ಡಾಲರ್, ಮುಕ್ತ ಕಾಮ, ವ್ಯಕ್ತಿ ಸ್ವಾತಂತ್ರ್ಯ, ಲಿಬರಲಿಸಂ ಹಾಗೂ ರೀಸೆಟ್ ಬಟನ್! (ತೆರೆದ ಕಿಟಕಿ)

ವಾಸ್ತವದಲ್ಲಿ ಅಫೇರ್ಸ್, ವ್ಯಕ್ತಿ ಸ್ವಾತಂತ್ರ್ಯ, ಬಾಡಿ ಕೌಂಟ್ ಅಂತ ಏನೆಲ್ಲ ಮಾತನಾಡಿದರೂ ಸಂಬಂಧನಿಷ್ಠೆಯಲ್ಲಿ ಸಾಮಾಜಿಕ ಭದ್ರತೆಯೊಂದಕ್ಕೆ ಹಪಹಪಿಸುವುದು ಮಾನವ ಸ್ವಭಾವ ಎಂಬುದು ಜಾಹೀರಾಗುತ್ತಿದೆ.
Astronomer CEO Andy Byron hugging HR chief
ಕಂಪನಿಯೊಂದರ ಮುಖ್ಯಸ್ಥ ಹಾಗೂ ಅದೇ ಕಂಪನಿಯ ಮಾನವ ಸಂಪನ್ಮೂಲ ನಿರ್ವಹಣೆಯ ಮುಖ್ಯಸ್ಥೆ ತಬ್ಬಿಕೊಂಡು ನಿಂತಿದ್ದ ದೃಶ್ಯ online desk
Updated on

ಸಂಗೀತ ಸಮಾರಂಭವೊಂದರಲ್ಲಿ ಕಂಪನಿಯೊಂದರ ಮುಖ್ಯಸ್ಥ ಹಾಗೂ ಅದೇ ಕಂಪನಿಯ ಮಾನವ ಸಂಪನ್ಮೂಲ ನಿರ್ವಹಣೆಯ ಮುಖ್ಯಸ್ಥೆಯನ್ನು ತಬ್ಬಿಕೊಂಡು ನಿಂತಿದ್ದ ದೃಶ್ಯ ಹಾಗೂ ಆ ದೃಶ್ಯವು ಸೆರೆಯಾಗುತ್ತಿದೆ ಎಂದು ಗೊತ್ತಾದಕ್ಷಣ ಅವರಿಬ್ಬರೂ ದೂರ ಸರಿದುಕೊಂಡ ರೀತಿ ನಾಲ್ಕಾರು ದಿನಗಳವರೆಗೆ ಇಂಟರ್ನೆಟ್ಟಿನಲ್ಲಿ ಥರಾವರಿ ಚರ್ಚೆ-ತಮಾಷೆಗಳಿಗೆ ವಸ್ತುವಾಗಿದೆ. ಇದನ್ನು ಹಲವು ಮಗ್ಗಲುಗಳಲ್ಲಿ ಚರ್ಚಿಸಲಾಗುತ್ತಿದೆ, ಬರಿದೇ ಬಾಯಿ ಚಪಲಕ್ಕೂ ಬಳಸಲಾಗುತ್ತಿದೆ. ಅವೆಲ್ಲ ಏನೇ ಇರಲಿ…ಈ ಒಟ್ಟಾರೆ ಪ್ರಕರಣದಿಂದ ಪಾಸಿಟಿವ್ ಎಂಬ ಥರದ್ದು ಸಹ ಸಿಗುತ್ತಿದೆ.

ಏನದು ಪಾಸಿಟಿವ್? ಇವತ್ತು ಯೂಟ್ಯೂಬ್ ಇತ್ಯಾದಿಗಳಲ್ಲಿ ಯುವಕರ ಕಂಟೆಂಟ್ ಎಂದು ಕರೆಸಿಕೊಳ್ಳುವ ಸ್ಟ್ಯಾಂಡ್ ಅಪ್ ಕಾಮಿಡಿಯೊ, ಪಾಡ್ಕಾಸ್ಟುಗಳೋ ಇಂಥವುಗಳಲ್ಲೆಲ್ಲ “ಬಾಡಿ ಕೌಂಟ್ ಎಷ್ಟು”, “ಎಕ್ಸ್ ಪಾರ್ಟನರುಗಳ ಜತೆಗಿನ ಅನುಭವ” ಎಂಬುದನ್ನೆಲ್ಲ ತುಂಬ ಸಹಜವೆಂಬಂತೆ ಚರ್ಚಿಸುತ್ತಿರುವಾಗ, ಮಾಡರ್ನಿಟಿಯೇ ಮೆರೆದುಕೊಂಡಿರುವ ಕಾರ್ಪೋರೇಟ್ ವಿಭಾಗದ ಕಾರ್ಯಕ್ರಮವೊಂದರಲ್ಲಿ ಸಹೋದ್ಯೋಗಿಗಳಿಬ್ಬರು ಸಲ್ಲಾಪ ಮಾಡಿಕೊಂಡಿದ್ದರೆ ಅದೇನು ಬಿಗ್ ಡೀಲ್ ಎನ್ನಬೇಕಿತ್ತಲ್ಲವೇ?

ಆಧುನಿಕತೆ- ಉದಾರವಾದ ಇವುಗಳ ನೆಲೆಯಲ್ಲೇ ನೋಡಿದರೆ ಅವರಾದರೂ ಅಷ್ಟೆ, ತೀರ ಮುಖ ಮುಚ್ಚಿಕೊಳ್ಳಬೇಕಾದ ಅಗತ್ಯವೇ ಇರಲಿಲ್ಲ ಅಲ್ಲವೇ? ಆದರೆ ಬಹುತೇಕರ ಅಭಿಪ್ರಾಯ ಇದು ತಪ್ಪು ಎಂಬ ರೀತಿಯಲ್ಲೇ ಇದೆ. ಈ ಬಗ್ಗೆ ಮಾತನಾಡಿದವರಲ್ಲಿ ಕುಹಕವಿದ್ದಿರಬಹುದು, ಆಕ್ರೋಶವಿದ್ದಿರಬಹುದು, ಬೂಟಾಟಿಕೆಯೂ ಇದ್ದಿರಬಹುದು ಅಂತಲೇ ಅಂದುಕೊಳ್ಳೋಣ. ಆದರೆ, “ಅವರು ಹಂಗೆ ಮಾಡಿಕೊಂಡಿರ್ಲಿ ಬಿಡಿ, ಅದರಲ್ಲೇನು ಮೈಲಿಗೆಯ ವಿಷಯವಿದೆ” ಎನ್ನುವವರಾಗಲಿ, ಅದವರ ವ್ಯಕ್ತಿ ಸ್ವಾತಂತ್ರ್ಯ ಬಿಡಿ ಎನ್ನುವವರಾಗಲೀ ತುಂಬ ವಿರಳ. ತಾವು ಡಿಫರೆಂಟ್ ಎಂದು ತೋರಿಸಿಕೊಳ್ಳುವುದಕ್ಕೆ ಬೆರಳೆಣಿಕೆ ಮಂದಿ ಹಾಗೆಯೂ ವಾದಿಸಬಹುದೇನೋ. ಆದರೆ ಹೆಚ್ಚಿನವರದ್ದು ಇದ್ಯಾಕೋ ಸರಿ ಇಲ್ಲ ಎಂಬಂತಹುದ್ದೇ ಧ್ವನಿ.

ಸಂಬಂಧದಲ್ಲೊಂದು ಸುರಕ್ಷತಾ ಭಾವ - ಸ್ವೇಚ್ಛೆ ಇಚ್ಚಿಸುವವರಿಗೂ ಬೇಕಿದು!

ಮತ್ತದೇ ಪ್ರಶ್ನೆ. ಭಯಂಕರ ಆಧುನಿಕತೆಯ ಕಾಲಘಟ್ಟದಲ್ಲಿದ್ದೇವೆ ಎಂಬ ಹೊತ್ತಿನಲ್ಲೂ ಸಮಾಜ ಇದನ್ನು ಒಪ್ಪಿಕೊಳ್ಳುತ್ತಿಲ್ಲವೇಕೆ? ಎಂಬ ಅಂಶದಲ್ಲೇ ಹೊಳಹೊಂದು ಕಾಣುತ್ತಿದೆ. ವಾಸ್ತವದಲ್ಲಿ ಅಫೇರ್ಸ್, ವ್ಯಕ್ತಿ ಸ್ವಾತಂತ್ರ್ಯ, ಬಾಡಿ ಕೌಂಟ್ ಅಂತ ಏನೆಲ್ಲ ಮಾತನಾಡಿದರೂ ಸಂಬಂಧನಿಷ್ಠೆಯಲ್ಲಿ ಸಾಮಾಜಿಕ ಭದ್ರತೆಯೊಂದಕ್ಕೆ ಹಪಹಪಿಸುವುದು ಮಾನವ ಸ್ವಭಾವ ಎಂಬುದು ಜಾಹೀರಾಗುತ್ತಿದೆ. ಹಣದ ಹರಿವು ಎಂಬುದು ಕೆಲಕಾಲದಮಟ್ಟಿಗೆ ಕೆಲವೊಂದಿಷ್ಟು ಮೌಲ್ಯಗಳನ್ನು ಮುಸುಕಾಗಿಸಿದ್ದಿರಬಹುದು. ಕೊನೆಗೊಮ್ಮೆ ನಿಷ್ಠೆ-ಬದ್ಧತೆ ಇಂತಹ ಮೌಲ್ಯಗಳಿಗೆ ಎದುರಾಗಬೇಕಾಗುತ್ತದೆ. ಆದರ್ಶದ ಕಾರಣಕ್ಕಲ್ಲ. ನಮ್ಮದೇ ಸುರಕ್ಷತೆಯ ದೃಷ್ಟಿಯಿಂದ.

ಹೇಳಿ ಕೇಳಿ ಪಾಶ್ಚಾತ್ಯ ಜಗತ್ತಿನ ಮುಕ್ತ ವಾತಾವರಣದಲ್ಲಿ ನಡೆದಿರುವ ವಿದ್ಯಮಾನ. ಹಾಗೆ ನೋಡಿದರೆ ಅದು ಸುದ್ದಿಯೇ ಆಗಬಾರದಿತ್ತು. ಆದರೆ ಇದನ್ನು ಹಲವರು ಭಿನ್ನವಾಗಿಯೂ ವ್ಯಾಖ್ಯಾನಿಸಿಯಾರು. ಅವರು ತಬ್ಬಿಕೊಂಡಿದ್ದನ್ನು ಮಡಿವಂತಿಕೆಯಿಂದ ನೋಡಬೇಕಿಲ್ಲ ಸ್ವಾಮೀ, ಆದರೆ ಇಲ್ಲಿರುವ ಪ್ರಶ್ನೆ ಅವರಿಬ್ಬರಿಗೂ ಬೇರೆ ಬೇರೆ ಸಂಗಾತಿಗಳೊಂದಿಗೆ ಮದುವೆ ಆಗಿತ್ತಲ್ಲ ಎನ್ನೋದು ಅಂತ. ಅದೂ ಸರಿಯೇ. ಮುಕ್ತ ಕಾಮಕ್ಕೇನಡ್ಡಿಯಿಲ್ಲ, ಆದರೆ ಸಂಗಾತಿಗೆ ಮೋಸ ಮಾಡುವುದರ ಮೂಲಕ ಅಲ್ಲ ಎನ್ನುವುದು ವಾದವಾದರೆ ಅಲ್ಲಿಯೂ ನೀವು ಬಯಸುತ್ತಿರುವುದು ಮದುವೆ ಎಂಬ ಒಂದು ನಿಷ್ಠ ಸಾಂಸ್ಥಿಕ ವ್ಯವಸ್ಥೆಯನ್ನು ಎಂದಹಾಗಾಯಿತು. ಇನ್ನು ಕೆಲವರು ಮತ್ತೊಂದು ನೆಲೆಯಲ್ಲೂ ಇದನ್ನು ವ್ಯಾಖ್ಯಾನಿಸುತ್ತಾರೆ. ಕಂಪನಿಯೊಂದರ ಸಿಇಒ ಅದೇ ಕಂಪನಿಯ ಉದ್ಯೋಗಿಯೊಂದಿಗೆ ಸಲ್ಲಾಪದಲ್ಲಿರುವುದು ವ್ಯಾವಹಾರಿಕವಾಗಿ “ಹಿತಾಸಕ್ತಿಗಳ ಸಂಘರ್ಷ”, “ಕಂಪನಿ ಶಿಸ್ತು” ಇವೆಲ್ಲವನ್ನೂ ಉಲ್ಲಂಘಿಸುತ್ತದೆ. ಹೀಗಾಗಿ ಇಲ್ಲಿ ಆಕ್ಷೇಪವಿರುವುದು ಅವರ ಸಲ್ಲಾಪಕ್ಕಲ್ಲ. ಉದ್ಯೋಗದ ಪರಿಸರದಲ್ಲಿ ಮೇಲಿನ ಹಂತದಲ್ಲಿರುವವರು ಉದ್ಯೋಗಿಯೊಂದಿಗೆ ಹೊಂದುವ ದೈಹಿಕ ಆಕರ್ಷಣೆ ಆ ಪರಿಸರದಲ್ಲಿ ಒಂದು ಪಕ್ಷಪಾತ ಧೋರಣೆ ತರಬಲ್ಲದು. ಅಲ್ಲದೇ, ಔದ್ಯೋಗಿಕ ಉನ್ನತಿಗೆ ಹೀಗೆ ಸಲ್ಲಾಪ ಹೊಂದುವುದೇ ಮಾರ್ಗ ಎಂಬ ಸ್ಥಿತಿಯನ್ನೂ ಅದು ಬೇರೆ ಉದ್ಯೋಗಿಗಳ ಪಾಲಿಗೆ ತರಬಹುದು ಎಂಬೆಲ್ಲ ಜಡಕುಗಳು ಇಲ್ಲಿವೆ.

ಆದರೆ, ಇದೇ ತರ್ಕ-ಸಂಯಮಗಳನ್ನು ಕುಟುಂಬ ವ್ಯವಸ್ಥೆಯಲ್ಲಿ ಇರಿಸಿದ್ದಾಗ ಅವೆಲ್ಲ ಮಡಿವಂತಿಕೆ, ಹಳೆಕಾಲದ ಧೋರಣೆ ಎಂಬ ಉಪೇಕ್ಷೆ ವ್ಯಕ್ತವಾಗುವುದೇಕೆ? ವೈಯಕ್ತಿಕ ಸ್ವಾತಂತ್ರ್ಯದ ಮುಕ್ತ ಕಾಮ ಕಂಪನಿಯ ಮಟ್ಟದಲ್ಲೇ ಅಷ್ಟು ಗೋಜಲನ್ನು ಸೃಷ್ಟಿಸುತ್ತದೆ ಎಂದಾದರೆ ಕುಟುಂಬದ ಮಟ್ಟದಲ್ಲಿ ಹೇಗೆಲ್ಲ ಕಂಪನಗಳನ್ನು ತರಬಲ್ಲದಲ್ಲವೇ? ಸಣ್ಣಮಟ್ಟದ ಕಟ್ಟುಪಾಡುಗಳೂ ಇರದಿದ್ದರೆ ಸಂಬಂಧಗಳೆಲ್ಲವೂ ವಹಿವಾಟಿಗೆ ಇರುವಂಥವು, ಶಕ್ತ್ಯಾನುಸಾರ ಯಾರನ್ನಾದರೂ ಹೇಗಾದರೂ ಉಪಭೋಗಿಸಬಹುದು ಎಂದಾಗುತ್ತದೆ. ಹಾಗೆ ಉಪಭೋಗಿಸುವ ಸ್ಥಾನದಲ್ಲಿದ್ದಷ್ಟು ಕಾಲವೂ ಅದೇ ಸರಿ ಅಂತಲೂ ಅನ್ನಿಸುತ್ತದೆ. ಆದರೆ ಯಾವಾಗ ಅದರ ಪರಿಣಾಮಗಳು ಕಾಡತೊಡಗುತ್ತವೆಯೋ ಸ್ಥಿರತೆಗೋಸ್ಕರ, ‘ವ್ಯವಸ್ಥೆ’ಗೋಸ್ಕರ ಮಿಡಿಯುವಂತಾಗುತ್ತದೆ.

ತಥಾಕಥಿತ ವ್ಯಕ್ತಿ ಸ್ವಾತಂತ್ರ್ಯದ ಉಮೇದಿನ ಉತ್ತುಂಗದಲ್ಲಿದ್ದ ಜಗತ್ತು ಅಂಥದೊಂದು ಅನುಭವಕ್ಕೆ ಇವತ್ತಲ್ಲ ನಾಳೆ ತೆರೆದುಕೊಳ್ಳಲೇಬೇಕು. ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ವಿಚ್ಛೇದನಗಳು ಹೆಚ್ಚಿರುವಲೆಲ್ಲ ಈಗೆರಡು ದಶಕಗಳ ಹಿಂದೆಯೇ ಅವುಗಳದ್ದೇ ಸರ್ಕಾರಿ ಆರೋಗ್ಯ ಸಂಸ್ಥೆಗಳಿಂದ ಆ ಬಗ್ಗೆ ದೀರ್ಘ ಅಧ್ಯಯನಗಳಾಗಿವೆ. ಈ ಪ್ರಕರಣಗಳು ಅವರ ಮುಂದಿನ ತಲೆಮಾರಿನ ಪೈಕಿ ಹುಟ್ಟಿಸಿರುವ ಏಕಾಕಿತನ, ವಿಶ್ವಾಸರಹಿತ ಮನಸ್ಥಿತಿ, ಉದ್ವೇಗ ಇವೆಲ್ಲದರ ಬಗ್ಗೆ ‘ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್’ ಥರದ ಸಂಸ್ಥೆಗಳೇ ವರದಿಗಳನ್ನು ಪ್ರಕಟಿಸಿವೆ.

Astronomer CEO Andy Byron hugging HR chief
ಪಾಠ ಮತ್ತು ಸ್ಫೂರ್ತಿಗಳೆರಡನ್ನೂ ಕೊಡಬಲ್ಲ ಇತಿಹಾಸ ಕಥನ - ಮೀನಾಕ್ಷೀ ಜೈನ್ ಪಥದರ್ಶನ! (ತೆರೆದ ಕಿಟಕಿ)

ಅದು ಸ್ನೇಹವಾಗಿರಲಿ, ಸಾಂಗತ್ಯವಾಗಿರಲಿ ಅಸಹನೀಯ ಪರಿಸರವಿರುವಲ್ಲೂ ತಾಳಿಕೊಂಡಿರಬೇಕು ಎಂಬುದು ಇಲ್ಲಿನ ವಾದವಲ್ಲ. ಆದರೆ ವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಕನಿಷ್ಟಮಟ್ಟದ ಸಂಸಾರ ಹೊಂದಾಣಿಕೆಗಳು ಸಹ ಅಸಹನೀಯ ಎನ್ನಿಸಿದರೆ ಅದರ ಪರಿಣಾಮಗಳು ಕಹಿಯಾಗಿರುತ್ತವೆ ಎಂಬ ಎಚ್ಚರಿಕೆ ಅಷ್ಟೆ. ಅಂದಹಾಗೆ, ಸಣ್ಣ ಸಣ್ಣ ಹೊಂದಾಣಿಕೆಗಳನ್ನು ಸಹ ಶೋಷಣೆ, ವ್ಯಕ್ತಿ ಸ್ವಾತಂತ್ರ್ಯಕ್ಕಿರುವ ಅಡ್ಡಿ ಎಂಬಂತೆ ಮನೋಧೋರಣೆ ರೂಪಿಸಿದ್ದ ಡಾಲರಿನ ಶಕ್ತಿ ಮತ್ತು ಹರಿವುಗಳು ಕಡಿಮೆಯಾಗುತ್ತಲೇ ಇವತ್ತಿಗೆ ಸಮಾಜದಲ್ಲಿ ಆಧುನಿಕ ವಿಚಾರಧಾರೆ ಎಂದು ಬಿಂಬಿತವಾಗಿರುವ ಉದಾರವಾದ, ವ್ಯಕ್ತಿ ಸ್ವಾತಂತ್ರ್ಯ, ಮಹಿಳಾವಾದಗಳು ತಮ್ಮ ವ್ಯಾಖ್ಯಾನಗಳನ್ನು ಬದಲಿಸಿಕೊಳ್ಳಲಿಕ್ಕಿವೆ. ಹೇಗೆ ಎಂಬುದು ನಿಮ್ಮ ಪ್ರಶ್ನೆಯೇ?

ವ್ಯಕ್ತಿ ಸ್ವಾತಂತ್ರ್ಯವೀಗ ಮೌಲ್ಯವೋ, ಮಾರುಕಟ್ಟೆ ಸೃಷ್ಟಿಸಿದ ಕತೆಯೋ?

ಈ ಅತಿಯಾದ ವ್ಯಕ್ತಿ ಕೇಂದ್ರಿತ ವ್ಯವಸ್ಥೆಯನ್ನು ಬೆಳೆಸಿದ್ದು ಮಾರುಕಟ್ಟೆ ವ್ಯವಸ್ಥೆಯೇ. ಏಕೆಂದರೆ ಸಿರಿವಂತ ಹೂಡಿಕೆದಾರರ ಆಟಗಳಿಗೆ ಉದಾರವಾದ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಮಾದರಿಗಳು ಹೆಚ್ಚು ಲಾಭ ತಂದುಕೊಡುತ್ತವೆ. ಕುಟುಂಬದವರಿಂದ ಹೊರತಾಗಿ ಜೀವಿಸಿ, ನಿಮ್ಮ ನಿಮ್ಮ ಆಸಕ್ತಿ-ಬಯಕೆಗಳನ್ನು ಬೆನ್ನಟ್ಟಿ ಎಂದು ಹೇಳುವುದರಲ್ಲಿ ಮಾರುಕಟ್ಟೆಗೆ ದೊಡ್ಡ ಲಾಭವಿದೆ. ಒಂದಿದ್ದ ಮನೆ ನಾಲ್ಕಾಗುತ್ತದೆ, ನಾಲ್ಕು ಅಡುಗೆ ಮನೆಗಳು, ನಾಲ್ಕು ಬೇರೆ ಬೇರೆ ವಾಹನಗಳು, ನಾಲ್ಕು ಬೇರೆ ಬೇರೆ ವಿಧದ ಪರಿಕರಗಳು, ಎಂಟು ಮಂದಿ ಇದ್ದರೆ ಅವರಿಗೆಲ್ಲರಿಗೂ ಪ್ರತ್ಯೇಕ ಮನರಂಜನಾ ಸ್ಕ್ರೀನುಗಳು…. ಹೀಗೆ ಉಪಭೋಗದ ಎಲ್ಲ ವಸ್ತುಗಳು ಬೇರೆ ಬೇರೆ.

ಡಾಲರನ್ನು ಮನಸೋ ಇಚ್ಛೆ ಮುದ್ರಿಸಿದರೆ ನಡೆಯುತ್ತದೆ ಎನ್ನುವವರೆಗೂ ಈ ಆಟ ಚೆಂದವೇ ಇತ್ತು. ಆದರೆ ಈಗ ಅದೇ ಡಾಲರನ್ನು ಜಗತ್ತು ಸಂಶಯದಿಂದ ನೋಡುವುದಕ್ಕೆ ಆರಂಭಿಸಿದೆ. ಅದೇ ಡಾಲರು ಸ್ವಂತ ದೇಶದಲ್ಲೇ ಹಣದುಬ್ಬರ ಉಂಟುಮಾಡುತ್ತಿದೆ. ಉದ್ಯೋಗ ಸೃಷ್ಟಿ ಕಷ್ಟವಾಗುತ್ತಿದೆ. ಹರೆಯಕ್ಕೆ ಬರುತ್ತಲೇ ಅಪ್ಪ-ಅಮ್ಮನಿಂದ ಪ್ರತ್ಯೇಕವಾಗಿ ವಾಸಿಸುವುದು ಮಾಮೂಲು ಎಂಬಂತಿದ್ದ ಅಮೆರಿಕದ ಸಮಾಜದಲ್ಲಿ ಈಗಿನ ಪೀಳಿಗೆ ಯುವಜನರು ಆ ಮಾದರಿಯನ್ನು ಮುರಿದು ಮನೆಯಲ್ಲೇ ಇರುವ ಟ್ರೆಂಡ್ ಹೆಚ್ಚುತ್ತಿದೆ ಎಂದು ವರ್ಷದ ಹಿಂದೆಯೇ ಬ್ಯಾಂಕ್ ಆಫ್ ಅಮೆರಿಕ ಮಾಡಿದ್ದ ಅಧ್ಯಯನವು ಸಾರಿತ್ತು. ಆರ್ಥಿಕತೆ ಬಿಗುವಾದಾಗ, ಹಣದುಬ್ಬರದ ನಡುವೆ ಜೀವನಮಟ್ಟ ಕಾಪಾಡಿಕೊಳ್ಳಬೇಕಾಗಿಬಂದಾಗ ವೈವಾಹಿಕ ಜೀವನವನ್ನು ಮುಂದುವರಿಸಿಕೊಂಡುಹೋಗುವುದಕ್ಕೂ ಕಾರಣ ಒದಗುತ್ತದೆ.

Astronomer CEO Andy Byron hugging HR chief
ದಲೈ ಲಾಮಾ, ಚೀನಾ, ಮತ್ತು ಭಾರತದ ಸಾಫ್ಟ್ ಪವರ್! (ತೆರೆದ ಕಿಟಕಿ)

ಕುಟುಂಬದ ಸಹಕಾರವೆಂಬುದು ಮತ್ತೆ ಪ್ರಾಮುಖ್ಯದ ವಿಷಯವಾಗುತ್ತದೆ. ಲೈಂಗಿಕತೆ ಒಕೆ, ಮಕ್ಕಳು ಯಾಕೆ ಎನ್ನುತ್ತಿದ್ದ ಪಾಶ್ಚಾತ್ಯ ದೇಶಗಳು ಈಗ ಜನನ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಒದ್ದಾಡುತ್ತಿವೆ. ಹೆಣ್ಣೆಂದರೆ ಮಕ್ಕಳನ್ನು ಹೆರುವುದಕ್ಕೆ ಇರುವವಳಲ್ಲ ಎಂದೆಲ್ಲ ಉಗ್ರ ಫೆಮಿನಿಸಂ ಆದರ್ಶ ಸಾರುತ್ತಿದ್ದ ನೆಲಗಳೇ ಈಗ ತಮ್ಮ ಹೆಣ್ಣುಗಳಿಗೆ ಮೂರು ಮಕ್ಕಳನ್ನು ಮಾಡಿಕೊಳ್ಳಿ, ನಮ್ಮ ಬರ್ತ್ ರೇಟ್ ಬಿದ್ದುಹೋಗಿದೆ ಎಂದು ಗೋಳಿಡುತ್ತಿವೆ.

ಹೀಗಾಗಿ, ಡಾಲರ್ ತನ್ನ ಬಲವನ್ನು ಕುಗ್ಗಿಸುತ್ತ ಹೋದಂತೆ, ಬರಿದೇ ಹಣ ಮುದ್ರಿಸಿ ಅಷ್ಟೇನೂ ಘನಂದಾರಿಯಲ್ಲದ ಕೆಲಸಗಳಿಗೂ ಪ್ಯಾಕೇಜುಗಳ ಮಳೆ ಸುರಿಸುತ್ತಿದ್ದ ವ್ಯವಸ್ಥೆಗೆ ಸುಸ್ತಾಗುತ್ತಿದ್ದಂತೆ ಇಂಡಿವಿಜುವಾಲಿಟಿ, ಲಿಬರಲಿಸಂ, ಮುಜುಗರವಿಲ್ಲದ ಮುಕ್ತ ಕಾಮ ಇವೆಲ್ಲವಕ್ಕೂ ಪಾಶ್ಚಾತ್ಯರೇ ಅಂಕುಶ ಹಾಕುತ್ತ ಹೋಗಲಿದ್ದಾರೆ. ನಾವದನ್ನು ಮುಂದಿನ ದಿನಗಳಲ್ಲಿ ನೋಡಲಿದ್ದೇವೆ!

- ಚೈತನ್ಯ ಹೆಗಡೆ

cchegde@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com