
ಅಮೆರಿಕವನ್ನು ಮತ್ತೆ ಮಹಾನ್ ಮಾಡೋಣ ಎನ್ನುತ್ತ ಡೊನಾಲ್ಡ್ ಟ್ರಂಪ್ ಆರಿಸಿ ಬಂದು, ತಾನು ಅಂದುಕೊಂಡಿದ್ದೇ ಹಾದಿ ಎಂಬಂತೆ ಸಾಗುತ್ತಿರುವಾಗಲೇ ಲಾಸ್ ಏಂಜಲೀಸ್ ಎಂಬ ಪ್ರಮುಖ ನಗರ ದೊಂಭಿ-ಅರಾಜಕತೆಗಳಿಂದ ಹೊತ್ತಿ ಉರಿಯುತ್ತಿದೆ. ಅಲ್ಲಿನ ವಲಸಿಗರನ್ನು ಗುರುತಿಸಿ ಖಾಲಿ ಮಾಡಿಸುವ ಪ್ರಕ್ರಿಯೆ ಈಗ ತೀರ ಹಿಂಸಾತ್ಮಕತೆಗೆ ತಿರುಗಿದೆ.
2,000ದ ಸಂಖ್ಯೆಯಲ್ಲಿ ನ್ಯಾಶನಲ್ ಗಾರ್ಡ್ಸ್, ಅಂದರೆ ರಾಜ್ಯವ್ಯಾಪ್ತಿಯ ಕಾನೂನು ಪಾಲಕರನ್ನು ನೇಮಿಸಿದ ನಂತರವೂ ಪ್ರತಿಭಟನೆಗಳು ಮುಂದುವರಿದಿರುವುದರಿಂದ, ಟ್ರಂಪ್ ಈಗ ಅಮೆರಿಕದ ನೌಕಾಸೇನೆಯ ಭಾಗವಾದ ಮರೀನ್ ಬಲವನ್ನು ಲಾಸ್ ಏಂಜಲೀಸ್ ನಲ್ಲಿ ನಿಯೋಜಿಸುವ ಮಾತನಾಡಿದ್ದಾರೆ. ಅದಕ್ಕೆ ಸ್ಥಳೀಯ ಆಡಳಿತಾಧಿಕಾರಿಗಳ ಆಕ್ಷೇಪವೂ ಬಂದಿದೆ. ಇದು ಹೇಗಿದೆ ಎಂದರೆ, ನಮ್ಮಲ್ಲಿ ಕರ್ನಾಟಕದಲ್ಲಿ ಏನೋ ಗಲಭೆಯಾದರೆ ಅದನ್ನು ಇಲ್ಲಿನ ಪೊಲೀಸರು ನಿರ್ವಹಿಸುತ್ತಿರುವಾಗಲೇ ಕೇಂದ್ರವು ಸೇನಾಬಲ ಕಳುಹಿಸಿಬಿಟ್ಟರೆ ಹೇಗಾಗುತ್ತದೋ ಹಾಗೆ. ಇಲ್ಲಿ ಟ್ರಂಪ್ ವ್ಯಗ್ರತೆ ಹಾಗೂ ಹುಚ್ಚಾಟ ಎಂದು ಕರೆಯಬಹುದಾದ ವರ್ತನೆಯ ಆಯಾಮವೂ ಇದ್ದೇ ಇದೆ. ಆದರೆ, ಅದರ ಜತೆ ಜತೆಯಲ್ಲೇ ಅಲ್ಲಿನ ಪರಿಸ್ಥಿತಿ ಎಷ್ಟರಮಟ್ಟಿಗೆ ಕೈಮೀರುತ್ತಿದೆ ಎಂಬ ಸೂಚನೆಯನ್ನೂ ಇದು ಕೊಡುತ್ತಿದೆ.
ಈ ಹಿನ್ನೆಲೆಯಲ್ಲಿ ಈಗ ಪ್ರಸ್ತುತವಾಗುತ್ತಿರುವ ಪ್ರಶ್ನೆ ಎಂದರೆ- ಅಮೆರಿಕವು ಮತ್ತೆ ಗ್ರೇಟ್ ಆಗುವುದು ಹಾಗಿರಲಿ, ಅಳಿದುಳಿದಿರುವ ಹಿರಿತನವನ್ನೂ ಕಳೆದುಕೊಳ್ಳಹೊರಟಿದೆಯಾ ಎಂಬುದು. ಲಿಂಗ, ಜನಾಂಗಗಳ ಆಧಾರದಲ್ಲಿ ಅಮೆರಿಕದಲ್ಲಿ ಹಬ್ಬುತ್ತಿದ್ದ ಅತಿಯಾದ ವೋಕ್ ವಿಚಾರಧಾರೆಯ ನಿಯಂತ್ರಣಕ್ಕೆ ಟ್ರಂಪ್ ಥರದ ಗಟ್ಟಿಗರು ಬರಬೇಕು ಎಂಬುದೊಂದು ಅಭಿಪ್ರಾಯವು ಭಾರತದಿಂದ ಜಾಗತಿಕ ವಿದ್ಯಮಾನಗಳನ್ನು ಗ್ರಹಿಸುತ್ತಿದ್ದ ಜನಸಮೂಹದ್ದೂ ಆಗಿತ್ತು. ಆದರೆ, ಆಡಳಿತ ಶುರುವಾದಾಗಿನಿಂದ ಟ್ರಂಪ್ ಹೋಗುತ್ತಿರುವ ಮಾರ್ಗಕ್ಕೆ ಅವರ ಬೆಂಬಲಿಗರಲ್ಲೇ ಭಿನ್ನಮತ ಶುರುವಾಗಿರುವುದು ಈಗ ಎಲ್ಲರಿಗೂ ಗೋಚರ.
ಟ್ರಂಪ್ ಶುರುಮಾಡಿರುವ ವ್ಯಾಪಾರ ಸಮರವು ವಾಸ್ತವದಲ್ಲಿ ಅಮೆರಿಕದ ಗ್ರಾಹಕರಿಗೇ ಬರೆಯನ್ನು ಹಾಕುತ್ತಿದೆ. ಮೇಕ್ ಇನ್ ಅಮೆರಿಕ ಎಂದು ಟ್ರಂಪ್ ಹೇಳುತ್ತಿದ್ದಾರಾದರೂ ಉತ್ಪಾದಕ ವಲಯದ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ, ತಮ್ಮ ವಸ್ತುಗಳನ್ನು ತಮ್ಮಲ್ಲೇ ತಯಾರಿಸಿಕೊಳ್ಳಲು ಬೇಕಿರುವ ಶ್ರಮಕ್ಕೆ ಅಮೆರಿಕದ ಜನರೇ ಸಿದ್ಧವಾದಂತಿಲ್ಲ. ಡಾಲರ್ ಅನ್ನು ಜಾಗತಿಕ ವಿನಿಮಯದ ಕರೆನ್ಸಿಯಾಗಿಸಿದ ಏಕಮಾತ್ರ ಕಾರಣಕ್ಕೆ ಸುಲಭ ಹಣದ ಹರಿವನ್ನು ಕಂಡಿರುವ ಅಮೆರಿಕದ ಜನಸಮುದಾಯಕ್ಕೆ ಮತ್ತೆ ಕೈಕೆಸರು ಮಾಡಿಕೊಂಡು ಹೊಸ ಸೌಧ ಕಟ್ಟುವ ಕಿಚ್ಚೇ ಉಳಿದಂತಿಲ್ಲ! ಇದೊಂದು ಭಾಗವಾದರೆ, ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಡೊನಾಲ್ಡ್ ಟ್ರಂಪ್ ಯಾರನ್ನೂ ವಿಶ್ವಾಸದಿಂದ ಜತೆಗಿರಿಸಿಕೊಳ್ಳಲಾಗದ ಸ್ಥಿತಿಗೆ ತಲುಪಿದ್ದಾರೆ. ಅದು ಎಲಾನ್ ಮಸ್ಕ್ ಜತೆಗಿನ ತಿಕ್ಕಾಟದಲ್ಲೇ ಸ್ಪಷ್ಟವಾಗಿದೆ. ನ್ಯಾಟೊ ಮಿತ್ರರಿಂದ ಹಿಡಿದು ಯಾವ ದೇಶದವರೂ ಟ್ರಂಪ್ ಜತೆಗೆ ಉತ್ತಮ ಬಾಂಧವ್ಯ ಉಳಿಸಿಕೊಂಡಿಲ್ಲ ಎಂಬುದು ಸ್ಪಷ್ಟ. ಅದಕ್ಕೆ ಟ್ರಂಪ್ ವರ್ತನೆಯೇ ಕಾರಣ.
ಇಂಥದೊಂದು ಕಾಲಘಟ್ಟದಲ್ಲಿ ನಾವಿರುವಾಗ, ಇಷ್ಟಕ್ಕೂ ‘ಅಮೆರಿಕದ ಗ್ರೇಟ್ನೆಸ್’ ಎನ್ನುವುದರ ಬೇರು ಇರುವುದಾದರೂ ಎಲ್ಲಿ? ಅದಕ್ಕಿರುವ ಶಕ್ತಿ-ಹರವುಗಳಾದರೂ ಏನು? ಅಮೆರಿಕದ ಗ್ರೇಟ್ನೆಸ್ ಎಂಬುದಕ್ಕೆ ಇರುವ ಐತಿಹಾಸಿಕ ಪರಿಪ್ರೇಕ್ಷವಾದರೂ ಏನು? ಇಷ್ಟಕ್ಕೂ ‘ಅಮೆರಿಕವನ್ನು ಮತ್ತೆ ಗ್ರೇಟ್ ಮಾಡೋಣ’ ಎಂದು ಹೇಳುವುದಕ್ಕೆ ಅದು ಮೊದಲಿಗೆ ನಿಜಕ್ಕೂ ಗ್ರೇಟ್ ಆಗಿತ್ತಾ? - ಈ ಎಲ್ಲ ಪ್ರಶ್ನೆಗಳೂ ಈ ಬಾರಿಯ ಅಂಕಣಕ್ಕೆ ಪ್ರಸ್ತುತ.
ಭಾರತದ ಹೆಚ್ಚಿನವರ ಗ್ರಹಿಕೆಯಲ್ಲೂ ಅಮೆರಿಕವು ‘ಯಾವತ್ತಿನಿಂದಲೂ’ ಸೂಪರ್ ಪವರ್ ಎಂಬ ಭಾವ ನೆಲೆ ನಿಂತುಬಿಟ್ಟಿದೆ. ಅದಕ್ಕೆ ಕಾರಣವೂ ಇಲ್ಲದೇ ಇಲ್ಲ. ಸ್ವಾತಂತ್ರ್ಯಾನಂತರ ಭಾರತದ ಒಂದು ವರ್ಗವು ಇಲ್ಲಿ ಪ್ರತಿಭೆಗೆ ತಕ್ಕ ಅವಕಾಶಗಳು ಸಿಗದೇ ಅಮೆರಿಕಕ್ಕೆ ಹೋದಾಗ ಅವರನ್ನು ಅಲ್ಲಿನ ವ್ಯವಸ್ಥೆ ಒಳಗೊಂಡುಕೊಂಡು ಹೊಸ ಅರ್ಥಮಾರ್ಗವನ್ನು ತೋರಿಸಿದ್ದು ಸುಳ್ಳಲ್ಲ. ನಂತರದ ಉದಾರೀಕರಣದ ದಶಕಗಳಲ್ಲಿ ತಂತ್ರಜ್ಞಾನ ಸಂಬಂಧಿ ಉದ್ಯೋಗಗಳು ಹಾಗೂ ಹೊರಗುತ್ತಿಗೆಗಳ ಕ್ಷೇತ್ರವು ಆದಾಯದ ಹರಿವು ಕಲ್ಪಿಸಿದ್ದೂ ಕಣ್ಣ ಮುಂದಿದೆ. ಹಾಗೆಂದೇ, ಅನ್ವೇಷಣೆ-ಹೊಸತನ-ಪ್ರತಿಭಾ ಪುರಸ್ಕಾರ ಎಂದೊಡನೆ ಅದು ಅಮೆರಿಕ ಎಂಬ ಗ್ರಹಿಕೆ ನೆಲೆಯಾಯಿತು. ಅಮೆರಿಕದ ಚಲನಚಿತ್ರಗಳೂ ಇದಕ್ಕೆ ಪೂರಕವಾಗಿ ಕಲ್ಪನೆಗಳನ್ನು ಬಿತ್ತಿದವು. ಅವೆಲ್ಲವೂ ತಪ್ಪು ಎಂದೇನಲ್ಲ. ಆದರೆ ಇವೆಲ್ಲವೂ ಸಾಧ್ಯವಾಗಿದ್ದರಲ್ಲಿ ಅಮೆರಿಕವು ತನ್ನಿಷ್ಟದಂತೆ ಪೇಪರ್ ಕರೆನ್ಸಿ ಛಾಪಿಸುವ ಬಲ ಪಡೆದಿದ್ದರದ್ದೇ ಪ್ರಮುಖ ಪಾತ್ರ. ಮತ್ತಿದರ ಅವಧಿ ಸಹ ತೀರ ಕಡಿಮೆ ವ್ಯಾಪ್ತಿಯದ್ದು. ಇದು ಅರ್ಥವಾಗಬೇಕಾದರೆ ನಾವು ಭಾರತದ ಪರಮ ವೈಭವದ ಪರಿಕಲ್ಪನೆಯನ್ನು ಹೋಲಿಸಿ ನೋಡಬೇಕಾಗುತ್ತದೆ.
ಇವತ್ತಿನ ಹಲವು ಆರ್ಥಿಕ ಅಳತೆಗೋಲುಗಳ ಲೆಕ್ಕಾಚಾರದಲ್ಲಿ ಕಳೆದೊಂದು ದಶಕದಲ್ಲಿ ಭಾರತವು ಅಭಿವೃದ್ಧಿಯನ್ನು ದಾಖಲಿಸಿರುವುದಂತೂ ಹೌದು. ಆದರೆ ಇವತ್ತಿಗೂ ಭಾರತವು ವಿಶ್ವಗುರುವಾಗಬೇಕು ಎಂದು ಯಾರಾದಾರೂ ಭಾಷಣ ಮಾಡಿದರೆ, ಭಾರತದ ಪರಮ ವೈಭವ ಖಾತ್ರಿಯಾಗಲಿದೆ ಎಂಬ ವಿಶ್ವಾಸ ತೋರಿದರೆ ಅದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ಹಾಗೂ ಕೆಲವೊಮ್ಮೆ ಅಪಹಾಸ್ಯ ಎದುರಾಗುವುದುಂಟು. ಜಗತ್ತಿನ ಟಾಪ್ 3 ಆರ್ಥಿಕ ಶಕ್ತಿಯಾದರೆ ಏನಂತೆ, ನಮ್ಮ ತಲಾ ಆದಾಯ ಎಷ್ಟು ಕಮ್ಮಿ ಇದೆ ನೋಡಿ ಎಂದು ಕೆಲವು ಲಕ್ಷಗಳ ಜನಸಂಖ್ಯೆಯ ದೇಶಗಳ ಜತೆ ಭಾರತದ ನೂರ್ನಲ್ವತ್ತು ಕೋಟಿ ಜನಸಂಖ್ಯೆಯನ್ನು ಸಮೀಕರಿಸಿ ತರ್ಕ ಹೂಡುವುದುಂಟು.
ಇದರಲ್ಲಿ ಅಸಹಜತೆ ಏನಿಲ್ಲ. ಏಕೆಂದರೆ, ಅಮೆರಿಕವು ಲಾಗಾಯ್ತಿನಿಂದಲೂ ಸೂಪರ್ ಪವರ್ ಎಂದು ಮನಸ್ಸನ್ನು ಹೇಗೆ ನಂಬಿಸಿಕೊಳ್ಳಲಾಗಿದೆಯೋ ಅದೇ ರೀತಿ, ಕಳೆದ ಸುಮಾರು 700-800 ವರ್ಷಗಳ ದಾಸ್ಯದ ಅನುಭವ ಭಾರತೀಯರ ವಿಶ್ವಾಸವನ್ನು ಕದಡಿರುವುದರಲ್ಲಿ ಆಶ್ಚರ್ಯವೇನಿಲ್ಲ. ಮೊದಲಿಗೆ ಇಸ್ಲಾಂ ಆಡಳಿತ ಹಾಗೂ ನಂತರದಲ್ಲಿ ಬ್ರಿಟಿಷ್ ಆಡಳಿತವು ಭಾರತದ ಜನಮಾನಸವನ್ನು ಅಷ್ಟು ಜರ್ಜರಿತಗೊಳಿಸಿದೆ.
ಈ ಶತಮಾನಗಳಲ್ಲಿ ಹಿಂದು ನಾಗರಿಕತೆ ಉಳಿದುಕೊಂಡಿರುವುದೇ ಹೆಚ್ಚು ಎಂಬುದೇ ವಾಸ್ತವವಾಗಿರುವಾಗ ಅಷ್ಟರಮಟ್ಟಿಗೆ ನಮ್ಮ ಮನಸ್ಸುಗಳು ಅಧೈರ್ಯಕ್ಕೆ ತುತ್ತಾಗಿದ್ದರೆ ಆಶ್ಚರ್ಯವೇನಿಲ್ಲ ಬಿಡಿ. ಆದರೀಗ ನಾವು ಒಂದುಕ್ಷಣ ರಾಜಕೀಯ ಘೋಷಣೆಗಳನ್ನು ನಂಬುವುದು ಬೇಡ. ಬದಲಿಗೆ, ಯಾವುದೇ ಒಬ್ಬ ಭಾರತೀಯ ತನಗೆ ಭಾರತವು ಭವಿಷ್ಯದಲ್ಲಿ ಸೂಪರ್ ಪವರ್ ಆಗಲಿದೆ ಎಂಬ ನಂಬಿಕೆ ಇದೆ ಎಂದು ಹೇಳಿದರೆ, ಅದನ್ನು ಕೇವಲ ಭಾವೋದ್ರೇಕವೆಂದು ನೋಡಬೇಕೋ ಅಥವಾ ಅದಕ್ಕೆ ಇತಿಹಾಸದ ಆಧಾರವಿದೆಯೋ? ಖಂಡಿತವಾಗಿಯೂ ಇದನ್ನು ಬೆಂಬಲಿಸುವ ಇತಿಹಾಸ ಹಾಗೂ ನಾಗರಿಕ ನೆನಪುಗಳೆರಡೂ ಭಾರತಕ್ಕಿವೆ.
ಮೌರ್ಯರ ಕಾಲದಿಂದ ಹಿಡಿದು ಚೋಳರ ಕಾಲದವರೆಗಿನ ಸುಮಾರು ಒಂದು ಸಹಸ್ರಮಾನದ ಲೆಕ್ಕ ತೆಗೆದುಕೊಂಡರೆ ಭಾರತವು ಮಿಲಿಟರಿ, ಆರ್ಥಿಕ, ಸಾಂಸ್ಕೃತಿಕ ಬಲವಾಗಿ ಮೆರೆದಿದ್ದು ಸುಳ್ಳಲ್ಲವೇ ಅಲ್ಲ. ಪುರುಷಪ್ರಧಾನ ವ್ಯವಸ್ಥೆ, ಬ್ರಾಹ್ಮಣ ಪ್ರಾಬಲ್ಯ ಎಂದೆಲ್ಲ ಯಾವುದೇ ಬಗೆಯ ಕಥಾವ್ಯಾಖ್ಯಾನಗಳನ್ನು ಹೆಣೆದರೂ, ಅವೆಲ್ಲವನ್ನೂ ಮಂಕಾಗಿಸಿ ಭಾರತ ವೈಭವವನ್ನು ತೋರಿಸುವ ಚರಿತ್ರೆ ಮುಚ್ಚಿಡಲಾರದಂತೆ ಹೊಳೆದುಬಿಡುತ್ತದೆ. ಎಲ್ಲೋರಾದಲ್ಲಿ ಶಿಲಾಪರ್ವತದ ಮೇಲಿನಿಂದ ಆರಂಭಿಸಿ ಅಡಿಪಾಯದವರೆಗೆ ಯಾರೂ ಊಹಿಸಲಾಗದಂತೆ ತಿರುವುಮುರುವಿನ ಮಾದರಿಯಲ್ಲಿ ದೇವಾಲಯವನ್ನು ಕೊರೆದಿಟ್ಟ ಧೀಮಂತರು ನಮ್ಮ ಹಿರಿಯರು. ಅತ್ತ ಅರಬ್ ತೀರಕ್ಕೆ ತಾಗಿ ನಂತರ ಯುರೋಪಿನ ಸಾಮ್ರಾಜ್ಯಗಳಿಗೆ, ಇತ್ತ ದಕ್ಷಿಣ ಏಷ್ಯದ ದೇಶಗಳಿಗೆ ನಾವೆಯಲ್ಲಿ ವ್ಯಾಪಾರ ಸೇತುವನ್ನೇ ಕಟ್ಟಿದವರು ಭಾರತೀಯರು.
ಮಸಾಲೆ ಪದಾರ್ಥಗಳು, ಬಟ್ಟೆಗಳನ್ನೆಲ್ಲ ಮಾರಿ ನಾವು ಟಂಕಿಸಿರುವ ಚಿನ್ನ-ಬೆಳ್ಳಿಯ ನಾಣ್ಯಗಳಷ್ಟನ್ನೂ ಭಾರತ ನುಂಗುತ್ತಿದೆ ಎಂದು ರೋಮನ್ನರು ಬೊಬ್ಬೆ ಹಾಕಿದ್ದು ಚರಿತ್ರೆಯಲ್ಲಿ ಲಿಖಿತ. ಪ್ರತಿ ಹಳ್ಳಿಗಳೂ ಪುಟ್ಟ ಕೈಗಾರಿಕೆಗಳಂತೆ ಕಾರ್ಯ ನಿರ್ವಹಿಸುತ್ತ ಜಗತ್ತಿನ ಪೂರೈಕೆ ಜಾಲವಾಗಿದ್ದ ಆ ಕಾಲದಲ್ಲಿ ಮಹಿಳೆಯರು ತಾವಿರುವ ಜಾಗದಿಂದಲೇ ಉದ್ಯೋಗದಲ್ಲಿ ಸಮಪಾಲು ಹೊಂದಿದ್ದರೆಂಬುದು ತರ್ಕಕ್ಕೆ ಸುಲಭಕ್ಕೆ ಸಿಕ್ಕಿಕೊಳ್ಳುವ ಸಂಗತಿ. ಡಮಾಸ್ಕಸ್ಸಿನ ಸೇನೆ ಸಹ ತನ್ನ ಖಡ್ಗ-ಲೋಹದ ಆಯುಧಗಳಿಗೆ ಭಾರತದಿಂದ ಬರುವ ಉಕ್ಕೇ ಆಗಬೇಕು, ಏಕೆಂದರೆ ಅಂತ ಗುಣಮಟ್ಟದ ಸೃಷ್ಟಿ ಭಾರತೀಯರಿಗೆ ಮಾತ್ರ ಸಿದ್ಧಿಸಿದೆ ಎಂದು ಪಟ್ಟು ಹಿಡಿದು ಕಾಯುತ್ತಿದ್ದ ಕಾಲವದು. ಯುರೋಪು ಪ್ಲೇಗಿನಲ್ಲಿ ನರಳುತ್ತಿದ್ದಾಗ ಭಾರತದ ಆರೋಗ್ಯಾಲಯಗಳು ಸಮಗ್ರ ಚಿಕಿತ್ಸಾ ವ್ಯವಸ್ಥೆ ಹೊಂದಿದ್ದವು. ಲೆಕ್ಕದಲ್ಲಿ ಮುಂದುವರಿಯಲಾಗದೇ ಜಗತ್ತು ಮುಗ್ಗರಿಸಿಕೊಂಡಿದ್ದಾಗ ಭಾರತದಿಂದಲೇ ಹೊರಟ ಶೂನ್ಯದ ಪರಿಕಲ್ಪನೆ ಸಂಖ್ಯಾವ್ಯವಸ್ಥೆಯನ್ನು ಅನಂತಕ್ಕೆ ವಿಸ್ತರಿಸಿತು. ಹೀಗೆಲ್ಲ ಪಟ್ಟಿ ಮಾಡುತ್ತಲೇ ಹೋಗಬಹುದು. ಆದರೆ, ವಿಷಯವಿಷ್ಟೆ. ಭಾರತದ ಪರಮ ವೈಭವದ ಕನಸಿಗೆ ಒಂದು ಅಡಿಪಾಯ, ರೆಫರೆನ್ಸ್ ಪಾಯಿಂಟ್, ವಾರಸುದಾರಿಕೆ ಎಲ್ಲವೂ ಇದೆ.
ಅಮೆರಿಕದ ಸೂಪರ್ ಪವರ್ ವ್ಯಾಖ್ಯೆಗೆ ಏನಿದೆ ಅಡಿಪಾಯ?
ಇವತ್ತಿನ ತಥಾಕಥಿತ ಸೂಪರ್ ಪವರ್ ಅಮೆರಿಕವು ತನ್ನ ಕತೆಯನ್ನು ಶುರು ಮಾಡುವುದೇ 1492ರಲ್ಲಿ ಇಟಲಿಯ ನಾವಿಕ ಕೋಲಂಬಸ್ ಅಮೆರಿಕದ ನೆಲವನ್ನು ‘ಅನ್ವೇಷಿಸಿದ’ ಎಂಬಲ್ಲಿಂದ. ಅದೇ ನೆಲದಲ್ಲಿ ಆವರೆಗೆ ಸಹಸ್ರ-ಸಹಸ್ರ ವರ್ಷಗಳಿಂದ ಹಲವು ಬುಡಕಟ್ಟುಗಳಲ್ಲಿ ಹಂಚಿಕೊಂಡು ಬದುಕು ಸವೆಸುತ್ತಿದ್ದವರು ಇವತ್ತಿನ ಅಮೆರಿಕದ ಜಂಭದ ಇತಿಹಾಸದಲ್ಲಿ ಜಾಗ ಪಡೆಯುವುದೇ ಇಲ್ಲ. ಏಕೆಂದರೆ ಅವರೆಲ್ಲರ ಸಮಾಧಿಯ ಮೇಲೆಯೇ ಇವತ್ತಿನ ‘ನಾಗರಿಕ’ ಅಮೆರಿಕವು ಎದ್ದು ನಿಂತಿದೆ. ಜಗತ್ತಿನ ಎಲ್ಲ ಭಾಗಗಳ ಪ್ರತಿಭಾವಂತರನ್ನು ವಿಶಾಲ ಬಾಹುಗಳಿಂದ ಅಪ್ಪಿಕೊಂಡಿದ್ದರಿಂದಲೇ ಅಮೆರಿಕವು ನಿರ್ಮಾಣವಾಯಿತು ಎಂಬ ಸುಂದರ ಕತೆಯೊಂದನ್ನು ಕಳೆದ ಐನೂರು ವರ್ಷಗಳಲ್ಲಿ ಟಾಂ ಟಾಂ ಮಾಡಲಾಗಿದೆ. ಈ ಮಾರ್ಕೆಂಟಿಂಗ್ ಸದ್ದನ್ನು ಮ್ಯೂಟ್ ಮಾಡಿ ಆಲಿಸಿದ್ದೇ ಆದರೆ ಅಲ್ಲಿ ಕೆರಿಬಿಯನ್, ಹೈತಿ, ಪೆರು, ಇಂದಿನ ಅಮೆರಿಕ ಈ ಎಲ್ಲ ಕಡೆ ಯುರೋಪಿಯನ್ ವಸಾಹತು ಆಕ್ರಮಣಕ್ಕೆ ತುತ್ತಾಗಿ ಕೋಟಿಗಳ ಲೆಕ್ಕದಲ್ಲಿ ಪ್ರಾಣ ತೆತ್ತ ನೇಟಿವ್ ಅಮೆರಿಕನ್ ಆತ್ಮಗಳ ಆಕ್ರಂದನ ಕೇಳಿಸುತ್ತದೆ.
1600ರ ಸುಮಾರಿಗೆ ಅಮೆರಿಕದ ಮೂಲ ನಿವಾಸಿಗಳನ್ನು ಈ ಯುರೋಪಿಯನ್ನರು ಹೊತ್ತು ತಂದ ಕಾಯಿಲೆಗಳೇ ಬಹುದೊಡ್ಡ ಸಂಖ್ಯೆಯಲ್ಲಿ ಮುಗಿಸಿದ್ದವು. ಈ ಪ್ರಮಾಣವನ್ನು ಶೇ. 50 ರಿಂದ 90ರವರೆಗೂ ಅಂದಾಜಿಸಲಾಗಿದೆ. ಯಾವ ಸಿಡುಬು, ಜ್ವರಗಳೆಲ್ಲ ಯುರೋಪಿಯನ್ನರ ದೇಹಕ್ಕೆ ಸಾಮಾನ್ಯವಾಗಿದ್ದವೋ ಅಂಥವೆಲ್ಲ ಅಮೆರಿಕ ಮೂಲನಿವಾಸಿಗಳ ದೇಹಕ್ಕೆ ಹೊಸತಾಗಿದ್ದರಿಂದ ದೊಡ್ಡಮಟ್ಟದಲ್ಲಿ ಪ್ರಾಣಹಾನಿಯಾಯಿತು. ಉಳಿದವರನ್ನು ಒಕ್ಕಲೆಬ್ಬಿಸುವ ಮೂಲಕ, ಅವರ ಸಂಪ್ರದಾಯಗಳನ್ನು ಅಳಿಸಿ ಹಿಂಸಿಸುವ ಮೂಲಕ, ಬಲವಂತದ ವಲಸೆಯನ್ನು ಹೇರಿ ಸಾವಿರಗಟ್ಟಲೇ ಮಂದಿ ಮಾರ್ಗಮಧ್ಯದಲ್ಲೇ ಸಾಯುವಂತಹ ಸ್ಥಿತಿ ಸೃಷ್ಟಿಸಿ ಹಣಿದು ಹಾಕಲಾಯಿತು. ಇವತ್ತಿಗೆ ನೇಟಿವ್ ಅಮೆರಿಕನ್ ಬುಡಕಟ್ಟು ಎಲ್ಲೋ ಮಾದರಿಗೆ ಎಂಬಂತೆ ಉಳಿದುಕೊಂಡಿದೆ ಅಷ್ಟೆ.
ಇವೆಲ್ಲ ನಡೆಯುತ್ತಿರಬೇಕಾದರೆ, ಆಫ್ರಿಕಾದಿಂದ ಒಯ್ದ ಗುಲಾಮರನ್ನೂ ಅಷ್ಟೇ ನಿಕೃಷ್ಟವಾಗಿ ನಡೆಸಿಕೊಳ್ಳಲಾಯಿತು. ಯುರೋಪಿನಿಂದ ಹೋಗಿ ಅಮೆರಿಕನ್ನರಾಗುತ್ತಿದ್ದವರ ಪಾಲಿಗೆ ಕಪ್ಪು ಜನಾಂಗವು ಮನುಷ್ಯರಾಗಿರಲೇ ಇಲ್ಲ, ಪ್ರಾಣಿಗಳಿಗಿಂತ ಕಡೆಯಾಗಿ ನಡೆಸಿಕೊಳ್ಳಲಾಯಿತು. ನೇಟಿವ್ ಅಮೆರಿಕನ್ ಬುಡಕಟ್ಟಿನ ಮಹಿಳೆಯರು ಹಾಗೂ ಆಫ್ರಿಕಾ ಗುಲಾಮರ ಕುಟುಂಬದ ಮಹಿಳೆಯರನ್ನು ಬಿಳಿಯರು ತಮ್ಮ ಕಾಮತೃಷೆಗೆ ಮನಬಂದಂತೆ ಬಳಸಿಕೊಂಡರು.
1776ರ ಅಮೆರಿಕದ ಸ್ವಾತಂತ್ರ್ಯ ಘೋಷಣೆಯನ್ನು ಜಗತ್ತಿನ ಇತಿಹಾಸದ ಬಹುದೊಡ್ಡ ಆದರ್ಶದ ಗಳಿಗೆ ಎಂಬಂತೆ ಬಿಂಬಿಸಲಾಗಿದೆ. ಲಿಬರ್ಟಿ, ವ್ಯಕ್ತಿ ಸ್ವಾತಂತ್ರ್ಯ, ನಾಗರಿಕ ಹಕ್ಕುಗಳು ಎಂಬೆಲ್ಲ ಚೆಂದದ ಪದಪುಂಜಗಳು ನಮಗಿಲ್ಲಿ ಸಿಗುತ್ತವೆ. ವರ್ತಮಾನದ ಅಮೆರಿಕನ್ನರಂತೂ ಜಗತ್ತಿಗೆ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳಂಥ ಪರಿಕಲ್ಪನೆಗಳನ್ನು ಕೊಟ್ಟವರೇ ತಾವೆಂಬಂತೆ ಪೋಸು ಕೊಡುತ್ತಾರೆ. ಆದರೆ ವಾಸ್ತವವೇನು? ಅದು ಅಮೆರಿಕವು ಬ್ರಿಟಿಷ್ ಪಾರಮ್ಯದಿಂದ ಈಚೆ ಬಂದು ತನ್ನದೊಂದು ವ್ಯವಸ್ಥೆ ರೂಪಿಸಿಕೊಂಡ ಘಟ್ಟವೇ ಹೊರತು, ಸ್ವಾತಂತ್ರ್ಯದ ಸದಾಶಯಗಳೇನೂ ಅನುಷ್ಠಾನವಾಗಿರುವ ದಿನವಲ್ಲ.
ಅಮೆರಿಕದ ಸ್ವಾತಂತ್ರ್ಯ ಘೋಷಣೆಯು “ಎಲ್ಲ ವ್ಯಕ್ತಿಗಳೂ ಸಮಾನರು” ಎಂದು ಬಾಯ್ಮಾತಿಗೆ ಹೇಳಿತಾದರೂ ಆಫ್ರಿಕಾದಿಂದ ತಂದ ಗುಲಾಮರಿಗೆ ಸ್ವಾತಂತ್ರ್ಯ ಕೊಡಲಿಲ್ಲ. ಕಪ್ಪು ವರ್ಣದ ವ್ಯಕ್ತಿಗಳಿಗೆ ಮತದಾನದ ಹಕ್ಕು, ನ್ಯಾಯವ್ಯವಸ್ಥೆ ಯಾವುದೂ ಅನ್ವಯಿಸಲೇ ಇಲ್ಲ. ಈ ಸ್ವಾತಂತ್ರ್ಯ ಘೋಷಣೆಗೆ ಸಹಿ ಹಾಕಿದ್ದ ಥಾಮಸ್ ಜಫರ್ಸನ್ ಸಹಿತವಾಗಿ ಹಲವರು ಖುದ್ದು ಗುಲಾಮರನ್ನು ದುಡಿಸಿಕೊಂಡಿದ್ದರು ಎಂಬುದಕ್ಕಿಂತ ಹೆಚ್ಚಿನ ವ್ಯಂಗ್ಯವಿನ್ನೇನಿದೆ? ಮಹಿಳೆಯರಿಗೆ ಅಮೆರಿಕವು ಮತದಾನದ ಹಕ್ಕನ್ನು ಕೊಡುವುದಕ್ಕೆ ಮತ್ತೆ 144 ವರ್ಷಗಳೇ ಕಳೆಯಬೇಕಾಯಿತು.
ಇದೇ ಅಮೆರಿಕದ ಯುನಿವರ್ಸಿಟಿಗಳಲ್ಲಿ ಕುಳಿತುಕೊಂಡು ಭಾರತದ್ದು ಪುರುಷ ಪಕ್ಷಪಾತಿ, ಸ್ತ್ರೀ ಶೋಷಕ ಸಮಾಜ ಎಂದು ವ್ಯಾಖ್ಯಾನ ಹೆಣೆದುಕೊಂಡಿರುವವರು ಢಾಳಾಗಿದ್ದಾರೆ. ವಾಸ್ತವ ಏನೆಂದರೆ, ಭಾರತವು ಸ್ವಾತಂತ್ರ್ಯೋತ್ತರದಲ್ಲಿ ಪುರುಷ-ಮಹಿಳೆಯರಿಗೆಲ್ಲ ಏಕಕಾಲಕ್ಕೆ ಮತದಾನದ ಹಕ್ಕು ಕೊಟ್ಟಿತು. ಅಲ್ಲದೇ, ಹೀಗೆ ಪ್ರಜಾಪ್ರಭುತ್ವ ಬರುವುದಕ್ಕೆ ಮುಂಚೆಯೂ ನಮ್ಮಲ್ಲಿ ಮಹಿಳೆಯರು ಆಡಳಿತ ಚುಕ್ಕಾಣಿಯಲ್ಲಿದ್ದ ಉದಾಹರಣೆಗಳು ಸಾಕಷ್ಟಿವೆ. ರಾಣಿ ಚೆನ್ನಮ್ಮ, ಝಾನ್ಸಿ ಲಕ್ಷ್ಮೀಬಾಯಿ, ರಾಣಿ ದುರ್ಗಾವತಿ, ರಾಣಿ ಅಬ್ಬಕ್ಕ…ಹೀಗೆಲ್ಲ ಪಟ್ಟಿ ಮಾಡುತ್ತ ಹೋಗಬಹುದು. ಅಮೆರಿಕದ ಸ್ವಾತಂತ್ರ್ಯಪೂರ್ವ ಇತಿಹಾಸದಲ್ಲಿ ಮಹಿಳೆಯರು ಆಂದೋಲನಕಾರರಾಗಿ ಸಿಗುತ್ತಾರೆಯೇ ಹೊರತು ಆಡಳಿತಸೂತ್ರ ಮುನ್ನಡೆಸಿದವರಾಗಿ ಅಲ್ಲ.
ಅತಿ ಸೀಮಿತಾವಧಿಯ ಅಮೆರಿಕದ ಆರ್ಥಿಕ ಗ್ರೇಟ್ನೆಸ್!
ಅಮೆರಿಕವು ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದು 1944ರ ಎರಡನೇ ವಿಶ್ವಯುದ್ಧದ ನಂತರ. ಅವತ್ತಿಗೆ ಅತಿಹೆಚ್ಚಿನ ಚಿನ್ನದ ಸಂಗ್ರಹ ಹೊಂದಿದ್ದ ಅಮೆರಿಕವು ಅದೇ ಆಧಾರದಲ್ಲಿ ಡಾಲರ್ ಅನ್ನು ಜಾಗತಿಕ ವಿನಿಮಯದ ಕರೆನ್ಸಿಯಾಗಿಸುವುದಕ್ಕೆ ಜಗತ್ತನ್ನು ಒಪ್ಪಿಸಿದ್ದೇ ಟರ್ನಿಂಗ್ ಪಾಯಿಂಟ್. ನಂತರ 1971ರಲ್ಲಿ ಗೋಲ್ಡ್ ಬ್ಯಾಕಪ್ ತೆಗೆದ ನಂತರವೂ ಸೌದಿ ಸೇರಿದಂತೆ ಗಲ್ಫ್ ದೇಶಗಳ ತೈಲ ಮಾರಾಟದಲ್ಲಿ ಡಾಲರ್ ಅನ್ನು ಸಾಮಾನ್ಯ ವಿನಿಮಯದ ಕರೆನ್ಸಿಯಾಗಿಸಿದ್ದು ಕಾರ್ಯತಂತ್ರದ ದೃಷ್ಟಿಯಿಂದ ಯಶಸ್ವಿ ನಡೆ. ಗೂಗಲ್, ನಾಸಾ ಸೇರಿದಂತೆ ಬಹುತೇಕ ತಂತ್ರಜ್ಞಾನದ ಯಶಸ್ಸಿಗೆ ಅನುವಾಗಿಸಿದ್ದೂ ಡಾಲರನ್ನು ಸುಲಭಕ್ಕೆ ಲಭ್ಯವಾಗಿಸುವ ಅಮೆರಿಕದ ತಂತ್ರಗಾರಿಕೆ ನಡೆಯೇ.
ನಮ್ಮ ಕಣ್ಣೆದುರು ನಡೆದಿದ್ದರಿಂದ ಇವೆಲ್ಲ ಅಚ್ಚಳಿಯದಂತೆ ಹಾಗೂ ಇದೇ ಅಂತಿಮ ಸತ್ಯವೆಂಬಂತೆ ನಮಗನಿಸುತ್ತಿದೆ ಎಂಬುದನ್ನು ಬಿಟ್ಟರೆ, ವಾಸ್ತವದಲ್ಲಿ ಅಮೆರಿಕವು ಆರ್ಥಿಕ ಶಕ್ತಿಯಾಗಿ ಮೆರೆದಿರುವ ಕಾಲವು ಕೆಲವೇ ದಶಕಗಳಿಗೆ ಸಂಬಂಧಿಸಿದ್ದು ಹಾಗೂ ಬಹಳ ಚಿಕ್ಕದ್ದು.
ಟ್ರಂಪ್ ಆಗಲೀ, ಇನ್ಯಾರೇ ಆಗಲೀ ಅಮೆರಿಕವನ್ನು ಮತ್ತೆ ಗ್ರೇಟ್ ಮಾಡುತ್ತೇನೆ ಎಂದು ಹೇಳುತ್ತಿರುವುದು ಇತಿಹಾಸದ ದೀರ್ಘ ಹರವಿನಲ್ಲಿ ತುಂಬ ಸಣ್ಣದಾಗಿ ತೋರುವ ಈ ಕಾಲಘಟ್ಟವನ್ನಷ್ಟೇ ಉಲ್ಲೇಖ ಹಾಗೂ ಆದರ್ಶವಾಗಿಟ್ಟುಕೊಂಡು. ಹಾಗೆ ನೋಡಿದರೆ ಅಮೆರಿಕವು ತಾನು ಗ್ರೇಟ್ ಎಂಬ ನಾಗರಿಕತೆಯ ಕಥನವನ್ನು ಇನ್ನಷ್ಟೇ ರೂಪಿಸಬೇಕಿದೆ. ಆದರೆ, ಲಾಸ್ ಏಂಜಲೀಸ್ ನಲ್ಲಿ ಕಾಣುತ್ತಿರುವ ಕೋಲಾಹಲವು ಸದ್ಯಕ್ಕಂತೂ ಅಮೆರಿಕಕ್ಕೆ ಅಂತಹ ಶಕ್ತಿ ಇಲ್ಲ ಎಂಬುದನ್ನು ಪರೋಕ್ಷವಾಗಿ ಸಾರುತ್ತಿದೆ.
- ಚೈತನ್ಯ ಹೆಗಡೆ
cchegde@gmail.com
Advertisement