ್ಯವಿಲ್ಲ. ಅದಕ್ಕೆ ಅವು ಅಮೆರಿಕವನ್ನೋ, ಭವಿಷ್ಯದಲ್ಲಿ ರಷ್ಯ-ಚೀನಗಳನ್ನೋ ಅವಲಂಬಿಸಬೇಕು. ಕೇವಲ ಪಶ್ಚಿಮ ಏಷ್ಯ ಎಂದಲ್ಲ…ಒಟ್ಟಾರೆ ಮುಸ್ಲಿಂ ಜಗತ್ತಿನಲ್ಲಿ ಸೇನೆ ಇಟ್ಟುಕೊಂಡಿರುವ ಪ್ರಮುಖ ಬಲಗಳನ್ನು ಲೆಕ್ಕ ಹಾಕುವುದಕ್ಕೆ ಹೋದರೆ ಇರಾನ್, ಟರ್ಕಿ, ಪಾಕಿಸ್ತಾನ ಇವೆಲ್ಲದರ ಹೆಸರು ಬರುತ್ತದೆ. ಈ ಪೈಕಿ ಇರಾನ್ ಅನ್ನು ಇಸ್ರೇಲ್ ಸದ್ಯಕ್ಕೆ ಹಲ್ಲುಕಿತ್ತ ಹಾವನ್ನಾಗಿಸಿದೆ. ಬಾಡಿಗೆ ಆಧಾರದಲ್ಲಾದರೂ ಕೆಲಸಕ್ಕೆ ಬರುವಂತಿದ್ದ ಪಾಕಿಸ್ತಾನದ ಸೇನಾಬಲವನ್ನು ಭಾರತ ಮತ್ತು ಇಸ್ರೇಲ್ ಗಳೆರಡೂ ಸೇರಿ ಮುಗಿಸುವ ಲಕ್ಷಣಗಳಿವೆ.
ಇಸ್ರೇಲ್ ಈವರೆಗೆ ಒಪ್ಪಿಕೊಂಡಿಲ್ಲವಾದರೂ ಇಡೀ ಜಗತ್ತಿಗೆ ಅದರ ಬಳಿ ಅಣ್ವಸ್ತ್ರ ಬಲದ ಸಿದ್ಧಿ ಯಾವತ್ತೋ ಇದೆ ಎಂಬುದರ ಬಗ್ಗೆ ವಿಶ್ವಾಸವಿದೆ. ಈಗ ಇರಾನ್ ಮತ್ತು ಪಾಕಿಸ್ತಾನಗಳ ಬಳಿ ಸಹ ಅಣ್ವಸ್ತ್ರ ಬಲ ಕಸಿದುಬಿಟ್ಟರೆ, ಮಧ್ಯಏಷ್ಯದಲ್ಲಿ ಅಣ್ವಸ್ತ್ರ-ಸೇನಾಬಲ-ರಕ್ಷಣಾ ತಂತ್ರಜ್ಞಾನ ಎಲ್ಲವನ್ನೂ ಹೊಂದಿರುವ ಏಕೈಕ ದೇಶ ಇಸ್ರೇಲ್ ಆಗಿಬಿಡುತ್ತದೆ. (ಪಾಕಿಸ್ತಾನವು ಪಶ್ಚಿಮ ಏಷ್ಯದ ದೇಶವಲ್ಲದಿದ್ದರೂ ಸೌದಿಗೆ ಅದು ಅಗತ್ಯಬಿದ್ದಾಗ ನೆರವಾಗುವ ಸನ್ನಿವೇಶವಿದೆ. ಈ ಪರಿಸ್ಥಿತಿಯನ್ನು ಇಲ್ಲವಾಗಿಸುವುದಕ್ಕೆ ಭಾರತಕ್ಕಿಂತ ಹೆಚ್ಚಿನ ಉತ್ಸುಕತೆ ಇಸ್ರೇಲಿಗಿದೆ.)
ಇರಾನಿನ ಬಲ ಕ್ಷೀಣಿಸಿ, ಅಲ್ಲಿನ ಅಧಿಕಾರ ಬದಲಾವಣೆಯಾಗುವ ಕಾಲ ಸನ್ನಿಹಿತವಾಗುತ್ತಿರುವುದರ ಬಗ್ಗೆ ಯಾವ ಮುಸ್ಲಿಂ ದೇಶಗಳಿಗೂ ದುಃಖವಿಲ್ಲ. ಆದರೆ, ಚೌಕಾಶಿಗೆಡೆಯಿಲ್ಲದಂತೆ ಇಸ್ರೇಲ್ ಪಶ್ಚಿಮ ಏಷ್ಯದ ಏಕಮೇವಾದ್ವಿತೀಯ ಮಿಲಿಟರಿ ಬಲವಾಗುತ್ತಿರುವದರ ಬಗ್ಗೆ ಮಾತ್ರ ಅವಕ್ಕೆ ಆತಂಕ ಮತ್ತು ಅಸೂಯೆಗಳಿವೆ.
- ಚೈತನ್ಯ ಹೆಗಡೆ
cchegde@gmail.com
Advertisement